ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೆಂಥ ಆಟ ಆಡಿದಿರೋ ಹುಡುಗರಾ!

ರಾಷ್ಟ್ರೀಯ ಕ್ರೀಡೆಗೆ ಬಂಗಾರ ತೊಡಿಸಿದಂತೆ…

ರಮಾಕಾಂತ್‌ ಆರ್ಯನ್

ಗೆಲುವಿನ ಶಿಲ್ಪಿ ಒಡಿಶಾದ ಕ್ರೀಡಾ ಕ್ರಾಂತಿಕಾರಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್! 41 ವರ್ಷಗಳ ಹಾಕಿ ಬರಡು ಭೂಮಿಯಲ್ಲಿ ಬಂಗಾರದಂಥ ಆಟವಾಡಿ ಕಂಚು ಗೆದ್ದ ಹೆಮ್ಮೆಯ ಹಾಕಿ ಹುಡುಗರು. ಅದೇಕೋ ಗೊತ್ತಿಲ್ಲ ಈ ಹುಡುಗರ ಗೆಲುವು ಕಂಡು ಕಣ್ಣಾಲಿಗಳು ತುಂಬಿ ಬಂದಿದ್ದವು. ಇದು ನನಗೊಬ್ಬನಿಗೇನಾ? ಗೊತ್ತಿಲ್ಲ. ಇದು ಒಲಿಂಪಿಕ್​ನ ವಿಸ್ಮಯವೆನಿಸಬಹುದು. ಕೆಲವು ಗೆಲುವುಗಳು ಹಾಗೇ, ನಿಮ್ಮನ್ನ ಕೇಳದೆಯೇ ನಿಮ್ಮ ಕಣ್ಣುಗಳಲ್ಲಿ ಆನಂದಭಾಷ್ಪ, ಗೊತ್ತೇ ಆಗದಂತೆ ಗಂಟಲಸೆರೆ ಉಬ್ಬಿ ಬಂದು, ಮಾತೇ ಹೊರಡಲಾರದಷ್ಟು ಗದ್ಗದಿತ! ತುಟಿಯಂಚಿನಲ್ಲಿ ಒಂದು ಹೆಮ್ಮೆಯ ನಗೆ! ಜೀವನದಲ್ಲಿ ಕಣ್ಣೀರು ಮತ್ತು ನಗು ಒಟ್ಟಾಗುವ ಅಪರೂಪದ ಕ್ಷಣಗಳವು.

ಅಂತ ಕ್ಷಣಗಳನ್ನ ಸೂರ್ಯೋದಯದ ನಾಡು ಜಪಾನ್​ನ ಟೋಕಿಯೋದಲ್ಲಿ ನಮಗಾಗಿ ಕಟ್ಟಿಕೊಟ್ಟವರು ಭಾರತದ ಹೆಮ್ಮೆಯ ಹಾಕಿ ಹುಡುಗರು.
ಈಗ ಎಲ್ಲರೂ ಬದಾಯಿ ಹೋ, ಕಂಗ್ರಾಜುಲೇಷನ್ಸ್, ಹೇಳುತ್ತಿದ್ದಾರೆ. ಆದರೆ ಇದೇ ಹಾಕಿ ಹುಡುಗರು ಕೇವಲ ಎರಡೂವರೆ ವರ್ಷಗಳ ಹಿಂದೆ ಒಬ್ಬ ಪ್ರಾಯೋಜಕರೂ ಸಿಗದೇ, ಆಲ್​ ಮೋಸ್ಟ್ ಬೀದಿಯಲ್ಲಿ ನಿಂತಿದ್ದರು. ಅದೇಕೋ ಸಹಾರಾ ಇದ್ದಕ್ಕಿದ್ದಂತೆ ಹಾಕಿಗೆ ಪ್ರಾಯೋಜಕನಾಗುವುದಿಲ್ಲ ಎಂದು ಎದ್ದು ನಡೆದಿತ್ತು.

ಭಾರತದ ರಾಷ್ಟ್ರೀಯ ಕ್ರೀಡೆ ಆಡುವ ಹುಡುಗರು ಮತ್ತು ಹುಡುಗಿಯರು ದಿಗ್ಭ್ರಾಂತರಾಗಿ ಹೋಗಿದ್ದರು. 1980 ರಲ್ಲಿ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಬಂದಿದ್ದೇ ಕೊನೆ, ಆಮೇಲೆ ಭಾರತ, ಸೋಲಿನ ಮೇಲೆ ಸೋಲು, ಅವಮಾನದ ಮೇಲೆ ಅವಮಾನ ಅನುಭವಿಸಿ ಜರ್ಝರಿತವಾಗಿತ್ತು. ಪ್ರೋತ್ಸಾಹ, ಕೋಚ್, ಆಸಕ್ತಿಯ ಕೊರತೆಗಳು ಟೀಂ ಇಂಡಿಯಾವನ್ನ ಕೊರೆದುಬಿಟ್ಟಿದ್ದವು. ಬೇಡದ ರಾಜಕೀಯ, ಹಾಕಿಯನ್ನ ನುಂಗಿ ಹಾಕಿತ್ತು.

2018ರಲ್ಲಿ ಇಂತಹ ಕ್ರೀಡೆಯನ್ನ ಮೇಲೆತ್ತಲೇಬೇಕೆಂದು ಜಿದ್ದಿಗೆ ಬಿದ್ದವರಂತೆ ಮೇಲೆದ್ದವರು ನವೀನ್ ಪಟ್ನಾಯಕ್ ಎಂಬ ಪ್ರಚಾರ ಬಯಸದ ಮುಖ್ಯಮಂತ್ರಿ. ಇವತ್ತಿಗೂ ಅಷ್ಟೇ, ಭಾರತ, ಜರ್ಮನಿಯನ್ನ ಸೋಲಿಸಿ ಪದಕದ ಬೇಟೆಯಾಡಿದರೂ ಪಟ್ನಾಯಕ್ ಬೀಗಲಿಲ್ಲ, ಅರಚಲಿಲ್ಲ, ಕಿರುಚಲಿಲ್ಲ, ಪ್ರಚಾರದ ಹಿಂದೆ ಬೀಳಲಿಲ್ಲ. ಅವರ ಮುಖದಲ್ಲಿ ಕಂಡಿದ್ದು ಒಂದು ಶುಭಾಶಯ ಮತ್ತೊಂದು ಸಾರ್ಥಕ ನಗು ಅಷ್ಟೇ!
1980 ರಲ್ಲಿ ಅದೆಷ್ಟೋ ದೇಶಗಳು ಒಲಿಂಪಿಕ್​ ಅನ್ನ ಬಹಿಷ್ಕರಿಸಿದ್ದವು.

ಭಾರತ ಪದಕ ಗೆದ್ದಿತ್ತು. ಬಂಡವಾಳಶಾಹಿ ಅಮೆರಿಕ ಮತ್ತು ಸಮಾಜವಾದಿ ರಷ್ಯಾ ನಡುವೆ ಕೋಲ್ಡ್ ವಾರ್ ಚಾಲ್ತಿಯಲ್ಲಿತ್ತು. ಎರಡನೇ ಮಹಾಯುದ್ಧದ ಹ್ಯಾಂಗ್ ಓವರ್ ಇನ್ನೂ ಮುಗಿದಿರಲಿಲ್ಲ. ಭಾರತದಲ್ಲಿ ತುರ್ತುಪರಿಸ್ಥಿತಿ ನಂತರದ ಜನತಾ ಪರಿವಾರ ಸರ್ಕಾರದ ಪ್ರಯೋಗ ಮುಗಿದು ಮತ್ತೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಕೇವಲ 6 ತಿಂಗಳು ಕಳೆದಿತ್ತಷ್ಟೇ.

ಒರಿಸ್ಸಾದಲ್ಲಿ ಆಗ ಕಾಂಗ್ರೆಸ್ ನ ಜಾನಕಿ ಬಲ್ಲಭ್ ಪಟ್ನಾಯಕ್ ಸಿಎಂ ಆಗಿದ್ದರು. ಅದಾಗಿ 41 ವರ್ಷಗಳು ಉರುಳಿವೆ. ಬಿಜು ಜನತಾದಳದ ನವೀನ್ ಪಟ್ನಾಯಕ್ ಈಗ ಎರಡು ದಶಕದ ಅವಧಿಗೆ ಒಡಿಶಾದ ದಾಖಲೆಯ ಸಿಎಂ. ಭಾರತದ ಪದಕದ ಬರ ನೀಗಲು ಇದೇ ವ್ಯಕ್ತಿ ಎದ್ದು ಬಂದರು. ಇವರನ್ನ ಸ್ಮರಿಸದೇ ಇರಲು ಅದೇಕೋ ಸಾಧ್ಯವೇ ಇಲ್ಲ. ಮುಳುಗಿತ್ತಿದ್ದ ಹಾಕಿ ಎಂಬ ಹಾಯಿ ದೋಣಿಗೆ ಹುಟ್ಟಾದವರು ಪಟ್ನಾಯಕ್!

ಒಡಿಶಾ ಸರ್ಕಾರ, ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಪ್ರಾಯೋಜಕತ್ವ ನನಗಿರಲಿ, ಈ ದೇಶದ ಹೆಮ್ಮೆಯ ಹಾಕಿ ಕ್ರೀಡೆಯನ್ನ ನಾನು ಮೇಲೆತ್ತುವ ಶಪಥ ಮಾಡುತ್ತೇನೆ ಎಂದು ಎದ್ದು ನಿಂತಿತು. ಎಂಥೆಂಥ ದೂರಗಾಮಿ ಯೋಜನೆ ರೂಪಿಸಿದರು ಗೊತ್ತಾ ಪಟ್ನಾಯಕ್?
ನವೀನ್ ಪಟ್ನಾಯಕ್ ಡೂನ್ ಸ್ಕೂಲ್ ನಲ್ಲಿ ಓದಬೇಕಾದರೆ ಖುದ್ದು ಹಾಕಿ ಆಟಗಾರ ಮತ್ತು ಗೋಲ್ ಕೀಪರ್. ಅದೇ ಪ್ರೀತಿ, ಇವತ್ತು ಭಾರತಕ್ಕೆ ಕಂಚಿನ ಪದಕ ಕೊಡಿಸಿದ್ದು ಮತ್ತು ಇದಕ್ಕೆ ದಾಖಲೆ ಎನ್ನುತ್ತಾರೆ.

ಸ್ಪಾನ್ಸರ್ ಸಿಗದೇ ಹೋದರೆ ಅವರಿಗೆ ಸ್ಪರ್ಧಾತ್ಮಕ ಪಂದ್ಯಗಳೇ ಸಿಗುವುದಿಲ್ಲ ಎಂದು ಅರ್ಥ. ಪಂದ್ಯಗಳಿಲ್ಲದೇ ಹೋದರೆ, ಬೇರೆ ಬೇರೆ ದೇಶಗಳೊಂದಿಗೆ ಆಡದೇ ಹೋದರೆ, ಕೌಶಲ್ಯಗಳ ಅರಿವು ಮತ್ತು ವಿನಿಮಯವಾಗುವುದೇ ಇಲ್ಲ. ಆಟ, ವಿಶ್ಲೇಷಣೆ Upgrade ಆಗಲಿಕ್ಕೆ ಅವಕಾಶವೇ ಸಿಗುವುದಿಲ್ಲ. ಗಾಳಿ, ಬಿಸಿಲು, ನೀರು ಸಿಗದಂತ ಸಸಿಗಳಾಗಿಬಿಡುತ್ತಾರೆ ಆಟಗಾರರು. ನವೀನ್ ಪಟ್ನಾಯಕ್ ಪ್ರಾಯೋಜಕತ್ವಕ್ಕೆ ಮುಂದಾದರು ಮತ್ತು ಹಾಕಿ ಇಂಡಿಯಾದೊಂದಿಗೆ 5 ವರ್ಷಗಳ ಅವಧಿಗೆ 150 ಕೋಟಿ ರುಪಾಯಿಗಳ ಒಪ್ಪಂದ ಮಾಡಿಕೊಂಡರು. ಇದು ಭಾರತದ ಇತಿಹಾಸದಲ್ಲಿ ರಾಜ್ಯ ಸರ್ಕಾರವೊಂದು ರಾಷ್ಟ್ರೀಯ ತಂಡಕ್ಕೆ ಪ್ರಾಯೋಜಕತ್ವ ಮಾಡಿದ ಮೊದಲ ಉದಾಹರಣೆ ಮತ್ತು ವಿಪರ್ಯಾಸ!

ಟಾಟಾ ಗ್ರೂಪ್​ ನೊಂದಿಗೆ ಕೈಜೋಡಿಸಿದ ಪಟ್ನಾಯಕ್ ರ ಸರ್ಕಾರ, ಭುವನೇಶ್ವರಮ್ ನ ಕಳಿಂಗದಲ್ಲಿ Odisha Naval Tata Hockey High-Performance Centre (HPC) ಸ್ಟೇಡಿಯಮ್ ಕಟ್ಟುತ್ತದೆ. ಹೊಸ ಪ್ರತಿಭೆಗಳ ಶೋಧ ಮತ್ತು ವಿಶ್ವದರ್ಜೆಯ ಹಾಕಿ ಆಟಗಾರರ ಕಾರ್ಖಾನೆ ಅಂದೇ ಶುರುವಾಗಿದ್ದು!

12 ಬೇರು ಮಟ್ಟದ ತರಬೇತಿ ಕೇಂದ್ರಗಳು ಒಲಿಂಪಿಕ್ ಪದಕವನ್ನ ಜೀವಿಸಲಿಕ್ಕೆ ಶುರು ಮಾಡಿದವು! ಕ್ರೀಡಾಪಟುಗಳಿಗೆ ಹಾಕಿ ಕಾಂಪ್ಲೆಕ್ಸ್ ನಲ್ಲಿ ಅನ್ನ ಮತ್ತು ಆಶ್ರಯ ಕೊಟ್ಟು ತರಬೇತಿ ಕೊಡಿಸಿದರು ಸಿಎಂ ಪಟ್ನಾಯಕ್. 2500 ಕ್ಕಿಂತಲೂ ಹೆಚ್ಚಿನ ತರಬೇತುದಾರರೂ ಅಲ್ಲಿ ಪಳಗಿದರು. ಒಲಿಂಪಿಕ್ ಪದಕಕ್ಕೆ ಲೋಹ, ಹದ ಮಾಡುವುದೆಂದರೆ ಹೀಗಲ್ಲವೇ?

ಇದೇ ಜವಾಬ್ದಾರಿಯೊಂದಿಗೇ ಭಾರತ International Hockey Federation ಪುರುಷರ ಸೀರೀಸ್ ಫೈನಲ್​ಗೆ ಏರುವಂತಾಯಿತು. ಅಲ್ಲದೇ 2019ರ ಒಲಿಂಪಿಕ್ ಹಾಕಿ ಕ್ವಾಲಿಫೈಯರ್ ಮತ್ತು 2020 FIH pro League ಮೇಲೆ ನಿಗಾ ಇರಿಸಿದ್ದು ಇದೇ ನವೀನ್ ಪಟ್ನಾಯಕ್. ಕಷ್ಟ ಕಾಲದಲ್ಲಿ ಕೈಹಿಡಿದವರನ್ನ ಮರೆಯಬಾರದು. ಅವರನ್ನ ಮೆರೆಸುವ ಸಂದರ್ಭ ಇದು.

ಕಳೆದ 5 ವರ್ಷಗಳಲ್ಲಿ ಹಾಕಿ ವಿಷಯದಲ್ಲಿ ಒಡಿಶಾ ಮೈಮರೆಯಲೇ ಇಲ್ಲ. 2018ರ ವಿಶ್ವಕಪ್ ಹಾಕಿಗೆ ಒಡಿಶಾದಲ್ಲಿಯೇ ತೋರಣ ಕಟ್ಟಿದ್ದು. 2014ರ ಚಾಂಪಿಯನ್ಸ್ ಟ್ರೋಫಿಗೆ ರತ್ನಗಂಬಳಿ ಹಾಸಿದ್ದು ಇದೇ ಒಡಿಶಾ. 2017ರ ವರ್ಲ್ಡ್ ಲೀಗ್ ಫೈನಲ್​ಗೆ ಸ್ವಾಗತ ಸಾರಿದ್ದು ಇದೇ ಒಡಿಶಾ. ಗೆದ್ದೆತ್ತಿನ ಬಾಲ ಹಿಡಿದು, ಮೀಸೇ ನೀವಿಕೊಳ್ಳುವ ಹುಂಬರ ನಡುವೆ ಬಿದ್ದೆತ್ತಿನ ಬಾಲ ಹಿಡಿದೆತ್ತಿ ಪಂದ್ಯದ ಜೊತೆಗೆ ಭಾರತೀಯರ ಹೃದಯ ಗೆದ್ದವರು ಒಡಿಶಾ ಸಿಎಂ!

ನಿಮಗೆ ಗೊತ್ತಿರಲಿ 2023 ಪುರುಷರ ಹಾಕಿ ವಿಶ್ವಕಪ್​ಗೆ ಇದೇ ಭುವನೇಶ್ವರ ಮತ್ತು ರೂರ್​ಕೆಲಾವೇ ಮೈದಾನ. ರೂರ್​ಕೆಲಾದಲ್ಲಿ ಭಾರತದ ಅತೀದೊಡ್ಡ ಹಾಕಿ ಮೈದಾನವನ್ನ ಕಟ್ಟುತ್ತಿದ್ದಾರೆ. ಸೀಟಿಂಗ್ ಕೆಪಾಸಿಟಿ 20000! ಇದಕ್ಕೆ ಇದೇ ನವೀನ್ ಪಟ್ನಾಯಕ್ ತಮ್ಮ ಹೆಸರನ್ನ ಇಟ್ಟುಕೊಂಡಿದ್ದರೂ ಯಾರೂ ಕೇಳುತ್ತಿರಲಿಲ್ಲ. ಆದರೆ ಅವರು ಇಡುತ್ತಿರುವುದು ಆದಿವಾಸಿ ಜನಾಂಗದ ವೀರ ಹೋರಟಗಾರ, ಕೆಚ್ಚೆದೆಯ ಕ್ರಾಂತಿಕಾರಿ ಬಿರ್ಸಾ ಮುಂಡಾನ ಹೆಸರು. ದೇಶಪ್ರೇಮ ಹೀಗು ಪ್ರಕಟಗೊಳ್ಳುತ್ತದೆ.

ಸುಂದರ್​ಗಡ್ ಜಿಲ್ಲೆಯ 17 ಬ್ಲಾಕ್​ಗಳಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಹಾಸಲಾಗುತ್ತಿದೆ. ರಾಜ್ಯದ 20 ಸ್ಪೋರ್ಟ್ಸ್ ಹಾಸ್ಟೆಲ್​ಗಳ ಪೈಕಿ 2 ಹಾಕಿಗಾಗಿ ಮೀಸಲು. ರಾಷ್ಟ್ರೀಯ ಕ್ರೀಡೆಗೆ ಇದು ರಾಷ್ಟ್ರ ಪ್ರೇಮದ ಗೌರವ. ನಂಬಿ ಒಡಿಶಾ, ಭಾರತದ ಹೊಸ ಕ್ರೀಡಾ ರಾಜಧಾನಿ.

ಭಾರತದ ಸಿಂಹಿಣಿಯರು, ಮೂರು ಬಾರಿಯ ವಿಶ್ವ ಚಾಂಪಿಯನ್, ಬಲಿಷ್ಠ ಆಸ್ಟ್ರೇಲಿಯಾವನ್ನ ಒಲಿಂಪಿಕ್ ಕ್ವಾರ್ಟರ್ ಫೈನಲ್​ ನಲ್ಲಿ ಕುಟ್ಟಿ ಕೆಡವಿದಾಗ, ಕೆಚ್ಚೆದೆಯ ಜರ್ಮನ್ನರನ್ನ ಭಾರತದ ಸಿಂಹಗಳು ಕಂಚಿನ ಪದಕದ ಪಂದ್ಯದಲ್ಲಿ ಸೀಳಿ ಹಾಕಿದಾಗ, ಅವರ ಎದೆಯ ಮೇಲೆ BOLD LETTER ನಲ್ಲಿ ರಾರಾಜಿಸಿದ್ದು ಒಡಿಶಾ ಎಂಬ ರಾಜ್ಯದ ಹೆಸರು! ಎಷ್ಟೊಂದು ಹೆಮ್ಮೆಯಲ್ಲವಾ, ತಾವು ನೆಟ್ಟು ಬೆಳೆಸಿದ ಮರ ಫಲ ಕೊಟ್ಟಾಗ!
ಭಾರತದ ಹಾಕಿ ಹುಡುಗರು ಮತ್ತು ಹುಡುಗಿಯರು, ಕಮೆಂಟೇಟರ್ಸ್ ಕಣ್ಣೀರು ಸುರಿಸುವಂತೆ, ಮಾಜಿ ಕೋಚ್​ಗಳು ಭಾವುಕರಾಗುವಂತೆ ಆಡಿದರು. ಇಡೀ ದೇಶ ಹೆಮ್ಮೆಯಿಂದ ಹಾಕಿ ಅಂಗಳದಲ್ಲಿ ತಮ್ಮ ತ್ರಿವರ್ಣ ಹಾರುವುದನ್ನ ಕಂಡು ಭಾವಪರವಶರಾಗುವಂತೆ ಮಾಡಿದರು. ರಾಣಿ ತಂಡಕ್ಕೆ ಮತ್ತು ಮನ್​ಪ್ರೀತ್ ಸಿಂಗ್ ಟೀಮ್​ಗೆ ದೇಶ ಆಭಾರಿ.

ಗೋಲ್​ಕೀಪರ್ ಸವಿತಾ ಮತ್ತು ಪಿ ಆರ್ ಶ್ರೀಜೇಶ್ರನ್ನ ಭಾರತ ಮರೆಯದು. ಪರಟ್ಟು ರವೀಂದ್ರನ್ ಶ್ರೀಜೇಶ್, ನನಗೆ ಓಟ್ ಹಾಕುವ ಅವಕಾಶ ಸಿಕ್ಕರೆ ವಿಶ್ವದ ಶ್ರೇಷ್ಠ ಗೋಲ್​ಕೀಪರ್ ಸ್ಥಾನಕ್ಕೆ ನೀವು ನನ್ನ ಆಯ್ಕೆ. ನೀವು ತಂದ ಕಂಚಿನ ಪದಕವನ್ನ ನವೀನ್ ಪಟ್ನಾಯಕ್ ಎಂಬ ಕ್ರೀಡಾ ಕ್ಷೇತ್ರದ ಬಂಗಾರದ ಮನುಷ್ಯನಿಗೆ ತೊಡಿಸಿ. ಪದಕದ ತೂಕ ಹೆಚ್ಚುತ್ತದೆ.

‍ಲೇಖಕರು Admin

6 August, 2021

1 Comment

  1. T S SHRAVANA KUMARI

    ಓದಿ ಮುಗಿಸುವಾಗ ನನ್ನ ಕಣ್ಣಲ್ಲೂ ಕಂಬನಿ ಜಿನುಗಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading