ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದಹಾಗೆ, ಆ ಕಾರ್ಯಕ್ರಮಕ್ಕೆ ಜೆಎನ್‌ಯು ಉಪಾಧ್ಯಕ್ಷೆ ಶೆಹ್ಲಾ ರಶೀದ್ ದೆಹಲಿಯಿಂದ ಬರುತ್ತಿದ್ದಾರೆ.

ಸದಾ ಲೋಕದ ಬದಲಾವಣೆಗೆ ತುಡಿಯುವ ಮನಸ್ಸುಗಳು ಈಗ ರೋಹಿತ್ ವೇಮುಲನನ್ನೂ ಕನ್ನಯ್ಯನನ್ನೂ, ಆ ಮೂಲಕ ಬದಲಾವಣೆಯ ಹೊಸ ಗಾಳಿಯನ್ನು ಕನ್ನಡಕ್ಕೆ ತಂದಿದ್ದಾರೆ. ಲಂಕೇಶರ ಹುಟ್ಟುಹಬ್ಬಕ್ಕೆ ಈ ಮನಸ್ಸುಗಳು ನೀಡುತ್ತಿರುವ ಸಾರ್ಥಕ ಕಾಣಿಕೆ ಇದು. ಲಂಕೇಶ್ ಪ್ರಕಾಶನದ ಮೂಲಕ ಗೌರಿ ಲಂಕೇಶ್ ಪ್ರಕಟಿಸುತ್ತಿರುವ ಈ ಕೃತಿಯನ್ನು ಹರ್ಷಕುಮಾರ್ ಕುಗ್ವೆ ಸಂಪಾದಿಸಿದ್ದಾರೆ.

harsha kugveಪತ್ರಕರ್ತರು ಎಲ್ಲಿಗೂ ಸೇರಬಾರದು ಎನ್ನುವ ಜೀವ ವಿರೋಧ ನಂಬಿಕೆ ಇರುವ ಈ ಕಾಲದಲ್ಲಿ ಪತ್ರಕರ್ತ ಸದಾ ಬದಲಾವಣೆಯ ಜೊತೆಗೆ ಇರಬೇಕು, ಬದಲಾವಣೆಯಲ್ಲಿ ಕೈ ಜೋಡಿಸಬೇಕು ಎಂದು ನಂಬಿರುವವರು ಹರ್ಷ.

ದೇಶ ಅಂದರೆ ಮನುಷ್ಯರು ಎನ್ನುವ ಈ ಕೃತಿ ರೋಹಿತ್ ವೇಮುಲ ಮತ್ತು ಜೆ ಎನ್ ಯು ಪ್ರಕರಣಗಳ ಹಿನ್ನೆಲೆಯಲ್ಲಿ ಹಲವಾರು ಲೇಖಕರು ಬರೆದ ಲೇಖನಗಳು ಮತ್ತು ಭಾಷಣಗಳ ಸಂಗ್ರಹ.

ಇದರೊಳಗೆ ಎಲ್ಲರೂ ಎದುರು ನೋಡುವ  ರೋಹಿತ್ ವೇಮುಲ,  ಕನ್ಹಯ್ಯಕುಮಾರ್, ಪಿ.ಸಾಯಿನಾಥ್, ಸಿದ್ಧಾರ್ಥ ವರದರಾಜನ್, ಅಡ್ಮಿರಲ್ ರಾಮದಾಸ್, ಪ್ರೊ.ಅಪೂರ್ವಾನಂದ, ಸಿ.ಎಸ್.ದ್ವಾರಕನಾಥ್, ನಟರಾಜ ಹುಳಿಯಾರ್, ಪುರುಷೋತ್ತಮ ಬಿಳಿಮಲೆ, ಪೃಥ್ವಿಚಂದ್ರ ಶೋಭಿ, ಡಿ.ಉಮಾಪತಿ, ಉಮರ್ ಖಲೀದ್, ಶೆಹ್ಲಾ ರಶೀದ್, ಪ್ರದೀಪ್, ವಿಕಾಸ ಮೌರ್ಯ, ಹರ್ಷಕುಮಾರ್ ಕುಗ್ವೆ, ನವೀನ್ ಸೂರಿಂಜೆ, ಶ್ರೀಪಾದ್ ಭಟ್, ವರುಣ್ ನಾಯ್ಕರ್, ಲಾರೆನ್ಸ್ ಲಿಯಾಂಗ್ ಅವರ ಲೇಖನಗಳು ಹಾಗೂ ಕಾಡುವ ಕವಿತೆಗಳಿವೆ.

ಮಾರ್ಚ್ ೧೨ರಂದು ‘ಲಂಕೇಶ್ ೮೧’ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳ ಮುಖಪುಟಗಳು. ಅಂದಹಾಗೆ, ಆ ಕಾರ್ಯಕ್ರಮಕ್ಕೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲಾ ರಶೀದ್ ದೆಹಲಿಯಿಂದ ಬರುತ್ತಿದ್ದಾರೆ.

lankesh book4ಈ ಕೃತಿಗೆ ಗೌರಿ ಲಂಕೇಶ್ ಬರೆದ ಮಾತುಗಳು ಇಲ್ಲಿವೆ –

ಕಳೆದೆರಡು ತಿಂಗಳಿನಿಂದ ಇಡೀ ದೇಶದಲ್ಲಿ ಒಂದು ಬಗೆಯ ಸಂಚಲನವೇ ಮೂಡಿದೆ. ಆಂಧ್ರ ಪ್ರದೇಶದ ಗುಂಟೂರಿನಿಂದ ಬಂದು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಾಡುತ್ತಿದ್ದ ರೋಹಿತ್ ವೇಮುಲ ಎಂಬ ದಲಿತ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಬ್ಯಾನರನ್ನು ತನ್ನ ಕತ್ತಿಗೆ ಸುತ್ತಿಕೊಂಡು ಎದೆಬಿರಿಯುವಂತೆ ಪ್ರಾಣ ತೆಗೆದುಕೊಂಡು ಬಿಟ್ಟ.

ನರೇಂದ್ರ ಮೋದಿಯವರ ‘ಅಚ್ಚೇ ದಿನ್’ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ದೇಶದಲ್ಲಿ ಇತರೆಲ್ಲಾ ಕ್ಷೇತ್ರಗಳಲ್ಲಿನಂತೆ ಶಿಕ್ಷಣ ಕ್ಷೇತ್ರದಲ್ಲಿ, ಬೌದ್ಧಿಕ ವಲಯಗಳಲ್ಲಿಯೂ ಒಂದಿಲ್ಲೊಂದು ರೀತಿಯ ದಮನ- ದೌರ್ಜನ್ಯ ನಡೆದೇ ಇದೆ. ಇಂತಹ ಒಂದು ದಮನದ ಭಾಗವಾಗಿಯೇ ಕಳೆದೆರಡು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಆಘಾತಕಾರಿ ಘಟನೆಗಳು ನಡೆಯುತ್ತಿವೆ.

ಮೋದಿ ಮತ್ತು ಸಂಘಪರಿವಾರ ಯಾವ ಸಂವಿಧಾನದ ಸಹಾಯದಿಂದ ದೇಶದ ಚುಕ್ಕಾಣಿ ಹಿಡಿದಿದ್ದಾರೋ ಅದೇ ಸಂವಿಧಾನದ ಧ್ಯೇಯಾದರ್ಶಗಳಿಗೆ ಎಳ್ಳುನೀರು ಬಿಡುವ ಕೆಲಸ ಮಾಡುತ್ತಿದ್ದಾರೆ. ಅಪಾಯಕಾರಿ ಬೆಳವಣಿಗೆ ಎಂದರೆ ಈ ದೇಶದ ಯುವಸಮೂಹ ಕಳೆದ ಚುನಾವಣೆಗೂ ಮುಂಚಿನಿಂದಲೇ ಒಂದು ಬಗೆಯ ಸಮೂಹ ಸನ್ನಿಗೆ ಒಳಗಾಗಿದೆ. ಮೋದಿ ಅಧಿಕಾರಕ್ಕೇರುವ ಮೊದಲು ಹರಿಬಿಟ್ಟ ಸುಳ್ಳು ಭರವಸೆಗಳ ಪರಿಣಾಮವಾಗಿ ಮತ್ತು ಸಂಘಪರಿವಾರದ ದಶಕಗಳ ಪರಿಶ್ರಮದ ಫಲವಾಗಿ ಯುವಜನರು ಧರ್ಮ ರಕ್ಷಣೆ, ದೇಶಭಕ್ತಿ ಇತ್ಯಾದಿಗಳ ಭ್ರಮೆಗಳಲ್ಲಿ ವಾಸ್ತವಗಳನ್ನು ಮರೆಯುತ್ತಿದ್ದಾರೆ.

ವೈಚಾರಿಕ ಅಸಹಿಷ್ಣುತೆಯ ಪರಿಣಾಮವಾಗಿ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಕನ್ನಡದ ಮೇಧಾವಿ ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಗಳಾದವು. ಈ ಹಿಂದೆ ಡಾ.ಯು.ಆರ್. ಅನಂತಮೂರ್ತಿಯವರು ನಿಧನರಾದಾಗ ಸಿಹಿ ಹಂಚಿ ಸಂಭ್ರಮಿಸಿದ್ದ ಮನಸ್ಸುಗಳು ಕಲಬುರ್ಗಿ ಸತ್ತಾಗಲೂ ಕೇಕೆ ಹಾಕಿದವು.

ಅತ್ತ ದೇಶದ ಯೂನಿವರ್ಸಿಟಿಗಳಲ್ಲಿ ಭಿನ್ನಮತವನ್ನು, ಎಡಪಂಥೀಯ ಚಿಂತನೆಗಳನ್ನು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳನ್ನು ವ್ಯವಸ್ಥಿತವಾಗಿ ಬಗ್ಗುಬಡಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಎಬಿವಿಪಿಯಂತಹ ಸಂಘಪರಿವಾರದ ಅಂಗ ಸಂಘಟನೆಯಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಇದರ ಪರಿಣಾಮವಾಗಿಯೇ ರೋಹಿತ್ ವೇಮುಲನ ಸಾವು ಸಹ ಸಂಭವಿಸಿತು.

ಆದರೆ ಈ ಸಾವು ದೇಶದ ಕೋಟಿ ಕೋಟಿ ಸಜ್ಜನರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದ ಕಾರಣದಿಂದಾಗಿ ಇದರ ವಿರುದ್ಧ ನಿಧಾನಕ್ಕೆ ಶುರುವಾದ ಪ್ರತಿರೋಧದ ಅಲೆ ಇಂದು ರೂಪರೂಪಗಳನು ದಾಟಿಕೊಂಡು ವಿಶ್ವಚೇತನವಾಗಿದೆ.

gauri lankeshಇತ್ತೀಚೆಗೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ‘ದೇಶದ್ರೋಹಿ’ ಪಟ್ಟ ಕಟ್ಟಿ ಹಲವಾರು ದಶಕಗಳಿಂದ ಜೆ ಎನ್ ಯು  ಬೆಳೆಸಿಕೊಂಡು, ಕಾಪಿಟ್ಟುಕೊಂಡು ಬಂದಿರುವ ಅದ್ಭುತವಾದ ಜನಪ್ರತಿರೋಧ ಪರಂಪರೆಯನ್ನು ಸರ್ವನಾಶಗೈಯುವ ಪ್ರಯತ್ನ ನಡೆದಿದೆ. ಆದರೆ, ಎಚ್ಚೆತ್ತ ಪ್ರಜ್ಞೆ ಸುಮ್ಮನೇ ಕೂರುವುದಿಲ್ಲವಲ್ಲ. ಈ ಪ್ರತಿರೋಧದಿಂದ ಮೂಡಿಬಂದ ಕನ್ಹಯ್ಯ ಕುಮಾರ್ ಎಂಬ ಅದ್ಭುತ ಹೋರಾಟಗಾರ ಮತ್ತು ಉಮರ್, ರಮನಾಗ್, ಶೆಹ್ಲ ರಶೀದ್ ಮುಂತಾದ ನೂರಾರು ಯುವ ಮನಸ್ಸುಗಳು ಇಂದು ಈ ದೇಶಕ್ಕೆ ಹೊರ ಭರವಸೆಯನ್ನು ನೀಡುತ್ತಿವೆ.

‘ಮುಂದೊಂದು ದಿನ ಪುನರುಜ್ಜೀವಿಸುವೆ’ ಎಂದು ಹೇಳಿದ್ದ ರೋಹಿತ್ ವೇಮುಲ ನೋಡನೋಡುತ್ತಿದ್ದಂತೆ ದೇಶದ ಸಹಸ್ರ ಸಹಸ್ರ ವಿದ್ಯಾರ್ಥಿ ಯುವಜನರ ಹೃದಯಗಳಲ್ಲಿ ಪುನರುಜ್ಜೀವಿಸಿದ್ದಾನೆ. ‘ಆಜಾದೀ’ ಕೇಳುತ್ತಿದ್ದಾನೆ. ಜೈಭೀಮ್, ಲಾಲ್ ಸಲಾಂ ಘೋಷಣೆ ಹಾಕುತ್ತಿದ್ದಾನೆ.

ರೋಹಿತ್ ವೇಮುಲ ಮತ್ತು ಜೆಎನ್ಯು ಮೇಲಿನ ದಮನ ಮತ್ತು ಪ್ರತಿರೋಧಗಳ ಹಿನ್ನೆಲೆಯಲ್ಲಿ ನಾಡಿನ ಮತ್ತು ರಾಷ್ಟ್ರದ ಹಲವಾರು ಬರಹಗಾರರು, ಹೋರಾಟಗಾರರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಇಡೀ ವಿದ್ಯಮಾನದ ಕುರಿತು ಕನ್ನಡಿಗರಿಗೆ ಮಾಹಿತಿಪೂರ್ಣ ದೃಷ್ಟಿಕೋನಗಳನ್ನು ನೀಡುವ ದೃಷ್ಟಿಯಿಂದ ‘ದೇಶ ಅಂದರೆ ಮನುಷ್ಯರು’ ಪುಸ್ತಕವನ್ನು ಲಂಕೇಶ್ ಪ್ರಕಾಶನ ಹೊರತಂದಿದೆ. ಇದರ ಉದ್ದೇಶ ಈಡೇರಿದರೆ, ರೋಹಿತ್, ಕನ್ಹಯ್ಯ ಓದುಗರ ಹೃದಯದಲ್ಲಿಳಿದರೆ ಅದಕ್ಕಿಂತ ಸಾರ್ಥಕತೆಯಿಲ್ಲ.

-ಗೌರಿ ಲಂಕೇಶ್

‍ಲೇಖಕರು admin

7 March, 2016

3 Comments

  1. Anonymous

    ಅಭಿನಂದನೆಗಳು. ಶುಭವಾಗಲಿ

  2. ಸಾವಿತ್ರಿ.ವೆಂ.ಹಟ್ಟಿ

    ಅಭಿನಂದನೆಗಳು ಸರ್. ಉತ್ತಮ ಬೆಳವಣಿಗೆ…

  3. ಗುಡ್ಡ

    >> ದೇಶಭಕ್ತಿ ಇತ್ಯಾದಿಗಳ *ಭ್ರಮೆಗಳಲ್ಲಿ* ವಾಸ್ತವಗಳನ್ನು ಮರೆಯುತ್ತಿದ್ದಾರೆ.
    ದೇಶಭಕ್ತಿಯೂ ಒಂದು ಭ್ರಮೆಯೇ ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading