ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಂಬೈ’ ಆದ ಸಿ.ಎಸ್ ಲಕ್ಷ್ಮೀ..

-ಗಿರಿಜಾ ಶಾಸ್ತ್ರಿ

“ಇಲ್ಲಿ ಬನ್ನಿ ಹತ್ತಿರ ಕೂತ್ಕೊಳ್ಳಿ , ನನಗೂ ನಿಮ್ಮ ಹಾಗೆ ಕಿವಿ ಸ್ವಲ್ಪ ಮಂದ” ಸೋಫಾದ ಮೇಲೆ ಕುಳಿತುಕೊಳ್ಳುತ್ತಾ, ರಘುನಾಥ್ ಅವರನ್ನು ಉದ್ದೇಶಿಸಿ ಹೀಗೆ ಮಾತನಾಡಿದವರು ತಮಿಳಿನ ಪ್ರಸಿದ್ಧ ಕತೆಗಾರ್ತಿ ಅಂಬೈ ಅಲಿಯಾಸ್ ಸಿ.ಎಸ್ ಲಕ್ಷ್ಮೀ . “ನಿಮ್ಮಹತ್ರ ಕೂತ್ಕೋಳೋಕೆ ನಂಗೆ ಭಯ, ಯಾಕೇಂದ್ರೆ ನೀವು great personality” ಎಂದು ರಘು ನಕ್ಕರು.

“What nonsense ” ಎಂದು ಲಕ್ಷ್ಮೀ ಒಮ್ಮೆಲೇ ರಘು ಅವರ ಮಾತನ್ನು dismiss ಮಾಡಿ, ಅವರ ತೋಳಿನ ಮೇಲೆ ಒಂದು ಪ್ರೀತಿಯ ಪೆಟ್ಟು ಕೊಟ್ಟರು.

ಅವರನ್ನು ಬರಮಾಡಿಕೊಳ್ಳಲು ಗೇಟಿನ ಬಳಿ ಕಾಯುತ್ತಿದ್ದೆ. ಕಾರಿನಿಂದ ಇಳಿದವರೇ ಬಿಗಿಯಾಗಿ ಅಪ್ಪಿಕೊಂಡು “ಎಷ್ಟು ವರ್ಷಗಳಾಗಿ ಹೋಯಿತೇ ನೋಡಿ?” ಎಂದು ಬೆನ್ನು ನೇವರಿಸಿದರು.

೮೧ ವರುಷದ ಅಲ್ಲ ೧೮ರ ಯುವತಿಯ ಉತ್ಸಾಹದ ಈ ಲಕ್ಷ್ಮಿ ಪುಟು ಪುಟು ನಡೆಯುತ್ತಾ ಮನೆಯೊಳಗೆ ಬಂದರು- ಆತ್ವವಿಶ್ವಾಸ, ಧೈರ್ಯಗಳೇ ಮೈವೆತ್ತು ನಡೆದುಬಂದಂತೆ.

ಅವರು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಓದಿದ ಕತೆಯೊಂದನ್ನು ಹೇಳಿದರು. ಆ ಕತೆಯ ನಾಯಕಿ ಪಾರ್ವತಿ. ಗಂಡನಷ್ಟು ಬುದ್ಧಿವಂತಳಲ್ಲ ಎನ್ನುವ ಕಾರಣಕ್ಕೆ ಗಂಡ ಅವಳನ್ನು ಮನೆಯಾಚೆ ಅಟ್ಟಿಬಿಡುತ್ತಾನೆ. ಹೊರಬಂದ ಪಾರ್ವತಿ , ಕಾಲಾಂತರದಲ್ಲಿ ಕತೆಗಳನ್ನು ಬರೆಯುತ್ತಾ ದೊಡ್ಡ ಲೇಖಕಿಯಾಗಿ ಪ್ರಸಿದ್ಧಿಯನ್ನು ಪಡೆಯುತ್ತಾಳೆ. ತನ್ನ ಅಸ್ಮಿತೆಯನ್ನು ಮರೆಮಾಚಲು ‘ಅಂಬೈ’ ಎನ್ನುವ ಹೆಸರಿನಿಂದ ಬರೆಯಲು ಆರಂಭಿಸುತ್ತಾಳೆ. ಪ್ರಸಿದ್ಧಳಾದ ಮೇಲೆ ಗಂಡನ ಊರಾದ ಚೆನೈಗೆ ಬರುತ್ತಾಳೆ. ಆವೇಳೆಗೆ ಗಂಡ ಕೆಲಸ ಕಳೆದುಕೊಂಡು ನಿರ್ಗತಿಕನಾಗಿರುತ್ತಾನೆ. ನಿನ್ನ ಹೆಂಡತಿ ಪ್ರಸಿದ್ಧಳಾಗಿದ್ದಾಳೆ ಅವಳ ಬಳಿ ಹೋಗು ಎಂದು ಜನ ಹೇಳುತ್ತಾರೆ. ಗಂಡನನ್ನು ಕರೆದುಕೊಂಡು ಬಂದು ತನ್ನ ಪ್ರಭಾವವನ್ನು ಬಳಸಿ ಅವನಿಗೆ ಕೆಲಸ ಕೊಡಿಸಿ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಅವನಿಗೆ ಒತ್ತಾಸೆ ನೀಡುತ್ತಾಳೆ. ಕೊನೆಗೆ ಗಂಡ ಕೇಳುತ್ತಾನೆ ನಾವು ಮತ್ತೆ ಹಳೆಯ ಬದುಕನ್ನು ಮುಂದುವರೆಸಬಹುದಲ್ಲವೇ? “She said No” ಲಕ್ಷ್ಮಿಯವರು ಈ ವಾಕ್ಯವನ್ನು ಹೇಳುವಾಗ ಅವರ ಕಣ್ಣಿನಲ್ಲಿ ಮಿಂಚು, ಧೃಡ ನಿರ್ಧಾರದ ಧಾರ್ಷ್ಟ್ಯ ಎಲ್ಲವೂ ಅವರ ಮುಖದ ಮೇಲೆ ಕುಣಿಯಿತು.

“ನಿನಗೆ ಒಂದು ನೆಲೆ ಸಿಗುವವರೆಗೆ ನಿನಗೆ ಒತ್ತಾಸೆಯಾಗಿರಬೇಕೆಂದು ನಾನು ಸಂಕಲ್ಪ ಮಾಡಿದ್ದೆ. ಈಗ ಅದು ಈಡೇರಿದೆ. ಈಗ ನಾನು ನನ್ನ ಹಳೆಯ ಬದುಕಿಗೆ ಮರಳಲಾರೆ ” ಎನ್ನುತ್ತಾಳೆ ಪಾರ್ವತಿ. ಈ ಕತೆಯ ಹೆಸರು “ಪಾರ್ವತಿಯಿನ್ ಸಂಕಲ್ಪಂ” ಐವತ್ತನೇ ದಶಕದ ಪ್ರಾರಂಭದ ಕತೆಯಿದು (೧೯೫೩). ಆಗಿನ ಕಾಲದಲ್ಲೇ ಹೆಣ್ಣೊಬ್ಬಳಿಗೆ ಇದ್ದ ಇಂತಹ ಸ್ಪಷ್ಟನಿಲುವು! ಲಕ್ಷ್ಮಿಯವರಿಗೆ ಬೆರಗು! ಆ ಬೆರಗಿನ ಪ್ರಭಾವದಿಂದ ಅವರು ತಮ್ಮ ಹದಿನಾರನೇ ವರುಷಕ್ಕೆ ಕತೆ ಬರೆಯಲಾರಂಭಿಸಿದರು. ಅವರ ಕಾವ್ಯ ನಾಮ ‘ಅಂಬೈ’ ಹಿಂದೆ ಈ ಕತೆಯಡಗಿದೆ.

ಅಲ್ಲದೇ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಶಿಖಂಡಿ ಅಂಬೆಯ ಪರಿಕಲ್ಪನೆಯೂ ಇದರಲ್ಲಿ ಸೇರಿದೆಯಂತೆ. I liked that aspect ಎನ್ನುತ್ತಾರೆ ಲಕ್ಷ್ಮಿ. ಪೌರುಷಹೀನನಿಗೆ ಆರೋಪಿಸುವ ಶಬ್ದ ‘ಶಿಖಂಡಿ’. ಆದರೆ ಅಂತಹ ಶಿಖಂಡಿಯೇ ಪರಮ ವೀರನನ್ನು ನಿಶಸ್ತ್ರ ಗೊಳಿಸುತ್ತಾಳೆ. ಯುದ್ಧಭೂಮಿಯಿಂದ ಪಲಾಯನಮಾಡಿಸುತ್ತಾಳೆ. ಬಹುಶಃ ಲಕ್ಷ್ಮಿಯವರ ಕತೆಗಳ ದರ್ಶನವನ್ನು ಈ ಅಂಬೈಯೇ ರೂಪಿಸಿರಬೇಕು! ಸ್ತ್ರೀವಾದದ ಆತ್ಯಂತಿಕ ಸ್ವರೂಪವನ್ನು ಕಂಡುಕೊಳ್ಳಲು ಈ ಇಬ್ಬರು ಅಂಬೈಯರ ಪ್ರಭಾವವೇ ಹೆಚ್ಚಾಗಿರಬೇಕು.

ಅವರು ಸಭೆಗಳಲ್ಲಾಗಲೀ ತಮ್ಮ ಸ್ಪ್ಯಾರೊ ಕಛೇರಿಯಲ್ಲಾಗಲೀ ಒಳ್ಳೇ fire brand ನಂತೆ ಓಡಾಡುತ್ತಾರೆ. ಜೊತೆಗೆ ಬಿರುಗಾಳಿಯ ಬೀಸೂ ನಡಿಗೆಯಲ್ಲಿರುತ್ತದೆ. ಗಾಳಿ ಮತ್ತು ಬೆಂಕಿ ಜೊತೆಗೂಡಿದರೆ ಹೇಗಿರಬೇಡ? ಯಾವ ದೊಡ್ಡ ಅಧಿಕಾರಿಯನ್ನಾದರೂ ಸರಿ, ಅನ್ಯಾಯ ಮಾಡಿದರೆ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಲಕ್ಷ್ಮಿ ಎಂದರೆ ಗಾಳಿ ಬೆಂಕಿ ಇವೆರಡರ ಪ್ರತೀಕ.

ಇವರ ಸಂಗಾತಿಯ ಹೆಸರು ವಿಷ್ಣು. “ನೀವು ತಪಸ್ಸು ಮಾಡಿದ್ರಾ?- ವಿಷ್ಣು ಸಿಗಲಿ ಎಂದು” ಎಂದು ರಘು ಕಿಚಾಯಿಸಿದರು. ಅದಕ್ಕೆ ನಾವಿಬ್ಬರೂ , “ಗಂಡನಿಗಾಗಿ ತಪಸ್ಸು ಮಾಡಿದ್ದು ಪಾರ್ವತಿ, ಲಕ್ಷ್ಮಿಯಲ್ಲ” ಎಂದು ಅವರ ಮೇಲೆ ಮುಗಿಬಿದ್ದೆವು. ನಗುವಿನ ಲಹರಿ ಕೋಣೆ ತುಂಬಿತ್ತು.

ಒಂದು ದಿನ ‘ಸ್ಪ್ಯಾರೋ’ದಲ್ಲಿ ಅವರ ಪುಸ್ತಕದ ಅನುವಾದದ ಬಗ್ಗೆ ನಾವಿಬ್ಬರೂ ತೊಡಗಿದ್ದೆವು. ತಮಿಳಿನ ‘ಒಪ್ಪಾರಿ’ ಶಬ್ದದ ಬಗ್ಗೆ ಮಾತು ಬಂತು. (ಸತ್ತವರ ಮನೆಯಲ್ಲಿ ಅಳುವವರನ್ನು ದುಡ್ಡು ಕೊಟ್ಟು ಕರೆಸಿ ಅಳಿಸುವುದು)

“No, we dont have one Word for ‘Oppari’ in Kannada, Lakshmi ” ಎಂದು ನಾನು ಹೇಳಿದೆ.

” How come? There must be one in Kannada” ಎಂದು ಬಿರುಗಾಳಿಯಂತೆ ಪಕ್ಕದಲ್ಲೇ ಇದ್ದ ತಮ್ಮ ಲೈಬ್ರರಿಗೆ ಓಡಿದರು. ಅಲ್ಲಿಂದಲೇ ಕೂಗಿಕೊಂಡರು ” yes , girija i found it , it is ಚರಮಗೀತೆ” ಎಂದು ಕೈಗಳನ್ನು ಬೀಸುತ್ತಾ ಗೆಲುವಿನ ಖುಷಿಯಲ್ಲಿ ನನ್ನ ಬಳಿಗೆ ಬಂದರು.

“ಚರಮಗೀತೆ is elegy Lakshmi not Oppari” ಎಂದು ನಾನು ತಗ್ಗಿದ ದನಿಯಲ್ಲಿ ಹೇಳಿದೆ.

ಇನ್ನೊಮ್ಮೆ “what is colloquial name for vagina in Kannada?” ಎಂದು ಕೇಳಿದರು.

“It is there” ಎಂದೆ

“What is it? tell me” ಎಂದರು.

“Sorry Lakshmi, i can’t utter that word” ಎಂದೆ.

ಹೇಳಲೇಬೇಕು ಎಂದು ಒತ್ತಾಯಿಸಿದರು. ನಾನು ಸಾಧ್ಯವೇ ಇಲ್ಲವೆಂದೆ.

“ಹೋಗಲಿ ಬರೆದು ತೋರಿಸು” ಎಂದರು.

ಇವರು ಇನ್ನು ನನ್ನನ್ನು ಬಿಡುವ ಹಾಗಿಲ್ಲವೆಂದು ಅಲ್ಲೇ ಇದ್ದ ಒಂದು ಹಾಳೆಯ ಮೇಲೆ ಬರೆದೆ. ಎರಡೇ ಅಕ್ಷರದ ಅದನ್ನು ಅವರು ಜೋರಾಗಿ ಮೂರು ನಾಲ್ಕು ಸಲ ಓದಿದರು. “ಅಯ್ಯೋ ಅಯ್ಯೋ.. ಮೆಲ್ಲಗೆ ಓದಿ” ಎಂದವಳೇ ನಾನು ಭೂಮಿಗೆ ಇಳಿದು ಹೋದೆ. ಆನಂತರ ತಮಿಳಿನಲ್ಲಿ ಹೇಗಿದೆಯೋ ಹಾಗೆಯೇ ಬಳಸಬೇಕೆಂದು ತಾಕೀತು ಮಾಡಿದರು. ಕೊನೆಗೆ ಅವರ ” ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ” ದಲ್ಲಿ‌ ಅವರು‌ ಹೇಳಿದಂತೆ ಅದೇ ಶಬ್ದ ಹಾಕಿದೆ. Vagina monologues ನಲ್ಲಿ ಈವ್ ಎನ್ಸ್ಲರ್ ಹೀಗೆಯೇ ತನ್ನ ಹಿಂಜರಿಕೆಯನ್ನು ಮೀರಿದ ಬಗೆಯನ್ನು ಹೇಳಿಕೊಂಡಿದ್ದಾಳೆ ( ನೋಡಿ ನನ್ನ ಲೇಖನ : ‘ಭಗವತಿಯ ಸ್ವಗತಗಳು’)

ಲಕ್ಷ್ಮೀ ಎಂದರೆ ಏನೆಲ್ಲ ನೆನಪುಗಳು ಉಕ್ಕಿ ಬರುತ್ತವೆ. ಎಲ್ಲವನ್ನೂ ಬರೆಯಬೇಕು ಎಂದುಕೊಂಡಾಗ, “ತಮಿಳಿನಲ್ಲಿ ನಿಮ್ಮ ಬಗ್ಗೆ ಬಯಾಗ್ರಫಿ ಏನಾದರೂ ಬಂದಿದೆಯಾ” ಎಂದು ಲಿಫ್ಟಿಗಾಗಿ ಕಾಯುತ್ತಾ ಕೇಳಿದೆ, “ಬೇರೆ ಕೆಲಸವಿಲ್ಲವಾ ನಿನಗೆ ” ಎನ್ನುವಂತೆ ನನ್ನ ಕೈಯನ್ನು ಭದ್ರವಾಗಿ ಹಿಡಿದುಕೊಂಡು ಲಿಫ್ಟಿನೊಳಗೆ ನನ್ನನ್ನೂ ತಳ್ಳಿದಂತೆ ತೂರಿಕೊಂಡರು.

ಎಂಬತ್ತರ ಲಕ್ಷ್ಮಿ, ಗೆಳತಿಯರನ್ನು ಅರಸಿಕೊಂಡು ಬೆಂಗಳೂರಿನ ತುಂಬಾ ಓಡಾಡುತ್ತಿದ್ದಾರೆ ಒಬ್ಬರೇ. ನಮ್ಮ ಮನೆ ಬಿಟ್ಟಾಗ ಸು. ಸಂಜೆ ಐದೂವರೆ, ಇನ್ನೂ ಕಾಕ್ಸ್ ಟೌನ್ ,ಹರಪನಹಳ್ಳಿ….ಹೀಗೆ ತುಂಬಾ ಜನರ ಮನೆಗೆ ಹೋಗಬೇಕು. ಡ್ರೈವರಿಗೆ ಮ್ಯಾಪ್ ಕೊಟ್ಟಿದ್ದೀನಿ ಎಂದು ಕಾರಿನ ಹೊರಗೆ ಮತ್ತೊಮ್ಮೆ ಬಿಗಿಯಾಗಿ ಅಪ್ಪಿಕೊಂಡರು. ಕಾರಿನ ಕಿಟಕಿಯಿಂದ ಕೈಯಾಡಿಸುತ್ತಾ ಬೀಳ್ಕೊಂಡರು.

*ಅನೇಕ ಪ್ರಶಸ್ತಿಗಳ ಒಡತಿಯಾಗಿರುವ ಲಕ್ಷ್ಮಿಯವರಿಗೆ ‘ಸಿವಪ್ಪು ಕುಝುತುದನ್ ಒರು ಪಚ್ಚೈ ಪರವೈ ‘ (ಕೆಂಪು ಕತ್ತಿನ ಹಸಿರು ಹಕ್ಕಿ) ಕಥಾಸಂಕಲನಕ್ಕಾಗಿ ೨೦೨೧ ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

‍ಲೇಖಕರು Admin

19 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading