ಶ್ರೀನಿವಾಸ ಪ್ರಭು ಅಂಕಣ: ಅರಳಬಹುದೇ ಬ್ರಹ್ಮಕಮಲಗಳು ಹಗಲಿನಲ್ಲಿ?

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ. 

ಅಂಕಣ 136

ಹೀಗೆ ತಿಮ್ಮಣ್ಣ ಗೌಡ ‘ಸ್ವಾಮಿ ಸರ್ ಜೀ಼ ಟಿ ವಿ ಬಿಟ್ಟುಹೋಗ್ತಿದಾರೆ’ ಎಂಬ ಕಹಿ ಸುದ್ದಿಯನ್ನು ತಂದಾಗ ನಿಜಕ್ಕೂ ಆಘಾತವೇ ಆಯಿತು. ಸ್ವಾಮಿ ಅವರಂಥ ಸಹೃದಯಿ, ಪ್ರಾಮಾಣಿಕ ಅಧಿಕಾರಿ ಇರುವವರೆಗೆ ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಹೋಗುವುದು ಸಲೀಸು. ಮುಂದೆ ಹೇಗೋ ಏನೋ? ಮೊದಲೇ ನನ್ನದು ಸಂಕೋಚದ ಸ್ವಭಾವ. ಯಾರಿಂದಲಾದರೂ ನೆರವು ಕೇಳುವುದೆಂದರೆ ಜೀವ ಬಾಯಿಗೆ ಬಂದಿರುತ್ತದೆ. ಇದರ ಜತೆಗೆ ಅನಗತ್ಯವಾಗಿ ಯಾರನ್ನೂ ಓಲೈಸಿಕೊಂಡು ಹೋಗುವ, ಆ ಮೂಲಕವೇ ಬೇಕಾದ ಕೆಲಸ ಸಾಧಿಸಿಕೊಳ್ಳುವ ಬುದ್ಧಿವಂತಿಕೆ ಮೊದಲೇ ಇಲ್ಲ! ಅಂದಮೇಲೆ ನನ್ನ ಪರವಾಗಿ ನಿಲ್ಲುವವರಾದರೂ ಯಾರು? ಯಾಕೋ ಧನುಷ್ ಕೂಡಾ ಅಲ್ಪಾಯುಷಿಯೇ ಆಗಿಬಿಡುತ್ತಾನೇನೋ ಎಂದೆನ್ನಿಸತೊಡಗಿತು. ಆದರೂ ‘ನೋಡೋಣ, ತಕ್ಕಮಟ್ಟಿಗೆ ವಾಹಿನಿಗೆ ಜನಪ್ರಿಯತೆ ತಂದುಕೊಡುವ ಕೆಲಸ ಮಾಡಿದ್ದೇವೆ. ಆ ಒಂದು ಕಾರಣಕ್ಕಾದರೂ ನಮ್ಮ ಧಾರಾವಾಹಿಯನ್ನು ಒಂದಷ್ಟು ಕಾಲ ಮುಂದುವರಿಸಬಹುದು’. ಎಂಬ ದೂರದ ಆಸೆಯೂ ಮನಸ್ಸಿನಲ್ಲಿ ಮೂಡಿತ್ತು.

ನಡೆದದ್ದು ಮಾತ್ರ ತದ್ವಿರುದ್ಧ. ಸ್ವಾಮಿಯವರು ನಿರ್ಗಮಿಸಿದ ಒಂದೆರಡು ದಿನಗಳಲ್ಲೇ ವಾಹಿನಿಯ ಒಬ್ಬ ಅಧಿಕಾರಿಯಿಂದ ಕರೆ ಬಂದಿತು, “ಸರ್ , ಈಗ ಧಾರಾವಾಹಿಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಚಂದ್ರಶೇಖರ್ ಅವರು ಸ್ವಾಮಿ ಅವರು ಶುರು ಮಾಡಿಸಿದ್ದ ಮೂರೂ ಧಾರಾವಾಹಿಗಳನ್ನೂ ನಿರೀಕ್ಷಿತ ಮಟ್ಟದ ಟಿ ಆರ್ ಪಿ ಬಾರದ ಕಾರಣಕ್ಕೆ ಕೂಡಲೇ ನಿಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ. ಹಾಗಾಗಿ ಹೊಸದಾಗಿ ಯಾವುದೇ ಕಂತುಗಳನ್ನೂ ಚಿತ್ರೀಕರಿಸಲು ಹೋಗಬೇಡಿ. ಮುಂದಿನ ವಾರವೇ ಕೊನೆ”. ಇದು ಆ ಕರೆಯ ಸಾರಾಂಶ. ಧಾರಾವಾಹಿಗೆ ಒಂದು ವಿಸ್ತರಣೆಯನ್ನು ನಿರೀಕ್ಷಿಸಿದ್ದ ನನಗೆ ಅವರ ಮಾತಿನಿಂದ ನಖಶಿಖಾಂತ ಉರಿದುಹೋಯಿತು. ಒಂದಿಷ್ಟು ಅವರ ಜತೆಗೆ ವಾದ ಮಾಡಿದೆ. ಆದರೆ ತೀರ್ಮಾನಗಳು ಇದ್ದದ್ದು ಮೇಲಧಿಕಾರಿಯ ಕೈಲಾದ್ದರಿಂದ ಅವರೂ ಅಸಹಾಯಕರೇ ಆಗಿದ್ದರು. ಹಾಗಾಗಿ ಹೆಚ್ಚು ಮಾತು ಬೆಳೆಸದೆ ಸುಮ್ಮನಾಗಿಬಿಟ್ಟೆ. ಧಾರಾವಾಹಿಯನ್ನು ಆರಂಭಿಸುವ ಹೊತ್ತಿನಲ್ಲಿ ವಾಹಿನಿಯೊಂದಿಗೆ ಒಂದು ಒಪ್ಪಂದವಾಗಿತ್ತಲ್ಲಾ, ಆ ಕರಾರು ಪತ್ರಗಳನ್ನು ತೆಗೆದು ಪರಿಶೀಲಿಸತೊಡಗಿದೆ. ಹಿಂದೆ ಒಂದು ಚಲನಚಿತ್ರಕ್ಕೆ ನೀಡಿದ್ದ ಮುಂಗಡ ಹಣವನ್ನು ಅವರು ಮರಳಿ ಕೇಳಿದಾಗ ರಂಜನಿಯ ಗೆಳತಿ ಲತಾ ಅವರ ಸಲಹೆಯ ಮೇರೆಗೆ ಮುಂಗಡ ಹಣವನ್ನು ಮರಳಿಸಲು ನಿರಾಕರಿಸಿ ಬಂಡೆದ್ದಿದ್ದೆನಲ್ಲಾ, ಆ ಪ್ರಸಂಗ ನೆನಪಿಗೆ ಬಂತು! ಕರಾರು ಪತ್ರಗಳನ್ನು ಪರಿಶೀಲಿಸಿದಾಗ ಒಂದು ಸಣ್ಣ ಸಮಾಧಾನದ ಸಂಗತಿ ಗಮನಕ್ಕೆ ಬಂದಿತು. ವಾಹಿನಿಯವರೇ ಆಹ್ವಾನಿಸಿ ಧಾರಾವಾಹಿಯನ್ನು ಮಾಡಿಕೊಡಲು ವಿನಂತಿಸಿಕೊಂಡಿದ್ದ ಪತ್ರದ ಜತೆಗಿದ್ದ ಕರಾರು ಪತ್ರದಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಿದ್ದರು, “ನಿಮ್ಮ ಧಾರಾವಾಹಿಯ 150 ಕಂತುಗಳಿಗೆ ಈ ಮೂಲಕ ಪರವಾನಗಿ ನೀಡುತ್ತಿದ್ದೇವೆ. ಧಾರಾವಾಹಿ ಜನಪ್ರಿಯವಾಗಿ ಒಳ್ಳೆಯ ಟಿ ಆರ್ ಪಿ ಬಂದರೆ ವಿಸ್ತರಣೆಯ ಅವಕಾಶವನ್ನೂ ಮಾಡಿಕೊಡುತ್ತೇವೆ.” ಧಾರಾವಾಹಿಯನ್ನು ಮಧ್ಯದಲ್ಲಿ ನಿಲ್ಲಿಸಬಹುದೆಂಬುದರ ಬಗ್ಗೆ ಒಂದು ಚಕಾರವೂ ಆ ಒಪ್ಪಂದ ಪತ್ರದಲ್ಲಿರಲಿಲ್ಲ.

ನಾನು ಮರುದಿನ ವಾಹಿನಿಯ ಅಧಿಕಾರಿಗೆ (ನನ್ನೊಂದಿಗೆ ಮಾತಾಡಿದ್ದವರು) ಫೋನ್ ಮಾಡಿ ಕೊಂಚ ಗಡುಸಾಗಿಯೇ ಹೇಳಿದೆ, “ಮೊದಲನೆಯದಾಗಿ ನಿಮ್ಮ ಆಹ್ವಾನದ ಮೇರೆಗೆ ಬೇರೆಲ್ಲಾ ನನ್ನ ಕೆಲಸಗಳನ್ನೂ ಬದಿಗೊತ್ತಿ ನಿಮಗಾಗಿ ಧಾರಾವಾಹಿ ನಿರ್ಮಿಸಿಕೊಡಲು ಬಂದಿದ್ದೇನೆ. ನಾನು ನಿಮ್ಮಲ್ಲಿಗೆ ಅರ್ಜಿ ಹಾಕಿಕೊಂಡು ಅವಕಾಶ ಕೇಳಿಕೊಂಡು ಬಂದಿಲ್ಲ. 150 ಕಂತುಗಳನ್ನು ನಿರ್ಮಿಸಿಕೊಡಬೇಕೆಂದು ಒಪ್ಪಂದವಾಗಿದೆ. ಧಾರಾವಾಹಿಗೆ ಟಿ ಆರ್ ಪಿ ಇಲ್ಲ ಎಂದು ನೀವು ಆರೋಪಿಸಲು ಬರುವಂತಿಲ್ಲ. ಏಕೆಂದರೆ ಮೊದಲಿಗೆ ನಿಮ್ಮ ವಾಹಿನಿಯೇ ಇನ್ನೂ ಜನಪ್ರೀತಿ ಗಳಿಸಿಕೊಳ್ಳಲು ಶಕ್ತವಾಗಿಲ್ಲ. ಮೇಲಾಗಿ ಇವೆಲ್ಲಾ ಒಂದೆರಡು ದಿನ, ತಿಂಗಳುಗಳಲ್ಲಿ ಆಗುವಂಥದಲ್ಲ. ವರ್ಷಗಟ್ಟಲೆ ನಿರಂತರವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಾ ವಾಹಿನಿಯನ್ನು ನಡೆಸಿದಾಗ ಮಾತ್ರ ಒಳ್ಳೆಯ ಟಿ ಆರ್ ಪಿ ಯನ್ನು ನಿರೀಕ್ಷಿಸಬಹುದೇ ಹೊರತು ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ. ಅದೂ ಅಲ್ಲದೆ ನಮ್ಮ ಧಾರಾವಾಹಿ ಸಾಕಷ್ಟು ಜನಪ್ರಿಯವಾಗಿರುವುದಕ್ಕೆ ಈಗಾಗಲೇ ಕುರುಹು, ಮಾಹಿತಿಗಳು ದೊರೆತಿವೆ. ಮಧ್ಯದಲ್ಲೇ ಚಿವುಟಿಹಾಕಿದರೆ ವಾಹಿನಿಗೇ ನಷ್ಟ ಅನ್ನುವುದನ್ನು ಮರೆಯಬೇಡಿ. ಹಾಗೂ ನೀವು ಹಠ ಹಿಡಿದು ನಮ್ಮ ಧಾರಾವಾಹಿಯನ್ನು ನಿಲ್ಲಿಸಲೇಬೇಕೆಂದು ತೀರ್ಮಾನಿಸಿದರೆ ನೀವೇ ಮಂಜೂರು ಮಾಡಿರುವ ಕಂತುಗಳನ್ನು ಮುಗಿಸಲು ಅವಕಾಶ ಮಾಡಿಕೊಟ್ಟು ನಂತರ ನಿಲ್ಲಿಸಿ. ನಿಮ್ಮ ಆದೇಶದ ಮೇರೆಗೆ ನಾನು ಸಾಕಷ್ಟು ಕಂತುಗಳನ್ನು ಪೂರ್ವಭಾವಿಯಾಗಿಯೇ ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ಈಗ ಅಚಾನಕ್ ಆಗಿ ನೀವು ನಿಲ್ಲಿಸಿಬಿಟ್ಟರೆ ನನಗೆ ವಿಪರೀತ ನಷ್ಟವಾಗಿಬಿಡುತ್ತದೆ. ಇಷ್ಟು ಹೇಳಿದ ಮೇಲೂ ನೀವು ನಿಮ್ಮ ಹಠಕ್ಕೇ ಜೋತುಬಿದ್ದರೆ ಬೇರೆ ದಾರಿಯೇ ಇಲ್ಲದೆ ನಾನು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಯೋಚಿಸಿ.” ಎಂದೆ.

ಅವರೂ ನಂತರ ತಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿದರಂತೆ; ಮೊದಮೊದಲು ಬಲು ಜೋರಿನಿಂದ ಮಾತಾಡುತ್ತಾ ಧಾರಾವಾಹಿಯನ್ನು ನಿಲ್ಲಿಸಲೇಬೇಕೆಂದು ಹೂಂಕರಿಸುತ್ತಿದ್ದ ಮೇಲಧಿಕಾರಿಗಳು ಕಾನೂನಿನ ಪ್ರಸ್ತಾಪ ಬರುತ್ತಿದ್ದಂತೆಯೇ ತೆಪ್ಪಗಾದರಂತೆ! ಇದು ಆ ಅಧಿಕಾರಿ ಮಿತ್ರರೇ ನನಗೆ ನೀಡಿದ ಸುದ್ದಿ! ಅಂತೂ ಹೇಗೋ ಮಾಡಿ ಅನುಮೋದನೆ ಆಗಿದ್ದಷ್ಟು ಕಂತುಗಳನ್ನು ಪೂರೈಸಿದೆವು. ಮುಗಿದ ಮೇಲೆ ನಾನಾಗಿ ‘ವಿಸ್ತರಣೆ ನೀಡಿ’ ಎಂದು ವಾಹಿನಿಯವರನ್ನು ಬೇಡಿಕೊಳ್ಳಲು ಹೋಗಲಿಲ್ಲ. ಬೇಡಿದ್ದರೂ ಅಷ್ಟು ರಂಪ ಮಾಡಿದ್ದ ನನಗೆ ಅವರು ವಿಸ್ತರಣೆ ನೀಡುವುದಿಲ್ಲವೆಂಬುದು ನನಗೆ ಮೊದಲೇ ಖಾತ್ರಿಯಾಗಿಹೋಗಿತ್ತು ಅನ್ನಿ! ಅನುಸರಿಸಿಕೊಂಡು ಹೋಗುವ ಜಾಣತನವಿದ್ದರೆ, ಅಗತ್ಯಬಿದ್ದರೆ ಸಂಬಂಧಪಟ್ಟವರನ್ನು ಓಲೈಸಿ ಸ್ತುತಿಸಿ ಭಜಿಸುವ ಕೌಶಲ್ಯವಿದ್ದರೆ ಕಾರ್ಯಸಾಧನೆಯಾಗಬಹುದು.ಕಾನೂನು ಕಟ್ಟಳೆ ಎಂದು ಜೋರು ಮಾಡಿದರೆ ಸೊಪ್ಪು ಹಾಕುತ್ತಾರೆಯೇ?! ಒಟ್ಟಿನಲ್ಲಿ ಧಾರಾವಾಹಿ ನಿರ್ಮಾಣಕ್ಕೂ ನನಗೂ ಆಗಿ ಬರುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿಹೋಯಿತು. ತಾತ್ವಿಕ ಕಾರಣಗಳಿಗಾಗಿ ಹಾಗೂ ರಾಜಿ ಮಾಡಿಕೊಳ್ಳಲು ಒಪ್ಪದ ಮನೋಧರ್ಮದಿಂದಾಗಿ ಜೀ಼ ವಾಹಿನಿ ಬಿಟ್ಟುಬಂದ ನಂತರ ಸ್ವಾಮಿ ಅವರು ಸುಮ್ಮನೆ ಕೂರಲಿಲ್ಲ. ಸುಮ್ಮನೆ ಕೂರುವ ಜಾಯಮಾನವೂ ಅವರದಲ್ಲ! ಅವರು ಜೀ಼ ವಾಹಿನಿ ಬಿಟ್ಟು ಹೊರನಡೆದ ಕೆಲವೇ ದಿನಗಳಲ್ಲಿ ಪತ್ರಿಕೆಗಳಲ್ಲಿ ಒಂದು ಸುದ್ದಿ ಬಂದಿತು: ‘ನಟ—ನಿರ್ದೇಶಕ—ನಾಟಕಕಾರ ಎಸ್ ಎಲ್ ಎನ್ ಸ್ವಾಮಿ ಅವರು ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ; ಸಧ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ; ಸ್ವಾಮಿ ಅವರದೇ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ.’

ಮರುದಿನವೇ ಸ್ವಾಮಿಯವರಿಂದ ನನಗೆ ಫೋನ್ ಬಂದಿತು: “ಹೊಸ ಸಿನೆಮಾ ಮಾಡ್ತಿದೇನೆ. ತುಂಬಾ ವಿಭಿನ್ನ ರೀತಿಯ ಕಥಾವಸ್ತು, ನಿರೂಪಣೆ. ಚಿತ್ರದಲ್ಲಿ ಮಾತುಗಳಿರುವುದಿಲ್ಲ. ಪುಷ್ಪಕ ವಿಮಾನದ ನಂತರದ ಮೂಕಿ ಸಿನೆಮಾ ಅಂದರೆ ನಮ್ಮದೇ! ನೀವು ಒಂದು ಮುಖ್ಯ ಪಾತ್ರ ಮಾಡಬೇಕು.” ಎಂದರು ಸ್ವಾಮಿ. ಸಂತೋಷವಾಗಿ ಒಪ್ಪಿಕೊಂಡೆ. ಆ ವೇಳೆಗೆ ಡಿಟೆಕ್ಟಿವ್ ಧನುಷ್ ಧಾರಾವಾಹಿಯ ಚಿತ್ರೀಕರಣವನ್ನೆಲ್ಲಾ ಮಾಡಿ ಮುಗಿಸಿಯಾಗಿತ್ತು. ಮೊದಲಿನಿಂದಲೂ ನನಗೆ ಹೊಸಬಗೆಯ ಪ್ರಯೋಗಾತ್ಮಕ ಚಿತ್ರಗಳತ್ತ ವಿಶೇಷ ಒಲವು. ಅಂಥದೊಂದು ಅವಕಾಶ ತಾನಾಗಿ ಅರಸಿಕೊಂಡು ಬಂದಾಗ ಒಪ್ಪಿ ಕೊಳ್ಳದಿರುವುದಾದರೂ ಹೇಗೆ?! ‘ನಿರಂತರ’ ಚಿತ್ರದಲ್ಲಿ ಯಾವ ಪಾತ್ರವೂ ಮಾತಾಡುವುದಿಲ್ಲ; ತುಟಿ ತೆರೆಯದೇ ಅಭಿನಯಿಸಬೇಕು; ಭಾವಾಭಿನಯ ಪ್ರಧಾನ ಚಿತ್ರ ; ‘…, ‘ (ಡಾಟ್ ಡಾಟ್ ಡಾಟ್ ಕಾಮಾ)ಎಂದು ಚಿತ್ರಕ್ಕೆ ನಾಮಕರಣವಾಗಿತ್ತು. ಆದರೆ ಆಗಿನ ನಿಯಮಾವಳಿಗಳ ಪ್ರಕಾರ ಚಿಹ್ನೆಗಳನ್ನು ಹೆಸರಿನಲ್ಲಿ ಬಳಸುವಂತಿಲ್ಲವೆಂದು ಆಕ್ಷೇಪವೆತ್ತಿದ್ದರಿಂದ ‘ನಿರಂತರ’ ಎಂಬುದಾಗಿ ಹೆಸರನ್ನು ಬದಲಾಯಿಸಲಾಗಿತ್ತು. ಅಂಬರೀಶ್ ಸಾರಂಗಿ ಅವರು ನಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದರು. ಪ್ರಣಯರಾಜ ಶ್ರೀನಾಥ್ , ಮಾಸ್ಟರ್ ಹಿರಣ್ಣಯ್ಯ, ಪದ್ಮಾ ವಾಸಂತಿ, ಚಸ್ವಾ ಹಾಗೂ ನಾನು ಇತರ ಮುಖ್ಯ ಪಾತ್ರಗಳಲ್ಲಿದ್ದೆವು. ರಮೇಶ್ ಅನ್ನುವವರು ನಿರ್ಮಾಪಕರಾಗಿದ್ದರು. ಮಾಸ್ಟರ್ ಹಿರಣ್ಣಯ್ಯ, ಪ್ರಣಯರಾಜ ಶ್ರೀನಾಥ್ ಅಂಥ ದಿಗ್ಗಜರ ಜತೆಗೆ ಅಭಿನಯಿಸುವ ಸುವರ್ಣಾವಕಾಶ ದೊರೆತದ್ದು ನನ್ನ ಹೆಚ್ಚಿನ ಸಂತೋಷಕ್ಕೆ ಕಾರಣವಾಗಿತ್ತು.

ಪ್ರವೀಣ್ ಡಿ ರಾವ್ ಅವರ ಸಂಗೀತ ನಿರ್ದೇಶನ. ನನಗೆ ಎಲ್ಲಕ್ಕಿಂತ ಸ್ವಾರಸ್ಯಕರ ಸಂಗತಿ ಅನ್ನಿಸಿದ್ದು ಮಾಸ್ಟರ್ ಹಿರಣ್ಣಯ್ಯನವರಿಗೆ ಮೂಕಿ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದ್ದು! ರಂಗದ ಮೇಲಾಗಲೀ ಸಾರ್ವಜನಿಕವಾಗಿಯಾಗಲೀ ಮಿತ್ರರೊಂದಿಗಾಗಲೀ ಬಿಡುವಿಲ್ಲದಂತೆ ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುವ ಮಾಸ್ಟರ್ ಅವರ ಬಾಯಿಗೆ ಬೀಗ ಜಡಿದು ತುಟಿ ಎರಡು ಮಾಡದೆಯೇ ಅದ್ಭುತವಾಗಿ ಅಭಿನಯಿಸುವಂತೆ ಮಾಡಿದ್ದಕ್ಕೆ ಸ್ವಾಮಿ ಅವರಿಗೆ ಅಭಿನಂದನೆಗಳನ್ನು ಹೇಳಲೇಬೇಕು! ‘ನಿರಂತರ’ ಚಿತ್ರವನ್ನು ಮೂಕಿ ಚಿತ್ರವಾಗಿಯೇ ತೆರೆಗರ್ಪಿಸಬೇಕೆಂಬುದು ಮೊದಲಿನ ನಿರ್ಧಾರವಾಗಿದ್ದರೂ ನಂತರ ಸ್ವಾಮಿ ಅವರು ಒಂದು ಸಣ್ಣ ಬದಲಾವಣೆಯನ್ನು ತಂದರು! ಆ ಬದಲಾವಣೆಯ ಪರಿಣಾಮವಾಗಿ ‘ನಿರಂತರ’ ಚಲನಚಿತ್ರ ”ವಿಶ್ವದ ಮೊದಲ ಒಂದು ಮಾತಿನ ಚಲನಚಿತ್ರ” ವಾಗಿ ರೂಪುಗೊಂಡಿತು! ಇಡೀ ಚಿತ್ರದಲ್ಲಿ ಮೊದಲಿನಿಂದ ಕೊನೆಯವರೆಗೆ ಒಂದೇ ಒಂದು ಮಾತೂ ಇರುವುದಿಲ್ಲ; ಕೊನೆಯಲ್ಲಿ ಮಾತ್ರ ಒಂದು ಮಾತು ಬರುತ್ತದೆ. ಸಂದೇಶ ರೂಪದ ಆ ಮಾತನ್ನು ಆಡಿದವರು ಶ್ರೀ ರವಿಶಂಕರ್ ಗುರೂಜಿಯವರು. ಬಹಳ ಶ್ರದ್ಧೆಯಿಂದ ಸ್ವಾಮಿಯವರು ಚಿತ್ರವನ್ನು ನಿರೂಪಿಸಿದ್ದರು. ನೋಡಿದವರೆಲ್ಲರೂ ಚಿತ್ರವನ್ನು ಮೆಚ್ಚಿ ಮಾತಾಡಿದರು, ವ್ಯಾಪಕವಾದ ಪ್ರಶಂಸೆಯೂ ವ್ಯಕ್ತವಾಯಿತು. ಆದರೂ ಹೊಸ ಬಗೆಯ ಪ್ರಯೋಗಾತ್ಮಕ ಚಿತ್ರಗಳಿಗಾಗುವಂತೆ ಈ ಚಿತ್ರಕ್ಕೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ದೊರೆಯದೆ ಕೇವಲ ಮೆಚ್ಚುಗೆ, ಪ್ರಶಸ್ತಿಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಈ ಸಮಯದಲ್ಲಿ ನಾನು ಅಭಿನಯಿಸಿದ ಮತ್ತೊಂದು ಮುಖ್ಯ ಧಾರಾವಾಹಿ ಎಂದರೆ ‘ಪ್ರೇರಣಾ’. ಮುಂಬೈನ ನಿರ್ಮಾಣ ಸಂಸ್ಥೆ UTV ಉದಯ ವಾಹಿನಿಗಾಗಿ ನಿರ್ಮಿಸಿದ ಧಾರಾವಾಹಿ ಇದು. ‘ನೂರು ಕವಲುಗಳ ಈ ಜೀವನ’ ಎಂದು ಆರಂಭವಾಗುತ್ತಿದ್ದ ಅರ್ಥಪೂರ್ಣ ಶೀರ್ಷಿಕೆ ಗೀತೆಯನ್ನು ಬರೆದದ್ದು ಪ್ರಿಯ ಮಿತ್ರ ಎಂ.ಎನ್. ವ್ಯಾಸರಾವ್. ಪ್ರವೀಣ್ ಡಿ ರಾವ್ ಅವರು ಸೊಗಸಾಗಿ ಸಂಯೋಜಿಸಿದ್ದ ಈ ಗೀತೆಯನ್ನು ವಿಜಯಪ್ರಕಾಶ್ ಹಾಗೂ ಎಂ.ಡಿ. ಪಲ್ಲವಿ ಅವರು ಸುಶ್ರಾವ್ಯವಾಗಿ ಹಾಡಿದ್ದರು. ಆ ಸಮಯದ ಒಂದು ಸೂಪರ್ ಹಿಟ್ ಶೀರ್ಷಿಕೆ ಗೀತೆ ಇದು. ಜೆ.ಕೆ.ಸುನಿಲ್ ಕುಮಾರ್ ಅವರು ‘ ಪ್ರೇರಣಾ’ ಧಾರಾವಾಹಿಯ ನಿರ್ದೇಶಕರು. ಜ್ಯೋತಿ ರೈ ಅವರು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ನಾನು ಆಕೆಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದೆ. ಆತ್ಮೀಯ ಗೆಳೆಯ ಪೃಥ್ವೀರಾಜ್ , ಜ್ಯೋತಿ, ಉಷಾ ಭಂಡಾರಿ ಮೊದಲಾದವರು ಇತರ ತಾರಾಗಣದಲ್ಲಿದ್ದರು. ಹಿರಿಯ ನಟ ಶರಪಂಜರ ಶಿವರಾಂ ಅವರು ಒಂದು ಮುಖ್ಯ ಗೌರವ ಪಾತ್ರದಲ್ಲಿ ಅಭಿನಯಿಸಿದ್ದರು. ಅವರೊಟ್ಟಿಗೆ ನಾನು ‘ಪರದೆ ಹಂಚಿಕೊಂಡದ್ದು’ ಬಹುಶಃ ಅದೇ ಮೊದಲೆಂದು ತೋರುತ್ತದೆ. ಅವರ ಜತೆಯಲ್ಲಿ ಕಳೆದ ಆ ಕೆಲ ದಿನಗಳನ್ನು ನಾನು ಸದಾ ನೆನೆಯುತ್ತಿರುತ್ತೇನೆ. ಸದಾ ನಾಟಕ, ಸಿನೆಮಾಗಳ ಬಗ್ಗೆ ಮಾತಾಡುತ್ತಾ ಇನ್ನೊಬ್ಬರ ಮಾತಿಗೂ ತನ್ಮಯತೆಯಿಂದ ಕಿವಿಯಾಗುತ್ತಿದ್ದ ಶಿವರಾಮಣ್ಣ ಮಗುವಿನ ಮುಗ್ಧತೆಯನ್ನು ಉಳಿಸಿಕೊಂಡಿದ್ದ ಅದ್ಭುತ ಸ್ನೇಹಜೀವಿ. ಅವರಿಗೆ ಗೊತ್ತಿಲ್ಲದ ಸಂಗತಿಯ ಬಗ್ಗೆ ನೀವು ಹೇಳತೊಡಗಿದರೆ ಕಣ್ಣು ಬಾಯಿ ಬಿಟ್ಟುಕೊಂಡು ತದೇಕಚಿತ್ತರಾಗಿ ಆಲಿಸುತ್ತಿದ್ದರು. ಅಂತೆಯೇ ತಮ್ಮ ಅನುಭವಗಳನ್ನೂ ಬಹಳ ರಸವತ್ತಾಗಿ ನಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದರು.

ಒಮ್ಮೆ ಪ್ರಾಸಂಗಿಕವಾಗಿ ‘ನಮ್ಮ ಮನೆಯ ತೋಟದಲ್ಲಿ ಒಟ್ಟಿಗೆ ಏಳು ಬ್ರಹ್ಮಕಮಲಗಳು ಸಧ್ಯದಲ್ಲೇ ಅರಳಲಿವೆ’ ಎಂದು ನಾನು ಹೇಳಿದ್ದೇ ತಡ, ಶಿವರಾಮಣ್ಣ, “ನಾನು ನೋಡಬೇಕಲ್ಲಾ ಪ್ರಭು. ಅದು ರಾತ್ರಿ ಅರಳಿ ಒಂದೇ ದಿನದಲ್ಲಿ ಬಾಡಿಹೋಗುತ್ತದೆಂದು ಕೇಳಿದ್ದೇನೆ. ನನಗೆ ನೋಡಲು ಅವಕಾಶವಾಗುತ್ತದೆಯೇ?” ಎಂದು ಪುಟ್ಟ ಹುಡುಗನ ಹಾಗೆ ಕೇಳಿದರು! “ಖಂಡಿತ ಅಣ್ಣಾ. ಇಂದು ರಾತ್ರಿ ಅರಳಿದರೆ ನಾಳೆ ಖಂಡಿತ ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ.” ಎಂದು ಅವರಿಗೆ ಭರವಸೆ ನೀಡಿದೆ. ಅಂತೆಯೇ ಮರುದಿನ ಮುಂಜಾನೆ ನೋಡುವ ವೇಳೆಗೆ ಅಷ್ಟೂ ಬ್ರಹ್ಮಕಮಲಗಳು ಪೂರ್ಣವಾಗಿ ಅರಳಿ ಲಕಲಕಿಸುತ್ತಿದ್ದವು! ನಿಜಕ್ಕೂ ಬ್ರಹ್ಮಕಮಲಗಳದ್ದು ಅದೆಂಥ ಮಾರ್ದವತೆ. ಅದೆಂಥ ನವುರು. ಅದೆಂಥ ತೆಳು ಗಂಧ! ಅಂದು ಶೂಟಿಂಗ್ ಗೆ ಹೋಗುತ್ತಿದ್ದಂತೆಯೇ ಶಿವರಾಮಣ್ಣ ಕೇಳಿದ ಮೊದಲ ಪ್ರಶ್ನೆ: “ಬ್ರಹ್ಮಕಮಲಗಳು ಅರಳಿವೆಯೇ?” “ಅರಳಿವೆ ಶಿವರಾಮಣ್ಣ. ಮಧ್ಯಾಹ್ನ ಹೋಗಿ ನೋಡಿಕೊಂಡು ಬರೋಣ.” ಎಂದೆ ನಾನು. ನಮ್ಮ ಮನೆ ಇದ್ದದ್ದು ಬಸವೇಶ್ವರ ನಗರದಲ್ಲಿ. ಪ್ರೇರಣಾ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದ್ದುದು ವಿಜಯನಗರದ ಚಂದ್ರಿಕಾ ಹೌಸ್ ನಲ್ಲಿ. ಮೂರ್ನಾಲ್ಕು ಕಿಲೋ ಮೀಟರ್ ಗಳ ಅಂತರವಷ್ಟೇ. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಶಿವರಾಮಣ್ಣನನ್ನು ಕರೆದುಕೊಂಡು ಮನೆಗೆ ಹೊರಟೆ. ರಂಜನಿಯೂ ಕಾಲೇಜ್ ಗೆ ಹೊರಟುಹೋಗಿದ್ದಳು. ಹೇಗೂ ಮನೆಯಲ್ಲಿ ಬೆಳಿಗ್ಗೆಯೇ ತಿಂಡಿ, ಅಡುಗೆಗಳನ್ನು ಮಾಡಿಟ್ಟೇ ಹೊರಟಿದ್ದೆನಲ್ಲಾ, ಕೊಂಚ ಬಿಸಿ ಮಾಡಿಕೊಂಡರೆ ಸಾಕಾಗಿತ್ತು. ಮೊದಲು ಊಟ ಮುಗಿಸಿ ನಂತರ ಬ್ರಹ್ಮಕಮಲಗಳನ್ನು ನೋಡಲು ಮೇಲ್ ಮಹಡಿಗೆ ಹೋಗೋಣವೆಂದರೆ ಶಿವರಾಮಣ್ಣ, “ಬೇಡ ಬೇಡ. ಮೊದಲು ಹೂಗಳ ದರ್ಶನ ಪಡೆದುಬಿಡೋಣ. ಮೊದಲು ನೇತ್ರಪೂಜೆ. ನಂತರ ಉದರ ಪೂಜೆ.” ಎಂದವರೇ ದುಡುದುಡು ಮೆಟ್ಟಿಲೇರತೊಡಗಿದರು!

ಟೆರೇಸ್ ನಲ್ಲಿ ನಾವು ಪ್ರೀತಿಯಿಂದ ಬೆಳೆಸಿದ್ದ ಕಿರುತೋಟದ ಮಧ್ಯೆ ಅರಳಿ ನಿಂತು ಗಾಳಿಗೆ ಮೆಲ್ಲಗೆ ಸುಯ್ದಾಡುತ್ತಿದ್ದ ಬೆಳ್ಳನೆಯ ಬ್ರಹ್ಮಕಮಲಗಳನ್ನು ನೋಡುತ್ತಾ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತುಬಿಟ್ಟರು ಶಿವರಾಮಣ್ಣ! ಮೆಲ್ಲಗೆ ಮೃದುವಾಗಿ ಹೂಗಳನ್ನು ಸವರಿ ಅವುಗಳ ರೇಶಿಮೆ ನುಣುಪಿಗೆ ಚಕಿತರಾಗುತ್ತಾ ಗಂಧವನ್ನು ಆಘ್ರಾಣಿಸುತ್ತಾ ಬಲು ಸಂಭ್ರಮ ಪಟ್ಟರು! ಅವರ ಸಂಭ್ರಮಕ್ಕೆ ಪರೋಕ್ಷವಾಗಿ ಕಾರಣವಾದ ಹಿಗ್ಗು ನನ್ನದು! ನಂತರ ನನ್ನ ನಳಪಾಕವನ್ನೂ ಪ್ರೀತಿಯಿಂದ ಸೇವಿಸಿ ನನಗೆ ಶಭಾಷ್ ಗಿರಿಯನ್ನು ಕೊಟ್ಟು ನನ್ನ ಸಿಡಿ, ಡಿವಿಡಿ ಲೈಬ್ರರಿಯನ್ನು ನೋಡಿ ಮತ್ತಷ್ಟು ಖುಷಿಪಟ್ಟು “ಅರಳಿದ ಬ್ರಹ್ಮಕಮಲಗಳನ್ನು ನೋಡಿ ಮನಸ್ಸೇ ಅರಳಿಹೋಯ್ತು ಕಣಪ್ಪಾ. ಕರಕೊಂಡು ಬಂದಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.” ಎಂದು ತುಂಬು ಪ್ರೀತಿಯಿಂದ ನುಡಿದು ಅಪ್ಪಿಕೊಂಡರು. ನಾನೂ ನಮಸ್ಕರಿಸಿ ಹಿರಿಯ ಜೀವದ ಶುಭಹಾರೈಕೆಗಳನ್ನು ಪಡೆದುಕೊಳ್ಳುವ ವೇಳೆಗೆ ಚಿತ್ರೀಕರಣಕ್ಕೆ ಮರಳುವ ವೇಳೆಯಾಗಿತ್ತು.

ಪ್ರಾಸಂಗಿಕವಾಗಿ ಇನ್ನೊಂದು ವಿವರವನ್ನು ಇಲ್ಲಿ ಸೇರಿಸಬಹುದೇನೊ. ನಮ್ಮ ಮನೆಯಲ್ಲಿ ಒಂದು ವಿಶೇಷ ರಾತ್ರಿ ಹೀಗೆ ಅರಳಿದ ಬ್ರಹ್ಮಕಮಲಗಳು ರಂಜನಿಯ ಒಂದು ವಿಶೇಷ ಕವಿತೆಗೂ ಕಾರಣವಾದವು! ಅವಳ ‘ಬ್ರಹ್ಮಕಮಲ’ ನೀಳ್ಗವಿತೆ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸಿದ್ಧ ವಿಮರ್ಶಕ ಡಾ॥ಮಲ್ಲೇಪುರಂ ವೆಂಕಟೇಶ್ ಆ ಕವಿತೆಯ ಕುರಿತಾಗಿ ಹೀಗೆ ಹೇಳುತ್ತಾರೆ: “ಬ್ರಹ್ಮಕಮಲ ಕವಿತೆ ವಿಶಿಷ್ಟವಾಗಿದೆ. ಇದು ಹೂವನ್ನು ಕುರಿತ ಕವಿತೆ. ಆದರೆ ಅದಕ್ಕೂ ಮೀರಿ ಇನ್ನೂ ಅರ್ಥದ ವಿಸ್ತಾರತೆಯನ್ನೂ ಅದು ವಿವರಿಸುತ್ತದೆ. ನಮ್ಮ ಆಧ್ಯಾತ್ಮಿಕ ಪ್ರಪಂಚದಲ್ಲಿ ಬ್ರಹ್ಮ ಎಂಬ ಮಾತಿಗೂ ಬ್ರಹ್ಮ ಕಮಲ ಎಂಬ ಮಾತಿಗೂ ಮಹತ್ವದ ಅನುಭಾವದ ಅರ್ಥ ಉಂಟು. ಕವಯಿತ್ರಿಗೂ ಅದರ ಅರಿವಿದೆ. ಅವರು ಸುಪ್ತಾವಸ್ಥೆಗೂ ಜಾಗೃತ ಅವಸ್ಥೆಗೂ ಇರುವ ನೆಲೆಯಲ್ಲಿ ಹಗಲು ರಾತ್ರಿಗಳೆಂಬ ಕಾಲರೂಪಕಗಳನ್ನು ಬಳಸಿಕೊಂಡು ಕವಿತೆಯನ್ನು ಕಟ್ಟಿರುವಂತೆ ನನಗೆ ತೋರುತ್ತದೆ. ಬ್ರಹ್ಮಕಮಲ ಅರಳುವುದು ರಾತ್ರಿಯಲ್ಲೇ. ಯೋಗಿಯೊಬ್ಬ ಎಚ್ಚರಗೊಳ್ಳುವುದು ರಾತ್ರಿಯಲ್ಲೇ!” ರಂಜನಿಯ ಈ ಪ್ರಸಿದ್ಧ ಕವಿತೆಯ ಕೊನೆಯ ಮಾರ್ಮಿಕ ಸಾಲುಗಳೊಂದಿಗೆ ಇಂದಿನ ಅಂಕಣವನ್ನು ಮುಗಿಸುತ್ತೇನೆ: “ಅರಳಬಹುದೇ ಬ್ರಹ್ಮಕಮಲಗಳು ಹಗಲಿನಲ್ಲಿ? ಅರಳಬಾರದೇ ಬ್ರಹ್ಮಕಮಲಗಳು ಹಗಲಿನಲ್ಲೂ!”..

‍ಲೇಖಕರು Admin MM

June 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: