ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಕ್ಕ’ , ನೀಳ್ಗತೆ – ಭಾಗ ೨

ಅಕ್ಕನ ಮದುವೆ

-ಟಿ.ತಿಮ್ಮಪ್ಪ

ಇಲ್ಲಿಯವರೆಗೆ

 
ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಎದ್ದ ಪುಟ್ಟ ಮುಖ ತೊಳೆದುಕೊಂಡು ಓದಿಕೊಳ್ಳಲು ಕುಳಿತಿದ್ದ. ಚಿಕ್ಕಪ್ಪ ಯಾಕೋ ಮುಖ ಚಿಕ್ಕದು ಮಾಡಿಕೊಂಡು ‘ಯಣ್ಣೋ ಇದ್ದೀಯೇನೋ..’ಎಂದು ಕೂಗುತ್ತಲೇ ಒಳಗೆ ಬಂದ. ಚಿಕ್ಕಪ್ಪನ ದನಿ ಕೇಳಿ ಹಿತ್ತಿಲಿನಲ್ಲಿ ಮುಖ ತೊಳೆಯುತಿದ್ದ ಅಪ್ಪ ಮತ್ತು ಹಂಚಿನ ಮೇಲೆ ರೊಟ್ಟಿ ಬಡಿಯುತಿದ್ದ ಅವ್ವ ಒಟ್ಟಿಗೇ ನಡುಮನೆಗೆ ಬಂದರು. ಅಪ್ಪ ‘ಏನೋ ಸಮಾಚಾರ..’ಅಂತ ಸ್ವಲ್ಪ ಅನುಮಾನವಾಗಿಯೇ ಕೇಳಿದ. ಚಿಕ್ಕಪ್ಪ ಯಾಕೋ ಮಾತನಾಡಲು ತಡವರಿಸುತಿದ್ದುದು ಕಂಡು ಅವ್ವ ‘ತಾಯಿ ಏನಾದ್ರೂ ಫೋನು ಮಾಡಿದ್ಲೇನೋ ಚಿಕ್ಕೋನೇ..’ ಅಂದ್ಲು. ಚಿಕ್ಕಪ್ಪ ಅವ್ವ-ಅಪ್ಪನ ಮುಖ ನೋಡಲಾರದೇ ತಲೆ ತಗ್ಗಿಸಿಕೊಂಡು ‘ಬೀಗ್ರು ಫೋನು ಮಾಡಿದ್ರು.. ಅವ್ರಿಗೆ ಮತ್ತೆ ಇಪ್ಪತ್ತು ಸಾವ್ರ ದುಡ್ಡು ಅರ್ಜಂಟಾಗಿ ಬೇಕಂತೆ..’ ಅಂದಿದ್ದನ್ನು ಕಂಡು ಅಪ್ಪ ತಲೆಯ ಮೇಲೆ ಕೈಹೊತ್ತುಕೊಂಡು ಕುಸಿದು ಕೆಳಗೆ ಕುಳಿತ. ಅವ್ವ ‘ಎಲ್ಲಿಂದ ತಂದುಕೊಡೋದಪ್ಪೋ.. ಈಗ್ಲೇ ನಮ್ ತಿಥಿ ಆಗೋಗದೆ..’ ಎಂದು ಹಣೆ ಚಚ್ಚಿಕೊಂಡು ಗೋಡೆಗೊರಗಿ ಕುಳಿತಳು. ‘ನನ್ನ ಮಗುಳ್ನ ಇವ್ರು ಬಾಳಿಸಂಗೆ ಕಾಣಿಸೋದಿಲ್ಲ ಕಣೋ ಚಿಕ್ಕೋನೆ.. ಊರಲ್ಲಿ ಮದ್ವೆಯಾದ ಹೆಣ್ಮಕ್ಕಳೆಲ್ಲಾ ಚೆಂದಾಗೇ ಅವ್ರೆ.. ನನ್ನ ಮಗಳೀಗೆ ಹಿಂಗಾಗ್ಬೇಕಾ.. ಆ ದೇವ್ರಿಗೆ ಕಣ್ಣಿಲ್ಲ ಕಣಪ್ಪೋ.’ ಅಂತ ಗೋಳಾಡತೊಡಗಿದಾಗ ಪುಟ್ಟ ಅವ್ವನ ಬಳಿ ಹೋಗಿ ‘ಸುಮ್ನಿರವ್ವೋ ಅಳಬ್ಯಾಡ.. ಎಂದು ಹೇಳಿ ಅವ್ವನನ್ನು ಆತುಕೊಂಡು ಕುಳಿತ. ಅವ್ವ ಸ್ವಲ್ಪ ಹೊತ್ತು ಸುಮ್ಮನಿದ್ದು ‘ಇನ್ನೊಂದು ಸಲ ಫೋನ್ ಮಾಡಿದ್ರೆ ಅವರತ್ರ ದುಡ್ಡು ಇಲ್ವಂತೆ ಅಂತ ಹೇಳ್ಬುಡು..’ ಅಂತ ಹೇಳಿದಾಗ ಚಿಕ್ಕಪ್ಪ ‘ಅಂಗೇ ಹೇಳ್ತೀನಿ ಬುಡಕ್ಕೋ..’ ಅಂದು ಹೊರಟುಹೋದ. ಅವ್ವ ಮಾಡಿದ್ದ ರೊಟ್ಟಿಯನ್ನು ಯಾರೂ ತಿನ್ನಲೇ ಇಲ್ಲ.
ಅಕ್ಕನ ವಿಷಯವನ್ನೇ ಯೋಚಿಸಿಕೊಂಡು ಇಸ್ಕೂಲಿಗೆ ಹೋದ ಪುಟ್ಟನಿಗೆ ಮೇಷ್ಟ್ರು ಮಾಡುತಿದ್ದ ಪಾಠಗಳು ಅರ್ಥವಾಗಲೇ ಇಲ್ಲ. ಸುಮ್ಮನೇ ಇಸ್ಕೂಲಿನಲ್ಲಿ ಕುಳಿತಿದ್ದು ಇಸ್ಕೂಲು ಮುಗಿದ ಮೇಲೆ ಮನೆಗೆ ಬಂದವನೇ ಮನೆಯಲ್ಲಿಯೇ ಇದ್ದ ಅವ್ವನಿಗೆ ‘ನೀನೇನೋ ದುಡ್ಡಿಲ್ಲ ಅಂತ ಹೇಳ್ಬುಟ್ಟೆ.. ಅವ್ರೇನಾದ್ರೂ ಅಕ್ಕುನ್ನ ದುಡ್ಡು ತರೋಗು ಅಂತ ಮತ್ತೆ ಇಲ್ಲಿಗೆ ಕಳುಸಿದ್ರೆ ಏನ್ಮಾಡ್ತಿಯವ್ವೋ..’ ಎಂದು ಕೇಳಿದ. ‘ಅಂಗೇನಾರ ಕಳುಸಿದ್ರೆ ಇಲ್ಲೇ ಅಂಬ್ಲೀನೋ ಗಂಜೀನೋ ಕುಡಕಂಡು ಇರ್ತಾಳೆ ಬಿಡು.. ನಾವಿನ್ನೇನು ಮಾಡಕ್ಕಾಯ್ತದೆ..’ ಅಂತ ಅವ್ವ ಹೇಳಿದರೂ ಅವಳ ಮುಖ ಸಪ್ಪಗಾಗಿದ್ದು ಪುಟ್ಟನಿಗೆ ಕಾಣಿಸದೇ ಇರಲಿಲ್ಲ.
ಅದಾದ ಮೂರ್ನಾಲ್ಕು ದಿನ ಕಳೆದ ಮೇಲೆ ಪುಟ್ಟ ಅಂದುಕೊಂಡಂತೆ ಅಕ್ಕ ಮದುವೆಯಲ್ಲಿ ತೆಗೆದುಕೊಂಡಿದ್ದ ಹೊಸ ಸೂಟುಕೇಸು ಹಿಡಿದು ಮನೆಗೆ ಬಂದಿದ್ದಳು. ಈ ಸತರ್ಿ ಮೊದಲಿಗಿಂತ ಬತ್ತಿಹೋಗಿದ್ದ ಅಕ್ಕನನ್ನು ಕಂಡು ಪುಟ್ಟನಿಗೆ ಕರುಳು ಕಿವಿಚಿದಂತಾಯಿತು. ಅವ್ವ ಅಕ್ಕನನ್ನು ಕಂಡು ‘ನಿನ್ ಹಣೇಲಿ ಆ ದೇವ್ರು ಏನ್ ಬರುದುಬುಟ್ಟನವ್ವಾ..’ ಎಂದು ಸಣ್ಣದನಿಯಲ್ಲಿ ಅಳತೊಡಗಿದ್ದನ್ನು ಕಂಡು ಪುಟ್ಟನ ಕಣ್ಣಿನಲ್ಲಿ ನೀರು ಹರಿಯತೊಡಗಿ ಭಾವನ ಮನೆಯವರ ಮೇಲೆ ಸಿಟ್ಟು ಬಂದಿತು. ಅಕ್ಕ ಏನೊಂದೂ ಮಾತನಾಡದೆ ಮಂಕಾಗಿ ಕುಳಿತಿದ್ದಳು. ರಾತ್ರಿ ಮನೆಗೆ ಬಂದ ಅಪ್ಪ ಅಕ್ಕನ ಬಳಿ ಕುಳಿತು ತಲೆ ನೇವರಿಸಿ ‘ಏನೂ ಚಿಂತೆ ಮಾಡಬ್ಯಾಡ ತಾಯಿ.. ಬಡ್ಡಿ ಬಸವಯ್ಯುಂಗೆ ದುಡ್ಡಿಗೇಳಿದೀನಿ..’ ಅಂದದ್ದನ್ನು ಕಂಡು ಅವ್ವ ಯಾಕೋ ಸಿಟ್ಟಿಗೆದ್ದು ‘ಯಾವ ದುಡ್ಡು ಕೊಡಾದು ಬ್ಯಾಡ.. ಹೆಂಡ್ತಿ ಬೇಕಾದ ಬೋಳಿಮಗ ಬಂದು ಕರ್ಕಂಡೋಯ್ತನೆ.. ಹಿಂಗೇ ಕಲುಸ್ಬುಟ್ರೆ ನಮ್ಮುನ್ನ ಹೀರಿ ಹಿಪ್ಪೆಕಾಯಿ ಮಾಡ್ಬುಡ್ತಾರೆ..’ ಅಂದಳು. ‘ಅಂಗಂದ್ರೆ ಆಯ್ತದೇನೆ ಜನ ಆಡ್ಕತಾರೆ..’ ಅಂದ ಅಪ್ಪನಿಗೆ ಅವ್ವ ‘ಸುಮ್ಮುನೆ ಕೂತ್ಕೋ.. ಆಡಿಕೊಂಡೋರ ಮನೆ ಹಾಳಾಯ್ತದೆ’ ಅಂದಾಗ ಅಪ್ಪ ಯಾಕೋ ಮತ್ತೆ ಮಾತನಾಡಲಿಲ್ಲ. ಪುಟ್ಟನಿಗೂ ಅವ್ವ ಹೇಳಿದ್ದು ಸರಿ ಅನ್ನಿಸಿತು.

ಅಕ್ಕ ದಿನವೆಲ್ಲಾ ಸುಮ್ಮನೆ ಹೊದ್ದುಕೊಂಡು ಮಲಗುತಿದ್ದವಳು ಮತ್ತೆ ಗೆಲುವಾಗಲು ಮೂರು ದಿನ ಹಿಡಿಯಿತು. ಅವ್ವ ಅಕ್ಕನನ್ನು ಮೊದಲಿಗಿಂತಲೂ ಚೆನ್ನಾಗಿ ನಿಗಾ ಮಾಡತೊಡಗಿದಳು. ಅಕ್ಕ ಊರಿಗೆ ಬಂದಿರುವುದನ್ನು ತಿಳಿದವರು ಅಪ್ಪ ಅಂದುಕೊಂಡಂತೆ ಯಾರೂ ಆಡಿಕೊಳ್ಳಲಿಲ್ಲ. ವಿಷಯ ತಿಳಿದು ಮನೆಗೆ ಬಂದವರೆಲ್ಲಾ ಅವ್ವ ಹೇಳಿದಂತೆ ‘ಹೆಂಡ್ತಿ ಬೇಕಾದೋನು ಅವ್ನೇ ಬತ್ತನೆ ತಗೋ.. ನಮ್ಮ ಹೆಣ್ಮಕ್ಕಳಂತೋರುನ್ನ ಪಡೆಯೋದಿಕ್ಕೆ ಏಳೇಳು ಜನ್ಮುದ ಪುಣ್ಯ ಮಾಡಿರ್ಬೇಕು..’ ಅಂತ ಅವ್ವನಿಗೆ ಧೈರ್ಯ ಹೇಳತೊಡಗಿದ್ದನ್ನು ಕಂಡು ಪುಟ್ಟನಿಗೆ ಸಮಾಧಾನವಾಗಿತ್ತು.
ಅಕ್ಕನೇನೋ ಎಲ್ಲರೊಂದಿಗೆ ಹೊಂದಿಕೊಂಡು ನಗುನಗುತ್ತಾ ಕಾಲಕಳೆಯತೊಡಗಿದಳು. ಆದರೆ ಅವ್ವ ಅಂದುಕೊಂಡಂತೆ ಭಾವ ಬಂದು ಅಕ್ಕನನ್ನು ಕರೆದುಕೊಂಡು ಹೋಗುವ ಲಕ್ಷಣಗಳೇನೂ ಕಾಣಿಸದೆ ಮತ್ತೆ ಅವ್ವ ರಾತ್ರಿಯ ಹೊತ್ತು ಪಡಸಾಲೆಯಲ್ಲಿ ಕುಳಿತು ಯೋಚನೆಮಾಡತೊಡಗಿದಳು. ಚಿಕ್ಕಪ್ಪ ಮನೆಗೆ ಬಂದಾಗಲೆಲ್ಲಾ ‘ಏನು ಮಾಡೋದೋ ಚಿಕ್ಕೋನೆ.. ತಾಯವ್ವನ ಕತೆ ಹಿಂಗಾಗೋಯ್ತಲ್ಲೋ’ ಎಂದು ಅಳುತಿದ್ದಳು. ಚಿಕ್ಕಪ್ಪ ‘ನಂಗೂ ಏನೂ ತಿಳೀತಾ ಇಲ್ಲಾ ಕಣಕ್ಕಾ.. ಇದೊಂದು ಸತಿ ಸಾಲಾನೋ ಸೂಲಾನೋ ಮಾಡಿ ಅತ್ಲಾಗೆ ದುಡ್ಡು ಕೊಡಾನ..’ ಎಂದಿದ್ದಕ್ಕೆ ಅವ್ವ ಒಪ್ಪಿರಲಿಲ್ಲ. ‘ಅಂತ ತೆಪ್ಪು ಮಾಡಕ್ಕೆ ನನ್ನ ಮನುಸ್ಸು ಒಪ್ತಾ ಇಲ್ಲಾ ಕಣೋ ಚಿಕ್ಕೋನೆ..’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಳು. ಪುಟ್ಟನಿಗ್ಯಾಕೋ ಭಾವ ಬಂದು ಮತ್ತೆ ಅಕ್ಕನನ್ನು ಕರೆದುಕೊಂಡು ಹೋಗುವುದಿಲ್ಲ ಅನಿಸತೊಡಗಿತು. ಅಂಗೇನಾದರೂ ಆದರೆ ನಾನು ಸರಿಯಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಿ ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂದುಕೊಂಡು ರಾತ್ರಿಯೆಲ್ಲಾ ಓದತೊಡಗಿದ.
ಒಂದು ದಿನ ರಾತ್ರಿ ಅಕ್ಕ ಅವ್ವನ ಹತ್ತಿರ ಕುಳಿತು ‘ಅವ್ವೋ.. ಮನೇಲಿ ಕುಂತೂ ಕುಂತೂ ಬೇಜಾರಾಯ್ತದೆ.. ಮ್ಯಾಗುಲ ಮನೆ ಕೆಂಪಣ್ಣಾರ ಮಗಳು ಲತಾ ಕುಣಿಗಲ್ಲಿನಲ್ಲಿ ಬಟ್ಟೆ ಹೊಲಿಯೋದು ಕಲ್ತುಕೋಳ್ಳಾಕೆ ಹೋಯ್ತಾವಳಂತೆ.. ಅಲ್ಲಿ ಒಬ್ರು ಮೇಡಮ್ಮು ಚೆನ್ನಾಗಿ ಹೇಳಿಕೊಡ್ತಾರಂತೆ.. ನಾನೂ ಹೋಯ್ತೀನಿ..’ ಅಂದಾಗ ಅವ್ವ ಯಾಕೋ ಹಿಂದೇಟು ಹಾಕಿ ‘ನಿಂಗೆ ಅವೆಲ್ಲಾ ಯಾಕ್ ಬೇಕು ತಗೋ..’ ಅಂದಳು. ಆದರೂ ಅಕ್ಕ ಹಟ ಹಿಡಿದು ಕುಳಿತಾಗ ಬೇಡವೆನ್ನಲಾಗದೆ ‘ ಹೋಗ್ವಾಗ ಬರ್ವಾಗ ಜಾಪಾನ.. ನಿನ್ನ ಬುದ್ಧಿ ನಿನ್ನ ಕೈಲಿಟ್ಟುಕೊಂಡಿರಬೇಕು..’ ಅಂದು ಹೇಳಿದ್ದಳು.
ಅಕ್ಕ ಕುಣಿಗಲ್ಲಿಗೆ ಬಟ್ಟೆ ಹೊಲಿಯುವುದನ್ನು ಕಲಿಯಲು ಹೋಗುವುದಕ್ಕೆ ಶುರುವಾದ ಮೇಲೆ ಅವಳ ಮುಖದಲ್ಲಿ ಯಾವುದೋ ಹೊಸ ಕಳೆ ಬಂದಿತ್ತು. ‘ಮೇಡಮ್ಮು ಭಾಳ ಒಳ್ಳೇವ್ರು ಕಣವ್ವಾ.. ಚೆನ್ನಾಗಿ ಹೇಳಿಕೊಡ್ತಾರೆ.. ಚುರುಕಾಗಿದೀಯಾ.. ಇನ್ನೊಂದು ತಿಂಗಳಲ್ಲಿ ಚೆನ್ನಾಗಿ ಕೆಲ್ಸ ಕಲ್ತುಕೊಂತೀಯಾ.. ಅಂತ ಹೇಳಿದ್ರು’ ಎಂದು ಅವ್ವನ ಬಳಿಯಲ್ಲಿ ಹೇಳಿದಾಗ ಅವ್ವನ ಮುಖದಲ್ಲಿ ಯಾಕೋ ಏನೋ ಖುಷಿಯೇ ಕಾಣಿಸಲಿಲ್ಲ. ಅದಾದ ಸ್ವಲ್ಪ ದಿನಗಳ ನಂತರ ಅಕ್ಕ ಅವ್ವನಿಗೊಂದು ಹೊಸ ರವಿಕೆಯನ್ನು ಹೊಲಿದು ತಂದು ‘ನಾನೇ ಹೊಲಿದಿದ್ದು.. ಹಾಕ್ಕಳವ್ವೋ..’ ಎಂದಾಗ ಅವ್ವನ ಕಣ್ಣುಗಳಲ್ಲಿ ನೀರು ತುಂಬಿದ್ದು ಯಾಕೆಂದು ಪುಟ್ಟನಿಗೆ ತಿಳಿಯಲಿಲ್ಲ. ‘ಅವ್ವೋ.. ಬಟ್ಟೆ ಹೊಲಿಯೋದು ಚೆನ್ನಾಗಿ ಕಲಿತುಕೊಂಡಿದೀನಿ.. ಮೇಡಮ್ಮು ಇಲ್ಲೇ ನಮ್ಮ ಅಂಗಡೀಲೆ ಬಟ್ಟೆ ಹೊಲಿದುಕೊಡು.. ಒಂದೊಂದು ಬಟ್ಟೆಗೆ ಇಷ್ಟಿಟ್ಟು ಅಂತ ದುಡ್ಡು ಕೊಡ್ತೀನಿ ಅಂದವ್ರೆ..’ ಅಂತ ಅಕ್ಕ ಹೇಳಿದಾಗ ಅವ್ವ ‘ಅಯ್ಯೋ ತಾಯಿ.. ಬಟ್ಟೆ ಹೊಲ್ಕಂಡು ಕೂತ್ಕಂಡು ಏನ್ ಮಾಡ್ತೀಯವ್ವೋ..’ ಎಂದು ದೊಡ್ಡದಾಗಿ ಉಸಿರು ಬಿಟ್ಟಿದ್ದು ಕಂಡು ಪುಟ್ಟನಿಗೆ ಅವ್ವ ಬ್ಯಾರೆ ಏನುನ್ನೋ ಯೋಚಿಸ್ತಾವ್ಳೆ ಅನ್ನಿಸಿತು.
ಒಂದು ದಿನ ರಾತ್ರಿ ಊಟವಾದ ಮೇಲೆ ಅವ್ವ-ಅಪ್ಪ ಇಬ್ಬರೂ ಯೋಚಿಸುತ್ತಾ ಹೊರಗೆ ಕುಳಿತಿದ್ದರು. ಅಕ್ಕ ಅವರ ಹತ್ತಿರ ಕುಳಿತು ಮಾತಿಗೆ ಶುರು ಮಾಡಿ ‘ ಅವ್ವೋ.. ನಾಳೀಕ್ಕೆ ಹೋಗಿ ಯಡೂರಲ್ಲಿ ಪೋಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟು ಕೊಡಾನ ಅಂತ ಮಾಡದೀನಿ..’ ಅಂದಾಗ ಏನೂ ತಿಳಿಯದೆ ಗಾಬರಿಯಾದ ಅವ್ವ ‘ಯಾರ ಮ್ಯಾಲೆ ಏನಂತ ಕಂಪ್ಲೇಂಟು ಕೊಡ್ತೀಯವ್ವೋ..’ ಅಂತ ಕೇಳಿದಳು. ‘ ನನ್ನ ಗಂಡನ ಮನೆಯವ್ರು ದುಡ್ಡಿಗಾಗಿ ಕಿರುಕುಳ ಕೊಟ್ಟು ತವರು ಮನೆಗೆ ಕಳಿಸವ್ರೆ ಅಂತ ಕೊಡ್ತೀನಿ..’ ಎಂದು ಅಕ್ಕ ಹೇಳಿದಾಗ ಪುಟ್ಟನಿಗೆ ಅಪ್ಪ-ಅವ್ವ ಇಬ್ಬರೂ ಪೂತರ್ಿ ಹೆದರಿಕೊಂಡಂತೆ ಕಾಣಿಸಿತು. ‘ಅಯ್ಯೋ.. ತಾಯಿ ಅಂಗೇನಾರ ಮಾಡುಬುಟ್ಟೀಯಾ.. ಏನೋ ಒಂದು ಆಯ್ತದೆ ಹೋಯ್ತದೆ.. ಅದುಕ್ಕೆಲ್ಲಾ ಕಂಪ್ಲೇಂಟು ಕೊಟ್ರೆ ಸಂಸಾರ ನೆಟ್ಟಗಾಯ್ತದಾ..’ ಅಂದ ಅಪ್ಪನ ಮಾತು ಕೇಳಿ ಅಕ್ಕ ‘ನೆಟ್ಟುಗಾಗದೆ ಇದ್ರೆ ಮುರಿದೇ ಹೋಗ್ಲಿ ಬಿಡು..’ ಅಂದಿದನ್ನು ಕೇಳಿ ಅಪ್ಪ-ಅವ್ವ ಇಬ್ಬರೂ ‘ಕೈ ಮುಗೀತೀವಿ.. ಅಂಗೆಲ್ಲ ಮಾಡಬ್ಯಾಡ ತಾಯಿ..’ ಎಂದು ಬೇಡಿಕೊಂಡದ್ದನ್ನು ಕಂಡು ಅಕ್ಕನಿಗೆ ಏನನ್ನಿಸಿತೋ ಸುಮ್ಮನೆ ಎದ್ದು ಹೋಗಿ ಮಲಗಿಕೊಂಡಳು.
ಅಕ್ಕ ಒಳಗೆ ಹೋಗಿ ಮಲಗಿದ ಮೇಲೆ ಅವ್ವ ‘ಇದ್ಯಾಕೋ ಯಡವಟ್ಟಾಗಂಗೆ ಕಾಣಿಸ್ತದಲ್ಲೋ ಮಾರಾಯಾ..’ಅಂತ ಪಿಸುಮಾತಿನಲ್ಲಿ ಅಪ್ಪನಿಗೆ ಹೇಳಿದಳು. ಅಪ್ಪ ‘ಅದುಕ್ಕೆ ನಾನು ಅವತ್ತೇ ಹೇಳಿದ್ದು.. ಬಡ್ಡಿ ಬಸವಯ್ಯುನ ಹತ್ರ ದುಡ್ಡಿಗೇಳಿದೀನಿ ಅಂತ.. ಇವೆಲ್ಲ ಒಂದೋಗಿ ಇನ್ನೊಂದುಕ್ಕೆ ತಿರುಗಿಕತಾವೆ’ ಅಂದ. ‘ಅಂಗೇ ಮಾಡು ಅತ್ಲಾಗೆ.. ದುಡ್ಡು ಇಸ್ಕಂಡು ಬಂದು ಇದೊಂದು ಸತರ್ಿ ಕೊಟ್ಟು ನೋಡಾನ.. ಮುಂದುಕ್ಕೆ ಅವ್ಳ ಹಣೆಬರ ಹೆಂಗಾಯ್ತದೋ ಅಂಗಾಗ್ಲಿ..’ ಅಂದಳು ಅವ್ವ. ಅಪ್ಪ ಮಾರನೇ ದಿನ ಬಡ್ಡಿಗೆ ದುಡ್ಡು ತಂದು ‘ಬೆಂಗಳೂರಿಗೆ ಹೋಗಾನ ನಡಿಯವ್ವಾ..’ ಅಂದಾಗ ಅಕ್ಕ ಒಪ್ಪಲಿಲ್ಲ. ನಂಗೇ ಕೊಡು ಹೊಸ ಹೊಲಿಗೆ ಮೆಷಿನ್ ತಗೋತಿನಿ ಅಂದಳು. ಅಪ್ಪ-ಅವ್ವ ಇಬ್ಬರೂ ತಮಗೆ ತಿಳಿದಿದ್ದೆಲ್ಲವನ್ನೂ ಹೇಳಿ ಅಕ್ಕನನ್ನು ಒಪ್ಪಿಸುವ ಹೊತ್ತಿಗೆ ಅವರಿಗೆ ಸಾಕಾಗಿ ಹೋಗಿತ್ತು. ಹೇಗೋ ಅಕ್ಕ ಒಪ್ಪಿಕೊಂಡು ‘ ಮುಂದಿನ ಭಾನುವಾರ ಹೋಗೋಣ..’ ಎಂದು ಹೇಳಿ ಮತ್ತೆ ಬೆಂಗಳೂರಿಗೆ ಹೊರಡಲು ಸಿದ್ಧವಾದಳು.
ಅಕ್ಕ ಮಾರನೇ ದಿನ ಎದ್ದವಳೇ ಮೂಲೆಯಲ್ಲಿಟ್ಟಿದ್ದ ಸೂಟುಕೇಸಿನ ದೂಳು ಹೊಡೆದು ತನ್ನ ಬಟ್ಟೆಗಳನ್ನೆಲ್ಲಾ ಮಡಿಚಿಟ್ಟುಕೊಳ್ಳುತಿದ್ದುದನ್ನು ಕಂಡು ಅವ್ವನಿಗೆ ಸಮಾಧಾನವಾಗಿತ್ತು. ನಡುಮನೆಯಲ್ಲಿದ್ದ ದೇವರ ಫೋಟೋದ ಹತ್ತಿರ ಹೋಗಿ ಕೈಮುಗಿದವಳು ಏನು ಬೇಡಿಕೊಂಡಳು ಎಂದು ಪುಟ್ಟನಿಗೆ ಗೊತ್ತಾಗಲಿಲ್ಲ. ಅಕ್ಕ ಅವ್ವ ಮಾಡಿದ್ದ ರೊಟ್ಟಿ ತಿಂದು ‘ಮಧ್ಯಾಹ್ನುದಂಗೆ ಕುಣಿಗ್ಲುಗೆ ಹೋಗಿ ನಾಳೆಯಿಂದ ಬರಲ್ಲ ಅಂತ ಮೇಡಮ್ಮಾರಿಗೆ ಹೇಳಿ ಬತ್ತೀನಿ..’ ಅಂದಾಗ ಅವ್ವ ‘ಅಂಗೇ ಮಾಡವ್ವಾ..’ ಅಂದಳು. ಪುಟ್ಟ ರೊಟ್ಟಿ ತಿಂದು ಬ್ಯಾಗು ನೇತು ಹಾಕಿಕೊಂಡು ಇಸ್ಕೂಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಬಂಬ್ರಾಯಿಸ್ವಾಮಿ ದೇವಸ್ಥಾನದ ಬಳಿ ನಿಂತು ಕೈಮುಗಿದು ‘ಈ ಸತಿನಾದ್ರೂ ನಮ್ಮಕ್ಕಂಗೆ ಒಳ್ಳೇದು ಮಾಡಿ ಚೆನ್ನಾಗಿರಂಗೆ ಮಾಡು..’ ಎಂದು ಬೇಡಿಕೊಂಡು ಇಸ್ಕೂಲಿಗೆ ಹೋದ.
ಭಾಗ-4
ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ ಹೇಳಿ ಕೊಟ್ಟಳು. ಭಾವನೇನಾದರೂ ಅಕ್ಕನಿಗೆ ಬಾ ಅಂತ ಕಾಗದ ಬರೆದಿರಬಹುದು ಅಂದುಕೊಂಡ ಪುಟ್ಟ ಅದನ್ನು ಒಡೆಯದೆ ಸುತ್ತಾಮುತ್ತಾ ತಿರುಗಿಸಿ ನೋಡಿದ. ಅದರ ಮೇಲೆ ಇಂಗ್ಲೀಷಿನಲ್ಲಿದ್ದ ಅಕ್ಕನ ಹೆಸರು ಅಡ್ರಸ್ಸು ಓದಿ ಹಿಂದೆ ತಿರುಗಿಸಿ ನೋಡಿದ. ಯಾರದೋ ಹೆಸರಿನ ಕೆಳಗೆ ಅಡ್ವೋಕೇಟ್ ಬೆಂಗಳೂರು ಅಂತ ಇದ್ದದ್ದು ಕಂಡು ‘ ಅದೇನೋ ನಂಗೆ ಗೊತ್ತಾಯ್ತಾ ಇಲ್ಲ.. ಒಡೆಯದು ಬ್ಯಾಡ ಅಕ್ಕುನೇ ಬರ್ಲಿ ತಡಿ..’ ಎಂದು ಹೇಳಿ ಕಾಗದ ಹಿಡಿದುಕೊಂಡೇ ಅಕ್ಕನಿಗಾಗಿ ಆತುರದಿಂದ ಕಾಯತೊಡಗಿದ.
ಅಕ್ಕ ಬಂದ ತಕ್ಷಣ ಪಡಸಾಲೆಯಲ್ಲಿ ಅವ್ವನೊಂದಿಗೆ ಕುಳಿತಿದ್ದ ಪುಟ್ಟ ‘ಅಕ್ಕೋ.. ತಗೋಳೇ ಯಾರೋ ನಿಂಗೆ ಕಾಗ್ದ ಬರ್ದವ್ರೆ..’ ಅಂತ ಹೇಳಿ ಕೊಟ್ಟ. ಕಾಗದವನ್ನು ಹಿಂದೆ ಮುಂದೆ ತಿರುಗಿಸಿ ನೋಡಿದ ಅಕ್ಕ ಅದನ್ನು ಒಡೆದು ಓದಿದವಳ ಮುಖ ಸಿಟ್ಟಿನಿಂದ ಕೆಂಪಾಗಿದ್ದು ಕಂಡು ಪುಟ್ಟನಿಗೆ ಹೆದರಿಕೆಯಾಯಿತು. ಅಕ್ಕ ‘ಅವ್ವೋ ಲಾಯರ್ ನೋಟೀಸು ಕಳಿಸವ್ರೆ ಕಣವ್ವೋ..’ ಅಂದಾಗ ಅವ್ವನಿಗೆ ಏನೆಂದು ತಿಳಿಯದೆ ‘ಏನಂತ ಕಳಿಸವ್ರೇ ತಾಯಿ..’ ಅಂದಳು. ‘ ನನ್ನನ್ನು ಬಿಟ್ಟುಬಿಡಕ್ಕೆ ಕೋಟರ್ಿಗೆ ಹಾಕವ್ರೆ.. ನಾನು ಅಲ್ಲಿಗೆ ಹೋಗಬೇಕಂತೆ..’ ಅಂದಾಗ ಅವ್ವ ಕುಳಿತವಳು ಒಂದೇ ಸಾರಿ ಮೇಲಕ್ಕೆದ್ದು ಹಣೆ ಚಚ್ಚಿಕೊಂಡು ‘ಅಯ್ಯೋ.. ಅಯ್ಯೋ..ಅಯ್ಯೋ.. ನನ್ನ ಮನೆ ಹಾಳ್ಮಾಡುಟ್ರಲ್ಲೇ ಕಂದಾ.. ನಾವೇನು ಪಾಪ ಮಾಡಿದ್ವೆ..’ ಅಂತ ಗೋಳಾಡತೊಡಗಿದಾಗ ಅಕ್ಕನೇ ‘ಅದುಕ್ಯಾಕೆ ಅಳ್ತೀಯವ್ವೋ.. ಪ್ರಪಂಚ ಏನು ಮುಳುಗೋಯ್ತದಾ.. ನಂಗೆ ಇಷ್ಟು ಬುದ್ಧಿ ಇದ್ದಿದ್ರೆ ಯಾವಾಗ್ಲೋ ನಾನೇ ಈ ಕೆಲ್ಸ ಮಾಡ್ತಿದ್ದೆ ..’ಅಂದಿದ್ದು ಕಂಡು ಪುಟ್ಟನಿಗೆ ಆಶ್ಚರ್ಯವಾಯಿತು. ಆದರೂ ಅವ್ವನಿಗೆ ಸಮಾಧಾನವಾಗದೆ ‘ಇರವ್ವಾ.. ಮುಂಚೆ ನಿಮ್ಮಪ್ಪುನ್ನ ಕರ್ಕಂಬತ್ತೀನಿ..’ ಅಂತ ಎದ್ದು ಹೊಲದ ಕಡೆಗೆ ಬಿರಬಿರನೆ ನಡೆದುಹೋದಳು.
ಅಪ್ಪ, ಅವ್ವನ ಜೊತೆ ಅಳುಮುಖ ಹಾಕಿಕೊಂಡು ಬಂದವನೇ ಪಡಸಾಲೆಯಲ್ಲಿ ಕುಳಿತು ‘ತಾಯೀ…’ ಅಂತ ಕೂಗಿದವನು ಅಕ್ಕ ಹೊರಗೆ ಬಂದ ಮೇಲೆ ‘ಎಲ್ಲಾ ಮುಗಿದೋಯ್ತಲ್ಲವ್ವಾ.. ಬಡ್ಡೀಮಕ್ಳು ಮೋಸ ಮಾಡ್ಬುಟ್ರು..’ ಅಂತ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತ. ‘ಸುಮ್ನಿರ್ತೀರಾ ನೀವಿಬ್ರೂ.. ಏನಾಗದೆ ಅಂತ ಹಿಂಗೆ ಗೋಳಾಡ್ತಿದೀರಾ.. ಅವನಿಲ್ದೆ ಬೆಳಕಾಗಲ್ವಾ.. ದೇವ್ರು ನಂಗೂ ದುಡಿಯೋ ದಾರಿ ತೋರಿಸವ್ನೆ.. ನನ್ನ ಅನ್ನ ನಾನು ಹುಟ್ಟಿಸ್ಕಂಡು ತಿಂತೀನಿ ಸುಮ್ನಿರಿ.. ಹೆಂಗೋ ಒಬ್ಬ ತಮ್ಮ ಅವ್ನೆ.. ಅವುನುನ್ನೇ ಚೆನ್ನಾಗಿ ಓದ್ಸಿ ನನ್ನ ಮಗ ಅಂದ್ಕತೀನಿ..’ ಅಂತ ಅಕ್ಕ ಹೇಳಿದಾಗ ಪುಟ್ಟ ಹೋಗಿ ‘ಅಕ್ಕೋ..’ ಅಂತ ಅಕ್ಕನನ್ನು ತಬ್ಬಿಕೊಂಡು ಬಿಕ್ಕಳಿಸತೊಡಗಿದ. ‘ಹೆಂಗಾರ ಆಗ್ಲಿ ಪಟೇಲ್ರುನ ಕರ್ಕಂಡೋಗಿ ಒಂದ್ಸತಿ ನ್ಯಾಯ ಮಾಡ್ಸನ.. ಇಂತೋವೆಲ್ಲಾ ಎಷ್ಟೋ ಸಮಸ್ಯೇನಾ ಪಟೇಲ್ರು ಬಗೆಹರಿಸವ್ರೆ ಆಮ್ಯಾಲೆ ಏನು ಮಾಡಾದು ನೋಡಾನ..’ ಅಂದ ಅಪ್ಪನ ಮಾತು ಕೇಳಿ ಅಕ್ಕ ‘ಗಂಡ ಹೆಂಡ್ತಿ ಚೆನ್ನಾಗಿದ್ರು.. ಏನೋ ಒಂದು ಮಾತು ಬಂದದೆ, ಒಂಚೂರು ಬುದ್ಧಿ ಹೇಳುದ್ರೆ ಹೆಂಗೋ ಸರಿಯಾಯ್ತರೆ ಅನ್ನಂಗಿದ್ದರೆ ನೀನೇಳುದಂಗೆ ನ್ಯಾಯ ಪಂಚಾಯ್ತಿ ಮಾಡ್ಬೋದಿತ್ತು.. ದುಡ್ಡು ತರದೇ ಇದ್ರೆ ಮನೀಗೆ ಬರ್ಬೇಡ ಅಂತ ಕಟ್ಟಕೊಂಡೋಳುನ್ನ ತವರು ಮನಿಗೆ ಕಳ್ಸೋ ಮುಠ್ಠಾಳುನತ್ರ ಏನು ಮಾತಾಡೋದಯ್ತೆ..’ ಅಂದದನ್ನು ಕೇಳಿ ಅವ್ವ-ಅಪ್ಪ ಇಬ್ಬರಿಗೂ ಸರಿಯೆನ್ನಿಸಿತೇನೋ ಸುಮ್ಮನೆ ಮಾತನಾಡದೆ ಕುಳಿತರು. ಅಕ್ಕನಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಅಂತ ಪುಟ್ಟನಿಗೆ ಸೋಜಿಗವಾಯಿತು.
ಸ್ವಲ್ಪ ಹೊತ್ತು ಸುಮ್ಮನಿದ್ದ ಅಕ್ಕ ‘ಏನೋ ನೀವಿಬ್ರು ನನ್ಮಗಳು ಬಾಳು ಹಿಂಗಾಗೋಯ್ತಲ್ಲಾ ಅಂತ ಕೊರಗ್ತಿರ ಅಂತ ನಾನೂ ಯೋಚ್ನೆ ಮಾಡಿ ಇದೊಂದು ಸತಿ ನೋಡಾನ ಅಂತ ಹೊರಟಿದ್ದೆ. ಅಷ್ಟರಲ್ಲಿ ಘನಂದಾರಿ ಕೆಲ್ಸ ಮಾಡಿದೀನಿ ಅಂತ ಲಾಯರ್ ನೋಟೀಸ್ ಕಳಿಸವ್ನೆ.. ಕಟ್ಕಂಡ ಹೆಂಡ್ತಿ ಜೊತೆ ನೆಟ್ಟುಗೆ ಸಂಸಾರ ಮಾಢ್ಬೇಕು ಅನ್ನೋನು ಮಾಡ ಕೆಲ್ಸವಾ ಇದು.. ಇನ್ನ ಇವರು ದುಡ್ಡು ಕೊಡಂಗೆ ಕಾಣ್ಸಲ್ಲ.. ಇನ್ನೊಬ್ಳುನ್ನ ಕಟ್ಕಂಡು ಅವಳ ಅಪ್ಪ-ಅವ್ವನ ಹತ್ರ ವಸಿ ಕಿತ್ತುಕಳಾನ ಅಂತ ಮಾಡಿರ್ಬೇಕು… ನಾನೂ ತಪ್ಪು ಮಾಡ್ಬುಟ್ಟೆ ಅವೊತ್ತೇ ಹೋಗಿ ಬೆಂಗಳೂರಲ್ಲೇ ಪೋಲೀಸ್ನೋರಿಗೆ ಕಂಪ್ಲೇಂಟು ಕೊಟ್ಟು ಬರ್ಬೇಕಾಗಿತ್ತು.. ನೀವೇನು ಯೋಚ್ನೆ ಮಾಡ್ಬೇಡಿ.. ಕುಣಿಗಲ್ಲಿಗೋಗಿ ಯಾರಾರ ಲಾಯರ್ ನೋಡಿ ಏನ್ ಮಾಡಾದು ವಿಚಾರಿಸಿ ಅವನಿಗೂ ಅವನು ಕಟ್ಟಿರೋ ತಾಳೀಗೂ ಎಳ್ಳು ನೀರು ಬಿಟ್ಟು ಬರ್ತೀನಿ..’ ಅಂದಳು.
ಅವೊತ್ತು ರಾತ್ರಿ ಅಕ್ಕ ಊಟ ಮಾಡಿ ಚಾಪೆ ಹಾಸಿಕೊಂಡು ಸಮಾಧಾನವಾಗಿ ಮಲಗಿದಳು. ಅಕ್ಕನ ಪಕ್ಕದಲ್ಲಿ ಮಲಗಿದ್ದ ಪುಟ್ಟನ ಕಣ್ಣಿಗೆ ನಿದ್ರೆ ಹತ್ತದೆ ಹೊರಗೆ ಹೋಗಿ ಪಡಸಾಲೆಯಲ್ಲಿ ಅಪ್ಪನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಅವ್ವನ ತೊಡೆಯ ಮೇಲೆ ಮಲಗಿಕೊಂಡ. ‘ನಾವೂ ತೆಪ್ಪು ಮಾಡ್ದೋ.. ಕಷ್ಟವೋ ಸುಖವೋ ಕಾಲೇಜು ಓದ್ಸಿ ಆಮ್ಯಾಲೆ ಮದುವೆ ಮಾಡ್ಬೇಕಾಗಿತ್ತು. ಅದುಕ್ಕೂ ಪ್ರಪಂಚ ನೋಡಿ ತಿಳುವಳಿಕೆ ಬಂದಿರೋದು.. ಬುದ್ಧೀನೂ ಬಲ್ತೀರೋದು.. ಜವಾಬ್ದಾರಿ ಕಳಕಳಾನ ಅಂತ ಆತುರಪಟ್ಟು ಏನು ಎತ್ತ ಅಂತ ಸರಿಯಾಗಿ ಇಚಾರಿಸ್ದೆ ಮದ್ವೆ ಮಾಡ್ಬುಟ್ಟೋ..’ ಅಂತ ಅಪ್ಪ ಉಸಿರುಬಿಟ್ಟಿದ್ದು ಪುಟ್ಟನಿಗೆ ಕಾಣಿಸಿತು. ‘ಹಿಂಗಾಯ್ತದೆ ಅಂತ ಯಾರಿಗ್ಗೊತ್ತಿತ್ತು.. ಏನೋ ಅವಳ ಹಣೇಲಿ ಏನು ಬರದದೋ ನೋಡಾನ ತಗೋ.. ಈಗಿನ ಕಾಲುದಲ್ಲಿ ದುಡ್ಡಿಗೆ ಪೀಡಿಸಿ ಹೆಣ್ಮಕ್ಕಳು ಜೀವ ತೆಗೆಯೋ ಜನಾನು ಅವ್ರೆ.. ಅದುನ್ನೋಡ್ಕಂಡ್ರೆ ದೇವ್ರು ನಮಿಗೆ ಒಳ್ಳೇದೇ ಮಾಡವ್ನೆ.. ಹೆಂಗೋ ನನ್ಮಗಳು ನಮ್ಮ ಕಣ್ಣ್ಣೆದುರಿಗೆ ಇರ್ತಳೆ..’ ಅಂದ ಅವ್ವನ ಮಾತು ಕೇಳಿ ಪುಟ್ಟ ‘ನಾನೇ ನಮ್ಮಕ್ಕುನ್ನ ನೋಡ್ಕತೀನಿ ಬುಡವ್ವೊ..’ ಅಂತ ಹೇಳಬೇಕೆಂದುಕೊಂಡವನು ಹೇಳದೆ ಸುಮ್ಮನಾದ.
ಬೆಳಿಗ್ಗೆ ಅಕ್ಕ ‘ಅವ್ವೋ ಕುಣಿಗಲ್ಲಿಗೆ ಹೋಗಿ ಬರ್ತೀನಿ’ ಅಂತ ಹೇಳಿ ಹೊರಟವಳು ವಾಪಾಸು ಬಂದಾಗ ಸಾಯಂಕಾಲ ಆಗಿತ್ತು. ‘ಬ್ಯಾಂಕಲ್ಲಿ ವಿಚಾರಿಸ್ದೆ.. ಹೊಲಿಗೆ ಮೆಷಿನ್ ತಗೋಳ್ಳಕ್ಕೆ ಸಾಲ ಕೊಡ್ತಾರಂತೆ.. ಮಾಗಡಿಪಾಳ್ಯ ಕ್ರಾಸಲ್ಲಿ ಅಂಗಡಿ ಬಾಡಿಗೆಗೆ ತಗಂಡು ಬಟ್ಟೆ ಹೊಲಿತೀನಿ..’ ಅಂದ ಅಕ್ಕನ ಮಾತಿಗೆ ಅವ್ವ ‘ಅಂಗೇ ಮಾಡು..’ ಅಂದಳು. ಸ್ವಲ್ಪ ದಿನದ ಓಡಾಟದ ನಂತರ ಅಕ್ಕ ಕ್ರಾಸಿನಲ್ಲಿ ಹೊಸ ಅಂಗಡಿ ತೆಗೆದು ಬಟ್ಟೆ ಹೊಲಿಯಲು ಶುರು ಮಾಡಿದಳು. ದಿನಾ ಬೆಳಿಗ್ಗೆ ಅವ್ವ ಮಾಡಿದ ರೊಟ್ಟಿ ತಿಂದು ಮದ್ಯಾಹ್ನುಕ್ಕೆ ಅನ್ನಸಾರು ಕಟ್ಟಿಕೊಂಡು ಹೋಗುತಿದ್ದವಳು ಸಾಯಂಕಾಲ ಹೊತ್ತುಮುಳುಗುವ ಹೊತ್ತಿಗೆ ಮನೆಯಲ್ಲಿರುತಿದ್ದಳು. ಒಂದು ದಿನ ಅವ್ವನನ್ನು ಕರೆದುಕೊಂಡು ಬೆಂಗಳೂರಿಗೆ ಕೋಟರ್ಿಗೂ ಹೋಗಿಬಂದವಳ ಮುಖದಲ್ಲಿ ಖುಷಿ ಕಾಣಿಸುತಿತ್ತು. ಮತ್ತೆ ಮೂರ್ನಾಲ್ಕು ಸತರ್ಿ ಕೋಟರ್ಿಗೆಂದು ಬೆಂಗಳೂರಿಗೆ ಹೋಗಿಬಂದಳು. ಹೀಗೆ ಒಂದು ದಿನ ಕೋಟರ್ಿಗೆ ಹೋಗಿಬಂದ ಮೇಲೆ ಅಕ್ಕನ ಕತ್ತಿನಲ್ಲಿದ್ದ ತಾಳಿ ಮತ್ತು ಕಾಲುಬೆರಳಿನಲ್ಲಿದ್ದ ಕಾಲುಂಗರಗಳು ಮಾಯವಾಗಿದ್ದವು. ಅಕ್ಕನಿಗೆ ಪೀಡಿಸುತಿದ್ದ ಭಾವನಿಂದ ಬಿಡುಗಡೆ ಸಿಕ್ಕಿತು ಎಂದು ಪುಟ್ಟನಿಗೆ ಅನ್ನಿಸಿ ಅಲ್ಲಿಯವರೆಗೂ ಬ್ಯಾಗಿನಲ್ಲೇ ಇದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನ ಹರಿದು ಚೂರು ಚೂರು ಮಾಡಿ ತಿಪ್ಪೆಯ ಮೇಲೆ ಬಿಸಾಕಿದ. ದಿನವೂ ಕಷ್ಟಪಟ್ಟು ಓದುತಿದ್ದ ಪುಟ್ಟ ಐದನೇ ತರಗತಿಯಲ್ಲಿ ಇಸ್ಕೂಲಿಗೇ ಫಸ್ಟು ಬಂದು ಪಾಸಾಗಿದ್ದ.
ಅಕ್ಕ ದಿನವೂ ಕ್ರಾಸಿಗೆ ನಡ್ಕಂಡು ಹೋಗಿ ಅಲ್ಲೂ ಹೊಲಿಗೆ ಮೆಷಿನ್ ತುಳಿಬೇಕು ಅನ್ನುವುದನ್ನು ನೆನಪಿಸಿಕೊಂಡು ಪುಟ್ಟನಿಗೆ ಸಂಕಟವಾಗುತಿತ್ತು. ತನ್ನ ಸ್ನೇಹಿತ ಮಂಜ ತರುತಿದ್ದ ಸೈಕಲ್ಲಿನಲ್ಲಿ ಸೈಕಲ್ ಹೊಡೆಯುವುದು ಕಲಿತಿದ್ದ ಪುಟ್ಟ ಒಂದು ದಿನ ‘ಅಪ್ಪೋ ನಂಗೊಂದು ಸೈಕಲ್ ಕೊಡ್ಸಪ್ಪೋ..’ ಎಂದು ಅಪ್ಪನನ್ನು ಕೇಳಿದ. ‘ನಿಂಗ್ಯಾಕೆ ಈಗ್ಲೇ ಸೈಕಲ್ ಸುಮ್ನಿರೋ..ದುಡ್ಡೆಲ್ಲಿಂದ ತರಾನ..’ಅಂತ ಅಪ್ಪ ರೇಗಿದ. ಅಕ್ಕ ಬಟ್ಟೆ ಹೊಲಿಯುವುದರಿಂದ ಬಂದ ದುಡ್ಡನ್ನು ಅವ್ವನ ಕೈಲಿ ತಂದುಕೊಡುತಿದ್ದವಳು ‘ಅವ್ವೋ ದುಡ್ಡು ಕೊಡವ್ವೋ ಅವನಿಗೊಂದು ಸೈಕಲ್ ತಕ್ಕೊಡಾನ..’ ಅಂದಾಗ ಅವ್ವ ‘ಸುಮ್ನಿರೆ ತಾಯಿ.. ಬ್ಯಾಂಕಿನ ಸಾಲ ತೀರಿಸಕ್ಕೆ ಬ್ಯಾಡ್ವಾ..’ಅಂದಳು. ‘ಅದನ್ನೂ ತೀರಿಸಿದ್ರಾಯ್ತು ಇನ್ನೂ ಟೈಮದೆ’ ಎಂದು ಹೇಳಿದ ಅಕ್ಕ ಪುಟ್ಟನನ್ನು ಕುಣಿಗಲ್ಲಿಗೆ ಕರೆದುಕೊಂಡು ಹೋದಳು. ಪುಟ್ಟ, ಹುಡುಗಿಯರು ತುಳಿಯುವ ಸೈಕಲನ್ನು ಆರಿಸಿದಾಗ ‘ಅದುನ್ಯಾಕೋ ತಗತೀಯಾ..’ ಅಂದಳು ಅಕ್ಕ. ನಂಗೆ ಕಾಲು ಎಟುಕದಿಲ್ಲ ಸುಮ್ನಿರು ಎಂದು ಹೇಳಿ ಅದೇ ಸೈಕಲ್ ತಂದ ಪುಟ್ಟ ಆಗಾಗ ಅಕ್ಕನನ್ನು ಪುಸಲಾಯಿಸಿ ‘ನೀನೂ ಸೈಕಲ್ ಕಲ್ತುಕಳೆ ಅಕ್ಕೋ..’ ಎಂದು ಹೇಳಿ ಅಕ್ಕನಿಗೆ ಸೈಕಲ್ ಕಲಿಸಿದ. ಅಕ್ಕ ಅದಾದ ಮೇಲೆ ಸೈಕಲ್ಲಿನಲ್ಲಿಯೇ ಕ್ರಾಸಿಗೆ ಹೋಗಿ ಬರುತಿದ್ದುದು ಕಂಡು ಪುಟ್ಟನಿಗೆ ಸಮಾಧಾನವಾಗಿತ್ತು. ಅಕ್ಕ ಬಟ್ಟೆ ಹೊಲಿಯುವ ಕೆಲಸದಲ್ಲಿ ಎಲ್ಲವನ್ನು ಮರೆತು ಮೊದಲಿನಂತೆ ನಗುನಗುತ್ತಾ ಇರತೊಡಗಿದಳು. ಪುಟ್ಟನಿಗೆ ಅಕ್ಕನ ಮುಖವನ್ನು ನೋಡಿದಾಗಲೆಲ್ಲಾ ನಮ್ಮಕ್ಕ ಅಂದ್ರೆ ಅಕ್ಕ.. ಅವಳಂತೋರು ಊರಲ್ಲೇ ಯಾರೂ ಇಲ್ಲ ಎನಿಸಿ ಹೆಮ್ಮೆಯಾಗುತಿತ್ತು.
ಒಂದು ದಿನ ಮನೆಗೆ ಬಂದ ಅಕ್ಕ ಯಾಕೋ ಮುಖ ಚಿಕ್ಕದು ಮಾಡಿಕೊಂಡು ‘ಅವ್ವೋ ಈಗ ಮೂರು ದಿನದಿಂದ ಆ ಕೊನೆಮನೆ ರಾಜ ನಾನು ಸೈಕಲ್ಲು ಹೊಡ್ಕಂಡು ಬರ್ತಿದ್ರೆ ಹಿಂದೇನೆ ಆಟೋ ಓಡಿಸ್ಕಂಡು ಬರ್ತನೆ..’ ಅಂತ ಅವ್ವನ ಬಳಿ ಹೇಳಿದ್ದು ಕಂಡು ಅವ್ವ ‘ಅವನಿಗೇನು ತಿಂದಿಟ್ಟು ಹೆಚ್ಚಾಗದೇನೋ.. ಇನ್ನೊಂದು ಸತಿ ಅಂಗೇನಾರ ಮಾಡುದ್ರೆ ಹೇಳು ವಸಿ ಗಾಚಾರ ಬುಡಿಸ್ತೀನಿ.. ನಮ್ಮ ಪಾಡಿಗೆ ನಾವಿರೋಕ್ಕು ಬುಡೋದಿಲ್ಲ ಈ ಹಾಳು ಜನ.. ಈ ಗಂಡುಸು ಜಾತೀನೇ ಅಂತದು..’ ಎಂದು ಸಿಟ್ಟಿನಿಂದ ಹೇಳಿದ್ದು ಕಂಡು ಪುಟ್ಟನಿಗೂ ‘ಅವ್ನಿಗೆಲ್ಲೋ ಗಾಚಾರ ಕೆಟ್ಟುಹೋಗದೆ’ ಅನ್ನಿಸಿತು. ರಾತ್ರಿ ಅಪ್ಪ ಬಂದ ಮೇಲೆ ಅಪ್ಪನಿಗೂ ಅವ್ವ ವಿಷಯ ತಿಳಿಸಿದಳು. ಅಪ್ಪ ‘ಯಾಕೆ ಅವ್ನಿಗೇನು ತಲೆಗಿಲೆ ಕೆಟ್ಟದಾ.. ಇನ್ನೊಂದು ಸತಿ ಅವ್ನು ಅಂಗೇನಾರ ಮಾಡುದ್ರೆ ಊರು ಮುಂದೆ ಕಂಬುಕ್ಕೆ ಕಟ್ಟಿಸ್ತೀನಿ..’ ಅಂದ. ‘ಅಯ್ಯೋ ಅದುಕ್ಯಾಕೆ ನೀನು ಎದೆ ನೋಯಿಸಕ್ತೀಯಾ ಸುಮ್ನಿರಪ್ಪೋ.. ಅವ್ನು ಅಂಗೇ ಆಡ್ತಾ ಇದ್ರೆ ಮೈಯ್ಯಿಗೆ ಎಂಗದೆ ಅಂತ ನಾನೇ ಕೇಳ್ತಿನಿ..’ ಅಂದು ಅಕ್ಕ ಸುಮ್ಮನಾದಳು.
ಬೆಳಿಗ್ಗೆ ಎದ್ದ ಪುಟ್ಟ ಮುಖ ತೊಳೆದುಕೊಂಡು ಬಂದು ಓದಲು ಕುಳಿತಾಗ ರಾಜಣ್ಣ ಮತ್ತು ಅವನ ಅವ್ವ ಇಬ್ಬರೂ ಒಳಗೆ ಬಂದಿದ್ದು ಕಂಡು ದಿಗಿಲಾಗಿ ಎದ್ದವನೇ ಹಿತ್ತಲಿನಲ್ಲಿ ಕಸ ಗುಡಿಸುತಿದ್ದ ಅವ್ವನಿಗೆ ವಿಷಯ ಮುಟ್ಟಿಸಿದ. ಅಡಿಗೆ ಮನೆಯಲ್ಲಿ ಕಾಫಿ ಸೋಸುತಿದ್ದ ಅಕ್ಕನಿಗೂ ಅದು ಕೇಳಿಸಿ ಅವಳೂ ಎದ್ದು ನಡುಮನೆಗೆ ಬಂದಳು. ಅಷ್ಟರಲ್ಲಿ ಬೀಡಿ ತರಲೆಂದು ಅಂಗಡಿಗೆ ಹೋಗಿದ್ದ ಅಪ್ಪನೂ ಒಳಗೆ ಬಂದು ರಾಜಣ್ಣ ಮತ್ತು ಅವನ ಅವ್ವನನ್ನು ಕಂಡು ಮುಖ ದಪ್ಪಗೆ ಮಾಡಿಕೊಂಡು ‘ಏನಕ್ಕಾ ಬೆಳಿಗ್ಗೇನೆ ಬಂದಿದೀರಿ..’ ಅಂದ. ‘ಏನೂ ಇಲ್ಲ ಕಣೋ ದೊಡ್ಡೋನೆ.. ನಿಂತಾವ ವಸಿ ಮಾತಾಡ್ಬೇಕಿತ್ತು.’ ಅಂದ ರಾಜಣ್ಣನ ಅವ್ವನಿಗೆ ಅಪ್ಪ ‘ಅದೇನು ಮಾತಾಡ್ಬೇಕು ಹೇಳು..’ ಅಂದ.
‘ನಮ್ಮುಡುಗ ನಿಮ್ಮ ತಾಯವ್ವುನ್ನ ಮುದುವೆ ಆಯ್ತಿನಿ ಕೇಳಾನ ನಡಿ.. ಅಂತ ಕರ್ಕಂಬಂದವ್ನೆ..’ ಅಂದಾಗ ಅಪ್ಪ, ಅವ್ವ ಮತ್ತು ಅಕ್ಕನ ಮುಖದಲ್ಲಿ ಮೂಡಿದ ಆಶ್ಚರ್ಯ ಪುಟ್ಟನಿಗೆ ಕಾಣಿಸಿತು. ಏನು ಹೇಳಬೇಕೆಂದು ತಿಳಿಯದೇ ಅವರೆಲ್ಲಾ ಕಲ್ಲಿನಂತೆ ನಿಂತಿದ್ದನ್ನು ಕಂಡು ಪುಟ್ಟ ಹೋಗಿ ಮೂಲೆಯಲ್ಲಿದ್ದ ಚಾಪೆಯನ್ನು ತಂದು ಹಾಸಿದ. ಅವ್ವ ಎಚ್ಚರಗೊಂಡವಳಂತೆ ‘ಕುತ್ಕೋಳಕ್ಕಾ.. ಕುತ್ಕಳೋ ರಾಜ..’ ಅಂದಳು. ಅಪ್ಪನಿಗೆ ಏನನ್ನಿಸಿತೋ ‘ಅಕ್ಕೋ ನಿಂದು ಎಂತಾ ದೊಡ್ಡ ಮನಸ್ಸಕ್ಕೋ..’ ಎಂದು ರಾಜಣ್ಣನ ಅವ್ವನ ಕೈ ಹಿಡಿದುಕೊಂಡ. ‘ಅದ್ರಲ್ಲೇನದೆ ತಗೊಳೋ ದೊಡ್ಡೋನೆ.. ಮೈಯಿಗಾಗಿರೋ ಮದುವೆ ಮದುವೇನೆ ಅಲ್ಲ.. ಮದುವೆ ಯಾವಾಗ್ಲೂ ಮನಸ್ಸಿಗಾಗ್ಬೇಕು.. ಚಿಕ್ಕುದ್ರಲ್ಲೇ ಗಂಡುನ್ನ ಕಳಕಂಡು ನನ್ಮಗುನ್ನ ಬೆಳಿಸಿ ನಾನು ಗಂಡಸಿಲ್ದೆ ಹೆಂಗ್ಸು ಬದುಕ್ಬೋದು ಅಂತ ತೋರಸಿಲ್ವಾ.. ಆದ್ರೂ ಗಂಡುಸು ಮಾತ್ರ ಎಷ್ಟು ಸತಿನಾದ್ರೂ ಮದ್ವೆಯಾಗ್ಬೋದು.. ಹೆಂಗ್ಸು ಯಾಕಾಗಬಾರ್ದು ಅಂತ ನಂಗೆ ಅನ್ನಿಸ್ತಿದ್ರೂ ಅದುನ್ನ ಯಾರತ್ರನೂ ಹೇಳಿಕಳದಲೇ ಅಂಗೇ ಜೀವ್ನ ಸವುಸ್ಬುಟ್ಟೆ. ನಿನ್ನ ಮಗಳಿಗೆ ಅಂಗಾಗದು ಬ್ಯಾಡ. ಅವುಳುನ್ನೂ ಒಂದು ಸತಿ ಕೇಳು..’ ಅಂದಾಗ ಅಕ್ಕ ಗೋಡೆಗೊರಗಿ ನಿಂತಿದ್ದವಳು ‘ನಂದೇನೂ ಇಲ್ಲ ಅಪ್ಪ-ಅವ್ವ ಒಪ್ಪಿಕಂಡ್ರೆ ಆಯ್ತು’ ಅಂದಳು. ಅವ್ವ ‘ಅಕ್ಕೋ.. ನಮ್ಮ ಪಾಲಿಗೆ ನೀನು ಬ್ಯಾರೆ ಅಲ್ಲ ಆ ದೇವ್ರು ಬ್ಯಾರೆ ಅಲ್ಲ ಕಣಕ್ಕಾ..’ ಎಂದು ಕಣ್ಣಿನಲ್ಲಿ ನೀರು ತುಂಬಿಕೊಂಡಳು. ‘ಅಷ್ಟೊಂದು ದೊಡ್ಡ ಮಾತು ಬ್ಯಾಡ.. ಯಾರೂ ದೇವ್ರಾಗಕ್ಕಾಗಲ್ಲ.. ಇನ್ನೊಬ್ರು ಕಷ್ಟಸುಖುಕ್ಕೆ ಆಗೋ ಒಳ್ಳೇ ಮನುಸ್ರಾದ್ರೆ ಅಷ್ಟೇ ಸಾಕು..’ ಅಂತ ರಾಜಣ್ಣನ ಅವ್ವ ಹೇಳಿದಾಗ ಪುಟ್ಟನಿಗೆ ಆ ಮಾತು ನಿಜವೆನ್ನಿಸಿತು. ಮತ್ತೆ ಅಕ್ಕನ ಮದುವೆಯ ಚಪ್ಪರ ಕಣ್ಣುಮುಂದೆ ಬಂದು ವಾಲಗದ ಸದ್ದು ಕೇಳಿಸಿದಂತಾಗಿ ಅವನ ಮನಸ್ಸು ಹಕ್ಕಿಯಂತೆ ಹಾರಾಡತೊಡಗಿತ್ತು.
*************************
 

‍ಲೇಖಕರು avadhi

4 April, 2013

3 Comments

  1. ಹನುಮಂತ ಹಾಲಿಗೇರಿ

    ಮಗು ಪುಟ್ಟಣ ಕಣ್ಣೋಟದಲ್ಲಿ ಹುಟ್ಟಿ ಬೆಳೆಯುವ ಕಥೆ ತುಂಬಾ ಸೊಗಸಾಗಿದೆ. ಇಷ್ಟವಾಯಿತು.

    • ಟಿ.ತಿಮ್ಮಪ್ಪ

      ನೀಳ್ಗತೆಯನ್ನು ಸಹನೆಯಿಂದ ಓದಿ ಪ್ರತಿಕ್ರಿಯಿಸಿರುವ ಹನುಮಂತ ಹಾಲಿಗೇರಿಯವರಿಗೆ ಅನಂತ ಧನ್ಯವಾದಗಳು.
      ಪ್ರಕಟಿಸಿದ ಅವಧಿಯ ಸಂಪಾದಕರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

  2. mbbs

    ತುಂಬಾ ಚನ್ನಾಗಿ ಕಥೆ ಬರ್ದಿದಿರಾ…………I like it….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading