ಎಲ್ಲರೂ ಓದಬಹುದಾದ ‘ರೌದ್ರಾವರಣಂ‘

ಅಂಜಲಿ ದೇರಾಜೆ
ರೌದ್ರ ಎಂದರೆ ಕೋಪ, ಆವರಣ ಎಂದರೆ ತೆರೆದುಕೊಳ್ಳುವುದು. ಹೀಗೆ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ತಮ್ಮ ತಮ್ಮ ಕೋಪವನ್ನು ಹೊರಹಾಕುವುದರಲ್ಲೇ ಮುಂದಿನ ಕೃತ್ಯಗಳಿಗೆ ಸಾಕ್ಷಿಯಾಗುತ್ತವೆ. ಗ್ರಾಮ್ಯ ಸೊಗಡಿನ ಈ ಕಾದಂಬರಿ ಒಂದು ಹಳ್ಳಿಯಲ್ಲಿ ನಡೆಯುವ ರಾಜಕೀಯ, ಜಾತೀಯತೆ, ಒಳಸಂಚುಗಳನ್ನು ಬೇಟೆಗಾರನಾದ ಬಾಬಣ್ಣನ ಮೂಲಕ ಕಟ್ಟಿಕೊಡಲಾಗಿದೆ. ಈ ಕಾದಂಬರಿಯಲ್ಲಿ ಬರುವ ಚಂದ್ರ ಎಂಬ ನಾಯಿ ನಮ್ಮೆಲ್ಲರ ಮನಹೊಕ್ಕುತ್ತದೆ. ಅವರು ಇವರು ಎನ್ನದೆ ಎಲ್ಲರೂ ಓದಬಹುದಾದ ಚೊಕ್ಕ ಕಾದಂಬರಿ ಇದಾಗಿದ್ದು, ಅನಂತ ಅವರು ತಮ್ಮ ಚೊಚ್ಚಲ ಕಾದಂಬರಿಯಲ್ಲೇ ಓದುಗರಿಗೆ ಬೇಟೆಯ ರುಚಿ ತೋರಿಸಿಬಿಟ್ಟಿದ್ದಾರೆ.
ಲೇಖಕರು ಹನ್ನೆರಡು ಹದಿಮೂರು ವರ್ಷಗಳ ಹಿಂದೆ ತಮ್ಮೂರಿನಲ್ಲಿ ನಡೆದ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಮೂರು ವರ್ಷದಿಂದ ಕಾದಂಬರಿ ಬರೆಯಲು ಹವಣಿಸಿ, ಇದೀಗ ಅವ್ವ ಪುಸ್ತಕಾಲಯದ ಮೂಲಕ ಕಾದಂಬರಿ ಪ್ರಕಟಗೊಂಡು ಭರ್ಜರಿ ಯಶಸ್ಸಿನೊಂದಿಗೆ ಓದುಗರನ್ನು ಮುಟ್ಟುತ್ತಿದೆ. ಕಾದಂಬರಿಗೆ ಲೇಖಕರಾದ ಡಾ. ಹೆಚ್ ಎಸ್ ಸತ್ಯನಾರಾಯಣ ಸರ್ ಅವರ ಚೆಂದದ ಮುನ್ನುಡಿ ಇದ್ದು, ಹೆಸರಾಂತ ಕಥೆಗಾರರಾದ ಕೇಶವ ಮಳಗಿ ಹಾಗೂ ಜೋಗಿಯವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕುತೂಹಲ ಸಂಗತಿಗಳನ್ನು ಪರಿಚಯಿಸುತ್ತಾ, ನಿಗೂಢ ಪಾತ್ರಗಳ ಮೂಲಕ ಸರಳ ನಿರೂಪಣೆಯಲ್ಲಿ ಎಲ್ಲರಿಗೂ ಇಷ್ಟವಾಗುವ ಹಾಗೆ ಕಾದಂಬರಿ ಮೂಡಿ ಬಂದಿದೆ.
ಕಾದಂಬರಿಯು 160 ಪುಟಗಳಿದ್ದು, 150/- ರೂ ಮುಖಬೆಲೆ ಹೊಂದಿದೆ. ಪುಸ್ತಕದ ಮುದ್ರಣವೂ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಜಬಿವುಲ್ಲಾ ಎಂ ಅಸಾದ್ ಅವರು ಒಳಪುಟ ಚಿತ್ರಗಳನ್ನು ಬರೆದಿದ್ದಾರೆ ಮತ್ತು ಮಮತಾ ಸರೂರು ಅವರು ಮುಖಪುಟ ಚಿತ್ರ ಮಾಡಿದ್ದಾರೆ. ಓದುಗರಿಗೆ ಭಾರವಾಗದ ಹಾಗೆ ಅವ್ವ ಪುಸ್ತಕಾಲಯದಿಂದ ನೇರವಾಗಿ ಪುಸ್ತಕದ ಪ್ರತಿಗಳನ್ನು ಅಂಚೆ ವೆಚ್ಚ ಪಡೆಯದೆ ಕೇವಲ 130/- ರೂಗಳಿಗೆ ಓದುಗರ ಮನೆ ಬಾಗಿಲಿಗೆ ಕಳಿಸಿಕೊಡಲಾಗುತ್ತಿದೆ. ಬಿಡುಗಡೆಗೂ ಮುನ್ನ, ಮುದ್ರಣಗೊಂಡ ಒಂದು ವಾರದಲ್ಲೆಯೇ ಸುಮಾರು 250 ಪ್ರತಿಗಳು ಓದುಗರನ್ನು ತಲುಪಿದ್ದು ಓದುಗರಿಂದ ಅಪಾರ ಮುಚ್ಚುಗೆ ಹರಿದುಬರುತ್ತಿವೆ. ಈ ರೀತಿಯ ಸೃಜನಶೀಲ ಕೃತಿಯೊಂದಕ್ಕೆ ಬಿರುಸಿನ ವೇಗ ಒದಗಿಬಂದಿರುವುದು ಒಬ್ಬ ಯುವಬರಹಗಾರನ ಶಕ್ತಿ ಏನೆಂಬುದನ್ನು ತೋರಿಸುತ್ತದೆ ಮತ್ತು ಇದು ಸಾಧ್ಯವಾದದ್ದು ಓದುಗರ ಸಹಕಾರದಿಂದ ಎಂದು ಲೇಖಕರು ಕೃತಜ್ಞತೆ ಸಲ್ಲಿಸುತ್ತಾರೆ.

ಅನಂತ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನವರಾಗಿದ್ದು, ಪದವಿಯ ನಂತರ ಚಿತ್ರದುರ್ಗದ ಸಾಣೇಹಳ್ಳಿಯಲ್ಲಿ ರಂಗಶಿಕ್ಷಣ ಪಡೆದು ರಾಜ್ಯಾದ್ಯಂತ ಶಿವಸಂಚಾರ ರೆಪರೇಟರಿಯ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿದ್ದುಕೊಂಡು ಚನಲಚಿತ್ರಗಳ ನಿರ್ದೇಶನ ತಂಡಗಳಲ್ಲಿ ಕೆಲಸಮಾಡುತ್ತಿದ್ದಾರೆ. ಈ ಮೊದಲೇ ಋಣಭಾರ ಎಂಬ ಕಥಾಸಂಕಲನ ಹಾಗೂ ಮೂರನೆಯವಳು ಎಂಬ ಕವನ ಸಂಕಲನವನ್ನು ಪ್ರಕಟಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ತಂದೆಯ ಸ್ಮರಣಾರ್ಥವಾಗಿ ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ.
ರೌದ್ರಾವರಣಂ ಕೃತಿ ಓದಿದ ಬಹಳಷ್ಟು ಜನ ಇದು ‘ಶಾಲಾಕಾಲೇಜು ಮಕ್ಕಳು ಓದಬಹುದಾದ ಪುಸ್ತಕ. ಅವರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವಲ್ಲಿ ರೌದ್ರಾವರಣಂ ಕೃತಿ ಖಂಡಿತ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ, ಶಾಲಾಕಾಲೇಜು ಮಕ್ಕಳಿಗೆ ಪುಸ್ತಕಗಳನ್ನು ನೀಡಲು ಮುಂದಾಗುವ ಪ್ರಾಯೋಜಕರು ನನ್ನನ್ನು ಸಂಪರ್ಕಿಸಿದರೆ 50% ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳನ್ನು ಕಳಿಸಿಕೊಡುತ್ತೇನೆ. ಎಂದು ಅನಂತ ಅವರು ವಿಶೇಷ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಅವರ ಇಂತಹ ಕ್ರಿಯಾಶೀಲ ಚಟುವಟಿಗಳಿಗೆ ನಾವೆಲ್ಲರೂ ಮನತುಂಬಿ ಹಾರೈಸೋಣ.
ಅನಂತ ಅವರ ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ.
ಅವ್ವ ಪುಸ್ತಕಾಲಯ : 8548948660






ಉತ್ತಮ ಪರಿಚಯ