ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅದ್ಭುತ ದೃಶ್ಯ ಕಾವ್ಯ ಮಂಥರೆಯ ದುರ್ಮಂತ್ರ’ – ವೈ ಕೆ ಸಂಧ್ಯಾಶರ್ಮ

ಕಥೆಯ ಅಂತ್ಯ ಮನ ಕಲಕುವಂಥದ್ದು

ವೈ ಕೆ ಸಂಧ್ಯಾಶರ್ಮ

ಹೊಸ ಅನುಭವ ಸ್ಪರ್ಶವನ್ನು ಮೂಡಿಸುವ ಮೂರು ಯಕ್ಷಗಾನ ಪ್ರಸಂಗಗಳನ್ನು ಸಾದರಪಡಿಸಿದವರು ಪ್ರಖ್ಯಾತ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ಅವರ ಸಹ ಕಲಾವಿದರು. ಬೆಂಗಳೂರಿನ ಜಯನಗರದ ‘ಕಲಾರಸ’ ವಿನೂತನ ಆಪ್ತ ರಂಗಮಂದಿರದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ಪ್ರದರ್ಶನಗೊಂಡ ‘ದಶಾವತಾರ’, ‘ಪೂತನಿ ಮೋಕ್ಷ’  ಹಾಗೂ “ಮಂಥರೆಯ ದುರ್ಮಂತ್ರ” ಎಂಬ ಮೂರು ಪುಟ್ಟ ಪ್ರಸಂಗಗಳು ಅತ್ಯಂತ ಪರಿಣಾಮಕಾರಿಯಾಗಿದ್ದವು. “ದಶಾವತಾರ”-ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಭಾಕರ ಅವರು ವಿಷ್ಣುವಿನ ದಶಾವತಾರಗಳನ್ನು ಬಹು ಮನೋಜ್ಞವಾಗಿ ಅಭಿನಯಿಸಿದರು. ಸುಂದರ ಮೈಮಾಟ, ಹೇಳಿ ಮಾಡಿಸಿದಂಥ ಅಂಗ ಸೌಷ್ಟವ, ಚೆಲುವು ಬೀರುವ ವದನ ಸೌಂದರ್ಯ ಈ ಕಲಾವಿದರಿಗೆ ದೇವರಿತ್ತ  ವರವೆಂದರೆ ಅತಿಶಯೋಕ್ತಿಯಲ್ಲ. ದೇವಲೋಕದ ಸುಂದರಿಯೊಬ್ಬಳು ಲಾಸ್ಯ-ವಿಲಾಸಗಳಿಂದ,ತನ್ನ ಮೃದು ಮಧುರ ಭಾವಾಭಿವ್ಯಕ್ತಿಗಳಿಂದ,ಮುದವುಂಟು ಮಾಡುವ ಹೆಜ್ಜೆ-ಗೆಜ್ಜೆಗಳ ಪಲುಕುಗಳಿಂದ ನಾಟ್ಯವಾಡುತ್ತಿರುವಳೆಂಬ ಅನುಭೂತಿಯುಂಟು ಮಾಡಿ ಮನಸೂರೆಗೊಂಡ ಅಭಿಜಾತ ಕಲಾವಿದ ಮಂಟಪ ಪ್ರಭಾಕರ ಅವರ ಪ್ರತಿಭೆ ನಿಜಕ್ಕೂ ಸ್ತುತ್ಯಾರ್ಹ.  “ಪೂತನಿ ಬಾಲಕೃಷ್ಣನನ್ನು ಸಂಹರಿಸಲು ಪ್ರಯತ್ನಿಸುವ ಪ್ರಸಂಗ” ದ ಕಲ್ಪನೆ-ರಚನೆ ಡಾ.ಆರ್. ಗಣೇಶ್ ಅವರದು. ಸಕಲ ಕಲೆ, ಶಾಸ್ತ್ರ ವಿಶಾರದರಾದ ಗಣೇಶರವರು ರೂಪಿಸಿರುವ ಈ  ಪೂತನಿಯ ಕಥೆ ಹೊಸ ಆಧ್ಯಾತ್ಮದ ತಿರುವು ಪಡೆದಿದ್ದು ನಿಜಕ್ಕೂ ಪ್ರಸಂಗಕ್ಕೆ ಹೊಸ ಆಯಾಮವನ್ನು ಒದಗಿಸಿತ್ತು.

ಬಾಲ ಕೃಷ್ಣನನ್ನು ಕೊಲ್ಲಲು ಕಂಸನಿಂದ ಆಜ್ಞಾಪಿತಳಾಗಿ, ನಂದನ ಅರಮನೆಗೆ ಬರುವ ಪೂತನಿ,  ಮಗುವಿಗೆ ವಿಷದ ಎದೆಹಾಲು ಕುಡಿಸುವ ಘಟನೆಗೆ ಮುನ್ನ,ಸಂದರ್ಭವನ್ನು ಹದ ಮಾಡಿಕೊಳ್ಳುವ ಬಗೆ-ಯಶೋದೆಯ ಬಳಿ ನಡೆದುಕೊಳ್ಳುವ ಪರಿ ಬಹು ಸಹಜವಾಗಿ ಚಿತ್ರಿತವಾಗಿದೆ. ಕಥೆ ಬೆಳೆಸುವ ನಿಟ್ಟಿನಲ್ಲಿ ನಡುನಡುವೆ ಹಾಸ್ಯದ ಪ್ರಸಂಗಗಳನ್ನು ನವಿರಾಗಿ ಹೆಣೆದಿರುವುದು ರಂಜನೀಯ. ಪ್ರೇಕ್ಷಕನನ್ನು ಹಿಡಿದಿಡುತ್ತ ಪ್ರಸಂಗ ಕುತೂಹಲಕರವಾಗಿ ಸಾಗುತ್ತದೆ. ಹಿಂದಿನಿಂದ ನಾವು ಕೇಳಿಕೊಂಡು ಬಂದಿರುವ ಸಾಂಪ್ರದಾಯಕ ಕಥೆಯಂತಿರದೆ,ಇಲ್ಲಿನ ಪೂತನಿ ಮಗುವನ್ನು ವಿಷದ ಹಾಲೂಡಿಸಿ ಕೊಲ್ಲುವ ಪ್ರಯತ್ನದಲ್ಲಿ ತನ್ನ ಉದ್ದೇಶವನ್ನೇ ಮರೆತು, ಮಗುವಿನ ಸ್ಪರ್ಶ ಸುಖದಲ್ಲಿ ತಾಯ್ತನದ     ಆನಂದಿಂದ ಮೈಮರೆಯುತ್ತಾಳೆ,ಮತ್ತೆ ಮತ್ತೆ ಆ ವಿನೂತನ ಸುಖ ಅನುಭವಿಸಿ ಧನ್ಯಳಾಗಿ,ಮುಕ್ತಿಯನ್ನು ಪಡೆಯುತ್ತಾಳೆ ಎಂಬ ಹೊಸ ದೃಷ್ಟಿ ನೀಡುವ ಈ ಪ್ರಕರಣ ಆಸಕ್ತಿಕರವಾಗಿದೆ. ಅಭಿನಯದಲ್ಲಂತೂ ಪ್ರಭಾಕರ ಅವರು ಮನ ಮುಟ್ಟುವುದರಲ್ಲಿ ಸಫಲರು. ರೌದ್ರ-ಲಾಸ್ಯ, ಭಾವ-ವಿಭಾವಗಳ ಅಭಿವ್ಯಕ್ತಿ ಅಮೋಘ.  ಮೇಲಿನೆರಡು ಪ್ರಸಂಗಗಳು ಏಕ ವ್ಯಕ್ತಿ ಪ್ರದರ್ಶನವಾದರೆ, “ಮಂಥರೆಯ ದುರ್ಮಂತ್ರ” ಯುಗಳ ಪಾತ್ರಾಭಿನಯದ ಒಂದು ಅದ್ಭುತ ದೃಶ್ಯ ಕಾವ್ಯವೆಂದರೆ ಅತಿಶಯೋಕ್ತಿಯಲ್ಲ.

ಸುಮಾರು 250 ವರ್ಷಗಳ ಹಿಂದೆ ಪಾತ್ರ ಸುಬ್ಬ ವಿರಚಿತ ‘ಪಟ್ಟಾಭಿಷೇಕ’ದಿಂದ ಆಯ್ದುಕೊಂಡ ಭಾಗ. ಕೌಸಲ್ಯೆಯ ಮಗ ರಾಮನಿಗೆ ವನವಾಸ,ಕೈಕೇಯಿಯ ಮಗ ಭರತನಿಗೆ ಪಟ್ಟ ಸಿಗಬೇಕೆಂಬ ದುರುದ್ದೇಶದಿಂದ ಕುಬ್ಜೆ ಮಂಥರೆ,ಕೈಕೇಯಿಗೆ ದುರ್ಬೋಧನೆ ಮಾಡುವ ಘಟನೆಯ ಸುತ್ತ ಹೆಣೆಯಲಾದ ಪ್ರಸಂಗ. ಪರಂಪರಾನುಗತ ಕೇಳಿದ ಕಥೆಗೊಂದು ಹೊಸ ಆಯಾಮ ಇಲ್ಲಿ ಪ್ರಾಪ್ತವಾಗಿದೆ. ಕೈಕೇಯಿಯ ಮನಸ್ಸಿಗೆ ವಿಷ ಹಿಂಡುವ ವಿವಿಧ ಪ್ರಯತ್ನ,ಅದಕ್ಕೆ ಬಗ್ಗದ ಸುಮನಸ್ಸಿನ ಕೈಕೇಯಿ ಪಾತ್ರ ಮನಮಿಡಿಯುವಂತಿದೆ. ಕಡೆಗೂ ಮಂಥರೆ ಅವಳ ಮನಸ್ಸನ್ನು ಕೆಡಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ಈ ಇಬ್ಬರ ಪಾತ್ರಚಿತ್ರಣವನ್ನು ಕವಿ ಬಹು ಸೊಗಸಾಗಿ ಮೂಡಿಸಿದ್ದಾನೆ. ಯಥಾಪ್ರಕಾರ ಕೈಕೇಯಿಯಾಗಿ ಪ್ರಭಾಕರ್ ಅವರದು ಅತ್ಯತ್ತಮ ಅಭಿನಯ. ಮಂಥರೆಯ ಪಾತ್ರದಲ್ಲಿ   ಚಪ್ಪರಮನೆ ಶ್ರೀಧರ ಹೆಗಡೆ ಅವರು ನೋಡುಗರನ್ನು ಮೋಡಿ ಮಾಡಿಬಿಡುತ್ತಾರೆ. ಅವಳ ಮನಸ್ಸಿನ ಪ್ರತಿರೂಪ ಬಿಂಬಿಸುವ ಮುಖಚಹರೆ,ಭಾವಾಭಿವ್ಯಕ್ತಿ, ವಿಶಿಷ್ಟ ಹೆಜ್ಜೆಗಳನ್ನು ಹಾಕುವ ಧಾಟಿ-ಕುಣಿತವಂತೂ ಮಾತಿಗೂ ಮೀರಿದ್ದು. ಅತ್ಯದ್ಭುತ ಪ್ರತಿಭೆಯ ಕಲಾವಿದ.ಪ್ರತಿಯೊಬ್ಬರೂ ಈ ಯುಗಳ ಅಭಿನಯದ ಪ್ರಸಂಗವನ್ನು ನೋಡಲೇಬೇಕು. ಕಥೆಯ ಅಂತ್ಯ ಮನ ಕಲಕುವಂಥದ್ದು. ಭಾಗವತರಾಗಿ ವಿದ್ವಾನ್ ಗಣಪತಿ ಭಟ್,ಮದ್ದಲೆಯಲ್ಲಿ ಅನಂತಪದ್ಮನಾಭ ಪಾಠಕ್, ಚಂಡೆ ಕೃಷ್ಣ ಯಾಜಿ ಸಮರ್ಥವಾಗಿ ಪ್ರದರ್ಶನಕ್ಕೆ ಇಂಬು ನೀಡಿದರು. ‘ಸರ್ವಸ್ವ’-ತಂಡ ಕಾರ್ಯಕ್ರಮ ಆಯೋಜಿಸಿತ್ತು.

‍ಲೇಖಕರು avadhi

26 March, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading