ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅನ್ನಭಾಗ್ಯ, ಭೈರಪ್ಪ ನಿಲುವು, ವಸ್ತುನಿಷ್ಠ ಚರ್ಚೆ’ – ಸತೀಶ್ ಚಪ್ಪರಿಕೆ

ಅನ್ನಭಾಗ್ಯ ಮತ್ತು ಅದರ ಬಗ್ಗೆ ಭೈರಪ್ಪ ಅವರ ಹೇಳಿಕೆಯ ಬಗ್ಗೆ ಸತೀಶ್ ಚಪ್ಪರಿಕೆ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

***

– ಸತೀಶ್ ಚಪ್ಪರಿಕೆ


ಕನ್ನಡದ ಶ್ರೇಷ್ಠ ಕಾದಂಬರಿಕಾರರ ಪೈಕಿ ಒಬ್ಬರು ಹಾಗೂ ಹಿರಿಯರು ಆಗಿರುವ ಎಸ್. ಎಲ್. ಭೈರಪ್ಪಅವರು ಮುಖ್ಯಮಂತ್ರಿ ಸಿದ್ದಾರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಕುರಿತು ಅವರು ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅದೇ ವೇಳೆ ಸಿದ್ದರಾಮಯ್ಯ ಸರ್ಕಾರದ ಸಾಧನೆಯ ಬಗ್ಗೆ ಕೂಡ ಅವರ ಅಭಿಪ್ರಾಯವನ್ನು ನಿಖರವಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಅವರುಹೇಳಿರುವ ಅಭಿಪ್ರಾಯದ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಅದು ಅವರ ಅಭಿಪ್ರಾಯ. ಅವರಿಗೆ ಬಿಟ್ಟಿದ್ದು. ಆದರೆ, ಜನಪರವಾದ ಅನ್ನಭಾಗ್ಯ ಯೋಜನೆಯ ಬಗ್ಗೆ ಅವರ ನಿಲುವಿನ ಬಗ್ಗೆ ಮಾತ್ರ ಈ ವಸ್ತುನಿಷ್ಠ ಚರ್ಚೆ ಸೀಮಿತ.
ಈ ಅನ್ನಭಾಗ್ಯ ಯೋಜನೆಯನ್ನು ಶಾಂತವಾಗಿ, ಸಮಚಿತ್ತದಲ್ಲಿ ಅವಲೋಕಿಸಿದರೆ, ಸಂಶೋಧಿಸಿದರೆ ಅದರ ಪರಿಣಾಮವು ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಗೊತ್ತಾಗಿಯೂ ಇದೆ. ಇದು ಜನರನ್ನು ಸೋಮಾರಿಗಳನ್ನಾಗಿಸುವ ಪರಿಣಾಮವುಳ್ಳದ್ದು. ಉದ್ಯೋಗವನ್ನು ಸೃಷ್ಟಿಸುವ ಮೂಲಕ ಜನರಿಗೆಅಕ್ಕಿಯನ್ನು ಕೊಳ್ಳುವ ಶಕ್ತಿಯನ್ನು ನೀಡುವುದು ಸರ್ಕಾರದ ಕೆಲಸ. ಬಡಮಕ್ಕಳಿಗೂ ಒಳ್ಳೆಯ ಗುಣಮಟ್ಟದ ವಿಧ್ಯಾಭ್ಯಾಸ, ಬಡಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕುವಂತೆ ಮಾಡುವುದು ಸರ್ಕಾರದ ಕರ್ತವ್ಯ ಇದು ಭೈರಪ್ಪಅವರೇ ಹೇಳಿದ ಮತ್ತು ಬರೆದ ನಿಲುವು.
ಅನ್ನಭಾಗ್ಯ ಯೋಜನೆಯನ್ನು ಶಾಂತವಾಗಿ, ಸಮಚಿತ್ತದಲ್ಲಿ ಅವಲೋಕಿಸದರೆ, ಸಂಶೋಧಿಸಿದರೆ ಅದರ ಪರಿಣಾಮವು ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಗೊತ್ತಾಗಿಯೂ ಇದೆಎಂದು ಹೇಳಿರುವ ಭೈರಪ್ಪ ಅವರು ಅದೇ ರೀತಿಯಲ್ಲಿ ಈ ಜನಪರ ಯೋಜನೆಯನ್ನು ಅವಲೋಕಿಸಿದ್ದಾರೆಯೇ? ವಿಶ್ಲೇಷಿದ್ದಾರೆಯೇ?ಎನ್ನುವುದು ಮೂಲಭೂತ ಪ್ರಶ್ನೆ. ಅನ್ನಭಾಗ್ಯದ ದುಷ್ಪರಿಣಾಮ ಮನನ ಮಾಡಿಕೊಡಲು ಭೈರಪ್ಪ ಅವರು ಬಳಸಿರುವ ಉದಾಹರಣೆ ಹೇರ್ಕಟಿಂಗ್ ಸಲೂನ್ ಒಂದರ ಸ್ಥಿತಿ-ಗತಿ. ಹೀಗೆ ಭೈರಪ್ಪಅವರು ಅತ್ಯಂತ ಮೇಲ್ಪದರದ ಒಂದು ಉದಾಹರಣೆಯನ್ನು ಕೊಡುವ ಮೂಲಕ ಅನ್ನಭಾಗ್ಯ ಯೋಜನೆಯ ವಿರುದ್ಧ ಮೇಲ್ಪದರದ ನಿಲುವನ್ನು ವ್ಯಕ್ತಪಡಿಸಿರುವುದು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಭೈರಪ್ಪ ಶಾಂತ, ಸಮಚಿತ್ತ, ಸಂಶೋಧನೆಏನನ್ನೂ ಮಾಡದೇ ಸರಳವಾದ ವ್ಯಾಖ್ಯಾನ ನೀಡಿದ್ದಾರೆ.
ಇನ್ನು ಭೈರಪ್ಪತಮ್ಮ ನಿಲುವಿಗೆ ಬಲ ನೀಡಲು ಬಳಸಿಕೊಂಡ ಎರಡನೇ ಉದಾಹರಣೆ 1929ರ ಅಮೆರಿಕದ ‘ದಿ ಗ್ರೇಟ್ ಡಿಪ್ರೆಶನ್ ‘ ಮತ್ತು ಫ್ರಾಂಕ್ಲಿನ್ ರೂಸ್ ವೆಲ್ಟ್ ಸರ್ಕಾರ ಕೈಗೊಂಡ ನಿಲುವು. ಇಲ್ಲಿ ಕೂಡ ಭೈರಪ್ಪ ದಾರಿ ತಪ್ಪಿರುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಪಾಶ್ಚಿಮಾತ್ಯ ಮತ್ತುಐರೋಪ್ಯ ದೇಶಗಳಲ್ಲಿನ ಸಾಮಾಜಿಕ-ಆರ್ಥಿಕ ಸ್ಥಿತಿಗೂ, ಭಾರತದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗೂ ಅಜಗಜಾಂತರ ವ್ಯತ್ಯಾಸವಿದೆ.ಅಮೆರಿಕ, ಬ್ರಿಟನ್ನಂತಹ ದೇಶಗಳು ಔದ್ಯೋಗಿಕರಣದ ಆಲಯಗಳು. ಆದರೆ, ಭಾರತ ಈಗಲೂ ಕೂಡಕೃಷಿಯನ್ನೇ ಅವಲಂಬಿಸಿದ ಹಳ್ಳಿಗಳಿಂದಲೇ ತುಂಬಿದ, ಬಡತನವನ್ನೇ ಹೊದ್ದುಕೊಂಡಿರುವ ‘ಸೂಪರ್ ಪವರ್.’ ಇತ್ತೀಚೆಗಷ್ಟೆ ಕೇಂದ್ರದಲ್ಲಿರುವ ಎನ್ ಡಿ ಎ  ಸರ್ಕಾರ ಬಿಡುಗಡೆ ಮಾಡಿರುವ ‘ಸೋಷಿಯೊ-ಇಕಾನಾಮಿಕ್ಅಂಡ್ ಸೆನ್ಸಸ್-2011’ ವರದಿಯನ್ನು ಬಿಡುಗಡೆ ಮಾಡಿದೆ.ಆ ವರದಿಯ ಪ್ರಕಾರ ಈಗ ಕೂಡ ಭಾರತದಲ್ಲಿರುವ ಶೇಕಡಾ 74ರಷ್ಟು ಕುಟುಂಬಗಳ ತಿಂಗಳ ಆದಾಯ 5000 ರೂಪಾಯಿಗಳು ಮಾತ್ರ. ಇದು ಒಂದು ಕುಟುಂಬದ ಒಟ್ಟಾರೆ ತಿಂಗಳ ಆದಾಯ! ಆ ಪೈಕಿ ಶೇಕಡಾ 70ರಷ್ಟು ಕುಟುಂಬಗಳು ಇಂದು ಕೂಡ ಒಂದು ಹೊತ್ತಿನ ಕೂಳಿಗಾಗಿ ಅವಿರತ ಹೋರಾಟ ನಡೆಸುತ್ತಲೇ ಇವೆ.

ಮಾನ್ಯ ಭೈರಪ್ಪಅವರೇ, ಭಾರತ ದೇಶದ ಮೂಲೆ-ಮೂಲೆಗಳಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿ ಈ ಮಾತನ್ನು ಹೇಳುತ್ತಿದ್ದೇನೆ. ಈ ದೇಶದಲ್ಲಿ ಇಂದಿಗೂ ಹಸಿವಿನ ರುದ್ರ ನರ್ತನ ಮುಂದುವರಿದಿದೆ. ಸಾಮಾಜಿಕ- ಆರ್ಥಿಕ ಅಸಮಾನತೆ ಅಷ್ಟೇ ಪ್ರಬಲವಾಗಿ ಬೇರೂರಿ ನಿಂತಿದೆ. ಇಂತಹ ವಾತಾವರಣದ ನಡುವೆ ಪ್ರತಿಯೊಬ್ಬ ಪ್ರಜೆಗೂ ಉದ್ಯೋಗವನ್ನು ಸೃಷ್ಟಿಸುವುದು, ಅಕ್ಕಿಕೊಳ್ಳುವ ಶಕ್ತಿಯನ್ನು ನೀಡುವುದು ಅಷ್ಟು ಸುಲಭದ ಮಾತಲ್ಲ.ಅದಕ್ಕಿಂತ ಮೊದಲುಅಂತಹ ಪ್ರಜೆಗಳಿಗೆ ಸಾಮಾಜಿಕ-ಆರ್ಥಿಕ ಬೆಂಬಲವನ್ನು ನೀಡಿ ಸಮಾಜದ ಬುಡದಲ್ಲಿ ನರಳಾಡುತ್ತಿರುವ ಬಡವರಿಗೆ ಒಂದಿಷ್ಟು ಬಲ ನೀಡಬೇಕಾಗುತ್ತದೆ. ಆ ಹಿನ್ನಲೆಯಲ್ಲಿಅನ್ನಭಾಗ್ಯ, ಕೂಲಿಗಾಗಿ ಕಾಳು, ಬಿಸಿಯೂಟದಂತಹ ಜನಪರವಾದ ಯೋಜನೆಗಳಿಗೆ ಅದರದ್ದೇಆದ ಮಹತ್ವವಿದೆ.ಮೇಲ್ನೋಟಕ್ಕೆ ಮತ್ತು ಮೇಲ್ಪದರದಲ್ಲಿ ಈ ಯೋಜನೆಗಳು ಬೇರೆಯದೇ ಆಗಿ ಕೆಲವರ ಕಣ್ಣಿಗೆ ಕಾಣಬಹುದು. ಕೇವಲ ಭ್ರಷ್ಟಾಚಾರದ ಆಗರದಂತೆ ಕೂಡ ಕಂಡು ಬರಬಹುದು. ಆದರೂ, ಅವುಗಳದ್ದೇ ಆದ ಇತಿ-ಮಿತಿಯ ನಡುವೆ ಕೂಡ ಜನಪರ ಯೋಜನೆಗಳು ದೀರ್ಘಕಾಲದಲ್ಲಿ ಹಲವಾರು ಸಾಮಾಜಿಕಕ್ರಾಂತಿಗೆ, ಆ ಮೂಲಕ ಆರ್ಥಿಕ ಉನ್ನತಿಗೆ ಕಾರಣವಾಗುತ್ತವೆ.
ಉದಾರಹಣೆಗೆ ದಿವಂಗತ ದೇವರಾಜ ಅರಸು ಅವರು 1980ರ ದಶಕದಲ್ಲಿ ಜಾರಿಗೆ ತಂದ ಭೂ ಸುಧಾರಣೆ ಕಾಯಿದೆ ಮತ್ತು ಅದರ ಸತ್ಪರಿಣಾಮದ ಫಲವನ್ನು ನಾವೆಲ್ಲ ಈಗ ಸ್ಷಷ್ಟವಾಗಿ ಕಾಣುತ್ತಿದ್ದೇವೆ. ದಿವಂಗತ ರಾಮಕೃಷ್ಟ ಹೆಗಡೆ ಅವರು ಜಾರಿಗೆ ತಂದ ವೃತ್ತಿಪರ ಕೋರ್ಸ್ ಗಳಲ್ಲಿ ಹಳ್ಳಿಗಾಡಿನ ಮೀಸಲಾತಿಯ ಫಲದ ಪರಿಣಾಮವನ್ನು ಎಷ್ಟೋ ವರ್ಷಗಳ ನಂತರ ಈಗ ಲಕ್ಷಾಂತರ ಕುಟುಂಬಗಳು ಅನುಭವಿಸುತ್ತಿವೆ. ಅದೇರೀತಿಯಲ್ಲಿ ಕೂಲಿಗಾಗಿ ಕಾಳು ಮತ್ತು ಬಿಸಿಯೂಟದಂತಹ ಯೋಜನೆಗಳು ಕೂಡ ಸಕಾರಾತ್ಮಕ ಫಲ ನೀಡಲಾರಂಭಿಸಿವೆ. ಇತ್ತೀಚೆಗೆ ಎನ್ ಡಿ ಎ ಸರ್ಕಾರ ಜಾರಿಗೆ ತಂದ ಜನ-ಧನ ಯೋಜನೆ ಕೂಡ ಸ್ವಾಗತಾರ್ಹ.
ಇನ್ನು ಎಷ್ಟು ದಿನ ಇಂತಹ ಜನಪರ ಯೋಜನೆಗಳು ನಮ್ಮ ದೇಶಕ್ಕೆ ಅಗತ್ಯ ಎಂಬ ತಾರ್ಕಿಕ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಎಲ್ಲಿಯವರೆಗೆ ಈ ದೇಶದಲ್ಲಿ ಸಾಮಾಜಿಕ- ಆರ್ಥಿಕ ಅಸಮಾನತೆ ಕಡಿಮೆಯಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಯೋಜನೆಗಳ ಅಗತ್ಯ ಇದ್ದೇ ಇರುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಎಲ್ಲಿಯವರೆಗೆ ಎಲ್ಲ ಮನುಷ್ಯರಿಗೆ ಮಂದಿರ-ಮಸೀದಿ-ಚರ್ಚೆ ಪ್ರವೇಶಿಸಲು ಸಮಾನ ಅವಕಾಶ ದೊರೆಯುವುದಿಲ್ಲವೋ; ಎಲ್ಲಿಯರವರೆಗೆ ನಮ್ಮ ಮನೆಗಳಲ್ಲಿ ಕೆಲಸ ಮಾಡುವ ಮನೆಗೆಲಸದಾಕೆ, ಡ್ರೈವರ್ ಮುಂತಾದರಿಗೆ ನಾವು ಕನಿಷ್ಠ ಸಂಭಾವನೆ ಮತ್ತು ಗೌರವ ನೀಡುವುದಿಲ್ಲವೋ; ಎಲ್ಲಿಯವರೆಗೆ ಈ ಸಮಾಜದಲ್ಲಿ ಒಂದು ಹೊತ್ತಿನ ಕೂಳಿಗಾಗಿ ಜನರು ವಿಲವಿಲ ಒದ್ದಾಡುತ್ತಿರುತ್ತಾರೋ… ಅಲ್ಲಿಯವರೆಗೆ.ಒಂದಂತೂ ನಿಜ ಇಂತಹ ಯೋಜನೆಗಳಿಂದಾಗಿ ಈ ದೇಶದ ಬಡವಎಂದೂ ಸೋಮಾರಿಯಾಗಿಲ್ಲ. ಸೋಮಾರಿಯಾಗುವುದಿಲ್ಲ.
ಸಮಸ್ಯೆ ಎಲ್ಲಾಗುವುದೆಂದರೆ, ಒಮ್ಮೆ ಬಡವರಿಗೆ ಆಯ್ಕೆಯ ಸ್ವಾತಂತ್ರ್ಯ ಸಿಕ್ಕ ಕೂಡಲೇ ಅವರು ಅವರ ಹಕ್ಕನ್ನು ‘ಡಿಮ್ಯಾಂಡ್’ ಮಾಡಲು ಆರಂಭಿಸುತ್ತಾರೆ. ಆಗ ಮಧ್ಯಮ- ಮೇಲ್ವರ್ಗದವರ ಪಾಲಿಗೆ ಅದು ಬಿಸಿ ತುಪ್ಪವಾಗಿ ಬಿಡುತ್ತದೆ. ಹೇಗೆ ಭೈರಪ್ಪಅವರು ಹೇರ್ಕಟಿಂಗ್ ಸಲೂನ್ ಸ್ಥಿತಿ-ಗತಿ ವಿವರಿಸಿದರೋ, ಅದೇ ರೀತಿಯಲ್ಲಿ ಇಂದು ಹಳ್ಳಿಗಾಡಿನಲ್ಲಿ ಕೂಲಿಯಾಳುಗಳ ಬಗ್ಗೆ ಕೂಡ ಆತಂಕ ಉಂಟಾಗಿದೆ. ಏಕೆಂದರೆ ಜನಪರ ಯೋಜನೆಯ ಫಲಾನುಭವಿಗಳಾದ ಬಡವರು ಅವರ ಹಕ್ಕನ್ನು ‘ಡಿಮ್ಯಾಂಡ್’ ಮಾಡಲು ಆರಂಭಿಸಿದ್ದಾರೆ. ಉಳ್ಳವರ, ಮಾಲೀಕರ ನೆಲೆಯಲ್ಲಿ ನೋಡಿದರೆ ಇದು ಜನಪರ ಯೋಜನೆಗಳಿಂದಾದ ದುಷ್ಟರಿಣಾಮ. ಸಮಾಜದ ತಳಮಟ್ಟದಲ್ಲಿ ನಿಂತು ನೋಡಿದರೆ ಸತ್ಪರಿಣಾಮ.
ಸಂತೋಷದ ವಿಷಯವೆಂದರೆ ಭೈರಪ್ಪ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆ ಮಾತನಾಡಿರುವುದು. ದುಃಖದ ವಿಷಯವೆಂದರೆ ಅವರು ಶಾಂತ, ಸಮಚಿತ್ತರಾಗಿ ಸಂಶೋಧನೆ ಮಾಡದೇ ಮೇಲ್ಪದರದ ಅಭಿಪ್ರಾಯ ವ್ಯಕ್ತಪಡಿಸಿರುವುದು. ಭೈರಪ್ಪ ಅವರ ಒಂದು ಮಾತಿಗೆ ನನ್ನ ಸಂಪೂರ್ಣ ಸಮ್ಮತವಿದೆ. ಅದೇನೆಂದರೆ ಭೈರಪ್ಪ ಅವರು ಅವರದೇ ಆದ ನೆಲೆಯಲ್ಲಿ ನಿಂತು ಆಡಿದ ಗಂಭೀರ ವಿಷಯದ ಕುರಿತಾದ ಮಾತುಗಳಿಗೆ ಅಷ್ಟೇ ಗಂಭೀರವಾಗಿ ಎಲ್ಲರೂ ಪ್ರತಿಕ್ರಿಯೆ ನೀಡಬೇಕಿತ್ತು. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ. ಭೈರಪ್ಪ ಮತ್ತು ಅವರಂತಹ ನೂರಾರು ಹಿರಿಯ ಲೇಖಕರು, ಬುದ್ಧಿಜೀವಿಗಳು ನಮ್ಮರಾಜ್ಯದಲ್ಲಿರುವುದು ನಮ್ಮೆಲ್ಲರ ಪುಣ್ಯ. ಅವರೆಲ್ಲ ನಮ್ಮರಾಜ್ಯದ ಸಾಕ್ಷಿಪ್ರಜ್ಞೆ. ಭೈರಪ್ಪಅವರನ್ನು ಒಳಗೊಂಡು ಅಂತಹ ಎಲ್ಲ ಹಿರಿಯರಲ್ಲಿ ಒಂದು ಮನವಿ. ಅದೇನೆಂದರೆ ತಾವುಗಳು ಶಾಂತ, ಸಮಚಿತ್ತರಾಗಿ ಸಂಶೋಧನೆ ಮಾಡಿದ ಮೇಲೆ ಯಾವುದಾದರೂ ವಿಷಯಗಳ ಬಗ್ಗೆ ನಿಮ್ಮ ಹೇಳಿಕೆ ನೀಡಿ.ಮಾತ್ರವಲ್ಲ, ಅನ್ನಭಾಗ್ಯದಂತೆಯೇ, ದೇಶದ ಇತರ ಆಗು-ಹೋಗುಗಳಾದ ಮಧ್ಯಪ್ರದೇಶದ ವ್ಯಾಪಂ ಹಗರಣ, ಕರ್ನಾಟಕ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಹಗರಣ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ಇಂಡಿಯಾದ ಹಗರಣ ಮುಂತಾದವುಗಳ ಕುರಿತುಕೂಡ ಮುಕ್ತವಾಗಿ ನಿಮ್ಮಅಭಿಪ್ರಾಯ ವ್ಯಕ್ತಪಡಿಸಿ. ಏಕೆಂದರೆ ನಿಮ್ಮ ಮಾತುಗಳಿಗೆ ಬಹಳಷ್ಟು ಬೆಲೆಯಿದೆ. ಅದನ್ನು ಬಿಟ್ಟುಒಂದೋ, ಎರಡೋ ನಿಮಗೆ ಅನುಕೂಲಕರ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮೇಲ್ಪದರದ ಹೇಳಿಕೆ ನೀಡಲು ಹೋಗಬೇಡಿ. ನೀವೆಲ್ಲ ಈ ಸಮಾಜಕ್ಕೆ ಸೇರಿದವರು. ಯಾವುದೆಎಡ-ಬಲ, ಜಾತಿ-ಧರ್ಮ, ಸಂಘ-ಸಂಸ್ಥೆ, ಪಕ್ಷಗಳಿಗೆ ಸೇರಿವರಲ್ಲ. ನೀವು ಈ ಸಮಾಜದ ಪರ ನೀವು ನಿಲ್ಲಬೇಕು. ಅದನ್ನು ನೀವು ಮರೆತ ಪರಿಣಾಮ, ಆಳುವ ಧಣಿಗಳ ಬಂಟರು ಈಗ ದೊಡ್ಡಗಂಟಲಿನಲ್ಲಿ ಅರಚುತ್ತಿರುವುದು. ಅದಕ್ಕೆ ಇನ್ನು ಮುಂದೆ ಅವಕಾಶ ಮಾಡಿಕೊಡಬೇಡಿ.
(ಸೌಜನ್ಯ : ವಿಜಯ ವಾಣಿ)

‍ಲೇಖಕರು G

11 July, 2015

10 Comments

  1. Somashekhar Rachaiah

    I read SL Bhairappa’s article in Vijayakarnata. Like in some of his novel, he looks at things with very constricted view to suit his arguements which is very unfair. As you mentioned in your article, he gives an example of how American president managed the great depression of 1930s, but turns his blind eye towards the benefits American poor people get in their country. I have been living in America for last 10 years. Social, financial, health care support to underprivileged in India from the govt is a pittance when compared to what is given in America.

  2. Hanumanth Ananth Patil

    ಮಾನ್ಯರೆ
    ತಮ್ಮ ಬರಹದ ಒಳದನಿ ಅರ್ಥವಾಯಿತು ಭೈರಪ್ಪ ಅನ್ನಭಾಗ್ಯ ಒಂದೆ ಅಲ್ಲ ವರ್ತಮಾನದ ಎಲ್ಲ ಆಗು ಹೋಗುಗಳ ಕುರಿತು ಅವರ ಅಬಿಪ್ರಾಯ ವ್ಯಕ್ತ ಪಡಿಸಬೇಕೆಂದಿದ್ದಿರಿ. ಆದರೆ ಭೈರಪ್ಪ ಯಾವುದೋ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅಲ್ಲಿನ ಸ್ಥಳೀಯ ಪತ್ರಕರ್ತರು ಅನ್ನಭಾಗ್ಯದ ಕುರಿತು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರವನ್ನು ತಮಗೆ ಬೇಕಾದ್ದನ್ನು ಗ್ರಹಿಸಿ ವಿಶೇಷವಾಗಿ ಬಿಂಬಿಸಿ ವರದಿ ಮಾಡಿದ್ದರ ಪ್ರತಿಫಲವೆ ಈಗ ನಡೆಯುತ್ತಿರುವ ತವಡು ಕುಟ್ಟ

  3. Vasanth

    Very good one. Fitting response.

  4. nandish.m

    ಸರ್ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ..ಅದು ಈಗೀನ ವಾಸ್ತವ ನಿಜ ಕೂಡ ಹೌದು…

  5. Gn Nagaraj

    ಅನ್ನಭಾಗ್ಯ ಎಂಬ ಆಹಾರ ಭದ್ರತೆಯ ಒಂದು ಸಣ್ಣ ಭಾಗದ ಬಗ್ಗೆ ಮತ್ತೆ ಮತ್ತೆ ಭೈರಪ್ಪನವರು ಗೊಂದಲ ಎಬ್ಬಿಸುತ್ತಿರುವುದೇಕೆ ? ಅದಕ್ಕೆ ಅದು ಆರಂಭವಾದ ಎರಡು ವರ್ಷಗಳ ನಂತರ ಈ ಸಮಯವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆ? ಅವರ ಮಾತುಗಳು ಮೇಲ್ನೋಟಕ್ಕೆ ಕಾಣುವಂತೆ ಕೇವಲ ಒಬ್ಬ ಸಾಹಿತಿಯ ಸಾಮಾಜಿಕ ಕಾಳಜಿಯ ಭಾಗವೇ ಅಥವಾ ಅವರ ಸಾಹಿತ್ಯ ರಾಜಕೀಯದ ಭಾಗವೇ ? ಈ ಎಲ್ಲ ಪ್ರಶ್ನೆಗಳು ಏಳುತ್ತವೆ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಇಂದು ಪತ್ರಿಕೆ ಮತ್ತು ಮಾಧ್ಯಮಗಲಲ್ಲಿ ಆಗುತ್ತಿರುವಂತೆ ಕೇವಲ ಇದು ಬಡವರ ಹಸಿವನ್ನು ಹೋಗಲಾಡಿಸಲು ಕೈಗೊಂಡ ಮಾನವೀಯ ಕ್ರಮ ಮತ್ತು/ಅಥವಾ ಅವರ ಮತಗಳನ್ನು ಗಳಿಸಲು ಕಾಂಗ್ರಸ್/ಸಿದ್ಧರಾಮಯ್ಯ ಸರ್ಕಾರ ಹೂಡಿದ ರಾಜಕೀಯ ತಂತ್ರ ಎಂಬ ಮೇಲ್ಪದರದ ( superficial) ವಿಷಯಗಳಿಗಷ್ಟೇ ಸೀಮಿತವಾದರೆ ಸಾಲದು. ಕೆಲ ಮೂಲಭೂತ ವಿಷಯಗಳವರೆಗೂ ಹೋಗಬೇಕಾಗುತ್ತದೆ.. ಒಂದುಕಡೆ ,.ಈ ಆಹಾರ ಭದ್ರತೆ ಎಂದರೇನು ಅದರ ಅವಶ್ಯಕತೆ ಏಕಿದೆ? ಅದು ವಹಿಸುವ ಾರ್ಥಿಕ , ಸಾಮಾಜಿಕ ಪಾತ್ರ ಏನು? ಅದಕ್ಕಿಂತ ುತ್ತಮವಾದ ಬೇರೆ ಪರ್ಯಾಯ ಕ್ರಮಗಳಿಲ್ಲವೇ ? ೆಂಬ ಪ್ರಶ್ನೆಗಳಿಗೆ ಮತ್ತೊಂದು ಕಡೆ ಇಂದಿನ ಕೇಂದ್ರ ಸರ್ಕಾರದ ಾರ್ಥಿಕ ನೀತಿ ಏನು? ಆಹಾರ ಭದ್ರತೆ ಈ ಆರ್ಥಿಕ ನೀತಿಗೆ ಉಂಟು ಮಾಡುತ್ತಿರುವ ಅಡಚಣೆ ಏನು? ಆಹಾರ ಭದ್ರತೆಯ ಬಗ್ಗೆ ಅವರ ದೃಷ್ಟಿಕೋನ ೇನು ? ಈ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಸಬೇಕಾಗುತ್ತದೆ . ಅದಕ್ಕೆ ಒಂದು ಪೂರ್ಣ ಲೇಖನವೇ ಬೆಕಾಗುತ್ತದೆ . ಬರೆಯುವ ಪ್ರಯತ್ನ ಮಾಡುತ್ತೇನೆ

  6. Ajith

    ಇತ್ತೀಚಿನ ದಿನಗಳಲ್ಲಿ ಭೈರಪ್ಪ ತಳೆಯುತ್ತಿರುವ ನಿಲುವು ಮತ್ತು ಅವರ ಬರಹದ ಧಾಟಿ ಗಮನಿಸಿದರೆ ತೌಡು ಎಲ್ಲಿಂದ ಬರುತ್ತಿದೆ ಎಂಬುದನ್ನು ಊಹಿಸುವುದು ಕಷ್ಟವಲ್ಲ!!!

  7. Anonymous

    sarakarad koti kOti duddu tindu kanishta 3 talemaru hasi hodeyuvzstu sampttu madittavaru, koti kOti bank sala padedu nama haki jagattinalli irabahudada ella sukhs mattu vaibjogha anubhavisuttisuttiruvvaru yaru somariglagilla. avrella ondalla ondu chatuvatikeyalli todagikondu sampattu hecchisuva karyadalli nirataru. heegiruvaga annabhagyad phalanubhavi somariyaguttane annuvudu aviveka.

  8. Gn Nagaraj

    ಆಹಾರ ಭದ್ರತೆ ಎಂಬುದು ರೈತ ಭದ್ರತೆ , ಆಹಾರ ಕೊಳ್ಳುವವರೆಲ್ಲರ ಭದ್ರತೆ. ಲಾಭಕೋರ ಮಾರುಕಟ್ಟೆ ಶಕ್ತಿಗಳನ್ನು ನಿಯಂತ್ರಣದಲ್ಲಿಡುವ ವ್ಯವಸ್ಥೆ.
    ಇತ್ತೀಚೆಗೆ ದಿನ ದಿನವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸುದ್ದಿಗಳನ್ನು ನೋಡಿ, ಓದಿ ಇಡೀ ರಾಜ್ಯವೇ ಆತಂಕಕೊಳಗಾಗುತ್ತಿದೆ. ಸಾಮಾನ್ಯವಾಗಿ ಈ ರೈತರು ವಾಣಿಜ್ಯ ಬೆಳೆಗಳೆನ್ನುವ ಕಬ್ಬು, ಹೊಗೆಸೊಪ್ಪು, ಹತ್ತಿ ,ರೇಷ್ಮೆ ಬೆಳೆದ ರೈತರು. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಶೇಂಗಾ ( ಕಡಲೇಕಾಯಿ) , ತೊಗರಿ ಮೊದಲಾದ ಬೆಳೆಗಳ ರೈತರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭತ್ತ , ಗೋಧಿ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಅಪರೂಪ. ಅದೂ ಕೂಡ ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ. ಏಕೆಂದರೆ ಈ ಬೆಳೆಗಳನ್ನು ಸರ್ಕಾರಗಳೇ ಬೆಂಬಲ ನೀಡಿ ಕೊಳ್ಳುತ್ತವೆ. ಯಾರಿಂದ ಬೆಳೆಗಳನ್ನು ಕೊಳ್ಳಲಾಗುತ್ತದೆಯೋ ಆ ರೈತರಿಗೆ ಒಂದು ಖಾತರಿ ಬೆಲೆ ಮತ್ತು ಆದಾಯ ಸಿಗುತ್ತದೆ ಮಾತ್ರವಲ್ಲ ಭತ್ತ, ಗೋಧಿ ಮಾರುಕಟ್ಟೆಯನ್ನು ಸ್ಥಿರಗೊಳಿಸುತ್ತದೆ. ಸರ್ಕಾರ ನೀಡುವ ಬೆಂಬಲ ಬೆಲೆಗಿಂತ ೀ ಧಾನ್ಯಗಳ ಬೆಲೆ ಕಡಿಮೆಯಾಗದಂತೆ ರಕ್ಷಿಸುತ್ತದೆ. ಏಕೆಂದರೆ ಒಂದು ವರ್ಷದಲ್ಲಿ ಐದು ಕೋಟಿ ಟನ್ನಿಗಿಂತ ಹೆಚ್ಚು ಈ ಧಾನ್ಯಗಳನ್ನು ಕೊಳ್ಳಲಾಗುತ್ತಿದೆ. ಆದ್ದರಿಂದ ಖಾಸಗಿ ದಲ್ಲಾಲರುಗಳು ಬೆಲೆಗಳನ್ನು ವಿಪರೀತ ಏರಿಳಿತ ಮಾಡಿ ರೈತರನ್ನು ಹಳ್ಳಕ್ಕೆ ತಳ್ಳುವ ಅವಕಾಶ ಬಹಳ ಸೀಮಿತವಾಗುತ್ತದೆ.ಈ ಅನುಕೂಲ ಬೇರೆಲ್ಲ ಬೆಳೆಗಳಿಗೆ ಸಿಕ್ಕಿದರೆ ರೈತರ ಆದಾಯ ಸ್ಥಿರಗೊಳ್ಳುವುದಕ್ಕೆ , ಅವರು ಆತ್ಮಹತ್ಯೆಗೆ ದೂಡಲ್ಪಡುವುದು ತಪ್ಪುತ್ತದೆ.
    ಇನ್ನು ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಕೊಳ್ಳುವವರಿಗೆ ಕೂಡ ಆಹಾರ ಭದ್ರತೆಯ ಅನ್ನಭಾಗ್ಯ ಅಥವಾ ಪಡಿತರ ವ್ಯವಸ್ಥೆಯಿಂದ ಬಹಳ ಪ್ರಯೋಜನವಾಗಿದೆ. 4,70,000 ಪಡಿತರ ಅಂಗಡಿಗಳಿಂದ 16 ಕೋಟಿ ಕುಟುಂಬಗಳಿಗೆ ಶೇ. 60 ಭಾಗಕ್ಕಿಂತ ಹೆಚ್ಚಿನ ಕುಟುಂಬಗಳಿಗೆ ಆಹಾರ ಧಾನ್ಯ ಕಡಿಮೆ ಬೆಲೆಗಳಿಗೆ ಸಿಗುವುದರಿಂದ ಮಾರುಕಟ್ಟೆಯ ಬೆಲೆಗಳನ್ನೂ ಹಿಡಿತದಲ್ಲಿರುತ್ತದೆ. ಅದು ಒಂದು ಮಿತಿ ಮೀರಿ ಹೆಚ್ಚಾಗಲು ಸಾಧ್ಯವಿಲ್ಲ.ಆದರೆ ಬೇಳೆ, ಕಾಳುಗಳು, ಅಡಿಗೆ ಎಣ್ಣೆ , ಮೆಣಸಿನಕಾಯಿ ಮೊದಲಾದ ಆಹಾರ ವಸ್ತುಗಳ ಬೆಲೆ ಎಷ್ಟೊಂದು ಏರುತ್ತದೆ ಗೊತ್ತಿದೆಯಲ್ಲಾ. . ಪಡಿತರದಲ್ಲಿ ಸರಬರಾಜು ಮಾಡುವ ಅಕ್ಕಿ, ಗೋಧಿ ಮಾತ್ರವಲ್ಲ ಅದಕ್ಕೆ ಪರ್ಯಾಯವಾದ ರಾಗಿ, ಜೋಳಗಳ ಬೆಲೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಏಕೆಂದರೆ ಈ ಧಾನ್ಯಗಳ ಬೆಲೆ ಬಹಳ ಏರಿದರೆ ಜನ ಅದರ ಬಳಕೆ ಕಡಿಮೆ ಮಾಡಿ ಕಡಿಮೆ ಬೆಲೆಯ ಪಡಿತರ ಅಕ್ಕಿ,ಗೋಧಿಗೆ ಬದಲಾಯಿಸುತ್ತಾರೆ.ಆ ಕಾರಣಕ್ಕಾಗಿಯೇ ಬಡಜನರ ಆಹಾರ ಪದ್ಧತಿಯನ್ನೇ ಬದಲಾಯಿಸಿ ಬಿಟ್ಟಿದೆ ಈ ಪಡಿತರ ಪದ್ಧತಿ.
    ಜೊತೆಗೆ ಈ ಧಾನ್ಯಗಳ ಕೋಟಿಗಟ್ಟಲೆ ಧಾನ್ಯಗಳ ದಾಸ್ತಾನು ಸರ್ಕಾರದ ಗೋದಾಮುಗಳಲ್ಲಿದ್ದರೆ ಕಾಳಸಂತೆಕೋರರಿಗೆ ಅದು ತಲೆಯ ಮೇಲೆ ನಿರಂತರ ತೂಗುತ್ತಿರುವ ಕತ್ತಿಯಿದ್ದಂತೆ. 1966 ಕ್ಕಿಂತ ಮೊದಲು ಪಡಿತರ ವ್ಯವಸ್ಥೆ ಜಾರಿಗೆ ಬರುವ ಮೊದಲು ಮಾಡುತ್ತಿದ್ದಂತೆ ಕಾಳಸಂತೆಕೋರರು ಬಾಲ ಬಿಚ್ಚಿ ಧಾನ್ಯಗಳನ್ನು ಬಚ್ಚಿಟ್ಟು ಬೆಲೆಗಳನ್ನು ವಿಪರೀತ ಏರಿಸಿದರೆ ಆಗ ಈ ಗೋದಾಮುಗಳ ಧಾನ್ಯವನ್ನು ಸ್ವಲ್ಪ ಹೆಚ್ಚು ಹೊರತೆಗೆದರೆ ಆಯಿತು ಬೆಲೆಗಳು ಸರ್ರನೆ ಇಳಿಯುತ್ತವೆ. ಹೀಗೆ ಆಹಾರ ಭದ್ರತೆಯ ಯೋಜನೆ ಕಾಳಸಂತೆ ಕೋರರನ್ನು , ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಇರುವ ಮುಖ್ಯ ಸಾಧನ.
    ಹೀಗೆ ಅನ್ನಭಾಗ್ಯವೂ ಸೇರಿ ಆಹಾರ ಭದ್ರತೆ ಎಂಬ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುವುದು ಇಡೀ ದೇಶದ ಸಾಮಾನ್ಯ ಜನರಿಗೆ, ರೈತರಿಗೆ ಬಹಳ ಪ್ರಯೋಜನಕಾರಿಯಾದ ಕಾರ್ಯಕ್ರಮ. ಮಾರುಕಟ್ಟೆಯ ಮಧ್ಯರ್ತಿಗಳು ರೈತರನ್ನು ಹಾಗೂ ಜನರ ಜುಟ್ಟನ್ನು ಹಿಡಿದು ಅಲುಗಾಡಿಸುತ್ತಿರುವ , ಜನಜೀವನದ ನಿಯಂತ್ರಣ ಮಾಡುತ್ತಿರುವ ಸಮಯದಲ್ಲಿ ಈ ಲಾಭಕೋರ ಮಧ್ಯವರ್ತಿ ವ್ಯಾಪಾರಗಾರರನ್ನು ಹಿಡಿತದಲ್ಲಿಡುತ್ತದೆ ಪಡಿತರ ವ್ಯವಸ್ಥೆ. ಮತ್ತೊಂದು ವಿಶೇಷವೆಂದರೆ ಈ ಯೋಜನೆಯಲ್ಲಿನ ಧಾನ್ಯಗಳ ದುರುಪಯೋಗದ ಸಮಯದಲ್ಲಿಯೂ , ಅದರ ಇತರ ಮುಖ್ಯ ಉದ್ದೇಶಗಳಿಗೆ ಲೋಪವಾಗುತ್ತಿರುವಾಗ ಕೂಡ ಬೆಲೆ ನಿಯಂತ್ರಣದ ಕಾರ್ಯಕ್ಕೆ ಖೋತಾ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಅಕ್ಕಿ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ . ಹಾಗೇ ಮಾರುಕಟ್ಟೆಯ ಅಕ್ಕಿ, ಗೋಧಿಗಳ ಬೆಲೆಯನ್ನು ಕೆಳಗೆ ಎಳೆಯುತ್ತಿರುತ್ತದೆ.
    ಆದ್ದರಿಂದ ಆಹಾರ ಭದ್ರತೆಯ ಯೋಜನೆಯನ್ನು ಕೇವಲ ಅಕ್ಕಿ , ಗೋಧಿ ಕೆಲವೊಮ್ಮೆ ಸಕ್ಕರೆಗೆ ಸೀಮಿತಗೊಳಿಸುವ ಬದಲಾಗಿ ಎಲ್ಲ ರೀತಿಯ ಆಹಾರ ವಸ್ತುಗಳಿಗೆ ವಿಸ್ತರಿಸುವುದು ಅಗತ್ಯವಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಬಳಕೆದಾರರು ಕೊಳ್ಳುವ ಬೆಲೆಗಳ ೊಂದು ಸಣ್ಣ ಭಾಗ ಮಾತ್ರ ರೈತರಿಗೆ ಸಿಕ್ಕುತ್ತಿದೆ. ರೈತರು ಮಾರುಕಟ್ಟೆಗೆ ಬೆಳಗಳನ್ನು ತರುವಾಗ ಬೆಲೆಗಳನ್ನು ವಿಪರೀತ ಕುಗ್ಗಿಸಿ ರೈತರನ್ನು ನಷ್ಟಕ್ಕೆ ದೂಡುತ್ತಾರೆ. ಅವರಿಂದ ಕೊಂಡು ದಾಸ್ತಾನು ಮಾಡಿಕೊಂಡ ಮೇಲೆ ಅದರ ಬೆಲೆಯನ್ನು ವಿಪರೀತ ಹೆಚ್ಚಿಸಿ ಬಳಕೆದಾರರಿಗೂ ನಷ್ಟವುಂಟು ಮಾಡುತ್ತಾರೆ. ಆದ್ದರಿಂದ ಈ ಕಾಳಸಂತೆಕೊರ ಸಗಟು ವ್ಯಾಪಾರಿಗಳನ್ನು ಕಿತ್ತೊಗೆಯಲು ಆಹಾರ ಭದ್ರತೆಯನ್ನು ಕಾಳುಗಳು, ಬೇಳೆ, ಎಣ್ಣೆ , ಮೆಣಸಿನಕಾಯಿ ಕೊತ್ತಂಬರಿ ಬೀಜ ಮೊದಲ್ಗೊಂಡು ಎಲ್ಲದಕ್ಕೂ ವಿಸ್ತರಿಸಬೇಕಾಗಿದೆ. ಇದರಿಂದ ಅವುಗಳನ್ನು ಬೆಳೆಯುವ ರೈತರಿಗೂ ಮತ್ತು ಬಳಕೆದಾರರಿಗೂ ಪ್ರಯೋಜನವಾಗುತ್ತದೆ.
    ಆಹಾರ ವಸ್ತುಗಳು ಮಾತ್ರವಲ್ಲದೆ ಜೀವನಕ್ಕೆ ಅತ್ಯಗತ್ಯವಾದ ಇತರ ವಸ್ತುಗಳು –ಔಷಧಿಗಳು ಇದಕ್ಕೆ ಮುಖ್ಯ ಉದಾಹರಣೆ.. ಈ ಔಷಧಿಗಳ ಉತ್ಪಾದನಾ ವೆಚ್ಚಕ್ಕಿಂತ ಹತ್ತು ಪಟ್ಟು, ಕೆಲವು ಔಷಧಿಗಳನ್ನು ನೂರು ಪಟ್ಟು ಹೆಚ್ಚು ಬೆಲೆಗೆ ಮಾರಲಾಗುತ್ತದೆ. ಅದರಿಂದಾಗಿ ಎಷ್ಟೋ ಕುಟುಂಬಗಳು ದಿವಾಳಿಯಾಗುವ ಪರಿಸ್ಥಿತಿ ಅಥವಾ ನಿಷ್ಕರುಣೆಯಿಂದ ತಂದೆ,ತಾಯಿ ಮೊದಲಾದ ಹತ್ತಿರದ ವ್ಯಕ್ತಿಗಳನ್ನು ರೋಗಗಳಿಂದ ನರಳಿ ಸಾಯಲು ಬಿಡುವುದು ಉಳಿದಿರುವ ಮಾರ್ಗವಾಗಿದೆ. ಇಂತಹ ಸಂದರ್ಭದಲ್ಲಿ ಉತ್ಪಾದನಾ ವೆಚ್ಚಕ್ಕೆ ಸಮೀಪವಾದ ಬೆಲೆಯಲ್ಲಿ ಔಷದಿಗಳು ಸಿಗುವುದು ಕೇವಲ ಬಡ ಜನರಿಗೆ ಮಾತ್ರವಲ್ಲ ಎಲ್ಲರಿಗೂ ಅಗತ್ಯವಾಗಿದೆ. ಹಾಗೆಯೇ ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಟ್ಟೆ ಮೊದಲಾದ ವಸ್ತುಗಳನ್ನು ಕೂಡ ಕಡಿಮೆ ಬೆಲೆಗೆ ಒದಗಿಸುವುದೂ ಅಗತ್ಯ.
    ಆಹಾರ ಭದ್ರತೆ ಕೇವಲ ಬಡವರಿಗಲ್ಲದೆ , ಎಲ್ಲ ಜನ ಸಾಮಾನ್ಯರಿಗೂ ಬೇಕು. ಎಲ್ಲ ಜನರಿಗೂ ಕೂಡಾ ಈ ಲಾಭಕೋರ ಮಧ್ಯರ್ತಿಗಳ ಬೆಲೆ ಏರುಪೇರು ಮಾಡುವ ತಂತ್ರಗಳಿಂದ ಬಿಡುಗಡೆಯಾಗಬೇಕು. ಇಲ್ಲದಿದ್ದರೆ ಕೆಳ ಮದ್ಯಮ ವರ್ಗದವರು , ಮಧ್ಯಮ ವರ್ಗದವರು ಗಳಿಸಿದ ವೇತನವೆಲ್ಲಾ ಬೇಲೆ ಏರಿಕೆಗೆ ತೆರಬೇಕಾಗುತ್ತದೆ. ಎಲ್ಲ ಜನರಿಗೂ ಆಹಾರ., ಔಷದಿಗಳು ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ದೊರಕುವುದು , ಬಡ ಜನರಿಗೆ ಮತ್ತಷ್ಟು ಕಡಿಮೆ ಬೆಲೆಗೆ ದೊರಕುವಂತಾಗುವುದು ಕೇವಲ ಎರಡು ಅಂಶಗಳಲ್ಲಿ ಅಂಶಿಕವಾಗಿ ನಿಯಂತ್ರಿಸುವುದಕ್ಕೆ ಬದಲಾಗಿ ಮಾರುಕಟ್ಟೆಯ ಲಾಭಕೋರ ಶಕ್ತಿಗಳನ್ನು ಒಟ್ಟಾರೆ ಸಮಾಜದ ನಿಯಂತ್ರಣಕ್ಕೆ ಒಳಪಡಿಸಿದಂತಾಗುತ್ತದೆ.
    ಇದಕ್ಕೆ ಸಾರ್ವತ್ರಿಕ ಪಡಿತರ ವ್ಯವಸ್ಥೆ ಎನ್ನುತ್ತಾರೆ.. ಇಂತಹ ಪಡಿತರ ನಮಗೇನೂ ಬೇಡ ಎನ್ನುವವರು ಬಳಸದೆ ಬಿಡಲಿ ತೊಂದರೆಯೇನಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿದರೆ ಆಗ ಪಡಿತರ ವ್ಯವಸ್ಥೆಯ ಕಡೆಗೆ ಅವರು ಧಾವಿಸಬಹುದು. ಈ ಭಯವೇ ಮಾರುಕಟ್ಟೆಯ ಲಾಭಕೋರ ಶಕ್ತಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಆಹಾರ ಭದ್ರತೆ ಎಂಬುದು ಕೆಲ ಬಡವರಿಗೆ ಒಂದಿಷ್ಟು ಅಕ್ಕಿ ನೀಡಿ ಅವರನ್ನು ಸೋಮಾರಿಯನ್ನಾಗಿ ಮಾಡುವುದಲ್ಲ. ಇಡೀ ಸಮಾಜದ ಎಲ್ಲರನ್ನೂ ಆವರಿಸುವ ಉಪಕಾರಿ. ಹೀಗೆ ಎಲ್ಲರಿಗೂ ಪಡಿತರದ ಮೂಲಕ ಕಡಿಮೆ ಬೆಲೆಗೆ ಎಲ್ಲ ಅಗತ್ಯವಸ್ತುಗಳನ್ನೂ ನೀಡುವ ಯೋಜನೆ ಬಂದರೆ ಸಾಹಿತಿ ಭೈರಪ್ಪನವರ ಸಿಟ್ಟು ಒಮ್ಮೆಗೇ ನೆತ್ತಿಗೇರಿಬಿಡಬಹುದು.
    ಇಂತಹ ವ್ಯವಸ್ಥೆ ಕೇವಲ ಕಲ್ಪನೆಯಲ್ಲಿ ಮಾತ್ರ ಿರುವುದೇನಲ್ಲ . ಕೇರಳದ ಎಡರಂಗ ಸರ್ಕಾರಗಳು ಇದನ್ನು ಒಂದು ಮಾದರಿ ವ್ಯವಸ್ಥೆಯಾಗಿ ರೂಪಿಸಿವೆ . ಓಣಂ ಹಬ್ಬದ ಸಮಯದಲ್ಲಿ ಅಲ್ಲಿ ತರಕಾರಿ , ಮತ್ತು ಪೋಕೋಲಂನ ಹೂಗಳ ಬೆಲೆಯೂ ಏರಿಬಿಡುವುದರಿಂದ ಅವುಗಳನ್ನೂ ಕೂಡ ಪಡಿತರದ ಭಾಗವಾಗಿ ದೊರಕಿಸುವ , ಾ ಮೂಲಕ ಧಿಡೀರ್ ಬೆಲೆ ಏರಿಕೆಗಳಿಂದ ಜನರನ್ನು ರಕ್ಷಿಸುವ ವ್ಯವಸ್ಥೆ ಕೂಡ ರೂಪಿಸಲಾಗಿತ್ತು.ಬಡವರೂ ಕೂಡ ಓಣಂ ಆಚರಿಸಲು ಸಾಧ್ಯವಾಗಿತ್ತು.
    ಇಂದು ದೊಡ್ಡ ದೊಡ್ಡ ದೇಶೀ ಮತ್ತು ವಿದೇಶಿ ಕಾರ್ಪೋರೇಟ್ ಕಂಪನಿಗಳು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುತ್ತಿವೆ. ಅವು ದೇಶದ ಸರ್ಕಾರಗಳನ್ನೇ ಧಿಕ್ಕರಿಸುವಷ್ಟು ಶಕ್ತವಾಗಿವೆ. ಇನ್ನು ರಾಜ್ಯ ಸರ್ಕಾರಗಳನ್ನು ಕಡೆಗಣ್ಣಿಂದ ಕೂಡ ನೋಡದ ಧಿಮಾಕು ಅವುಗಳದು. ಅಂತಹ ಸಂದರ್ಭದಲ್ಲಿ ಸರಕಾರಗಳು ಅವುಗಳನ್ನು ನಿಯಂತ್ರಣದಲ್ಲಿಡಲು ಬಡವರನ್ನು ಮಾತ್ರವೇ ಅಲ್ಲದೆ ಎಲ್ಲ ಜನರನ್ನೂ ಒಳಗೊಳ್ಳುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಒಳ್ಳೆಯ ಸಾಧನ.
    (ಆಹಾರ ಭದ್ರತೆಯೆಂದರೇನು?ಈಗಿನ ಕೇಂದ್ರ ಸರ್ಕಾರದ ನೀತಿಗಳಲ್ಲಿ ಅದರ ಪಾತ್ರವೇನು? ಏಕೆ? ಭೈರಪ್ಪನವರು ಈ ಸಮಯದಲ್ಲಿ ಈ ಪ್ರಶ್ನೆಗಲನ್ನೆತಲು ಕಾರಣವೇನು ಎಂಬುದು ಮುಂದಿನ ಭಾಗದಲ್ಲಿ.)

  9. mahesh kalal

    ಪಾಶ್ಚಿಮಾತ್ಯ ಮತ್ತುಐರೋಪ್ಯ ದೇಶಗಳಲ್ಲಿನ ಸಾಮಾಜಿಕ-ಆರ್ಥಿಕ ಸ್ಥಿತಿಗೂ, ಭಾರತದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗೂ ಅಜಗಜಾಂತರ ವ್ಯತ್ಯಾಸವಿದೆ.
    ಭಾರತದಲ್ಲಿರುವ ಶೇಕಡಾ 74ರಷ್ಟು ಕುಟುಂಬಗಳ ತಿಂಗಳ ಆದಾಯ 5000 ರೂಪಾಯಿಗಳು ಮಾತ್ರ. ಇದು ಒಂದು ಕುಟುಂಬದ ಒಟ್ಟಾರೆ ತಿಂಗಳ ಆದಾಯ! ಆ ಪೈಕಿ ಶೇಕಡಾ 70ರಷ್ಟು ಕುಟುಂಬಗಳು ಇಂದು ಕೂಡ ಒಂದು ಹೊತ್ತಿನ ಕೂಳಿಗಾಗಿ ಅವಿರತ ಹೋರಾಟ ನಡೆಸುತ್ತಲೇ ಇವೆ.
    nijavada vishleshane sir

  10. ಅಕ್ಕಿಮಂಗಲ ಮಂಜುನಾಥ

    9-7-2015 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬೈರಪ್ಪನವರ ಲೇಖನವನ್ನು ಓದಿದೆ . ಅಲ್ಲಿ ಒಂದು ಕಡೆ ಹೇರ್ ಕಟಿಂಗ್ ಶಾಪಿನ ಯಜಮಾನನ ಕೈಕೆಳಗೆ ದುಡಿಯುವ ಹುಡುಗರ ಬಗ್ಗೆ ಪ್ರಸ್ತಾಪಿಸುತ್ತಾ ‘ಅವರು ಭಾಗ್ಯದ ಅಕ್ಕಿ ದೊರೆತ ಕೂಡಲೇ ತಮ್ಮ ಕಾಯಕ ಮರೆತು ಸೋಮಾರಿಗಳಾಗಿ
    ಬಿಟ್ಟಿದ್ದಾರೆ ‘ಎಂಬ ಧೋರಣೆಯಲ್ಲಿ ಮಾತನಾಡಿದ್ದಾರೆ. ಅಂದರೆ ಈ ಮಾತಿನ ಅರ್ಥ,ನಾಲ್ಕು ಕೆ.ಜಿ.ಅಕ್ಕಿಯೇ ತಿಂದು ಮಿಕ್ಕಿ ಕಾಳಸಂತೆಯಲ್ಲಿ ಮಾರಿ ಅದರಿಂದ ಬಂದ ಸಂಪತ್ತಿನಿಂದ ತಮ್ಮೆಲ್ಲಾ ಅಗತ್ಯತೆಗಳನ್ನು ಪೂರೈಸಿಕೊಂಡು ಕಾಲಮೇಲೆ ಕಾಲು ಹಾಕಿಕೊಂಡು ಯಾಯಪ್ಪನಿಗೂ ಕ್ಯಾರೇ ಎನ್ನದೆ ರಾಜಾರಷ್ಟಾಗಿ ಬದುಕುತ್ತ ಭೂಮಿಗೆ ಭಾರವಾಗಿಬಿಟ್ಟಿದ್ದಾರೆ ಎಂಬಂತಿದೆ.
    ಕೆಲವು ಮನುಷ್ಯರು ಹೀಗೇನೆ.ತಾವು ಯಾವುದೋ ರಂಗದಲ್ಲಿ ಸಾಧನೆ ಮಾಡಿ ಹೆಸರುಗಳಿಸಿದ್ದೇ ತಡ ಪ್ರಪಂಚದೆಲ್ಲ ಜನತೆ ತಮ್ಮ ಮಾತಿಗೆ ಮನ್ನಣೆನೀಡಿ ಅದರಂತೆ ಬದುಕಬೇಕೆಂದು ಆಶಿಸುತ್ತಾರೆ.ಅಂಥವರ ಸಾಲಿನಲ್ಲಿ ನಮ್ಮ ಕನ್ನಡದ ಜ್ಞಾನಪೀಠ ಪಡೆದ ಲೇಖಕರಾದ ಅನಂತಮೂರ್ತಿ ಮತ್ತು ಕಾರ್ನಾಡರು ಸಿದ್ಧಹಸ್ತರು.ಮುಂದಿನ ಜ್ಞಾನಪೀಠವನ್ನು ಕಿತ್ತುಕೊಂಡುಬಿಡುವ ತವಕದಲ್ಲಿರುವ ನಮ್ಮ ಬೈರಪ್ಪನವರು ಒಂದು ಪಕ್ಷವನ್ನು ಓಲೈಕೆ ಮಾಡಿಕೊಂಡು , ಸಮಯ ಸಾದಿಸುವ ಪ್ರಯತ್ನ ಮಾಡುತ್ತಿದ್ದಾರೆಂಬುದು ಬೈರಪ್ಪನವರ ವಿರೋಧಿಗಳ ಮಾತು. ಏನೇ ಆಗಲಿ ಅವರು ಅಂತಹ ಪ್ರಶಸ್ತಿಗೆ ಯೋಗ್ಯವರಾದವರೆಂಬುದು ಅವರ ಸಾಹಿತ್ಯವನ್ನು ಓದಿರುವ ಎಲ್ಲರಿಗೂ ಸರಿ ಎನ್ನಿಸುವ ಮಾತೆ.
    ಆದರೆ ನಮ್ಮ ಬೈರಪ್ಪನವರು ಸಣ್ಣ ಗುಳ್ಳೆಯನ್ನು ಗೀರಿ ಗೀರಿ ದೊಡ್ಡ ಗಾಯವನ್ನೇ ಮಾಡುವಂತೆ ಅವರಿಗೆ ಸಂಬಂಧಿಸಿರದ ಅಕ್ಕಿ ವಿಚಾರದಲ್ಲಿ ತಲೆಹಾಕಿ ಸುಮ್ಮನೆ ದೊಡ್ಡದು ಮಾಡುತ್ತಾ ಹೋಗುತ್ತಿದ್ದಾರೆ. ಯೋಚಿಸಿದರೆ , ಇಲ್ಲಿ ನಮ್ಮ ಅರಿವಿಗೆ ಬರುವ ಬಹು ಮುಖ್ಯ ಅಂಶವೆಂದರೆ ಸೋಮಾರಿತನಕ್ಕಿಂತಲೂ ಮುಖ್ಯವಾಗಿ ಕೂಲಿ ಮಾಡುವ (ದುಡಿಯುವ ವರ್ಗ) ಆ ಕೆಲಸದಿಂದ ಹಿಂದೆ ಸರಿದನೆಂದರೆ , ಅವರ ಹೊಟ್ಟೆಗಿಂತಲೂ ಮುಖ್ಯವಾಗಿ ದುಡಿಸಿಕೊಳ್ಳುವವರ ಹೊಟ್ಟೆಗಳು ಒಣಗಿಬಿಡುತ್ತವೆಂಬ ಆತಂಕ ಮತ್ತು ಅಸೂಯೆತನ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.ಯಜಮಾನನಾದವನು ಯಾವತ್ತಿಗೂ ಸಿಂಹಾಸನಾದೀಶನಾಗಿಯೇ, ಸೇವಕನಾದವನು ಆಳಾಗಿಯೇ ದುಡಿಯುತ್ತ
    ನರಳುತ್ತ ಕೊನೆಗಾಣಬೇಕೆಂಬ ಮನಸ್ಥಿತಿಯೇ ಇರುವಂತಿದೆ.
    ಹಿಂದೆ ಕವಿಗಳು ರಾಜನನ್ನು ಆಶ್ರಯಿಸಿ ಅವರೆಲ್ಲ ತಪ್ಪುಗಳನ್ನು ಮುಚ್ಚಿಟ್ಟು, ಕೊಂಡಾಡಿ ಹೊಗಳಿ ಅವರಿಂದ ಬಿರುದು ಬಾವಲಿ ಸಂಪತ್ತುಗಳ ಪಡೆದು ತುಂಬಾ ಸುಬಿಕ್ಷವಾಗಿ
    ಬದಕುತ್ತಿದ್ದರಂತೆ.ಪ್ರಜಾಪ್ರಭುತ್ವದ ಕಾಲಕ್ಕೆ ಉದಯಿಸಿದ ಲೇಖಕರು ರಾಜಕಾರಣದಿಂದ ದೂರವುಳಿದು ತಮ್ಮದೇ ಆದ ಘನತೆ ಗೌರವದೊಂದಿಗೆ ಬರೆದು ಬದುಕಿ ಜನಮಾನಸದಲ್ಲಿ ನಿಂತರು ಮತ್ತು ಅನೇಕ ಸುಧಾರಣೆಗಳಿಗೂ ಕಾರಣರಾದರು. ಆದರೆ ಬದಲಾದ ಕಾಲಮಾನದಲ್ಲಿ ಬುದ್ಧಿ ಜೀವಿಗಳೆನಿಸಿಕೊಂಡವರು ಮತ್ತು ತಾವೇ ಪ್ರಜ್ಞಾಪೂರ್ವಕ ಜ್ಞಾನವುಳ್ಳವರೆಂದು ವರ್ತಿಸುತ್ತ ಆಳುವವರ ಪುಂಗಿಗಳಾಗಿರುವುದು ಕಂಡರೆ ಇವರು ಎಂತಹ ಸಮಯಸಾಧಕತನಕ್ಕೂ ಸಿದ್ಧ ಎಂಬಂತೆ ವರ್ತಿಸುತ್ತಿರುವುದು ಅರಿವಿಗೆ ಬಂದುಬಿಡುತ್ತದೆ. ಮತ್ತು ರಾಜಕಾರಣಿಗಳೇ ತಮ್ಮ ಯೋಗ್ಯತೆಗಳನ್ನು ಸಮಾಜದ ಮುಂದೆ ಬಿಂಬಿಸಿಕೊಳ್ಳಲು ಬಳಸಿಕೊಳ್ಳುತ್ತಿರುವರೆಂಬ ಅನುಮಾನವೂ ಮೂಡುತ್ತದೆ. ಈಗ ಇಲ್ಲಿ ಬೈರಪ್ಪನವರೂ ಸಹ ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತ ಅವರ ಬಾಲಬಡಕರಾಗಿರುವರೆಂದು ಅವರು ಆಗಾಗ ನುಡಿಯುತ್ತಿರುವ ನುಡಿಗಳಿಂದಲೇ ಗೊತ್ತಾಗುತ್ತದೆ.
    ಕೆಲವು ನಾಯಕರು ಜನಕ್ಕೆ ಅನುಕೂಲವಾಲಿ ಎಂದೋ ಅಥವ ತಮ್ಮ ಸ್ವಾರ್ಥಕ್ಕಾಗಿಯೋ ಅಥವ ಒತ್ತಡಗಳಿಗೆ ಮಣಿದೋ ಜಾರಿಗೆ ತಂದ ಕಡಿಮೆ ಬೆಲೆಯ ಅಕ್ಕಿಯಂತಹ ಯೋಜನೆಗಳು ನಾಲ್ಕು ಜನಕ್ಕೆ ಅನುಕೂಲವಾಗುವುದಾದರೆ ಅವುಗಳ ಸಾದಕ ಬಾದಕಗಳ ಬಗ್ಗೆ ಚರ್ಚೆ ಮಾಡಬೇಕೇ ವಿನಃ ಅವನ್ನು ತುಳಿದು ಬಿಡುವ ಕುಟಿಲತನವನ್ನು ಎಂದಿಗೂ ಯಾರೊಬ್ಬರೂ ಮಾಡಬಾರದು.
    ಅನ್ನ ಬಾಗ್ಯ ಎಂಬ ಹೆಸರಿನ ಬಿಕ್ಷಾನ್ನವನ್ನು ನೀಡತೊಡಗಿದ್ದೇ ಬಡವರಿಗೆ ವರವಾಗುವ ಬದಲು ಶಾಪವಾದಂತಿದೆ. ಏಕೆಂದರೆ , ತಾವು ಹೇಳಿದ ಕೆಲಸ ಮಾಡಿಕೊಂಡು ಕಾಲಿನ ಕೆರದಂತಿದ್ದವರು ಏಕಾಏಕಿ ಕಾಲಿಗೆ ಚುಚ್ಚುವ ಮುಳ್ಳಿನಂತಾಗಿ ಬಿಟ್ಟರೆ ಸದಾ ದುಡಿಸಿಕೊಂಡೇ ಬದುಕುವ ಅಧಿಕಾರಿವರ್ಗಕ್ಕೆ ಕಷ್ಟವಾಗಿಬಿಡಬಹುದೆಂಬ ಪರಿಕಲ್ಪನೆಯಿಂದ ಅವರ ದೃಷ್ಟಿ ತಾಗಿ ,ಇಂದು ನಿರ್ಗತಿಕನ ಹೊಟ್ಟೆ ತಳಮಳಿಸತೊಡಗಿರುವುದು ಒಂದು ರೀತಿಯ ಶಾಪವೇ ಸರಿ.ಬಡವನಾದವನಿಗೆ ಇಂದು ನಡೆಯುತ್ತಿರುವ ನಾನಾ ರೀತಿಯ ಚರ್ಚೆಗಳು ಏನೆಂಬುದೇ ಅರ್ಥವಾಗದು.ಇವರ ವಿಚಾರಗಳನ್ನು ಕೇಳುವ ಸಮಯವಾಗಲಿ ಅರ್ಥ ಮಾಡಿಕೊಳ್ಳುವ ಬುದ್ಧಿಶಕ್ತಿಯಾಗಲಿ ಅಥವಾ ಇವರನ್ನು ತಲುಪುವ ಮಾದ್ಯಮಗಳಾಗಲಿ ಇಲ್ಲದಿರುವುದು ದುರದೃಷ್ಟಕರ.
    ಇಂಥ ಬುದ್ಧಿ ಜೀವಿಗಳಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ.ಇವತ್ತು ರೈತನಾದವನು ಲೋಡುಗಟ್ಟಲೆ ತರಕಾರಿ ಬೆಳೆದು ಬೆಲೆ ಸಿಕ್ಕದೆ ಬೀದಿಗಳಲ್ಲಿ ಚೆಲ್ಲಿ ಕುದಿದು ಸಾಲ ತೀರಿಸಲು ಸಾದ್ಯವಾಗದೆ ಸಾವಿಗೆ ಮೊರೆ ಹೋಗುತ್ತಿದ್ದಾನೆ.ವರ್ಷಾನುಗಟ್ಟಲೆ ಬೆಳೆದ ಕಬ್ಬನ್ನು ಕಾರ್ಖಾನೆಗೊಯ್ದು ಒಡೆಯರಿಗೊಪ್ಪಿಸಿ ಬರಿಗೈಲಿ ವಾಪಸ್ಸು ಬಂದು ಇರುವ ಬೆಳೆಗೆ ಬೆಂಕಿ ಹಚ್ಚಿ ಬದುಕಿಗೆ ವಿದಾಯ ಹೇಳುತ್ತಿದ್ದಾನೆ.ಟನ್ನುಗಟ್ಟಲೆ ದಾನ್ಯ ಬೆಳೆದು ಖರ್ಚನ್ನೂ ವಸೂಲಿ ಮಾಡಿಕೊಳ್ಳಲಾಗದೆ ಆಸ್ತಿಯನ್ನೇ ಮಾರಿ ನಿರ್ಗತಿಕನಾಗುತ್ತಿರುವಂತಹ ಸಾವಿರಾರು ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಾಣದೆ ಕೇವಲ ಒಂದು ರೂ ಅಕ್ಕಿಯದೇ ಒಂದು ಘನಘೋರ ಸಮಸ್ಯೆಯಾಗಿ ನಿಮಗೆ ಕಂಡುಬಿಟ್ಟಿತೇ? ಕುಟಿಲ ಕಣ್ಣಿನ ಕಿಸುರಿಗೆ ಸಿಕ್ಕ ಬಡವನ ಹೊಟ್ಟೆ ತಣ್ಣಗಿರಲು ಸಾದ್ಯವಾದೀತೇ ?
    ಸಾಕ್ಷಾತ್ ಬಡವರ ಒಡಲಾಳದ ದನಿಯಾಗಿ ಮಿಡಿದ ಶಿವಪ್ಪ (ಮತದಾನ) ನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರ ಮನಸ್ಸಿನಿಂದ ಇಂಥ ಮಾತುಗಳು ಬರುತ್ತಿವೆಯೋ ಅಥವಾ ಇವರ ಬಾಯಿಗೆ ಬೇರೆಯವರು ಚಿಪ್ಪನ್ನು ಜೋಡಿಸಿ ನುಡಿಸುತ್ತಿದ್ದಾರೋ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading