ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ತ ಧರಣಿಯ ಜೊತೆಗೆ ಕಣ್ಣೀರೂ ಮುಂದುವರಿದಿದೆ..

ಪ್ರಸಾದ್ ನಾಯ್ಕ್

ಪಂಜಾಬ್ ಮೂಲದ ನನ್ನ ಮಾಜಿ ಸಹೋದ್ಯೋಗಿಯೊಬ್ಬ ಬಾಕ್ಸರ್ ಆಗಬೇಕೆಂಬ ಕನಸನ್ನು ಕಂಡಿದ್ದವನು. ಅವನ ತಂದೆ ರಾಜ್ಯ ಪೋಲೀಸ್ ಇಲಾಖೆಯಲ್ಲಿ ಒಂದೊಳ್ಳೆಯ ಹುದ್ದೆಯಲ್ಲಿದ್ದವರು. ಸ್ಥಳೀಯ ರಾಜಕಾರಣಿಗಳೊಂದಿಗೆ ತಕ್ಕಮಟ್ಟಿನ ಪರಿಚಯಗಳೂ ಅವರಿಗಿದ್ದವಂತೆ. ಇದನ್ನೆಲ್ಲಾ ನಾನಿಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ ಈ ದೇಶದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕೆಂದರೆ ಪ್ರತಿಭೆಯೊಂದಷ್ಟೇ ಸಾಕಾಗುವುದಿಲ್ಲ ಎಂಬುದಕ್ಕಾಗಿ. ಅದೇನೇ ಇರಲಿ. ಹಲವು ಕಾರಣಗಳಿಂದಾಗಿ ಅವನ ಬಾಕ್ಸಿಂಗ್ ಕನಸು ಈಡೇರಲಿಲ್ಲ. ಸದ್ಯ ‘ಸುಲ್ತಾನ್’ ಚಿತ್ರದಲ್ಲಿರುವ ಸಲ್ಮಾನ್ ಖಾನ್ ನಂತೆ ಅವನು ಸರಕಾರಿ ಸಂಸ್ಥೆಯೊಂದರಲ್ಲಿ ಗುಮಾಸ್ತನಂತೆ ಕಾಲಕಳೆಯುತ್ತಿದ್ದಾನೆ. ಅವನ ಕನಸು ಬಹುಷಃ ಅವನಿಗೇ ಇಂದು ಮರೆತುಹೋಗಿರಬಹುದು.

ಹೀಗೆ ಅದೆಷ್ಟೋ ದೊಡ್ಡ ಕನಸುಗಳನ್ನು ಕಾಣುವ ಈ ದೇಶದ ಕೆಲ ಮಕ್ಕಳು ಆದದ್ದಾಗಲಿ ಎಂದು ಅವುಡುಗಚ್ಚಿ ಮುನ್ನಡೆಯುತ್ತಾರೆ. ರಾಜಕೀಯ, ಲಂಚ, ವಶೀಲಿಬಾಜಿ, ಶಿಫಾರಸ್ಸು, ಲೈಂಗಿಕ ದೌರ್ಜನ್ಯ… ಇತ್ಯಾದಿ ಕೆಂಡದ ಹಾದಿಯನ್ನು ದಾಟಿಯೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದು ನಿಲ್ಲುತ್ತಾರೆ. ಒಲಿಂಪಿಕ್ಸ್, ಕಾಮನ್ ವೆಲ್ತ್ ನಂತಹ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸುತ್ತಾರೆ. ಇತಿಹಾಸ ಸೃಷ್ಟಿಸುತ್ತಾರೆ. ಇಂದು ಈ ದೇಶದ ಮಹಿಳಾ ಕ್ರೀಡಾಪಟುವೊಬ್ಬಳು ತನ್ನ ಕ್ಷೇತ್ರದಲ್ಲಿ ದೊಡ್ಡ ಯಶಸ್ಸನ್ನು ಗಳಿಸಿದ್ದಾಳೆ ಎಂದರೆ ಅದರ ಹಿಂದಿರುವ ಕಷ್ಟ-ತ್ಯಾಗ-ಸವಾಲುಗಳು ಸಾಮಾನ್ಯರ ಕಲ್ಪನೆಗೆ ನಿಲುಕುವಂಥದ್ದಲ್ಲ ಎಂಬುದನ್ನು ನಾನು ನಿಸ್ಸಂದೇಹವಾಗಿ ಹೇಳಬಲ್ಲೆ. ಏಕೆಂದರೆ ಕ್ರೀಡೆ ಎಂದರೆ ಕೇವಲ ದೈಹಿಕ ಫಿಟ್ನೆಸ್ ಮಾತ್ರವಲ್ಲ. ಅದು ಮೆಂಟಲ್ ಫಿಟ್ನೆಸ್ ವಿಷಯವೂ ಹೌದು. ಆಯಾ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂಬರ್ ಒನ್ ಆಗುವುದು ಹುಡುಗಾಟದ ಮಾತಲ್ಲ.

ಕಳೆದ ಕೆಲ ದಿನಗಳಿಂದ ದಿಲ್ಲಿಯಲ್ಲಿ ಇಂಥದ್ದೇ ಹಲವು ಸಾಧಕರು ಧರಣಿ ಕೂತಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಈ ದೇಶದ ಅತ್ಯುನ್ನತ ಪುರಸ್ಕಾರಗಳನ್ನು ಪಡೆದಿರುವ, ತಮ್ಮ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿರುವ ಈ ಅಸಾಮಾನ್ಯ ಹೆಣ್ಣುಮಕ್ಕಳು ಇಂದು ನ್ಯಾಯಕ್ಕಾಗಿ ಹೀಗೆ ಬೀದಿಗಿಳಿದು ನಿಲ್ಲಬೇಕಾಗಿ ಬಂದಿದೆ. ಇವೆಲ್ಲದರ ಮಧ್ಯೆಯೂ “ಅಂಥದ್ದೇನೂ ಆಗುತ್ತಿಲ್ಲಪ್ಪ” ಎಂಬಂತಿನ ಜಾಣಮೌನವನ್ನು ಈ ನಾಡಿನ ವ್ಯವಸ್ಥೆಯು ಕಾದುಕೊಂಡು ಬಂದಂತೆ ಕಾಣುತ್ತಿದೆ. ಆರೋಪಿಯು ಅಪರಾಧಿಯೋ ಅಲ್ಲವೋ ಎನ್ನುವುದು ಬೇರೆ ಮಾತು. ಅದನ್ನು ತನಿಖೆ, ವಿಚಾರಣೆ, ನ್ಯಾಯಾಂಗ… ಇತ್ಯಾದಿಗಳು ಕಾಲಾಂತರದಲ್ಲಿ ಸಾಬೀತುಪಡಿಸಲಿ. ಆದರೆ ಸಂತ್ರಸ್ತರ ಮಾತುಗಳನ್ನು ನಾವು ಸೌಜನ್ಯಕ್ಕೂ ಕೇಳಲು ತಯಾರಿಲ್ಲ ಎಂಬುದು ಮಾತ್ರ ಅಕ್ಷಮ್ಯ!

ನಿರ್ಭಯಾ ಅತ್ಯಾಚಾರ ಪ್ರಕರಣವು ಹುಟ್ಟಿಸಿದ್ದ ಸಂಚಲನದ ಹೊತ್ತಿನಲ್ಲಿ ನಾನು ದಿಲ್ಲಿಯಲ್ಲೇ ಇದ್ದೆ. ಆಗ ದೇಶದೆಲ್ಲೆಡೆ ಹಬ್ಬಿಕೊಂಡಿದ್ದ ಸೂತಕ ಮತ್ತು ಆಕ್ರೋಶದ ಭಾವಗಳು ದೊಡ್ಡ ಮಟ್ಟಿನ ಬದಲಾವಣೆಯನ್ನು ತರಬಲ್ಲದು ಎಂಬ ನಿರೀಕ್ಷೆಯೂ ನನಗಿತ್ತು. ಆದರೆ ಹಾಗೇನೂ ಆಗಲಿಲ್ಲ. ಇತ್ತೀಚೆಗೆ ನಾನಿರುವ ಮನೆಯಿಂದ ಕೆಲವೇ ಕೆಲವು ಕಿಲೋಮೀಟರುಗಳಷ್ಟು ದೂರವಿರುವ ಜನನಿಬಿಡ ಪ್ರದೇಶವೊಂದರಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ, ಅವಳ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಲಾಯಿತು. ಪತ್ರಿಕೆಗಳಿಗೆ ಅದೊಂದು ಫಿಲ್ಲರ್ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮತ್ತೇನೂ ಆಗಲಿಲ್ಲ. ಲೈಂಗಿಕ ಅಪರಾಧಗಳ ಬಗ್ಗೆ ನಾವು, ನಮ್ಮ ದೇಶದ ಕಾನೂನು, ಪ್ರಭುತ್ವ, ಮಾಧ್ಯಮಗಳು… ಹೀಗೆ ಬಹುತೇಕ ಎಲ್ಲರೂ ಈ ಮಟ್ಟಿಗೆ numb ಆಗಿಬಿಟ್ಟಿರುವುದು ಬಹಳ ಆಘಾತಕಾರಿ ಸಂಗತಿ.

ಈಗ ದಿಲ್ಲಿಯಲ್ಲಿ ನಡೆಯುತ್ತಿರುವ ಈ ಕ್ರೀಡಾಪಟುಗಳ ಧರಣಿಯು ಲೈಂಗಿಕ ಅಪರಾಧಗಳ ಬಗ್ಗೆ ನಾವೆಲ್ಲಾ ಅದೆಷ್ಟು ಕ್ಯಾಶುವಲ್ ಆಗಿಬಿಟ್ಟಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚಮಕ್-ಧಮಕಿನ ಕಾಂಕ್ಲೇವ್ ಗಳಲ್ಲಿ ಪ್ರೊಗ್ರೆಸಿವ್ ಸೋಗಿನಲ್ಲಿ ಭಾಷಣ ಬಿಗಿಯುವ ಯಾವ ದೊಡ್ಡ ಸೆಲೆಬ್ರಿಟಿಗಳೂ ಕೂಡ ಇದರ ಬಗ್ಗೆ ತಮ್ಮ ಬೆಂಬಲವನ್ನು ಸೂಚಿಸಲಿಲ್ಲ. ಘಟಾನುಘಟಿಗಳೆಂದು ಹೇಳಿಕೊಳ್ಳುವ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮಹಿಳಾ ಸಾಧಕಿಯರು ಈ ಬಗ್ಗೆ ಪಕ್ಷಭೇದವನ್ನು ಮರೆತು ಇವರಿಗೆ ಬೆಂಬಲವನ್ನು ನೀಡಬಹುದಿತ್ತು. ಅದೂ ಆಗಲಿಲ್ಲ. ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ತಾಸುಗಟ್ಟಲೆ ಪ್ಯಾನಲ್ ಡಿಸ್ಕಷನ್ ಗಳನ್ನು ನಡೆಸುವ ಮುಖ್ಯವಾಹಿನಿಯ ಮಾಧ್ಯಮಗಳೂ ಕೂಡ ಇದನ್ನು ಕಾಟಾಚಾರಕ್ಕಷ್ಟೇ ತೋರಿಸುತ್ತಿವೆ ಎಂಬುದನ್ನು ಬಿಟ್ಟರೆ ಮಾಧ್ಯಮಗಳಿಗೂ ಈ ಬಗ್ಗೆ ಆಸಕ್ತಿಯಿಲ್ಲ. ಒಟ್ಟಿನಲ್ಲಿ ಇದೊಂದು ಚರ್ಚಿಸಬೇಕಾದ ಸಂಗತಿಯೇ ಅಲ್ಲ ಎಂಬಂತೆ ಎಲ್ಲರೂ ಹಾಯಾಗಿ ಕೂತಿರುವಂತಿದೆ. ಅತ್ತ ಧರಣಿಯ ಜೊತೆಗೆ ಕಣ್ಣೀರೂ ಮುಂದುವರಿದಿದೆ.

ಈ ದೇಶದ ಖ್ಯಾತ ಸಾಧಕಿಯರೇ ನ್ಯಾಯಕ್ಕಾಗಿ ಇಷ್ಟು ಗೋಗರೆಯಬೇಕಾದರೆ, ಸಾಮಾನ್ಯ ಹೆಣ್ಣುಮಗಳೊಬ್ಬಳಿಗೆ ಯಾವ ಭರವಸೆಯನ್ನು ತಾನೇ ನಾವು ನೀಡಬಲ್ಲೆವು ಎಂಬ ಹತಾಶೆ ನನ್ನದು!

ಇದು ಬಹಳ ಕಾಲ ನೆನಪಿನಲ್ಲುಳಿಯುವ ದುಃಖಮಯ ಘಟನೆಗಳಲ್ಲೊಂದು.

‍ಲೇಖಕರು avadhi

6 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading