ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬೇಡ್ಕರ್ ನ್ನು ಬಳಸಿ ಸಂಚು ನಡೆಯುತ್ತಿದೆಯೇ..? ಬನ್ನಿ ಕಾಮೆಂಟ್ ಹಾಕಿ

ಅಂಬೇಡ್ಕರ್ ವಾದವನ್ನು ಒಂದು ಸರಕಾಗಿ ಮಾಡಿಕೊಳ್ಳಲಾಗಿದೆಯೇ ?

ದಲಿತ ಆಲೋಚನೆ ಹಾಗೂ ಎಡಪಂಥೀಯರು ಒಟ್ಟಾಗಿ ಹೋಗದಂತೆ ಸಂಚು ನಡೆಯುತ್ತಿದೆಯೇ?

ಶೋಷಣೆಗೆ ಒಳಗಾದವರನ್ನು ದಿಕ್ಕು ತಪ್ಪಿಸಲಾಗುತ್ತಿದೆಯೇ?

ಈ ಬಗ್ಗೆ ಮೂವರು ಮಂಡಿಸಿದ ಆಲೋಚನೆಗಳು ಇಲ್ಲಿವೆ 

ಇದು ಜುಗಾರಿ ಕ್ರಾಸ್, ಚರ್ಚೆಯ ತಾಣ

ಬನ್ನಿ ನೀವೂ ಕಾಮೆಂಟ್ ಹಾಕಿ ಚರ್ಚೆ ಬೆಳಸಿ  

krishnegowda t l

ಕೃಷ್ಣೇಗೌಡ ಟಿ ಎಲ್  

ಕೆಲವರು ಅಂಬೇಡ್ಕರ್ ಹೆಸರು ಹೇಳಿಕೊಂಡು ದಲಿತರನ್ನು ಎಡಚಿಂತನೆ ಮತ್ತು ಹೋರಾಟಗಳಿಂದ ದೂರವಿಡಲು ನಿರಂತರವಾಗಿ ಸಂಚು ನಡೆಸುತ್ತಿದ್ದಾರೆ. ಬಹು ದೊಡ್ಡ ಶೋಷಿತ ಸಮುದಾಯವನ್ನು ಈ ರೀತಿ ದಿಕ್ಕು ತಪ್ಪಿಸುವ ಮೂಲಕ ಶೋಷಕರಿಗೆ ನೆರವಾಗುವುದು ಮತ್ತು ಶೋಷಕ ವ್ಯವಸ್ಥೆಯನ್ನು ಶಾಶ್ವತಗೊಳಿಸುವುದೇ ಅವರ ಹುನ್ನಾರವಾಗಿದೆ. ಆಳುವ ವರ್ಗದ ಬಾಲಬುಡುಕರಾಗಿರುವ ಇವರು ತಮ್ಮ ಬಾಲಬುಡುಕತನಕ್ಕೆ ಎಳೆದು ತರುತ್ತಿರುವ ಹೆಸರು ಅಂಬೇಡ್ಕರ್ ಮತ್ತು ಬಹುಜನ ರಾಜಕಾರಣ. ಈ ಹುನ್ನಾರವನ್ನು ಬಯಲಿಗೆಳೆದು ಆಳುವ ವರ್ಗದ ಬಾಲಬುಡುಕರಿಂದ ಬಹುಜನರನ್ನು ಪಾರುಮಾಡಬೇಕಿದೆ..

yamuna gaokar

ಯಮುನಾ ಗಾಂವ್ಕರ್ 

ಅಂಬೇಡ್ಕರ್ ರವರನ್ನು ನಾವ್ಯಾರೂ ಮುಟ್ಟಬಾರದೆನ್ನುವವರು ಹೀಗೂ ಹೇಳುತ್ತಿದ್ದಾರೆ… ಬಿಜೆಪಿಗೆ ದಲಿತರು ಆಕರ್ಷಿತರಾಗದಂತೆ ತಮ್ಮ ಜನರನ್ನು ತಡೆಯುವ ಹುನ್ನಾರ ಕಮ್ಯೂನಿಷ್ಟರು ಮಾಡುತ್ತಿದ್ದಾರೆ ಎಂದು. ಅದಕ್ಕೆ ನನ್ನ ಉತ್ತರ .. ಅಯ್ಯೋ ಬಿಜೆಪಿಗೆ ಒಂದೇ ಅಲ್ಲ ಆರ್ ಎಸ್ ಎಸ್ ಗೂ ಹೋಗಿ.. ತಡೆವವರಾರು? ಬೆಂಕಿಗೆ ಕೈಹಾಕಿ ಸುಟ್ಟುಕೊಳ್ಳಬೇಡಿ ಎನ್ನುತ್ತೇವೆ. ಸುಟ್ಟುಕೊಂಡೇ ತೀರುತ್ತೇವೆ ಎಂದರೆ ತಡೆವವರಾರು ಸ್ವಾಮಿ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರನ್ನು ಯಾರೂ ತಡೆಯಲಾಗದು. ಸಹಬಾಳ್ವೆಯ ಮನಸ್ಸುನ್ನು ಬಿಟ್ಟು ಸನಾತನಕ್ಕೇ ಶರಣಾಗಿ… ಜಾತಿ ಅಸ್ಪೃಶ್ಯತೆ ವಿರುದ್ಧದ ಸೆಣಸಾಟ ಬಿಟ್ಟು ಸಲೀಸಾಗಿ ಬ್ರಾಹ್ಮಣ್ಯವಾದ ಎತ್ತಿ ಹಿಡಿಯಿರಿ… ಡಾ. ಅಂಬೇಡ್ಕರ್ ಅವರ ಚಿಂತನೆಗಳ ನೆರವು ನೆರಳು ಬಿಟ್ಟು ಏಕ ಸಂಸ್ಕೃತಿ ಪ್ರತಿಪಾದಕರಾಗಿ. ಬೇಡೆಂದವರಾರು… ಅಂತಿಮವಾಗಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಎತ್ತಿ ಹಿಡಿಯುವ ಬದಲು ಸರ್ವಾಧಿಕಾರ ವ್ಯವಸ್ಥೆಯತ್ತ ಸಾಗುತ್ತೀರಷ್ಟೇ.. ಎಲ್ಲ ದಲಿತ ಆದಿವಾಸಿ ಗಳ ಜೊತೆಗೆ ಜನಸಾಮಾನ್ಯರ ಬದುಕು ಬರ್ಬಾದ್ ಆಗಲು ಕಾರಣವಾಗುತ್ತಿರುವ ಅವರ ಸಾಮಾಜಿಕ ರಾಜಕೀಯ ಆರ್ಥಿಕ ಸಾಂಸ್ಕೃತಿಕ ಅಜೆಂಡಾ ಜಾರಿ ಮಾಡುವ ಪೌರೋಹಿತ್ಯ ನಿಮ್ಮಂಥವರು ವಹಿಸಿದಂತಾಗುತ್ತದೆ. ಅವರೂ ಅದನ್ನೇ ಕಾಯುತ್ತಿದ್ದಾರೆ. ನಾವ್ಯಾರೂ ತಡೆಯಲ್ಲ.. ಬೆಂಕಿಗೆ ಕೈಹಾಕಿ ಸುಟ್ಟುಕೊಳ್ಳಬೇಡಿ ಎನ್ನುತ್ತೇವೆ. ಸುಟ್ಟುಕೊಂಡೇ ತೀರುತ್ತೇವೆ ಎಂದರೆ ತಡೆವವರಾರು ಸ್ವಾಮಿ?

ಹಾಗೆಯೇ ಅಂಬೇಡ್ಕರರನ್ನು ತಮ್ಮದೇ ಗುತ್ತಿಗೆ ಎಂದು ಭಾವಿಸಿದ ಒಂದು ವಲಯ ದಲಿತರ ಅಭಿವೃದ್ಧಿ ತಮಗೆ ಮಾತ್ರ ಸೇರಿದ್ದೆಂದು ಉಳಿದವರು ಯಾರೂ ದಲಿತರ ವಿಚಾರದಲ್ಲಿ ಕಣ್ಣೆತ್ತಿಯೂ ನೋಡಕೂಡದೆಂದು ಆಜ್ಞಾಪಿಸುತ್ತಿದ್ದಾರೆ. ಆಗಬಹುದಿತ್ತು… ಆದರೆ ನನ್ನೆದುರು ಹಾಡೇ ಹಗಲು ದಲಿತರು ಹಿಂದುಳಿದ ಜನವಿಭಾಗದ ಮೇಲಾಗುವ ದೌರ್ಜನ್ಯ ನೋಡಿ ಸುಮ್ಮನಿದ್ದು ಬಹುಜನ ಸಮಾಜ ಪಕ್ಷದ ಮುಖಂಡರು ಎಲ್ಲಿದ್ದಾರೆಂದು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಮುಟ್ಟಿಸಿ ಅವರು ಬರುವ ತನಕ ಕಾಯಬೇಕಾ… ಜವಾಬ್ದಾರಿಯುತ ವ್ಯಕ್ತಿಗಳಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದರೂ ಯಾಕಿಷ್ಟು ಅಸ್ಪೃಶ್ಯತೆ? ತಮಗೆ ಬೇಕಾದ ಹಾಗೆ ವಾದಿಸಿಲ್ಲ ಎನ್ನುವ ಕಾರಣಕ್ಕೆ ಇನ್ನು ಮುಂದೆ ಗೌರಿ ಲಂಕೇಶ್ ಪತ್ರಿಕೆ ದಲಿತರ್ಯಾರೂ ಓದಲ್ಲ ಎನ್ನುವ ಅರ್ಥದ ಸ್ಟೇಟಸ್ ಹಾಕಿದ ಮೇಲೆ ಇವರ ಮನಸ್ಥಿತಿ ಹೇಗಿರಬೇಡ? ಅಂದರೆ ಎಲ್ಲಾ ದಲಿತ ಸಮುದಾಯದ ಗುತ್ತಿಗೆ ಪಡೆದಿದ್ದಾರಾ ಇವರು. .. ಬೇಸರವಾಗುತ್ತದೆ …. ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ರಾಜಕೀಯ ಅಸಮಾನತೆಯಿಂದ ಆಚೆ ಬರಲು ಬಲೆಯಿಂದ ಬಿಡಿಸಿ ಕೊಳ್ಳಲು ಒಟ್ಟಾಗಿ ಕೆಲಸ ಮಾಡುವದನ್ನು ಬಲಗೊಳಿಸದೇ ಒಡೆದು ಆಳುವ ಪ್ರವೃತ್ತಿ ಖೇದಕರ.

g a hiremutt

ಜಿ ಎ ಹಿರೇಮಠ  

ನನ್ನ ಪ್ರಕಾರ ಅಂಬೇಡ್ಕರವರ ಬಹಳಷ್ಟು ವಿಚಾರಗಳು ಎಡಪಂಥೀಯಗಳಾಗಿದ್ದವು.ಅವುಗಳಲ್ಲಿ ಎಷ್ಟೋ ವಿಚಾರಗಳು ಇನ್ನೂ ಜಾರಿಗೆ ತರುವದು ಅವರ ಅನುಯಾಯಿಗಳಿಂದಾಗಲಿ ಅಥವಾ ಅವರನ್ನು ಒಪ್ಪಿಕೊಂಡವರಿಂದಾಗಲಿ ಆಗಿಲ್ಲ.

 

‍ಲೇಖಕರು Admin

18 May, 2016

1 Comment

  1. ಕು.ಸ.ಮಧುಸೂದನರಂಗೇನಹಳ್ಳಿ

    ಅಂಬೇಡ್ಕರ್ ವಾದ: ಒಂದು ಟಿಪ್ಪಣಿ!

    ಹಿಂದೆಂದಿಗಿಂತಲೂ ಹೆಚ್ಚಾಗಿ ಇವತ್ತು ಮಾಕ್ಸ್ವಾದ ಮತ್ತು ಅಂಬೇಡ್ಕರ್ ವಾದಗಳ ನಡುವೆ ಯಾವುದು ಶ್ರೇಷ್ಠ ಮತ್ತು ಯಾವುದರಿಂದ ನಾವು ನಮ್ಮ ಅವಮಾನಗಳಿಂದ ಶೋಷಣೆಯಿಂದ ಅಸಮಾನತೆಯಿಂದ ಬಿಡುಗಡೆ ಪಡೆಯಬಹುದೆಂಬುದರ ಬಗ್ಗೆ ಬಿಸಿಬಿಸಿ ಚಚರ್ೆಗಳು ನಡೆಯುತ್ತಿವೆ. ಇಂತಹ ಚಚರ್ೆಗಳನ್ನು ನೋಡುತ್ತಾ ಈ ಎರಡೂ ದೇಶದ್ರೋಹಿ ವಾದಗಳೆಂಬಂತೆ ಬಿಂಬಿಸುತ್ತ ವಿಕೃತ ಆನಂದ ಅನುಭವಿಸುತ್ತಿರುವ ಬಲಪಂಥೀಯ ಶಕ್ತಿಗಳು ಒಂದೆಡೆಯಾದರೆ, ಈ ಚಚರ್ೆಯನ್ನು ಆರೋಗ್ಯಕರವಾಗಿ ಕೊಂಡೊಯ್ದು ಇವೆರಡೂ ವಾದಗಳನ್ನು ಬಳಸಿಕೊಂಡು ಮೂರನೆಯದಾದ ಮತ್ತು ಸಮಕಾಲೀನ ಸಮಾಜಕ್ಕೆ ಪ್ರಸ್ತುತವಾದ ಹೊಸ ವಾದವೊಂದನ್ನು ಹುಟ್ಟು ಹಾಕಬಹುದೇ ಎಂದು ಇನ್ನು ಕೆಲವರು ಗಂಬೀರವಾಗಿ ಚಿಂತಿಸುತ್ತಿದ್ದಾರೆ. ಹೀಗೆ ಚಿಂತಿಸುವವರನ್ನು ಮದ್ಯಮಮಾರ್ಗದ ಅವಕಾಶವಾದಿಗಳೆಂದು ಕರೆಯುವ ಒಂದು ವರ್ಗ ಈ ಚಚರ್ೆಯ ನಿಜವಾದ ಮೌಲ್ಯವನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಅಂಬೇಡ್ಕರ್ ವಿಚಾರಧಾರೆಯ ಕುರಿತೊಂದು ಸಣ್ಣ ಟಿಪ್ಪಣಿಯನ್ನು ಮಾಡಲು ಪ್ರಯತ್ನಿಸಿದ್ದೇನೆ.

    ಅಂಬೇಡ್ಕರ್ ಇಂಡಿಯಾದ ಮಟ್ಟಿಗೆ ಬಹಳ ಮುಖ್ಯವಾಗುವುದೇ ಅವರ ವಿಚಾರಧಾರೆಯು ಅಸ್ಪೃಶ್ಯ ಬದುಕಿನ ಒಡಲಾಳದಿಂದ ಹುಟ್ಟಿದ ಕಾರಣಕ್ಕೆ! ಬೇರೆ ಚಿಂತಕರಂತೆ ಅವರು ಅಸ್ಪೃಶ್ಯ ಸಮಾಜದ ಹೊರನಿಂತು ತಮ್ಮ ವಾದ ಮಂಡಿಸಿದವರಲ್ಲ. ಈ ನಾಡಿನ ಬಹುಸಂಖ್ಯಾತ ದಲಿತರ ಶೋಷಿತ ಬದುಕಿನಸಮಸ್ತಮುಖಗಳನ್ನೂ ಕಣ್ಣಾರೆಕಂಡು ಸ್ವತ: ಅನುಭವಿಸಿ ತಮ್ಮ ವಿಚಾರಕ್ಕೆ ಒಂದು ರೂಪು ಕೊಟ್ಟವರು ಮತ್ತು ದಲಿತರ ದ್ವನಿಯಾದವರು. ಹೇಗೆ ಮಾಕ್ಸ್ ಕಾಮರ್ಿಕರು ಬಂಡವಾಳಶಾಹಿಗಳಿಂದ ಮುಕ್ತರಾಗುವ ತನಕ ಅವರುಗಳ ಬಿಡುಗಡೆ ಸಾದ್ಯವಿಲ್ಲವೆಂದು ಚಿಂತಿಸಿದನೋ ಅದೇ ರೀತಿ ಅಂಬೇಡ್ಕರ್ ಸಹ ಎಲ್ಲಿಯವರೆಗೆ ಅಸ್ಪೃಶ್ಯ ವರ್ಗಕ್ಕೆ ಜಾತಿಯ ಅವಮಾನದಿಂದ ಮುಕ್ತಿ ಸಾದ್ಯವಿಲ್ಲವೊ ಅಲ್ಲಿಯವರೆಗೂ ಇಂಡಿಯಾದ ಅಸಮಾನತೆಯ ಕಳಂಕ ಹೊತ್ತ ಸಮಾಜದ ವಿಮುಕ್ತಿ ಸಾದ್ಯವಿಲ್ಲವೆಂದು ಚಿಂತಿಸಿದವರು. ಅಂಬೇಡ್ಕರ್ ನಮಗೆ ಮಾಕ್ಸ್ಗಿಂತ ಹೆಚ್ಚು ಮುಖ್ಯವಾಗುವುದು ಅವರ ಈ ವಿಚಾರಧಾರೆಯಿಂದಾಗಿಯೇ! ಯಾಕೆಂದರೆ ಭಾರತೀಯ ಸಮಾಜ ತನ್ನೆಲ್ಲ ಅನಿಷ್ಠ ಆಚರಣೆಗಳನ್ನು ದಲಿತ ಸಮುದಾಯದ ಮೇಲೆ ಹೊರಿಸಿ ನಿರುಮ್ಮಳವಾಗಿದೆ. ಬಡತನ ಮತ್ತು ಹಸಿವಿನ ಅಸಹಾಯಕತೆಗಿಂತ ಹೆಚ್ಚಾದ ಅವಮಾನ , ಅಸಹಾಯಕತೆಗಳ ನೋವನ್ನು ಅನುಭವಿಸುತ್ತಿರುವ ನಮ್ಮ ಅಸ್ಪೃಶ್ಯ ಸಮುದಾಯ ವಿಶ್ವದ ಉಳಿದೆಲ್ಲ ಶೋಷಿತ ಸಮುದಾಯಗಳಿಗಿಂತ ಹೆಚ್ಚಾದ ಹಿಂಸೆಯನ್ನು ಅನುಭವಿಸುತ್ತಿದೆ. ಹಾಗಾಗಿಯೇ ಉಳಿದವರ ಹಸಿವಿಗಿಂತ ದಲಿತರ ಹಸಿವು ಹೆಚ್ಚು ಯಾತನಾಮಯವಾದದ್ದು. ಉಳಿದೆಲ್ಲ ಅವಮಾನಗಳಿಗಿಂತ ಅಸ್ಪೃಶ್ಯತೆಯ ಅವಮಾನ ಅಗಾಧವಾದದ್ದು. ಈ ಅವಮಾನ, ಅಸಹಾಯಕತೆ,ಹತಾಶೆಗಳಿಂದ ಹೊರಬರಲು ನಮಗಿವತ್ತು ಅಂಬೇಡ್ಕರ್ ವಿಚಾರಧಾರೆಯೇ ಬಹಳ ಪ್ರಸ್ತುತವಾದದ್ದು. ಈ ನೆಲದ ಜಾತಿಯ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದ ಮಾಕ್ಸ್ವಾದಕ್ಕಿಂತ ಅಂಬೇಡ್ಕರ್ ವಾದವೇ ಮುಖ್ಯವೆಂದು ಇವತ್ತಿನ ದಲಿತರು ನಂಬಿಕೊಂಡಿದ್ದರೆ ಅದು ತಪ್ಪೇನೂ ಅಲ್ಲ.

    ಈ ಕಾರಣಗಳಿಂದಾಗಿಯೇ ಬೇರೆಲ್ಲ ರಾಜಕೀಯ,ಧಾಮರ್ಿಕ ಚಿಂತನೆಗಳಿಗಿಂತ ಅಂಬೇಡ್ಕರ್ ಅವರ ಚಿಂತನೆ ವಿಶಿಷ್ಟವಾಗಿದೆ.ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮೊದಲಿಗೆ ಮಹಾತ್ಮ ಗಾಂದಿಯವರು ಮತ್ತು ಕಾಂಗ್ರೇಸ್ ಪಕ್ಷ ಅನುಸರಿಸಿದ ಮಾರ್ಗ ಸುಧಾರಣೆಯದಾಗಿತ್ತು.ಗಾಂದಿಯವರು ಬರೆದ ಹಲವಾರು ಲೇಖನಗಳನ್ನು ಓದಿದರೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರು ದಲಿತರ ದೇವಾಲಯ ಪ್ರವೇಶವನ್ನೂ ಮೇಲ್ಜಾತಿಯರ ಔದಾರ್ಯಯಕ್ಕೆ ಸಂಬಂದಿಸಿದಂತೆ ನೋಡುತ್ತಿದ್ದರೇ ಹೊರತು ದಲಿತರ ಹಕ್ಕನ್ನಾಗಿಯೇನು ಅಲ್ಲ. ದಲಿತರನ್ನು ಹಿಂದೂ ಧರ್ಮದ ತೆಕ್ಕೆಯಿಂದ ಹೊರಹೋಗಲು ಬಿಡಬಾರದೆಂಬ ಗಾಂದಿಯವರ ನಿಲುವೆ ದಲಿತರನ್ನು ಹರಿಜನರೆಂದು ಕರೆಯುವುದಕ್ಕೆ ಪ್ರೇರಣೆಯಾಗಿದ್ದು ಸುಳ್ಳೇನಲ್ಲ.ಇದೇ ರೀತಿ ಕಳೆದೆರಡು ಶತಮಾನಗಳಲ್ಲಿ ದಲಿತರ ಪರವಾಗಿ ಹೋರಾಡಿದ ಬಹುತೇಕ ಸುಧಾರಕರು, ಅಸ್ಪೃಶ್ಯತೆಯ ಸಮಸ್ಯೆಯನ್ನು ಧಾಮರ್ಿಕ ನೆಲೆಯಲ್ಲಿಯೇ ಪರಿಹರಿಸಲು ನೋಡಿದರು. ಅವರುಗಳಿಗೆ ತಾವು ನಂಬಿದ ಧರ್ಮದ ವಿರುದ್ದ ದನಿಯೆತ್ತಿ ಅಸ್ಪೃಶ್ಯತೆಯನ್ನು ಖಂಡಿಸಿ ಹೊರಬರುವ ಹಟವಿರಲಿಲ್ಲ. ಬದಲಿಗೆ ಗಾಂದಿಯವರ ರೀತಿಯಲ್ಲಿಯೇ ಹಿಂದೂ ಧರ್ಮದೊಳಗಿನ ಆಂತರೀಕ ಸುಧಾರಣೆ ಮಾತ್ರ ಅಸ್ಪೃಶ್ಯತೆಯನ್ನು ನಿವಾರಿಸಬಹುದೆಂದು ನಂಬಿದ್ದರು. ಇಂತಹ ಮನೋಬಾವ ಹೊಂದಿದ್ದರಿಂದಲೇ ಗಾಂದಿಯಂತವರು ಅಸ್ಪೃಶ್ಯತೆ ಹಿಂದೂ ಧರ್ಮದ ಒಂದು ಕಳಂಕ ಅದನ್ನು ನಿವಾರಿಸಲು ಸವಣರ್ಿಯರು ಮನಸ್ಸು ಮಾಡಬೇಕೆಂಬ ಕರೆ ನೀಡಿದರು. ಅಸ್ಪೃಶ್ಯರ ಸಂಘಟನೆ ಮಾಡಿ ಅವರ ಹಕ್ಕುಗಳನ್ನು ಅವರಿಗೆ ಕೊಡಿಸುವ ಮಾರ್ಗದ ಬದಲಿಗೆ ಗಾಂದಿ ಆಯ್ದು ಕೊಂಡಿದ್ದು ಸುದಾರಣೆಯ ಹಾದಿಯನ್ನು. ಆದರೆ ಇದರಲ್ಲಿ ಗಾಂದಿಯವರ ತಪ್ಪೇನು ಇರಲಿಲ್ಲ. ಅಸ್ಪೃಶ್ಯತೆಯ ವಿರುದ್ದ ಅವರ ಹೋರಾಟವನ್ನು ನಾವ್ಯಾರೂ ಸಂದೇಹಿಸುವ ಆಗಿಲ್ಲ. ಆದರೆ ಅದಕ್ಕೆ ಅವರು ಆಯ್ದುಕೊಂಡ ಮಾರ್ಗ ಮಾತ್ರ ತೀರಾ ಸೌಮ್ಯವಾದದ್ದು. ಯಾಕೆಂದರೆ ನೂರಾರು ವರ್ಷಗಳಿಂದಲೂ ಹಲವಾರು ಧಾಮರ್ಿಕ ಸುಧಾರಕರು, ಸಮಾಜ ಸುಧಾರಕರು ಅಸ್ಪೃಶ್ಯತೆಯ ವಿರುದ್ದ ಹೋರಾಡಿದರೂ ಹಿಂದೂ ಧರ್ಮ ತನ್ನ ಮೂಲ ಸ್ವರೂಪದಲ್ಲಿ ಅಥವಾ ತನ್ನ ಮೂಲಭೂತ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಕೊಳ್ಳಲಿಲ್ಲ. ಬದಲಿಗೆ ಅದು ಅಸ್ಪೃಶ್ಯರನ್ನು ಅವಮಾನಿಸುವ ಹಿಂಸಿಸುವ ಇನ್ನಷ್ಟು ಹೊಸ ವಿದಾನಗಳನ್ನು ಕಂಡುಕೊಳ್ಳತೊಡಗಿತು.ಜೊತೆಗೆ ಸ್ವಾತಂತ್ರಾನಂತರದಲ್ಲಿ ಅದು ಆಳುವ ವರ್ಗದ ಜೊತೆ ಸೇರಿಅಸ್ಪೃಶ್ಯರನ್ನು ಇನ್ನಷ್ಟು ಶೋಷಣೆ ಮಾಡತೊಡಗಿತು

    ಗಾಂದಿಯವರು ಮಾತಾಡಿದ ಹಿಂದೂಧರ್ಮದ ಒಳಗಿನ ಆಂತರೀಕ ಸುಧಾರಣೆಯ ಕಾರ್ಯಕ್ರಮಗಳ ಭಾಗವಾಗಿಯೇ ದೇವಾಲಯಗಳಿಗೆ ದಲಿತರ ಪ್ರವೇಶ ಮಾಡಿಸುವಂತ ಕಾರ್ಯಕ್ರಮಗಳನ್ನು ಅವರು ಹಾಕಿಕೊಂಡರು. ಸವಣರ್ೀಯ ಸಮಾಜದ ಮನ:ಪರಿವರ್ತನೆಗೆ ಒತ್ತು ನೀಡಿದ ಗಾಂದಿಯವರು ಅಸ್ಪೃಶ್ಯರನ್ನು ಹಿಂದೂ ಧರ್ಮದ ಅವಿಬಾಜ್ಯ ಅಂಗವೆಂದು ಸವಣರ್ೀಯರು ಒಪ್ಪಿಕೊಳ್ಳಬೇಕೆಂದು ಬಯಸುತ್ತಿದ್ದರು. ಈ ಕಾರಣದಿಂದಾಗಿಯೇ ಸವಣರ್ೀಯರು ಗಾಂದಿಯನ್ನು ದ್ವೇಷಿಸತೊಡಗಿದರು. ಇದರ ಮುಂದುವರೆದ ಭಾಗವಾಗಿಯೇ ಕಾಂಗ್ರೇಸ್ ಸಹ ಅಸ್ಪೃಶ್ಯತೆಯನ್ನು ಸುಧಾರಣೆಯ ಕ್ರಮಗಳಿಂದ ತೊಲಗಿಸಬಹುದೆಂದು ನಂಬಿ ಕೆಲಸ ಮಾಡಿತು. ಈ ಹಿನ್ನೆಲೆಯಲ್ಲಿಯೇ ನೋಡುವುದಾದರೆ ಕಾಂಗ್ರೇಸ್ಸಿನಲ್ಲಿ ಆಗಿ ಹೋದ ಮತ್ತು ಈಗಿರುವ ಬಹುತೇಕ ದಲಿತ ನಾಯಕರುಗಳು ಸವಣರ್ೀಯರ ಜೊತೆ ರಾಜಿ ಮಾಡಿಕೊಂಡೇ ರಾಜಕಾರಣ ಮಾಡಿದವರು. ಕೇಂದ್ರ ಸರಕಾರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಕಾಂಗ್ರೇಸ್ಸಿನ ಬಹುತೇಕ ದಲಿತ ನಾಯಕರುತಮಗೆ ದೊರೆತ ಸ್ಥಾನಮಾನಗಳು ಸವಣರ್ೀಯರ ಉದಾರತೆಯಿಂದ ದಕ್ಕಿದ್ದೆಂಬ ಮನೋಬಾವದಿಂದಲೇ ಸೌಮ್ಯವಾಗಿ ಬದುಕಿ ಹೋದವರು.ಇದಕ್ಕೊಂದು ಸದ್ಯದ ಸ್ಪಷ್ಟವಾದ ಉದಾಹರಣೆಯೆಂದರೆ ಕೇಂದ್ರದಲ್ಲಿ ಕಾಂಗ್ರಸ್ಸಿನ ಸಂಸದೀಯ ನಾಯಕರಾಗಿರುವ ಶ್ರೀ ಮಲ್ಲಿಕಾಜರ್ುನ ಖಗರ್ೆಯವರದು. ಕನರ್ಾಟಕದ ಮುಖ್ಯಮಂತ್ರಿಯಾಗಲು ಅವರಿಗಿಂತ ಅರ್ಹರಾದ ಇನ್ನೊಬ್ಬ ನಾಯಕ ದಲಿತರಲ್ಲಿ ಮಾತ್ರವಲ್ಲ ಸವಣರ್ೀಯರಲ್ಲೂ ಇರಲು ಸಾದ್ಯವಿಲ್ಲ. ಆದರೆ ಖಗರ್ೆಯವರು ಇನ್ನೇನು ಮುಖ್ಯಮಂತ್ರಿಯಾಗಿಬಿಡುತ್ತಾರೆನ್ನುವ ಸನ್ನಿವೇಶ ಎದುರಾದ ತಕ್ಷಣ ಸರ್ವಪಕ್ಷಗಳ ಮೇಲ್ಜಾತಿಗಳು ಪಯರ್ಾಯವೊಂದನ್ನು ತಂದು ನಿಲ್ಲಿಸಿ ಖಗರ್ೆಯವರನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡುತ್ತಿವೆ. ಖಗರ್ೆಯವರು ಕಾಂಗ್ರೇಸ್ಸಿನ ಗರಡಿಯಲ್ಲಿ ಬೆಳೆದವರಾಗಿದ್ದರಿಂದ ಇವತ್ತಿನವರೆಗು ಅವರು ಪಕ್ಷ ನಿಷ್ಠೆಯ ನೆಪದಲ್ಲಿ ಒಮ್ಮೆಯೂ ಕಾಂಗ್ರೇಸ್ ನಾಯಕತ್ವವನ್ನು ನಿಲ್ಲಿಸಿಕೊಂಡು ಮುಖ್ಯಮಂತ್ರಿಯಾಗುವ ತಮ್ಮ ಹಕ್ಕನ್ನು ಮಂಡಿಸಿದವರಲ್ಲ. ಅವರದೇನಿದ್ದರೂ ಸಹನೆಯಿಂದ ಕಾದು ನೋಡುವ ನೀತಿ. ಅವರಿಗೇ ಗೊತ್ತಿರದಂತೆ ಮೇಲ್ಜಾತಿಯವರ ಔದಾರ್ಯವನ್ನು ನಂಬಿ ಕೊಂಡಂತೆ ಬಾಸವಾಗುತ್ತಿದೆ.

    ನಾನು ಮೊದಲಿಗೇ ಹೇಳಿದಂತೆ ಕಾಂಗ್ರೇಸ್ ಈ ರೀತಿಯ ಸೌಮ್ಯವಾದ ದಲಿತ ನಾಯಕತ್ವವನ್ನು ರೂಪಿಸಿ, ಹೋರಾಡುವ ಅವರುಗಳ ಕೆಚ್ಚನ್ನೇ ಇಲ್ಲವಾಗಿಸುತ್ತ ಹೋದರೆ, ಅಂಬೇಡ್ಕರ್ ವಾದ ತಮ್ಮ ಹಕ್ಕನ್ನು ತೊಡೆ ತಟ್ಟಿ ಕೇಳುವಂತಹ ದಿಟ್ಟ ನಾಯಕತ್ವವನ್ನು ರೂಪಿಸುವಂತಹುದು. ಅಂಬೇಡ್ಕರ್ ಅವರ ಪ್ರಕಾರ ಹಿಂದೂ ಧರ್ಮದೊಳಗಿದ್ದುಕೊಂಡೇ ದಲಿತರ ಸಮಸ್ಯಗೆ ಪರಿಹಾರ ಹುಡುಕುವುದು ಸಾದ್ಯವಿಲ್ಲವೆನ್ನುವುದಾಗಿದೆ, ಪಶ್ಚಿಮದ ಚಿಂತನಾ ಕ್ರಮ ದಲಿತರ ಅವಮಾನಗಳಿಗೆ ಅಂತ್ಯ ಹಾಡಬಹುದೆಂದು ಬಾವಿಸಿದ ಅಂಬೇಡ್ಕರ್, ಹಿಂದೂ ಧರ್ಮದ ಆಚರಣೆಗಳಲ್ಲಿ ಅಸ್ಪೃಶ್ಯರು ಬಾಗವಹಿಸುವುದನ್ನು ನಿಲಿಸಬೇಕು ಎಂದು ಪ್ರತಿಪಾದಿಸಿದರು. ಇದು ಸಂಪೂರ್ಣ ನಿರಾಕರಣೆಯ ಮಾರ್ಗ. ಬಹುಶ: ಅಂಬೇಡ್ಕರ್ ನಂಬಿಕೊಂಡಿದ್ದ ಈ ನಿರಾಕರಣೆಯ ಮಾರ್ಗವೇ ಅವರನ್ನು ಅವರ ಕೊನೆಗಾಲದಲ್ಲಿ ಬೌದ್ದ ಧರ್ಮಕ್ಕೆ ಕರೆದೊಯ್ಯಿತೆನಿಸುತ್ತೆ.

    ಈಗ ಇಪ್ಪತ್ತೊಂದನೇ ಶತಮಾನದಲ್ಲಿಯೂ ಅಸ್ಪೃಶ್ಯತೆಯ ಆಚರಣೆ ಇನ್ನೂ ನಿಂತಿಲ್ಲವೆಂದರೆ ಅರ್ಥ, ನಮ್ಮ ಹೋರಾಟದ ಕ್ರಮಗಳಲ್ಲಿಯೇ ಏನೊ ವ್ಯತ್ಯಾಸವಿದೆಯೆಂಬುದನ್ನು ಸೂಚಿಸುತ್ತದೆ. ಅಂಬೇಡ್ಕರ್ ವಾದವನ್ನು ಆಳವಾಗಿ ಅಧ್ಯಯನ ಮಾಡಿ ಅದರಂತೆ ಹೋರಾಟವನ್ನು ರೂಪಿಸಿಕೊಂಡು ಹೋರಾಡುವುದೊಂದೇ ಅಸ್ಪೃಶ್ಯ ಸಮಾಜಕ್ಕೆ ಉಳಿದಿರುವ ಮಾರ್ಗ. ಈ ದಿಸೆಯಲ್ಲಿ ಸನ್ನದ್ದರಾಗಬೇಕಿರುವ ಅಂಬೇಡ್ಕರ್ ವಾದಿಗಳು, ಮಾಕ್ಸ್ವಾದಿಗಳ ಜೊತೆ ವಾದಕ್ಕೆ ಬಿದ್ದು ವೃಥಾ ಕಾಲಹರಣ ಮಾಡುವುದು ಸರಿಯಲ್ಲ. ಈಗ ನಾವು ಮಾಕ್ಸ್ ವಾದಿಗಳಿಗೆ ಅಂಬಡ್ಕರ್ವಾದದ ಗಟ್ಟಿತನವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿಲ್ಲ. ಬದಲಿಗೆ ನಮ್ಮ ಅಸ್ಪೃಶ್ಯ ವರ್ಗಕ್ಕೆ ಅಂಬಡ್ಕರ್ ವಾದವನ್ನು ಪರಿಣಾಕಾರಿಯಾಗಿ ಮುಟ್ಟಿಸಬೇಕಿದೆ.

    -ಕು.ಸ.ಮಧುಸೂದನರಂಗೇನಹಳ್ಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading