‘ಶೂದ್ರ’ ಕಂಡ ಕಮಲಾದಾಸ್

ಕನಸಿಗೊಂದು ಕಣ್ಣು

ಅಲೆಮಾರಿಯ ಮಾತು – 147

ಕಮಲಾದಾಸ್: ಜೀವನಪ್ರೀತಿಯ ಲೇಖಕಿ

-ಶೂದ್ರ ಶ್ರೀನಿವಾಸ್

ನಾನು ವರ್ಣರಂಜಿತ ಯೌವನವನ್ನು ಕಳೆದಿದ್ದೇನೆ. ಪ್ರಾಯಶಃ ನನ್ನ ಮಧ್ಯವನ್ನು ಬೆರೆಸಿಕೊಂಡಂತೆ, ನನ್ನ ಸುಖಗಳನ್ನು ಎಚ್ಚರವಿಲ್ಲದೆ ಬೆರೆಸಿದೆ.

ಬಹುಶಃ ನಾನು ಸಾಯಬಹುದು. ವಧುವಿನಂತೆ ಕಾಣಲು ದೇಹವನ್ನು ಅಲಂಕರಿಸುತ್ತಿದ್ದ ನನ್ನ ಆಭರಣಗಳು ನಾನು ಸತ್ತ ನಂತರವೂ ಇರುತ್ತವೆ. ನಾನು ಸಂಗ್ರಹಿಸಿದ ಪುಸ್ತಕಗಳು, ಹೂಗಳಿಂದ ನಾನು ಪೂಜಿಸಿದ ಕಂಚಿನ ವಿಗ್ರಹಗಳು, ನಾನು ಅಳಿದ ಮೇಲೂ ಇರುತ್ತವೆ. ಆದರೆ ನಾನು ಇರೆನು. ನನ್ನ ಚಿತೆಯಿಂದ ನನ್ನ ಶೋಕಿತ ಮಕ್ಕಳು ಎಲುಬು ಮತ್ತು ಬೂದಿಯನ್ನು ತೆಗೆಯುವರು. ಆದರೂ ಪ್ರಪಂಚ ಮುಂದುವರಿಯುತ್ತದೆ. ನನ್ನ ಮಕ್ಕಳ ಕೆನ್ನೆಯ ಮೇಲಿನ ನೀರು ಬತ್ತುತ್ತದೆ. ಇವರ ಹೆಂಡಂದಿರು ಈ ಲೋಕಕ್ಕೆ ಪ್ರತಿಭಾವಂತ ಮಕ್ಕಳನ್ನು ನೀಡುವರು. ನನ್ನ ವಂಶೀಯರು ಭೂಮಿಯಲ್ಲಿ ತುಂಬುವರು. ನನಗಿಷ್ಟೇ ಸಾಕು. ಈ ಸಾಲುಗಳು ಕಮಲಾದಾಸ್ ರವರ ನನ್ನ ಕಥೆ ಎಂಬ ಅವರ ಜೀವನಗಾಥೆಯಿಂದ ತೆಗೆದುಕೊಂಡಿರುತವಂಥದ್ದು. ಇದೇ ನನ್ನ ಕಥೆಯು ‘ನೀರ್ಮಾದಳ ಹೂ ಬಿಟ್ಟ ಕಾಲ’ ಎಂಬ ಶೀರ್ಷಿಕೆಯಲ್ಲಿಯೂ ಬಂದಿದೆ.

1994ರಲ್ಲಿ ಅಂದರೆ ಇಪ್ಪತ್ತನೆಯ ಶತಮಾನದ ಕೊನೆಯ ಭಾಗ. ಕೇರಳದ ಪೆರಿಯಾರ್ ನದಿಯ ದಡದಲ್ಲಿ ಉದ್ದಕ್ಕೂ ಎರಡೂ ಕಡೆ ಹರಡಿಕೊಂಡಿದ್ದ ಬೆಳ್ಳನೆಯ ಮರಳು. ಎಷ್ಟು ದೂರ ನೋಡಿದರೂ ರೇಷ್ಮೆಯ ಸೆರಗನ್ನು ಬೀಸಿ ಎಸೆದಂತೆ ಕಂಗೊಳಿಸುವ ಮರಳು. ಅದರ ಪಕ್ಕದಲ್ಲಿಯೇ ನೂರಾರು ಮಂದಿ ತಂಗುವಷ್ಟು ಅದ್ಭುತ ಅರಮನೆ ರೀತಿಯ ಬಂಗಲೆಗಳು. ಒಂದಂತೂ ಅರಮನೆಯೇ ಆಗಿತ್ತೇನೋ ಗೊತ್ತಿಲ್ಲ. ಅಷ್ಟು ಮನಮೋಹಕವಾಗಿತ್ತು. ಇಂಥ ಕಡೆ ಬಯಲಿನಲ್ಲಿ ವಿವಿಧ ಬಣ್ಣಗಳ ಷಾಮಿಯಾನ. ಅಲ್ಲಿಯೇ ಬೃಹತ್ತಾದ ವೇದಿಕೆ. ವೇದಿಕೆಯ ಮಧ್ಯಭಾಗದಲ್ಲಿ ಒಂದು ಪಂಜರ. ಅದರೊಳಗೊಂದು ಗಿಳಿ. ಅದು ಒಂದೇ ಸಮನೆ ಒದ್ದಾಡುತ್ತಿತ್ತು. ಇದು ಕೇರಳದ ಮಂದಿಗೆ ಸ್ವಾಭಾವಿಕವಿರಬಹುದು. ಯಾಕೆಂದರೆ ಈ ಮೊದಲೇ ನಾನು ಕೇರಳದ ಬಹಳಷ್ಟು ಮನೆಗಳಲ್ಲಿ ಪಂಜರದಲ್ಲಿ ಗಿಳಿಯನ್ನು ಸಾಕಿರುವುದು ಕಂಡಿದ್ದೇನೆ. ಆದರೆ ಒಂದು ವಿಚಾರ ಸಂಕಿರಣದ ವೇದಿಕೆಯ ಮೇಲೆ ಈ ಪಂಜರವೇಕೆ? ಎಂದು ನಾವು ತುಂಬ ಗುಸುಗುಸು ಮಾತಾಡಿಕೊಂಡಿದ್ದೆವು.

ವೇದಿಕೆಯಲ್ಲಿ ವಾಸುದೇವನ್ ನಾಯರ್ ರವರು ಇದ್ದರು. ಮಲಯಾಳದ ಅಪೂರ್ವ ಲೇಖಕ. ಅವರು ತಮ್ಮ ಸಾಹಿತ್ಯಕ ಒಲವುಗಳನ್ನು ಕುರಿತು ಮಾತಾಡಲು ಪ್ರಾರಂಭಿಸಿದ್ದರು. ಅಷ್ಟರಲ್ಲಿ ಗಿಳಿಯ ಹಿಂಸೆಯನ್ನು ತಾಳಲಾರದೆ ಅಥವಾ ಅದು ನನ್ನ ಮನಸ್ಸಿನಲ್ಲಿ ಹಿಂಸೆಯನ್ನು ಕೆದಕುತ್ತಿತ್ತೇನೋ ಕಾಣೆ. ಪಕ್ಕದಲ್ಲಿ ಕೂತಿದ್ದ ಕೇರಳದ ಮಹಾನ್ ಸಾಹಿತಿಗಳಾದ ತಕಳಿ ಶಿವಶಂಕರ ಪಿಳ್ಳೆ ಮತ್ತು ಕಮಲಾದಾಸ್ರವರ ಬಳಿ ಇಟ್ ಈಸ್ ವೆರಿ ಡಿಫಿಕಲ್ಟ್ ಟು ಟಾಲರೇಟ್ ಎಂದೆ.

ಅದಕ್ಕೆ ಕಮಲಾದಾಸ್ ನಗುತ್ತ ನಾವು ಕೇರಳದಲ್ಲಿ ಸಹಿಸಿಕೊಳ್ಳುವುದಿಲ್ಲ. ಅದನ್ನು ಮತ್ತಷ್ಟು ಕಲ್ಟಿವೇಟ್ ಮಾಡುತ್ತಲೇ ಹೋಗುತ್ತಿದ್ದೇವೆ. ಇನ್ನೊಂದು ಅರ್ಥದಲ್ಲಿ ನಾವು ಹೆಣ್ಣುಮಕ್ಕಳು ಪಂಜರದ ಗಿಳಿಗಳೇ ಎಂದಾಗ ಅತ್ಯಂತ ವಯೋವೃದ್ಧರಾಗಿದ್ದ ತಕಳಿಯವರು ಇದು ನಿಜವೆನ್ನುವಂತೆ ತಲೆದೂಗಿದರು. ಸಾಮಾನ್ಯವಾದ ಬಿಳಿಯ ಪಂಚೆಯನ್ನು ಧರಿಸಿದ್ದ ತಕಳಿಯವರು ಅಷ್ಟೇ ಸಾಮಾನ್ಯವಾದ ವಸ್ತ್ರವನ್ನು ತಮ್ಮ ಬೆತ್ತಲೆಯ ಮೈಮೇಲೆ ಹಾಕಿಕೊಂಡಿದ್ದರು. ಕಮಲಾದಾಸ್ ರವರಂತೂ ಅತ್ಯಂತ ಸರಳವಾದ ಕಾಟನ್ ಸೀರೆ. ವಿಷಾದ ತುಂಬಿದ ಬಟ್ಟಲುಗಣ್ಣಿನ ನಿರಾಡಂಬರ ಕಪ್ಪು ಸುಂದರಿ. ಅವರ ಪಕ್ಕದಲ್ಲಿ ಒರಿಯಾದ ಖ್ಯಾತ ಲೇಖಕಿ ಪ್ರತಿಭಾ ರಾಯ್ರವರು ಟ್ರಿಮ್ಮಾಗಿ ಡ್ರೆಸ್ ಮಾಡಿಕೊಂಡು ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದರು. ಅತ್ಯಂತ ಲವಲವಿಕೆಯ ಲೇಖಕಿ. ಪಂಜರದ ವಿಷಯದಲ್ಲಿ ಸಹಮತವನ್ನು ವ್ಯಕ್ತಪಡಿಸಿದರು. ಕೊನೆಗೆ ಸ್ವಲ್ಪ ದೂರದಲ್ಲಿ ನಮ್ಮ ಜಿ.ಎಸ್. ಶಿವರುದ್ರಪ್ಪನವರು ಕೂತಿದ್ದರು. ಹಿಂದಿರುಗಿ ಅವರಿಗೆ ವಿಷಯ ತಿಳಿಸಿದೆ. ಹಿಂದಿಯ ಅರ್ಥಪೂರ್ಣ ಲೇಖಕ ಮತ್ತು ಚಿಂತಕ ನಿರ್ಮಲವಮರ್ಾರವರ ಬಳಿ ಏನೋ ಮಾತಾಡುತ್ತಿದ್ದ ಅವರು ಪಂಜರವನ್ನು ತೆಗೆಸಲು ಚೀಟಿ ಕಳಿಸಿ ಎಂದರು. ನಾನು ಧೈರ್ಯ ಮಾಡಿ ಚೀಟಿಯನ್ನು ವಾಸುದೇವನ್ ನಾಯರ್ರವರ ಕೈಗೆ ತಲುಪಿಸಿದೆ. ಅವರು ಅದನ್ನು ನೋಡಿ ಸಾರಿ, ನಾನು ಗಂಭೀರವಾಗಿ ಪಂಜರವನ್ನು ಗಮನಿಸಲಿಲ್ಲ ಎಂದು ತುಂಬ ಚೂಟಿಯಿಂದ ಓಡಾಡಿಕೊಂಡಿದ್ದ ಯುವ ಕವಿ ಬಾಲಚಂದ್ರ ಚೂಡಿಕಾಡ್ರವರನ್ನು ಕರೆಸಿ ತೆಗೆಸಿದರು. ಬಾಲಚಂದ್ರರವರಿಗೆ ಕಮಲಾದಾಸ್ರವರನ್ನು ಕಂಡರೆ ತುಂಬ ಸಲಿಗೆ. ಅದಕ್ಕೇ ಸಿಕ್ಕಿದಾಗಲೆಲ್ಲ ತುಂಬಾ ತಮಾಷೆ ಮಾಡುತ್ತಿದ್ದ. ಯಾಕೆಂದರೆ ಹೊಸ ಪೀಳಿಗೆಯ ಲೇಖಕರ ಜೊತೆ ಕಮಲಾದಾಸ್ ತುಂಬ ಆಪ್ತವಾದ ಸಂಪರ್ಕವನ್ನಿಟ್ಟುಕೊಂಡಿದ್ದರು.ಕಾಲು ಗಂಟೆ ವೇದಿಕೆ ಸ್ತಬ್ಧಗೊಂಡಿತು. ಅದೇ ಸಮಯಕ್ಕೆ ಎಲ್ಲರೂ ಫೈನ್ ಎಂದು ಚಪ್ಪಾಳೆ ತಟ್ಟಿದರು.

ಮಧ್ಯಾಹ್ನ ಊಟದ ಸಮಯದಲ್ಲೂ ಪಂಜರದ ಗಿಳಿಯ ವಿಷಯ ಪ್ರಸ್ತಾಪವಾಯಿತು. ನಂತರ ಶಿವರಾಮ ಕಾರಂತರಿದ್ದ ಕೊಠಡಿಗೆ ಶಾಂತಿನಾಥ ದೇಸಾಯಿಯವರ ಜೊತೆ ಸುನಿಲ್ ಗಂಗೋಪಾಧ್ಯಾಯ, ಕಮಲಾದಾಸ್, ಪ್ರತಿಭಾ ರಾಯ್ ಹಾಗೂ ನವನೀತ್ ಸೇನ್ ರವರು ಬಂದರು. ಆಗ ಕಾರಂತರು ಊಟ ಮಾಡುತ್ತಿದ್ದರು. ಕಾರಂತರನ್ನು ಶ್ರೀಪತಿ ತಂತ್ರಿಯವರು ನೋಡಿಕೊಳ್ಳುತ್ತಿದ್ದರು. ಊಟದ ಮಧ್ಯದಲ್ಲಿಯೇ ನಾನಾ ರೀತಿಯ ವಿಷಯಗಳು ಚಚರ್ೆಗೆ ಗ್ರಾಸವಾಯಿತು. ಕಾರಂತರು ಎಷ್ಟು ಗಂಭೀರ ಲೇಖಕರೋ ಅಷ್ಟೇ ಹರಟೆಮಲ್ಲರಾಗಿದ್ದರು. ನವನೀತ್ ಸೇನ್ ರವರಂತೂ ತುಂಬ ಮಾತಿನ ಮಲ್ಲಿಯಾಗಿದ್ದರು. ಕಮಲಾದಾಸ್ ರವರಂತೂ ಎಷ್ಟು ಮೌನಿಯೋ, ಅಷ್ಟೇ ಪುರುಷ ಲೇಖಕರನ್ನು ನವುರಾಗಿ ಛೇಡಿಸಿ ಮಾತಾಡುತ್ತಿದ್ದರು. ಆ ಒಂದು ವಾರದಲ್ಲಿ ಕಮಲಾದಾಸ್, ಪ್ರತಿಭಾ ರಾಯ್ ಹಾಗೂ ನವನೀತ್ ಸೇನ್ ರವರು ಸಾಮಾನ್ಯವಾಗಿ ಒಟ್ಟೊಟ್ಟಿಗೆ ಓಡಾಡುತ್ತ ಜೋಕ್ ಮಾಡುತ್ತಿದ್ದರು. ಇವರ ಮಧ್ಯೆ ಆಗಾಗ ಕನ್ನಡದ ಲವಲವಿಕೆಯ ಕವಿಯತ್ರಿ ಪ್ರತಿಭಾ ನಂದಕುಮಾರ್ರವರು ಈ ಅಪೂರ್ವ ಸಮಾವೇಶದಲ್ಲಿ ಕಾರ್ಯಕತರ್ೆಯ ರೀತಿಯಲ್ಲಿ ಓಡಾಡಿಕೊಂಡಿದ್ದರು.

ಸಮಾವೇಶದ ಕೊನೆಯ ದಿವಸ ನಮ್ಮ ಶಿವರಾಮಕಾರಂತರು ಸಮಾರೋಪ ಭಾಷಣ ಮಾಡಿದರು. ಸುಮಾರು ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಎಷ್ಟೊಂದು ಸಾಂಸ್ಕೃತಿಕ ವಿಷಯಗಳನ್ನು ಪ್ರಸ್ತಾಪಿಸಿದರು. ತಕಳಿಯವರಂತೂ ಅವರ ಒಂದೊಂದು ಮಾತಿಗೂ ತಲೆದೂಗುತ್ತಿದ್ದರು. ಕಾರಂತರ ಮಾತನ್ನು ತುಂಬ ಮೆಚ್ಚಿಕೊಂಡು ಪ್ರತಿಭಾ ರಾಯ್ ರವರ ಬಳಿ ಪ್ರತಿಕ್ರಿಯಿಸುತ್ತಿದ್ದಾಗ ; ತುತರ್ುಪರಿಸ್ಥಿತಿಯ ಸಮಯದಲ್ಲಿ ಕೊಚ್ಚಿನ್ ನಲ್ಲಿ ದೇಶಾಭಿಮಾನಿ ಪತ್ರಿಕೆಯ ಆಶ್ರಯದಲ್ಲಿ ತುತರ್ುಪರಿಸ್ಥಿತಿ ವಿರೋಧಿ ಲೇಖಕರ ರಾಷ್ಟ್ರೀಯ ಸಮಾವೇಶದಲ್ಲಿ ಕಾರಂತರ ಉದ್ಘಾಟನಾ ಭಾಷಣವನ್ನು ಪ್ರಸ್ತಾಪಿಸಿದೆ. ಹಾಗೆಯೇ ಅದಕ್ಕೆ ಅತ್ಯಂತ ಸೂಕ್ಷ್ಮ ಸಂವೇದನೆಯ ರಾಜಕೀಯ ಮುತ್ಸದ್ಧಿ ಇ.ಎಂ.ಎಸ್. ನಂಬೂದರಿ ಪಾದ್ ರವರು ಪುಳಕಿತರಾಗಿ ಪ್ರತಿಕ್ರಿಯಿಸಿದ್ದನ್ನ ವಿವರಿಸಿದೆ. ಅದಕ್ಕೆ ಆ ಇಬ್ಬರು ಲೇಖಕಿಯರು ಹಿ ಈಸ್ ರಿಯಲಿ ಲವ್ವೇಬಲ್ ರೈಟರ್ ಎಂದರು. ಕಾರಂತರ ಇಂಗ್ಲೀಷ್ ಭಾಷಣದ ಓಘವೂ ಅಷ್ಟೇ ತೀವ್ರವಾಗಿತ್ತು. ಇಂಥ ಅಪೂರ್ವ ಸಮಾವೇಶವನ್ನು ಅನಂತಮೂತರ್ಿಯವರು ತಮ್ಮ ಅಧ್ಯಕ್ಷ ಅವಧಿಯಲ್ಲಿ ನಡೆಸಿದ ಸ್ಮರಣೀಯ ಕಾರ್ಯಕ್ರಮ. ಇದನ್ನು ಪ್ರಾದೇಶಿಕ ಕಾರ್ಯದಶರ್ಿಯಾಗಿ ಗೆಳೆಯ ಅಗ್ರಹಾರ ಕೃಷ್ಣಮೂತರ್ಿ ಅತ್ಯಂತ ಕ್ರಿಯಾಶೀಲತೆಯಿಂದ ಓಡಾಡಿ ವ್ಯವಸ್ಥೆ ಮಾಡಿದ್ದ. ಭಾರತದ ಉದ್ದಗಲದಿಂದ ಎಂತೆಂಥ ಸಾಹಿತ್ಯಕ ಮನಸ್ಸುಗಳು ಅಲ್ಲಿ ಆಪ್ತಗೊಂಡಿದ್ದುವು. ಮರಾಠಿಯ ಉಚಲ್ಯ ಎಂಬ ಅದ್ಭುತ ಕಾದಂಬರಿಯ ಲೇಖಕ ಲಕ್ಷ್ಮಣರಾವ್ ಗಾಯಕ್ವಾಡ್ರವರಿಗೆ ಎಷ್ಟು ಜನ ಲೇಖಕರು ಮುತ್ತಿಕೊಂಡಿದ್ದರು. ಯಾಕೆಂದರೆ ಆತ ಅಂಥ ವಿಚಿತ್ರ ಹಿನ್ನೆಲೆಯಿಂದ ಬಂದಿದ್ದರು. ಗೆಳೆಯ ಡಿ.ಆರ್. ನಾಗರಾಜನಂತೂ ಒಂದು ರೀತಿಯ ವಿರಹವೇದನೆಯಿಂದ ಅವನ ಮಾಮೂಲಿ ಲವಲವಿಕೆಯನ್ನೇ ಕಳೆದುಕೊಂಡು ಎಲ್ಲೋ ಮೂಲೆಯಲ್ಲಿ ನಿಂತೋ ಅಥವಾ ಪೆರಿಯಾರ್ ನದಿಯ ದಡದ ಬಿಸಿಯ ಮರಳಿನ ಮೇಲೆ ನಡೆದಾಡುತ್ತ ತನ್ನ ಹೆಜ್ಜೆ ಗುರುತುಗಳ ವ್ಯಾಪ್ತತೆಯನ್ನು ಅಥರ್ೈಸಿಕೊಳ್ಳುವಲ್ಲಿ ತಲ್ಲೀನನಾಗಿದ್ದ.

ಕಮಲಾದಾಸ್ ರವರ ಸಾಹಿತ್ಯವನ್ನು ಕಳೆದ ಮೂರೂವರೆ ದಶಕಗಳಿಂದ ಅನುವಾದದ ಮೂಲಕ ಓದುತ್ತ ಬಂದಿದ್ದೇನೆ. ಪ್ರತಿಯೊಂದು ಬಾರಿ ಆಕೆಯ ಕಥೆಯನ್ನೋ, ಕವನವನ್ನೋ ಓದಿದಾಗ; ವಿಷಾದಪೂರಿತ ಒಂದು ರೀತಿಯ ಥ್ರಿಲ್ನ್ನು ಅನುಭವಿಸುತ್ತ ಬಂದಿದ್ದೇನೆ. ಈ ಅನುಭವದ ಪ್ರೇರಣೆಯಿಂದಲೇ ಅವರ ಬೆಂಗಳೂರಿನ ಎರಡು ಮೂರು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನ ಸಂವಾದದ ಕಾರ್ಯಕ್ರಮದಲ್ಲಿ ಎಷ್ಟು ಬಿಚ್ಚು ಮನಸ್ಸಿನಿಂದ ಮಾತಾಡಿದರು. ಆ ಮಾತುಗಳ ಹಿಂದೆ ಎಂಥ ವೇದನೆ ಅಡಕವಾಗಿತ್ತು. ಆದರೆ ನಮ್ಮ ಜನ ಇದನ್ನು ಗ್ರಹಿಸುವುದೇ ಇಲ್ಲ. ಪೂರ್ವನಿಧರ್ಾರಿತ ತೀಮರ್ಾನಗಳಿಂದ ನಾನಾ ರೀತಿಯ ಚಿಲ್ಲರೆ ಪ್ರಶ್ನೆಗಳನ್ನು ಕೇಳಲು ಹೋಗುತ್ತಿದ್ದರು. ಕಮಲಾದಾಸ್ ತುಂಬ ಚೆಲ್ಲು ಚೆಲ್ಲು ಹೆಂಗಸೆಂದು. ಇಂಥ ಹಿಂಸೆಯನ್ನು ಅವರು ಹೋದ ಕಡೆಯಲ್ಲೆಲ್ಲ ಅನುಭವಿಸಿದ್ದಾರೆ. ಆದರೆ ಆಕೆ ನಾನು ಆ ರೀತಿಯವಳಲ್ಲ, ನನ್ನ ಬರವಣಿಗೆಯಲ್ಲಿ ಅಂಥದ್ದು ಇಲ್ಲ ಎಂದು ಅಪೀಲ್ ಮಾಡಿಕೊಂಡರೂ ಪುರುಷ ಪ್ರಧಾನ ಸಮಾಜ ಕಟಕಟೆಯಲ್ಲಿ ನಿಲ್ಲಿಸಲು ಸದಾ ತುದಿಗಾಲಿನಲ್ಲಿರುತ್ತದೆ. ಇದನ್ನು ಅರಿತ ಕಮಲಾದಾಸ್ರವರು ತಮ್ಮ ಬದುಕು ಮತ್ತು ಬರಹದ ಮೂಲಕ ನಾನಾ ರೀತಿಯ ಷಾಕ್ ಟ್ರೀಟ್ ಮೆಂಟ್ಗಳನ್ನು ಕೊಟ್ಟಿದ್ದಾರೆ. ಸಾಹಿತ್ಯಕ ಪರಿಧಿಯಲ್ಲಿಯೇ. ಎಷ್ಟೋ ಮಂದಿ ನಮ್ಮ ಲೇಖಕರು ಗುಮಾನಿಗಳಿಂದಲೇ ಕಮಲಾದಾಸ್ರವರ ಅಲ್ಪಸ್ವಲ್ಪ ಸಾಹಿತ್ಯವನ್ನು ಓದಲು ಪ್ರಯತ್ನಿಸಿರುವುದಿಲ್ಲ. ಕೇವಲ ತಮ್ಮ ಬರವಣಿಗೆಯನ್ನೇ ಮೋಹಿಸಿಕೊಂಡು ಬದುಕುವ ಎಂತೆಂಥ ಲೇಖಕರು ನಮ್ಮ ನಡುವೆ ಇದ್ದಾರೆ. ಅವರೆಲ್ಲ ಮಹಾತ್ಮರ ರೀತಿಯಲ್ಲಿ ಷರಾ ಎಳೆಯಲು ಸಿದ್ಧರಾಗಿರುತ್ತಾರೆ. ಇಂಥವರಿಂದ ಕಮಲಾದಾಸ್ ರವರಂಥ ಲೇಖಕಿಯರಿಗೆ ತುಂಬ ಅನ್ಯಾಯವಾಗಿದೆ.

ಇತ್ತೀಚೆಗೆ ಒಂದು ಅನುಭವವಾಯಿತು. ಇದನ್ನು ಕೇವಲ ಪ್ರಾಸಂಗಿಕವಾಗಿ ಪ್ರಸ್ತಾಪಿಸುತ್ತಿರುವೆ. ಕೇಂದ್ರ ಸಾಹಿತ್ಯ ಅಕಾದೆಮಿಯ ಶಿಶು ಸಾಹಿತ್ಯ ಪ್ರಶಸ್ತಿಯ ಆಯ್ಕೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ಆಯಾ ಭಾಷೆಯ ಆಯ್ಕೆ ಸಮಿತಿ ಸದಸ್ಯರು ಸೇರಿದ್ದರು. ಈ ಶಿಶು ಸಾಹಿತ್ಯ ಪ್ರಶಸ್ತಿಯನ್ನು ಮೊದಲನೆಯ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಲು ಪ್ರಾರಂಭದ ಸಭೆ. ಗೆಳೆಯ ಅಗ್ರಹಾರ ಕೃಷ್ಣಮೂತರ್ಿ ಅರ್ಧ ಗಂಟೆ ಯಾಕೆ ಕೊಡಬೇಕಾಗಿದೆ ಎಂದು ತುಂಬ ಮಾಮರ್ಿಕವಾಗಿ ವಿವರಿಸಿ ನಮ್ಮನ್ನು ಬಿಟ್ಟು ಎದ್ದು ಹೋದ. ಕನ್ನಡದಿಂದ ಪ್ರೊ. ಗಿರಡ್ಡಿ ಗೋವಿಂದರಾಜ್ ಮತ್ತು ನಾನು ಹಾಗೂ ಸಂಚಾಲಕರಾಗಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಇದ್ದರು. ಹೀಗೆಯೇ ಮಲಯಾಳಂ ಮತ್ತು ತೆಲುಗು ಲೇಖಕರು ನಾವು ಖಾಸಗಿಯಾಗಿ ನಾನಾ ಸಾಹಿತ್ಯಕ ವಿಷಯಗಳನ್ನು ಚಚರ್ಿಸುತ್ತಿರುವಾಗ; ಮಲಯಾಳಂ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ವತ್ಸಲಾರವರೂ ಇದ್ದರು, ತುಂಬ ಸೆನ್ಸಿಟಿವ್ ಲೇಖಕಿ. ಆಗ ತೆಲುಗಿನ ಲೇಖಕರೊಬ್ಬರು ಹಿರೋಹಿಕ್ಕಾಗಿ ಕಮಲಾದಾಸ್ ತುಂಬಾ ಸೆಕ್ಸೀ ಲೇಖಕಿ ಅಲ್ಲವಾ? ಎಂದು ಪರತಿಕ್ರಿಯಿಸಿದರು. ಅದಕ್ಕೆ ವತ್ಸಲಾರವರು ತಬ್ಬಿಬ್ಬಾದರು. ಅದಕ್ಕೆ ನಾನು ಇಲ್ಲ ಆಕೆ ಆ ರೀತಿ ಲೇಖಕಿಯಲ್ಲ, ನೀವು ಕಮಲಾದಾಸ್ ರವರ ಸಾಹಿತ್ಯವನ್ನು ಎಷ್ಟು ಓದಿದ್ದೀರಿ? ಎಂದು ಕೇಳಿದೆ. ಏನೂ ಓದಿಲ್ಲ, ಅವರಿವರು ಹೇಳಿರುವುದನ್ನು ಕೇಳಿಸಿಕೊಂಡಿದ್ದೇನೆ ಎಂದರು. ನಾನು ಸ್ವಲ್ಪ ಸಿಟ್ಟಿನಿಂದಲೇ ದಿಸ್ ಈಸ್ ವೆರಿ ಬ್ಯಾಡ್ ಎಂದೆ. ಇದಕ್ಕಿಂತ ಮೊದಲು ನನಗೆ ತೆಲುಗು ಚೆನ್ನಾಗಿ ಗೊತ್ತು ಎಂದು ತಮ್ಮ ಕ್ರಾಂತಿಕಾರಿ? ಸಾಹಿತ್ಯದ ಬಗ್ಗೆ ಹೇಳಲು ಶುರು ಮಾಡಿದ್ದರು.

ಕೊನೆಗೆ ನಾವು ಮೂರು ಭಾಷೆಯ ತೀಪರ್ುಗಾರರು ಪ್ರತ್ಯೇಕಗೊಂಡು ಶಿಶು ಸಾಹಿತ್ಯ ಕುರಿತು ಚಚರ್ಿಸಿ ಇಂಥವರಿಗೆ ಪ್ರಶಸ್ತಿ ಕೊಡಬಹುದೆಂದು ತೀಮರ್ಾನಿಸಿ ಟಿಪ್ಪಣಿಯನ್ನು ಇಂಗ್ಲೀಷಿನಲ್ಲಿ ಸಿದ್ಧಪಡಿಸಿದ್ದೆವು. ಇದಾದ ಮೇಲೆ ಮತ್ತೆ ಮಲಯಾಳಂನ ವತ್ಸಲಾರವರನ್ನು ಹಾಗೂ ಇತರೆ ಇಬ್ಬರು ಲೇಖಕರ ಜೊತೆ ಒಂದರ್ಧ ಗಂಟೆ ಬೇರೆ ಬೇರೆ ವಿಷಯ ಕುರಿತು ಮಾತಾಡಲು ಸಾಧ್ಯವಾಯಿತು. ಆಗ ಅನಂತಮೂತರ್ಿ, ಲಂಕೇಶ್, ಕೃಷ್ಣ ಆಲನಹಳ್ಳಿ, ದೇವನೂರು ಮಹಾದೇವ, ಡಿ.ಆರ್. ನಾಗರಾಜ್, ಡಾ|| ಸಿದ್ಧಲಿಂಗಯ್ಯ, ಹೆಚ್.ಎಸ್. ಶಿವಪ್ರಕಾಶ್, ತಿರುಮಲೇಶ್ ಮತ್ತು ವೈದೇಹಿಯವರನ್ನು ಕುರಿತಂತೆ ಒಂದಷ್ಟು ಮಾತುಕತೆ ನಡೆಯಿತು. ನಂತರ ಊಟದ ಸಮಯದಲ್ಲೂ ಇದು ಸ್ವಲ್ಪ ಮಟ್ಟಿಗೆ ಮುಂದುವರೆಯಿತು. ಆದರೆ ಆ ತೆಲುಗು ಲೇಖಕನ ಜೊತೆ ಮಾತಾಡಲು ನನಗೆ ಉತ್ಸಾಹವೇ ಬರಲಿಲ್ಲ. ಆತ ಎಲ್ಲೋ ಘೋಷಣೆಗಳ ನಡುವೆ ಸಿಕ್ಕಿಕೊಂಡಿರುವ ತೇಪೆದಾರಿ ಲೇಖಕ ಅನ್ನಿಸಿಬಿಡ್ತು.

ಕಮಲಾದಾಸ್ರವರಂಥ ಲೇಖಕಿ ಅಥವಾ ಕಲಾವಿದರು ತಮ್ಮ ಬದುಕಿನ ಸುತ್ತ ಏನೇನೋ ಇದೆ ಅದನ್ನೆಲ್ಲ ಬಾಚಿ ತಬ್ಬಿಕೊಂಡು ತಮ್ಮದಾಗಿಸಿಕೊಳ್ಳುವ ವ್ಯಕ್ತಿತ್ವದವರು. ಇಂಥವರು ಸ್ವಾಭಾವಿಕವಾಗಿಯೇ ವೇಗದ ಬದುಕಿನ ಹಾದಿಯಲ್ಲಿರುತ್ತಾರೆ. ಈ ದೃಷ್ಟಿಯಿಂದ ನನಗೆ ತಕ್ಷಣ ನೆನಪಿಗೆ ಬರುವುದು ಕಲಾವಿದೆ ಅಮೃತಾ ಷೇರ್ ಗಿಲ್, ಲೇಖಕಿ ಅಮೃತಾ ಪ್ರೀತಮ್, ರಾಜಲಕ್ಷ್ಮಿ ಎನ್. ರಾವ್, ಸಿಲ್ವಿಯಾ ಪ್ಲಾತ್, ರೋಸಾ ಲುಕ್ಸಂಬಗರ್್, ಸಿಮನ್ ವೇಲ್ ಮುಂತಾದವರು. ಇವರ ಬದುಕಿನಲ್ಲಿ ಎಷ್ಟೊಂದು ತೀವ್ರತೆ ಇರುತ್ತದೆ. ಈ ಗುಂಪಿಗೆ ಮೇಲ್ ಸ್ತರದಲ್ಲಿ ಅಕ್ಕಮಹಾದೇವಿಯನ್ನು ಸೇರಿಸಬಹುದೇನೋ ಅನ್ನಿಸುತ್ತದೆ. ಇಲ್ಲಿ ಉದ್ದೇಶಪೂರ್ವಕವಾಗಿ ನಮ್ಮ ವೈದೇಹಿಯವರನ್ನು ಮಹಾಶ್ವೇತಾದೇವಿ ಮತ್ತು ಐರಾವತಿ ಕವರ್ೆಯಂಥವರನ್ನ ಸೇರಿಸಿಲ್ಲ. ಯಾಕೆಂದರೆ ಅವರಿಗಿಂತ ಇವರು ಸ್ವಲ್ಪ ತಾಳ್ಮೆಯ ಲೇಖಕಿಯರು. ಇದೇ ವಿಷಯ ಕುರಿತು ಒಂದೆರಡು ವರ್ಷಗಳ ಹಿಂದೆ ಲೇಖಕಿ ಲತಾಗುತ್ತಿಯವರ ಮನೆಯಲ್ಲಿ ಬೇರೆ ಬೇರೆ ಕಡೆಯಿಂದ ಬಂದಿದ್ದ ಲೇಖಕಿಯರ ಸಂಘದ ಸದಸ್ಯರನ್ನುದ್ದೇಶಿಸಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೆ. ಯಾಕೆಂದರೆ ಹೀಗೆ ತೀವ್ರರೀತಿಯಲ್ಲಿ ಬದುಕುವಂಥ ಲೇಖಕಿಯರು ಮತ್ತು ಕಲಾವಿದೆಯರಿಗೆ ನಾನಾ ರೀತಿಯ ಸಂಗತಿಗಳು ಮುಖಾಮುಖಿಯಾಗುತ್ತಿರುತ್ತದೆ. ಇಂಥ ಸಮಯದಲ್ಲಿ ಅವರಲ್ಲಿ ಕೊರಗು ಅಥವಾ ವಿಷಾದ ಒಟ್ಟು ಬರವಣಿಗೆಯಲ್ಲಿ ಸ್ಥಾಯಿಯಾಗಿರುತ್ತದೆ. ಆ ಕೊರಗನ್ನು ನಾವು ಸೆಂಟಿಮೆಂಟಲ್ ಎಂದು ಕರೆದು ಪಕ್ಕಕ್ಕೆ ಸರಿಸಿಬಿಟ್ಟರೆ ನಮ್ಮ ಚಿಂತನೆಯಲ್ಲಿ ಹೈರಾಣವಿರಬಹುದು. ಹಾಗೆ ನೋಡಿದರೆ ನಾನು ಎಷ್ಟೋ ಬಾರಿ ಅಮೃತಾ ಪ್ರೀತಮ್ ಮತ್ತು ಕಮಲಾದಾಸ್ ರವರ ಬರವಣಿಗೆಯನ್ನು ಅಕ್ಕಪಕ್ಕ ಇಟ್ಟುಕೊಂಡು ನನ್ನ ಕುತೂಹಲಕ್ಕಾಗಿ ಆಗಾಗ ಓದಿಕೊಂಡಿದ್ದೇನೆ. ಇದರಿಂದ ಅವರನ್ನು ಜಡ್ಜ್ ಮಾಡಿಕೊಳ್ಳುವುದಕ್ಕಲ್ಲ; ಅವರ ಲೋಕವನ್ನು ಅರಿಯುವುದಕ್ಕೆ. ಆಧುನಿಕ ಸೆನ್ಸಿಬಿಲೀಟ್ಸ್ ಮೂಲಕ ಸೆನ್ಸಿಟೀವ್ ಆದವರು ಹೇಗೆ ತಮ್ಮ ಸಾಹಿತ್ಯದ ಲೋಕವನ್ನು ಕಟ್ಟಿಕೊಳ್ಳಬಹುದು ಎಂಬ ಕಾರಣಕ್ಕಾಗಿ.

ಇತ್ತೀಚೆಗೆ ಒಂದೆರಡು ತಿಂಗಳ ಹಿಂದೆ ಲಂಕೇಶ್ ಪ್ರಕಾಶನದಿಂದ ಕೆ.ಕೆ. ಗಂಗಾಧರನ್ ಅನುವಾದಿಸಿರುವ ಕಮಲಾ ದಾಸ್ರವರ ಹದಿನೇಳು ಕಥೆಗಳ ಸಂಕಲನ ಬಂದಿದೆ. ಆ ಸಂಕಲನದ ಒಟ್ಟು ಕಥೆಗಳನ್ನು ಒಂದೇ ಬಾರಿಗೆ ಓದಿ ತಲ್ಲಣಗೊಂಡಿದ್ದೆ. ನಮ್ಮ ನಡುವೆಯೇ ಬದುಕಿ ಹೋದ ಒಬ್ಬ ಮಹತ್ವಪೂರ್ಣ ಲೇಖಕಿ ಎಷ್ಟೊಂದು ಒಳಗುದಿಗಳನ್ನು ಹೊತ್ತು ತಿರುಗಿದರು ಅನ್ನಿಸಿತು. ಒಂದು ಹಂತದಲ್ಲಿ ಈ ಕಥೆಗಳನ್ನು ಹಾಗೂ ಅವರ ನನ್ನ ಕಥೆ ಮತ್ತು ಶ್ರೀದೇವಿ ನಾಯರ್ ರವರ ದೀರ್ಘ ಸಂದರ್ಶನವನ್ನಿಟ್ಟುಕೊಂಡು ಮತ್ತೊಮ್ಮೆ ಓದಲು ಪ್ರಯತ್ನಿಸಿದ್ದೆ. ಈ ಪ್ರಯತ್ನದ ಮಧ್ಯದಲ್ಲಿಯೇ ಇಂಥ ಲೇಖಕಿಯನ್ನು ಒಂದು ವಾರ 1994ರಲ್ಲಿ ಮತ್ತೆ ಮತ್ತೆ ಎದುರುಗೊಂಡು ಅವರ ಬಟ್ಟಲುಗಣ್ಣಿನಲ್ಲಿ ತುಂಬಿದ್ದ ವಿಷಾದವನ್ನು ಮತ್ತು ಬದುಕಿನಲ್ಲಿ ತುಂಬ ಸೋತವರಂತೆ ಕಂಡ ನಿಧಾನ ನಡಿಗೆಯಲ್ಲಿ ಏನೇನೋ ಅಥರ್ೈಸಿಕೊಂಡಿದ್ದೇನೆ. ಆ ನಡಿಗೆ ಮತ್ತು ನೋಟ ನೆನಪಾದಾಗಲೆಲ್ಲ ಎದುರಾಗುತ್ತದೆ. ಅದರಲ್ಲೂ ಕೇರಳದಂಥ ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಿದ್ದರೂ ವಾಮಾಚಾರ ಎಂಬುದು ಎಷ್ಟು ದಟ್ಟವಾಗಿತ್ತು ಎಂಬುದಕ್ಕೆ ಮತ್ತು ಅದರಿಂದ ಏನೇನೋ ನಿಯಂತ್ರಿಸುತ್ತೇವೆ ಎಂಬುದು ನಿಚ್ಚಳವಾಗಿದ್ದ ನೆಲದಲ್ಲಿ ನಿಂತು ಬರೆದವರು ಕಮಲಾದಾಸ್ ರವರು. ಇಲ್ಲಿ ಉದಾಹರಣೆಗೆ : ನನ್ನ ಕಂಡರೆ ಆಗದವರು ನನ್ನ ಅಂಗಳದಲ್ಲಿ ಮಂತ್ರಿಸಿದ ಪಾತ್ರೆಯನ್ನು ಹೂತರು. ಮಾಂತ್ರಿಕನ ಶಕ್ತಿಗಳಿಂದ ನನ್ನನ್ನು ಕೊಳ್ಳುವ ಆಶಯ ಇವರದಾಗಿತ್ತು. ಕೆಲಸದವರು ನನಗಿತ್ತ ಎಚ್ಚರಿಕೆಯನ್ನು ನಾನು ಕಡೆಗಣಿಸಿದೆ. ಒಮ್ಮೆ ಬಾವಿಕಟ್ಟೆಯ ಮೇಲೆ ತಲೆ ಕತ್ತರಿಸಲ್ಪಟ್ಟ ಬೆಕ್ಕೊಂದನ್ನು ಕಂಡೆ. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಬೆಕ್ಕಿನ ದೇಹದಲ್ಲಿ ನನ್ನ ಹೆಸರಿದ್ದ ತಾಮ್ರದ ತಗಡು, ಒಂದು ಮೊಟ್ಟೆ, ಕುಂಕುಮವನ್ನು ಹೋಲುವ ಹುಡಿ ಹಾಗೂ ಅರಿಶಿನಗಳನ್ನು ಕಂಡೆ. ನನ್ನ ಶತ್ರುಗಳನ್ನು ಹೆದರಿಸಲು ನಾನು ಏನಾದರೂ ಮ್ಯಾಜಿಕ್ ಮಾಡಬೇಕೆಂದುಕೊಂಡೆ. ಬಾಲ್ಕನಿಯ ಗೋಡೆಯ ಮೇಲೆ ಕಾಳಿಯ ಚಿತ್ರ ತೂಗು ಹಾಕಿದೆ. ಮನುಷ್ಯರ ಕರುಳನ್ನು ಹೋಲುವ ಕೆಂಪು ಹೂಮಾಲೆಗಳನ್ನು ಹಾಕಿ ಪಟವನ್ನು ಅಲಂಕರಿಸಿದೆ. ಫಲರ್ಾಂಗು ದೂರದ ನನ್ನ ಭತ್ತದ ಗದ್ದೆಯ ಅಂಚಿನಲ್ಲಿ ಹೋಗುವ ಯಾರಿಗಾದರೂ ಭಯಾನಕ ವಿಚಿತ್ರ ಕೆಂಪು ಹಾಗೂ ದೇವಿ ಕಾಳಿಯ ಚಿತ್ರ ಕಾಣುತ್ತಿತ್ತು ಎಂದು ಎದೆಗಾರಿಕೆಯನ್ನು ತುಂಬಿಕೊಳ್ಳುವ ಇವರು ಏಕೆಂದರೆ ನಾನು ಸತ್ಯಪ್ರಿಯ ಎಂದೂ ಹಾಗೂ ನನ್ನ ಮಗಂದಿರಿಗಿಂತ ನನ್ನ ಬರಹವನ್ನು ಪ್ರೀತಿಸುತ್ತೇನೆಂಬುದು ಹೆತ್ತವರಿಗೆ ನಿಚ್ಚಳವಾಗಿತ್ತು. ಅವಶ್ಯಕತೆ ಬಿದ್ದರೆ ಗಂಡನನ್ನು ಮಕ್ಕಳನ್ನು ಬಿಟ್ಟು ಕೇವಲ ಲೇಖಕಿಯಾಗಿಯೇ ಉಳಿಯಲು ಸಿದ್ಧಳಿದ್ದೆ ಎಂಬುವಲ್ಲಿ ಬರವಣಿಗೆಯನ್ನು ಎಷ್ಟು ಗಾಢವಾಗಿ ಆಪ್ತಗೊಳಿಸಿಕೊಂಡಿದ್ದರು ಎಂಬುದು ಅರಿವಾಗುತ್ತದೆ. ಬದುಕಿನಲ್ಲಿ ಬರೆಯುವುದು ಎಷ್ಟೊಂದಿದೆ ಎಂದು ತಿಳಿದು ತಮ್ಮ ಸಾಹಿತ್ಯ ಲೋಕದಲ್ಲಿ ನಡೆದಾಡಿದವರು. ಇಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಬಿಡಿಸಿಕೊಳ್ಳಬೇಕು ಎಂಬುದು ನಮ್ಮ ಮನಸ್ಸಿನಲ್ಲಿ ಬಂದಿದೆ. ಅದಕ್ಕೆ ನಮ್ಮ ತಹತಹ ಎಂದು ತಿಳಿದವರು. ಈ ತಹತಹ ಹಕ್ಕಿಯ ವಾಸನೆ ಕತೆಯಲ್ಲಿ ಎಷ್ಟೊಂದು ರೀತಿಯಲ್ಲಿ ರೂಪ ಪಡೆದಿದೆ.

ಮಾಧವಕುಟ್ಟಿಯಾಗಿ, ಕಮಲಾದಾಸ್ ಆಗಿ ಹಾಗೂ ಕಮಲಾ ಸುರಯ್ಯ ಆಗಿ ಎಂತೆಂಥದೋ ಲೋಕದೊಳಗೆ ನುಗ್ಗಿದವರು. ನಾವು ಬಾಲ್ಯದಲ್ಲಿ ಚಂದಮಾಮ ಕಥೆಗಳನ್ನು ಹಾಗೂ ಅರೇಬಿಯನ್ ನೈಟ್ಸ್ ಕಥೆಗಳನ್ನು ಓದಿದಂತೆ. ಜೀವನದಲ್ಲಿ ಬಂದು ಹೋಗುವ ಫ್ಯಾಂಟಸಿಗಳು ಆವರಿಸಿಕೊಂಡು ಬಿಡುತ್ತವೆ. ಯಾಕೆಂದರೆ ಈಕೆ ನಮಗೆ ಗೊತ್ತಿಲ್ಲದ ಎಂತೆಂಥ ಬದುಕಿನ ದ್ವೀಪಗಳನ್ನು ತೆರೆದಿಡುತ್ತಾರೆ. ಅದೇ ಸಮಯಕ್ಕೆ ಅತಿ ವಾಸ್ತವವಾಗಿಯೂ ಕೂಡ. ಆದ್ದರಿಂದಲೇ ಎದುರಿಸುವ ದಿಟ್ಟತನ ಸಾಹಿತ್ಯದಲ್ಲಿ ಅನಾವರಣಗೊಳ್ಳುವುದು. ಮಾಧವ ಕುಟ್ಟಿಯನ್ನು ಕೇರಳದ ಜನತೆ ನಿತ್ಯಪ್ರಣಯಿನಿಯನ್ನಾಗಿಸಿದರೆ ಬಾಲಮಣಿಯಮ್ಮನನ್ನು (ಕಮಲಾದಾಸ್ ರವರ ತಾಯಿ) ಮಲಯಾಳ ಕವಿತೆಯ ಅಮ್ಮ ಎಂದು ಹೆಸರಿಟ್ಟು ಕರೆದದ್ದು? ಎಂಬ ಶ್ರೀದೇವಿ ನಾಯರ್ರವರ ಪ್ರಶ್ನೆಗೆ : ಕಮಲಾದಾಸ್ ಹೀಗೆ ಉತ್ತರಿಸುವರು. ಈ ಅಮ್ಮ ಎನ್ನುವ ಕರೆಯೆಲ್ಲ ನನ್ನ ಅಮ್ಮನನ್ನು ಮೂಲೆಗೆ ತಳ್ಳುವ ಉದ್ದೇಶದಿಂದಾಗಿರಬಹುದೆಂದು ನನಗೆ ಅನ್ನಿಸುತ್ತದೆ. ಅಮ್ಮ ಎಂಬ ಕರೆ ಎಂದೂ ಒಂದು ಸ್ವೀಕೃತಿಯ ಲಕ್ಷಣವಲ್ಲ. ಅಮ್ಮನ ಸಾಮಥ್ರ್ಯ ನೋಡಿ ಅಲ್ಲವಲ್ಲ ಯಾರೂ ಅಮ್ಮನನ್ನು ಸ್ವೀಕರಿಸುವುದು? ಮತ್ತೆ, ನಾನು ಪ್ರಣಯಿನಿ ಹೌದು. ಆದರೂ ಹೆಂಡತಿಯೂ, ಅಮ್ಮನೂ ಆಗಿದ್ದೇನೆ. ನಾನು ನನ್ನ ಪತಿಯನ್ನು ಪ್ರೀತಿಸಿದಷ್ಟು ಈ ಜಗತ್ತಿನಲ್ಲಿ ಯಾವ ಹೆಂಡತಿಯೂ ತನ್ನ ಗಂಡನನ್ನು ಪ್ರೀತಿಸಿರಲಾರಳು. ಅವರಿಗೆ ಹುಷಾರಿಲ್ಲದಾಗ ನಾನು ಅವರ ಮಂಚದ ಬಳಿಯಿಂದ ಕದಲದೆ ರಾತ್ರಿ ಹಗಲೆನ್ನದೆ ಶುಶ್ರೂಷೆ ಮಾಡಿದೆ. ಹೆಂಡತಿ ಎನ್ನುವ ನೆಲೆಯಲ್ಲಿ ನನ್ನ ಎಲ್ಲಾ ಕರ್ತವ್ಯಗಳನ್ನು ನೆರವೇರಿಸಿದ್ದೇನೆಂಬ ಸಂಪೂರ್ಣ ತೃಪ್ತಿ ನನಗಿದೆ. ನಾನು ಮೂವರು ಗಂಡುಮಕ್ಕಳ ತಾಯಿಯೂ ಆಗಿದ್ದೇನೆ. ನನ್ನ ಈ ಜೋತು ಬಿದ್ದ ಮೊಲೆಗಳನ್ನು ನೋಡಿದಿರಾ? ಬಹಳ ಕಾಲದ ತನಕ ಮೊಲೆಹಾಲು ಕುಡಿಸಿ ನಾನು ನನ್ನ ಮೂವರು ಮಕ್ಕಳನ್ನು ಬೆಳೆಸಿದ್ದು. ಅದೇ ಕಾರಣದಿಂದ ಇರಬಹುದು ಅವರು ಬುದ್ಧಿವಂತರಾಗಿ ಬೆಳೆದು ಬಂದಿದ್ದು. ಅಲ್ಲವೇ? ಹಾಗಂತ, ನನ್ನನ್ನು ಅಮ್ಮ ಎಂದು ಕರೆದು ಅದುಮಿ ಹಿಡಿಯುವುದನ್ನು ನಾನು ಸಮ್ಮತಿಸುವುದಿಲ್ಲ ಎಂದು ಹೇಳುವಲ್ಲಿ ಬುದ್ಧಿವಂತರಾಗಿ ಬೆಳೆದು ಬಂದಿದ್ದು ಎಂಬ ನುಡಿ ಕಮಲಾದಾಸ್ರವರ ಮಗ ಎಂ.ಡಿ. ನಳಪತ್ರವರ ಬಳಿಗೆ ಕರೆದುಕೊಂಡು ಹೋಗುತ್ತದೆ. ಅವರು ಬೆಂಗಳೂರಿನ ಟೈಮ್ಸ್ ಆಫ್ ಇಂಡಿಯಾದ ರೆಸಿಡೆನ್ಸಿಯಲ್ ಸಂಪಾದಕರಾಗಿದ್ದಾಗ; ನಾನಾ ಕಾರಣಗಳಿಗಾಗಿ ಅವರನ್ನು ನೋಡಿದ್ದೇನೆ. ಪ್ರೆಸ್ ಕ್ಲಬ್ಬಿನಲ್ಲಿ ಎರಡು ಮೂರು ಬಾರಿ ಬಿಯರ್ ಚಪ್ಪರಿಸಿದ್ದೇನೆ ಅವರ ಜೊತೆ. ಇದಕ್ಕಿಂತ ಮಿಗಿಲಾಗಿ ನಳಪತ್ ರವರನ್ನು ಕಂಡರೆ ಲಂಕೇಶ್ರವರಿಗೆ ತುಂಬ ಅಭಿಮಾನವಿತ್ತು. ತಮಗೆ ನೆನಪಾದಾಗಲೆಲ್ಲ ಅವರನ್ನು ಕರೆಸಿಕೊಂಡಿದ್ದಾರೆ. ಆಗ ಬೇರೆ ಬೇರೆ ಮಾತುಗಳ ನಡುವೆ ತಮ್ಮ ತಾಯಿಯನ್ನು ಕುರಿತು ಎಂಥೆಂಥ ಮಮಕಾರದ ನುಡಿಗಳನ್ನು ನುಡಿದ್ದಾರೆ. ಅಪ್ಪಿತಪ್ಪಿ ಒಂದು ಬಾರಿಯೂ ನಮಗೆ ನೋವು ಪಡಿಸಿದ್ದು ನೆನಪಿಲ್ಲ. ನಾವೇನಾದರೂ ತಪ್ಪು ಮಾಡಿದರೆ ಪ್ರೇಮಮಯಿಯಾಗಿ ವಿಷಾದದಿಂದ ನಮ್ಮ ಕಡೆ ನೋಡುತ್ತಿದ್ದರು. ಅದರಿಂದಲೇ ನಮ್ಮ ತಪ್ಪು ಅರಿವಾಗಿ ಕರಗಿ ಹೋಗುತ್ತಿದ್ದೆವು. ಆಗ ಅವರು ಏನೋ ಪಡೆದವರಂತೆ. ನಮ್ಮ ತಲೆ ನೇವರಿಸಿ ಅಪ್ಪಿಕೊಳ್ಳುತ್ತಿದ್ದರು. ಕೊನೆಗೂ ಎಲ್ಲರ ಬದುಕಿನಲ್ಲಿ ಅಮ್ಮ ಎಂಬ ವಿಶೇಷಣ ಈ ರೀತಿಯ ಗುಣಾತ್ಮಕತೆಯನ್ನು ಪಡೆದಿರಬಹುದು.

ಕೊನೆಗೆ ನಮ್ಮ ವಚನ ಸಾಹಿತ್ಯದ ಸಂಭ್ರಮದ ಅಕ್ಕಮಹಾದೇವಿಯನ್ನು ನೆನಪು ಮಾಡಿಕೊಂಡು ಕಮಲಾದಾಸ್ರವರ ಈ ಸಾಲುಗಳನ್ನು ಇಲ್ಲಿ ದಾಖಲಿಸುತ್ತಿರುವೆ. ಸಾವು ಸಮೀಪಿಸುತ್ತಿದೆ, ಆತ್ಮ ದೇಹಕ್ಕೆ ವಿಶಿಷ್ಟವಾದ, ಸುವಾಸನೆ ತಂದುಕೊಡುತ್ತದೆ. ಸಾವು ನನ್ನನ್ನು ಸ್ಪಶರ್ಿಸಿದರೆ, ಸುವಾಸನೆ ದೇಹದಿಂದ ದೂರಾಗುತ್ತದೆ. ತಾಳಲಾರದ ದುರ್ಗಂಧ ದೇಹವನ್ನಾರಿಸುತ್ತದೆ. ಈಗ ಕೆನ್ನೆಗೆ ಮುತ್ತು ಕೊಡುವ ಮಕ್ಕಳೂ ಕೂಡ ಆಗ ಭೀತರಾಗುತ್ತಾರೆ.

ನಾನು ಆಸ್ಪತ್ರೆಯಲ್ಲಿ ಸತ್ತ ನಂತರ ಪ್ರೇತವಾಗಿ ನಿನ್ನಲ್ಲಿಗೆ ಬರುವೆ ಎಂದು ನನ್ನ ಎರಡನೆಯ ಮಗನಿಗೆ ಹೇಳಿದಾಗ, ಹಾಗೆ ಮಾಡದಿರಿ, ನಮಗೆಲ್ಲ ಭಯವಾಗುವುದು ಎಂದು ಮಗ ಹೇಳಿದ. ಈತನ ಉತ್ತರ ನನ್ನನ್ನು ನುಚ್ಚು ನೂರಾಗಿಸಿತು. ನಾನಾಗ ಅಜ್ಞಾನಿಯಾಗಿದ್ದೆ. ಮುಂದಿನ ಜನ್ಮದಲ್ಲಿ ನಿನ್ನ ಸತಿಯೇ ಆಗುತ್ತೇನೆಂದು ನನ್ನ ಗಂಡನಿಗೆ ಮಾತು ಕೊಡುವಷ್ಟು ಮುಗುದೆಯಾಗಿದ್ದೆ.

ನಿಜಕ್ಕೂ ಈತ ಯಾರು? ನಾನ್ಯಾರು? ನನ್ನ ಮಕ್ಕಳೆಂದು ಕರೆಸಿಕೊಳ್ಳುವ ಈ ಮೂವರು ಹುಡುಗರ್ಯಾರು? ನಾವು ನಶ್ವರ ದೇಹದ ಹೊರೆ ಹೊತ್ತಿದ್ದೇವೆ. ನಶ್ವರ ಸಂಬಂಧಗಳನ್ನು ಬೆಳೆಸುತ್ತಿದ್ದೇವೆ. ದೇವರೊಡನೆ ಇರುವ ಸಂಬಂಧ ಮಾತ್ರ ಶಾಶ್ವತ. ದೇವರೇ ನನ್ನ ಗಂಡ, ಅನೇಕ ರೂಪದಲ್ಲಿ ಈತ ನನ್ನ ಬಳಿ ಬರುವನು. ಅನೇಕ ರೂಪದಲ್ಲಿ ನಾನು ಈತನಿಗೆ ಅಪರ್ಿಸುವೆ. ಈತನಿಂದ ಪ್ರೀತಿಸಿಕೊಳ್ಳುವೆ, ವಂಚಿಸಲ್ಪಡುವೆ. ಪ್ರಪಂಚದ ಹಾದಿಗಳನ್ನೆಲ್ಲಾ ಯಾರನ್ನೂ ದೂಷಿಸದೆ ಎಲ್ಲರನ್ನೂ ಅರಿತು ಹಾದು ಕೊನೆಗೆ ಈತನಲ್ಲಿ ಲೀನಳಾಗುವೆ. ಆಗ ನನಗೆ ಮರು ಪಯಣವಿರದು ಈ ಸಾಲುಗಳನ್ನು ಇಲ್ಲಿ ದಾಖಲಿಸುವಾಗ; ಮತ್ತೊಮ್ಮೆ ಮಾಧವಕುಟ್ಟಿ, ಕಮಲಾ ದಾಸ್ ಹಾಗೂ ಕಮಲಾ ಸುರಯ್ಯ ಮೂರು ಪಾತ್ರಗಳು ನನ್ನ ಮನಸ್ಸಿನ ತುಂಬ ಆವರಿಸಿಕೊಂಡಿದೆ. ಹಾಗೆಯೇ ಆಕೆ ತನ್ನ ಹುಟ್ಟಿನ ನೆಲೆಯಿಂದ ತನ್ನ ಜೀವಿತದ ಕೊನೆಯ ದಿನಗಳಲ್ಲಿ ಅಲ್ಲಾನ ಕಡೆಗೆ ಕೈಚಾಚಿದ್ದು ಯಾವ ರೀತಿಯ ಮಾನಸಿಕ ರಕ್ಷಣೆಗಾಗಿ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅವಲೋಕಿಸಿಕೊಳ್ಳುತ್ತಿರುವೆ. ಅತ್ಯಂತ ದಿಟ್ಟ ಲೇಖಕಿಯಾದ ಈಕೆ ಅನಾರೋಗ್ಯ ಮತ್ತು ವೃದ್ಧಾಪ್ಯದಿಂದ ಮಾನಸಿಕವಾಗಿ ದುರ್ಬಲರಾಗಿಬಿಟ್ಟರೇನೋ ಅನ್ನಿಸಿದೆ. ಈ ಅವಲೋಕನದ ನಡುವೆಯೇ ಆಕೆಯನ್ನು ನಾನು ಕಂಡಿದ್ದೆ, ಒಂದಷ್ಟು ಕ್ಷಣ ಆಕೆಯೊಡನೆ ಓಡಾಡಿದ್ದೆ ಎಂಬ ನೆನಪು ಆಪ್ತವಾಗಿದೆ. ಹಾಗೆಯೇ ಪೆರಿಯಾರ್ ನದಿಯ ದಡದುದ್ದಕ್ಕೂ ಆವರಿಸಿಕೊಂಡಿರುವ ರೇಷ್ಮೆ ಬಣ್ಣದ ಮರಳು, ಕೇರಳವನ್ನು ತಬ್ಬಿಕೊಂಡಿರುವ ವನ್ಯರಾಶಿ ಮತ್ತು ಜಲರಾಶಿಯ ನಡುವೆ ಸಾವಿರಾರು ಬಣ್ಣಬಣ್ಣದ ಗಿಳಿಗಳು. ಇದರ ಜೊತೆಗೆಯೇ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಇಷ್ಟೊಂದು ವೈವಿಧ್ಯಮಯವಾದ ವ್ಯಕ್ತಿತ್ವವನ್ನು ತುಂಬಿಕೊಂಡ ಲೇಖಕಿ ಇದ್ದರೆಂಬುದರ ಸ್ಮರಣೆ ವಿವಿಧ ನೆಲೆಯ ಓದಿಗೆ ಕರೆದೊಯ್ಯುತ್ತಲೇ ಇರುತ್ತದೆ.

(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಛೇರಿ, ಏರ್ಪಡಿಸಿದ್ದ ತಿಂಗಳ ಕಾರ್ಯಕ್ರಮದಲ್ಲಿ ಮಾತಾಡಿದ್ದನ್ನು ಆಧರಿಸಿ ಈ ಲೇಖನವನ್ನು ಬರೆದದ್ದು)

‍ಲೇಖಕರು G

January 9, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vijayakumar B R

    As usual Shoodra’s writings are intimate. But I do miss the shoodra magazine and his editorials

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: