ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪಯ್ಯ, ನಿಕ್ಕಮ್ಮ ಮತ್ತು ಹಾಮಾನಾ ಅಣ್ಣ..

2

ಅಪ್ಪಯ್ಯ,

ನಿಕ್ಕಮ್ಮ

ಮತ್ತು

ಅಣ್ಣ

ಹಾ. ಮಾ. ನಾಯಕರು ತಮ್ಮ ತಂದೆಯನ್ನು ‘ಅಪ್ಪಯ್ಯ’ ಎಂದೂ, ತಾಯಿಯನ್ನು ‘ನಿಕ್ಕಮ್ಮ’ ಎಂದೂ ಕರೆಯುತ್ತಿದ್ದರು.

ಇನ್ನೂ ಮಮ್ಮಿ, ಡ್ಯಾಡಿ ಸಂಸ್ಕೃತಿ ಬಾರದ ಕಾಲಕ್ಕೆ, ತಂದೆಯನ್ನು ಅಪ್ಪಯ್ಯ ಎಂದು ಸಂಬೋಧಿಸುವುದು ಸಹಜವಾಗಿದ್ದರೂ, ತಾಯಿಯನ್ನು ನಿಕ್ಕಮ್ಮ ಎಂದು ಕರೆಯುವಲ್ಲಿ ವಿಶೇಷವಾದ ಹಿನ್ನೆಲೆ ಇದೆ. ಈ ವಿಚಾರವನ್ನು ಸ್ವತಃ ನಾಯಕರೇ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ಅವರು ಚಿಕ್ಕವರಾಗಿದ್ದಾಗ, ತಾಯಿಯ ಸೋದರ ಮಾವಂದಿರು ಚಿಕ್ಕ ಹುಡುಗನಿಗೆ ತನ್ನ ತಾಯಿಯನ್ನು ರುಕ್ಮಿಣಿಯಮ್ಮ ಎಂದು ಕರೆಯಲು ಪ್ರೋತ್ಸಾಹಿಸಿದರು. ಬಾಲಕನ ಬಾಯಲ್ಲಿ ಅದು ‘ನಿಕ್ಕಮ್ಮ’ನಾಗಿ ರೂಪಾಂತರಗೊಂಡು, ಬದುಕಿನುದ್ದಕ್ಕೂ ಹಾಗೆಯೇ ಉಳಿದುಕೊಂಡು ಬಂದಿತು.

ತಂದೆ ತಾಯಿ ಇಬ್ಬರೂ ತಮ್ಮ ಮಗನನ್ನು ಚಿಕ್ಕವನಾಗಿದ್ದಾಗ ‘ಅಣ್ಣ’ ಎಂದು ಪ್ರೀತಿಯಿಂದ ಕೂಗಿದರು. ಅವನು ಖಾಯಂ ಆಗಿ ಅಣ್ಣನಾಗಿಯೇ ಉಳಿದುಕೊಂಡ. ಮನೆಯ ಹಿರಿಯ ಮಗನಾದದ್ದರಿಂದ ಕಿರಿಯ ಸೋದರ ಸೋದರಿಯರಿಗೆ ಅಣ್ಣ ಅಥವಾ ದೊಡ್ಡಣ್ಣನಾಗಿದ್ದ. ಅಪ್ಪಯ್ಯ, ನಿಕ್ಕಮ್ಮ ಮತ್ತು ಅಣ್ಣ–ಈ ಮೂವರ ನಡುವೆ ಯಾವುದೇ ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸಹಜ ಆತ್ಮೀಯ ಬಾಂಧವ್ಯಕ್ಕೆ ಮಿಗಿಲಾದ ಒಂದು ಬಗೆಯ ಪರಸ್ಪರ ಗೌರವ ಮತ್ತು ಆದರಾಭಿಮಾನಗಳಿಂದ ಕೂಡಿದ ವಿಶೇಷ ಸಂಬಂಧ ಬೆಳೆದು ಬಂದಿತ್ತು.

ತಂದೆ ತಾಯಿಯರ ಪಾಲಿಗೆ ಅಣ್ಣ ಮೊದಲ ಮಗನಾದದ್ದರಿಂದ ಅತೀವವಾದ ಪ್ರೀತಿ, ಅಕ್ಕರೆ. ಜೊತೆಗೆ ಮನೆಯ ಹಿರಿಯ ಮಗನಾಗಿ ಅವನ ಹೊಣೆಗಾರಿಕೆಯ ಬಗೆಗೆ ಹೆಚ್ಚಿನ ನಿರೀಕ್ಷೆಗಳೂ ಇದ್ದವು. ತಂದೆ ತಾಯಿಯರ ನಿರೀಕ್ಷೆಗಳನ್ನು ಮಗ ಹುಸಿಗೊಳಿಸಲಿಲ್ಲ. ಬಹಳ ಎತ್ತರಕ್ಕೆ ಬೆಳೆದ ಮಗ ತಂದೆ ತಾಯಿಗಳಿಗೂ ಸಾಕಷ್ಟು ಖ್ಯಾತಿ ತಂದುಕೊಟ್ಟ. ಇದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ತನ್ನ ಸೋದರ ಸೋದರಿಯರ ಬಗೆಗೂ ಮತ್ತು ಮನೆಯ ಇತರ ಮಕ್ಕಳ ಬಗೆಗೂ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಅಣ್ಣ ಹಿಂದೆ ಬೀಳಲಿಲ್ಲ. ಇವರಲ್ಲಿ ಕೆಲವರಾದರೂ ಬೇರೆ ಬೇರೆ ಕಾಲಗಳಲ್ಲಿ ಅನಿರ್ದಿಷ್ಟ ಅವಧಿಗಳ ಕಾಲ ಅಣ್ಣನ ಮನೆಯಲ್ಲಿದ್ದು ವಿದ್ಯಾಭ್ಯಾಸ ಪಡೆದುಕೊಂಡದ್ದುಂಟು.

ಹಾಗಾದರೂ ಅಣ್ಣ ತಮಗೆ ಸಾಕಷ್ಟು ಮಾಡಲಿಲ್ಲ ಎನ್ನುವ ಭಾವನೆ ಯಾರಿಗಾದರೂ ಬಂದಿರಲಿಕ್ಕೂ ಸಾಕು! ಅಂಥ ಒಂದು ಭಾವನೆ ಇದ್ದಲ್ಲಿ, ಅದಕ್ಕೆ ನಮ್ಮ ಅತಿಯಾದ ನಿರೀಕ್ಷೆಗಳು ಅಥವಾ ಅವನ ಬದುಕಿನ ಒತ್ತಡಗಳು ಅಥವಾ ಈ ಎರಡೂ ಕಾರಣವಾಗಿರಬಹುದು.

ಮಕ್ಕಳ ಬಗೆಗೆ ತಂದೆಯವರದ್ದು ಒಂದು ಬಗೆಯ ಉದಾರ ನೀತಿ. ಮಕ್ಕಳ ತಪ್ಪುಗಳನ್ನು ಸುಲಭವಾಗಿ ಕಡೆಗಾಣಿಸುವ ಮನೋಧರ್ಮ ಅವರದ್ದು. ಆದರೆ ತಾಯಿಯವರದ್ದು ಅದಕ್ಕೆ ತದ್ವಿರುದ್ದ. ಪ್ರೀತಿಯಲ್ಲಿ ಕೊರತೆ ಇಲ್ಲದಿದ್ದರೂ, ನಡವಳಿಕೆಗಳ ಬಗ್ಗೆ ತೀರಾ ಕಟ್ಟುನಿಟ್ಟು. ಅವರು ಮಗನಿಗೆ ‘ಮೊದಲ ಗುರುವಾಗಿ’ ಆರಂಭಿಕ ವಿದ್ಯಾಭ್ಯಾಸಕ್ಕೆ ಬುನಾದಿ ಹಾಕಿದರು. ಒಮ್ಮೆ ಮಗ ಪಾಠ ಒಪ್ಪಿಸುವಲ್ಲಿ ತಪ್ಪು ಮಾಡಿದ ಎಂದು ಕಪಾಳಕ್ಕೆ ಹೊಡೆದು ಮನೆಯ ಹಿರಿಯರ ಕೋಪಕ್ಕೆ ಗುರಿಯಾದ ಸಂಗತಿಯನ್ನು ನಮ್ಮ ತಾಯಿ ಜೀವನದ ಕೊನೆಯವರೆಗೂ ನೆನಪಿಸಿಕೊಳ್ಳುತ್ತಿದ್ದರು.

ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಇಲ್ಲದ ಕಾರಣ, ಎಳೆಯ ವಯಸ್ಸಿನಲ್ಲೇ ಮಗ ಮನೆ ಬಿಟ್ಟು ಓದಿಗಾಗಿ ತಾಯಿಯ ತವರು ನಾಲೂರಿಗೆ ಹೋಗುವುದು ಅನಿವಾರ್ಯವಾಯಿತು. ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ನಾಲೂರು ಮತ್ತು ಅಲ್ಲಿಗೆ ಸಮೀಪದ ಮೇಗರವಳ್ಳಿಯಲ್ಲಿ ಓದಿದ ಮಗ ಎಂದಾದರೊಮ್ಮೆ ರಜೆಗೆ ಊರಿಗೆ ಬರುತ್ತಿದ್ದ. ಹಾಗೆ ಬಂದವನು ಊರಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮತ್ತು ಊರಿನ ಆಗುಹೋಗುಗಳಲ್ಲಿ ಆಸಕ್ತಿ ತೋರುತ್ತಿದ್ದ. ತನ್ನ ಸುತ್ತಮುತ್ತಿನ ಪರಿಸರದ ಅವಲೋಕನ ಮತ್ತು ಅದರಲ್ಲಿನ ಆಸಕ್ತಿಗಳೇ ತನ್ನ ಮೊದಲ ಬರವಣಿಗೆಗಳ ಸಾಮಗ್ರಿಗಳಾಗಿ ಮಾರ್ಪಾಟಾದದ್ದು ಸ್ಪಷ್ಟವಾಗಿ ಕಾಣಬರುತ್ತದೆ.

ತಮ್ಮ ಜೀವನದುದ್ದಕ್ಕೂ ನಾಯಕರು ತಮ್ಮ ತಾಯಿ ಮತ್ತು ತಂದೆಯರ ಬಗೆಗೆ ಅಪಾರ ಪ್ರೀತಿ ಮತ್ತು ಗೌರವಗಳನ್ನು ಹೊಂದಿದ್ದರು. ಅಷ್ಟೇ ಅಲ್ಲದೆ ತಂದೆ ಮತ್ತು ತಾಯಿಗೆ ಆಪ್ತರಾಗಿದ್ದವರ ಬಗೆಗೂ ನಾಯಕರು ಅದೇ ಬಗೆಯ ವಿಶ್ವಾಸವನ್ನು ತೋರುತ್ತಿದ್ದರು. ಇದಕ್ಕೆ ಪೂರಕವಾಗಿ ತಮ್ಮ ತಂದೆಯ ಕೆಲವು ಸ್ನೇಹಿತರನ್ನು ಅವರು ನಡೆಸಿಕೊಂಡ ರೀತಿಯ ಕೆಲವು ನಿದರ್ಶನಗಳನ್ನು ಉಲ್ಲೇಖಿಸಬಹುದು.

ತೀರ್ಥಹಳ್ಳಿಯ ವರ್ತಕರೂ, ಸಮಾಜ ಸೇವಕರೂ ಆಗಿದ್ದ ಕಟಪಾಡಿ ಗೋಪಾಲಕೃಷ್ಣ ಕಾಮತರು ನಮ್ಮ ತಂದೆ ಶ್ರೀನಿವಾಸ ನಾಯಕರ ಆಪ್ತವಲಯದಲ್ಲಿ ಪ್ರಮುಖರು. ಅವರು ನಮ್ಮ ತಂದೆಯವರ ಹಿತೈಷಿಗಳೂ, ಆಪತ್ಬಾಂಧವರೂ ಆಗಿದ್ದವರು. ಅವರು ನಮಗೆ ಕಾಲಕಾಲಕ್ಕೆ ನೀಡಿದ ಸಹಾಯ ಹಸ್ತ ನಮ್ಮ ಏಳಿಗೆಗೆ ಕಾರಣವಾಯಿತು ಎನ್ನುವ ಸತ್ಯವನ್ನು ನಾವು ಮರೆಮಾಚುವಂತಿಲ್ಲ. (1) ಕಾಮತರ ಬಗೆಗೆ ಹಾಮಾನಾ ಗೌರವ ಮತ್ತು ಪೂಜ್ಯ ಭಾವನೆಗಳನ್ನು ಹೊಂದಿದ್ದರು; ಅದರ ಪ್ರತೀಕವಾಗಿ ಅವರು ತಮ್ಮ ಒಂದು ಪುಸ್ತಕವನ್ನು ಕಾಮತ್‍ರಿಗೆ ಅರ್ಪಿಸಿದ್ದಾರೆ. ‘ನಿಲುವಾಸೆ ಸಾಹುಕಾರರು’ ಎಂದೇ ಹೆಸರಾಗಿದ್ದ ನಮ್ಮೂರಿನ

 

ಮಂಜಪ್ಪಯ್ಯನವರು ನಮ್ಮ ತಂದೆಯವರ ಇನ್ನೊಬ್ಬ ಸ್ನೇಹಿತರು. ಒಮ್ಮೆ

ಹಾಮಾನಾ ಬನಾರಸಿಗೆ ಹೋದಾಗ, ಅಲ್ಲಿಂದಲೇ ಕಾಶಿ ತೀರ್ಥದ ಒಂದು ಶೀಷೆಯನ್ನು ದೈವಭಕ್ತರಾದ ಮಂಜಪ್ಪಯ್ಯನವರಿಗೆ ಅಂಚೆ ಮೂಲಕ ಕಳಿಸುವ ಮೂಲಕ ನೇರವಾಗಿ ಅವರಿಗೂ, ಪರೋಕ್ಷವಾಗಿ ನಮ್ಮ ತಂದೆಯವರಿಗೂ ಸಂತೋಷ ತಂದುಕೊಟ್ಟರು.

ಹಾಮಾನಾ ತಮ್ಮ ಓದು ಮತ್ತು ವೃತ್ತಿ ಜೀವನದ ಸಲುವಾಗಿ ಹುಟ್ಟೂರಿನಿಂದ ದೂರವೇ ಉಳಿದರು. ಊರಿಗೆ ಬರುತ್ತಿದ್ದುದು ಅಪರೂಪ ಎಂದೇ ಹೇಳಬೇಕು. ಹಾಗೆ ಅವರು ಬಂದ ಸಂದರ್ಭ ಒಂದು ಬಗೆಯ ಸಂಭ್ರಮವಾಗಿ ಪರಿಣಮಿಸುತ್ತಿತ್ತು. ತಂದೆ ತಾಯಿಯರಿಗಂತೂ ಅಪರೂಪಕ್ಕೆ ಮಗ ಮನೆಗೆ ಬಂದ ಸಂತೋಷ, ಹೆಮ್ಮೆ. ಬಂದವನು ಮಗನೇ ಆದರೂ ಒಂದು ಬಗೆಯ ವಿಐಪಿ ಆಗಮನ. ಮನೆಯ ಇತರರಿಗೂ ಅಷ್ಟೇ ಸಡಗರ. ಮನೆಯ ಆಳುಕಾಳುಗಳು, ಊರಿನ ಪರಿಚಯಸ್ಥರು ಸಹ “ಮಾನಪ್ಪ ನಾಯಕರು ಬಂದಿದ್ದಾರಂತೆ, ಹೋಗಿ ನೋಡಿಬರಬೇಕು” ಎಂದು ಉತ್ಸಾಹದಿಂದ ಬಂದು, ಅವರೊಡನೆ ಸಾಕಷ್ಟು ಸಮಯ ಕಳೆದು ಹೋಗುತ್ತಿದ್ದರು. ನಾಯಕರಾದರೊ ಅವರ ಜೊತೆಯಲ್ಲಿ ಉದಾರವಾಗಿಯೇ ನಡೆದುಕೊಂಡು, ಪ್ರತಿಯೊಬ್ಬರ ಕಷ್ಟ ಸುಖಗಳನ್ನು ಆತ್ಮೀಯವಾಗಿ ವಿಚಾರಿಸಿ, ಯಾವುದೋ ಹಳೆಯ ಸಂಗತಿಯನ್ನು ಜ್ಞಾಪಿಸಿ ಹಾಸ್ಯ ಮಾಡಿ, ಬಂದವರನ್ನು ಸಂತುಷ್ಟಗೊಳಿಸಿ ಕಳಿಸುತ್ತಿದ್ದರು.

ಅಣ್ಣ ಮನೆಯಲ್ಲಿದ್ದಷ್ಟು ದಿನ ಮನೆಯವರಿಗೆಲ್ಲ ಒಂದು ಬಗೆಯ ತಳಮಳ. ಏನು ಮಾಡಿದರೆ ತಪ್ಪು? ಯಾವ ಮಾತನ್ನಾಡಿದರೆ ಹೇಗೆ? ಎನ್ನುವ ಅಂಜಿಕೆ. ಅದು ಅವರೇ ಕಲ್ಪಿಸಿಕೊಂಡು, ತಮಗೆ ತಾವೇ ಸೃಷ್ಟಿಸಿಕೊಳ್ಳುತ್ತಿದ್ದ ಗೊಂದಲವೇ ಹೊರತು, ಅದಕ್ಕೆ ಅಣ್ಣ ಯಾವುದೇ ಬಗೆಯಲ್ಲೂ ಹೊಣೆಯಾಗಿರಲಿಲ್ಲ. ವಾಸ್ತವವಾಗಿ, ಅವನು ಎಲ್ಲರ ಜೊತೆಯಲ್ಲೂ ಸಲುಗೆಯಿಂದ, ಎಲ್ಲರನ್ನೂ ತಮಾಷೆ ಮಾಡಿಕೊಂಡು ಹಿತಕರವಾಗಿಯೇ ಇರುತ್ತಿದ್ದ. ಅವನ ರಾಜ ಗಾಂಭೀರ್ಯ, ಅವನ ಬಗೆಗೆ ಎಲ್ಲರಿಗೂ ಇದ್ದ ಗೌರವ ಆ ಬಗೆಯ ತಳಮಳದ ಸನ್ನಿವೇಶಕ್ಕೆ ಕಾರಣವಾಗಿತ್ತು.

ಅಪ್ಪಯ್ಯನಂತೂ ಅಣ್ಣನ ಬಗೆಗೆ ಒಂದು ತೂಕ ಹೆಚ್ಚು ಒಲವನ್ನು ಹೊಂದಿದ್ದರೆಂದರೆ ತಪ್ಪಾಗದು. ಅಣ್ಣನ ಸ್ಥಾನಕ್ಕೆ ಚ್ಯುತಿ ಬರುವ ಯಾವುದೇ ನಡವಳಿಕೆಯನ್ನು ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಎಷ್ಟೋ ವರ್ಷಗಳ ಹಿಂದಿನ ಒಂದು ಸನ್ನಿವೇಶ; ಆ ಸನ್ನಿವೇಶವನ್ನು ಕುರಿತು ಈಗಲೂ ಮನೆಯವರೆಲ್ಲಾ ಸೇರಿದಾಗ ನೆನಪಿಸಿಕೊಂಡು ನಗುತ್ತೇವೆ.

ಒಮ್ಮೆ ಅಣ್ಣ ಊರಿಗೆ ಬಂದ ಸಂದರ್ಭದಲ್ಲಿ ಎಲ್ಲರೂ ಮನೆಯ ಚೌಕಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದೆವು. ಅಲ್ಲಿದ್ದದ್ದು ಒಂದು ಕುರ್ಚಿ, ಮತ್ತೊಂದು ಬೆಂಚು. ಅಣ್ಣನೂ ಸೇರಿದಂತೆ ನಾವೆಲ್ಲರೂ ನೆಲದ ಮೇಲೆ ಕುಳಿತು ಮಾತಿನಲ್ಲಿ ತೊಡಗಿದ್ದೆವು. ನನ್ನ ಇನ್ನೊಬ್ಬ ಅಣ್ಣ ರಾಮದಾಸ ನಾಯಕರ ಮಗಳು ಸರಳ ಆಗಿನ್ನೂ 8-10 ವರ್ಷದ ಪುಟ್ಟ ಹುಡುಗಿ. ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕಾಲುಮೇಲೆ ಕಾಲು ಹಾಕಿ ಕುಳಿತು, ಎಲ್ಲರ ಮಾತುಗಳನ್ನು ಆಲಿಸುವುದರಲ್ಲಿ ತಲ್ಲೀನಳಾಗಿದ್ದಳು. ಇದನ್ನು ಕಂಡ ಅಪ್ಪಯ್ಯ, “ಅಣ್ಣ ಕೆಳಗಡೆ ಕುಳಿತಿದ್ದಾನೆ. ನೀನು ಅವನ ಎದುರು ಕುರ್ಚಿಯಲ್ಲಿ ಹಾಗೆ ಕುಳಿತಿದ್ದೀಯಲ್ಲ. ನಿನಗೆ ‘ಮ್ಯಾನರ್ಸ್’ ಬೇಡವಾ?” ಎಂದು ರೇಗಿದರು. ವಾಸ್ತವವಾಗಿ ಸರಳಳೂ ಅವರು ಅತಿಯಾಗಿ ಪ್ರೀತಿಸುತ್ತಿದ್ದ ಮೊಮ್ಮಗಳೇ, ಆದರೂ ಅಣ್ಣನ ಎದುರು ಅವಳು ಹಾಗೆ ಮಾಡಿದ್ದು ಅವರ ಸಹನೆಯನ್ನು ಕೆಡಿಸಿತ್ತು. ಅಪ್ಪಯ್ಯನ ಇಂಗ್ಲಿಷ್ ಆಕ್ರೋಶಕ್ಕೆ, ಅಣ್ಣನ ಬಗೆಗಿದ್ದ ಅವರ ‘ಹೆಮ್ಮೆ’ ಪ್ರಚೋದಿಸಿದ್ದಿತು ಎಂದರೆ ತಪ್ಪಾಗಲಾರದು.

ಅಣ್ಣ ಕೂಡಾ ಅಪ್ಪಯ್ಯನ ವಿಚಾರದಲ್ಲಿ ಅದೇ ಬಗೆಯ ಪ್ರೀತಿ, ಗೌರವಗಳನ್ನು ಹೊಂದಿದ್ದ. ಯಾರ ಮಾತಿಗೂ ಸೊಪ್ಪು ಹಾಕದ ಅವನು, ಅಪ್ಪಯ್ಯ ಹೇಳಿದರೆ ಎರಡು ಬಾರಿ ಯೋಚಿಸುತ್ತಿದ್ದ. ಬೇರೆ ಯಾರ ಪ್ರಭಾವಕ್ಕೂ ಮಣಿಯದ ಅವನು, ಅಪ್ಪಯ್ಯನ ಮಾತಿಗೆ ಮಣೆ ಹಾಕಿದ್ದುಂಟು. ಅಪ್ಪಯ್ಯನ ಕೆಲವೇ ಕೆಲವು ಆಪ್ತರ ಮಕ್ಕಳಾದರೂ, ಅವರ ಮೂಲಕ ಅಣ್ಣನಿಂದ ಪ್ರಯೋಜನಗಳನ್ನು ಪಡೆದುಕೊಂಡ ಉದಾಹರಣೆಗಳು ಸಿಕ್ಕಿಯಾವು. ಅಣ್ಣ ತನ್ನ ಉನ್ನತ ಶಿಕ್ಷಣ ಮುಗಿಸಿ ಅಮೆರಿಕಾದಿಂದ ವಾಪಸಾದಾಗ ಯಾರಿಗೂ, ಅವನ ಹೆಂಡತಿ, ಮಕ್ಕಳೂ ಸೇರಿದಂತೆ, ಯಾವುದೇ ಬಗೆಯ ಉಡುಗೊರೆ ತಂದು ಕೊಟ್ಟದ್ದು ಇಲ್ಲ. ಆದರೆ ಅಪ್ಪಯ್ಯನಿಗೆ ಮಾತ್ರ ಒಂದು ‘ಸೋನಿ’ ರೇಡಿಯೋ ತಂದು ಕೊಟ್ಟಿದ್ದು, ಅದು ಅಪ್ಪಯ್ಯನ ಕೊನೆಯವರೆಗೂ, ಅವನ ಸಂಗಾತಿಯಾಗಿತ್ತು ಎನ್ನುವುದು ಅಪ್ಪಯ್ಯ ಮತ್ತು ಅಣ್ಣ ಇವರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಒಂದು ಸಣ್ಣ ಸಾಕ್ಷಿ.

ಅಣ್ಣ ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಹಿಡಿದು, ಅಲ್ಲಿಯೇ ನೆಲೆಯಾದ ಮೇಲೆ, ಅಪ್ಪಯ್ಯ ಆಗಾಗ ಮೈಸೂರಿಗೆ ಬಂದು ಕೆಲವು ದಿನಗಳು ಅಣ್ಣನ ಮನೆಯಲ್ಲಿ ವಾಸ್ತವ್ಯ ಹೂಡುವುದು ಸಾಮಾನ್ಯವಾಗಿತ್ತು. ನಾನೂ ಸಹ ಅಮೆರಿಕಾದಿಂದ ವಾಪಸಾದ ಮೇಲೆ ಮೈಸೂರಿನಲ್ಲಿಯೇ ಕೆಲಸ ಹಿಡಿದು ಅಲ್ಲಿಯೇ ಮನೆಮಾಡಿಕೊಂಡು ಇದ್ದೆ. ಅಪ್ಪಯ್ಯ ಆ ದಿನಗಳಲ್ಲಿ ನಮ್ಮಿಬ್ಬರ ಮನೆಗಳ ನಡುವೆ ಅಲ್ಲೊಂದಿಷ್ಟು ದಿನ, ಇಲ್ಲೊಂದಿಷ್ಟು ದಿನ ಹೀಗೆ ಕೆಲವು ತಿಂಗಳುಗಳೇ ಮೈಸೂರಿನಲ್ಲಿ ಕಳೆಯುತ್ತಿದ್ದರು. ಆ ದಿನಗಳಲ್ಲಿ ಅಪ್ಪಯ್ಯ ಮತ್ತು ಅಣ್ಣ ಇವರ ನಡುವಿನ ಸರಸ ಸಂಭಾಷಣೆಗಳು, ಒಬ್ಬರ ಕಾಲನ್ನು ಇನ್ನೊಬರು ಎಳೆಯುವ ಪ್ರಸಂಗಗಳು, ಕುಚೋದ್ಯದ ಮಾತುಗಳು, ವಾಗ್ವಾದಗಳು, ಮತ್ತು ಕೆಲವೊಮ್ಮೆ ಗಂಭೀರ ಚರ್ಚೆಗಳು ಮೋಜಿನ ಸಂಗತಿಗಳಾಗಿದ್ದವು. ತಂದೆ-ಮಗನ ಜುಗಲುಬಂಧಿಯಲ್ಲಿ ಅಣ್ಣನ ಮಗ ರವೀಂದ್ರನ ಪಾತ್ರ ಕಡೆಗಣಿಸುವಂಥದಲ್ಲ. ಅವನು ತನ್ನದೇ ಸುಳ್ಳುಗಳನ್ನು, ಕಟ್ಟುಕತೆಗಳನ್ನು, ಕುಚೋದ್ಯಗಳನ್ನು ಸೇರಿಸಿ ಆ ಸನ್ನಿವೇಶಗಳಿಗೆ ಮೆರಗುಕೊಡುತ್ತಿದ್ದ.

ನಾನು ಮೈಸೂರನ್ನು ಬಿಟ್ಟು ಬೆಂಗಳೂರಿಗೆ ಬಂದ ನಂತರದ ದಿನಗಳಲ್ಲಿ, ಅಪ್ಪಯ್ಯ ಮೈಸೂರಿಗೆ ಅಷ್ಟಾಗಿ ಹೋಗಲಿಲ್ಲ ಎನ್ನುವುದು ನನ್ನ ನೆನಪು. ಒಂದು ಸಾರಿ ಮಾತ್ರ ಬೆಂಗಳೂರಿಗೆ ಬಂದು ನನ್ನ ಜೊತೆಯಲ್ಲಿ ಒಂದೆರಡು ತಿಂಗಳು ಕಳೆದು ಊರಿಗೆ ಹೋದವನು ಮತ್ತೆ ಊರು ಬಿಟ್ಟು ಎಲ್ಲೂ ಹೋಗಲಿಲ್ಲ. ಆ ಸಮಯಕ್ಕೆ ಅವನು ಎಂಬತ್ತರ ಗಡಿಯನ್ನು ದಾಟಿದ್ದ. ನಾವುಗಳೇ ಆಗಾಗ ಊರಿಗೆ ಹೋಗಿ ಅವನನ್ನು ನೋಡಿ ಬರುತ್ತಿದ್ದೆವು, ಅಣ್ಣನೂ ಸಹ. ದೃಷ್ಟಿಮಾಂದ್ಯತೆ ಮತ್ತು ಅನಾರೋಗ್ಯಗಳ ಕಾರಣ ಅಪ್ಪಯ್ಯನ ಕೊನೆಯ ದಿನಗಳು ಅವನಿಗೆ ಹಿತವಾಗಿರಲಿಲ್ಲ. ಸ್ವಲ್ಪ ಕಾಲದ ನರಳಿಕೆಯ ನಂತರದಲ್ಲಿ ಅವನು

1984ರಲ್ಲಿ ತನ್ನ 84ನೆಯ ವಯಸ್ಸಿನಲ್ಲಿ ತೀರಿಕೊಂಡ. ಆ ಸಮಯಕ್ಕೆ ಯಾವುದೊ ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದ ಅಣ್ಣ ಅಪ್ಪಯ್ಯನ ಸಾವಿನ ಸಂದರ್ಭದಲ್ಲಿ ಹಾಜರಿರಲಿಲ್ಲ. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದರೆ, ನಮ್ಮ ತಾಯಿ ಅ ಬಗ್ಗೆ ತೀವ್ರ ಬೇಸರ ಪಟ್ಟುಕೊಂಡು, “ಅಪ್ಪನ ಸಾವಿಗೆ ಬಾರದಂಥ ರಾಜಕಾರ್ಯ ಅವನಿಗೇನಿತ್ತು?” ಎಂದು ಆಪಾದಿಸಿದ್ದುಂಟು. ಇದು ಆ ಸಂದರ್ಭಕ್ಕೆ ಸಹಜವಾದ ಪ್ರತಿಕ್ರಿಯೆ ಅಷ್ಟೇ.

ಅಪ್ಪಯ್ಯನ ನೆನಪಿಗಾಗಿ ಅಣ್ಣ ಒಂದು ಪುಸ್ತಕವನ್ನು ಸಂಪಾದಿಸಿ, ಪ್ರಕಟಿಸಿದ. ಆ ಪುಟ್ಟ ಪುಸ್ತಕದ ಹೆಸರು “ಅಪ್ಪಯ್ಯ.”  ಈ ಪುಟ್ಟ ಪುಸ್ತಕ ಒಂದು ವಿಶಿಷ್ಟ ದಾಖಲೆ. ಈ ಹೊತ್ತಿಗೆಯಲ್ಲಿ ಅಪ್ಪಯ್ಯನನ್ನು ಕುರಿತ ಅಣ್ಣನ ಬರವಣಿಗೆ ಅವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧದ ನಿರೂಪಣೆಯಾಗಿದೆ.  ಇದರಲ್ಲಿ ಅಪ್ಪಯ್ಯನ ಶಾಲಾದಿನಗಳಲ್ಲಿ ಸಹಪಾಠಿಯಾಗಿದ್ದ ಕುವೆಂಪು ಅವರೂ ಸೇರಿದಂತೆ, ಅವನನ್ನು ಒಮ್ಮೆಯೋ ಅಥವಾ ಕೆಲವೇ ಸಂದರ್ಭಗಳಲ್ಲಿ ಭೆಟ್ಟಿಯಾಗಿ, ಅವನ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ತ.ರಾ.ಸು, ಚದುರಂಗ, ನಿಟ್ಟೂರು ಶ್ರೀನಿವಾಸರಾಯರಂಥ ಮಹಾನುಭಾವರ ಲೇಖನಗಳೂ ಇರುವುದು, ಈ ಕೃತಿಯ ಮಹತ್ವವನ್ನು ಸೂಚಿಸುತ್ತದೆ.

ಅಪ್ಪಯ್ಯನೇ ಆಕಾಶವಾಣಿಯಲ್ಲಿ ಮಾಡಿದ್ದ, “ನಾನು ಗಾಂಧೀಜಿ ನೋಡಿದ್ದೆ” ಭಾಷಣದ ಪಠ್ಯರೂಪವೂ ಈ ಪುಸ್ತಕದಲ್ಲಿ ಸೇರಿದ್ದು, ಮಹತ್ವದ ಚಾರಿತ್ರಿಕ ಅಂಶವೊಂದರ ಮಾಹಿತಿಯನ್ನು ಒದಗಿಸುತ್ತದೆ. ಇಂಥ ಒಂದು ಅಪರೂಪದ ನೆನಪಿನ ಕಾಣಿಕೆಯೊಂದನ್ನು ಯೋಜಿಸಿ, ಸಂಪಾದಿಸಿ, ಪ್ರಕಟಿಸಿದ್ದು ಅಣ್ಣನಿಗೆ ತುಂಬಾ ತೃಪ್ತಿಯನ್ನು ತಂದುಕೊಟ್ಟಿತ್ತು ಎನ್ನುವುದು ನನ್ನ ಭಾವನೆ.

ಅಪ್ಪಯ್ಯನ ನಿಧನದ ನಂತರ ನಮ್ಮ ತಾಯಿಯವರು ಸುಮಾರು ಹದಿನೈದು ವರ್ಷಗಳಷ್ಟು ಕಾಲ ಬದುಕಿದ್ದರು. ಈ ವರ್ಷಗಳಲ್ಲಿ ಅವರು ಅಪರೂಪವಾಗಿ ಅಣ್ಣನ ಮೈಸೂರು ಮನೆಗೊ, ಬೆಂಗಳೂರಿನ ನನ್ನ ಮನೆಗೋ ಬಂದು ಹೋದದ್ದುಂಟು. ಹಾಗಾದರೂ ಅವರಿಗೆ ಅವರು ಬಾಳಿ ಬದುಕಿದ ಹಳ್ಳಿಯ ಮನೆಯೇ ಹೆಚ್ಚು ಆಪ್ತವಾಗಿತ್ತು. ಅಣ್ಣನ ಸಾವಿಗೆ ಕೆಲವೇ ತಿಂಗಳುಗಳ ಮೊದಲು, ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ತೀರಿಕೊಂಡರು. ಒಂದು ಸಮಾಧಾನದ ಸಂಗತಿಯೆಂದರೆ ಅವರು ಅಣ್ಣನ ಸಾವನ್ನು ನೋಡಲು ಬದುಕಿರಲಿಲ್ಲ. ಅವರ ಸಾವಿನ ಸಮಯದಲ್ಲೂ ಅಣ್ಣ ಊರಿಗೆ ಹೋಗಲಿಲ್ಲ, ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.

ಆದರೆ ಅವರನ್ನು ಕುರಿತು ಒಂದು ಸುದೀರ್ಘ ಅಂಕಣ ಬರೆದು, ತನ್ನ ಪ್ರೀತಿ ಗೌರವಗಳನ್ನು ವ್ಯಕ್ತಪಡಿಸಿದ. ಅದಕ್ಕೆ ಸಾಕ್ಷಿಯಾಗಿ ಈ ಸಾಲುಗಳನ್ನು ಗಮನಿಸಬಹುದು: “ಮಾಸ್ತಿಯವರು ತಮ್ಮೊಂದು ಪದ್ಯದಲ್ಲಿ, ‘ಹೇಳದೆ ವಿದ್ಯೆ ಕಲಿಸಿದ ಗುರುವೆ’ ಎನ್ನುತ್ತಾರೆ. ನಿಕ್ಕಮ್ಮ ಆ ಬಗೆಯ ಗುರುವಾಗಿದ್ದರು. ತಮ್ಮ ನಡತೆಯಿಂದಲೇ ನಮಗೆ ಕಲಿಸಿದರು. ಈಗ ಅವರು ಕಣ್ಮರೆಯಾಗಿದ್ದಾರೆ. ಉಳಿದಿರುವುದು ಅವರ ನೆನಪು ಮಾತ್ರ. ಆ ನೆನಪು ಸಾಯುವುದಿಲ್ಲ. ನಾನಿರುವವರೆಗೂ ಅದಕ್ಕೆ ಕೊನೆಯಿಲ್ಲ. ಆ ನೆನಪು ನಿತ್ಯವಾಗಿರಲಿ” (2). ವಿಪರ್ಯಾಸವೆಂದರೆ, ಇದನ್ನು ಬರೆದ ಕೆಲವು ತಿಂಗಳಲ್ಲೇ ಆಣ್ಣನೂ ತೀರಿಕೊಂಡು ತಾಯಿಯವರು ಹೋದ ಮರುಳಲಾಗದ ಲೋಕಕ್ಕೆ ಅವರನ್ನು ಹಿಂಬಾಲಿಸಿದ.

। ಇನ್ನುಳಿದದ್ದು ನಾಳೆಗೆ.. ।

 

ಅಡಿ ಟಿಪ್ಪಣಿಗಳು

1.ಕಟಪಾಡಿ ಕಾಮತರನ್ನು ಕುರಿತ ನನ್ನ ಒಂದು ಅಪ್ರಕಟಿತ ಬರವಣಿಗೆಯನ್ನು ಅನುಬಂಧದಲ್ಲಿ ಸೇರಿಸಲಾಗಿದೆ.

2.ಹಾ.ಮಾ.ನಾ: ತಾಯಿ ನೆನಪು. ಹಾ.ಮಾ.ನಾ: ಸಾರಸ್ವತ. ಗೀತಾ ಬುಕ್ ಹೌಸ್, ಮೈಸೂರು. 2003. ಪುಟ 282

‍ಲೇಖಕರು avadhi

16 September, 2017

1 Comment

  1. Lalitha siddabasavayya

    ಅಣ್ಣನ ಕುರಿತಾದ ತಮ್ಮನ ಈ ಬರಹ ಮಾಲಿಕೆ ಅಪರೂಪದಲ್ಲಿ ಅಪರೂಪದ್ದು. ಹಾಮಾನಾ ಅವರ ಇನ್ನಿತರ ಚಟುವಟಿಕೆಗಳನ್ನು ಎಲ್ಲೂ ಓದಿ ತಿಳಿಯಬಹುದು. ಆದರೆ ಈ ಭಾಗದ ಈ ವಿವರಗಳನ್ನು ಅದರ ಒಳಸೂಕ್ಷ್ಮಗಳನ್ನು ಇಲ್ಲಿಯೇ ಅರಿಯಬೇಕು. ಈ ಮಾಲಿಕೆಯನ್ನು ನಾನು ಕಾಯ್ದು ಓದುತ್ತಿದ್ದೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading