ಸಂಧ್ಯಾರಾಣಿ
ಕರೆಂಟ್ ಹೋದ ಸುಳಿವೂ ಕೊಡದಂತೆ ಯೂಪಿಎಸ್ ಗಳು ಮನೆಯನ್ನು ಝಗ್ ಎಂದು ಬೆಳಗುತ್ತಿರುವಾಗ ನಾನು ಯಾವುದೋ ಹಳೆ ನೆನಪಿನ ಸಂಭ್ರಮದಿಂದ ಎನ್ನುವಂತೆ ಮನೆಯಲ್ಲಿ ಕ್ಯಾಂಡಲ್ ಹಚ್ಚಿ ಸಂಭ್ರಮಿಸುತ್ತಿರುತ್ತೇನೆ.
ಹೀಗೆ ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ.
ಕತ್ತಲಲ್ಲಿ ಹಾಡು ಕೇಳುವುದು ನನಗಿಷ್ಟ. ಬೆಳಕೆಂದರೆ ಎಲ್ಲಾ ಕಣ್ಣಿಗೆ ಕಾಣುವ, ಆಡುವ ಮೊದಲೇ ಅರ್ಥವಾಗುವ ವರ್ಷಗಳ ಸಂಸಾರದಂತೆ ಕಂಡರೆ, ಈ ನಸುಗತ್ತಲು, ಇಷ್ಟು ಬೆಳಕು ನನಗೆ ಮೊದಲ ಪ್ರೇಮದ ದಿನಗಳಂತೆ ಕಾಣುತ್ತದೆ. ಮುಂದೇನು ಎನ್ನುವ ಊಹೆ, ಈ ತೆರೆಯಾಚೆಗೇನಿರಬಹುದು ಎನ್ನುವ ಕುತೂಹಲ, ಮಂದಬೆಳಕಿನ ಸ್ನಿಗ್ಧತೆ, ಹೊಸತರ ರೋಮಾಂಚನ ಎಲ್ಲಾ ಜೊತೆಜೊತೆಯಾಗಿದ್ದಂತೆ. ಅದಕ್ಕಾಗಿಯೇ ಯಾರಾದರೂ ಮನೆಗೆ ಯಾಕೆ ಯೂಪಿಎಸ್ ಹಾಕಿಸಿಲ್ಲ ಎಂದು ಕೇಳಿದರೆ ನಾನು ಸುಮ್ಮನೆ ನಕ್ಕು ಬಿಡುತ್ತೇನೆ.
ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಗಜಲ್ ಕೇಳುವ ಸುಖವನ್ನು ನಾನು ಪದಗಳಲ್ಲಿ ವರ್ಣಿಸುವುದಾದರೂ ಹೇಗೆ?
ಆದರೆ ಈ ಗಜಲ್ ನ ಸುಖ ಮನೆಯ ಗೋಡೆಗಳ ನಡುವೆ ಅಷ್ಟೇ ಅಲ್ಲ, ಬಯಲ ನಡುವೆಯೂ ದಕ್ಕಿಬಿಡಬಹುದು ಎನ್ನುವ ಸತ್ಯ ಮೊನ್ನೆ ರಾತ್ರಿ ಸಾಕ್ಷಾತ್ಕಾರವಾಗಿಬಿಟ್ಟಿತು. ಎಚ್ಎಸ್ಆರ್ ಲೇ ಔಟ್ ನಲ್ಲಿದ್ದ ಗೆಳತಿಯ ಮನೆಯಿಂದ ಹೊರಡುವಾಗಲೇ ಗಂಟೆ ಎಂಟಾಗಿತ್ತು. ಗೆಳತಿಯ ಮಗಳ ಮನೆ ಕೂಸನ್ನು ನೋಡಲು ಹೋಗಿದ್ದೆ. ಏಳುದಿನಗಳ ಕೂಸನ್ನು ಮಡಿಲಲ್ಲಿ ಮಲಗಿಸಿಕೊಂಡವಳಿಗೆ ಸಮಯ ಕಳೆದದ್ದೇ ಗೊತ್ತಾಗಿರಲಿಲ್ಲ. ಮನೆಯಲ್ಲಿ ಮಕ್ಕಳೆಲ್ಲಾ ಬೆಳೆದು ದೊಡ್ಡವರಾಗಿ ಜಾನ್ಸನ್ ಪೌಡರ್ ಪರಿಮಳ, ಅಂಗಾಲಿಗೆ ಮುತ್ತಿಡುವಾಗ ತಾಕುವ ಮೃದು ಸ್ಪರ್ಶ, ಎದೆಯ ಬಡಿತದ ಹಾಗೆ ಮಿಡಿಯುವ ನೆತ್ತಿಯ ಸುಳಿ ಎಲ್ಲವೂ ಮರೆತಂತೆಯೇ ಆಗಿಬಿಟ್ಟಿತ್ತು. ಒಂದಿಷ್ಟೂ ಅಳದ ಈ ಕೂಸನ್ನು ತೊಡೆಯಿಂದ ಇಳಿಸುವ ಮನಸ್ಸೇ ಆಗಿರಲಿಲ್ಲ. ಅಂತೂ ಹೊರಟು ಬಿಡಿಎ ಕಾಂಪ್ಲೆಕ್ಸ್ ಮುಂದೆ ಹಾದು ವರ್ತುಲ ರಸ್ತೆ ಸೇರುವಷ್ಟರಲ್ಲಿ ಉದ್ದಾನುದ್ದ ದೀಪಗಳ ಸಾಲು.
ಚಿಕ್ಕಂದಿನಲ್ಲಿ ನೋಡಿದ್ದೆ ಲಕ್ಷದೀಪೋತ್ಸವ ನೆನಪಾಯಿತು.
ಇನ್ನು ಜಯನಗರ ಮುಟ್ಟಲು ಕನಿಷ್ಟ ತೊಂಬತ್ತು ನಿಮಿಷಗಳು ಬೇಕು ಎಂದು ನಿಟ್ಟುಸಿರಿಟ್ಟವಳು ತಕ್ಷಣ ಕಾರಿನಲ್ಲಿ ಪೆಟ್ರೋಲ್ ಎಷ್ಟಿದೆ ಎಂದು ನೋಡಿದೆ, ಸಧ್ಯ ಪೆಟ್ರೋಲ್ ಸಾಕಷ್ಟಿತ್ತು. ಹೋಗಲಿ ಒಳ್ಳೆ ಹಾಡು ಕೇಳೋಣ ಎಂದು ಡ್ಯಾಷ್ ಬೋರ್ಡ್ ತೆಗೆದು ಸಿ ಡಿ ಗಳನ್ನು ನೋಡುತ್ತಿದ್ದೆ. ಅಷ್ಟರಲ್ಲಿ ಒಂದು ತಂಪಾದ ಗಾಳಿಯ ಅಲೆ. ಈ ಕಾಂಕ್ರೀಟ್ ರೋಡಿನಲ್ಲೂ ಹಾದು ಬಂದ ಮಣ್ಣಿನ ಘಮಲು, ಸಣ್ಣ ವಂದರಿಯಲ್ಲಿ ನೀರನ್ನು ಆಡಿಸಿದಂತೆ ಪುಟ್ಟ ಪುಟ್ಟ ಮಳೆಯ ಹನಿಗಳು. ಯಾಕೋ ಬದುಕು ತೀರಾ ಕೆಟ್ಟದಾಗೇನು ಇಲ್ಲ ಅನ್ನಿಸಿಬಿಟ್ಟಿತ್ತು. ನನ್ನ ಪ್ರೀತಿಯ ಗಜಲ್ ಗಳ ಸಿ ಡಿ ಹಾಕಿದವಳೇ ಅಂಗೈಯನ್ನು ಕಿಟಕಿಯ ಹೊರಗೆ ಚಾಚಿ, ಮಳೆಗೆ ಮನಸೊಪ್ಪಿಸಿ ಕುಳಿತುಬಿಟ್ಟೆ.
ನನ್ನ ಇಡೀ ಪಯಣ ಇದ್ದಕ್ಕಿದ್ದಂತೆ ಒಂದು ಗಜಲ್ ಯಾನವಾಗಿ ಪರಿವರ್ತನೆ ಆಗಿತ್ತು.
ಸುತ್ತ ಮುತ್ತಲೂ ಕತ್ತಲೂ, ಒದ್ದೆ ಒದ್ದೆ ರಸ್ತೆ, ಕಾರಿನಲ್ಲಿ ನಾನೊಬ್ಬಳೇ. ಕಾರಿನ ಸೈಡ್ ಮಿರರ್ ನಿಂದ ಕಾಣುತ್ತಿದ್ದ ಅಂಗೈಗೆ ಮುತ್ತಿನಂತೆ ತಂಪಾಗಿ ತಾಕಿ, ಬಿಸುಪನ್ನು ಹುಟ್ಟಿಸುತ್ತಿದ್ದ ಮಳೆ ಹನಿಗಳು, ಎದುರಿನ ಗಾಜಿನ ಮೇಲಿದ್ದ ಒಂದೊಂದು ಮಳೆ ಹನಿಯಲ್ಲೂ ಒಂದೊಂದು ಕಿರುದೀಪ, ಸಿ ಡಿಯಲ್ಲಿ ಹಾಡು, ’ಹೋಟೋಂ ಸೆ ಚೂಲೋ ತುಂ ಏ ಗೀತ್ ಅಮರ್ ಕರದೊ…’ – ನಿನ್ನ ತುಟಿಗಳಿಂದ ಒಮ್ಮೆ ಸ್ಪರ್ಶಿಸಿ ನನ್ನ ಈ ಹಾಡನ್ನು ಅಮರಗೊಳಿಸು ಎನ್ನುವ ಮಾತೇ ಎಷ್ಟು ಮೋಹಕ..
ಬದುಕಿನ ಪಯಣದಲ್ಲಿ ಇನ್ನಿಲ್ಲದಂತೆ ಸೋತಿರುವ ಜೀವವೊಂದು ’ಜಗ್ ನೆ ಛೀನಾ ಮುಝ್ ಸೆ, ಮುಝೆ ಜೋ ಭಿ ಲಗ ಪ್ಯಾರಾ, ತುಂ ಹಾರ್ ಕೆ ದಿಲ್ ಅಪ್ನಾ ಮೇರ ಜೀತ್ ಅಮರ್ ಕರ್ ದೊ’ – ನಾನು ಪ್ರೀತಿಸಿದ್ದದ್ದೆಲ್ಲವನ್ನೂ ಜಗತ್ತು ನನ್ನಿಂದ ಕಸಿದುಕೊಂಡಿದೆ, ಇದೊಂದು ಸಾರಿ ನೀನು ನನಗಾಗಿ ಮನಸ್ಸೋತು, ನನ್ನ ಗೆಲುವನ್ನು ಅಮರಗೊಳಿಸು ಎಂದು ಬೇಡವ ಈ ದನಿ ಬೇಡುತ್ತಲೇ ನೀನು ತುಟಿಯಿಂದ ಸ್ಪರ್ಶಿಸಿದ್ದೆಲ್ಲಾ ಅಮರವಾಗಿಬಿಡುತ್ತದೆ ಎಂದು ರೊಮ್ಯಾಂಟಿಕ್ ಸಹ ಆಗಿಬಿಡುತ್ತದೆ.
ಪ್ರೀತಿಗೆ, ವಿರಹಕ್ಕೆ, ನೋವಿಗೆ, ಒಂಟಿತನದ ಅಳಲಿಗೆ, ಸಂಭ್ರಮಕ್ಕೆ
ಅಷ್ಟೇ ಅಲ್ಲ ಒಂದು ಒಳನೋಟಕ್ಕೂ ನನಗೆ ಘಜಲ್ ಗಳು ಒದಗಿಬಂದು ಬಿಡುತ್ತವೆ.
ನನ್ನೆಲ್ಲಾ ಭಾವಗಳಿಗೂ ಅವುಗಳಲ್ಲಿ ಒಡಲು ಒಡಮೂಡಿರುತ್ತವೆ, ಆ ಎಲ್ಲಾ ಶಬ್ಧಗಳೂ ನನ್ನಲ್ಲಿ ಸಂವೇದನೆಗಳಾಗಿ ಮಿಡಿಯುತ್ತವೆ. ’ಪರ ಖ್ ನಾ ಮತ್, ಪರಖ್ ನೆ ಸೆ ಕೊಯಿ ಅಪ್ನಾ ನಹಿ ರೆಹ್ತಾ’ – ಯಾವುದನ್ನೂ, ಯಾರನ್ನೂ ಅತಿಯಾಗಿ ವಿಶ್ಲೇಷಣೆ ಮಾಡಬೇಡ, ಅದರಿಂದ ಕಡೆಗೆ ಯಾರೂ ನಿನ್ನವರಾಗಿ ಉಳಿಯುವುದಿಲ್ಲ – ಎನ್ನುವ ಈ ಮಾತನ್ನು ನಾನು ಎಂದೂ ಮರೆಯುವುದಿಲ್ಲ. ಜಗಜೀತ್ ಸಿಂಗ್ ನ ಆಳದ ದನಿಯಲ್ಲಿ ಈ ಮಾತುಗಳು ಪ್ರವಾದಿಯ ದನಿಯಾಗಿ ನನಗೆ ಕೇಳುತ್ತದೆ.
ಇಷ್ಟಿಷ್ಟೇ, ಒಂದಿಷ್ಟಿಷ್ಟೇ ಕಾರು ಚಲಿಸುತ್ತಿತ್ತು. ಜೋರು ಮಳೆ ಆದರೆ ದ್ವಿಚಕ್ರ ವಾಹನಗಳು ರಸ್ತೆಗಿಳಿಯುವುದಿಲ್ಲ. ಆದರೆ ಈ ತುಂತುರು ಹಾಡಿನಲ್ಲಿ ಒದ್ದೆಯಾಗುವ ಸುಖವನ್ನು ಯಾರೂ ಬೇಡ ಅಂದಂತಿರಲಿಲ್ಲ. ಅಕ್ಕ ಪಕ್ಕ ಎಲ್ಲೆಲ್ಲೂ ವಾಹನಗಳು, ನಡುವೆ ಹಾಡಿನ ದೋಣಿಯಲ್ಲಿ ನಾನು. ಸಿಲ್ಕ್ ಬೋರ್ಡ್ ಸಿಗ್ನಲ್ ಇನ್ನೂ ಕಣ್ಣಿನ ಅಳವಿಗೂ ದಕ್ಕಿರಲಿಲ್ಲ, ಅಷ್ಟರಲ್ಲಿ ಮತ್ತೊಂದು ಹಾಡು, ’ದೇಖ್ ಕೆ ತುಮ್ ಕೊ, ಹೋಶ್ ಮೆ ಆನ ಭೂಲ್ ಗಯಾ, ಯಾದ್ ರಹೆ ತುಮ್, ಔರ್ ಜಮಾನ ಭೂಲ್ ಗಯಾ’ – ನಿನ್ನನ್ನು ಕಂಡ ತಕ್ಷಣ ಎಚ್ಚರಕ್ಕೆ ಬರಬೇಕು ಎನ್ನುವ ಎಚ್ಚರವೇ ಮರೆತುಹೋಯಿತು, ನೆನಪಿನಲ್ಲಿ ಉಳಿದದ್ದು ನೀನು ಮಾತ್ರ, ಇಡೀ ಜಗತ್ತೇ ಮರೆತು ಹೋಯಿತು – ಸುಮಾರು ಹದಿನೈದು ವರ್ಷಗಳ ಹಿಂದೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಜಗಜೀತ್ ಸಿಂಗ್ ಮತ್ತು ಗುಲಾಮ್ ಆಲಿ ಯವರ ಗಜಲ್ ಕಾರ್ಯಕ್ರಮ ಇತ್ತು. ಆಗಿನ್ನೂ ನನಗೆ ಒಬ್ಬಳೇ ಓಡಾಡಿ ಅಭ್ಯಾಸ ಇರಲಿಲ್ಲ.
ಆದರೂ ಮೊದಲ ಸಲ ಧೈರ್ಯ ಮಾಡಿ ಒಬ್ಬಳೇ ಹೋಗಿ ನೋಡಿದ್ದ ಕಾರ್ಯಕ್ರಮ ಅದು.
ಗಜಲ್ ಕೇಳುತ್ತಾ ಕೇಳುತ್ತಾ ತುಟಿಗಳ ಮೇಲೆ ನಗು, ಕಣ್ಣುಗಳಿಂದ ನನಗೇ ಗೊತ್ತಿಲ್ಲದಂತೆ ಜಾರುತ್ತಿದ್ದ ಹನಿಗಳು… ’ಕಹಿ ಕಹಿ ಸೆ ಹರ್ ಚೆಹರಾ ತುಮ್ ಜೈಸಾ ಲಗ್ತಾ ಹೈ, ತುಂ ಕೊ ಭೂಲ್ ನ ಪಾಯೇಂಗೆ ಹಮ್ ಐಸಾ ಲಗ್ತಾ ಹೈ’ – ಎಲ್ಲೆಲ್ಲೋ ಯಾವುದ್ಯಾವುದೋ ಮುಖಗಳು ನಿನ್ನ ಹಾಗೆಯೇ ಕಾಣಿಸಿಬಿಡುತ್ತವೆ, ನಿನ್ನನ್ನು ಮರೆಯುವುದು ಸಾಧ್ಯವೇ ಇಲ್ಲ ಎನ್ನಿಸಿಬಿಡುತ್ತದೆ -’ಔರ್ ತೊ ಸಬ್ ಕುಚ್ ಠೀಕ್ ಹೈ ಲೇಕಿನ್, ಕಭಿ ಕಭಿ ಯೂಹಿ ಚಲ್ತಾ ಫಿರ್ತಾ ಶೆಹರ್, ಅಚಾನಕ್ ಅಚಾನಕ್ ತನ್ಹಾ ಲಗ್ತಾ ಹೈ, ತುಮ್ ಕೊ ಭೂಲ್ ನ ಪಾಯೇಂಗೆ ಹಮ್ ಐಸಾ ಲಗ್ತಾ ಹೈ ’ – ಹಾಗೆ ಎಲ್ಲವೂ ಸರಿಯಾಗಿದೆ, ಆದರೆ ಇದ್ದಕ್ಕಿದ್ದಂತೆ ಆರಾಮಾಗಿ ಓಡಾಡಿಕೊಂಡಿರುವ ಈ ಶಹರ ಅಚಾನಕ್ಕಾಗಿ ಏಕಾಕಿ ಅನಿಸಿಬಿಡುತ್ತದೆ, ನಿನ್ನನ್ನು ಮರೆಯುವುದು ಸಾಧ್ಯವೇ ಇಲ್ಲ ಅನ್ನಿಸಿಬಿಡುತ್ತದೆ – ದೇವರೆ, ಗಜಲ್ ಎಂದರೆ ಗಾಯಗೊಂಡ ಜಿಂಕೆಯ ಚೀತ್ಕಾರ ಅಂದವರು ಯಾರು?
ಹಾಡುಗಳನ್ನು ಕೇಳುತ್ತಾ ಕೆಲವೊಮ್ಮೆ ರೀ ಪ್ಲೇ ಬಟನ್ ಒತ್ತುತ್ತಾ, ಕೆಲವು ಹಾಡುಗಳನ್ನು ಲೂಪ್ ಗೆ ಹಾಕುತ್ತಾ, ಅಂಗೈಲಿ ಹನಿ ಹಿಡಿಯುತ್ತಾ, ಹನಿಯಾಗುತ್ತಾ ನನಗೇ ಅರಿವಿಲ್ಲದಂತೆ ಸಿಲ್ಕ್ ಬೋರ್ಡ್ ದಾಟಿದ್ದೆ. ಇಲ್ಲಿಂದ ಹಾದಿ ಸ್ವಲ್ಪ ಸಲೀಸು. ಚಲನೆಗೆ ಒಂದಿಷ್ಟು ವೇಗ. ನನಗೆ ಗುಲ್ಜಾರ್ ನೆನಪಾದರು. ಸಿ ಡಿ ಬದಲಿಸಿದೆ. ಮೊದಲಿಗೇ ’ಇಜಾಜತ್’ ಚಿತ್ರದ ಹಾಡು, ಇದೊಂದು ಮಧುರವಾದ ಯಾತನೆಯಂತಹ ಹಾಡು. ’ಮೇರಾ ಕುಚ್ ಸಾಮಾನ್ ತುಮ್ಹಾರೆ ಪಾಸ್ ಪಡಾ ಹೈ’ – ಅವನಿಗೆ ಮದುವೆ ಆಗಿದೆ, ಅವನ ಹೆಂಡತಿ ಮನೆಯಲ್ಲಿ ಉಳಿದಿದ್ದ ಪ್ರೇಯಸಿಯ ನೆನಪುಗಳೆನ್ನುವ ವಸ್ತುಗಳನ್ನು ವಾಪಸ್ ಕಳಿಸಿದ್ದಾಳೆ. ಅದೀಗ ಅವಳ ಮನೆ, ಹೆಜ್ಜೆ ಹೆಜ್ಜೆಗೂ ಕಾಣುವ ಹಳೆಯ ನೆನಪುಗಳನ್ನು ಹೊರಗೆ ಹಾಕಿಯೇ ಅವಳು ತನ್ನ ಮನೆ ಕಟ್ಟಿಕೊಳ್ಳಬೇಕು. ಆ ವಸ್ತುಗಳಾಚೆಗೂ ಆ ಮನೆಯಲ್ಲಿ ತಾನು ಏನೇನು ಬಿಟ್ಟುಬಂದಿದ್ದೇನೆ ಎನ್ನುವುದನ್ನು ಪ್ರೇಯಸಿ ಒಂದು ಕವಿತೆಯಾಗಿ ಕಳಿಸಿಕೊಡುತ್ತಾಳೆ.
’ಪಥ್ಜಡ್ ಮೆ ಕುಚ್ ಪತ್ಥೋಂಕಿ ಗಿರ್ ನೆ ಕಿ ಆಹಟ್, ಕಾನೋಂ ಮೆ ಇಕ್ ಬಾರ್ ಪೆಹನ್ ಕೆ ಲೌಟ್ ಆಯೀ ಹು, ಪಥ್ಜಡ್ ಕಿ ವೊಹ್ ಶಾಖ್ ಅಭೀ ತಕ್ ಕಾಂಪ್ ರಹಿ ಹೈ, ಓ ಶಾಖ್ ಗಿರಾದೋ, ಮೇರೆ ಓ ಸಾಮಾನ್ ಲೌಟಾದೋ…’
– ಗ್ರೀಷ್ಮ ಋತುವಿನಲ್ಲಿ ಆಸರೆ ಕಳೆದುಕೊಂಡು ನೆಲಕ್ಕುರುಳಿದ ಆ ಎಲೆಗಳ ಹೆಜ್ಜೆಸದ್ದನ್ನು ನನ್ನ ಕಿವಿಯಲ್ಲಿ ತುಂಬಿಕೊಂಡೇ ಅಲ್ಲಿಂದ ಹೊರಟಿದ್ದೇನೆ. ನೋಡು ಆ ಒಂದೇ ಒಂದು ಟೊಂಗೆ ಇನ್ನೂ ಕಂಪಿಸುತ್ತಲೇ ಇದೆ, ಅದೊಂದು ಕೊಂಬೆ ಉರುಳಿಸಿಬಿಡು, ಅದನ್ನೂ ವಾಪಸ್ ಕಳಿಸಿಬಿಡು…’ –
ಎಂತಹ ವಿಷಾದ ಆ ಅಕ್ಷರಗಳಲ್ಲಿ.
ಆ ಕೊನೆಯ ಟೊಂಗೆಯನ್ನು ಕಡೆಯುವುದು ಯಾಕೆ ಅಂತಹ ಯಾತನೆ ಕೊಡುತ್ತದೆ? ಅದನ್ನು ಯಾವ ನೆನಪಿಗಾಗಿ ಹಾಗೇ ಇಟ್ಟುಕೊಂಡಿರುತ್ತೇವೆ? ಆ ಒಂದು ಹಾದಿಗೆ ಯಾಕೆ ಪ್ರತಿದಿನ ಹಣತೆ ಹಚ್ಚುತ್ತೇವೆ?
’ಏಕ್ ಸೌ ಸೋಲಾ ಚಾಂದ್ ಕಿ ರಾತೆ, ಔರ್ ತುಮ್ಹಾರಾ ಕಾಂದೆ ಕಾ ತಿಲ್…’ – ‘ಚಂದ್ರನ ಕಾಂತಿಯ ಆ ನೂರಾ ಹದಿನಾರು ರಾತ್ರಿಗಳು ಮತ್ತು ನಿನ್ನ ಹೆಗಲಿನ ಮೇಲಿನ ಆ ಮಚ್ಚೆ …. – ಎಲ್ಲಿಯ 116 ಸಂಖ್ಯೆ ಮತ್ತು ಎಲ್ಲಿಯ ಅವನ ಹೆಗಲ ಮೇಲಿನ ಆ ಮಚ್ಚೆ? ಗುಲ್ಜಾರ್ ಅದ್ಯಾಕೆ ಇದನ್ನು ಬಳಸಿದರು? ಒಂದು ಸ್ವಾರಸ್ಯಕರ ವಿಷಯ ಎಂದರೆ , ಈ ಹಾಡನ್ನೂ ಸೇರಿ ಪಂಚಮ್ ರ ನೂರಾ ಹದಿನಾರು ರಾಗ ಸಂಯೋಜನೆಗಳಿಗೆ ಗುಲ್ಜಾರ್ ಶಬ್ಧಗಳಾಗಿದ್ದಾರೆ. ’ಗುಲ್ಜಾರ್ ಹಾಗೆ ನೂರಾ ಹದಿನಾರು ಎಂದು ಬರೆದಿರುವುದನ್ನು ಹೀಗೂ ನೋಡಬಹುದು, ಅಷ್ಟು ದಿನ ಜೊತೆಗಿದ್ದರು, ಮತ್ತು ಜೊತೆಗಿದ್ದ ಒಂದೊಂದು ದಿನವೂ ನೆನಪಿದೆ ಎಂದು ಹೇಳುವುದೂ ಪ್ರೇಮದ ಆಳವನ್ನು ಹೇಳುತ್ತದೆ ಅಲ್ಲವೆ’ ಎಂದು ಬರೆದಿದ್ದ ಸ್ನೇಹಿತನ ಮಾತು ನೆನಪಾಯ್ತು. ಚಂದ್ರನಿಗೆ ನೂರಾ ಹದಿನಾರು ಖಳೆಗಳಿವೆ ಎನ್ನುತ್ತಾರೆ.
ಚಂದ್ರನ ಆ ನೂರ ಹದಿನಾರು ಕಲೆಗಳನ್ನು ಪ್ರೇಮಿಯ ಹೆಗಲ ಮೇಲಿನ ಮಚ್ಚೆಯ ಎದುರು ನಿವಾಳಿಸಬೇಕೆನ್ನುವ ಈ ಹಾಡನ್ನು ಕೇಳಿದಷ್ಟೂ ನನಗೆ ಇಂಗದ ದಾಹ. ಪತ್ರದಲಿ ಕಟ್ಟಿಟ್ಟ ಆ ರಾತ್ರಿ, ಒಂದೇ ಕೊಡೆಯಲ್ಲಿ ಇಬ್ಬರೂ ಅರ್ದರ್ಧ ನೆಂದ ಆ ಮಳೆಯ ಒದ್ದೆ… ಅಷ್ಟು ಸುಲಭವೆ ನೆನಪುಗಳನ್ನು ಮನೆಯಿಂದ, ಮನಸ್ಸಿನಿಂದ ಗಂಟು ಕಟ್ಟಿ ಕಳಸಿಬಿಡುವುದು? ಅಷ್ಟು ಸುಲಭವೆ ಆ ಕಡೆಯ ಟೊಂಗೆಯನ್ನು ಕಡಿದುಬಿಡುವುದು?
ಜಯದೇವ ಸರ್ಕಲ್ ಹತ್ತಿರ ಬಲಕ್ಕೆ ತಿರುಗಿದರೆ, ಸಿಗ್ನಲ್ ತಪ್ಪಿಸಿ ಬೇಗ ಮನೆ ಸೇರಬಹುದು, ಆದರೆ ಆ ಮಳೆಯ ರಾತ್ರಿಯಲ್ಲಿ ಗುಲ್ಜಾರ್ ಮಾಯೆಯಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ? ನೆನಪ ಮಳೆಗೆ ಮೈ ಒಡ್ಡುತ್ತಾ ನಾನು ರಿಂಗ್ ರೋಡಿನಲ್ಲಿ ಪಯಣ ಮುಂದುವರಿಸಿದೆ.
ಹಾಡು ಲೂಪ್ ನಲ್ಲಿ ತಿರುಗುತ್ತಲೇ ಇತ್ತು.
ನಿಮ್ಮ ಜೊತೆ ಹಾಡಿನ ಪ್ರಯಾಣ ನಾನು ಅನುಭವಿಸಿದೇ ಸಂಧ್ಯಾ ವಂದನೆಗಳು ಸುO ದರ ಬರೆಹ
Thank you so much Uma 🙂
ಬೇರೆ ಯಾವುದೋ ಲೋಕಕ್ಕೆ ಕರೆದೊಯ್ದಿರಿ. ಹೂತಿದ್ದೆಲ್ಲಾ ಸರ್ಪೇಸಿಗೆ ಬಂದವು………….
ಹಾಗಾದರೆ ಬರಹಕ್ಕೆ ಸಾರ್ಥಕತೆ 🙂
ಸಂಧ್ಯಾ ರಾಣಿ ಯವರೇ ,ನೀವನ್ನೋದು ನೂರಕ್ಕೆ ನೂರು ನಿಜ.ಕತ್ತಲೆಯಲ್ಲಿರುವ ಭಾವಗಳುಬ್ಬರ ಬೆಳಕಿನಲ್ಲಿ ಲ್ಲ. ಅಲ್ಲಿ ರುವ ಹಿತ ,ಆನಿತಾಂತತೆ ನೀಡುವ ಮುದದ ಮುಂದೆ ಎಲ್ಲವೂ ಸುಳ್ಳು.ಕಣ್ಣುಮುಚ್ಚಿಕೊಂಡು, ಎಲ್ಲಾ ಲೈಟ್ ಆಫ್ ಮಾಡಿ ಸುಂದರ ,ಸುಮಧುರ ಹಾಡು ಕೇಳುತ್ತಾ ಮೈಮರೆಯುವುದು ನನ್ನ ಹವ್ಯಾಸ.ಅದೇ ಸ್ವರ್ಗಸುಖ.ನಿನಗೇನು ಹುಚ್ಚೇ ಅಂತ ಎಲ್ಲರೂ ನನ್ನ ಛೇಡಿಸುವುದುಂಟು.ನಾ ನಕ್ಕು ಸುಮ್ಮನಾಗಿ ಬಿಡ್ತೇನೆ. ನಿಮ್ಮ ಲೇಖನ ಕ್ಕೆ ಧನ್ನವಾದಗಳು.
ಹುಚ್ಚಿನಲ್ಲಿರುವ ಸುಖವನ್ನು ಇನ್ನೊಬ್ಬರಿಗೆ ವಿವರಿಸುವುದು ಹೇಗೆ?!
Mane katte sumaru varsha agiddaru, kattlannu anbhavisabekendu manege ups hakisiralilla. Ittichege hendatiya balavantakke ups hakisabekayitu.
ಹೇಗೋ ಇಲ್ಲಿಯವರೆಗೂ ಆ ಒತ್ತಡವನ್ನು ತಡೆದುಕೊಂಡಿದ್ದೇನೆ…
ಘಜ್ಹಲ್ ರಸವನ್ನು ಕನ್ನಡದಲ್ಲಿ ಇಷ್ಟು ಸುಂದರವಾಗಿ ಸರಳವಾಗಿ ಅಪ್ಯಾಯಮಾನವಾಗಿ ಹೆಣೆಯುದೆಂದರೆ ಅದು ಗೆಳತಿ ಸಂಧ್ಯಾ ಅವರೆ. ಇಂದು ದಿನಪೂರ್ತಿ ಘಜ್ಹಲ್ಗಳ ಜೊತೆಗೆ. ಧನ್ಯವಾದಗಳು ಈ ಲೇಖನಕ್ಕೆ.
ಥ್ಯಾಂಕ್ಯೂ ಹೇಮಾ 🙂
Sandhya You took us with you along your journey in the rain. We also enjoyed the kathak dance steps of the drizzling rain along with the Gazals. We have to learn from you how to see the beauty in each and every step of life. You also gave the meaning of the Gazals also. Ienjoyed a lot dear. I love you a lot and also proud of you dear. Hats off to you and your writings.
Thanks a lot aunty 🙂 it means a lot to me…
ಕತ್ತಲ ಹಾಡು ಅತಿ ಸುಂದರ . ಮೆಚ್ಚುಗೆಯ ಧನ್ಯವಾದಗಳು ಸಂಧ್ಯಾ.
ಹೌದು ಕತ್ತಲೆಂದರೆ ನಿಗೂಢ, ಕತ್ತಲೆಂದರೆ ನಿರೀಕ್ಷೆ…
ಆ ಕೊನೆಯ ಟೊಂಗೆಯನ್ನು ಕಡೆಯುವುದು ಯಾಕೆ ಅಂತಹ ಯಾತನೆ ಕೊಡುತ್ತದೆ? ಅದನ್ನು ಯಾವ ನೆನಪಿಗಾಗಿ ಹಾಗೇ ಇಟ್ಟುಕೊಂಡಿರುತ್ತೇವೆ? ಆ ಒಂದು ಹಾದಿಗೆ ಯಾಕೆ ಪ್ರತಿದಿನ ಹಣತೆ ಹಚ್ಚುತ್ತೇವೆ? ……………..
ಓದಿ ಮುಗಿಸುವಾಗ ಕಣ್ಣಲ್ಲಿ ನನಗೇ ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು….
ಈ ಬರಹ ಇಷ್ಟು ಬೇಗ ಮುಗಿಯಬಾರದಿತ್ತು … ಉಹು ಯಾವತ್ತೂ ಮುಗಿಯಲೇಬಾರದಿತ್ತು ….
ತರ್ಕ, ಕಾರಣಗಳಾಚೆಗೆ ಮಿಡಿಯುವ ಬದುಕು ಸಾರ್ಥಕ….
Nanage aaptavada geetegalannella ullekhisiddiri..sundara baraha..hale nenapugalu… neevu Wadali Brothers’rannu keliddiri anta andkoltene.
ಗಜಲ್ ರಿಂಗಣದೊಂದಿಗೆ ಪಯಣವೆಂದರೆ ಅದೊಂದು ಕೈಗೆಟುಕದ ಆದರೂ ನಮ್ಮದೆನ್ನುವ, ಒಳ ಇಳಿದಷ್ಟು ರಸಾಸ್ವಾದದ ಝರಿಯ ಬುಗ್ಗೆಯೊಂದು ಉದ್ದೀಪಗೊಂಡು ಪ್ರೋಕ್ಷಿತ ಚಿಲುಮೆಯ ಅಮಲಿನ ಗಂಧಭರಿಸಿ ಸುಮನಿಸುವ ಮೈಮರೆವ ಯಾನ… ಜೊತೆಗೆ ನಾವೂ ನಿಮ್ಮ ಭಾವದಲ್ಲೇ ತೇಲಿದ್ದನ್ನು ಬೇರೆ ಹೇಳಬೇಕೆ ಸಂಧ್ಯಾಜಿ…ನಡೆಯಲಿ ತೇಲುತ್ತ ನಿಮ್ಮ ಗಜಲ್ಗಾನದ ಕಾವ್ಯಗಾನಯಾನ…-ಲಕ್ಷ್ಮೀಕಾಂತ ಇಟ್ನಾಳ
ಗಜಲ್ ಲಹರಿ
ನಿಮ್ಮೊಂದಿಗೆ ನಾನೂ ಪಯಣಿಸಿದೆ
ಆಗಾಗ್ಗೆ ಅಲ್ಲಿನ ಮಳೆಹನಿಗಳು ನನ್ನ ಕಣ್ಣಿಗೆರಚುತ್ತಿದ್ದವು . ಹಿತವಾದ ನೋವು . ಓದಿದ ನಂತರ ಆವರಿಸಿದ ಖಾಲಿಶೂನ್ಯತೆ . ಭಾವಭಿತ್ತಿಯಲ್ಲಿ ಆವರಿಸಿದ ಗಜಲ್ ಗುಂಗು
ಮರುಳಾದೆ
ಅಕ್ಕೋ…ಸೂಪರ್.