ಮೋಹನ್ ವಿ ಕೊಳ್ಳೇಗಾಲ
2010 ಜುಲೈ ತಿಂಗಳಿನಲ್ಲಿ ಗೆಳೆಯನೊಬ್ಬನ ಮನೆಯಲ್ಲಿ ಅವನ ಲ್ಯಾಪ್ ಟಾಪ್ ನಲ್ಲಿ ಮೊದಲ ಬಾರಿ ಫೇಸ್ಬುಕ್ಕನ್ನು ನೋಡಿದ್ದೆ. ಆವೊತ್ತಿನವರೆವಿಗೂ ಫೇಸ್ಬುಕ್ಕೆಂಬುದು ಒಂದು ಗೀಳು ಎಂಬುದಷ್ಟೇ ನನಗೆ ಗೊತ್ತಿದ್ದು. ಆದರೆ ಅಂದು ಆತ ತನ್ನ ಊರಿನ, ಕೇರಿಯ, ರಾಜ್ಯ, ದೇಶ, ವಿದೇಶ ಗೆಳೆಯರನ್ನೆಲ್ಲಾ ಫೇಸ್ಬುಕ್ ಮೂಲಕ ಮಾತನಾಡಿಸುತ್ತಿದ್ದದ್ದು ಕಂಡಾಗ, ಯಾವುದಾವುದೋ ವಿಚಿತ್ರ ಚಿತ್ರಗಳು, ದೃಶ್ಯಾವಳಿಗಳನ್ನು ಸಾಕ್ಷೀಕರಿಸಿಕೊಂಡಾಗ ನನಗೆ ಫೇಸ್ಬುಕ್ ಮೇಲೆ ಸ್ವಲ್ಪ ಆಸೆಯಾಯಿತು. ಕೂಡಲೇ ಲ್ಯಾಪ್ ಟಾಪ್ ಖರೀದಿಸಿ ಇಂಟರ್ನೆಟ್ ಸಂಪರ್ಕವನ್ನೂ ಪಡೆದುಕೊಂಡುಬಿಟ್ಟೆ. ಇಷ್ಟೆಲ್ಲಾ ವ್ಯಯಿಸುವಾಗ ‘ನಾನು ಮಾಡುತ್ತಿರುವುದು ಕೇವಲ ಖುಷಿ ಮತ್ತು ಅಮೂಲ್ಯವಾದ ನನ್ನ ಸಮಯವನ್ನು ಹಾಳು ಮಾಡಿಕೊಳ್ಳುವ ಅವಸರದ ಕೆಲಸವಷ್ಟೇ’ ಎಂಬ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು. ಆದರೂ ಹಠಕ್ಕೆ ಬಿದ್ದು ಇಷ್ಟೆಲ್ಲಾ ಮಾಡಿದ್ದೆ. ನಂತರ ಫೇಸ್ಬುಕ್ ಗೃಹಪ್ರವೇಶ ಮಾಡಿದ್ದೂ ಆಗಿತ್ತು, ಕಿಟಕಿ ಬಾಗಿಲು ತೆರೆದು ಪರಿಚಯಸ್ಥರು ಬರಲಿ ಎಂದು ಕಾದದ್ದೂ ಆಗಿತ್ತು. ಇದರ ಜೊತೆ ಎಂದಿನಂತೆ ಕೆಲವು ಫೋಟೋಗಳು, ವಿಡಿಯೋಗಳನ್ನು ಅಂಟಿಸಿದ್ದಾಯಿತು. ಹೀಗೆ ಪ್ರಾರಂಭದಲ್ಲಿ ಒಂದು ದಿನ ‘ತವಕ’ ಎಂಬ ಒಂದು ಕವಿತೆಯನ್ನು ಬರೆದು ಫೇಸ್ಬುಕ್ ಗೋಡೆ ಮೇಲೆ ಅಂಟಿಸಿದ್ದೆ. ಅದೆಲ್ಲಿದ್ದರೋ ‘ರವಿ ಮುರ್ನಾಡ್’ ಎಂಬ ಅಪರೂಪದ ವ್ಯಕ್ತಿತ್ವ, ಕೂಡಲೇ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅಂದು ಪ್ರಾರಂಭವಾದ ಅವರೊಂದಿಗೆ ಆಪ್ತ ಒಡನಾಟ ನಿನ್ನೆ ಅವರ ಸಾವಿನ ಸುದ್ದಿ ತಿಳಿಯುವವರೆವಿಗೂ ಇತ್ತು. ಇನ್ನು ಮುಂದೆ ಆ ಒಡನಾಟದ ಜೊತೆಗೆ ಅವರಗಲಿಕೆಯ ದುಃಖ ನನ್ನನ್ನು ಕೂಡಿಕೊಂಡು ಖಿನ್ನನನ್ನಾಗಿಸುತ್ತದೆ.

ಅಂದು ನನ್ನನ್ನು ಕೂಡಲೇ ತಮ್ಮ ಕನಸ್ಸುಗಳಲ್ಲೊಂದಾದ ಫೇಸ್ಬುಕ್ಕಿನ ‘ಕನ್ನಡಬ್ಲಾಗ್’ ಎಂಬ ಗುಂಪಿಗೆ ಪರಿಚಯಿಸಿಕೊಂಡರು. ಅಲ್ಲಿಂದ ಪ್ರಾರಂಭವಾದ ನನ್ನ ಮತ್ತು ಅವರ ಒಡನಾಟ ಪವಿತ್ರವಾದ ‘ಗುರು ಶಿಷ್ಯ ಸಂಬಂಧ’ವನ್ನೂ ಸೋಲಿಸುವಂತಹದ್ದು. ದಿನಕ್ಕೆರಡು ಕವಿತೆಗಳನ್ನು ಬರೆದು ಗುಂಪಿನಲ್ಲಿ ಪ್ರಕಟಿಸುತ್ತಿದ್ದೆ. ನನ್ನಂತಹ ಅನೇಕ ಅಜ್ಞಾತ ಕುಡಿಗಳ ಬರಹಗಳನ್ನು ಸಾವಧಾನವಾಗಿ ಓದಿ, ವಿಮರ್ಶಿಸಿ, ಸಲಹೆ ಸೂಚನೆ ಕೊಟ್ಟು, ಹೊಗಳಿ ಇನ್ನೊಂದಷ್ಟು ರಚನೆಗಳಿಗೆ ನಿಜ ಪ್ರೇರಣೆಯಾಗಿ ನಿಲ್ಲುತ್ತಿದ್ದರು. ಈ ವ್ಯಕ್ತಿ ಮತ್ತು ವ್ಯಕ್ತಿತ್ವದ ದೆಸೆಯಿಂದ ನಮ್ಮ ಬರಹಗಳು ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತ ಸಾಗಿದವು, ರವಿಯಣ್ಣ ಕಟ್ಟಿ ಬೆಳೆಸಿದ್ದ ಕನ್ನಡಬ್ಲಾಗ್ ಎಂಬ ಸುಂದರ ಗುಂಪಿನ ಮೂಲಕ ಸಾಹಿತ್ಯಾಸಕ್ತರು ಹತ್ತಿರವಾದರು. ಫೇಸ್ಬುಕ್ ಪುಟ ತೆರೆದರೆ ಎಲ್ಲೆಲ್ಲೂ ಕನ್ನಡದ ಅಕ್ಷರಗಳೇ ಮೊಳಗುವಂತಾಯಿತು. ‘ಟೈಂ ಪಾಸ್’ ಗಾಗಿ ಪ್ರಾರಂಭಿಸಿದ ಫೇಸ್ಬುಕ್ ಸಾಹಿತ್ಯ ಕಲಿಕೆಗೆ ವೇದಿಕೆಯಾಗಿಹೋಯಿತು. ನಮ್ಮ ಬರಹಗಳನ್ನು ಪ್ರೀತಿಸಿ, ನಮಗೆ ಹತ್ತಿರವಾದ, ನಾವೂ ಹತ್ತಿರವಾದ ಎಷ್ಟೋ ಅಂದಿನ ಇಂದಿನ ವ್ಯಕ್ತಿಗಳು ನನ್ನಂತಹ ಅನೇಕರಿಗೆ ದೊರಕಿದ್ದು ಈ ವೇದಿಕೆಯ ಮೂಲಕವೇ ಎಂಬುದು ಅಕ್ಷರಶಃ ಸತ್ಯ. ಆವೊಂದು ದಿನ ಕನ್ನಡಬ್ಲಾಗ್ ಗುಂಪಿಗೆ ನನ್ನನ್ನು ಅಡ್ಮಿನ್ ಆಗಿ ಮಾಡಿಕೊಳ್ಳುವ ಮೂಲಕ ನನಗೆ ನನ್ನ ಸ್ವಂತ ಅಣ್ಣನಿಗಿಂತಲೂ ಹೆಚ್ಚಾಗಿ ಹತ್ತಿರವಾದರು. ಫೇಸ್ಬುಕ್ ಎಂಬ ಬೀಡಾಡಿ ತಾಣದ ಪ್ರತಿ ಗೊಂದಲಗಳಿಗೂ ‘ನಾನೇ ತಲೆ ಕೊಡುತ್ತೇನೆ, ನನ್ನ ತಮ್ಮಂದಿರಾರಿಗೂ ಅವಮಾನವಾಗಬಾರದು’ ಎಂದು ಹೇಳಿ ಪ್ರತಿ ಸವಾಲಿಗೂ ಎದೆಯೊಡ್ಡಿ ನಿಲ್ಲುತ್ತಿದ್ದರು.
ನಂತರದ ದಿನಗಳಲ್ಲಿ ಕೆಲವು ಅಪ್ರಸ್ತುತ ಕಾರಣಗಳಿಂದ ಅವರು ಫೇಸ್ಬುಕ್ ನಿಂದ ಹೊರಗೆ ಹೋದರೂ ನನ್ನನ್ನು ಕೈ ಬಿಡಲಿಲ್ಲವೆಂಬುದು ನನಗೆ ಮರೆಯಲಾಗದ ಮತ್ತು ತೀವ್ರ ಭಾವುಕಗೊಳಿಸುವ ವಿಚಾರ. ‘ಗಲ್ಫ್ ಕನ್ನಡಿಗ’ ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ನನ್ನ ಎಷ್ಟೋ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತ ಬಂದವರು, ನನಗಾಗಿ ಒಂದು ಕಾಲಂ ಅನ್ನು ಕೂಡ ತೆರೆದುಕೊಟ್ಟಿದ್ದರು. ‘ಅವಧಿ’ ಪತ್ರಿಕೆಯಲ್ಲಿ ನನ್ನ ಬರಹಗಳು ಕಂಡರೆ ಮರೆಯದೇ ಓದಿ ಪ್ರತಿಕ್ರಿಯಿಸುತ್ತಿದ್ದ ವ್ಯಕ್ತಿ ನನ್ನ ಮೇಲೆ ಅತೀವ ಭರವಸೆ ಇಟ್ಟುಕೊಂಡಿದ್ದವರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡ ನನಗೆ ನಿಜಕ್ಕೂ ಅನಾಥ ಪ್ರಜ್ಞೆ ಕಾಡುತ್ತಿದೆ. ‘ಸಾಹಿತ್ಯಾಸಕ್ತರನ್ನು, ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ, 25 ಸಾವಿರ ಬರಹಗಾರರನ್ನು ಒಂದೆಡೆ ಸೇರಿಸಬೇಕೆಂಬುದೇ ತನ್ನಾಸೆ’ ಎಂದು ಆಗಾಗ ಹೇಳಿಕೊಳ್ಳುತ್ತಿದ್ದ ವ್ಯಕ್ತಿ ಸ್ವತಃ ಕವಿಯಾಗಿದ್ದು ಅವರ ಬರಹಗಳು ನಮಗೆ ಕಲಿಕೆಯ ಸಾಧನಗಳಾಗಿದ್ದವು, ಕನ್ನಡ ಸಾಹಿತ್ಯಲೋಕದಲ್ಲಿ ಅವರೊಂದು ಮಿನುಗುತಾರೆಯಾಗುತ್ತಾರೆ ಎಂದು ಎಣಿಸಿದ್ದ ನಮಗೆ ನ್ಯಾಯವಲ್ಲದ ಈ ಸಾವಿನಿಂದ ತೀವ್ರ ಅನ್ಯಾಯವಾಗಿದೆ. ಹುಟ್ಟನ್ನು ಎಣಿಸಿ, ಸಾವನ್ನು ಸರಿಯಾಗಿ ಎಣಿಸದ ಆ ದೇವರಿಗೊಂದು ಧಿಕ್ಕಾರವಿರಲಿ.
ಸಾವುಗಳು ನಮ್ಮನ್ನು ಸೋಲಿಸಲು ಪ್ರಯತ್ನಿಸುತ್ತವೆ. ಈ ದಿನಗಳಲ್ಲಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ ಸಾವುಗಳೆಂದರೆ ನಮ್ಮ ತಂದೆಯ ಮರಣ ಮತ್ತು ಈ ದಿನ ಸಿಡಿಲಿನಂತೆ ಬಂದೆರಗಿದ ರವಿಯಣ್ಣನ ಅಕಾಲಿಕ, ಅನಿರೀಕ್ಷಿತ ಸಾವು. ರವಿಯಣ್ಣ ತೀರಿಕೊಂಡರು ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಕಣ್ಣು ಕತ್ತಲಾದಂತಾಗುತ್ತಿದೆ. ಇಂತಹ ಒಬ್ಬ ಕವಿ, ಪ್ರೋತ್ಸಾಹದಾಯಕ ವ್ಯಕ್ತಿಯ ಒಡನಾಟ ಈ ಪ್ರಕಾರವಾಗಿ ಅಂತ್ಯವಾಗುತ್ತದೆ ಎಂದು ನಾನು ಊಹಿಸಿದವನೇ ಅಲ್ಲ. ಆಗಾಗ ನನ್ನೊಡನೆ ಫೋನ್ ನಲ್ಲಿ ಮಾತನಾಡುತ್ತಿದ್ದವರು, ಮೇಯ್ಲ್ ಮೂಲಕವೂ ಸಲಹೆ ಸೂಚನೆ ನೀಡುತ್ತಿದ್ದರು. ಮೊನ್ನೆ ಮೊನ್ನೆ ಅವರು ಕಳುಹಿಸಿದ ಕೊನೆಯ ಸಂದೇಶದಲ್ಲಿ ‘ಈ ಭಾನುವಾರ ನಿಮ್ಮ ಜೊತೆ ಮಾತನಾಡುತ್ತೇನೆ, ಕೆಲವು ವಿಚಾರಗಳನ್ನು ತಿಳಿಸಬೇಕಾಗಿದೆ, ಗೌಪ್ಯವಾಗಿಟ್ಟುಕೊಳ್ಳಿ’ ಎಂದು ಹೇಳಿದ್ದರು. ಕೊನೆಗೂ ಅವರೊಂದಿಗೆ ಮಾತನಾಡಲಾಗಲಿಲ್ಲ. ಅದೇನು ವಿಚಾರ ಹೇಳಬೇಕಾಗಿತ್ತೋ, ಏನು ತೊಂದರೆಯಲ್ಲಿದ್ದರೋ ತಿಳಿಯೆ. ಒಟ್ಟಿನಲ್ಲಿ ಅಜ್ಞಾತ, ಅನಾಥ ಬರಹಗಾರರನ್ನು ಪ್ರೋತ್ಸಾಹಿಸಿ, ಅವರ ಪ್ರತಿ ಬರಹವನ್ನೂ ಓದಿ ವಿಮರ್ಶಿಸಿ, ಸಲಹೆ ಸೂಚನೆ ನೀಡಿ, ಮೇಲ್ಮಟ್ಟಕ್ಕೆ ತರುತ್ತಿದ್ದ ಹೃದಯವಂತ, ಮಗು ಮನಸ್ಸಿನ ವ್ಯಕ್ತಿ ಇನ್ನಿಲ್ಲವೆಂಬುದು ದುರಂತ ಮತ್ತು ಸಹಿಸಕೊಳ್ಳಲಾಗದ ಆದರೂ ಸಹಿಸಿಕೊಳ್ಳಲೇಬೇಕಾದ ಸತ್ಯ.
‘ನನ್ನ ದೇಶದಲ್ಲಿ ತಟ್ಟೆ ಹಿಡಿದು ನಿಂತುಕೊಂಡಿದ್ದೆ, ಆದರೆ ಯಾರೂ ಅನ್ನ ಹಾಕಲಿಲ್ಲ, ಆದುದರಿಂದ ಹೊರದೇಶಕ್ಕೆ ಹೊಟ್ಟೆಪಾಡಿನ ಕಾರಣದಿಂದ ಬರಬೇಕಾಯಿತು’ ಎಂದು ಹೇಳಿಕೊಳ್ಳುತ್ತಿದ್ದ ರವಿಯಣ್ಣ ಈ ಏಪ್ರಿಲ್ ವೇಳೆಗೆ ಸ್ವದೇಶಕ್ಕೆ ಮರಳುವ ಆಲೋಚನೆಯಲ್ಲಿದ್ದರು. ನನ್ನ ಮತ್ತು ಅವರ ಪುಸ್ತಕಗಳು ಒಟ್ಟಿಗೆ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದ್ದವು. ಆದರೆ, ಈ ಅನಿರೀಕ್ಷಿತ ತಿರುವಿನಿಂದ ನಾವು ಕಟ್ಟಿದ ಕನಸ್ಸೊಂದು ನೆಲಸಮವಾಗಿ ಅನಾಥಪ್ರಜ್ಞೆ ತೀವ್ರವಾಗಿ ಕಾಡುತ್ತಿದೆ.







ಅವರ ಪ್ರೀತಿಪಾತ್ರರು ಹಾಗೂ ಮನೆಮಂದಿ ಎಲ್ಲರೂ ಈ ನೋವಿನಿಂದ ಹೊರಬರುವ ಶಕ್ತಿ ನೀಡಿದಲಿ… 🙁
Sir plz forget it. Lets move on.
ಸರಳ, ಸಜ್ಜನ, ಮಗು ಮನಸ್ಸಿನ ಆ ನಿಷ್ಖಪಟ ವ್ಯಕ್ತಿತ್ವಕ್ಕೆ ನನ್ನ ನಮನಗಳು.
ನಮನಗಳನ್ನಷ್ಟೇ ಸಲ್ಲಿಸಲು ಶಕ್ತ ನಾನು….
ರವಿಯವರ ಬರಹಗಳನ್ನ ತೀರ ಇತ್ತೀಚೆಗಷ್ಟೇ ಓದಲು ಶುರು ಮಾಡಿದ್ದೆ. ಅವರೊಲ್ಲಬ್ಬ ದೈತ್ಯ ಕವಿ ಮತ್ತು ಲೇಖಕ ಕಾಣಿಸಿದ್ದ. ಅವರೊಡನೆ ಒಡನಾಟವಿರಿಸಿಕೊಳ್ಳಬೇಕೆಂಬ ಹಂಬಲವಿತ್ತು. ಅವರ ನೇರಾ ನೇರ ಪರಿಚಯವಿಲ್ಲದಿದ್ದರೂ ನಿಜಕ್ಕೂ ಅವರ ಸಾವು ನನ್ನನ್ನ ಕಾಡಿದ್ದು ಸುಳ್ಳಲ್ಲ. ಅವರು ಅವರ ಅಕ್ಷರಗಳ ರೂಪದಲ್ಲಿ ಸದಾ ಜೀವಂತರಾಗಿರಬಲ್ಲರು ಎಂದಷ್ಟೇ ಹೇಳಬಲ್ಲೆ.
ಅವರನ್ನು ಕೊನೆಗೆ ಕಂಡದ್ದು ಅವಧಿಯ ನನ್ನ ಕವಿತೆಗೆ ಹಾಕಿದ್ದ ಪ್ರತಿಕ್ರಿಯೆಯೊಂದರಲ್ಲಿ… ನಮ್ಮಂಥ ಚಿಕ್ಕವರ ಕವಿತೆಗಳನ್ನೂ ಬಹು ಜೋಪಾನವಾಗಿ ವಿಮರ್ಶಿಸಿ ಹೇಳುತಿದ್ದರು… ಒಳ್ಳೆಯ ಗುರುವನ್ನು ಕಳೆದುಕೊಂಡದ್ದಕ್ಕೆ ವಿಷಾದವಿದೆ….
🙁
ಬಾಯಿ ತೆರೆದ ಪದಗಳು, ಗಂಟಲು ಕಟ್ಟಿ ಬಿಕ್ಕುತ್ತಿವೆ. ನಾಲ್ಕೈದು ಬಾರಿ ಸ್ವರ ಕೇಳಿ ಮಾತನಾಡಿದ್ದು, ಜಿ-ಟಾಕ್ ನಲ್ಲಿ ಒಂದಷ್ಟು ಹರಟಿದ್ದು ಬಿಟ್ಟರೆ ನಾನು ಅವರೊಂದಿಗೆ ಹೆಚ್ಚು ಮಾತನಾಡಿದ್ದು ಅವರ ಕಥೆ, ಕವನ ಮತ್ತು ಲೇಖನಗಳ ಮೂಲಕವೇ. ಹೇಗೆ ಮಾತನಾಡಿದಾಗಲೂ ಪ್ರೀತಿಯನ್ನೇ ಉಕ್ಕಿಸಿ, ಏನನ್ನಾದರೂ ಮಾಡಬೇಕೆಂಬ ಛಲ ತುಂಬುತ್ತಿದ್ದ ಹಿರಿಯಣ್ಣ. ಸಾಹಿತ್ಯದ ಅ, ಆ, ಇ, ಈ ಕಲಿಯುತ್ತಿರುವ ನನ್ನ ಮೊದಲ ಸಾಹಿತ್ಯದ ಗುರುವಾಗಿದ್ದವರು ರವಿ ಮೂರ್ನಾಡು. ನಾನು ಏನೇ ಬರೆದರೂ ಚಿಕ್ಕ ಮಗುವಿನ ರೀತಿ ಅವರಿಗೆ ತೋರಿಸುತ್ತಿದ್ದೆ, ತಿದ್ದ ಬೇಕಾದ ಕಡೆ ತಿದ್ದಿ, ಕಿವಿಯಿಂಡಬೇಕಾದ ಕಡೆ ಕಿವಿಯಿಂಡಿ, ನಾನೂ ಒಂದಷ್ಟು ಬರೆಯಬಲ್ಲೆ ಎಂಬ ಆತ್ಮ ವಿಶ್ವಾಸ ತುಂಬಿದವರು ಅವರು. ಸಧ್ಯಕ್ಕೆ ನನ್ನ ಮಾತುಗಳು ಮುಗಿದು ಹೋದವು, ಮುಂದುವರೆಸಿದರೂ ಅವುಗಳಲ್ಲಿ ಶ್ವಾಸವಿರುವುದಿಲ್ಲ.
ಸೂರ್ಯ ಮುಳುಗದ ಲೋಕಕ್ಕೆ ಸೂರ್ಯನಾಗಿ ಹೊರಟುಬಿಟ್ಟ ರವಿಗೆ ಈ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ. ನೀವು ನಮ್ಮಲ್ಲಿ ಯಾವಾಗಲೂ ಪ್ರವಹಿಸುತ್ತಿರುತ್ತೀರಿ ರವಿಯಣ್ಣ. ಅವರ ಕುಟುಂಬಕ್ಕೆ ಈ ಸಾವಿನ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಆ ದೇವರು. ವಿಧಿಯ ಈ ನೀಚ ನಡೆಗೆ ನನ್ನ ಧಿಕ್ಕಾರವಿರಲಿ. 🙁
– ಪ್ರಸಾದ್.ಡಿ.ವಿ.
ವರದಿಯಲ್ಲಿ ರವಿಜೀವರ ಜೀವನಾದರ್ಶವನ್ನು ಕಣ್ಣಿಗೆ ಕಟ್ಟಿರುವಿರಿ.ಅವರ ಬದುಕು ದುಃಖಾಂತ್ಯವಾಗಿರುವುದು ದುರ್ದೈವ.‘ನನ್ನ ದೇಶದಲ್ಲಿ ತಟ್ಟೆ ಹಿಡಿದು ನಿಂತುಕೊಂಡಿದ್ದೆ, ಆದರೆ ಯಾರೂ ಅನ್ನ ಹಾಕಲಿಲ್ಲ, ಆದುದರಿಂದ ಹೊರದೇಶಕ್ಕೆ ಹೊಟ್ಟೆಪಾಡಿನ ಕಾರಣದಿಂದ ಬರಬೇಕಾಯಿತು’ ಈ ನುಡಿಯೇ ಕರುಳನ್ನು ಕಿವುಚುವುದು,ಮೋಹನಜೀ ನಾವೆಂಥ ದುರಾದೃಷ್ಟವಂತರು ನೋಡಿ.