ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೂ…ನನ್ನ ಬುಕ್ಕು…ಓದಿದ್ರಾ…

-ಸಮತಾ ಆರ್

ಮೊನ್ನೆ ಗೆಳತಿಯೊಬ್ಬಳಿಗೆ ಕರೆ ಮಾಡಿ ಎಂದಿನಂತೆ ಹರಟುತ್ತಿದ್ದಾಗ ಇದ್ದಕ್ಕಿದ್ದಂತೆ ಏನೋ ನೆನಪಾಗಿ “ಲೇ ನನ್ನ ಎರಡನೇ ಪುಸ್ತಕ ಕಳಿಸಿದ್ದೆನಲ್ಲ, ಸಿಕ್ಕಿತ? ಆಗಲೇ ಹದಿನೈದು ದಿನವಾಯಿತು, ನೀನು ಏನೂ ರಿಪ್ಲೈ ಕೊಡಲೇ ಇಲ್ಲ, ಓದಿದೆಯ?” ಎಂದು ಒಂದೇ ಉಸಿರಿಗೆ ಕುತೂಹಲದಿಂದ ಕೇಳಿದೆ. ಅವಳಿಗೆ ರುಂ ಎಂದು ಸಿಟ್ಟು ಬಂದು ಬಿಟ್ಟಿತು. “ಏನೇ ನಿಂದು ಕಾಟ! ಯಾವಾಗ ಫೋನ್ ಮಾಡಿದ್ರು ಅದು ಓದಿದೆಯ, ಇದು ಓದಿದೆಯ ಅಂತ ಜೀವ ತಿನ್ನುತ್ತಿಯ. ನಿಂಗಂತು ಮಾಡಕೆ ಬೇರೆ ಕೆಲ್ಸಿಲ್ಲ. ತಟ್ಟೆ, ಲೋಟ, ಚೆಂಬು, ಚಮಚ ಅಂತೆಲ್ಲ ಬರೆದು ಬರೆದು ಎಸಿತಿಯ, ಅದೆಲ್ಲ ಯಾವಳು ಓದ್ತಾಳೆ! ಏನೋ ಅಪರೂಪಕ್ಕೆ ಫೋನ್ ಮಾಡಿದಿಯ ಮಾತಾಡೋದ್ ಬಿಟ್ಟು ಓದ್ಯ, ಓದ್ಯಾ ಅಂತ ಬಡ್ಕೊತಿಯ” ಎಂದು ಬೈದೇ ಬಿಟ್ಟಳು. ಆದರೂ ನಾನು ಛಲ ಬಿಡದೆ “ಏನ್ ಫ್ರೆಂಡೆ ನೀನು! ಏನೋ ಗೆಳತಿ ಪುಸ್ತಕ ಬರಿತಾಳೆ, ಓದುವ, ಪ್ರೋತ್ಸಾಹ ಕೊಡುವ ಅನ್ನೋ ಮಾತೇ ಇಲ್ವಲ್ಲ, ಎಂಥಾ ದುರಂತ” ಎಂದು ತಿರುಗಿಸಿ ಕೇಳಿದೆ. ಅವಳಿಗೆ ಈಗ ನಗು “ನೋಡೇ, ನೀನು ಹೀಗೆ ಓದು ಓದು ಅಂತ ಜೀವ ತಿಂದ್ರೆ ಫೇಸ್ ಬುಕ್ ವಾಲಲ್ಲಿ ನಿನ್ನ ಪುಸ್ತಕ ಹಾಕ್ಕೊಂಡಿದ್ದಿಯಲ್ಲ ಅಲ್ಲಿಲೈಕ್ ಕೊಟ್ಟು, ‘ಇವಳ ಕಾಟ ತಾಳಲಾರದೇ ಈ ಬುಕ್ಕಿಗೆ ಲೈಕ್, ಕಾಮೆಂಟ್ ಕೊಡ್ತಾ ಇದ್ದೀನಿ’ ಅಂತ ಕಾಮೆಂಟ್ ಹಾಕಿಬಿಡ್ತೀನಿ, ವಾಟ್ಸಾಪ್ ಸ್ಟೇಟಸ್ ಗು ಹಾಕಿಬಿಡ್ತೀನಿ” ಎಂದು ಹೆದರಿಸಿದಳು. ನನಗೆ ರೇಗಿ ಹೋಯಿತು.

“ಲೆ ಚೆಕ್ ಬುಕ್ಕು, ಟೆಕ್ಸ್ಟ್ ಬುಕ್ಕು ಬಿಟ್ಟು ಬೇರೆ ಪುಸ್ತಕ ಓದಿ ಗೊತ್ತಿಲ್ಲದ ನಿನಗೆ ಸಾಹಿತ್ಯ ಅಂದ್ರೆ ಏನು ಗೊತ್ತು, ಒಂಚೂರು ಪಾರು ಓದಿ ಒಂದಿಷ್ಟು ಒಳ್ಳೇ ಬುದ್ಧಿ ಕಲಿ” ಎಂದು ಉಪದೇಶಿಸಿದ್ದಕ್ಕೆ “ಈಗ್ಲೇ ಒಂದೂರಿಗೆ ಹಂಚೋವಷ್ಟು ಒಳ್ಳೇ ಬುದ್ಧಿ ಇದೆ ಬಿಡೆ, ಇನ್ನೂ ಕಲಿತು ಏನಾಗಬೇಕು” ಎಂದು ಗಹಗಹಿಸಿ ನಕ್ಕಳು. ಇವಳನ್ನು ಪುಸ್ತಕ ಓದಲು ಒಪ್ಪಿಸುವುದು ಒಂದೇ ದಿನಾ ಓಡಾಡುವ ಬಸ್ಸಲ್ಲಿ ಕಿಟಕಿ ಪಕ್ಕ ಸೀಟು ಸಿಗುವುದೂ ಒಂದೇ ಅನ್ನಿಸಿ ಕರೆ ಕತ್ತರಿಸಿ ನಿಟ್ಟುಸಿರು ಬಿಟ್ಟೆ.

ಬರೆಯುವುದು ಏನೋ ಸುಲಭ ಆದರೆ ಬರೆದದ್ದನ್ನು ಪುಸ್ತಕ ಮಾಡೋದು ಅತಿ ಕಷ್ಟ,ಪುಸ್ತಕ ಹೇಗೋ ಮಾಡಿಬಿಟ್ಟರು ಅದನ್ನು ಓದುವವರನ್ನು ಹುಡುಕುವುದು ಮಾತ್ರ ಬಾಂಬೆ ಐಐಟಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಸೀಟು ಗಿಟ್ಟಿಸುವಷ್ಟೇ ಕಠಿಣ.

ಏನೋ ಕರೋನ ಕಾಲದ ಕಡ್ಡಾಯ ರಜೆಯಲ್ಲಿ ಟೈಮ್ ಪಾಸಿಗೆ ಎಂದು ಶುರು ಹಚ್ಚಿಕೊಂಡ ಬರವಣಿಗೆ ಅಲ್ಲಿ ಇಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದಾಗ, ಅಂತರ್ಜಾಲ ಪತ್ರಿಕೆಗಳಲ್ಲಿ ಬಂದಾಗ ಹಿಗ್ಗೋ ಹಿಗ್ಗು. ಪ್ರಕಟವಾದ ಕೂಡಲೇ ಎಲ್ಲಾ ವಾಟ್ಸಪ್ ಗ್ರೂಪ್ ಗಳಿಗೆ, ಫೇಸ್ಬುಕ್ಕಿನಲ್ಲಿ ಶೇರಿಸಿ,ಸ್ಟೇಟಸ್ ಗೆ ಹಾಕಿ, ಆಗ್ಗಾಗ್ಗೆ ಎಷ್ಟು ಲೈಕ್ ಬಂದವು,ಎಷ್ಟು ಜನ ಸ್ಟೇಟಸ್ ನೋಡಿದ್ರು ಅಂತೆಲ್ಲ ಚೆಕ್ ಮಾಡಿ ಬೀಗಿದ್ದೂ ಆಯ್ತು.

ಹೀಗೆ ಬರೆಯುತ್ತ ಬರೆಯುತ್ತ ಎರಡು ಪುಸ್ತಕಕ್ಕೆ ಆಗುವಷ್ಟು ಸರಕಾಗಿ ಬಿಟ್ಟಿತು. ಮತ್ತಿನ್ನೇನು, ಬರೆದು ಬರೆದು ಗುಡ್ಡೆ ಹಾಕಿಕೊಂಡ ಲೇಖನದ ಸರಕನ್ನು ಸರಿಯಾಗಿ ವಿಲೇವಾರಿ ಮಾಡಬಾರದೇ! ಅದಕ್ಕೆಂದೇ ಪ್ರಕಾಶಕರ ಹುಡುಕಾಟ ಆರಂಭವಾಯಿತು. ಪುಸ್ತಕದ ಹಸ್ತಪ್ರತಿ ಸುಮಾರು ಪ್ರಕಾಶನಗಳಿಗೆ ಕಳಿಸಿದಾಗ ಕೆಲವೊಬ್ಬರಿಂದ ಮರಳಿ ಬಂದರೆ, ಇನ್ನೂ ಕೆಲವರಿಗೆ ಹಿಂದಿರುಗಿಸಲು ಕೂಡ ಪುರುಸೊತ್ತಿಲ್ಲ. ಆದರೂ ಯೂ ಟ್ಯೂಬ್ ನಲ್ಲಿ ದಿನವೂ ನೋಡಿರುವ ವ್ಯಕ್ತಿತ್ವ ವಿಕಸನದ ವಿಡಿಯೋಗಳು ತುಂಬುವ ಧೈರ್ಯ, ಆಶಾಭಾವವನ್ನು ವ್ಯರ್ಥವಾಗಲು ಬಿಡದೇ ಇನ್ನೂ ಹಲವಾರು ಪ್ರಕಾಶನಗಳ ಸಂಪರ್ಕಿಸಿದೆ. ನನ್ನ ಛಲದ ಬಲವೋ, ಪುಸ್ತಕದ ಗ್ರಹಗತಿಯೋ ಏನೋ ಒಂದು ಕೂಡಿ ಬಂದು ಮೊದಲ ಪುಸ್ತಕವನ್ನು ಪ್ರಸಿದ್ಧ ಪ್ರಕಾಶಕರೋರ್ವರು ಪ್ರಕಟಿಸಲು ಒಪ್ಪಿಕೊಂಡಾಗ ನನಗೆ ಹೃದಯಾಘಾತ ಆಗೋದೊಂದು ಬಾಕಿ.

ಮೊದಲೇ ಪ್ರಸಿದ್ಧ ಪ್ರಕಾಶನ, ಹಾಗಾಗಿ ಅವರು ಆ ವರ್ಷ ಒಪ್ಪಿಕೊಂಡ ಪುಸ್ತಕಗಳನ್ನೆಲ್ಲ ಪ್ರಕಟಿಸಿ ನಂತರ ನನ್ನ ಪುಸ್ತಕದ ಸರದಿ ಬಂದು ಪ್ರಕಟವಾದಾಗ ಸರಿಯಾಗಿ ಒಂಬತ್ತು ತಿಂಗಳು ಕಳೆದಿತ್ತು. ಗೆಳತಿಯೊಬ್ಬಳು “ಅಂತೂ ಇಂತೂ ನೋವು ತಿಂದು ಮಗು ಹಡೆದ ಹಾಗೆ ಆಯಿತು ಬಿಡು” ಎಂದು ನಕ್ಕಾಗ ಹಲ್ಲು ಮಸೆದುಕೊಂಡು ಸುಮ್ಮನಾಗಿದ್ದೆ.

ಮೊದಲ ಪುಸ್ತಕ ಸುಲಭವಾಗಿ ಆನ್ಲೈನ್ ನಲ್ಲಿ ಲಭ್ಯ ವಾಗುತ್ತಿದ್ದದ್ದರಿಂದ “ಸುಲಭಕ್ಕೆ ಕೈಗೆ ಸಿಗದ ಗೆಳೆಯ ಗೆಳತಿಯರು, ನೆಂಟರು ಇಷ್ಟರು ಆಸಕ್ತಿಯಿದ್ದರೆ ತೆಗೆದುಕೊಳ್ಳುವವರು ತೊಕ್ಕೊಳ್ಳಲ್ಲಿ” ಅಂತ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಪುಸ್ತಕದ ಲಿಂಕ್ ಅನ್ನು ಧಾರಾಳವಾಗಿ ಸೇರಿಸಿ ಬಿಟ್ಟೆ. ಇನ್ನು ಕೈಯಳತೆಗೆ ಸಿಗುತ್ತಿದ್ದ ಗೆಳೆಯ ಗೆಳತಿಯರು, ಅಕ್ಕಪಕ್ಕದವರು,ನೆಂಟರಿಷ್ಟರು, ಸಹೋದ್ಯೋಗಿಗಳು ಎಲ್ಲರಿಗೂ ಧಾರಾಳವಾಗಿ ಒಂದೊಂದು ಪ್ರತಿಯನ್ನು “ಓದಿ ಅಭಿಪ್ರಾಯಿಸಿ ಪ್ಲೀಸ್” ಎಂದು ಹಲ್ಲು ಕಿರಿತದೊಂದಿಗೆ ದಯಪಾಲಿಸಿದೆ.

ಪುಸ್ತಕ ಓದಿ ಅಭಿಪ್ರಾಯ ತಿಳಿಸಿದ ಕೆಲವರು “ಚೆನ್ನಾಗಿದೆ” ಎಂದು ಹೇಳಿದಾಗ ಹಿಗ್ಗಿನ ಜೊತೆಗೆ “ಪುಕ್ಕಟ್ಟೆ ಸಿಕ್ಕಿದ ಹಂಗಿಗೆ ಹೇಳ್ತಾ ಇದ್ದಾರೆನೋ” ಅನ್ನೋ ಅನುಮಾನದ ನೆರಳೂ ಸುಳಿದು ಹೋಯ್ತು. “ಏನೇ ಆಗಲಿ ಬಿಡು, ನಾನೂ ಒಂದು ಪುಸ್ತಕ ಬರೆದೆ ಲೇಖಕಿಯಾಗಿ ಬಿಟ್ಟೆ” ಅನ್ನೋ ಒಣ ಜಂಭವೂ ತಲೆಗೆ ಏರಿತು. ಯಾರೋ ಕರೆದು ಒಂದೆರಡು ಸಭೆಗಳಲ್ಲಿ ಶಾಲು, ಹಾರ, ಪೇಟ ಬೇರೆ ಕೊಟ್ಟು ಬಿಟ್ಟಾಗ ಹೆಮ್ಮೆಯ ಮತ್ತೂ ತಲೆಗೇರಿತು.

ಅಂತೂ ಮೊದಲ ಪುಸ್ತಕದ ಖುಷಿಯ ಅಲೆಗಳಲ್ಲಿ ತೇಲುವಾಗ ಪ್ರಕಟವಾಗದೆ ಉಳಿದ ಬರೆಹಗಳು “ಲೇ ಒಂದೇ ಒಂದು ಪುಸ್ತಕ ಬರೆದು ಯಾರಾದ್ರೂ ಲೇಖಕಿ ಆಗಲು ಸಾಧ್ಯವೇ, ನಮ್ಮನ್ನು ಕೂಡ ಬುಕ್ಕು ಮಾಡು, ಆಗ ನೋಡು ನೀನು ಲೇಖಕಿ” ಎಂದು ಚಾಲೆಂಜ್ ಮಾಡಿದವು. ಅದಕ್ಕೆ ತಕ್ಕ ಹಾಗೆ “ನಿಮ್ಮೂರಿನವರೇ ಒಬ್ಬರು ತಿಂಗಳೊಪ್ಪತ್ತಿನಲ್ಲಿ ಬುಕ್ಕು ಮಾಡಿ ಕೊಡ್ತಾರೆ” ಎಂದು ಲೇಖಕಿ ಗೆಳತಿಯೊಬ್ಬಳು ಪ್ರಕಾಶಕರ ಫೋನ್ ನಂಬರ್ ಕೊಟ್ಟಾಗ ಬುಕ್ಕು ಮಾಡದಿರಲು ಹೇಗೆ ಸಾಧ್ಯ?

ಸರಿ ಈ ಹೊಸ ಪ್ರಕಾಶಕರಿಗೆ ಕರೆ ಮಾಡಿ, “ಸಾರ್, ಅದೂ….ನಂದು…ಒಂದು…ಬುಕ್ಕು…,” ಎನ್ನುವಷ್ಟರಲ್ಲಿ ಅವರು “ಪುಸ್ತಕ ಮಾಡಬೇಕೆನಮ್ಮ, ಸರಿ ಟೈಪ್ ಮಾಡಿ ಪಿಡಿಎಫ್ ಮಾಡಿ ಕಳಿಸಿ” ಎಂದು ಬಿಟ್ಟಾಗ ನನಗೆ ಮಾತೇ ಹೊರಡದೆ ಒಂದ ಕ್ಷಣ ಬುದ್ಧಿಗೆ ಮಂಕು ಕವಿದು ಹೋಯಿತು. ‘ಇದು ಯಾವುದಾದರೂ ವಿದೇಶಿ ಫೌಂಡೇಶನ್ ನ ಉಚಿತ ದೇಣಿಗೆಯ ಪ್ರಕಾಶನವಿರ ಬಹುದೇ?’ ಅನ್ನುವ ಗುಮಾನಿಯೂ ಸುಳಿದು ಹೋಯಿತು. ಆದರೆ ಪ್ರಕಾಶಕರ ಅಚ್ಚಕನ್ನಡದ ಹೆಸರು ಕೇಳಿದ ನಂತರ ನನ್ನನ್ನು ನಾನು ಸಂಭಾಳಿಸಿಕೊಂಡು, ಈ ಕಾಲದಲ್ಲೂ ಇಂತಹ ಉದಾರ ಬುದ್ಧಿಯ ಕರ್ಣರನ್ನು ಸೃಷ್ಟಿಸಿರುವ ಬ್ರಹ್ಮನಿಗೆ ಮನದಲ್ಲೇ ನಮಿಸಿ,” ಹೂಂ ಸರ್, ನಿಮ್ಮ ಪ್ರಕಾಶನದ ವಿಳಾಸ ಇಲ್ಲ ಈ ಮೇಲ್ ಐಡಿ ಕೊಡಿ” ಎಂದು ಪಡೆದುಕೊಂಡು ಬರೆಹಗಳ ಕಳುಹಿಸಿಕೊಟ್ಟೆ.
ನಂತರ ಪುಸ್ತಕದ ಮುಖಪುಟದ ಆಯ್ಕೆ,ಕರಡಚ್ಚು ತಿದ್ದುವಿಕೆ, ಮುನ್ನುಡಿ, ಬೆನ್ನುಡಿ ಇತ್ಯಾದಿ ಇತ್ಯಾದಿಗಳೆಲ್ಲ ಬುಲ್ಲೆಟ್ ಟ್ರೈನ್ ವೇಗವನ್ನು ಹಿಮ್ಮೆಟ್ಟುವಷ್ಟು ವೇಗದಲ್ಲಿ ಜರುಗಿ, ಪುಸ್ತಕ ಪ್ರಕಟವಾಗಿಯೇ ಬಿಟ್ಟಿತು. ಪ್ರಕಾಶಕರು ಉದಾರವಾಗಿ ನೂರು ಪ್ರತಿಗಳನ್ನು ದಯಪಾಲಿಸಿಯೇ ಬಿಟ್ಟರು.

ಯಾವ ನೋವೂ ತಿನ್ನದೇ ಹಠಾತ್ತನೆ ಮಡಿಲಿಗೆ ಬಂದು ಬಿದ್ದ ಸಿಸೇರಿಯನ್ ಬೇಬಿಯ ಕಂಡು ದಿಗಿಲಾದ ಹೊಸ ತಾಯಿಯಂತೆ ನನಗೂ ಸಂಭ್ರಮ ಸಡಗರಗಳ ಜೊತೆಗೆ ‘ಈ ಪುಸ್ತಕಕ್ಕೆ ಓದುಗರು ಸಿಗುವರೆ?’ ಅನ್ನುವ ಆತಂಕವೂ ಜೊತೆ ಜೊತೆಗೆ.

“ಪ್ರಕಾಶಕರ ಬಳಿ ಇರುವ ಪ್ರತಿಗಳ ವಿಲೇವಾರಿ ಅವರ ತಲೆನೋವು ಬಿಡು.ನನ್ನ ಹತ್ತಿರ ಇರುವವುಗಳನ್ನೆ ಓದುವ ಆಸಕ್ತಿ ಇರುವವರಿಗೆ ಮಾತ್ರ ಕೊಡುವ” ಎಂದುಕೊಂಡೆ. ಮೊದಲನೆಯದಾಗಿ ಅಕ್ಕಪಕ್ಕದ ಮನೆಯ ಗೆಳತಿಯರಿಗೆ, ಶಾಲೆಯಲ್ಲಿನ ಸಹೋದ್ಯೋಗಿಗಳಿಗೆ, ಒಂದೇ ಊರಿನ ನೆಂಟರಿಷ್ಟರಿಗೆ ಸಂಕ್ರಾಂತಿಯ ಎಳ್ಳು ಬೆಲ್ಲ ಹಂಚಿದಂತೆ ಕೊಟ್ಟು, “ಓದಿ ಅಭಿಪ್ರಾಯ ತಿಳಿಸಿ” ಎಂದು ಒತ್ತಿ ಒತ್ತಿ ಹೇಳಿದ್ದಾಯಿತು.

ಸುಲಭಕ್ಕೆ ಸಿಕ್ಕವರಿಗೆಲ್ಲ ಹಂಚಿ ಉಳಿದ ಪುಸ್ತಕಗಳನ್ನು ದೂರದೂರುಗಳಲ್ಲಿ ಇರುವ ಮಿತ್ರರಿಗೆಲ್ಲ ಅಂಚೆಯಲ್ಲಿ ಹಂಚುವ ಕಾರ್ಯಕ್ರಮಕ್ಕಾಗಿ ಒಂದು ದಿನ ಕೆಲಸಕ್ಕೆ ರಜೆಯನ್ನೇ ಹಾಕಿಕೊಂಡೆ. ದೂರದೂರಿಗೆ ಪುಸ್ತಕ ಕಳಿಸುವಾಗ ಲೇಖಕಿಯ ಸಹಿ ಇಲ್ಲದೆ ಹಾಗೇ ಸುಮ್ಮನೆ ಕಳಿಸುವುದು ಸರಿಯೇ? ಪುಸ್ತಕಕ್ಕೆ ಲೇಖಕರ ಸಹಿ ಹಾಕುವ ಭಾಗ್ಯ ಸುಮ್ಮ ಸುಮ್ಮನೆ ಹಾಗೇ ಎಲ್ಲರಿಗೂ ಒದಗುವುದಿಲ್ಲ ಅಲ್ವಾ. ಹಾಗಾಗಿ ಅಂಚೆ ಕವರ್ ಗೆ ಪುಸ್ತಕ ಹಾಕುವ ಮುನ್ನ ಕೆಲವರಿಗೆ ಪ್ರೀತಿಯಿಂದ,ಒಂದಿಷ್ಟು ಜನಕ್ಕೆ ವಿಶ್ವಾಸ ಪೂರ್ವಕವಾಗಿ,ಓದಿನ ಖುಷಿಗಾಗಿ ಅಂತೆಲ್ಲ ಬರೆದು ಸಹಿ ಹಾಕಿದೆ. ಕೆಲವರಿಗೆ ಒಲವಿನಿಂದ ಎಂದು ಬರೆಯುವ ಎಂದು ಅನ್ನಿಸಿದರೂ ಧೈರ್ಯ ಸಾಲದೆ ಹಾಗೇ ಬರೀ ದಿನಾಂಕ ಸಹಿತ ಹಸ್ತಾಕ್ಷರ ಹಾಕಿ ಕಳುಹಿಸಿದ್ದಾಯಿತು.

ಪುಸ್ತಕ ಕೊಟ್ಟು ಬಿಟ್ಟರೆ ಆಯಿತೆ? ಬರೆದಿದ್ದನ್ನು ನಾಕು ಜನ ಓದಿ ಮೆಚ್ಚಬಾರದೆ, ಮೆಚ್ಚಿ ನನಗೆ ಶಾಬಾಷ್ ಎನ್ನದೇ ಹೋದರೆ ಬರೆದು ಏನು ಪ್ರಯೋಜನ? ಆದರೆ ಅವರಾಗೆ ಪ್ರತಿಕ್ರಿಯೆ ನೀಡಿದವರು ಎಲ್ಲೋ ಒಂದು ನಾಲ್ಕು ಮಂದಿ. ಇದರಿಂದ ತೀವ್ರ ನಿರಾಶೆಯಾದರೂ ತಾಳಿಕೊಂಡು ನಾನೇ ಸಂಕೋಚ, ಮುಜುಗರಗಳೆಂಬ ಮಾನವರ ಶತ್ರು ಭಾವಗಳನ್ನು ಹೊರಗಟ್ಟಿ, ಗೆಳೆಯ-ಗೆಳತಿಯರು, ನೆಂಟರಿಷ್ಟರು ಎಲ್ಲರಿಗೂ ಆಗಾಗ್ಗೆ ಕರೆ ಮಾಡಿ ಮೊದಲು ಅವರ ಕಷ್ಟ ಸುಖ ವಿಚಾರಿಸಿ, ಅವರ ಮಕ್ಕಳು ಮರಿಗಳನ್ನೆಲ್ಲ ಬಾಯಿ ತುಂಬಾ ಹೊಗಳಿ, ಅವರನ್ನು ಸುಪ್ರಸನ್ನಗೊಳಿಸಿ ನಂತರ ಮೆಲ್ಲನೆ, “ನನ್ನ ಪುಸ್ತಕ ಓದಿದ್ರ” ಅಂತ ಕೇಳಿದರೆ ಅವರಿಗೋ ಕಬಾಬಿನಲ್ಲಿ ಹಡ್ಡಿ ಸಿಕ್ಕ ಅನುಭವ. “ಓ ಅದಾ, ಅವತ್ತು ನಮ್ಮತ್ತೆ ಮನೆಗೆ ಬಂದಿದ್ರ, ಆಗ ನಿನ್ನ ಬುಕ್ಕು ಟೀಪಾಯ್ ಮೇಲೆ ಇತ್ತು. ನೋಡಿ ಓದಿ ಕೊಡ್ತಿನಿ ಅಂದೋರು ಇನ್ನೂ ಕೊಟ್ಟೇ ಇಲ್ಲ ಕಣೆ, ನನ್ಗೆ ಬುಕ್ಕು ಸಿಕ್ಕಿದ ತಕ್ಷಣ ಓದಿ ಹೇಳ್ತೀನಿ, ಆಯ್ತಾ” ಅಂದೋರೆ ಬಹಳ ಮಂದಿ. ಎಲ್ಲರದೂ ಹೆಚ್ಚು ಕಡಿಮೆ ಇದೇ ಉತ್ತರ. ಅತ್ತೆ ಬದಲು ಓರಗಿತ್ತಿ,ಬಾವನ ಸೊಸೆ, ಅಜ್ಜಿಯ ತಮ್ಮನ ಹೆಂಡತಿ,ಸೋದರಮಾವನ ಅತ್ತಿಗೆಯ ಮಗಳ ಗಂಡನ ತಂಗಿ, ಇತ್ಯಾದಿ ಇತ್ಯಾದಿ ನೆಂಟರು ನನ್ನ ಪುಸ್ತಕ ತೊಗೊಂಡು ಹೋದ್ರು ಅನ್ನೋದು ಕೇಳಿ, ನನ್ನ ಓದುಗ ವರ್ಗ ಹಿಗ್ಗುತ್ತಿರುವ ಬಗ್ಗೆ ಸಂತಸಪಡಬೇಕೊ, ಕಂಡು ಕೇಳರಿಯದ ನೆಂಟರ ಸೃಷ್ಟಿಸಿ ತಪ್ಪಿಸಿಕೊಳ್ಳುವ ಗೆಳತಿಯರ ಬಗ್ಗೆ ಸಿಟ್ಟಾಗಬೇಕೋ ತಿಳಿಯದೆ ಕಕ್ಕಾಬಿಕ್ಕಿಯಾದೆ. “ಗೆಳತಿಯ ಬುಕ್ಕು ಅನ್ನುವ ಮಮಕಾರವಿಲ್ಲದ ಅವರೆಲ್ಲ ಓದದಿದ್ದರೆ ಕತ್ತೆಬಾಲ ಕುದುರೆ ಜುಟ್ಟು” ಎಂದು ಬೈದುಕೊಂಡು ಅಕ್ಕ ಪಕ್ಕದ ಗೆಳತಿಯರನ್ನಾದರೂ ಕೇಳುವ ಎಂದು ಒಂದು ಸಂಜೆ ಹೊರಟೆ. ಆದರೆ ನಮ್ಮನೆ ಗೇಟ್ ಸದ್ದಾದ ಕೂಡಲೇ ನಿತ್ಯದಂತೆ ನಮ್ಮೆದುರು ಮನೆ ಬಳಿ ಹರಟುತ್ತಾ ನಿಂತಿದ್ದವರೆಲ್ಲ ದಡಬಡಾಯಿಸಿಕೊಂಡು ಚದುರಿ ಹೋಗಿ ತಮ್ಮ ಮನೆ ಗೇಟ್ ಎಳೆದುಕೊಂಡು, ಬಾಗಿಲು ಧಡಾರನೆ ಹಾಕಿಕೊಂಡು, ಕ್ಲಿಕ್ ಕ್ಲಿಕ್ ಎಂದು ಇಂಟರ್ ಲಾಕ್ ಹಾಕಿಕೊಂಡು ಬಿಟ್ಟರೆ ನಾನೇನು ಮಾಡಲಿ!

ಇವರೆಲ್ಲರನ್ನು ಬಿಟ್ಟು ಅತ್ತ ಸಹೋದ್ಯೋಗಿಗಳನ್ನ ಕೇಳುವ ಎಂದರೆ ಅವರೋ, “ಮೇಡಂ ಒಂಚೂರು ಹತ್ತನೇ ತರಗತಿ ಪರೀಕ್ಷೆ ಮುಗಿದು ಬಿಡಲಿ, ಓದಿ ಹೇಳ್ತೀನಿ” ಎಂದು ನಾನು ಇನ್ನೇನೂ ಮಾತನಾಡಲು ಅವಕಾಶವೇ ಇಲ್ಲದ ಕಾರಣ ನೀಡಿ ಜಾರಿಕೊಂಡು ಬಿಟ್ಟರು.

ಇದೆಲ್ಲಕ್ಕಿಂತ “ದುಷ್ಮನ್ ಕಹಾ ಹೈ” ಎಂದರೆ “ಬಗಲ್ ಮೆ” ಎನ್ನುವಂತೆ ನನ್ನ ಗಂಡ ಮಕ್ಕಳು ಓದುವುದಿರಲಿ ಪುಸ್ತಕವನ್ನು ಮುಟ್ಟಿಯೂ ನೋಡಲಿಲ್ಲ. ನಾನು ಗುರ್ರೆಂದಾಗ ಮಕ್ಕಳು “ಅದರಲ್ಲಿ ನಮಗೆ ತಿಳಿಯದು ಏನಿದೆ ಅಂತ ಓದಬೇಕು” ಅಂತ ತಿರುಗುಬಾಣ ಬಿಟ್ಟರು.

ನಿಜದ ಲೋಕವಿಷ್ಟು ಕಠೋರ, ವರ್ಚುಯಲ್ ಲೋಕವಾದರೂ ಸಂತಸ ನೀಡಬಹುದೆಂದು ನಿರೀಕ್ಷಿಸಿ ಫೇಸ್ ಬುಕ್ಕು, ವಾಟ್ಸಪ್ ಗಳಲ್ಲಿ “ಪುಸ್ತಕಕ್ಕಾಗಿ ನನ್ನನ್ನು ಸಂಪರ್ಕಿಸಿ” ಎಂದು ಉದಾರವಾಗಿ ಕರೆ ನೀಡಿದರೂ ಬಂದ ರಿಪ್ಲೈಗಳು ನೂರು ವರ್ಷದ ಅಜ್ಜಿಯ ಬಾಯಲ್ಲಿ ಉಳಿದಿರುವ ಹಲ್ಲುಗಳಷ್ಟು.

ಇಷ್ಟೆಲ್ಲಾ ಆದ ಬಳಿಕವೂ ನನಗೆ ಬುದ್ಧಿ ಬರದಿದ್ದರೆ ಹೇಗೆ! “ಹೋಗಲಿ ಬಿಡು, ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಅಂತ ದೊಡ್ಡ ದೊಡ್ಡ ಕವಿ ಮಹಾಶಯರೇ ಹೇಳಿರುವಾಗ ನಾನ್ಯಾವ ಲೆಕ್ಕ” ಅನ್ನಿಸಿ ತೆಪ್ಪಗಾಗಿದ್ದೆ.

ನನ್ನ ನಿರಾಶೆಯನ್ನು ದೂರ ಮಾಡುವಂತೆ ಒಂದು ದಿನ ಅಂಚೆಯಲ್ಲಿ ಪುಸ್ತಕಗಳ ಪಾರ್ಸೆಲ್ ಬಂದಿತು. “ನನಗ್ಯಾರಪ್ಪ ಬುಕ್ಕು ಕಳಿಸೋರು!” ಅನ್ನೋ ಕುತೂಹಲದಿಂದ ನೋಡಿದರೆ ನನ್ನ ಲೇಖಕಿ ಗೆಳತಿಯರೊಬ್ಬರದು. “ಇವರಿಗ್ಯಾರು ನನ್ನ ವಿಳಾಸ ಕೊಟ್ಟದ್ದು” ಎಂದು ಕರೆ ಮಾಡಿ ಕೇಳಿದರೆ “ನೀವು ನನಗೆ ಬುಕ್ಕು ಕಳುಹಿಸಿದ್ರಲ್ಲ ಆ ಕವರ್ ಮೇಲೆ ನಿಮ್ಮ ವಿಳಾಸ ಇತ್ತು” ಎಂದು ಹೇಳಿ ನಕ್ಕರು. ನನಗೋ ಖುಷಿಯೋ ಖುಷಿ. ಅವರೊಟ್ಟಿಗೆ ಹರಟುವಾಗ ಅವರೂ ಕೂಡ ನನ್ನಂತೆ ಬುಕ್ಕಿಗೆ ಓದುಗರ ಹುಡುಕುವವರು ಎಂದು ತಿಳಿದು ಸಮಾಧಾನವೋ ಸಮಾಧಾನ.” ಇನ್ನೇನು ಮಾಡೋದು ಬಿಡಿ, ನನ್ನ ಬುಕ್ಕು ನೀವು ಓದಿ, ನಿಮ್ಮ ಬುಕ್ಕು ನಾನು ಓದ್ತೀನಿ, ನಮ್ಮಂತವರೆ ಇನ್ನೊಂದು ಹತ್ತು ಜನ ಜತೆಯಾದರೆ ನಮ್ಮ ಬುಕ್ಕಿಗೆ ಓದುಗರು, ನಮಗೆ ಓದಲು ಪುಕ್ಕಟ್ಟೆ ಬುಕ್ಕು, ಹರಟಲು ಜನ ಎಲ್ಲಾ ಸಿಗಲ್ವ.” ಎಂದಾಗ “ಅಹುದಹುದು” ಎಂದು ತಲೆದೂಗಿದೆ.

ಈಗ ಓದುಗರ ಹುಡುಕುವುದು ಬಿಟ್ಟು ಪೆನ್ನೆತ್ತಿಕೊಂಡು, ಅಲ್ಲಲ್ಲ, ಫೋನೆತ್ತಿಕೊಂಡು ಟೈಪಿಸುತ್ತಿದ್ದೇನೆ.

‍ಲೇಖಕರು Admin

6 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading