ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನುಭವಿ ಸಾಹಸಿ ಟ್ರಕ್ಕರ್ಸ್ ಜೊತೆ ಒಂದು ದಿನ…

ಚಂದ್ರ ಸೌಗಂಧಿಕ

ಸೋಮವಾರ ಮುಂಜಾನೆ ಪುತ್ತೂರಿನಿಂದ 4:30 ಗೆ ಹೊರಟು ಸುಮಾರು 120 ಕಿಲೋಮೀಟರ್ ಕ್ರಮಿಸಿ ಬೆಳ್ತಂಗಡಿ ತಾಲೂಕಿನ ‘ಸಂಸೆ’ ಎನ್ನುವ ಒಂದು ಪುಟ್ಟ ಹಳ್ಳಿಗೆ ಹೋಗಬೇಕಾಗಿತ್ತು.. ಶರ್ಮರು ಕಾರು ಚಲಾಯಿಸುತ್ತಿದ್ದರು. ಹಿಂದಿನ ರಾತ್ರಿ ಗಾಂಧಿ ಜಯಂತಿಯ ದಿನ ಡಾ ಶ್ರೀಪಾದ ಭಟ್ಟರು ಓದಿದ ಮಾಕ್ಸಿಂ ಗಾರ್ಕಿಯ ಕಥೆಯೇ ನೆನಪಾಗುತ್ತಿತ್ತು. ಮನುಷ್ಯನ ದುರಾಸೆ ಆಕಾಂಕ್ಷೆಗಳು ಎಲ್ಲವೂ ಒಂದು ದಿನ ಆರು ಮೂರರ ಹೊಂಡದಲ್ಲಿ ಪರಿಸಮಾಪ್ತಿ ಗೊಳ್ಳುವುದು. ರಾತ್ರಿಯ ಕಥಾ ವಾಚನದ ನೆನಪುಗಳ ಮೆಲುಕು ಹಾಕುತ್ತಾ ಹಾದಿ ಸವೆದದ್ದೇ ತಿಳಿಯಲಿಲ್ಲ.

ಬೆಳಕು ಹರಿಯಲಾರಂಭಿಸಿ ದಾಗ ನಾವು ಎಸ್. ಕೆ.ಬಾರ್ಡರ್ ತಲುಪಿದ್ದೆವು. ಅರಣ್ಯ ಇಲಾಖೆಯ ತಪಾಸಣಾ ಗೇಟಿನಲ್ಲಿ ಕಾರು ನಿಂತಾಗ ಅರಣ್ಯ ರಕ್ಷಕರೊಬ್ಬರು ಗಾಡಿಯ ನಂಬರ್, ಮತ್ತು ಎಷ್ಟು ಜನ, ಎತ್ತ ಪಯಣ, ಎಂದು ವಿಚಾರಿಸಿ ಗುರುತಿನ ಚೀಟಿ ಯೊಂದನ್ನು ನಮಗೆ ನೀಡಿದರು. ಸೂರ್ಯನ ಕಿರಣ ಹೊರಬರದಂತೆ ಆಗಾಗ ಕಣ್ಣು ಮುಚ್ಚಾಲೆಯಾಡುತ್ತಿದ್ದ ಮೋಡದ ದೊಡ್ಡದೊಡ್ಡ ರಾಶಿಗಳು ಬಾನಿನಲ್ಲಿ ಹರಡಿಕೊಂಡಿದ್ದವು. ಆದರೂ ಪರ್ವತಗಳಿಗೆ ಅಲ್ಲಲ್ಲಿ ಎಳೆಬಿಸಿಲು ಬಿದ್ದು ಬೆಳ್ಳಿಯ ಬಣ್ಣವನ್ನು ಕುಂಚದಿಂದದಿಂದ ಅದ್ದಿದಂತೆ ಹೊಳೆಯುತ್ತಿತ್ತು. ರಸ್ತೆಯ ಇಕ್ಕೆಲದಲ್ಲಿ ಕುರಿಂಜ ಹೂವಿನ ಗಿಡಗಳು ಸೊಂಪಾಗಿ ಬೆಳೆದು ನಿಂತಿದ್ದವು.ಪರ್ವತಗಳ ಸಾಲುಗಳಲ್ಲಿ ದೂರ ಕಣ್ಣುಹಾಯಿಸಿದಷ್ಟು ದಟ್ಟ ಹಸಿರು ಅಲ್ಲಲ್ಲಿ ಎಲೆ ಉದುರಿಸಿದ ತಲೆ ಕಳೆದುಕೊಂಡ ನೀಲಗಿರಿಯ ಮರಗಳು ಇದು ಕುದುರೆಮುಖ ಎನ್ನುವುದನ್ನು ಹೇಳುತ್ತಿತ್ತು.

ಕಬ್ಬಿಣದ ಅದಿರನ್ನು ಒಡಲಾಳದಿಂದ ಬಗೆದು ನೀರಾಗಿಸಿ ದೂರದ ಮಂಗಳೂರಿನ ಬಂದರಿಗೆ ಕಳುಹಿಸಿ ಕೊಡುತ್ತಿದ್ದ ಕುದುರೆಮುಖ ಪರ್ವತದ ಕಬ್ಬಿಣದ ಕಾರ್ಖಾನೆ ಸ್ಥಗಿತ ಗೊಂಡು ಬಹಳ ವರ್ಷಗಳು ಕಳೆದವು ಎಂದು ಅಲ್ಲಿರುವ ಪಾಳುಬಿದ್ದ ಕಟ್ಟಡಗಳು ಹೇಳುತ್ತಿದ್ದವು. ರಾತ್ರಿ ಮನೆ ಸೇರದ ಕಾಲವು ರಾಸುಗಳು ಪರ್ವತದ ಹಾದಿಗಳಲ್ಲಿ ಮಲಗಿದ್ದವು ಮೈಕೊಡವಿ ಎದ್ದು ನಿಂತು ಮೇವನ್ನ ಹುಡುಕಿ ಕೆಲವು ಹೊರಟಿದ್ದವು. ನಿರ್ಜನ ರಸ್ತೆಯಲ್ಲಿ ಅವುಗಳನ್ನು ನೋಡುವಾಗ ಪುಣ್ಯಕೋಟಿ ಮತ್ತು ವ್ಯಾಘ್ರನ ನೆನಪಾಯಿತು. ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಪ್ರಾಣಿಗಳ ಚಿತ್ರಗಳಿರುವ ಫಲಕಗಳು ಇದು ಆನೆ ದಾಟುವ ಜಾಗ, ಇಲ್ಲಿ ಸಿಂಗಳಿಕ ಜಿಂಕೆ ಇದೆ, ಎಂದು ನಾವು (ಚಾಲಕರು) ಅರ್ಥೈಸಿಕೊಳ್ಳಬೇಕು.

ರಸ್ತೆಯಲ್ಲಿ ಮಲಗಿದ ಪ್ರಾಣಿಗಳಿಗೂ ಫಲಕ ಗಳಲ್ಲಿರುವ ಪ್ರಾಣಿಗಳಿಗೂ ಸಂಬಂಧ ಇಲ್ಲ. ನಿಧಾನವಾಗಿ ಚಲಿಸುತ್ತಿದ್ದ ನಮಗೆ ಅಲ್ಲಲ್ಲಿ ಜೀರುಂಡೆಗಳ ಸದ್ದು ತೊರೆಯ ನೀರು ಜೋರಾಗಿ ಬೀಳುವ ಸದ್ದು ಕೇಳಿಬರುತ್ತಿತ್ತು. ಅಷ್ಟರಲ್ಲಿ ಮಂಗಳೂರಿನಿಂದ ಬಂದು ಚಾರಣದಲ್ಲಿ ಜೊತೆ ಯಾಗಲಿರುವ ‘ಓಂ ಟ್ರಕ್ಸ್ ‘ ಗೆಳೆಯರು ನಮ್ಮನ್ನು ಸೇರಿಕೊಂಡರು. ಕುದುರೆಮುಖದಿಂದ ಸಂಸೆಗೆ ಹೋಗುವಾಗ ದುರಸ್ತಿ ಕಾಣದ ಕಚ್ಚಾ ರಸ್ತೆಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಇಲ್ಲಿ ನನಗೆ ಕೆಲವು ಪದಗಳು ನೆನಪಾದವು (ಸಂಸೆ, ಸಂಸದ, ಸದನ ಸಂಸತ್ತು,ಸಂಪತ್ತು ಸವಲತ್ತು ).

ಇತ್ತೀಚೆಗೆ ಅತಿ ಮಳೆಯಿಂದ ಈ ರಸ್ತೆಗಳು ಹಳ್ಳ ಗಳಾಗಿವೆ. ದೊಡ್ಡ ದೊಡ್ಡ ಬಾವಿಗಳು ಗಳು ರಸ್ತೆಗಳಲ್ಲೇ ಇದೆ. ಅದೆಲ್ಲವನ್ನು ತಪ್ಪಿಸಿಕೊಂಡು ಚಾಣಾಕ್ಷತೆಯಿಂದ ಡ್ರೈವ್ ಮಾಡಬೇಕು. ಮಹಾನಗರ ಗಳಿಂದ’ಜಂಗಲ್’ ನೋಡಲು ಬರುವವರು ಇದೇ ದಾರಿಯಲ್ಲಿ ಬಂದು ಎಂಜಾಯ್ ಮಾಡಿ ಹೋಗುತ್ತಾರೆ. 8 ಗಂಟೆಗೆ ನಾವು ‘ಸಂಸೆ’ ಎನ್ನುವ ಹಳ್ಳಿಯನ್ನು ತಲುಪಿದೆವು. ಕಣ್ಣುಹಾಯಿಸಿದಷ್ಟು ದೂರ ಕಾಫಿ ಮತ್ತು ಚಹಾ ತೋಟ ಬತ್ತದ ಗದ್ದೆ.ಮತ್ತು ಸೊರಗಿದ ಅಡಿಕೆ ತೋಟ. ಅಲ್ಲಲ್ಲಿ ನಡುನಡುವೆ ಮಂಗಳೂರು ಹೆಂಚು ಹೊದಿಸಿದ ಮನೆಗಳು. ಕೆಲವೆಡೆ ಹಳೆಯ ಮನೆಯ ಎದುರಿಗೆ ಸೇರಿಸಿದ ಸ್ಟೇ ಹೋಂ ‘ಎನ್ನುವ ಇಳಿಸಿದ ಚಾವಣಿ ಸೂರು ಗಳು. ಪುಟ್ಟ ಪುಟ್ಟ ಮನೆಯ ಎದುರುಗಡೆ ದೊಡ್ಡ ದೊಡ್ಡ ಬಣ್ಣಬಣ್ಣದ ಡೇರೆ ಹೂಗಳು ಅರಳಿ ನಿಂತಿದ್ದವು. ಸಂಸೆ ಯಲ್ಲೊಂದು ಜೈನ ದೇವಾಲಯ ಅಂಗಡಿ ಮುಗ್ಗಟ್ಟುಗಳು ಅದೊಂದು ಪುಟ್ಟ ಜಂಕ್ಷನ್. ಎಸ್. ಕೆ ಬಾರ್ಡರ್ ನಲ್ಲಿ ಅರಣ್ಯ ಇಲಾಖೆಯವರು ನೀಡಿದ ಗುರುತು ಚೀಟಿಯನ್ನು ಇಲ್ಲಿ ಜಂಕ್ಷನ್ ನಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಕಚೇರಿಯಲ್ಲಿ ಕೊಡಬೇಕು. ಅಲ್ಲಿ ನಮಗಾಗಿ ನಮ್ಮ ‘ಗೈಡು ‘ದಿವಾಕರ್ ಕಾಯುತ್ತಿದ್ದರು. ಅಲ್ಲೊಂದು ಅಂಗನವಾಡಿಯ ಸನಿಹದಲ್ಲಿ ನಮ್ಮ ಗಾಡಿ ಗಳಿಂದ ಇಳಿದೆವು.

ಮಂಗಳೂರಿನಿಂದ ತಂದ’ಮೂಡೆ’ ತಿಂಡಿಯ ಜೊತೆ ಕಾಫಿ ಗಡದ್ದಾಗಿ ಆಯಿತು. ಮುಂದಿನ ಪಯಣಕ್ಕಾಗಿ ನಾವು ಜೀಪು ಮತ್ತು ಪಿಕಪ್ ನಲ್ಲಿ ಹೊರಟೆವು. ಅದೊಂದು ಕಡಿದಾದ ಇಕ್ಕಟ್ಟಾದ ರಸ್ತೆಯಲ್ಲಿ 5 ಕಿಲೋಮೀಟರ್ ದೂರಗಳ ಪಯಣ. ಜೀಪು ಮತ್ತು ಪಿಕಪ್ ನಿಂದ ಇಳಿದ ನಂತರ ನಂತರ ಬೆಳ್ತಂಗಡಿ ಅರಣ್ಯ ವಲಯದ ತಪಾಸಣಾ ಶೆಡ್ಡಿನಲ್ಲಿ ಟಿಕೆಟ್ ಖರೀದಿಸಿದೆವು . ಪ್ರವೇಶ ಶುಲ್ಕ ರೂ 500 ತಲೆಗೆ. ದೊಡ್ಡ ಪೆಟ್ಟು. ಮುಂದಿನ ಚಾರಣ ಚುಮುಚುಮು ಹಿಮದ ಹಾದಿ ಸ್ವಲ್ಪ ಕಡಿದಾದ ಶೋಲಾ ಕಾಡಿನ ನಡುವಿನ ದಾರಿ ತುಂಬಾ ಆಹ್ಲಾದ ನೀಡುವ ನಡಿಗೆ. ಹಾದಿಯ ಬದಿಗಳಲ್ಲಿ ಅರಳಿ ಕುಂತಿರುವ ತರಹೇವಾರಿ ಕಾಡು ಕುಸುಮಗಳು. ನಮ್ಮ ಗೈಡು ದಿವಾಕರ ರ
ಮಾರ್ಗದರ್ಶನ.

ನಂತರ ಚಾರಣ ಹಾದಿಯಲ್ಲಿ ಸಣ್ಣದೊಂದು ತೊರೆ ಎದುರಾಗುತ್ತದೆ. ಇದೇ ‘ನೇತ್ರಾವತಿ ನದಿ ‘ಎಂದು ದಿವಾಕರ ಹೇಳಿದರು. ದಟ್ಟ ಕಾಡಿನ ನಡುವೆ ಕತ್ತಲ ಕಾನನದಲ್ಲಿ ಬಳ್ಳಿ ಬಿಳಲುಗಳ ನಡುವೆ ಮರಗಿಡಗಳ ನಡುವಿನಿಂದ ಮೊಗೆದು ಮೊಗೆದು ಬರುತ್ತಿದ್ದಳು ನೇತ್ರಾವತಿ. ಇಲ್ಲಿಂದ ಕೆಲವು ಕಿಲೋಮೀಟರ್ ಗಳ ದೂರದ ಕಾಡಿನ ತುತ್ತತುದಿಯಲ್ಲಿ ಸಣ್ಣ ತೊರೆ ಹುಟ್ಟುವುದು. ನೇತ್ರಾವತಿಯ ಮೂಲ ಎಂದು ಹೇಳಲು ಅವರು ಮರೆಯಲಿಲ್ಲ. ಅಲ್ಲಿಂದ ಮುಂದೆ ಸಾಗಿದರೆ ನೇತ್ರಾವತಿಯ ಪೀಕು. ದಿವಾಕರ ಹೇಳಿದರು . ಕಿಂದರಜೋಗಿ ಹೋದಂತೆ ದಿವಾಕರ ರ ಹಿಂದೆ ಚಾರಣದ ತಂಡ ಹೊರಟಿತು. ತಂಡದ ಮಕ್ಕಳು ಬಹಳ ಬೇಗ ಅವರೊಂದಿಗೆ ಹೆಜ್ಜೆ ಹಾಕಿದ್ದರು ಉತ್ಸಾಹದಿಂದ.

ಅದೊಂದು ಅಪೂರ್ವವಾದ ಅತ್ಮೀಯವಾದ ಪರ್ವತಗಳ ಸಂಗಮ ಸ್ಥಳ ನೇತ್ರಾವತಿ ಪೀಕು .ಎಲ್ಲಿ ನೋಡಿದರೂ ಪರ್ವತಗಳು.ಪರ್ವತಗಳು ಹತ್ತಿರ ಬಂದು ಮಾತನಾಡಿ ದಂತಹ ಅನುಭವ. ಅಹಮದನ ಬಳಿಗೆ ಬೆಟ್ಟ ಬಂದಂತೆ . ಎಲ್ಲೆಲ್ಲೂ ಬೆಟ್ಟಗಳು. ಅಲ್ಲಿಂದ ಪೂರ್ವದತ್ತ ನೋಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಲಾಯಿಲಾ, ಉಜಿರೆ, ಬಂಗಾಡಿ, ದಿಡುಪೆ, ಕಾಜೂರು,ಮುಂತಾದ ಊರುಗಳು ಎಂದು ದಿನಕರನ ತಂದೆ ಕುರೆ ಕಲ್ಲು ನಿವಾಸಿ ರುದ್ರಪ್ಪ ಗೌಡರು ಹೇಳಿದರು. ಇತ್ತ ತಿರುಗಿದರೆ ಕಳಸ-ಹೊರನಾಡು, ಕ್ಯಾತನಮಕ್ಕಿ, ಹಣತೆ ಬೆಟ್ಟ ಹೀಗೆ ಸುಮಾರು ಬೆಟ್ಟಗಳ ಹೆಸರನ್ನು ಅವರು ಹೇಳಿದರು. ನಿನ್ನೆ ನಮ್ಮ ಅದೃಷ್ಟ ಚೆನ್ನಾಗಿದ್ದ ಕಾರಣ ಮಳೆಬಾರದೇ ಮೋಡ ಸೇರದೆ ಶುಭ್ರವಾಗಿತ್ತು.

ಭಾನುವಾರ ಅಲ್ಲಿಗೆ ಪ್ರವಾಹೋಪಾದಿಯಲ್ಲಿ ನಗರಗಳಿಂದ ಜನರು ಬರುತ್ತಾರೆ ‘ಸಾರ್ ಭಾನುವಾರ ಮಾತ್ರ ಬರಬೇಡಿ ‘ಎಂದರು ದಿವಾಕರ ಗೈಡ್. ಈ ದಿವಾಕರರ ತಂದೆ ರುದ್ರಪ್ಪ ಸಣ್ಣ ಹಿಡುವಳಿದಾರ. ಕುರೆ ಕಲ್ಲು ವಿನಲ್ಲಿ ಪುಟ್ಟದೊಂದು ಜಮೀನು ಹೊಂದಿರುವ ಸಣ್ಣ ರೈತ. ಇಬ್ಬರು ಗಂಡು ಮಕ್ಕಳು ಒಬ್ಬರು ದಿವಾಕರ ಇನ್ನೊಬ್ಬರು ಅವರಣ್ಣ. ಪತ್ನಿ ಕಾಯಿಲೆಯಿಂದ ತೀರಿ ಕೊಂಡಿರುವುದಾಗಿ ಯೂ ಹೊಸಮನೆ ಕಟ್ಟಿರುವುದರಿಂದ ಸ್ವಲ್ಪ ಸಾಲ ಇರುವುದಾಗಿಯೂ ಹೇಳಿದರು. ಈಗ ಬಿಡುವಾದಾಗಲೆಲ್ಲಾ ನಾನು ಗೈಡು ಆಗಿ ಬರುತ್ತೇನೆ. ಏನೋ ಸ್ವಲ್ಪ ದುಡ್ಡು ಸಿಗುತ್ತೆ. ಮೊದಲೆಲ್ಲ ದನ ಮೇಯಿಸಲು ಬರುತ್ತಿದ್ದೆವು ಎಂದು ಹೇಳಿದರು.

ಮೋಡಗಳು ಪ್ರಪಂಚದ ಭೂಪಟ ದಂತೆ ಛಿದ್ರ ಛಿದ್ರವಾಗಿ ವಿಚಿತ್ರವಾಗಿ ಹಾರಿ ಹೋಗುತ್ತಿದ್ದವು. ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ‘ಎನ್ನಲು ನನಗೆ ಭಯವಾಯಿತು. ಪರ್ವತದಲ್ಲಿ ಮಳೆ ಬಿದ್ದರೆ ಜಾರುವುದರಿಂದ ಇಳಿಯುವುದು ಅಸಾಧ್ಯ. ಪರ್ವತಗಳಿಗೆ ಪರ್ವತಗಳೇ ಸಾಟಿ. ಕೆಲವು ಗುಡಿ ಹೊದ್ದು ಮಲಗಿದಂತೆ ಕೆಲವು ಎದೆಸೆಟೆದು ನಿಂತಂತೆ. ಎಲ್ಲೆಲ್ಲೂ ಪರ್ವತಗಳು ತಿಳಿಹಸಿರು ನಡುವೆ ಬಸಿರಿ ನಂತೆ ಶೋಲಾ ಕಾಡುಗಳು. ಪರ್ವತದ ಮೇಲಿನಿಂದ ದೂರದಲ್ಲಿ ಯಾರಿಗೋ ಅದೃಷ್ಟವಂತರಿಗೆ ಕರಡಿ ಹೋಗುವುದು ಕಾಣಿಸಿತಂತೆ. ‘ಬೇರ್ ಬೇರ್ ‘ ಎಂದು ತೋರಿಸಿದರು ಮಕ್ಕಳಿಗೆ ಎಲ್ಲೋ’ ಡಿಯರ್ ಜಿಂಕೆ’ ಕಂಡಿತಂತೆ. ನನಗೆ ಕಾಣಿಸಲಿಲ್ಲ. ಕಂಡವರ ಭಾಗ್ಯ. ನಗರದ ಮಕ್ಕಳಿಗೆ ಆನಂದ. ಮಧ್ಯಾಹ್ನದ ಊಟಕ್ಕೆ ಪರ್ವತದ ಮೇಲೆ ಮೂಡೆ ಸಲಾಡ್ ಚಟ್ನಿಪುಡಿ, ಉಪ್ಪಿನಕಾಯಿ, ಹಸಿದವರಿಗೆ ಬಾಳೆಹಣ್ಣು , ಸೇಬು, ಕಿತ್ತಳೆ, ವಿತರಣೆಯಾಯಿತು. ಹೊಟ್ಟೆ ತುಂಬಿದ ಬಳಿಕ ಪರ್ವತದಿಂದ ಇಳಿಯಲಾರಂಭಿಸಿದೆವು. ನೇತ್ರಾವತಿಯ ತೊರೆಗೆ ಬಂದು ಮನದಣಿಯೆ ಕೈಕಾಲು ಮುಖ ತೊಳೆದುಕೊಂಡು ಶುದ್ಧ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಮರಳಿ ಅದೇ ದಾರಿಯಲ್ಲಿ ಜೀಪು ಮತ್ತು ಪಿಕಪ್ ಇದ್ದಲ್ಲಿಗೆ ಬಂದು ತಲುಪಿದೆವು.

ದಿವಾಕರ ಹೇಳಿದರು ಇಲ್ಲೇ ಹತ್ತಿರದಲ್ಲಿ ಇನ್ನೊಂದು ಜಲಪಾತ ಇದೆ. ‘ಎಳನೀರು ‘ಎಂದು ಹೆಸರು ಅಲ್ಲಿಗೆ ಹೋಗೋಣ ಎಂದರು. ಸರಿ ಎಂದು ಎಲ್ಲರೂ ವಾಹನಗಳನ್ನೇರಿ ಎಳನೀರಿನತ್ತ ಹೊರಟೆವು. ಸಂಸೆ ಜಂಕ್ಷನ್ ನಿಂದ ಸುಮಾರು ಮೂರು ಕಿಲೋಮೀಟರ್ ದೂರ ದುರ್ಗಮವಾದ ರಸ್ತೆಯಲ್ಲಿ ಹೋದಾಗ ಎಳನೀರು ಜಲಪಾತ ಸಿಗುವುದು. ದಿವಾಕರರು ಅಲ್ಲೊಬ್ಬ ಸಜ್ಜನ ಸ್ಥಳೀಯ ಗೈಡ್ ಒಬ್ಬರನ್ನು ಪರಿಚಯಿಸಿದರು ಅವರ ಹೆಸರು ವರ್ಧಮಾನ ಜೈನ್. ಸಹೃದಯಿ ಮನುಷ್ಯ. ಅವರು ನಮ್ಮ ತಂಡದ ಸದಸ್ಯರನ್ನು ಆಪ್ತತೆಯಿಂದ ಜಲಪಾತದ ಕೆಳಕ್ಕೆ ಕರೆದೊಯ್ದರು.

ಪರ್ವತದಿಂದ ದುಮುಕುವ ಎಳನೀರು ದಣಿದ ವರಿಗೆ ‘ಎಳನೀರು’.. ಜಲಪಾತದ ಕೆಳಗಡೆ ಮಕ್ಕಳನ್ನು ಕರೆದೊಯ್ದು ಬಹಳ ಜಾಗ್ರತೆಯಿಂದ ಸ್ನಾನ ಮಾಡುವಂತೆ ಸಲಹೆ ನೀಡಿದರು. ಅವರ ಕಾಳಜಿ ಇಷ್ಟವಾಯಿತು. ಅಲ್ಲಿ ಮನದಣಿಯೆ ಎಳನೀರಿನಲ್ಲಿ ಮಿಂದ ಗೆಳೆಯರು ಹರ್ಷೋಲ್ಲಾಸ ದಿಂದ ಅರೆಮನಸ್ಸಿನಿಂದ ಹಿಂತಿರುಗಿದಾಗ ಸಂಜೆಯಾಯ್ತು.ನಮ್ಮ ತಂಡದಲ್ಲಿ ರಾಜೇಶ ಶರ್ಮ, ಸೀಮಾ ಶರ್ಮಾ, ಸಂಹಿತ ಶರ್ಮಾ, ಸಾತ್ವಿಕ್ ಶರ್ಮ, ನಿತಿನ್ ಪ್ರಕಾಶ್, ಸುರೇಶ್, ಕೀರ್ತಿ, ಮುರಳಿಧರ, ಸುಕುಮಾರ, ದಿನೇಶ್ ರಾವ್, ಶಂಕರ್, ಓವಿಯ, ಶಬರಿ, ರೇಷ್ಮಾ, ಆರಾಧ್ಯ, ದೀಪಿಕಾ, ಕೃತಿಕ್, ದಿಲೀಪ್, ಅಮೂಲ್ಯ, ನಿಧಿ, ಸಮೀರ, ರಾಜೇಶ್ವರಿ ಇದ್ದರು.

ವರ್ಷವರ್ಷವೂ ಹಿಮಾಲಯದ ಟ್ರೆಕಿಂಗ್ ಮಾಡುವ ಅನುಭವಿ ಸಾಹಸಿ ಟ್ರಕ್ಕರ್ಸ್ ಗಳ ಜೊತೆ ಒಂದು ದಿನ ಕಳೆದ ನೆನಪುಗಳು ಅಮರ. ನೇತ್ರಾವತಿಯ ಉಗಮ ಸ್ಥಾನವನ್ನು ನೋಡಿ ಹಿಂತಿರುಗಿ ಬರುವಾಗ ನೇತ್ರಾವತಿ ನದಿಯು ಮಂಗಳೂರಿನತ್ತ ಪಯಣಿಸಿದಾಗ ಸೇರಿಹೋಗಿರುವ ತ್ಯಾಜ್ಯಗಳನ್ನು ನಿರ್ಮಾಣಗೊಂಡಿರುವ ಯೋಜನೆಗಳನ್ನು ದಿನಗಳೆದಂತೆ ಸ್ಥಾವರಗಳನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುವ ಅಭಿವೃದ್ಧಿಯ ಹರಿಕಾರನನ್ನು ನೆನಪಿಸಿಕೊಂಡು ಒಂದು ಕ್ಷಣ ವಿಚಲಿತನಾದೆ. ಪೂರ್ವದ ಪರ್ವತದ ನೇತ್ರ ದಲ್ಲಿ ನಿಷ್ಕಲ್ಮಶವಾಗಿ ಜನಿಸಿದ ಜೀವ ನದಿಯೊಂದು ಕೋಟ್ಯಂತರ ಜನರ ದಾಹ ನೀಗಿಸುವ ಪುಣ್ಯ ಗಂಗೆ. ಹರಿಯುತ್ತಿರಲಿ ಜೀವಜಲ ತುಂಬಿ ಎಂದು ಪ್ರಾರ್ಥಿಸುತ್ತಾ ಮನೆಗೆ ಬಂದೆ.

‍ಲೇಖಕರು Admin

5 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading