ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದಕ್ಕೇ ಹೇಳಿದ್ದು, ಅಶ್ವತ್ಥ ವೃಕ್ಷಕ್ಕೆ ಸಾವಿಲ್ಲ. ನಿಜ..

suri rangashankara

ಎಸ್‌.ಸುರೇಂದ್ರನಾಥ್‌

ಅವರ ಫೋನ್‌ ಬಂದಾಗ ರಾತ್ರಿ ಒಂಬತ್ತೋ ಒಂಬತ್ತೂವರೆಯೋ ಆಗಿತ್ತು. ಫೋನ್‌ನಲ್ಲಿ ಹೆಚ್ಚು ಮಾತಿಲ್ಲ, ಮನೆಗೆ ಬರ್ತಿಯಾ ಅಂತಷ್ಟೇ. ಇಲ್ಲಾ ಅನ್ನೋಕ್ಕಾಗದೇ ಹೊರಟೆ. ರಾತ್ರಿ ಇಷ್ಟು ಹೊತ್ತಲ್ಲಿ ಕರೆದಿದ್ದಾರೆ ಅಂದ ಮೇಲೆ ಸದ್ಯಕ್ಕೆ ಊಟದ ಅಗತ್ಯ ಇಲ್ಲ ಎಂದೇ ಅರ್ಥ. ನಮ್ಮ ಮನೆಯಿದ್ದಿದ್ದು ಜೆಪಿ ನಗರದಲ್ಲಿ, ಅವರ ಮನೆ ನರಸಿಂಹರಾಜಾ ಕಾಲೋನಿಯಲ್ಲಿ, ರಾಮಮಂದಿರದ ಪಕ್ಕ. ಅವರ ಮನೆಯ ಬಾಗಿಲು ತಟ್ಟಿದ್ದೇ, ಬಾಗಿಲು ತಟ್ಟುವುದನ್ನೇ ಕಾದು ಕೂತವರಂತೆ, ಬಾಗಿಲು ತೆಗೆದರು. ಹೋಗೋಣ ಬಾ ಎಂದು ಮಹಡಿ ಹತ್ತಿದರು. ಮಹಡಿಯಲ್ಲಿನ ಒಂದು ರೂಮಿನಲ್ಲಿ, ಗೋಡೆಗೆ ಒರಗಿದಂತೆ ಒಂದು ಟೇಪ್‌ರೆಕಾರ್ಡರ್‌. ಅದರ ಎದುರು ಪೂಜೆಗೆ ಕೂಡುವಂತೆ ಪದ್ಮಾಸನ ಹಾಕಿ ಕೂತರು. ಪಕ್ಕದಲ್ಲಿ ಕೂತೆ. ಯಾವುದೋ ಒಂದು ದೇವರನ್ನೋ, ಮತ್ಯಾವುದೋ ಆತ್ಮವನ್ನೋ ಆಹ್ವಾನಿಸುವಾಗಿನ ಕ್ರಿಯೆಯಲ್ಲಿ ಎಷ್ಟು ಗಂಭೀರವಾಗಿರಬೇಕೋ ಅಷ್ಟು ಗಂಭೀರವಾಗಿದ್ದರು.

ಮಾತಿಲ್ಲದೇ ಟೇಪ್‌ರೆಕಾರ್ಡರ್‌ ಚಾಲೂ ಮಾಡಿದರು. ಆಗ ಮೊದಲ ಬಾರಿ ಕೇಳಿದ್ದು ನಾನು, ಒಂದು ಮುಂಜಾವಿನಲಿ ಹಾಡು. ಬಿ. ಆರ್‌. ಛಾಯಾ ಹಾಡಿದ್ದು ಅಂತ ನನ್ನ ನೆನಪು. ಅಂತಹ ಮಧ್ಯರಾತ್ರಿಯಲ್ಲೂ, ಒಂದು ಮನೆಯ ಸೂರಿನಡಿಯಲ್ಲೂ ತುಂತುರಿನ ಮಳೆಯಲ್ಲಿ ತೊಯ್ದ ಅನುಭವ. ಹಾಡು ಮುಗಿದ ಮೇಲೆ ಆ ರಾತ್ರಿಯಲ್ಲಿ ಮೊದಲ ಸಾರಿ ಮುಗುಳ್ನಕ್ಕು ನನ್ನತ್ತ ನೋಡಿದರು, ಹೇಗಿದೆ ಅನ್ನುವಂತೆ. ನಾನೇನು ಹೇಳಲಿ, ಸಂಗೀತ ಕೇಳಿ ಅನುಭವಿಸಬಲ್ಲೆನೇ ಹೊರತು, ಅದನ್ನು ವ್ಯಾಖ್ಯಾನಿಸುವ ಪಾಂಡಿತ್ಯವೆಲ್ಲಿದೆ ನನಗೆ. ಮಾತಿಲ್ಲದೇ ತಲೆಯಾಡಿಸಿದೆ. ಆ ರಾತ್ರಿ ಅದೇ ಹಾಡನ್ನು ಮತ್ತೆ ಮತ್ತೆ ಕೇಳಿದೆವು.

ಅದೇ ಹಾಡನ್ನು. ಮುಂದೆ ಅದೆಷ್ಟನೆಯ ಸಾರಿಯೋ, ಹಾಡು ಆರಂಭವಾಗುವ ಹೊತ್ತಿಗೆ ಎದುರಿನಲ್ಲಿ ಎರಡು ಗ್ಲಾಸು ತುಂಬಿದ್ದವು. ಆದರೆ, ಆ ಎರಡೂ ಗ್ಲಾಸುಗಳನ್ನು ತುಂಬಿದ್ದ ದ್ರವಕ್ಕೆ ಇಡೀ ರೂಮನ್ನು ತುಂಬಿದ್ದ ಹಾಡಿನ ಮುಂದೆ ಮತ್ತೇರಿಸುವ ಶಕ್ತಿ ಸಾಲದಾಗಿತ್ತು.

ವಿಶೇಷವೆಂದರೆ ಅಂದೇ ಸಂಜೆ ಆ ಹಾಡನ್ನು ಅರವಿಂದ್‌ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಿದ್ದರು. ಅಂದೇ ರಾತ್ರಿ ನನ್ನನ್ನು ಕರೆದು ಅದನ್ನು ಕೇಳಿಸುವಷ್ಟು ಆತ್ಮೀಯನನ್ನಾಗಿ ಮಾಡಿಕೊಂಡ ಅವರ ಮುಂದೆ ನಾನು ಮಾತು ನಿಂತವನಾಗಿದ್ದೆ.

ಇದು ಸಿ. ಅಶ್ವತ್ಥ್. ನನ್ನನ್ನು ತಮ್ಮ ಸಂಗೀತದ ತೆಕ್ಕೆಗೆ ತೆಗೆದುಕೊಂಡ ಪರಿ. ಇಷ್ಟು ಹೊತ್ತಿಗಾಗಲೇ ನನ್ನನ್ನು ತಮ್ಮ ಆತ್ಮೀಯನೆಂಬಂತೆ ಕಾಣುತ್ತಿ ದ್ದರು. ನನ್ನ ಇಡೀ ಜೀವನದಲ್ಲಿ ಇವರಷ್ಟು ತೀವ್ರವಾದ, ಗಾಢವಾದ ವ್ಯಕ್ತಿಯನ್ನು ನೋಡಿಲ್ಲ. ಈ ಕ್ಷಣದಲ್ಲಿ ದೂರ್ವಾಸ ಮುನಿಯಂತೆ ಸಿಟ್ಟಿಗೆದ್ದಲ್ಲಿ, ಮರುಕ್ಷಣ ಅದ್ಯಾವುದೋ ತಮಾಷೆ ಮಾಡಿ ಸಾಮಾನ್ಯರಂತೆ ಇದ್ದುಬಿಡಬಲ್ಲವರಾಗಿದ್ದರು. ಈ ಕ್ಷಣ ಜಗತ್ತಿನ ಎಲ್ಲ ಕೋಟಲೆಗಳನ್ನು ತಮ್ಮ ಭುಜದ ಮೇಲೆ ಹೊತ್ತ ಸಂಸಾರದ ಹಿರಿಯನಂತೆ ಕಂಗೊಳಿಸುತ್ತ, ಉಳಿದವರನ್ನು ಕಂಗೆಡಿಸುತ್ತ ವಿಜೃಂಭಿಸುತ್ತಿದ್ದಲ್ಲಿ, ಮುಂದಿನ ಕ್ಷಣ ಮಗುವಿನಂತೆ ಕಣ್ಣೀರಿಟ್ಟು ಬಿಡುತ್ತಿದ್ದರು. ರೆಕಾರ್ಡಿಂಗ್‌ ಸಮಯದಲ್ಲಿ ಭಾವನಾತೀತರಂತೆ ಕಂಡು ಬಂದಲ್ಲಿ, ಸಂಜೆ ಗೆಳೆಯರೊಂದಿಗೆ ಭಾವಪರವಶರಾಗಿಬಿಡುತ್ತಿದ್ದರು. ತುಂಬಿದ ಸಭೆಯಲ್ಲಿ ಹೇಗೆ ಕೇಳುವವರು ರೋಮಾಂಚನಗೊಳ್ಳುವಂತೆ ಹಾಡುತ್ತಿದ್ದರೋ ಹಾಗೇ ಗೆಳೆಯರ ನಡುನಲ್ಲೂ ಮೈ ಪುಳಕಗೊಳ್ಳುವಂತೆ ಹಾಡುತ್ತಿದ್ದರು. ಸಾವಿರಾರು ಜನ ಹಾಡಿ ಎಂದರೂ ಹಾಡಲು ಒಪ್ಪದ ಆಸಾಮಿ, ತಮಗೆ ಹಾಡಬೇಕೂ ಅನಿಸಿದರೆ ಯಾರೂ ಕೇಳದೇ ತಾಸುಗಟ್ಟಲೆ ಹಾಡಿಬಿಡುತ್ತಿದ್ದರು.

ತಮ್ಮನ್ನು ತಾವು ಎಷ್ಟು ಪ್ರೀತಿಸುತ್ತಿದ್ದರೋ ತಮ್ಮ ಗೆಳೆಯರಿಗಂತೂ ತಮ್ಮ ಜೀವವನ್ನೇ ಕೊಡಲು ತಯಾರಾಗುತ್ತಿದ್ದರು. ತಾವು ಬೆಳೆಸಿದ ಅನೇಕರು ತಮ್ಮ ಬೆನ್ನ ಹಿಂದೆ ತಮ್ಮ ಬಗ್ಗೆ ಮಾತನಾಡಿಕೊಳ್ಳುವುದು, ತಮ್ಮಂತೆಯೇ ಹಾಡಿ ಭಂಗಿಸುವುದು ಎಲ್ಲವೂ ಅಶ್ವತ್ಥ್ ಅವರಿಗೆ ಗೊತ್ತಿರಲಿಲ್ಲವೆಂದಲ್ಲ. ಗೊತ್ತಿದ್ದೂ ತಮ್ಮ ನೋವನ್ನು ಬಹಿರಂಗಗೊಳಿಸುತ್ತಿರಲಿಲ್ಲ. ಯಾವತ್ತೋ ಒಂದು ರಾತ್ರಿ ಹೀಗೆ ಮನೆಗೆ ಕರೆದಾಗ ಕೇವಲ ಒಂದೆರಡು ಮಾತುಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಒಂದೊಮ್ಮೆ ಮಾತು ಹೊರಡದೇ ಗದ್ಗದಿತರಾಗಿದ್ದೂ ಉಂಟು. ಹೀಗೆ ಅಶ್ವತ್ಥ್ ಎರಡು ವೈರುಧ್ಯಗಳ ಮೊತ್ತ. ಏಕಕಾಲಕ್ಕೆ ಎಲ್ಲರೂ ಪ್ರೀತಿಸುವ ಗೆಳೆಯ ಮತ್ತು ಎಲ್ಲರನ್ನೂ ಎದುರು ಹಾಕಿಕೊಂಡ ಜಗತ್ತಿನ ಬದ್ಧ ವೈರಿಯಾಗಿದ್ದರು.
.
ನಾಗಮಂಡಲ ಚಿತ್ರಕತೆ ಒಂದು ಹಂತಕ್ಕೆ ಬಂದ ಕಾಲವದು. ನಾನೂ ಅಶ್ವತ್ಥ್ ಇಬ್ಬರೂ ಸೇರಿ ಮಾಡಿದ ಚಿತ್ರಕತೆ ಅದು. ಇಬ್ಬರ ಹೆಸರೂ ಪಟ್ಟಿಯಲ್ಲಿದೆ. ತಾಸುಗಟ್ಟಲೆ ಹರಟೆಯನ್ನೋ, ಚರ್ಚೆಯನ್ನೋ ಮಾಡುತ್ತಿದ್ದೆವು. ನಾನು ಕತೆಯ ಧಾಟಿ ಹುಡುಕಿ ಹೊರಟಲ್ಲಿ ಅವರು ಚಿತ್ರಕತೆಯಲ್ಲಿ ಸಂಗೀತದ ನೆಲೆಗಳನ್ನು ಹುಡುಕುತ್ತಿದ್ದರು. ಇನ್ನೂ ನನ್ನನ್ನು ಅಶ್ವತ್ಥ್ , “ಹೋಗಿ ಬನ್ನಿ’ ಎಂದೇ ಕರೆಯುತ್ತಿದ್ದರು. ಚಿತ್ರದ ಸಂಗೀತ ಸಂಯೋಜನೆಗೆಂದು ಕಾವೇರಿ ಸಂಗಮದ (ಮೇಕೆದಾಟಿನ ಹತ್ತಿರವೆಂದು ನನ್ನ ನೆನಪು) ಒಂದು ಅತಿಥಿಗೃಹದಲ್ಲಿ ಸೇರಿದೆವು. ಮೂರು ದಿನಗಳ ವಾಸ್ತವ್ಯ ಅದು. ತಂಡದಲ್ಲಿ ಅಶ್ವತ್ಥ್, ಎಚ್‌ಎಸ್ವಿ, ನಾಗಾಭರಣ, ದತ್ತಣ್ಣ, ಅಶ್ವತ್ಥ್ ತಂಡದ ಬಾಲಿ ಮತ್ತು ಪ್ರಸಾದಿ, ಮತ್ತು ನಾನು, ಜೊತೆಯಲ್ಲಿ ಮ್ಯಾನೇಜರ್‌ ರಾಮಚಂದ್ರ (ಈತ ಈಗಿಲ್ಲ). ಕತ್ತಲಾದೊಡನೇ, ಮತ್ತೆ ಬೆಳಗಾಗುವ ತನಕ ಸಂಗೀತದ ಹುಚ್ಚು ಮಳೆ. ಅನೇಕ ರಾಗಗಳ ಅನ್ವೇಷಣೆ.

ಎಚ್‌ಎಸ್ವಿಯವರು ಮೊದಲ ಸಾಲನ್ನೋ, ಇಡೀ ಪಲ್ಲವಿಯನ್ನೋ ಬರೆಯುವುದು. ಅಶ್ವತ್ಥ್ ಅದಕ್ಕೆ ಸಂಗೀತ ಜೋಡಿಸುವುದು. ಒಂದು ಪಲ್ಲವಿಗೆ ಸರಿಯಾದ ರಾಗ ಜೋಡಿಯಾಯಿತೋ ಅಶ್ವತ್ಥ್ ಸಂತೋಷಕ್ಕೆ ಮೇರೆಯಿರುತ್ತಿರಲಿಲ್ಲ. ಆ ಖುಷಿಯಲ್ಲಿ ಒಂದೆರಡು ಗುಟುಕು ಹೆಚ್ಚೇ ಒಳಗಿಳಿಯುತ್ತಿತ್ತು. ಆ ಮೂರು ದಿನಗಳಲ್ಲಿ ಸುಮಾರು ಹತ್ತೋ ಹನ್ನೆರಡೋ ಹಾಡುಗಳಿಗೆ ಪಲ್ಲವಿ ಬರೆದು ರಾಗ ಜೋಡಿಸಿ ಆಗಿತ್ತು. ಬೆಳಗಾಗಲು ಇನ್ನೊಂದೆರಡು ಗಂಟೆಗಳಿವೆ ಅನ್ನುವಾಗ ನಿದ್ದೆಗೆ ಶರಣು. ಹತ್ತಕ್ಕೆ ಎದ್ದು, ಹನ್ನೆರಡು ಗಂಟೆಯ ಹೊತ್ತಿಗೆ, ಬಿಸಿಲೇರಿದ ಜಾವದಲ್ಲಿ, ಮೀನಖಂಡದವರೆಗೆ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಕೂತು ಬೀಯರ್‌ ಸೇವನೆ. ಎರಡು ದಿನಗಳಾಗಿದ್ದವು.

ಕಾವೇರಿಯಲ್ಲಿ ಮೊಣಕಾಲು ಕೂತಿದ್ದವರು ಊಟದ ಹೊತ್ತಿಗೆ ಒಬ್ಬೊಬ್ಬರಾಗಿ ಹೊರಟರು. ನಾನು ಅಶ್ವತ್ಥ್ ಮಾತ್ರ ಉಳಿದೆವು. ಇದ್ದಕ್ಕಿದ್ದಂತೇ ಅಶ್ವತ್ಥ್ , “ಏನ್ರೀ, ಗೀನ್ರೀ ಸರಿಹೋಗಲ್ಲ. ಹೋಗೀ ಬಾ ಅಂತನ್ನು ‘ ಅಂದರು. ಏನುತ್ತರ ಕೊಡಲಿ. ನಾನು ಹೇಳಿದ್ದಿಷ್ಟು, ಅದು ಸಾಧ್ಯವಿಲ್ಲ. ನೀವು ನನಗಿಂತ ಹಿರಿಯರು. ಎಲ್ಲರ ಮುಂದೆ ನಿಮ್ಮನ್ನು ಏಕವಚನದಲ್ಲಿ ಮಾತನಾಡಿಸಲು ನನಗೆ ಆಗಲ್ಲ. ತೀರಾ ನೀವು ಒತ್ತಾಯ ಮಾಡಿದರೆ, ನಾವಿಬ್ಬರೇ ಇದ್ದಾಗ ಹೇಳಬಹುದೇನೋ, ಪ್ರಯತ್ನ ಮಾಡುತ್ತೇನೆ. ಸರಿ ಬಾ. ಹೀಗೆ ಅಶ್ವತ್ಥ್ ನನ್ನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತ ಹೋದರು. ಅವರಿದ್ದಾಗ ಅವರನ್ನು ಏಕವಚನದಲ್ಲಿ ಸಂಬೋಧಿಸುವ ಧೈರ್ಯ ನನಗಂತೂ ಬರಲೇಯಿಲ್ಲ. ಅಶ್ವತ್ಥ್ ಮಾತ್ರ ಗೆಳೆತನದ ಜೊತೆಯಲ್ಲೇ ಸಂಗೀತದ ಸೂಕ್ಷ್ಮಗಳನ್ನು ಪರಿಚಯ ಮಾಡಿಕೊಡುತ್ತ ಹೋದರು.
.
ಆ ಕಂಗಳ ಬೆಳದಿಂಗಳ ಅಂತ ನಾನು ಒಂದು ಹಾಡು ಮಾಡಿದೀನಿ, ಕೇಳಿದೀಯಾ. ಕೇಳಿದೀನಿ. ಏನು ಕೇಳಿದೀಯಾ, ಇಲ್ಲಿ ಹೇಳ್ತೀನಿ ಕೇಳು, ಪಲ್ಲವಿಯಲ್ಲಿ ಒಂದು ರಾಶಿ ಆ ಬರೆದಿದಾರೆ, ಆ ಊರು ಆ ಬೀದಿ ಆ ಮನೆ ಆ ಮನೆಯ ಹಿತ್ತಿಲು ಆ ಬೇಲಿ ಆ ಪೊದೆ ಆ ಮರ ಆ ಕದ ಕತ್ತಲೂ, ಪ್ರತಿ “ಆ’ನೂ ಬೇರೆ ಬೇರೆ ಧಾಟಿಯಲ್ಲಿದೆ, (ಹಾಡಿ ತೋರಿಸಿ) ಈ “ಆ’ಗಳನ್ನು ಒಂದೇ ಧಾಟಿಯಲ್ಲಿ ಆ ಅಂದು ಬಿಟ್ರೆ ಬೋರಾಗತ್ತೆ.
.
ಅಶ್ವತ್ಥ್ ಅವರಿಗೆ ಹಾಡು, ಸಂಗೀತ ಬಿಟ್ಟರೆ ಬೇರೆ ಪ್ರಪಂಚ ಇರಲಿಲ್ಲ ಅನ್ನೋದಂತೂ ಗ್ಯಾರಂಟಿ. ಈಟೀವಿಯ ಪ್ರಾರಂಭದ ದಿನಗಳು. ಇನ್ನೂ ಚಾನೆಲ್‌ ಶುರುವಾಗಿರಲಿಲ್ಲ. ರಾಶಿ ರಾಶಿ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡುತ್ತ ಇದ್ದೆವು. ಈ ಚಾನೆಲ್‌ ರೆಕಾರ್ಡ್‌ ಮಾಡಿದ ಮೊತ್ತಮೊದಲ ಸ್ಟುಡಿಯೋ ಕಾರ್ಯಕ್ರಮ ನಾದಲೀಲೆ. ಅಶ್ವತ್ಥ್ ಇದರ ಸಂಪೂರ್ಣ ಮೇಲ್ವಿಚಾರಣೆ ವಹಿಸಿದ್ದರು, ಅಂದರೆ ಗಾಯಕರು, ಅವರು ಹಾಡಬೇಕಾದ ಹಾಡುಗಳು, ಸಂಗೀತದ ಮೇಳ, ಹೀಗೆ. ಆಗಿನ್ನೂ ರಾಮೋಜಿ ಫಿಲಂ ಸಿಟಿ ಕಣ್ಣುಬಿಡುತ್ತಿದ್ದ ಕಾಲ. ಇನ್ನೂ ಸಂಪೂರ್ಣ ಸಿದ್ಧಗೊಂಡಿರಲಿಲ್ಲ. ಹಾಗಾಗಿ, ಊಟ-ತಿಂಡಿಯದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಬೆಳಗಿನ ತಿಂಡಿಯದಂತೂ ಪ್ರತ್ಯೇಕ ರಾಮಾಯಣವೇ.


ದಕ್ಷಿಣದವರಿಗೆ ಬೆಳಿಗ್ಗೆ ಎದ್ದ ಕೂಡಲೇ ಛೋಲೇ ಬಟೂರ ತಿನ್ನುವುದು ಕೊಲೆ ಮಾಡಿದ ಶಿಕ್ಷೆ ಅನುವಿಭಸುವುದಕ್ಕಿಂತಲೂ ಘೋರವಾದದ್ದು, ಅದರಲ್ಲೂ ಸಾಲಿನಲ್ಲಿ ತಟ್ಟೆ ಹಿಡಿದು ನಿಂತು ಕೊಟ್ಟದ್ದನ್ನು ಸ್ವೀಕರಿಸಿ ತಿನ್ನಬೇಕು. ಹೆಚ್ಚಿಗೆ ಕೇಳುವಂತಿರಲಿಲ್ಲ, ಕೇಳಿದರೂ ಭಾಷೆಯ ತೊಡಕಿತ್ತಲ್ಲ, ಯಾರಿಗೂ ಇವರ ಕೋರಿಕೆ ಅರ್ಥವಾಗುತ್ತಿರಲಿಲ್ಲ. ರೆಕಾರ್ಡಿಂಗ್‌ಗೆ ಬಂದಿದ್ದ ಕೆಲವು ಗಾಯಕರಿಗೆ ಇದು ತೀರಾ ಕಷ್ಟದ್ದು ಎನಿಸಿತು. ಎರಡನೇ ದಿನ, ಸುಮಾರು ಹನ್ನೊಂದು ಗಂಟೆಗೆ ಇಡ್ಲಿ ಬೇಕು ಅಂತ ತಗಾದೆಯೆದ್ದಿತು. ರೆಕಾರ್ಡಿಂಗ್‌ ಮಾಡಲು ಸಿದ್ಧರಾಗುತ್ತಿದ್ದ ಅಶ್ವತ್ಥ್ ಅವರಿಗೆ ಕೆಂಡಾಮಂಡಲ ಕೋಪ ಉಕ್ಕಿತೋ ಅಬ್ಬರಿಸಿಯೇ ಬಿಟ್ಟರು. “ನಾವು ಇಲ್ಲಿ ಬಂದಿರುವುದು ಹಾಡಕ್ಕೆ, ಚೆನ್ನಾಗಿ ಹಾಡ್ತೀರೋ ಇಲ್ವೋ ಅದು ನೋಡಿ, ಸೂರಿ ಇಲ್ಲೀ ತನಕ ಕರೆದಿದ್ದಾನೆ ನಮ್ಮನ್ನ, ಇಡ್ಲಿ ಇವತ್ತೇನು ನಾಳೆ ಸಿಗತ್ತೆ, ನಾನೇ ತರಿಸಿಕೊಡ್ತೀನಿ, ನೀವು ಬೇರೆ ಊರಿಗೆ ಹೋದಾಗ ಅಲ್ಲಿ ಹೇಗಿರತ್ತೋ ಹಾಗೆ ಹೊಂದಿಕೊಳ್ಳಬೇಕು’ ಇತ್ಯಾದಿ. ದಂಗೆಯೆದ್ದವರು ಒಂದಿಷ್ಟು ಸಮಜಾಯಿಶಿ ಕೊಡಲು ಹೋದರು, ಆದರೆ ಅಶ್ವತ್ಥ್ ಕೊನೆಗೂ ತಮ್ಮ ಧಾಟಿಯನ್ನು ಬದಲಾಯಿಸಲಿಲ್ಲ. ಸಂಗೀತ ಇದ್ದರೆ ಅಶ್ವತ್ಥ್ಗೆ ಜಗತ್ತಿನ ಉಳಿದ್ಯಾವ ಪರಿವೆಯೂ ಇರಲಿಲ್ಲ.
.
ಹಾಡುತ್ತ ಹಾಡುತ್ತ, ಪದಗಳನ್ನು ಹುಡುಕುತ್ತ, ಪದಗಳ ಹಿಂದಿನ ಭಾವ ಹುಡುಕುತ್ತ ಅಶ್ವತ್ಥ್ ಕಳೆದುಹೋಗುತ್ತಿದ್ದರು. ಅದೊಂದು ದಿನ, ಗೆಳೆಯ ಟಿ. ಎನ್‌. ಸೀತಾರಾಮ್‌ ಎಲ್ಲ ಗೆಳೆಯರನ್ನೂ ತಮ್ಮ ಗೌರೀಬಿದನೂರಿನ ತೋಟದ ಮನೆಯಲ್ಲಿ ಗುಡ್ಡೆ ಹಾಕಿದರು. ತೋಟದ ಮನೆ ಮುಟ್ಟಿದಾಗ ಸಂಜೆ ಐದಾಗಿತ್ತು. ವೈಯಕ್ತಿಕ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಮುಗಿಸಿ, ಕಾಫಿ, ಉಪ್ಪಿಟ್ಟು ಇತ್ಯಾದಿ ಮುಗಿಯುವ ವೇಳೆಗೆ ರಾತ್ರಿ ಎಂಟಾಗಿತ್ತು. ಎಲ್ಲ ಸಾಲಾಗಿ ಕೂತೆವು. ಒಂದಿಷ್ಟು ಜನ ಗೋಡೆಗೊರಗಿ, ಇನ್ನೊಂದಿಷ್ಟು ಜನ ಕಟ್ಟೆಯ ಮೇಲೆ ಕಾಲು ಇಳಿಬಿಟ್ಟು. ಸುಮಾರು ಒಂಬತ್ತಕ್ಕೆ ಅಶ್ವತ್ಥ್ ಶುರುಮಾಡಿದರು. ಒಂದಾದ ಮೇಲೆ ಒಂದರಂತೆ ಹಾಡುಗಳು. ಅವುಗಳ ವಿವರಣೆ. ಮತ್ತೆ ತಮಾಷೆ.

ಜೋಕುಗಳು. ರಾತ್ರಿ ಒಂದು ದಾಟಿತ್ತೋ ಏನೋ, ಇದ್ದಕ್ಕಿದ್ದಂತೇ ಅಶ್ವತ್ಥ್ ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ಶುರುಮಾಡಿದರು. ಒಂದು ಹೆಣ್ಣಿನ ನಿವೇದನೆ ಅದು. ರತ್ನಮಾಲಾ ಹಾಡಿದ್ದು ಕೇಳಿ ನೋಡಿ, ಅದರ ತೀವ್ರತೆ ತಿಳಿಯುತ್ತದೆ. ಆದರೆ ಅಂದು ಅಶ್ವತ್ಥ್ ಹಾಡಿದ್ದು, ಅದರಲ್ಲೂ ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ ಎನ್ನುವ ಸಾಲನ್ನು ಮತ್ತೆ ಮತ್ತೆ ವಿಸ್ತರಿಸಿ ಹಾಡಿದ್ದು, ಪ್ರತಿ ಬಾರಿ ವಿಸ್ತರಿಸಿದಾಗ ಒಂದೊಂದು ಅರ್ಥ, ಒಂದೊಂದು ಭಾವ ಹೊಮ್ಮಿಸಿದ್ದು, ಎಲ್ಲರನ್ನೂ ಒಂದು ಅಲೌಕಿಕ ಅನುಭವದಲ್ಲಿ ಮುಳುಗಿಸಿತ್ತು.
.
ಸುಗಮ ಸಂಗೀತದ ವಿಷಯದಲ್ಲಿ ನಾವು ಸಾಮಾನ್ಯವಾಗಿ ಮೂರು ಹೆಸರು ಹೇಳುತ್ತೇವೆ. ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವತ್ಥ್. ಕನ್ನಡ ಕವಿಗಳನ್ನು ಮನೆಮನೆಗೆ ಮುಟ್ಟಿಸಿದವರು ಈ ಮೂರು ಜನ. ಕಾಳಿಂಗರಾಯರು ಮತ್ತು ಅನಂತಸ್ವಾಮಿಯವರು ಹೆಚ್ಚಾಕಮ್ಮಿ ಒಂದೇ ಧಾಟಿಯಲ್ಲಿದ್ದವರು. ಹೇಳಬೇಕೆಂದರೆ ಅನಂತಸ್ವಾಮಿಯವರು ಸಂಗೀತ ಕಟ್ಟಿದ ಹಾಡುಗಳನ್ನು ಕಾಳಿಂಗರಾಯರು ಹಾಡುತ್ತಿದ್ದರು. ಅಶ್ವತ್ಥ್ ಇವರಿಬ್ಬರಿಗಿಂತ ಬೇರೆ ನಿಂತವರು. ಅಶ್ವತ್ಥ್ ಅವರಿಗೆ ರಾಗಕ್ಕಿಂತ ಪದಗಳು, ಪದಗಳು ನೀಡುವ ಭಾವ ಮತ್ತು ಅರ್ಥ ಮುಖ್ಯವಾಗಿತ್ತು. ಸಂಗೀತ ನೀಡುವ ಮುನ್ನ ಕವಿಗಳ ಜೊತೆ ಆ ಪದ್ಯದ ಅರ್ಥವನ್ನು ವಿಸ್ತಾರವಾಗಿ ಚರ್ಚೆ ಮಾಡಿದ ನಂತರವೇ ಅಶ್ವತ್ಥ್ ಸಂಗೀತ ಜೋಡಣೆಗೆ ಕೂಡುತ್ತಿದ್ದರು.

ಹಾಗಾಗಿ ಅಶ್ವತ್ಥ್ ಅವರ ಸಂಯೋಜನೆಗಳು ಬೇರೆಯವೇ ಆಗಿ ಕಾಣುತ್ತವೆ. ಗೋಪಾಲಕೃಷ್ಣ ಅಡಿಗರ ಒಂದು ಪದ್ಯವಿದೆ, ಮೌನ ತಬ್ಬಿತು ಎಂದೇ ಶುರುವಾಗುತ್ತದೆ. ಅದರಲ್ಲಿ ಕೊನೆಯ ಸಾಲಿದೆ, ಹಾಯೆಂದು ಮೌನವು ಮಲಗಿತು. ಇದರಲ್ಲಿ ಅಶ್ವತ್ಥ್ ಅವರು ಹಾಯೆಂದು ಪದವನ್ನು ಸಂಗೀತವನ್ನೂ ದಾಟಿಸಿ ಅದರ ಭಾವವನ್ನು ತಲುಪಿಸುವ ಅಶ್ವತ್ಥ್ ಪರಿ ಅನನ್ಯವಾದದ್ದು.. ಹಾಗೇ ನಾಗಮಂಡಲದಲ್ಲಿ ಬರುವ ಅದ ಗ್ವಾಡಿ ಅದ ಸೂರು ಹಾಡಿನಲ್ಲಿ ಬರುವ ತಿದಿಯೊತ್ತಿ ನಿಟ್ಟುಸಿರು, ನಿಜವಾಗಿಯೂ ಒಂಟಿತನದ ಗಟ್ಟಿ ಅನುಭವವನ್ನು ನೀಡುತ್ತದೆ. ನೀ ಹಿಂಗ ನೋಡಬ್ಯಾಡ ನನ್ನ ಹಾಡನ್ನು ವಿವರಿಸಲು ಸಾಧ್ಯವಿಲ್ಲ, ಕೇಳಿ ಅನುಭವಿಸಬೇಕು.
.
ಗೆಳೆಯ, ಹಿತೈಷಿ, ಆತ್ಮೀಯ ಅಶ್ವತ್ಥ್ ಹೋಗಿ ಈ 29ಕ್ಕೆ ಆರು ವರ್ಷಗಳಾಗುತ್ತವೆ. 2009 ಡಿಸೆಂಬರ್‌ 29 ಸುಗಮ ಸಂಗೀತದ ಒಂದು ಸುವರ್ಣ ಅಧ್ಯಾಯ ಮುಗಿಯಿತೆಂದೇ ಹೇಳಬೇಕು. ಬಾ ಇಲ್ಲಿ ಸಂಭವಿಸು ಹಾಡು ಕೇಳುತ್ತಿದ್ದರೆ ಇಂದಿಗೂ ಮೈ ನವಿರೇಳುತ್ತದೆ, ಅಶ್ವತ್ಥ್ ನೆನಪಾಗುತ್ತಾರೆ. ಅದೆಷ್ಟೋ ಹಾಡುಗಳನ್ನು ಮತ್ತೆ ಮತ್ತೆ ಕೇಳಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇನೆ. ನನ್ನಂತೆ ಅಶ್ವತ್ಥ್ ಅವರನ್ನು ಈ ರೀತಿ ಆಹ್ವಾನಿಸಿಕೊಳ್ಳುವ ಸಾವಿರಾರು ಕನ್ನಡಿಗರಿದ್ದಾರೆ. ಗೆಳೆಯರಿದ್ದಾರೆ. ನನ್ನ-ಟಿ. ಎನ್‌. ಸೀತಾರಾಮ್‌ ನಡುವಿನ ಮಾತಿನಲ್ಲಿ ಅದೆಷ್ಟೋ ಬಾರಿ ಅಶ್ವತ್ಥ್ ನುಸುಳಿ ಬರುತ್ತಾರೆ. ನಮ್ಮನ್ನು ಮುಟ್ಟಿ ಮಾತನಾಡಿದಂತೆ ಅನುವಿಭಸುತ್ತೇವೆ. ಅದಕ್ಕೇ ಹೇಳಿದ್ದು, ಅಶ್ವತ್ಥ ವೃಕ್ಷಕ್ಕೆ ಸಾವಿಲ್ಲ. ನಿಜ.

‍ಲೇಖಕರು admin

28 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading