ಪಿ ಪಿ ಉಪಾಧ್ಯ
21
ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು..
ದಿನ ಬೆಳಗಾದರೆ ಆ ತಮ್ಮ ಅಣ್ಣನ ಮೇಲೆ ಸಾರುತ್ತಿದ್ದ ಶೀತಲ ಯುದ್ಧ ಕಮಲಮ್ಮನಿಗೆ ತಲೆನೋವಾಗಿ ಪರಿಣಮಿಸಿತ್ತು. ಆ ಲೆಕ್ಕದಲ್ಲಿ ಕಿರೀ ಮಗನನ್ನು ಘಟ್ಟದ ಮೇಲೆ ಅಣ್ಣನ ಮನೆಗೆ ಕಳುಹಿಸಿದ್ದೇ ಒಳ್ಳೆಯದಾಯ್ತು. ಇಲ್ಲವೆಂದರೆ ಅವ ಇನ್ನೊಂದು ತಲೆನೋವಾಗುತ್ತಿದ್ದನೇನೋ ಎಂದುಕೊಳ್ಳುವ ಮಟ್ಟಕ್ಕೆ ಪರಿಸ್ಥಿತಿ ಹದಗೆಡುತ್ತಿತ್ತು.
ಅಷ್ಟರಲ್ಲಿ ಎಸ್ಎಸ್ಎಲ್ಸಿಯನ್ನು ತಲುಪಿದ ಅನಂತ ಅಲ್ಲಿಯೂ ತೊಂಭತ್ತಕ್ಕಿವರ್ಷಂತ ಹೆಚ್ಚಿನ ಮಾರ್ಕಿನಿಂದ ಪಾಸಾಗಿದ್ದ. ಅವನನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಆಗ ತಾನೇ ಪರವಾನಗಿ ಪಡೆದು ಪಿ ಯು ಸಿ ತರಗತಿಗಳನ್ನು ಪ್ರಾರಂಭಿಸಿದ್ದ ಶಾಲೆಯವರು ಪ್ರಯತ್ನ ಪಟ್ಟಿದ್ದರು.
ಅವ ಇಲ್ಲಿಯೇ ಮುಂದುವರಿದರೆ ಪಿ ಯುಸಿಯಲ್ಲಿ ಒಂದು ರ್ಯಾಂಕ್ ಆದರೂ ಬರಬಹುದೆನ್ನುವ ಆಸೆ ಅವರಿಗೆ. ಆದರೆ ಪಿಯುಸಿಯಲ್ಲಿ ಇನ್ನೂ ಹೆಚ್ಚಿನ ಮಾರ್ಕು ತೆಗೆದು ಎಂಜಿನಿಯರಿಂಗಿಗೆ ಮೆರಿಟ್ ಸೀಟನ್ನೇ ಪಡೆದುಕೊಳ್ಳಬೇಕೆಂಬ ಬಯಕೆ ಹೊಂದಿದ್ದ ಅನಂತ ಹಾಸ್ಟೆಲಿನಲ್ಲಿ ಉಳಿದು ಉಡುಪಿಯಲ್ಲಿಯೋ ಮಂಗಳೂರಿನಲ್ಲಿಯೋ ಕಾಲೇಜಿಗೆ ಹೋಗುತ್ತೇನೆಂದು ಹೇಳುತ್ತಿದ್ದವ ಆದಿ ಅಮ್ಮನೊಡನೆ ಹೇಳುತ್ತಿದ್ದ `ಅಲ್ಲ ಅನಂತ ಹೇಳುವುದೇ ಸರಿ. ಇಲ್ಲಿ ಇವರದಿನ್ನೂ ಮೊದಲ ವರ್ಷ. ಅಧ್ಯಾಪಕರುಗಳಿಗೂ ಅನುಭವ ಸಾಲದು. ಲ್ಯಾಬೊರೇಟರಿ ಸಹ ಇನ್ನೂ ಹೊಸತಾಗಿ ಆಗಬೇಕಷ್ಟೆ. ಹಾಗಾಗಿ ಅವನು ರಿಸ್ಕ್ ತೆಗೆದುಕೊಳ್ಳದಿರುವುದೇ ಒಳ್ಳೆಯದು. ನಾನೇ ಉಡುಪಿಗೆ ಹೋಗಿ ಒಳ್ಳೆಯ ಕಾಲೇಜಿನಲ್ಲಿ ಸೀಟಿಗೆ ಮಾತನಾಡಿ ಹಾಸ್ಟೆಲಿನ ವ್ಯವಸ್ಥೆಯನ್ನೂ ಮಾಡಿ ಬರುತ್ತೇನೆ’ ಎಂದದ್ದನ್ನು ಕೇಳಿಸಿಕೊಂಡವ ಒಮ್ಮೆಲೇ ಮನಸ್ಸು ಬದಲಾಯಿಸಿ `ಬೇಡ ಅಮ್ಮ, ನಾನು ಇಲ್ಲೇ ಪಿಯುಸಿ ಮಾಡುತ್ತೇನೆ’ ಎಂದದ್ದು ಕೇಳಿ ಕಮಲಮ್ಮನಿಗೆ ಆಶ್ಚರ್ಯವಾಗಿತ್ತು. ಪರವಾಗಿಲ್ಲ ಇನ್ನೂ ಎರಡು ವರ್ಷ ಮಗ ಮನೆಯಲ್ಲೇ ಇರುತ್ತಾನೆ ಒಂದು ಕಡೆಯಿಂದ ಸಮಾಧಾನವಾದರೂ ಈ ಎರಡು ವರ್ಷಗಳಲ್ಲಿ ಅಣ್ಣನೊಂದಿಗೆ ಇನ್ನೇನು ತಕರಾರು ಮಾಡಿಕೊಳ್ಳುತ್ತಾನೋ ಎನ್ನುವ ಹೆದರಿಕೆಯೂ ಬಾಧಿಸಿತ್ತು.

ಅಂತೂ ಅನಂತ ತನ್ನ ಪಿಯುಸಿ ವಿದ್ಯಾಭ್ಯಾಸವನ್ನು ಎಸ್ಎಸ್ಎಲ್ಸಿ ಮಾಡಿದ ಅದೇ ಶಾಲೆಯಲ್ಲಿ ಮುಂದುವರಿಸಿದ. ಶಾಲೆಯವರಿಗೂ ಒಂದು ತೆರನ ನಿರಾಳ. ಎಸ್ಎಸ್ಎಲ್ಸಿಯಲ್ಲಿ ಸ್ವಲ್ಪದರಲ್ಲಿ ತಪ್ಪಿಹೋದ ರ್ಯಾಂಕ್ ಪಿಯುಸಿಯಲ್ಲಾದರೂ ಬರಬಹುದೆನ್ನುವ ನಿರೀಕ್ಷೆ. ಶಾಲೆಯ ಪೋಷಕರಲ್ಲೊಬ್ಬರ ಮಗನೇ ತಮ್ಮ ಪಿಯುಸಿ ಪ್ರಾರಂಭದ ವರ್ಷದ ವಿದ್ಯಾರ್ಥಿಯಾದ ಎನ್ನುವ ಸಂಭ್ರಮ.
ಮೇಷ್ಟ್ರಗಳಿಗೂ ಹೊಸ ಅನುಭವ. ಕೆಳ ತರಗತಿಗಳಿಗೆ ಪಾಠ ಮಾಡಿದ ಹಾಗೇ ಮಾಡುತ್ತಿದ್ದರು. ವ್ಯತ್ಯಾಸ ತಿಳಿಯದ ವಿದ್ಯಾರ್ಥಿಗಳಿಗೂ ಸುಖವೇ. ಅನಂತನ ಬಗ್ಗೆ ವಿಶೇಷ ಕಾಳಜಿ. ಶಾಲೆಗೆ ರ್ಯಾಂಕು ತರುವವನಲ್ಲವೇ. ಅದರ ಮೇಲೆ ಈ ಶಾಲೆಯ ಜಾಗವನ್ನು ಅವನಜ್ಜನೇ ದಾನವಾಗಿ ಕೊಟ್ಟದ್ದು. ಈಗ ಪ್ರಾರಂಭವಾದ ಪಿಯುಸಿ ಕಾಲೇಜಿನ ಕಟ್ಟಡ ಕಟ್ಟಲಿಕ್ಕೂ ಪಕ್ಕದಲ್ಲಿಯೇ ಇನ್ನೂ ಉಳಿದಿದ್ದ ತಮ್ಮ ಜಾಗದ ಒಂದು ಭಾಗವನ್ನು ಕೊಡಲು ಆದಿಯ ಮಧ್ಯಸ್ತಿಕೆಯಿಂದಾಗಿ ಅವನಪ್ಪ ಒಪ್ಪಿದ್ದರು.
ಅಂದ ಮೇಲೆ ಅನಂತನಿಗೆ ಇದ್ದದ್ದೂ ಮರ್ಯಾದೆ ಹೆಚ್ಚಾಗಿತ್ತು ಆ ಮರ್ಯಾದೆಗೆ ಚ್ಯುತಿ ಬರುವಂತೆ ಅನಂತನೂ ನಡೆದುಕೊಳ್ಳಲಿಲ್ಲ. ತರಗತಿಯಲ್ಲಿ ಯಾವಾಗಲೂ ಮೊದಲಿಗನೇ. ಹೋಮ್ವರ್ಕ್ನಲ್ಲೂ ಅಷ್ಟೆ. ಅಷ್ಟು ಸಮರ್ಪಕವಾಗಿ ಮಾಡುತ್ತಿದ್ದ. ದಿನ ಕಳೆಯುತ್ತಿದ್ದಂತೆ ಅವನ ರ್ಯಾಂಕಿನ ಬಗ್ಗೆ ಮೇಷ್ಟ್ರುಗಳೆಲ್ಲ ಹೆಚ್ಚೆಚ್ಚು ಭರವಸೆ ತಾಳಹತ್ತಿದರು.
ಶಾಲೆಯಲ್ಲಿ, ತರಗತಿಗಳಲ್ಲಿ ಮತ್ತು ಮೇಷ್ಟ್ರುಗಳೊಂದಿಗೆ ಯಾವತ್ತೂ ತನ್ನ ಸಿರಿವಂತಿಕೆಯ ದರ್ಪವನ್ನು ತೋರಿಸದ ಅವನು ಎಲ್ಲರ ಅಚ್ಚು ಮೆಚ್ಚು.`ಅಲ್ಲ ಅಂತಹ ಶ್ರೀಮಂತರ ಮಗ. ಶಾಲೆಯ ಅರ್ಧ ಭಾಗಕ್ಕಿಂತ ಹೆಚ್ಚು ಅವನಪ್ಪನ ದಾನ. ಹಾಗಿದ್ದೂ ನೋಡಿ, ಈ ಅನಂತ ಎಷ್ಟು ನಿರಹಂಕಾರಿ. ಅದೇ ಈ ಅರ್ಧಂಬರ್ಧ ಶ್ರೀಮಂತರ ಮಕ್ಕಳ ದೊಡ್ಡಸ್ತಿಕೆ.. ದರ್ಬಾರು ನೋಡಿ. ಅವರೆಲ್ಲ ಅನಂತನ ಕಾಲಡಿ ನುಸುಳಬೇಕು’ ಎನ್ನುತ್ತಿದ್ದರು.
ಅಂತಹ ಅನಂತನನ್ನು ಎರಡನೆಯ ಪಿಯುಸಿಯಲ್ಲಿದ್ದ ವರ್ಷ ಹಿಂದಿನ ವರ್ಷದ ಸಾಧನೆಗಾಗಿ ಸನ್ಮಾನಿಸ ಬೇಕೆಂದು ನಿರ್ಧರಿಸಿದ ಶಾಲೆಯವರು ಒಂದು ಕಾರ್ಯಕ್ರಮವನ್ನೇರ್ಪಡಿಸಿ ಅದಾಗಲೇ ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ಆದಿಯನ್ನೇ ಸಮಾರಂಭಕ್ಕೂ ಅಧ್ಯಕ್ಷನನ್ನಾಗಿ ಕರೆದಿದ್ದರು. ಕಾರ್ಯಕ್ರಮವಿದ್ದುದು ಮಧ್ಯಾಹ್ನ. ಬೆಳಿಗ್ಗಿನ ತರಗತಿಗಳೆಲ್ಲ ಮಾಮೂಲಿನಂತೆ ನಡೆಯುತ್ತವೆ. ಅದು ಮುಗಿದು ಊಟದ ವಿರಾಮದ ನಂತರ ವಿದ್ಯಾರ್ಥಿಗಳೆಲ್ಲರೂ ಶಾಲಾ ಸಭಾಗೃಹದಲ್ಲಿ ನೆರೆಯಬೇಕೆಂದು ಆಗಲೇ ನೋಟೀಸು ಕಳುಹಿಸಿದ್ದರು.
|ಇನ್ನು ನಾಳೆಗೆ|






0 Comments