ಗೋಪಾಲ ವಾಜಪೇಯಿ
ಭಾರತೀಯ ಚಿತ್ರರಂಗದ ಹಿರಿಯಜ್ಜಿ ಜೊಹ್ರಾ ಸೆಹೆಗಲ್ ತನ್ನ ಪಾತ್ರ ಮುಗಿಯಿತು ಎಂಬಂತೆ ಬದುಕಿನ ವೇದಿಕೆಯಿಂದ ಶಾಶ್ವತವಾಗಿ ನಿಷ್ಕ್ರಮಣಗೈದಿದ್ದಾಳೆ. ಇನ್ನು ಆಕೆಯಂಥ ನಟಿ ನಮಗಿನ್ನು ಸಿಕ್ಕುವುದು ಕಷ್ಟ. ಅದು ಅಸಾಧ್ಯದ ಮಾತು ಕೂಡ.

ಜೊಹ್ರಾ ಅದ್ಭುತ ನಟಿ. ಅಷ್ಟೇ ಅಲ್ಲ, ಅವಳು ಅಚ್ಚರಿಗಳ ಆಗರ. ಸುದೀರ್ಘ ಕಾಲದ ತನ್ನ ನಟನಾ ವೃತ್ತಿಯಲ್ಲಿ, ಮುತ್ತಾತನಿಂದ ಹಿಡಿದು ಮರಿಮಗನ ತನಕ ನಾಲ್ಕೂ ತಲೆಮಾರಿನ ಕಲಾವಿದರೊಂದಿಗೆ ಒಡನಾಡುವ ಅವಕಾಶ ಬಹುಶಃ ಜೊಹ್ರಾಳಿಗೆ ಮಾತ್ರ ದೊರಕಿರಬೇಕು. ಅವಳನ್ನು ಬಿಟ್ಟರೆ, ಹೀಗೆ ಒಂದೇ ಮನೆತನದ ಬೇರೆ ಬೇರೆ ತಲೆಮಾರುಗಳ ನಟರೊಂದಿಗೆ ನಟಿಸಿದ ಬೇರೊಬ್ಬ ಕಲಾವಿದೆಯ ಹೆಸರು ನಮಗೆ ಕಾಣ ಸಿಗದು. ಪೃಥ್ವೀರಾಜ್ ರಿಂದ ರಣಬೀರ್ ತನಕ ಕಪೂರ್ ಕುಟುಂಬದ ನಾಲ್ಕೂ ತಲೆಮಾರಿನ ಕಲಾವಿದರೊಂದಿಗೆ ನಟಿಸಿದ್ದಾಳೆ ಜೊಹ್ರಾ…
ಹೀಗೆ, ಆ ಕಾಲದಿಂದ ಈ ಕಾಲದ ವರೆಗಿನ ತಲೆಮಾರುಗಳವರಿಗೆಲ್ಲ ಆತ್ಮೀಯಳಾಗಿಬಿಟ್ಟ ಜೊಹ್ರಾ ಸೆಹೆಗಲ್ ಬಗ್ಗೆ ಭಾರತೀಯರಿಗೆ ಏಕವಚನದ ಸಲುಗೆ.

1912ರ ಎಪ್ರಿಲ್ 27ರಂದು, ಸಂಪ್ರದಾಯವಾದಿ ಮನೆತನದಲ್ಲಿ ಜನಿಸಿದ ಈ ಹುಡುಗಿಗೆ ಅಪ್ಪ ಅಮ್ಮ ಇತ್ತ ಹೆಸರು ಸಾಹಿಬಜಾದಿ ಜೊಹ್ರಾ ಬೇಗಮ್ ಮುಮ್ತಾಜ್ ಉಲ್ಲಾ ಖಾನ್. ಹುಟ್ಟಿದ ಒಂದೇ ವರ್ಷಕ್ಕೆ ಗ್ಲಾಕೊಮಾದಿಂದಾಗಿ ತನ್ನ ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಳು. ಆದರೆ, ಅವಳ ಬದುಕಿನಲ್ಲಾಗಲೀ ಸಾಧನೆಯ ಹಾದಿಯಲ್ಲಾಗಲೀ ಅದೆಂದೂ ‘ವೈಕಲ್ಯ’ವೆನ್ನಿಸಲೇ ಇಲ್ಲ. ಈ ಒಂಟಿಗಣ್ಣಿನ ಹುಡುಗಿ ಒಡಹುಟ್ಟಿದ ಏಳು ಜನ ಸೋದರ ಸೋದರಿಯರೊಂದಿಗೆ, ಬಾಲ್ಯ ಸಹಜ ತುಂಟತನಗಳೊಂದಿಗೆ, ಡೆಹ್ರಾಡೂನಿನ ಸಮೀಪದ ಹಳ್ಳಿಯಲ್ಲಿ ಬೆಳೆದಳು. ಅಲ್ಲಿಂದ ಲಾಹೋರಿನ ಕ್ವೀನ್ ಮೇರಿ ಕಾಲೇಜಿಗೆ ಸೇರಿಸಲ್ಪಟ್ಟ ಜೊಹ್ರಾ ಕಲಾಲೋಕದ ಆಕರ್ಷಣೆಗೆ ಒಳಗಾದದ್ದು ಅಲ್ಲಿಯೇ. ಜೊಹ್ರಾ ಅಭಿನಯ ಮತ್ತು ನೃತ್ಯ ಕಲೆಯತ್ತ ಒಲವು ಬೆಳೆಸಿಕೊಂಡಿದ್ದಾಳೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಎಡಿನ್ ಬರ್ಗಿನಲ್ಲಿದ್ದ ಆಕೆಯ ಚಿಕ್ಕಪ್ಪ. ಜೊಹ್ರಾ ಪದವಿ ಶಿಕ್ಷಣ ಪೂರೈಸುತ್ತಲೇ ಯೂರೋಪಿನ ಒಬ್ಬ ಬ್ರಿಟಿಶ್ ನಟನ ಬಳಿ ತರಬೇತಿಗಾಗಿ ಅವಳನ್ನು ಕಳುಹಿಸಿಕೊಡುವ ಏರ್ಪಾಟು ಮಾಡಿದ. ಲಾಹೋರಿನಿಂದ ಕಾರಿನಲ್ಲಿ ಹೊರಟು, ಇರಾಣ್, ಸಿರಿಯಾ, ಡಮಾಸ್ಕಸ್ ಮತ್ತು ಇಜಿಪ್ತ್ ದಾಟಿಕೊಂಡು, ಬೋಟಿನಿಂದ ಬಂದರುಕಟ್ಟೆಯನ್ನು ತಲಪಿ ಯುರೋಪಿನತ್ತ ನೌಕಾಯಾನ ಆರಂಭಿಸಿದಳು.

ಯುರೋಪಿನಲ್ಲಿ ಡ್ರೆಸ್ಡೇನ್ ಎಂಬಲ್ಲಿ ಆಕೆ ಸೇರಿಕೊಂಡದ್ದು ಒಂದು ನೃತ್ಯಶಾಲೆಯನ್ನು. ಆ ತನಕ ಒಂದೇ ಒಂದು ಸಲವೂ ನೃತ್ಯದ ಕುರಿತು ಯೋಚಿಸದಿದ್ದವಳು ಜೊಹ್ರಾ. ಆದರೇನಂತೆ? ಯಾವ ಕಲೆಯೇ ಇರಲಿ, ಅಲ್ಪ ಕಾಲದಲ್ಲೇ ಕರಗತ ಮಾಡಿಕೊಳ್ಳುವೆನೆಂಬ ಆತ್ಮವಿಶ್ವಾಸ ಆಕೆಯದು. ಆ ಶಾಲೆಯಲ್ಲಿದ್ದ ಏಕಮಾತ್ರ ಭಾರತೀಯ ವಿದ್ಯಾರ್ಥಿನಿ ಜೊಹ್ರಾ ನೃತ್ಯಾಭ್ಯಾಸದ ಒಂದೊಂದೇ ಮೆಟ್ಟಿಲನ್ನು ಯಶಸ್ವಿಯಾಗಿ ಏರತೊಡಗಿದಳು.
ಜೊಹ್ರಾ ಅಲ್ಲಿ ಇದ್ದದ್ದು ಮೂರು ವರ್ಷಗಳು. ಆಗಲೇ ಅಲ್ಲಿ ಆಕೆ ಉದಯಶಂಕರ್ ಅವರ ತಂಡದ ನೃತ್ಯಗಳನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು. ಆ ಜಗತ್ಪ್ರಸಿದ್ಧ ನೃತ್ಯ ಗುರುವನ್ನು ಕಂಡು ತಾನೊಬ್ಬ ನೃತ್ಯಗಾತಿ ಎಂದು ಪರಿಚಯಿಸಿಕೊಂಡಳು. ಉದಯಶಂಕರ್ ಈಕೆಯನ್ನೊಮ್ಮೆ ಆಪಾದಮಸ್ತಕ ನೋಡಿ ಮುಗುಳ್ನಕ್ಕರು ಅಷ್ಟೇ.

ಆದರೆ 1935ರಲ್ಲೊಂದು ಬೆಳಿಗ್ಗೆ ಆಕೆಗೊಂದು ಟೆಲೆಗ್ರಾಂ. ಕಳುಹಿಸಿದ್ದವರು ಅದೇ ಆ ಜಗತ್ಪ್ರಸಿದ್ಧ ನೃತ್ಯ ಗುರು ! “ಕೂಡಲೇ ಬಂದು ನಮ್ಮ ತಂಡವನ್ನು ಸೇರಿಕೊಳ್ಳುವುದು… ನಾವೆಲ್ಲಾ ಜಪಾನ್ ದೇಶದ ನೃತ್ಯ ಯಾತ್ರೆ ಶುರು ಮಾಡಲಿದ್ದೇವೆ… ”
ಒಂದು ಕ್ಷಣವೂ ಯೋಚಿಸದೇ ಹೊರಟು ಉದಯಶಂಕರ್ ಅವರ ತಂಡದ ಸದಸ್ಯೆ ಆಗಿಬಿಟ್ಟಳು. ‘ಜಪಾನ್ ದೇಶದ ನೃತ್ಯ ಯಾತ್ರೆ’ ಮುಗಿಯುವಷ್ಟರಲ್ಲಿ ಆಕೆ ಉದಯಶಂಕರ್ ತಂಡದ ಪ್ರಮುಖ ನರ್ತಕಿ ಎನಿಸಿಕೊಂಡಳು.
ಅಲ್ಲಿಂದ ಮುಂದೆ ಸತತ ಎಂಟು ವರ್ಷ ಜೊಹ್ರಾ ನಡೆಸಿದ್ದು ಅಕ್ಷರಶಃ ‘ಜಗ ಜೈತ್ರಯಾತ್ರೆ’. ಹೋದಲ್ಲೆಲ್ಲ ಜೊಹ್ರಾ ಅದಾವ ಪರಿ ಮೋಡಿ ಮಾಡಿದಳೆಂದರೆ, ಮುಂದಿನ ಎಷ್ಟೋ ತಿಂಗಳುಗಳ ವರೆಗೆ ರಸಿಕರೆಲ್ಲ ಆಕೆಯ ನೃತ್ಯದ ಗುಂಗಿನಲ್ಲಿಯೇ ಇದ್ದರಂತೆ.
ದಣಿವರಿಯದ ಕುಣಿತ ಅವಳದು. ಆದರೂ 1940ರಲ್ಲಿ ಆಲ್ಮೋಡಾದ ‘ಉದಯಶಂಕರ್ ನೃತ್ಯ ಸಂಸ್ಥೆ’ಯಲ್ಲಿ ಜೊಹ್ರಾ ಗುರುವಾಗಿ ಕಲಿಸತೊಡಗಿದಳು. ಇಲ್ಲಿಯೇ, ಇದೇ ಆಲ್ಮೋಡಾದಲ್ಲಿಯೇ ಆಕೆಗೆ ಭಾವೀ ‘ಬಾಳಸಂಗಾತಿ’ಯ ಭೇಟಿ ಆದದ್ದು.
ಆತ ಕಮಲೇಶ್ವರ್ ಸೆಹೆಗಲ್ ; ನೃತ್ಯಪಟುವೂ ಆಗಿದ್ದ ಒಬ್ಬ ವಿಜ್ಞಾನಿ. ಪರಿಚಯ ಪ್ರೇಮವಾಗಿ, ಪರಿಣಯದ ಹಂತಕ್ಕೆ ಬಂದಾಗ ನಿರೀಕ್ಷಿಸಿದಂತೆ ಅಪ್ಪ-ಅಮ್ಮನ ಕಡೆಯಿಂದ ವಿರೋಧ ವ್ಯಕ್ತವಾಯಿತು. ಆಕೆಗಾಗಿ ಧರ್ಮಾಂತರಕ್ಕೂ ತಯಾರಾಗಿದ್ದರಂತೆ ಕಮಲ್ ನಾಥ್. ಆಗ ಜೋಹ್ರಾ ಅವರೇ ”ಅದೇನೂ ಬೇಡ, ನಿನ್ನ ಧರ್ಮ ನಿನಗೆ, ನನ್ನ ಧರ್ಮ ನನಗೆ. ನಮ್ಮಿಬ್ಬರ ವೈವಾಹಿಕ ಜೀವನಕ್ಕೆ ಈ ಧರ್ಮದ ಭೂತ ಅಡ್ಡ ಬರದಿರಲಿ,” ಎಂದರಂತೆ ಜೋಹ್ರಾ.
ಅಂತೂ ‘ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂಬ ಅವಳ ನಿಲುವಿಗೆ ಹೆತ್ತವರೇ ಹಿಂದೆ ಸರಿಯಬೇಕಾಯಿತು. ಅವರ ಆಶೀರ್ವಾದ ಪಡೆದೇ ಸಾಹಿಬಜಾದಿ ಜೊಹ್ರಾ ತನ್ನ ಹೆಸರಿನೊಂದಿಗೆ ಸೆಹೆಗಲ್ ಎಂಬ ಅಡ್ಡಹೆಸರನ್ನು ಸೇರಿಸಿಕೊಂಡಳು (1942). ಇದೆಲ್ಲ ನಡೆದಾಗ ಭಾರತದಾದ್ಯಂತ “ಚಲೇಜಾವ್ ಚಳವಳಿ”ಯ ಬಿಸಿಗಾಳಿ.
ಅಂಥದರಲ್ಲೇ 1945ರಲ್ಲಿ ಮುಂಬಯಿಗೆ ಸ್ಥಳಾಂತರಗೊಂಡಳು ಜೊಹ್ರಾ. ಏನಾದರೂ ಕೆಲಸ ಮಾಡಲೇಬೇಕಿತ್ತು. ‘ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್ಸ್’ (IPTA)ನ ಅನೇಕ ನಾಟಕಗಳಲ್ಲಿ ಭಾಗವಹಿಸಿದಳು. ಆ ನಂತರ ಹುಡುಕುವವಗೆ ಬಳ್ಳಿ ಕಾಲಿಗೆ ತೊಡಕಿತು ಎಂಬಂತೆ ಆಕೆಗೆ ಕಂಡದ್ದು ‘ಪೃಥ್ವೀ ಥಿಯೇಟರ್’. ಆಕೆ ತಡಮಾಡಲಿಲ್ಲ. ಪೃಥ್ವೀರಾಜ್ ಅವರನ್ನು ಭೇಟಿಮಾಡಿದಳು. ಒಂದೆರದೆ ನಿಮಿಷದ ಮಾತುಕತೆ. ಎದ್ದು ನಿಂತ ಪೃಥ್ವೀರಾಜ್ ಆಕೆಯ ಕೈಕುಲುಕುತ್ತ “ಇಂದಿನಿಂದ ನೀವು ‘ಪೃಥ್ವೀ ಥಿಯೇಟರ್’ನ ಬಳಗದ ಒಳಗಿನವರಾದಿರಿ,” ಎಂದರು. ಅಲ್ಲಿಂದ ಮುಂದೆ ಹದಿನಾಲ್ಕು ವರ್ಷಗಳ ಕಾಲ ಆಕೆ ಆ ಬಳಗದ ಸದಸ್ಯೆಯಾಗಿ, ‘ಪೃಥ್ವೀ ಥಿಯೇಟರ್’ನ ಪ್ರಮುಖ ನಟಿಯಾಗಿ ದೇಶಗಳನ್ನು ಸುತ್ತಿದಳು. ಅಲ್ಲಿದ್ದರೂ ಆಕೆಗೆ ಬೇರೆಯವರ ಸಿನಿಮಾಗಳಲ್ಲಿ ಪಾತ್ರವಹಿಸಲು ಅನುಮತಿಯಿತ್ತಿದ್ದರು ಪೃಥ್ವೀರಾಜ್.

1946ರಲ್ಲಿ ಜೊಹ್ರಾ ‘ಧರ್ತಿ ಕೆ ಲಾಲ್’ ಚಿತ್ರದ ಮೂಲಕ ಬೆಳ್ಳಿ ತೆರೆಯ ನಟಿ ಎನಿಸಿಕೊಂಡಳು. ಆ ನಂತರದ ಆಕೆಯ ಚಿತ್ರ ಚೇತನ್ ಆನಂದರ ‘ನೀಚಾ ನಗರ್’. ಕಾನ್ಸ್ ಚಿತ್ರೋತ್ಸವದಲ್ಲಿ ಬಹುವಿಧ ಪ್ರಶಂಸೆ ಪಡೆಯಿತು ಈ ಚಿತ್ರ.
ಭಾರತಕ್ಕೆ ಸ್ವಾತಂತ್ರ್ಯ ಬಂದು, ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣಗೊಂಡಿತಲ್ಲ, ಆ ಸಂದರ್ಭದಲ್ಲಿ ಆಕೆಯ ಪರಿವಾರದ ಬಹುತೇಕ ಜನ ಪಾಕಿಸ್ತಾನದಲ್ಲಿ ನೆಲೆಸಿದರು. ಜೊಹ್ರಾ ಮಾತ್ರ ತಾನು ‘ಭಾರತೀಯ’ಳಾಗಿಯೇ ಭಾರತದಲ್ಲೇ ಉಳಿಯಲು ಬಯಸಿದಳು. ಆದರೆ, ವೃತ್ತಿಸಂಬಂಧದಿಂದಾಗಿ ಮುಂದಿನ ಕಾಲು ಶತಮಾನ ಕಾಲ ಆಕೆ ಭಾರತದಿಂದ ದೂರವೇ ತಿರುಗಾಡಿಕೊಂಡು ಇರಬೇಕಾಯಿತು. ಏನಾದರೇನಂತೆ, ಕೊನೆತನಕ ಆಕೆ ಅಪ್ಪಟ ‘ಭಾರತೀಯ’ಳಾಗಿಯೇ ಬದುಕಿದಳಲ್ಲ… ಅದು ಹೆಮ್ಮೆಯ ಸಂಗತಿ.
“ಎಲ್ಲಾದಕ್ಕೂ ಸೈ, ನೋಡೇಬಿಡ್ತೀನೊಂದ್ ಕೈ…” ಎಂಬಂತೆ ಕಿರುತೆರೆಯಲ್ಲೂ ಮರೆಯದ ಪಾತ್ರಗಳನ್ನು ನಿಭಾಯಿಸಿದವಳು ನಮ್ಮ ಜೊಹ್ರಜ್ಜಿ. ‘ದಿ ಜೆವೆಲ್ ಇನ್ ದಿ ಕ್ರೌನ್’ (1984), ‘ತಂದೂರಿ ನೈಟ್ಸ್’ (1985–87), ಹಾಗೂ ‘ಅಮ್ಮಾ ಅಂಡ್ ದಿ ಫ್ಯಾಮಿಲಿ’ (1996) ಇವೇ ಮೊದಲಾದ ಟೀವಿ ಸೀರಿಯಲ್ಲುಗಳನ್ನು ಯಾರು ತಾನೇ ಮರೆತಾರು?
ಇವುಗಳ ಜತೆಗೆ, ಒಂದಷ್ಟು ಇಂಗ್ಲಿಷ್ ಸಿನೆಮಾಗಳು ಮತ್ತು ‘ದಿಲ್ ಸೇ’, ‘ಚೀನೀ ಕಮ್’ನಂಥ ಹಿಂದಿ ಚಿತ್ರಗಳು ಜೊಹ್ರಾಳ ತೂಕದ ಅಭಿನಯದಿಂದಾಗಿಯೆ ಅಮೋಘ ಚಿತ್ರಗಳೆನಿಸಿದವು. ಅಷ್ಟೊತ್ತಿಗಾಗಲೇ ಬೇರೆ ಯಾರಾದರೂ ಆಗಿದ್ದರೆ, ಸಾಕಪ್ಪ ಈ ಬಣ್ಣದ ಬದುಕು ಎಂದು ಮನೆಯಲ್ಲಿ ಕೂಡುತ್ತಿದ್ದರೋ ಏನೋ. ಆದರೆ, ಜೊಹ್ರಾ ಸೇಹೆಗಲ್ ದಣಿವರಿಯದ ಕಲಾವಿದೆ. ಮತ್ತೆ ಮತ್ತೆ ಬೇರೆ ಬೇರೆ ಪಾತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ತನ್ನ ಸಾಮರ್ಥ್ಯ ಪರೀಕ್ಷೆಗೆ ನಿಲ್ಲುತ್ತಿದ್ದಂಥವಳು. ತೊಂಬತ್ತರ ಇಳಿವಯಸ್ಸಿನಲ್ಲಿ ಆಕೆ ‘ಚಲೋ ಇಶ್ಕ್ ಲಡಾಯೇ’ (2002) ಚಿತ್ರದಲ್ಲಿ ಮಾಡಿದ ಫೈಟಿದೆಯಲ್ಲ… ಎಂಥವರಾದರೂ ಸೈ ಎನ್ನಬೇಕು, ಹಾಗಿತ್ತು ಆಕೆಯ ಅಭಿನಯ. ಮೊನ್ನೆ ಮೊನ್ನೆ 2007ರಲ್ಲಿ ‘ಸಾವರಿಯಾ’ದಲ್ಲಿ ಜೊಹ್ರಾ ಅಭಿನಯಿಸಿದಾಗ ಬರೋಬ್ಬರಿ ಆಕೆಗೆ ತೊಂಬತ್ತೈದು ವರ್ಷ ವಯಸ್ಸು.
ಕೆಲವು ವರ್ಷಗಳ ಹಿಂದೆ ಜೊಹ್ರಾ ತನ್ನ ತಂಗಿ ಉಜ್ರಾ ಬಟ್ ಜತೆ ಬಹಳ ವರ್ಷಗಳ ನಂತರ ಭೇಟಿಯಾದಾಗ ನೋಡಬೇಕಿತ್ತು ಆ ಸೋದರಿಯರಿಬ್ಬರ ಸಂಭ್ರಮವನ್ನು. ಹೂಬೆ ಹೂಬ್ ಅಕ್ಕನನ್ನೇ ಹೋಲುತ್ತಿದ್ದ ಉಜ್ರಾ ಬಟ್ ಪಾಕಿಸ್ತಾನದ ಹೆಸರಾಂತ ನಟಿ. ಈಗ ನಾಲ್ಕು ವರ್ಷಗಳ ಹಿಂದೆ ಆಕೆ ಅಸು ನೀಗಿದಳು.
ಜೊಹ್ರಾಗೆ ಕಲಾಕ್ಷೇತ್ರದ ದೊಡ್ಡ ದೊಡ್ಡ ಪ್ರಶಸ್ತಿಗಳು ಲಭಿಸಿವೆ. ಆ ಪೈಕಿ ಹೆಸರಿಸಬೇಕಾದವುಗಳೆಂದರೆ ‘ಪದ್ಮಶ್ರೀ’ (1998), ಮಧ್ಯ ಪ್ರದೇಶ ಸರಕಾರದ ‘ಕಾಳಿದಾಸ ಸಮ್ಮಾನ್’ (2001), ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ (2004) ಮತ್ತು ಭಾರತ ಸರಕಾರ ನೀಡುವ ಎರಡನೆಯ ಅತಿ ದೊಡ್ಡ ನಾಗರಿಕ ಸನ್ಮಾನವೆನಿಸಿದ ‘ಪದ್ಮ ವಿಭೂಷಣ’ ಪ್ರಶಸ್ತಿ (2010).
ಈ ಅಚ್ಚುಮೆಚ್ಚಿನ ಅಜ್ಜಿ ‘ಅಸಾಧ್ಯ ಅಜ್ಜಿ’ಯೂ ಹೌದು.
ಈ ಪ್ರತಿಭೆಯ ಕಾರಂಜಿ ಈಗ ನಮ್ಮೆಲ್ಲರ ನೆನಪಿನಲ್ಲಿ ಶಾಶ್ವತ.






ಜೊಹ್ರಾ ಸೆಹಗಲ್ ಬಗೆಗಿನ ತಮ್ಮ ಲೇಖನ ಜೊಹ್ರಾಳ ಬಗ್ಗೆ ತುಂಬ ಉಪಯುಕ್ತ ಮಾಹಿತಿ ನೀಡಿತು. ಮಡಿವಂತರ ಕಾಲದಲ್ಲಿಯೂ ಎಲ್ಲ ವಿರೋಧಗಳನ್ನು ಮೆಟ್ಟಿನಿಂತ ಆಕೆಯ ಧೈರ್ಯ ಹಾಗೂ ಕಲಾಕ್ಷೇತ್ರದಲ್ಲಿ ಅವಳ ಸಾಧನೆ ಅನನ್ಯ ಹಾಗೂ ಇಂದಿನ ಗೊಂದಲಮಯ ಯುವ ಪೀಳಿಗೆಗೆ ಸ್ಫೂತರ್ಿದಾಯಕವಾಗಿದೆ. ಅಜ್ಜಿಗೆ ನನ್ನದೊಂದು ಶ್ರದ್ಧಾ ಸುಮನ
Good artical … We got to know Who she is , How she was and what’s her life upto … She dedicated her whole life for entertainment . Thank you Gopal sir
ಗುರುಗಳೆ, ಲೇಖನ ತುಂಬಾ ಚೆನ್ನಾಗಿದೆ. ಜೊಹ್ರಾ ಬಗ್ಗೆ ಗೊತ್ತಿಲ್ಲದಿದ್ದ ಎಷ್ಟೊ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು!
Thank you sir! Good information on ಈ ಅಚ್ಚುಮೆಚ್ಚಿನ ಅಜ್ಜಿ… ಅಸಾಧ್ಯ ಅಜ್ಜಿ…