ರೇಖಾ ಗೌಡ
ಅಕ್ಷರ ಬೆಳೆಯುವ ರೈತ,
ಅಕ್ಷರ ದಾಸೋಹ
ಹುಟ್ಟುಹಬ್ಬವೊಂದಕ್ಕೆ ಯಾರೋ ಬರೆದ ಸಾಲುಗಳಿವು.
ಈ ಪರಿಕಲ್ಪನೆ, ಹಾರೈಕೆ ಇಷ್ಟ ಆಯ್ತು, ಸ್ಫೂರ್ತಿದಾಯಕವೂ ಹೌದು.
ಭೂಮಿ ಕೃಷಿಯಷ್ಟೇ ಸವಾಲಿನ ಕೆಲಸ ಅಕ್ಷರ ಕೃಷಿ!ಧ್ಯಾನ, ತಪಸ್ಸು, ಅರಿವು, ಏಕಾಗ್ರತೆ, ಏಕಾಂತ, ದೃಢತೆ, ಬದ್ಧತೆ, ಕಲಿಕೆ, ಕಷ್ಟ ಸಹಿಷ್ಣುತೆ, ಸೃಜನಶೀಲತೆ, ಯಾರಿಗೂ ಕಾಣದ್ದ ಕಾಣುವ ಕಣ್ಣು, ಬೇಕು ಈ ಎರಡೂ, ಕೃಷಿಗೆ!
ಕನ್ನಡಕ್ಕಿಂತ ಹೆಚ್ಚಾಗಿ ಜೀವನಕ್ಕೆ ಬೇಕಾದ್ದು ಕೃಷಿ, ಅಕ್ಷರ ಕೃಷಿ! ಆಗಲೇ ಕನ್ನಡಕ್ಕೂ, ಯಾವ ಭಾಷೆಗೂ ಅದರ ಪರಿಣಾಮ, ಫಲ ಎರಡೂ ದಕ್ಕುವುದು.
ಸರಿಯಾದ ಆಲೋಚನೆಗಳ ಬಿತ್ತಿ ಒಳ್ಳೆಯ ಫಲ ತೆಗೆಯೋ ಕೃಷಿ ಇಂದಿನ, ಎಂದಿನ ಅವಶ್ಯಕತೆ ಮತ್ತು ಅನಿವಾರ್ಯತೆಯಾಗಿದೆ. ಅದಕ್ಕೆ, ಆ ಆಲೋಚನೆಗಳಿಗೆ, ಫಲದ ನಿರೀಕ್ಷೆಗೆ ಸರಿಹೊಂದುವ ಶಬ್ದ ಭಂಡಾರ ತೆರೆಯಬೇಕಿದೆ, ಬಳಸಬೇಕಿದೆ.ಅದಕ್ಕೆ ಕಣ್ಣು, ಮನಸು, ಹೃದಯಗಳ ತೆರೆದು ನೋಡಬೇಕಿದೆ, ಹಾಡಬೇಕಿದೆ.

ಹಳೆಯ ಪದಗಳನೆಲ್ಲಾ ಮರೆಯದೆ, ತೊರೆಯದೆ, ಅವೊಂದು ಉದಾತ್ತ, ವಿವೇಕದ ಅಮೂಲ್ಯ ಖಜಾನೆಯಂತೆ ಅರಿವಿಟ್ಟು ಜೋಪಾನಿಸಿ, ಎಲ್ಲೆಲ್ಲಿ ಸಾಧ್ಯವೋ, ಅವಶ್ಯವೋ, ಒಳ್ಳೆಯದೋ ಅಲ್ಲಿ ಬಳಸುವ ಮೂಲಕ ಅದರ ಮೌಲ್ಯ, ಸೊಬಗು ಮತ್ತಷ್ಟು ಹೆಚ್ಚಿಸಿ,ಅವಶ್ಯ ಹೊಸ ಪದಗಳ ಸೃಷ್ಟಿಗೆ ಮುಂದಾಗುತ ಬೇರು, ರೆಕ್ಕೆಯ ಮೌಲ್ಯ ಅರಿವ ಜಾಣ್ಮೆ ನಮ್ಮದಾಗಲಿ.
ಶರವೇಗದ ಬದಲಾವಣೆಗಳ ಈ ಕಾಲಕ್ಕೆ ಅದೇ ವೇಗದ ಪದ ಸೃಷ್ಟಿ, ಸೂಕ್ತ ನುಡಿಗಟ್ಟುಗಳ ಬಳಕೆ ಬೇಕಿದೆ. ಇದರಲ್ಲಿ ಅಂತರ ಎಷ್ಟಿದೆ, ಅಳೆಯಬೇಕಿದೆ ಒಂದು ಅಂದಾಜಿಗಾದರೂ, ಮುಂದಿನ ಸೃಷ್ಟಿಯ ದೂರದೃಷ್ಟಿಗಾಗಿಯಾದರೂ.
ಯಾವ ಕ್ಷೇತ್ರ, ರಂಗಗಳಲ್ಲಿ ನಮ್ಮದೇ ಪದಗಳಿಲ್ಲವೋ, ಭಾಷೆ ಇಲ್ಲವೋ, ಅಲ್ಲಿ ನಮ್ಮ ಭಾಷೆ ಎಲ್ಲಿ ಉಳಿಯಲಿದೆ, ಅದರಿಂದ ಹೇಗೆ ಎಲ್ಲೆಲ್ಲಿ ಹಿನ್ನಡೆಯಾಗಲಿದೆ, ಆ ರಂಗ ಹಲವರಿಗೆ ಅಪರಿಚಿತವಾಗಬಹುದಾದ ಸಾಧ್ಯತೆ ಮತ್ತು ಇದರಲ್ಲಿ ನಮ್ಮ ಸೋಲೆಷ್ಟು, ಪ್ರಯತ್ನದ ಕೊರತೆ ಎಷ್ಟು ಪ್ರಾಮಾಣಿಕವಾಗಿ ವಿವೇಚಿಸಬೇಕಿದೆ.
ಜಾಣರು ಯಾವ ಕಾಲಕ್ಕೂ ಎಲ್ಲೆಡೆಯೂ ಇದ್ದಾರೆ, ಜಾಣತನದಿಂದ ವಿವೇಕ, ದೂರದೃಷ್ಟಿಯ ಮಟ್ಟಕ್ಕೇರುವ, ಕನಸು, ಗುರಿಗಳ ನನಸು ಮಾಡುವ ಗುರಿಕಾರರು ಹೆಚ್ಚಾಗಬೇಕಿದೆ.
ಅದಕೆ ಒಂದೇ ಮನಸಿನಮನಸುಗಳು ಒಂದಾಗಬೇಕು, ಕನಸುಗಳ ಒಟ್ಟಿಗೆ ಕಾಣಬೇಕು, ನನಸು ಮಾಡಲು ಮಹೋತ್ತರ ಉದ್ದೇಶ ಎಲ್ಲರ ಮನದಲಿ ಪ್ರತಿಬಿಂಬಿಸಬೇಕು!ನಾನೆಂಬುದ ಮರೆತು ನಾವಾಗಬೇಕು.
ನನ್ನ ಕೈಲೇನಾಗುವುದು, ನನ್ನೊಬ್ಬನ ಕೈಲೇನಾಗುವುದು ಎಂಬ ಯೋಚನೆಗಳ ಬದಲು, ನನ್ನ ಕೈಲಿ ಸಾಧ್ಯವಾದ್ದನ್ನು ಮಾಡುವುದು, ಸಾಧ್ಯತೆಗಳ ಮಿತಿ ಎಲ್ಲಿರುವುದು ಎಂದು ಹುಡುಕುವುದು – ಎಂದಾಗಬೇಕು!






0 Comments