ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಕೋಲೆಯ ಆ ಸಾಗವಾನಿ ಮರ

ಒಂದು ಸಾಗವಾನಿ ಮರವೂ ಮತ್ತು ಸಾವಿರದ ಒಂದು ನೆನಪೂ

raajeev narayana nayak

ರಾಜೀವ ನಾರಾಯಣ ನಾಯಕ 

ಉದ್ಯೋಗಕ್ಕೋ ಅಥವಾ ಇನ್ನಿತರ ಕಾರಣಕ್ಕೋ ಪರ ಊರುಗಳಲ್ಲಿದ್ದು ಅಪರೂಪಕ್ಕೆ ಸ್ವಂತ ಊರಿಗೆ ಬಂದಿಳಿದಾಗ   ಬಸ್ ಸ್ಟ್ಯಾಂಡಿನಲ್ಲಿ ಪರಿಚಿತರು ಆತ್ಮೀಯರೇನಾದರೂ ಕಾಣುವರೇ ಎಂದು ಕಣ್ಣಾಡಿಸುತ್ತೇವೆ. ಅಕಸ್ಮಾತಾಗಿ ಹಳೆಯ ಸ್ನೇಹಿತರೋ ಕ್ಲಾಸಮೇಟುಗಳೋ ಕಂಡರೆ ಖುಶಿಯಾಗುತ್ತದೆ. ಯಾರೂ ಕಾಣದಿದ್ದರೆ ನಮಗೆ ನಾವೇ ಅಪರಿಚಿತರಾದಂತೆ ಭಾಸವಾಗುತ್ತದೆ.

treeಆದರೆ ಕಲಿತ ಶಾಲೆ, ಕಾಲೇಜು, ಯಾವುದೋ ಸ್ಮಾರಕ, ಗೆಳೆಯರನ್ನು ಭೇಟಿಯಾಗುತ್ತಿದ್ದ ಹಳೆಯ ಚೌಕ ಅಥವಾ ಸುಮ್ಮನೇ ನೆರಳಿಗೆ ನಿಲ್ಲುತ್ತಿದ್ದ ಮರ- ಇವೆಲ್ಲ ಇಂಥ ಅಪರಿಚಿತತೆಯನ್ನು ತುಸು ಕಡಿಮೆ ಮಾಡುತ್ತವೆ; ಆ ಪ್ರದೇಶದೊಡನೆಯ ಅಮೂರ್ತ ಅನುಬಂಧವನ್ನು ಉದ್ದೀಪಿಸುತ್ತವೆ. ಇಂಥ ಒಂದು ಸಂಬಂಧಕ್ಕೆ ಸಾಕ್ಷಿಯಾಗಿರುವ ಸಾಗವಾನಿ ಮರವೊಂದು ಅಂಕೋಲೆಯ ಬಸ್ ನಿಲ್ದಾಣದ ನಡುವೆ ನನ್ನಂಥ ಅನೇಕರ ಮಧುರ ನೆನಪುಗಳಿಗೆ ಉಸಿರು ನೀಡುತ್ತಾ ನಿಂತಿದೆ.

ಬಸ್ ನಿಲ್ದಾಣದ ಅಂಚಿನಲ್ಲಿ ಮರಗಳಿರುವುದು ಸಾಮಾನ್ಯ. ಆದರೆ ನಿಲ್ದಾಣದ ನಡುವೆಯೇ ಹೀಗೊಂದು ಮರ ನಿಂತಿರುವುದು ಅಂಕೋಲೆಯ ವಿಶೇಷ. ಎಲ್ಲಿಂದಲೋ ಬಂದವರು ಒಂದು ಕ್ಷಣ  ಮರದ ನೆರಳಿಗೆ ನಿಂತರೆ ಸಾಕು ಹಳೆಯ ನೆನಪುಗಳ ಹಿತವಾದ ಮಂದಾನಿಲ ಸುಳಿದಾಡುತ್ತದೆ. ನಮ್ಮಶಾಲಾ ಕಾಲೇಜು ದಿನಗಳಿಂದಲೂ ಧ್ಯಾನದಲ್ಲಿರುವಂತೆ ನಿಂತಿರುವ ಈ ಸಾಗವಾನಿ ಮರಕ್ಕೆ ಮಾವಿನ ಮರದ ಕಂಪಿಲ್ಲ, ಹಕ್ಕಿಪಿಕ್ಕಿಗಳ ಚಿಲಿಪಿಲಿಯಿಲ್ಲ; ಪೇಪರಿನಂಥ ಎಲೆಗಳ ನಡುವೆ ಅರಳುವ ಬಿಳಿ ಹೂವು ಚಂದವಿದ್ದರೂ ಎಲೆಗಳ ದೊಡ್ದ ಆಕಾರದ ಮುಂದೆ ಅವು ಗಮನಕ್ಕೆ ಬರುವುದಿಲ್ಲ. ಆದರೂ ನಮ್ಮ ತಲೆಮಾರಿನ ಅನೇಕರ ನೆನಪುಗಳು ಈ ಸಾಗವಾನಿ ಮರದೊಂದಿಗೆ ಬೆಸೆದುಕೊಂಡಿವೆ.

ದಿನಕರ ದೇಸಾಯಿಯವರು ಕಟ್ಟಿದ, ಶಿಸ್ತಿನ ಪ್ರಿನ್ಸಿಪಾಲರಾಗಿದ್ದ ಕೆ.ಜಿ. ನಾಯಕರು ಬೆಳೆಸಿದ ಪ್ರಸಿದ್ಧ ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಕ್ಲಾಸು ಮುಗಿಸಿ ವಿದ್ಯಾರ್ಥಿಗಳೆಲ್ಲ ಅವರವರ ಹಳ್ಳಿಗಳಿಗೆ  ಹೋಗಲು ಬಸ್ಸಿಗಾಗಿ ಕಾದು ನಿಲ್ಲುತ್ತಿದ್ದದ್ದು ಈ ಮರದ ತಂಪಿನಲ್ಲಿ.  ಆ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಬಾರದ ಬಸ್ಸುಗಳು. ಸುಡುವ ಬಿಸಿಲು ಮತ್ತು ಹಸಿದ ಹೊಟ್ಟೆಯ ಖಾಲಿ ಕಿಸೆಯ ವಿದ್ಯಾರ್ಥಿಗಳು. ಕಣ್ಣ ನೋಟಗಳಲ್ಲೇ  ಹಸಿವು ಮರೆಯುತ್ತಿದ್ದ ಹದಿಹರೆಯದ ಮನಸುಗಳು. ಆಚೆ ಹಿಲ್ಲೂರು ಅಗಸೂರು ಬಂಕಿಕೊಡ್ಲ ಬಸ್ಸುಗಳು. ಈಚೆ ಹಿಚಕಡ ಬೇಲೇಕೇರಿ ಮಂಜುಗುಣಿ ಬಸ್ಸುಗಳ ಸಾಲು. ಎಲ್ಲಾ ಕಿಟಕಿ ಸೀಟುಗಳೂ ಕಡ್ಡಾಯವಾಗಿ ಹುಡುಗಿಯರಿಗೇ ಮೀಸಲು. ಆಗಿನ  ಗ್ರಾಮೀಣ ಸಾರಿಗೆ ಬಸ್ಸುಗಳು ಗುಜರಿಗೆ ಯೋಗ್ಯವಾಗಿದ್ದರೂ ಕಿಟಕಿಯಲ್ಲಿ ಪ್ರಕಟವಾಗುವ ಸುಂದರ ಮುಖಗಳಿಂದಾಗಿ  ಇಂದಿನ (ಇಂದ್ರನ) ಐರಾವತದಂತೆ ಕಾಣುತ್ತಿದ್ದವು.

ಅದು  ದಿನಕರ ದೇಸಾಯಿಯವರ ಚುಟುಕಗಳ ಪ್ರಭಾವದ ಕಾಲ. ದಿನಕರ ದೇಸಾಯಿ ಚುಟುಕು ಬ್ರಹ್ಮನಾದರೆ ಆಗಿನ ಕಾಲೇಜು ವಿದ್ಯಾರ್ಥಿಗಳೆಲ್ಲ ಚೋಟಾಬ್ರಹ್ಮಗಳು! ಕಾಲೇಜು ಕ್ಯಾಂಪಸ್ಸಿನಲ್ಲಿ, ಪಾವಟೆ ಪಾಯಿಂಟಿನಲ್ಲಿ ಗೋಪಿ ಕ್ಯಾಂಟೀನಿನಲ್ಲಿ ಚುಟುಕಗಳ ಸುಗ್ಗಿ.  ಮುಂದುವರಿದು ಈ ಸಾಗವಾನಿ ಮರದ ಕೆಳಗೂ ಕಾವ್ಯೋದಯ ಮತ್ತು ಪ್ರೇಮೋದಯವಾಗುವ ಕಾಲ. ಹುಡುಗಿಯರು  ನವಯುವಕರನ್ನು ಲೇವಡಿ ಮಾಡಲು ” ಹಿಪ್ಪೀ ಕಟ್ಟು ಬೆಲ್ ಬಾಟಮ್ ಪ್ಯಾಂಟು / ತಲೆಯಲ್ಲಿ ಮಾತ್ರ ಅಕ್ಕಿ ಹಿಟ್ಟು” ಎಂದು ಚುಟುಕ ಬರೆದರೆ ಹುಡುಗರು ನವಯುವತಿಯರ ಬಗ್ಗೆ ” ಮುಂದಿನ ಹಲ್ಲುಗಳು ಹೊಳೆಯುತಿವೆ ಫಳ ಫಳ / ಹಿಂದಿನ ಹಲ್ಲನು ಕೊರೆದಿದೆ ಹುಳ” ಎಂದು ಕುಟುಕುತ್ತಿದ್ದರು. ಬರೆದು ಹರಿದೂ ಎರಡುನೂರು ಪೇಜಿನ ದಪ್ಪ ನೋಟಬುಕ್ಕು ಮರುದಿನ ಕ್ಲಾಸಿಗೆ ಹೋಗುವಾಗ ನಾಲ್ವತ್ತು ಪೇಜಿಗಿಳಿದು ಸ್ಲಿಮ್ ಆಗುತ್ತಿತ್ತು. ಅದನ್ನೇ ದೀಪಿಕಾ ಪಡುಕೋಣೆಯ ಸೊಂಟ ಹಿಡಿದ ಗತ್ತಿನಲ್ಲಿ ತಿರುಗಾಡುವ ಹುಡುಗರು!

mara3

ವಿದ್ಯಾರ್ಥಿಗಳಷ್ಟೇ ಅಲ್ಲ, ಸಾಮಾನ್ಯ ಜನರೂ ಈ ಮರದ ಕೆಳಗೆ ತಮ್ಮ ಸುಖ ದು:ಖ ಹಂಚಿಕೊಳ್ಳುತ್ತಿದ್ದರು. ಬೆಳಸೆ ಚಂದೂಮಠದಿಂದ ಸೌದಿ ಹೊತ್ತು ತಂದು ಪೇಟೆಯಲ್ಲಿ ಮಾರಿದ ದುಡ್ಡಿಂದ ಮನೆಸಾಮಾನು, ಮೀನು ಖರೀದಿಸಿ ಬಸ್ಸಿಗೆ ಕಾಯುತ್ತಿರುವ ಹಾಲಕ್ಕಿ ಹೆಂಗಸರು; ಮೂರು ಪರ್ಸೆಂಟು ಡಿಎ ಹೆಚ್ಚಾಯ್ತಂತೆ, ಈ ಸತಿಗೆ ವರ್ಗಾವರ್ಗಿ ಇಲ್ಲಂತೆ ಎಂದು ಮಾತಾಡುವ ಮಾಸ್ತರು ಮತ್ತು ಅಕ್ಕೋರು. ಪೆನ್ಶನ್ನು ಪಡೆಯಲು ಬಂದ ಗಾಂಧಿ ಟೋಪಿಯ ಸ್ವಾತಂತ್ರ್ಯ ಹೋರಾಟಗಾರರು-ಎಲ್ಲರೂ ಆಧರಿಸಿಕೊಳ್ಳುವುದು ಈ ಮರದ ನೆರಳಿಗೇ ಆಗಿತ್ತು.

ಒಂದು ಕಾಲದಲ್ಲಿ ಅನೌಪಚಾರಿಕ ನೆಲೆಯಲ್ಲಿ ಗಂಡು ಹೆಣ್ಣುಗಳ ನೋಡುವ ಶಾಸ್ತ್ರವೂ ಈ ಮರದ ಕೆಳಗೆ ಜರುಗಿದ್ದು ಇದೆ. ಗಂಡು ಹೆಣ್ಣು ಮತ್ತು ಹಿರಿಯರಾದ  ಒಬ್ಬಿಬ್ಬರು ಪೇಟೆಗೆ ಬಂದವರ ರೀತಿಯಲ್ಲಿ ಭೇಟಿಯಾಗಿ ಪರಸ್ಪರ ನೋಡಿ ಒಪ್ಪಿಗೆಯಾದರೆ ಅಲ್ಲೇ ಎದುರಿಗಿದ್ದ ರಾಜಶ್ರೀ ಹೋಟೆಲ್ಲಿನಲ್ಲಿ ಮೈಸೂರು ಪಾಕು ತಿಂದು ನೆಂಟಸ್ತಿಕೆ “ನಿಕ್ಕಿ” ಮಾಡಿದ್ದೂ ಉಂಟು. ಆಡಂಬರದ ಈ ದಿನಗಳಲ್ಲಿ ಇದೆಲ್ಲವನ್ನೂ ಈಗ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಲೂ ಬಿಡಿಸಿಟ್ಟ ದೊಡ್ಡ ಕೊಡೆಯಂತೆ ಕಾಣುವ ಈ ಮರದಡಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ನೋಡುವುದೇ ಚಂದ!  ಆದರೆ ಎಲ್ಲರ ಕೈಗಳಲ್ಲಿಯ ಮೊಬೈಲು ಫೇಸ್ಬುಕ್ಕು ವ್ಹಾಟ್ಸಾಪುಗಳ ಭರಾಟೆಯಲ್ಲಿ ತನ್ನತ್ತ ನೋಡುವವರಿಲ್ಲ ಎಂಬ ಚಿಕ್ಕ ಕೊರಗೊಂದು ಮರಕ್ಕಿದೆ ಅನಿಸುತ್ತದೆ!

ಕನ್ನಡದ ಖ್ಯಾತ ಚಿಂತಕ ಮತ್ತು ಲೇಖಕರಾದ ಯು.ಆರ್.ಅನಂತಮೂರ್ತಿಯವರ ಬಗ್ಗೆ ಕಥೆಗಾರ ವಿವೇಕ ಶಾನುಭಾಗರು ತಮ್ಮ ಆಪ್ತ ನೆನಪುಗಳನ್ನು ಹಂಚಿಕೊಂಡ ಲೇಖನವೊಂದು ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.  ಅನಂತಮೂರ್ತಿಯವರು ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ಹೈಸ್ಕೂಲಿಗೆ ಯಾವುದೋ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಅಂಕೋಲೆಯ ಬಸ್ ಸ್ಟ್ಯಾಂಡಿಗೆ ಬಂದಿಳಿದಾಗ ಅವರನ್ನು ಸ್ವಾಗತಿಸಿದ ಖ್ಯಾತ ವಿಮರ್ಶಕ ಜಿ ಎಚ್ ನಾಯಕ, ಹೈಸ್ಕೂಲಿನ ಮುಖ್ಯಾಧ್ಯಾಪಕರು(ಶ್ರೀ ವಿ.ಜೆ. ನಾಯಕ) ಮತ್ತು ಆಗಷ್ಟೇ ಉದಯೋನ್ಮುಖ ಕಥೆಗಾರರಾಗಿ ರೂಪಗೊಳ್ಳುತ್ತಿದ್ದ ವಿವೇಕ ಶಾನಭಾಗ ಬಸ್ ಸ್ಟ್ಯಾಂಡಿನಲ್ಲೇ ಮರದ ಕೆಳಗೆ ತುಂಬಾ ಹೊತ್ತು ಮಾತಾಡುತ್ತ ನಿಂತಿದ್ದರಂತೆ. ಬಹುಶ: ಆ ಮಾತುಕತೆ ಇದೇ ಸಾಗವಾನಿ ಮರದ ನೆರಳಿಗೇ ನಡೆದಿರಬೇಕು ಎಂದು ಊಹಿಸಿ ರೋಮಾಂಚಿತನಾದೆ.

mara2ಇತ್ತೀಚೆಗೆ ಮುಂಬೈಯಿಂದ ಊರಿಗೆ ಹೋದಾಗ ಪರಿಚಿತರು ಯಾರೂ ಕಾಣದೇ ಯಥಾಪ್ರಕಾರ ಮರದ ಬಳಿ ಹೋಗಿ ನಿಂತೆ. ಹರವಾದ ಹಸಿರು ಎಲೆಗಳನ್ನು ಹೇರಿಕೊಂಡು ಬಿಸಿಲನ್ನು ಹೀರಿಕೊಳ್ಳುತ್ತಾ ತಂಪು ನೆರಳಿನ ಕಂಬಳಿ ಹಾಸಿತ್ತು. ” ಹಾಯ್, ಟೆಕ್ಟೋನಾ ಡಾರ್ಲಿಂಗ್” ಎಂದು ಮೈದಡವಿದೆ. (ಹೈಸ್ಕೂಲಿನಲ್ಲಿ  ಸೈನ್ಸ್ ಟೀಚರ್ರ ಬೆತ್ತದ ಪ್ರತಾಪದಿಂದಾಗಿ ತೇಗದ ಮರದ ಬೊಟಾನಿಕಲ್ ಹೆಸರು- ಟೆಕ್ಟೋನಾ ಗ್ರಾಂಡೀಸ್- ಇನ್ನೂ ನಾಲಿಗೆ ಮೇಲಿದೆ) ತನ್ನಷ್ಟಕ್ಕೆ ನಿಂತಿರುವಂತೆ ಕಾಣುವ ಮರವೂ ಗಮನಿಸತೊಡಗಿದಂತೆ ಚೇತನವೊಂದು ಸಜೀವಗೊಂಡು ನಮ್ಮ ಜೊತೆ ಪಿಸುನುಡಿಯಲು ಶುರುಮಾಡುತ್ತದೆ!

ಕಾಡಿನ ಮರಗಳು ಮರಗಳ್ಳರ ಭಯದಲ್ಲಿದ್ದರೆ ಈ ಸಾಗವಾನಿ ಮರ ನಗರದ ನಡುವೆಯೂ ನಿರ್ಭಯವಾಗಿರುವಂತೆ ಕಾಣುತ್ತದೆ. ಯಕ್ಷಗಾನ ನಡೆಯುತ್ತಿದ್ದ, ಕಬ್ಬಿನಗಾಣ ಬೀಳುತ್ತಿದ್ದ ಹೆಮ್ಮರಗಳು, ನಮ್ಮಬಾಲ್ಯದ ನೆನಪುಗಳಿಗೆ ಸಾಕ್ಷಿಯಾಗಿದ್ದ ಹಳ್ಳಿಗಳಲ್ಲಿಯ ಹಣ್ಮರಗಳು ಮಾಲಕಿ ಎಂಬ ರಾಕ್ಷಸಿಗೆ ಬಲಿಯಾಗಿ ದಶಕಗಳೇ ಸಂದಿವೆ. ನಮ್ಮ ಕಿಶೋರ ಬದುಕಿನ ಬಹುಪಾಲು ನೆನಪುಗಳನ್ನು ಹಸಿ ಮಾಡುತ್ತಿದ್ದ ಹೆದ್ದಾರಿ ಪಕ್ಕದ ಹೆಮ್ಮರಗಳೂ ಇತ್ತೀಚೆಗೆ ರಸ್ತೆ ಅಗಲೀಕರಣವೆಂಬ ಪ್ರಗತಿಯ ಗರಗಸಕ್ಕೆ ಸಿಲುಕಿ ಧರೆಗುರುಳಿವೆ.

ಕೊಡೆ ಒಯ್ಯದೇ ಶಾಲೆಗೆ ಹೋದದಿನ ಮಳೆ ಸುರಿದು ಮರದಡಿ ನಿಂತದ್ದು,  ಎರಡು ಜಡೆಯ ಆ ಹುಡುಗಿಯೂ ಓಡಿ ಬಂದು ಪಕ್ಕದಲ್ಲಿ ನಿಂತದ್ದು, ಅವಳ ಗಲ್ಲದಿಂದ ಇಳಿಯುವ ಮಳೆನೀರು ಮಿಂಚಿನಲ್ಲಿ ಮುತ್ತಾಗಿ ಹೊಳೆದದ್ದು- ಎಲ್ಲ ನೆನಪುಗಳಿಗೂ ಸಾಕ್ಷಿಯಾಗಿದ್ದ ಆ ಮರವನ್ನೂ ಕಡಿದು ತುಂಡು ಮಾಡಿ ಲಾರಿ ಮೇಲೆ ಹೇರಿಕೊಂಡು ಹೋಗಿದ್ದಾರೆ.  ”ನೀನಾದರೂ ಬಹುಕಾಲ ಬಾಳಿ ನಮ್ಮ ಹರಯದ ನೆನಪುಗಳನ್ನು ನಿನ್ನ ಚಿಗುರುಗಳಲ್ಲಿ ಪಲ್ಲವಿಸುತ್ತಿರು ಟೆಕ್ಟೋನಾ” ಎಂದು ”ತಡಿ ನಿನ್ನ ಜೊತೆ ಸೆಲ್ಫೀ ತಗೊಳ್ತೇನೆ” ಎಂದು ಒಂದೆರಡು ಕ್ಲಿಕ್ ಮಾಡಿದೆ.

ಫೋಟೋ ಕ್ಲಿಕ್ ಮಾಡುವಾಗ ಫ್ರೇಮಿನಲ್ಲಿ ಸಾತ್ವಿಕ ಆಕಾರವೊಂದು ಹಾದು ಹೋದಂತೆ ಅನಿಸಿತು. ಆ ವ್ಯಕ್ತಿ ಬೇರೆ ಯಾರೂ ಆಗಿರಲಿಲ್ಲ. ಗೋಖಲೆ ಕಾಲೇಜಿನಲ್ಲಿ ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಾಧ್ಯಾಪಿಕೆಯಾಗಿದ್ದ ಪ್ರೊ. ನಿರ್ಮಲಾ ಗಾಂವಕರ!  ಮಾತೃ ಹೃದಯದ, ಸಾವಿರಾರು ಬಡ ದಲಿತ ಮಕ್ಕಳಿಗಾಗಿ ಹಾಸ್ಟೆಲ್ ಕಟ್ಟಿ ಅವರೆಲ್ಲ ಸುಶಿಕ್ಷಿತರಾಗಲು ಆಸರೆಯಾದ ನಿರ್ಮಲಾ ಮ್ಯಾಡಮ್ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ,ದಾರಿಹೋಕರಿಗೆ ನೆರಳಾಗಿರುವ ಸಾಗವಾನಿ ಮರ- ಪ್ರೀತಿ ಜೀವಗಳೆರಡೂ ಒಂದೇ ಫ್ರೇಮಿನಲ್ಲಿದ್ದ ಸೆಲ್ಫೀ ಅರ್ಥಪೂರ್ಣವಾಗಿತ್ತು!

  

‍ಲೇಖಕರು Admin

8 February, 2016

9 Comments

  1. ಶಮ, ನಂದಿಬೆಟ್ಟ

    ಮಾತೃ ಹೃದಯದ, ಸಾವಿರಾರು ಬಡ ದಲಿತ ಮಕ್ಕಳಿಗಾಗಿ ಹಾಸ್ಟೆಲ್ ಕಟ್ಟಿ ಅವರೆಲ್ಲ ಸುಶಿಕ್ಷಿತರಾಗಲು ಆಸರೆಯಾದ ನಿರ್ಮಲಾ ಮ್ಯಾಡಮ್ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ,ದಾರಿಹೋಕರಿಗೆ ನೆರಳಾಗಿರುವ ಸಾಗವಾನಿ ಮರ- ಪ್ರೀತಿ ಜೀವಗಳೆರಡೂ ಒಂದೇ ಫ್ರೇಮಿನಲ್ಲಿದ್ದ ಸೆಲ್ಫೀ ಅರ್ಥಪೂರ್ಣವಾಗಿತ್ತು!

    ಎಂಥ ಭಾವ ಸೂಕ್ಷ್ಮತೆ .. ಸಲಾಂ

    • Anonymous

      ನಿಮಗೂ ಸಲಾಂ ಶಮ!..ರಾಜೀವ

  2. ಪದ್ಮಶ್ರೀ

    ಒಂದು ಮರದೊಟ್ಟಿಗೆ ಎಷ್ಟೊಂದು ನೆನಪುಗಳು …….

  3. Prof.Shiva Billava

    Nostalgia ,,,,,Very good -Rajiva Nayak

    • Anonymous

      ಧನ್ಯವಾದ್ ಸರ್

  4. Vignesh nayak basgod

    Naanu marada kelage nintha nenapu marukalisitu rajeevanna 🙂

    • Anonymous

      ಅಲ್ಲಿ ನಿಂತು ನೀನು ಏನೇನು ಮಾಡಿದೆ ಎನ್ನೋದನ್ನು ಮರ ನನ್ನ ಬಳಿ ಪಿಸುಗುಟ್ಟಿದೆ ವಿಘ್ನೇಶ್ 🙂

  5. ಮೀನಾಕ್ಷಿ ನಾಯಕ

    ಹಳೆಯ ನೆನಪುಗಳೆಲ್ಲ ಮರುಕಳಿಸಿದವು…..ಧನ್ಯವಾದ

  6. ಶುಭ

    ಧನ್ಯವಾದಗಳು.. ಸುಂದರ ಬರಹ ಹಾಗೂ ನೆನಪುಗಳ ಕನವರಿಕೆಗಾಗಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading