ಚಿತ್ರ ಕೃಪೆ : ಪಂಜು ಗಂಗೊಳ್ಳಿ
ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯಕ್ರಮಗಳಿಗೆ ಹಿರಿಯ ಕ್ಷಿಪಣಿ ತಂತ್ರಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ನೀಡಿರುವ ಕೊಡುಗೆಯನ್ನು ಬಣ್ಣಿಸಲು ಪದಗಳೇ ಸಾಲವು. ‘ಭಾರತದ ಕ್ಷಿಪಣಿ ಮನುಷ್ಯ’ ಎಂದೇ ಖ್ಯಾತರಾಗಿದ್ದ ಕಲಾಂ ತಮ್ಮ ಮಾನವೀಯ ಗುಣಗಳು ಮತ್ತು ಪರೋಪಕಾರಿ ಮನೋಭಾವದಿಂದ ದೇಶದ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದ್ದರು. ‘ಜನಸಾಮಾನ್ಯರ ರಾಷ್ಟ್ರಪತಿ’ ಎಂಬುದು ಅವರಿಗೆ ಸೂಕ್ತವಾದ ಅನ್ವರ್ಥನಾಮ. ಕಲಾಂ ಅವರಿಗೆ ಸಂಬಂಧಿಸಿದ ಕೆಲವು ಅಪರೂಪದ ಕ್ಷಣಗಳು ಮತ್ತು ಕಥೆಗಳು ಇಲ್ಲಿವೆ.
ಸುರಕ್ಷತೆಯ ಆವರಣ ಗೋಡೆಯೊಂದರ ಮೇಲೆ ಗಾಜಿನ ಚೂರುಗಳನ್ನು ಹುದುಗಿಸಿ ಇರಿಸುವ ಸಲಹೆಯನ್ನು ಒಮ್ಮೆ ಕಲಾಂ ವಿರೋಧಿಸಿದ್ದರು. ಕಾರಣವಿಷ್ಟೇ. ಗಾಜಿನ ಚೂರುಗಳು ಹಕ್ಕಿಗಳಿಗೆ ಅಪಾಯಕಾರಿ. ಅವುಗಳ ಪಾದಗಳಿಗೆ ಚುಚ್ಚಬಹುದು ಎಂಬುದು ಕಲಾಂ ವಾದವಾಗಿತ್ತು. ಇದು ನಡೆದಿದ್ದು ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿದ್ದಾಗ (ಡಿಆರ್ಡಿಒ). ಕಲಾಂ ಮತ್ತು ಅವರ ಸಂಗಡಿಗರು ಸಂಸ್ಥೆಯ ಆವರಣದ ಗೋಡೆಯನ್ನು ಸುರಕ್ಷಿತಗೊಳಿಸುವ ಆಯ್ಕೆಗಳನ್ನು ಚರ್ಚಿಸುತ್ತಿದ್ದರಂತೆ. ಆಗ ಕಲಾಂ ಹೀಗೆ ಹೇಳಿದ್ದರಂತೆ. ‘ನಾವು ಆವರಣ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನು ಹುದುಗಿಸಿಟ್ಟಲ್ಲಿ, ಹಕ್ಕಿಗಳು ಗೋಡೆಯ ಮೇಲೆ ಕುಳಿತುಕೊಳ್ಳಲಾರವು’.
ಒಮ್ಮೆ ಕೆಲವು ಚಿಕ್ಕ ಮಕ್ಕಳು ಮತ್ತು ಎಳೆಯರು ರಾಷ್ಟ್ರಪತಿ ಕಲಾಂರನ್ನು ಭೇಟಿಯಾಗಲೆಂದು ಬಂದರು. ಕಲಾಂ ಇದಕ್ಕೆ ತಕ್ಷಣ ಒಪ್ಪಿಗೆ ನೀಡಿದ್ದಲ್ಲದೆ, ತಮ್ಮ ಅಮೂಲ್ಯ ಸಮಯವನ್ನು ಮಕ್ಕಳಿಗೆ ಮೀಸಲಿಟ್ಟರು. ಜೊತೆಗೆ ಮಕ್ಕಳ ಆಲೋಚನೆಗಳು ಮತ್ತು ಕಲ್ಪನೆಗಳಿಗೆ ಕಿವಿ ನೀಡಿದರಂತೆ.
ರಾಷ್ಟ್ರಪತಿಯಾಗಿ ಕಲಾಂ, ಮತ್ತು ಅವರ ಕಚೇರಿ ಆಗಾಗ ಇಂತಹ ಭೇಟಿಗಳಿಗೆ ಅವಕಾಶ ಒದಗಿಸಿತ್ತು. ಜೊತೆಗೆ ಶಾಲೆಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡುವುದು ಕಲಾಂ ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಕಲಾಂ ಮುಂದಿನ ರಾಷ್ಟ್ರಪತಿಯೆಂದು ಘೋಷಣೆಯಾದ ತಕ್ಷಣ ಅವರು ಸಾಧಾರಣ ದರ್ಜೆಯ ಶಾಲೆಗೆ ತೆರಳಿ ಉಪನ್ಯಾಸ ನೀಡಿದ್ದರು. ಅವರಿಗೆ ಒದಗಿಸಿದ್ದ ಭದ್ರತೆ ಬಹಳ ಅತ್ಯಲ್ಪವಾಗಿತ್ತು. ಆಗ ವಿದ್ಯುತ್ ಕೈಕೊಟ್ಟಾಗ ಅದರಿಂದ ಧೃತಿಗೆಡದೇ ಅವರು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಉಪನ್ಯಾಸ ಮತ್ತು ಮಕ್ಕಳೊಂದಿಗೆ ಸಂವಾದವನ್ನು ಪೂರ್ಣಗೊಳಿಸಿದರಂತೆ.
ಆಗ ಅವರು ಸುಮಾರು 400 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯುತ್ ಕೈಕೊಟ್ಟು ಧ್ವನಿವರ್ಧಕ ಕೆಲಸ ಮಾಡದೇ ಇದ್ದಾಗ ಕಲಾಂ ಮಕ್ಕಳ ಮಧ್ಯೆ ತೆರಳಿ ಮಾತನಾಡಿದರು. ಕಲಾಂ ಮಾತುಗಳನ್ನು ಮಕ್ಕಳು ದೇಹವೇ ಕಿವಿಯಾಗಿಸಿ ಆಲಿಸಿದರು.
ಕಲಾಂ ತಮ್ಮ ಜೀವಮಾನದ ಉಳಿತಾಯ ಮತ್ತು ವೇತನವನ್ನು ತಾವೇ ಸ್ಥಾಪನೆ ಮಾಡಿದ್ದ ‘ಪುರ’ (ಪ್ರೊವೈಡಿಂಗ್ ಅರ್ಬನ್ ಅಮೆನೀಟಿಸ್ ಟು ರೂರಲ್ ಏರಿಯಾಸ್-ಪಿಯುಆರ್ಎ) ಎಂಬ ಟ್ರಸ್ಟ್ಗೆ ದಾನ ಮಾಡಿದ್ದಾರೆ.
ಕೇಂದ್ರ ಸರಕಾರವೇ ದೇಶದ ರಾಷ್ಟ್ರಪತಿಗಳು ಮತ್ತು ಎಲ್ಲ ಮಾಜಿ ರಾಷ್ಟ್ರಪತಿಯವರನ್ನು ನೋಡಿಕೊಳ್ಳುತ್ತದೆ. ತಾವು ರಾಷ್ಟ್ರಪತಿಯಾಗಿದ್ದಾಗಲೇ ಕಲಾಂ ಈ ಟ್ರಸ್ಟ್ಗೆ ಎಲ್ಲ ಸಂಪತ್ತನ್ನು ದಾನ ಮಾಡಿದ್ದಾರೆ. ಅಂದು ‘ಅಮುಲ್’ ಸಂಸ್ಥಾಪಕ ಡಾ.ವರ್ಗಿಸ್ ಕುರಿಯನ್ಗೆ ದೂರವಾಣಿ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರಂತೆ.
ರಾಷ್ಟ್ರಪತಿಯಾಗಿದ್ದಾಗ ಕಲಾಂ ಸ್ವತಃ ಧನ್ಯವಾದಗಳನ್ನು ಅರ್ಪಿಸಿ ಕಾರ್ಡ್ ಬರೆಯುತ್ತಿದ್ದರಂತೆ. ಒಮ್ಮೆ ನಮನ್ ನಾರಾಯಣ್ ಎಂಬವರು ಡಾ.ಕಲಾಂ ಅವರ ರೇಖಾಚಿತ್ರ ಬರೆದು ಕಳುಹಿಸಿದ್ದರಂತೆ. ಇದಕ್ಕೆ ಪ್ರತಿಯಾಗಿ ಕಲಾಂ ಧನ್ಯವಾದಗಳನ್ನು ತಿಳಿಸಿ ಕಾರ್ಡ್ ಕಳುಹಿಸಿದ್ದರಂತೆ. ಜೊತೆಗೆ, ಕೈಬರಹದ ಒಂದು ಸಣ್ಣ ಸಂದೇಶ ಹಾಗೂ ಸ್ವತಃ ಕಲಾಂ ಸಹಿ ಅದರಲ್ಲಿ ಇತ್ತಂತೆ.
ಕಲಾಂ ಅವರು ಡಿಆರ್ಡಿಒದಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾಗ, ಕಾಲೇಜಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿತ್ತು. ಸಮಾರಂಭದ ಮುನ್ನಾದಿನ ರಾತ್ರಿ ಸಂಘಟಕರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದರಂತೆ. ‘ನೈಜ ಶ್ರಮಜೀವಿ’ಗಳನ್ನು ನನಗೆ ಭೇಟಿಯಾಗಬೇಕಿತ್ತು ಎಂದು ಕಲಾಂ ಈ ಸಂದರ್ಭದಲ್ಲಿ ಉದ್ಗಾರ ತೆಗೆದರಂತೆ.
ಕಲಾಂ ಇತ್ತೀಚೆಗೆ ಐಐಎಂ-ಅಹಮದಾಬಾದ್ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮಕ್ಕೆ ಮೊದಲು 60 ಮಂದಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ಊಟದ ಕೊನೆಗೆ ವಿದ್ಯಾರ್ಥಿಗಳೊಂದಿಗೆ ಗುಂಪು ಫೋಟೊ ತೆಗೆಸಿಕೊಂಡರು. ತದನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಜೊತೆಗೂ ಫೋಟೊ ತೆಗೆಸಿಕೊಂಡರು. ಕಾರ್ಯಕ್ರಮ ಸಂಘಟಕರಿಗೆ ತರಾತುರಿ. ಕೊನೆಗೂ ಎಲ್ಲರೊಂದಿಗೆ ಫೋಟೊ ತೆಗೆಸಿಕೊಂಡ ನಂತರವೇ ಕಲಾಂ ಕಾರ್ಯಕ್ರಮ ಶುರುವಾದದ್ದು.
ಕಾರ್ಯಕ್ರಮವೊಂದರಲ್ಲಿ ಇರಿಸಲಾಗಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕಲಾಂ ನಿರಾಕರಿಸಿದರು. ಕಾರಣವೇನು ಗೊತ್ತೆ? ಆ ಕುರ್ಚಿ ಉಳಿದ ಕುರ್ಚಿಗಳಿಗಿಂತ ದೊಡ್ಡದಾಗಿತ್ತು. ಇದು ನಡೆದಿದ್ದು ಐಐಟಿ-ವಾರಾಣಸಿಯ ಘಟಿಕೋತ್ಸವ ಸಮಾರಂಭದಲ್ಲಿ. ವೇದಿಕೆಯಲ್ಲಿ ಐದು ಕುರ್ಚಿಗಳಿದ್ದವು. ಒಂದು ದೊಡ್ಡ ಕುರ್ಚಿ ಕಲಾಂಗೆ. ಉಳಿದ ನಾಲ್ಕು ಕುರ್ಚಿಗಳು ವಿವಿಯ ಹಿರಿಯ ಅಧಿಕಾರಿಗಳಿಗೆಂದು ಮೀಸಲಿಡಲಾಗಿತ್ತು. ಕೊನೆಗೆ ಬೇರೆ ಕುರ್ಚಿ ತರಿಸಿ ಕಲಾಂರನ್ನು ಕೂರಿಸಲಾಯಿತು.
(ಸೌಜನ್ಯ : ವಾರ್ತಾಭಾರತಿ)






No words can explain the prestige brought to the position of President of India by Prof. APJ Abdul Kalam. He has become a role model of simple living and high thinking. Our ANTIMA NAMANA to a rare personality.
‘ನಾವು ಆವರಣ ಗೋಡೆಗಳ ಮೇಲೆ ಗಾಜಿನ ಚೂರುಗಳನ್ನು ಹುದುಗಿಸಿಟ್ಟಲ್ಲಿ, ಹಕ್ಕಿಗಳು ಗೋಡೆಯ ಮೇಲೆ ಕುಳಿತುಕೊಳ್ಳಲಾರವು’.- ಶ್ರೀ ಅಬ್ದುಲ್ ಕಲಾಂ ಅವರ ವ್ಯಕ್ತಿತ್ವದ ತಿರುಳನ್ನೇ ಈ ನುಡಿಗಳು ತಿಳಿಸುತ್ತಿವೆ . ನಾವು ಮಾಡುವ ಕೆಲಸ ಇತರರ ಬಾಳಿನ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕೆಲವು ಕ್ಷಣಗಳ ಕಾಲ ಯೋಚನೆ ಮಾಡಿ , ಅನಂತರ ಕಯ್ಗೊಳ್ಳಬೇಕೆಂಬ ಈ ನಿಲುವು ತುಂಬ ದೊಡ್ಡದು .
ಗೆಳೆಯರೆ, ಅಬ್ದುಲ್ ಕಲಮ್ ಅವರೊಬ್ಬ ಮಹಾತ್ಮರಾಗಿದ್ದರು. ಭಾರತದ ನಿಜ ಆತ್ಮಸಂವೇದನೆ ಅವರು. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ…ಮತ್ತೆ ಬಾ ಮಹಾತ್ಮಾ, ಮತ್ತೆ ಬಾ…..
mareyaada yuvakara spoorti
ಕಲಾಂ ಅವರಿಗೆ ಅಂತಿಮ ಸಲಾಮ್,
ಮತ್ತೆ ಹುಟ್ಟಿ ಬರುವುದಾದರೆ ಸ್ವಾಗತ.
ಆದರೆ ಬದಲಾದ ಸನ್ನಿವೇಶದಲ್ಲಿ ಅಂಥ ವ್ಯಕ್ತಿಗಳು ಹುಟ್ಟಿ ಬಂದರೂ ಗೌಣವಾಗಿಬಿಡುತ್ತಾರೆ.ಕಾರಣ ಮಿತಿಮೀರಿದ ಅವಕಾಶವಾದಿತನ ಮತ್ತು ಮೌಲ್ಯ ರಹಿತ ಸಮಾಜ.
ಎಲ್ಲ ಅರ್ಥದಲ್ಲೂ ದೊಡ್ಡ ಮನುಷ್ಯನ ಪಾದಗಳಿಗೆ ನಮಸ್ಕಾರ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನರಾದುದಕ್ಕೆ ನಮ್ಮ ಸಂತಾಪವಿದೆ.
ಅವರು ಜಾಗತೀಕರಣದ ಆರ್ಥಿಕತೆಯ ಭಾರತವನ್ನು ನಮ್ಮ ಯುವಜನರ ಆದರ್ಶ ಭಾರತವನ್ನಾಗಿಸಲು, ಈಗ ರೈತರನ್ನು ಕೊಲ್ಲುತ್ತಿರುವ ಅದೇ ಆರ್ಥಿಕತೆಯ ಜನವಿರೋಧಿ ‘ಅಭಿವೃದ್ಧಿ’ ಯ ಕನಸಿಗೆ ಎಳೆಯ ಮನಸ್ಸುಗಳನ್ನು ಒಗ್ಗಿಸುವ ಕೆಲಸದಲ್ಲಿ ಉಧ್ಯುಕ್ತರಾಗಿದ್ದರು ಎಂಬುದನ್ನು ಅವರ ನಿಧನಕ್ಕೆ ಸಂತಾಪ ಸೂಚಿಸುವ ಭರದಲ್ಲಿ ಮರೆಯಬಾರದು
“ಸಮಯದ ಮರಳಿನ ಮೇಲೆ ನಿಮ್ಮ ಹೆಜ್ಜೆ ಉಳಿಯಬೇಕೆಂದರೆ ಹೆಜ್ಜೆಗಳನ್ನು ಎಳೆದುಕೊಂಡುಹೋಗಬೇಡಿ …” ಅಬ್ದುಲ್ ಕಲಾಂ
ಎಂತ ಮುತ್ತಿನಂಥ ಮಾತು …! ಮಾಡುವ ಕೆಲಸದಲ್ಲಿ ದೃಢ ಹೆಜ್ಜೆ , , ದೃಢ ನಿರ್ಧಾರ, ದೃಢ ಸಂಕಲ್ಪದ ,
ಗಟ್ಟಿತನ ಕೊಟ್ಟರೆ ಯಶಸ್ಸು ಹಿಂಬಾಲಿಸುವುದರಲ್ಲಿ ಸಂಶಯವಿಲ್ಲ .
ಅಗಲಿದ ದೇಶದ ಅಪ್ಪಟ ದೇಶಾಭಿಮಾನಿ , ಆದರ್ಶ ಮಾರ್ಗದರ್ಶಕ , ಚಿಂತಕ , ಹೃದಯವಂತ, ನಿಸ್ವಾರ್ಥಗುರುಗಳಿಗೆ ನೋವಿನ ವಿದಾಯ ಮತ್ತು ಹೃದಯದಾಳದ ಅಂತಿಮ ಪ್ರಣಾಮಗಳು .
ತು೦ಬಿದ ಕೊಡ ತುಳುಕಲಾರದು..