ಅನಿತಾ ನರೇಶ್ ಮಂಚಿ
ಚೆಕ್ ಅಪ್ ..
ಫ್ರೀ ಮೆಡಿಕಲ್ ಕ್ಯಾಂಪಿನ ಎದುರುಗಡೆ ಜನ ಆಚೀಚೆ ಸುಳಿದಾಡುತ್ತಿದ್ದರು. ಪರಿಸರವನ್ನು ನಡುಗಿಸುವ ಸ್ವರದಲ್ಲಿ ಬಂದು ನಿಂತಿತೊಂದು ಬುಲೆಟ್ ಬೈಕ್. ಅದರಿಂದಿಳಿದ ಯುವಕರಿಬ್ಬರು ಸ್ಟೈಲಾಗಿ ಒಳಗೆ ಬಂದರು. ಮೈಗೆ ಪೂಸಿರುವ ಸೆಂಟ್ ವಾತಾವರಣವನ್ನು ತುಂಬಿಕೊಂಡಿತು. ಸೀದ ತಮ್ಮ ಮನೆಗೆ ನುಗ್ಗಿದಂತೆ ಒಳ ನುಗ್ಗುವುದರಲ್ಲಿದ್ದ ಅವರನ್ನು ತಡೆದ ಮೆಡಿಕಲ್ ಕ್ಯಾಂಪಿನ ಸಂಯೋಜಕರು ಇಲ್ಲಿ ಕಾರ್ಡ್ ಮಾಡಿಸಿಕೊಂಡು ಹೋಗಿ ಅಂದರು. ಸಾಲಲ್ಲಿ ನಿಂತಿರುವ ಪರಿಚಿತನನ್ನು ಕರೆದು ಸರತಿಯ ಸಾಲಿಂದ ಹೊರ ನಿಂದು ನನ್ನ ಹೆಸರಲ್ಲಿ ಕಾರ್ಡ್ ಮಾಡ್ಸು ಅಂದ.
ಒಳ ನುಗ್ಗಿದರೆ ಅಲ್ಲಾಗಲೇ ತುಂಬಾ ಜನ ಕಾರ್ಡ್ ಹಿಡಿದುಕೊಂಡು ಕಾಯುತ್ತ ನಿಂತಿದ್ದರು. ಆದರೆ ಇವನ ಕಣ್ಣುಗಳು ಸ್ಟೆತೋಸ್ಕೋಪನ್ನು ಕೊರಳಿಗೇರಿಕೊಂಡ ಸುಂದರಿ ಡಾಕ್ಟರ್ ಅನ್ನು ನೋಡಿ ಹೊಳೆಯತೊಡಗಿತು. ಪಕ್ಕದಲ್ಲಿದ್ದ ಮಿತ್ರ ತಿವಿದ. ನಿಂಗೇನಾಗಿದೆಯೋ.. ಸುಮ್ನೆ ಪಿಕ್ಚರಿಗೆ ಹೋಗೋಣ ನಡಿ. ಇಲ್ಲಿ ಯಾರು ಕಾಯ್ತಾರೆ ಅಷ್ಟೊತ್ತು.. ಎಂಥಾ ಕರ್ಮದ ಪಿಕ್ಚರ್ರೋ ನಿಂದು ..ಇಲ್ಲಿ ನೋಡು ರಿಯಲ್ ಲೈಫ್ ಮಜಾ.. ಅಷ್ಟು ಸುಂದರಿಯಾದ ಹುಡುಗಿ ಸುಮ್ಮ ಸುಮ್ಮನೆ ನಿನ್ನನ್ನು ಮುಟ್ತಾಳಾ? ಈಗ ನೋಡಲ್ಲಿ ಆ ಮುದುಕನ ಕೈ ಆಗಿನಿಂದಲೇ ಹಿಡ್ಕೊಂಡು ಪ್ರಶ್ನೆ ಕೇಳ್ತಾ ಇದ್ದಾಳೆ. ಆಹಾ ಅವಳ ಕೈ ನನ್ನ ಕೈಯನ್ನು ಹಾಗೇ ಅದುಮಿ ಹಿಡಿದರೆ ಓಹ್.. ಸ್ವರ್ಗ ಸುಖ..
ನಿನ್ನ ಕರ್ಮ.. ನಾನಂತೂ ಹೊರಗಿರ್ತಿನಿ. ಅದೇನು ಮಾಡ್ತೀಯೋ ಮಾಡ್ಕೊಂಡು ಬಾ.. ಇಲ್ಲಿ ನಿಂತು ಕಾಯಕ್ಕೆ ನಂಗಾಗೋದಿಲ್ಲ..
ಹೋಗೋ ಗೂಬೆ.. ಚಾನ್ಸ್ ಸಿಕ್ಕಿರುವಾಗ ಮಜಾ ಉಡಾಯ್ ಸೋದು ಕಲ್ತುಕೋ ಬೇಕು ಮಗನೇ.. ನನ್ ತರಾ..
ಅಸಹನೆಯಿಂದಲೇ ನಿಂತವನು ಇವನ ಸರದಿಗಾಗಿ ಕಾಯದೇ ಪಕ್ಕದಲ್ಲಿರುವವನನ್ನು ದಬ್ಬಿ ಸ್ಟೈಲಾಗಿ ಎದುರಿನ ಕುರ್ಚಿಯಲ್ಲಿ ಕುಳಿತ. ಅವಳು ಇವನನ್ನೊಮ್ಮೆ ನೋಡಿ, ಕೈಯಲ್ಲಿದ್ದ ಕಾರ್ಡ್ ಚೆಕ್ ಮಾಡಿ, ನೀವು ಆ ಪರದೆ ಹಾಕಿರೋ ರೂಮಿಗೆ ಹೋಗಿ. ನಿಮ್ಮ ಹೋಲ್ ಬಾಡಿ ಚೆಕ್ ಅಪ್ ಮಾಡ್ಬೇಕು. ಹಾಂ.. ನಿಲ್ಲಿ ಅಲ್ಲಿರುವ ಹೆಂಗಸು ಹೊರಗೆ ಬಂದ ನಂತರ ನೀವು ಬಟ್ಟೆ ಕಳಚಿ ಕುಳಿತುಕೊಳ್ಳಿ. ಬರ್ತಿನಿ ಅಂದಳು. ಅಷ್ಟರಲ್ಲಿ ಸೆರಗು ಸರಿ ಪಡಿಸಿಕೊಳ್ಳುತ್ತಾ ಹೆಂಗಸೊಬ್ಬಳು ಹೊರ ಬಂದು ಔಷಧಿ ಕೊಡುವ ಸಾಲು ಸೇರಿಕೊಂಡಳು. ಇವನು ಹೊರಗೆ ಕಾಯುತ್ತ ನಿಂತಿದ್ದ ಗೆಳೆಯನ ಕಡೆಗೆ ಹೆಬ್ಬೆಟ್ಟೆತ್ತಿ ತೋರಿಸುತ್ತಾ ಪರದೆಯ ಕೋಣೆಯೊಳಗೆ ನಡೆದ. ಹೊತ್ತು ಕಳೆಯಿತು. ಹೊರಗಿನ ಜನರ ಗುಜು ಗುಜು ಸದ್ದು ಕೇಳಿಸುತ್ತಿತ್ತು. ಇದ್ದಕ್ಕಿದ್ದ ಹಾಗೇ ಪರದೆ ಸರಿಯಿತು. ಮೈ ಮೇಲೆ ನೂಲೆಳೆಯೂ ಇಲ್ಲದೆ ನಿಂತಿದ್ದ ಇವನನ್ನು ಹೊರಗೆ ನಿಂತ ಎಲ್ಲರೂ ನೋಡುತ್ತಿದ್ದರು.
ಕೂಡಲೇ ಅಲ್ಲಿದ್ದ ಶರ್ಟ್ ನಿಂದ ಮೈ ಮುಚ್ಚಿಕೊಂಡು.. ಏನಿದು .. ತಮಾಷೆ.. ಏನಾಗ್ತಾ ಇದೆ.. ಎಂದು ಕಿರುಚಿದ.
ಸುಂದರಿಯಾದ ಡಾಕ್ಟರ್ ಎದ್ದು ನಿಂತು, ಏನಿಲ್ಲ ನಿಮ್ಮ ಆರೋಗ್ಯ ಸ್ಥಿತಿ ಹೇಗಿದೆ ಅಂತ ಎಲ್ಲರೂ ನೋಡಲಿ ಅನ್ನಿಸ್ತು.. ಆಗ ನೀವಾಡಿದ ಮಾತು ಕೇಳಿ ಯಾಕೊ ಗಾಭರಿಯಾಗಿತ್ತು. ಪರ್ವಾಗಿಲ್ಲ. ಹುಷಾರಾಗಿದ್ದೀರಿ. ಬಟ್ಟೆ ಹಾಕ್ಕೊಂಡು ಹೋಗಿ ಎಂದು ನಂತರದ ಪೇಶಂಟನ್ನು ಪರೀಕ್ಷಿಸತೊಡಗಿದಳು.
ಅಮ್ಮಾ ..
ನಿದ್ದೆ ಬಂದಿದ್ದ ಮಗಳ ಕಾಲಿನ ಮೇಲೆ ಕೂತಿತು ಸೊಳ್ಳೆ….. ಕೆಟ್ಟ ಸೊಳ್ಳೆ! ಅನ್ನುತ್ತಾ ಮಗಳ ಮೈದಡವಿ ನಿಟ್ಟುಸಿರು ಬಿಡುತ್ತಾ ಹಾದಿಯ ಕಡೆಗೊಮ್ಮೆ ಕಣ್ಣು ಹಾಯಿಸಿದಳು.
ದೊಡ್ಡದಾಗಿ ತೊದಲುತ್ತಾ, ವಾಲಾಡಿಕೊಂಡು ಬರುವ ಅವನ ಮುಖ ದೂರದಿಂದಲೇ ಕಾಣಿಸಿತವಳಿಗೆ. ಅವನನ್ನು ಸರಿ ದಾರಿಗೆ ತರಲು ಮನುಷ್ಯನಂತೆ ಮಾಡಲು ಅವಳು ಮಾಡದ ಪ್ರಯತ್ನಗಳಿಲ್ಲ. ಆದರೆ ಅವನು ಕೆಡುವುದೇ ನನ್ನ ಬದುಕು ಎಂದುಕೊಂಡು ಬಿಟ್ಟಿದ್ದ. ಜೊತೆಗೆ ಇವರನ್ನು ನಿತ್ಯ ಯಾತನೆಗೆ ಗುರಿ ಪಡಿಸುತ್ತಿದ್ದ. ಎರಡು ಮಕ್ಕಳನ್ನು ನೋಡಿಕೊಂಡು, ಇಬ್ಬರ ದುಡಿಮೆಯಿಂದ ಎಲ್ಲರಂತೆ ಬದುಕಬಹುದಾಗಿದ್ದ ಸಂಸಾರ. ಅವನ ಹಾಳು ಚಟದಿಂದಾಗಿ ಎಲ್ಲರೂ ತಮ್ಮತ್ತ ಬೆಟ್ಟು ತೋರಿಸಿ ನಗುವಂತಾಗಿತ್ತು. ಮಕ್ಕಳು ಅಪ್ಪನ ಮುಖ ಕಂಡೊಡನೆ ಚಿಪ್ಪಲ್ಲಡುಗುವ ಆಮೆಗಳಾಗುತ್ತಿದ್ದರು. ಹತ್ತಿರದ ಮನೆಗಳಲ್ಲಿ ಅಪ್ಪನೊಂದಿಗೆ ಮುದ್ದುಗರೆಯುತ್ತಾ ಮಾತಾಡುವ ಮಕ್ಕಳು, ಅಪ್ಪ ತಂದಿದ್ದು ಎಂದು ಏನಾದರು ವಸ್ತುಗಳನ್ನು ತೋರಿಸುವ ಮಕ್ಕಳ ಗೆಳತಿಯರು.. ಆದರೆ ಇಲ್ಲಿ ಎಲ್ಲವೂ ತದ್ವಿರುದ್ಧ.
ಒಮ್ಮೊಮ್ಮೆ ಮನೆಗೆ ನೆಟ್ಟಗೆ ಬಂದರೂ ಅವಳ ಕೈಯಿಂದ ಹಣ ಕಸಿದುಕೊಂಡು ಮಕ್ಕಳ ಕೈಯಲ್ಲಿ ಕೊಟ್ಟು ತನ್ನ ಕುಡಿತಕ್ಕೆ ಬೇಕಾದವುಗಳನ್ನು ತರಿಸಿಕೊಳ್ಳುತ್ತಿದ್ದ. ಹಣ ಇಲ್ಲದಿದ್ದರೆ ಸಾಲ ಬರೆಸಿಕೊಂಡು ಬನ್ನಿ ಎಂದು ಅವರನ್ನು ಅಟ್ಟುತ್ತಿದ್ದ.ಬೆಳೆಯುತ್ತಿದ್ದ ಮಕ್ಕಳು ಯಾವ್ಯಾವುದೋ ಮಾತುಗಳಿಗೆ ಆಹಾರವಾಗಬೇಕಿತ್ತು. ಸಾಲವಾದರೂ ಎಷ್ಟೆಂದು ಸಿಕ್ಕೀತು. ಮೊನ್ನೆ ಯಾರೋ ನಿನ್ನ ಮಗಳನ್ನು ಮನೆಗೆ ಕಳ್ಸು, ದುಡ್ಡು ಕೊಡ್ತೀನಿ ಅಂದಿದ್ದನಂತೆ. ಕುಡಿದ ಅಮಲಿನಲ್ಲಿ ಅದನ್ನು ಹೇಳಿಕೊಂಡು ಕೆಟ್ಟದಾಗಿ ನಗುತ್ತಾ ಬೆಳೆಯುತ್ತಿದ್ದ ಮಗಳನ್ನೊಮ್ಮೆ ಮೇಲಿಂದ ಕೆಳಗಿನವರೆಗೆ ದಿಟ್ಟಿಸಿದ್ದ. ಹೆಂಡತಿಯ ಕಡೆಗೆ ತಿರುಗಿ ಇವಳು ಹೋದ್ರೆ ನಾಲ್ಕು ಕಾಸಾದ್ರೂ ಸಿಗತ್ತೆ, ನಿನ್ನ ಮೂತಿಗೆ ಏನು ಸಿಗತ್ತೆ.. ಅಂದಿದ್ದ.ಅವನು ಹೇಳಿದ ರೀತಿಗೆ ಮೈ ನಡುಗಿತ್ತು. ಈಗ ಯೋಚಿಸುತ್ತಿದ್ದಂತೆ ಅಸಹ್ಯ ಅನ್ನಿಸಿತು ಅವನ ಬಗ್ಗೆ .
ಸೊಳ್ಳೆ ಮತ್ತೊಮ್ಮೆ ಗುಂಯ್ ಗುಡುತ್ತಾ ಕಿವಿಯ ಬಳಿ ಬಂದಿತು. ಅವಳು ಕೈ ಬೀಸುವ ಮೊದಲೇ ಹಾರಿತು.
ತೆರೆದ ಬಾಗಿನೊಳಗೆ ತೂರಾಡಿಕೊಂಡು ನುಗ್ಗಿ ಅಲ್ಲಿದ್ದ ಮಂಚದ ಮೇಲೆ ಕೂರಲು ಹೋದ ಅವನು ಸಮತೋಲನ ತಪ್ಪಿ ಹಾಸಿಗೆಯ ಮೇಲೆ ಬಿದ್ದ. ಮೈ ಮೇಲೆ ಪರಿವೆಯಿಲ್ಲದೆ ಮಲಗಿದ್ದ ಅವನ ಕಡೆಯಿಂದ ಬಂದ ಕೆಟ್ಟ ವಾಸನೆ ಮನೆಯೊಳಗಿನ ಗಾಳಿಯನ್ನು ತನ್ನ ತೆಕ್ಕೆಗೆಳೆದು ಮಲಿನಗೊಳಿಸುತ್ತಿತ್ತು. ಇಲ್ಲ.. ಇನ್ನು ಈ ಬದುಕನ್ನು ಸಹಿಸಲು ಸಾಧ್ಯವೇ ಇಲ್ಲ ಅನಿಸಿತವಳಿಗೆ. ಮಕ್ಕಳ ಮುಗ್ದ ಮುಖ ಕಣ್ಣ ಮುಂದೆ ಸರಿದಂತಾಗಿ , ಅವರಿಗೆ ಅನ್ಯಾಯವಾಗುತ್ತದೇನೋ ಎಂಬ ಹಿಂಜರಿಕೆ ಕಾಡಿತು. ಆದರೆ ಸಾವು ಎಲ್ಲರಿಗೂ ಒಂದೇ ತೆರನಾದ ಅನ್ಯಾಯ ಮಾಡಲಾರದು. ಕಳೆದು ಹೋದ ಬದುಕನ್ನು ಮರಳಿ ಪಡೆಯಲು ಸಾಧ್ಯವಿಲ್ಲದಿದ್ದರೂ ಸಾವು ತರುವ ಶಾಂತಿಯ ಮುಂದೆ ಅದೆಲ್ಲ ಗೌಣವಾದೀತು ಎಂದು ತಂದಿರಿಸಿದ್ದ ಕೀಟನಾಶಕದ ಕಡೆಗೊಮ್ಮೆ ನೋಡಿದಳು.
ಮತ್ತೊಮ್ಮೆ ಗುಂಯ್ ಎನ್ನುತ್ತಾ ಹಾರಿ ಹತ್ತಿರದ ಗೋಡೆಯ ಮೇಲೆ ಕೈ ಕಾಲು ಬಡಿಯತ್ತಾ ಕುಳಿತಿತು ಸೊಳ್ಳೆ. ಪಟ್ಟೆಂದು ಹೊಡೆದಳು. ಹೊಟ್ಟೆ ತುಂಬಾ ತುಂಬಿದ್ದ ರಕ್ತವೆಲ್ಲಾ ಹೊರ ಚೆಲ್ಲಿ ನಿಶ್ಚಲವಾಯಿತದು. ಮರು ದಿನದ ಬೆಳಗು ಎಂದಿನಂತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿದ್ದ ಮಕ್ಕಳ ಬಿಕ್ಕಳಿಕೆಗಳಿಂದಾಗಿ ಮೌನದ ಒಡಲು ತಲ್ಲಣಗೊಳ್ಳುತ್ತಿತ್ತು. ಮನೆಯ ಮೂಲೆಯಲ್ಲಿ ಕಣ್ಣೊರೆಸಿಕೊಳ್ಳುತ್ತಿದ್ದ ಮಕ್ಕಳು, ನಡುವೆ ಅವರನ್ನು ಬಾಚಿ ಎದೆಗೊತ್ತಿಕೊಂಡು, ಬಿಳಿ ಹೊದಿಕೆಯೊಳಗೆ ತಣ್ಣಗೆ ಮಲಗಿದ್ದ ಅವನ ಶರೀರವನ್ನು ನಿರ್ವಿಕಾರ ಚಿತ್ತದಿಂದ ನೋಡುತ್ತಿರುವ ಅವಳ ಕಣ್ಣುಗಳು..!!
ನೆರೆಕರೆಯವರು ಸುತ್ತುವರಿದು ಮೆಲು ಧ್ವನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಹೆಂಡ ಕುಡಿದು ನಿಧಾನಕ್ಕೆ ಎಲ್ರನ್ನೂ ಸಾಯಿಸ್ತಿದ್ದ.. ಆದ್ರೆ ವಿಷ ಕುಡಿದು ಬೇಗನೆ ಸತ್ತು ಉಪಕಾರ ಮಾಡಿದ ಬಿಡು. ಅವಳೊಮ್ಮೆ ಗೋಡೆಯತ್ತ ನೋಡಿದಳು. ಸತ್ತ ಸೊಳ್ಳೆಯ ದೇಹ ಅಲ್ಲೇ ಅಂಟಿ ಕುಳಿತಿತ್ತು. ಬೆರಳು ಮುಟ್ಟಿಸಿದ ತಕ್ಷಣ ಕೆಳಗೆ ಬಿದ್ದು ನೆಲದ ಕಸದೊಂದಿಗೆ ಬೆರೆಯಿತು. ಚೆಲ್ಲಿದ ರಕ್ತ ಒಣಗಿ ಕಲೆಯಾಗಿ ಅಲ್ಲಿಯೇ ಉಳಿದಿತ್ತು. ಆ ಕಲೆ ತೊಳೆದರೆ ಹೋಗಬಹುದೇನೋ..








Modalantu tumba ista aytu anitakka
chennagide anitha erdoo kathegalu…modalaneya katheyallina paathragalu kannedru bandu nagu nagu ..:)
ಬದುಕಿನ ವಿರ್ಪಯಾಸಗಳು ಇನ್ನೆಷ್ಟು ನಮ್ಮೊಡನೆ ಇವೆಯೋ ಗೊತ್ತಿಲ್ಲ… ಹೆಣ್ಣು… ಗಂಡಿನ ದಬ್ಬಾಳಿಕೆಯನ್ನು ಅದೆಷ್ಟು ದಿನಗಳು ಸಹಿಸಿಕೊಂಡು ಬದುಕಿಯಾಳು… ಸುಂದರ ಬದುಕಿಗಾಗಿ ಹೋರಾಟ ಅಗತ್ಯತೆ ಇದೆ,,, ನೋವು ಕೊಡುವ ಮನಸ್ಥಿತಿ ರೂಪಿಸಿಕೊಂಡಿರುವ ಗಂಡಿನಾಳಗುವುದಕ್ಕಿಂತ ಎಚ್ಚೆತ್ತು ತನ್ನ ಬದುಕು ರೂಪಿಸಿಕೊಳ್ಳುವಲ್ಲಿ ತಾನು ಸಬಳಲು ಎನ್ನುವುದನ್ನು ಮನಗಾಣಬೇಕು… ಈ ಸಣ್ಣ ಕಥೆಗಳಿಂದ ಹೆಣ್ಣು ಸಬಳಲು ಎನ್ನುವುದನ್ನು ಚೆನ್ನಾಗಿ ಮನದಟ್ಟು ಮಾಡಿದ್ದೀರಾ… ತುಂಬಾ ಚೆನ್ನಾಗಿದೆ
ವಿಶಿಷ್ಟ ಕಥೆಗಾರಿಕೆ…ಚೆನ್ನಾಗಿದೆ
Eshtu chanda kathe heLteeri Anita neevu…! Modalaneya katheyannantoo onde usiralli odide.