
ಸತೀಶ್ ಕುಲಕರ್ಣಿ
ಈಗನಿಸುತ್ತಿದೆ ರಂಗಭೂಮಿ ತಂತಾನೆ ರೂಪಾಂತರಗೊಳ್ಳುತ್ತಿದೆಂದು. ಅನೇಕ ಪ್ರಯೋಗ ಮಾರ್ಗಗಳನ್ನು ದಾಟಿ, ನೀರು ತಗ್ಗಿಗೆ ಜಾರುವಂತೆ, ಅನಿವಾರ್ಯವಾಗಿ ರಂಗಭೂಮಿ ಪ್ರೇಕ್ಷಕರನ್ನು ಹುಡುಕ ಹೊರಟಿದೆ. ಇದಕ್ಕೆಲ್ಲ ಕಳದೆರಡು ವರ್ಷಗಳ ಧಾವಂತವೇ ಕಾರಣ. ಒಂದಿಬ್ಬರು ತಂತ್ರಜ್ಞರು, ಮರ‍್ನಾಲ್ಕು ನಟನಟಿಯರು. ಸರಳ ರಂಗಸಜ್ಜಿಕೆ. ಸೀಮಿತ ಪ್ರೇಕ್ಷಕ ವರ್ಗದತ್ತ ರಂಗ ಚಳವಳಿ ಚಾಚಿಕೊಳ್ಳುತ್ತಿದೆ. ಇದಕ್ಕೊಂದು ಉದಾಹರಣೆ ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಮಾಧವಿ – ಎಂಬ ನಾಟಕ.
ಶೇಷಗಿರಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡವರಿಗೆ ಇದೊಂದು ಪ್ರೀತಿಯ ಗ್ರಾಮ. ಹಾವೇರಿ ಅಥವಾ ಹಾನಗಲ್ಲಿಗೆ ಬಂದು ಕೆರೆಕಟ್ಟೆ ಒಡ್ಡುಗಳ ಸುತ್ತಿದಾಗ ಸಿಗುವ ಕಲಾಗ್ರಾಮವೇ ಶೇಷಗಿರಿ. ಇನ್ನೂ ಹೇಳಬೇಕೆಂದರೆ ರಂಗಾಯಣ, ನೀನಾಸಂ, ಎನ್.ಎಸ್.ಡಿ, ಸಾಣೇಹಳ್ಳಿ ಶಿವಸಂಚಾರ ಇಂತಹ ರೆಪ್ಯುಟೆಡ್ ತಂಡಗಳೂ ಕೂಡ ಒಂದೊಮ್ಮೆ ಬಂದು, ಉಚಿತ ಪ್ರದರ್ಶನ ನೀಡಿದ ಉದಾಹರಣೆ ಇವೆ. ಕಾರಣ ಇಲ್ಲಿಯ ಪ್ರಭು ಗುರಪ್ಪನವರ ಮತ್ತು ಗೆಳೆಯರ ಗುಂಪು. ಇಲ್ಲಿನ ಜನಸಂಖ್ಯೆ ಕೇವಲ ಹನ್ನೆರಡು ನೂರು ಮಾತ್ರ. ಪ್ರತಿ ಮನೆಯಲ್ಲಿ ಕಲಾವಿದನಿದ್ದಾನೆ, ಇವರೆಲ್ಲ ಮುಂಜಾನೆ ಮನೆ ಬಿಟ್ಟು ಹೊಲ ಮನೆ ಕೆಲಸ ಮುಗಿಸಿ ರಾತ್ರಿ ಗೂಡು ಸೇರುವವರು. ಆನಂತರವೇ ರಂಗಭೂಮಿ.

ವಾಲಿವಧೆ, ಉಷಾಹರಣ, ನ್ಯಾಯದ ಬಾಗಿಲು, ಕುವೆಂಪು ದರ್ಶನ, ಇವ ನಮ್ಮವ ಇವೆಲ್ಲಕ್ಕಿಂತ ಮುಖ್ಯವಾಗಿ ನಾಡಿನ ತುಂಬ ಸಂಚರಿಸಿದ ಪಾಪು ಗಾಂದಿ ಬಾಪು ಗಾಂಧಿ ನಾಟಕ ಸಿದ್ದವಾದದ್ದು ಇಲ್ಲಿಯೇ. ಕೋವಿಡ್ ಸಂದರ್ಭದಲ್ಲಿ ಚಾವುಂಡರಾಯ, ಜನಶತೃ, ಬೆಳಕು ಹಂಚಿದ ಹುಡುಗ ಹಾಗೂ ಇದೀಗ ಮಾಧವಿ ಈ ವರ್ಷ ಸಿದ್ಧಗೊಂಡ ನಾಟಕಗಳು. ಮಾಧವಿ ಕಳೆದ ಒಂದು ತಿಂಗಳಿನಿಂದ ತನ್ನ ತಾಲೀಮು ಪೂರೈಸಿ ಮೊದಲ ಪ್ರದರ್ಶನವನ್ನು ಸಿ.ಎಂ ಉದಾಸಿ ಕಲಾಕ್ಷೇತ್ರದಲ್ಲಿ ರಂಗವೇರಿತು.
ಮಾಧವಿ, ಮಹಾಭಾರತದ ಉಪವ್ಯಾಖ್ಯಾಯನ. ಶಂತನುವಿನಗಿಂತ ಮುಂಚಿನ ಕಥಾನಕ. ಯಯಾತಿ ಮಹಾರಾಜನ ಮಗಳು ಮಾಧವಿ. ಈ ಕಥಾ ಎಳೆಯ ಮೂಲಕವೇ ಶ್ರೀಮತಿ ಸುಧಾ ಆಡುಕಳ ನಾಟಕವಾಗಿಸಿದ್ದಾರೆ. ಗುರುದಕ್ಷಿಣೆಗಾಗಿ ಮಾಧವಿ ಬೇರೆ ಬೇರೆ ರಾಜರೊಂದಿಗೆ ಸಹಭೋಗ ನಡೆಸಿ ಮಕ್ಕಳನ್ನು ಹೆತ್ತುಕೊಡುವ ಯಂತ್ರವಾಗುತ್ತಾಳೆ. ಇದೆಲ್ಲ ಗುರು ಕೇಳಿದ ಎಂಟನೂರು ಅಶ್ವಮೇಧದ ಕುದುರೆಗಳಿಗಾಗಿ. ಪ್ರತಿ ಬಾರಿ ಕನ್ಯತ್ವವನ್ನು ಪಡೆಯುವ ಮಾಧವಿ ಮಹಿಳೆಯಿಂದ ಕನ್ಯೆಯಾಗುವ ವರದಾನಿಯಾಗಿರುತ್ತಾಳೆ.
ಕೊನೆಗೆ ಎಲ್ಲ ಮುಗಿದಾಗ ಮತ್ತೊಂದು ಸ್ವಯಂವರಕ್ಕೆ ಸಿದ್ಧಳಾಗಿ ಮದುವೆ ಮಾಡಿಕೊ ಎಂದು ಗಾವಿಲ ಹೇಳಿದಾಗ ನಿರಾಕರಿಸುತ್ತಾಳೆ. ಕನ್ಯತ್ವ ಪೊರೆಯುವುದು ಅಥವಾ ಬಿಡುವುದು ನನ್ನ ಹಕ್ಕು. ಸ್ವಯಂವರದಿಂದ ಆರಂಭವಾದ ನನ್ನ ಪಯಣ ಸ್ವಯಂವರವನ್ನು ಧಿಕ್ಕರಿಸುತ್ತ ಮುಗಿಯುತ್ತದೆ. ಭೂಕಂಪನವಾದ ಮೇಲೆ ಭೂಮಿ ಗಟ್ಟಿಯಾಗುವಂತೆ ಮಾಧವಿ ಗಟ್ಟಿಯಾಗುತ್ತಾಳೆ.
ಅನಾದಿಕಾಲದಿಂದ ಮೂಕರಾದ ಸೀತೆ, ಗಾಂಧಾರಿ, ದ್ರೌಪದಿ, ಅಹಲ್ಯೆ, ಊರ್ಮಿಳೆ ಸಾಲು ಸಾಲು ಹೆಸರುಗಳು ಬಾಯಿಕೊಡಲು ಮಾಧವಿ ಒಂದು ಸಂಕೇತವಾಗುತ್ತಾಳೆ. ಈ ಹಿಂದೆ ಅನುಪಮಾ ನಿರಂಜನ ಅದ್ಭುತ ಕಾದಂಬರಿ ಕೂಡ ಬರೆದಿರುವರು. ಲಕ್ಷ್ಮಣ ಕೌಂಟೆ ಮುಂತಾದವರು ಶೋಧನೆ ಕೂಡ ಮಾಡಿದ್ದಾರೆ. ಇಂತಹ ಅಪರೂಪದ ಸೂಕ್ಷ್ಮ ಸಂಚಲನದ ಪಾತ್ರವನ್ನು ಶ್ರೀಮತಿ ಸುಧಾ ಆಡುಕಳ ನಾಟಕ ಮುಖೇನ ಪ್ರಕಟಿಸಿದ್ದಾರೆ.

ಒಂದು ಗಂಟೆಯ ಮಾಧವಿ ನಾಟಕ ನಿಶ್ಯಬ್ದವಾಗಿ ಆವರಿಸಿಕೊಂಡಿತು. ಮಾಧವಿಯಾಗಿ ದಿವ್ಯಶ್ರೀ ನಾಯಕ ಸುಳ್ಯ ಶ್ರೇಷ್ಠ ಮಟ್ಟದ ಅಭಿನಯ, ಜೊತೆಗೆ ಶರತ್ ಭೂಪಣ್ಣ ಸರಸಾಟಿಯಾಗಿ ಅಭಿನಯ ನೀಡಿದರು. ಹಾಗೆ ನೋಡಿದರೆ ದಿವ್ಯಶ್ರೀ ಅವರ ರಂಗ ನಾಟಕ. ಅಭಿನಯದ ಹಲವು ಭಾವವಾಚಿಕೆಯಲ್ಲಿಯೇ ಸೆಳೆದ ಮಾಧವಿ, ಅಂತೆಯೇ ಏಕಕಾಲದಲ್ಲಿ ಆರು ಪಾತ್ರಗಳ ಪರಕಾಯ ಪ್ರವೇಶ ಮಾಡುವ ಭೂಪಣ್ಣ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು. ಕೈವಲ್ಯ ಎಂಬ ಕಲಾ ತಂಡವನ್ನು ಕಟ್ಟಿಕೊಂಡು ಈರ್ವರು ರಾಜ್ಯಾದ್ಯಂತ ಸಂಚರಿಸಲಿದ್ದಾರೆ.
ಸದಾ ಏನನ್ನೋ ಹುಡುಕುತ್ತ ಹೊಸ ಹೊಸದನ್ನು ರಂಗಕ್ಕೆ ತರುವ ಡಾ. ಶ್ರೀಪಾದ ಭಟ್ಟರು ಮತ್ತೆ ಗೆದ್ದಿದ್ದಾರೆ. ದೆವ್ವ ಭೂತ ಬಿಡಿಸುವ. ರಂಗಸಾಲೆಯಂತಹ ವೇದಿಕೆ, ನಿಗದಿತ ಪ್ರೇಕ್ಷಕ ವರ್ಗ, ಯಾವ ಕಡೆಯಿಂದಲೂ ಕುಳಿತು ನೋಡಬಹುದಾದ ಆಪ್ತ ನಾಟಕವಿದು. ನಾಟಕಕ್ಕೆ ಬಳಸಿಕೊಂಡ ಎಂಜಿಲೋ ಪದ್ಯ ಧ್ವನಿ ಪೂರ್ಣವಾಗಿ ಹಿನ್ನಲೆಯಲ್ಲಿ ಹೇಳಿಸಿದ್ದರೆ ಚೆನ್ನಾಗಿತ್ತು. ಇನ್ನು ದಿವ್ಯಶ್ರೀ ಇಡೀ ನಾಟಕದುದ್ದಕ್ಕೂ ಮೈ ಕೈ ಗಳಲಿ ಮದ್ದಲೆ ತುಂಬಿಕೊಂಡು, ನಾಟಕದ ಸಂಗೀತ ಸಂಗೀತವಾಗಿಸಿದ್ದು ಗಮನಾರ್ಹ. ಹಿನ್ನಲೆಯಲ್ಲಿ ಗಣೇಶ ಎಂ, ಭೀಮನಕೋಣೆ, ಪ್ರಭು ಗುರಪ್ಪನವರ, ನಾಗರಾಜ ಧಾರೇಶ್ವರರ ಶ್ರಮ ಸಾರ್ಥಕವಾಯಿತು.








0 Comments