ಇಂತಹ ಮನುಷ್ಯರ ಮುಖವನ್ನು ಅವನೆಂದೂ ನೋಡಿಯೇ ಇರಲಿಲ್ಲ..

ಅಣೇಕಟ್ಟೆ ವಿಶ್ವನಾಥ್

**

ಬುದ್ದನ ಆಸೆ ದಟ್ಟಕಾಡು! ಹಗಲೆ ಇರುಳೆಂತೆನಿಸುವಂತೆ ದಾರಿಗತ್ತಲಮಾಡಿ, ಮುಗಿಲಗಲ ಎಲೆಗಳರಡಿ ಸದಾ ಆನಂದದಲ್ಲಿ ನಲಿದಾಡುವ ಮರಗಿಡಗಳ ರಾಶಿ. ಮಧ್ಯ ಕಾಲುದಾರಿ! ಅದು ಬುದ್ಧ ನಡೆದು ಬರುತ್ತಿದ್ದ ದಾರಿ. ಇರುಳು ಮುಗಿಲ ತಾರೆಗಳ, ಹಗಲು ರವಿತೇಜನ ನೋಡಲೆಂದು ತಮ್ಮ ಕಣ್ಣುಗಳ ಮುಗಿಲಕಡೆ ಮಾಡಿ ಕೊಂಡಿದ್ದ ಮರಗಿಡಗಳು, ಬುದ್ಧ ಬರುತ್ತಿದ್ದ ಈ ಪುಟ್ಟದಾರಿಯ ಕಡೆ ಇಣುಕಿ ನೋಡುತ್ತಿದ್ದವು. ಅದೇ ದಾರಿಯಲ್ಲಿ ಬರುತ್ತಿದ್ದ ಸಣ್ಣತುಟಿಯ, ಬಿಳಿ ಬಣ್ಣದ, ಕುಳ್ಳಗಿನ ದೇಹದ ಅಂಗುಲಿಮಾಲ. ಅವನು ತಾಯಿಯೊಬ್ಬಳ ಹೊಟ್ಟೆಯಿಂದಲೇ ಹುಟ್ಟಿದವನು. ಮನುಷ್ಯರೆಂದರೆ ಅವನು ನೋಡಿದ್ದು ಹೊಡೆದು ಬಡಿಯುತ್ತಿದ್ದವರನ್ನು ಮಾತ್ರ. ಅವನು ಹುಟ್ಟಿದ ತಕ್ಷಣ ಅಮ್ಮ ಸತ್ತಳು, ಅಪ್ಪ ಅಣ್ಣತಮ್ಮಂದಿರು ಅಕ್ಕತಂಗಿಯರ ಜೊತೆಗೆ ಬೆಳೆಯುತ್ತಿದ್ದನು. ಅಪ್ಪನೂ ಹೊಡೆಯುತ್ತಿದ್ದ, ಅಣ್ಣ ತಮ್ಮ ಅಕ್ಕ ತಂಗಿಯಾದಿಯಾಗಿ ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಹೊಡೆಯುತ್ತಿದ್ದರು. ಎಷ್ಟು ಹೊಡೆಯುತ್ತಿದ್ದರೆಂದರೆ ಅಂಗುಲಿಮಾಲನ ದೇಹದಲ್ಲಿ ಗಾಯಗಳು ಮಾಯದೆ ದದ್ದುಗಟ್ಟಿದ್ದವು.

ಅವನು ಬೆಳೆಯುತ್ತಾ ಬೆಳೆಯುತ್ತಾ ಮನದ ಗಾಯಗಳಾಗಿದ್ದವು. ಅವನು ನೋಡಿದ್ದ ಮನುಷ್ಯರ ಮುಖಗಳೆಲ್ಲವೂ ಮೃಗದ ಮುಖಗಳಾಗಿದ್ದವು. ಒಂದು ದಿನ ಹೇಗೋ ಮನೆಯಿಂದ ತಪ್ಪಿಸಿಕೊಂಡು ಕಾಡು ಸೇರಿದ. ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು ಹಂಪಲು, ಗೆಡ್ಡೆ ಗೆಣಸು, ಸತ್ತ ಪ್ರಾಣಿಯ ಮಾಂಸ ತಿನ್ನುತ್ತಾ ಬದುಕು ಸಾಗಿಸುತ್ತಿದ್ದ. ಆ ಕಾಡಿನ ದಾರಿಯಲ್ಲಿ ಬರುತ್ತಿದ್ದ ಮನುಷ್ಯರನ್ನು ಕೊಂದು ಅವರ ಬೆರಳೊಂದನ್ನು ಕತ್ತರಿಸಿ ಹಾರ ಮಾಡಿ ಹಾಕಿಕೊಳ್ಳುತ್ತಿದ್ದ. ಮನುಷ್ಯರೆಂದರೆ ಮೃಗಗಳೆಂದು ಅವನು ನಂಬಿದ್ದನು. ಈ ಮೃಗಗಳನ್ನು ಕೊಲ್ಲುವುದರಿಂದ ನಾನಿಲ್ಲಿ ಸುರಕ್ಷಿತವಾಗಿರಬಹುದೆಂದು ಅವನು ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುತ್ತಿದ್ದನು. ಅದೇ ದಾರಿಯಲ್ಲಿ ಬುದ್ದನು ಅಂಗುಲಿಮಾಲನಿಗೆ ಎದುರಾದನು. ದೂರದಲ್ಲಿ ಬುದ್ದನನ್ನು ಕಂಡಾಗ, ‘ಬೇಟೆ ಹತ್ತಿರ ಬರಲಿ’ ಎಂದು, ಕತ್ತಿಯನ್ನು ಮಸೆಯುತ್ತಿದ್ದ. ಬುದ್ದನು ಹತ್ತಿರ ಹತ್ತಿರ ಬರುತ್ತಿರುವದನ್ನು ಅಂಗುಲಿಮಾಲ ನೋಡಿದನು. ಆದರೆ ಇಂತಹ ಮನುಷ್ಯರ ಮುಖವನ್ನು ಅವನೆಂದೂ ನೋಡಿಯೇ ಇರಲಿಲ್ಲ. ಆದರೂ ಅಂಗುಲಿಮಾಲನಿಗೆ ಬುದ್ಧನದೂ ಮುಖವೇ, ಕೊಲ್ಲದೆ ದಾರಿಯಿಲ್ಲ.

ಎದುರಾದನು ಬುದ್ಧ. ಅಂಗುಲಿ ಮಾಲ ಬುದ್ದನನ್ನೊಮ್ಮೆ ನೋಡಿದನು. ಕಾಡಿನ ಮರದ ಎಲೆಗಳೆಲ್ಲಾ ಹೂವುಗಳಾಗಿ ಅರಳಿರುವಂತೆ ಬುದ್ಧ ಮುಖದಲ್ಲಿ ಶಾಂತವಾದ, ಆನಂದದ ಸಹಜ ಮುಗುಳುನಗೆ. ಇಂತಹ ನಗುಮುಖವನ್ನು ಅಂಗುಲಿಮಾಲನೆಂದೂ ನೋಡಿರಲಿಲ್ಲ. ಒಂದು ಕ್ಷಣ ಗರಬಡಿದಂತೆ ಆ ಮುಗುಳುನಗೆಯನ್ನೇ ದಿಟ್ಟಿಸಿ ನೋಡುತ್ತ ನಿಂತನು. ಕಾಡಿನ ಮರದ ಎಲೆಗಳೆಲ್ಲಾ ಹೂವುಗಳಾಗಿ ಅರಳಿದಾಗ ಹೊಮ್ಮುವ ಪರಿಮಳದ ಪ್ರವಾಹದಂತೆ ಬುದ್ದನ ಕಣ್ಣಕಾಂತಿ. ಈ ಕಣ್ಣಕಾಂತಿಯು ಅಂಗುಲಮಾಲನ ಕರೆಯುತ್ತಿತ್ತು. ಗರಬಡಿದಂತೆ ನಿಂತಿದ್ದ ಅಂಗುಲಿಮಾಲನಿಗೆ ರೆಕ್ಕೆ ಬರುತ್ತಿರುವಂತೆನಿಸಿತು. ಅರಳಿದ ಹೂವಿನ ಪರಿಮಳಕ್ಕೆ ದುಂಬಿಗಳು ಹೋಗಿ ಮುತ್ತಿಕ್ಕುವಂತೆ, ಹಾರಿ ಹೋಗಿ ಬುದ್ಧನ ಕಣ್ಣ ಕಾಂತಿಯಲ್ಲಿ ಕರಗಿ ಹೋಗಬೇಕೆನಿಸುವಷ್ಟು ಆಕರ್ಷಣೆಯಾಗುತ್ತಿತ್ತು ಅಂಗುಲಿಮಾಲನಿಗೆ. ಆದರೂ ಅಂಗಲಿಮಾಲನಿಗೆ ಬುದ್ಧನದೂ ಮುಖವೇ! “ಈ ಮುಖವೇನು? ನಾನು ಹಿಂದೆಂದೂ ನೋಡಿರದ ಹಸನ್ಮುಖ, ಇದೇನು ಸತ್ಯವೆ? ಇಲ್ಲ, ಇದು ರೆಕ್ಕೆ ಬಂದ ಚಿಟ್ಟೆಗಳ ಸುಡಲು ಇರುಳು ಕೈಬೀಸಿ ಕರೆಯುವ ಉರಿವ ಬೆಂಕಿಯ ಸೌಂದರ್ಯವೆ?” ತನ್ನ ಮೈಯನ್ನು ಒಮ್ಮೆ ಕೊಡವಿಕೊಂಡು ಗರಬಡಿದ ಸ್ಥಿತಿಯಿಂದ ಹೊರಬಂದನು ಅಂಗುಲಿಮಾಲ.

“ಇಲ್ಲ ಇವನೂ ಆ ಮನುಷ್ಯರಂತವನೆ, ಇವನನ್ನು ಕೊಲ್ಲದಿರೆ ನಾ ಇಲ್ಲಿ ಸುರಕ್ಷಿತವಲ್ಲ.” ಎಂದೆನಿಸಿ ತನ್ನ ಕತ್ತಿಯ ಕಡೆ ಕೈ ಹಾಕಿದ. ಬುದ್ಧನು ಅಷ್ಟೇ ಶಾಂತವಾಗಿ, ಮಂದಸ್ಮಿತನಾಗಿ ಅಂಗುಲಿಮಾಲನತ್ತ ನೋಡುತ್ತಿದ್ದನು. “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂದು ಅಂಗುಲಿ ಮಾಲ ಬುದ್ದನಿಗೆ ಹೇಳಿದನು. ಕಣ್ಣುಗಳ ಕೆಳಗೆ ಮಾಡಿ ನೋಡುತ್ತಿದ್ದ ಮರಗಿಡಗಳು ನಕ್ಕವು. ಈ ಹಿಂದೆ ಯಾರಾನ್ನಾದರೂ ಕೊಲ್ಲುವಾಗ ಅಂಗುಲಿಮಾಲನು “ನಾನು ಕೊಲ್ಲುತ್ತೇನೆ” ಎಂದು ಒಮ್ಮೆ ಕಿರುಚಿದರೆ ಕಾಡಿನ ಖಗಮೃಗಗಳೆಲ್ಲಾ ದಿಕ್ಕಾಪಾಲಾಗಿ ಓಡುತ್ತಿದ್ದವು. ಧುಮ್ಮಿಕ್ಕಿ ಹರಿಯುತ್ತಿದ್ದ ಜಲಪಾತಗಳೇ ಎದೆಯಡಗಸಿಕೊಂಡಂತೆ ಮೌನವಾಗುತ್ತಿದ್ದವು. ಕೋಟಿ ಸಿಡಿಲು ಒಮ್ಮೆಗೆ ಬಡಿದಂತೆ ಮರಗಿಡಗಳು ಉಸಿರು ಬಿಗಿಯಿಡಿಯುತ್ತಿದ್ದವು. ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಕಿರುಚಿದಾಗಲೆ ಎದುರಿಗಿದ್ದ ವ್ಯಕ್ತಿಯ ನರನಾಡಿಗಳು ಸತ್ತು ಹೋಗುತ್ತಿದ್ದವು, ನಂತರ ಅಂಗುಲಿಮಾಲನಿಗೆ ಉಳಿಯುತ್ತಿದ್ದು ಬರೀ ಕತ್ತರಿಸುವ ಕೆಲಸ. ಆದರೆ ಇಂದು ಗುಳ್ಳೆನರಿಯಂತೆ “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂದು ಊಳಿಡುತ್ತಿದ್ದಾನೆ. ಇವನ ದನಿ ಅವನ ಕೆಳಗಿದ್ದ ಇರುವೆಗಳಿಗೂ ಕೇಳಿಸಿರಲಾರದು. ಇವನ ದನಿಯಲ್ಲಿ ಕೊಲ್ಲುವ ಉದ್ದೇಶವೇ ಇಲ್ಲವೆಂಬಂತೆನಿಸುತ್ತಿದೆ. ಎಂದೆಲ್ಲಾ ಮರಗಳು ಮುಸಿ ಮುಸಿ ನಗುತ್ತಿದ್ದವು.

ಬುದ್ಧನು “ಆಗಬಹುದು” ಎಂದನು. ಆಗಲೂ ಅದೇ ಶಾಂತ ಮಂದಸ್ಮಿತ! ಅಂಗುಲಿಮಾಲ ಕೊಲ್ಲುವೆನೆಂದಾಗ, ಹೆದರಿ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಒದ್ದಾಡುತ್ತಿದ್ದ ಜನರನ್ನೇ ಇಲ್ಲಿಯವರೆಗೂ ಕಂಡಿದ್ದ. ಆದರೆ ನಿರುಮ್ಮಳವಾಗಿ ನಿಂತಿದ್ದ ಬುದ್ಧನ ನೋಡಿದಾಗ ಭಯವಾಯಿತು. ಆದರೆ ಈ ಭಯ ಮನುಷ್ಯರ ಬಗೆಗಿದ್ದ ಭಯವಲ್ಲ. ಬುದ್ಧನ ಕಣ್ಣಿನ ಕಾಂತಿ, ಮಂದಸ್ಮಿತ, ನಂಬಬಹುದೆ? ನಂಬಿದರೆ ಅದು ಆನೆಯನ್ನು ಖೆಡ್ಡದಲ್ಲಿ ಕೆಡವಲು ತೋಡಿದ ಗುಂಡಿಯಾಗಬಹುದೆ ಎಂಬ ಅನುಮಾನಗಳಿಂದ ಬಂದ ಭಯ. ‘ಕೊಲ್ಲುವುದನ್ನೆ’ ಆಗಬಹುದು ಎಂದಾಗ ಈ ಭಯವು ಇನ್ನಷ್ಟು ಹೆಚ್ಚಾಯಿತು. ‘ಈ ನಗುಮೊಗವ ಯಾಕಾಗಿ ನಂಬಬೇಕು? ಇದೂ ಮನುಷ್ಯರ ಇನ್ನೊಂದು ಮುಖ ಅಷ್ಟೆ’ ಎಂದುಕೊಳ್ಳುತ್ತಾ ಕೊಲ್ಲುವ ಕತ್ತಿಗೆ ಕೈ ಹಾಕಿದನು. ಬುದ್ದನೆಡೆಗೆ ಒಂದೆಜ್ಜೆ ಇಟ್ಟನು. ಬುದ್ಧನು ಹೇಳಿದ “ನೀನು ನನ್ನನ್ನು ಕೊಲ್ಲಬಹುದು, ಆದರೆ ನನಗೊಂದು ಆಸೆಯಿದೆ. ಅದನ್ನು ನೆರವೇರಿಸಬಹುದೆ?”. ಹೀಗೆ ಅಂಗುಲಿಮಾಲನನ್ನು ಯಾರೂ ಕೇಳಿರಲಿಲ್ಲ. ಬಾಲ್ಯದಿಂದಲೂ ಯಾರೂ ಅವನನ್ನು ಏನನ್ನೂ ಕೇಳಿಕೊಂಡಿರಲಿಲ್ಲ. ಹೊಡೆಯುವುದು ಮತ್ತು ಕಿತ್ತುಕೊಳ್ಳುವುದಷ್ಟೇ ಇರುತ್ತಿತ್ತು. ಇದೇ ಮೊದಲ ಬಾರಿಗೆ ನನಗೊಬ್ಬರು ಕೋರಿಕೊಳ್ಳುತ್ತಿದ್ದಾರೆ ಎಂದು ಯೋಚಿಸತೊಡಗಿದ.

ಈ ಕೋರಿಕೆಯ ಅನುಭವ ನನಗಿರಲೇ ಇಲ್ಲ. ಈ ಕೋರಿಕೆಯ ಮಾತನ್ನು ನಡೆಸಿಕೊಡುವುದೆಂದರೆ, ನನಗಿದು ಸಾಧ್ಯವೆ? ಎಂದು ಯೋಚಿಸುತ್ತಿರುವಾಗ ಬುದ್ದನು “ನನ್ನ ಆಸೆಯನ್ನು ಈಡೇರಿಸಲು ನೀನು ಬಯಸಿದರೆ ನಿನ್ನಿಂದ ಸಾಧ್ಯವಾಗುತ್ತದೆ ಎಂದು ನನಗೆ ಗೊತ್ತು”. ಬುದ್ಧನ ದನಿಯಲ್ಲಿ ಪರ್ವತದಷ್ಟು ನಂಬಿಕೆ ಕಾಣುತ್ತಿತ್ತು. “ಏನು ನಿನ್ನ ಆಸೆ” ಕೇಳಿದನು ಅಂಗುಲಿಮಾಲ. ಈಡೇರಿಸುವ ಇಷ್ಟದಿಂದಲೇ ಕೇಳುತ್ತಿದ್ದಾನೆಂಬುದು ಬುದ್ದನಿಗೆ ತಿಳಿಯಿತು. “ನನ್ನ ಕೊಲ್ಲುವವನನ್ನೊಮ್ಮೆ ಪ್ರೇಮದಿಂದ ಆಲಂಗಿಸಬೇಕು. ನಿನ್ನ ಕೊರಳಿಗೆ ಹಾಕಿರುವ ಬೆರಳುಗಳ ಹಾರವನ್ನು ಪಕ್ಕಕ್ಕೆ ಎತ್ತಿಡು, ನಾನು ಒಮ್ಮೆ ನಿನ್ನನ್ನು ಆಲಂಗಿಸುತ್ತೇನೆ” ಮತ್ತಷ್ಟು ಭಯವೂ, ಅನುಮಾನವೂ ಅಂಗುಲಿಮಾಲನಿಗೆ. ಒಮ್ಮೆ ಬುದ್ಧನನ್ನು ನೋಡಿದನು. ನಿರಾಯುಧನಾಗಿ ನಿಂತಿರುವ ಬುದ್ಧ ನನ್ನನ್ನೇನು ಮಾಡಲು ಸಾಧ್ಯ, ಒಂದು ಆಲಿಂಗನವಲ್ಲವೆ ‘ಆಯ್ತು’ ಎಂದು ಒಪ್ಪಿಗೆ ಸೂಚಿಸಿದನು. ಈ ಬೆರಳುಗಳ ಹಾರವನ್ನು ಅವನೆಂದೂ ತೆಗೆದಿರಲಿಲ್ಲ. ಮಾಂಸ ಒಣಗಿ ಮೂಳೆ ಮಾತ್ರ ನೇತಾಡುತ್ತಿದ್ದ ಬೆರಳು ಕೆಲವಾದರೆ, ಕೆಲವು ಇತ್ತೀಚೆಗೆಷ್ಟೆ ಕತ್ತರಿಸಿದ ಬೆರಳುಗಳಿಂದ ಮಾಂಸದ ಹಸಿ ವಾಸನೆ ಬರುತ್ತಿತ್ತು. ಈ ಬೆರಳುಗಳ ಹಾರವನ್ನು ಎತ್ತಿ ಒಂದು ಮರದ ಕೊಂಬೆಗೆ ನೇತುಹಾಕಿದನು. ಹೊತ್ತು ತಿರುಗುತ್ತಿದ್ದ ತನ್ನ ಹೆಣವನ್ನು ತಾನೇ ಕೆಳಗಿಳಿಸಿದಂತೆ ಭಾಸವಾಯಿತು.

ಕರುವಿಗೆ ಹಸುವೊಂದು ಮೊಲೆಯೂಡಲು ಬರುವಂತೆ ಬಂದ ಬುದ್ಧ ಅಂಗುಲಿಮಾಲನನ್ನು ಆಲಂಗಿಸಿದನು. ಆ ಅಪ್ಪುಗೆ! ನೂರಾರು ವರ್ಷ ಮಳೆಯಿಲ್ಲದೆ ಬೆಂದ ನೆಲಕ್ಕೆ ಮುಂಗಾರು ಮೊದಲ ಮಳೆ ಬಂದು, ಕಣಕಣವೂ ನೆನೆದು ನೆಲದ ಕಾವು ತಣಿದು ಹೊಮ್ಮುವ ಘಮಲಿನಂತಿತ್ತು. ಬುದ್ದನು ಅಂಗುಲಿಮಾಲನ ಮೈದಡವಿದನು. ವಿದ್ಯುತ್ ಸಂಚರಿಸಿದಂತೆನಿಸಿತು. ನಿರಾಳವಾಗಿ ಬುದ್ದನ ಎದೆಗೊರಗಿದ ಅಂಗುಲಿಮಾಲ. ಬೆಳಕೆ ಕಾಣದೆ ಶತಮಾನಗಳಿಂದ ಕತ್ತಲಲ್ಲಿದ್ದ ಕ್ರೌರ್ಯದ ಹಿಮಪರ್ವತವೊಂದು ಪ್ರೇಮದ ಸೂರ್ಯ ರಶ್ಮಿ ತಗುಲಿದಾಗ ಕರಗಿ ಹರಿಯಲು ಪ್ರಾರಂಭವಾದಂತೆ ಅಂಗುಲಿಮಾಲನ ಕಣ್ಣಲ್ಲಿ ನೀರು ಹರಿಯಲು ಪ್ರಾರಂಭಿಸಿತು. ಮಾಯದ ಮನದ ಗಾಯಗಳು ಆಲಿಂಗನದಲ್ಲಿ ಮಾಯವಾಗುತ್ತಿರುವುದು ಕಂಡ ಅಂಗುಲಿಮಾಲನು ಕೈಯಲ್ಲಿದ್ದ ಕತ್ತಿಯನ್ನು ಕೆಳಗೆಸೆದು ಬುದ್ದನನ್ನು ಬಿಗಿದಪ್ಪಿದನು. ಪರಸ್ಪರ ಆಲಿಂಗನದಿಂದ ಕಣ್ಣೀರು ಅಳುವಾಯಿತು. ಬುದ್ದನ ತೋಳತೆಕ್ಕೆಯಲ್ಲಿ ಜೋರಾಗಿ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದನು ಅಂಗುಲಿಮಾಲ. ನಿಧಾನವಾಗಿ ಅಳುವು ನಿಂತ ಮೇಲೆ ಕಣ್ಣುಗಳ ಒರೆಸಿದ ಬುದ್ದನು ತನ್ನ ತೋಳತೆಕ್ಕೆಯಲ್ಲಿರುವ ಮಗುವನ್ನು ನೋಡುವ ತಾಯಿಯಂತೆ ನೋಡಿದನು.

ಈ ಆನಂತ ಆನಂದದ ಅನುಭವದಲ್ಲಿ ಅಂಗುಲಿಮಾಲ ಅರಗಿನಂತೆ ಕರಗಿ ಹೋಗಿದ್ದನು. ನಿಧಾನವಾಗಿ ಕಲ್ಲು ಬಂಡೆಯ ಮೇಲೆ ಕುಳಿತರು. ಬುದ್ಧನು “ಹಸಿವಾಗಿದೆಯಾ?” ಎಂದನು. “ಹೌದು” ಎಂಬಂತೆ ತಲೆಯಾಡಿಸಿದನು. ತನ್ನ ಜೋಳಿಗೆಯಿಂದ ರೊಟ್ಟಿಯನ್ನು ತೆಗೆದು ಅಂಗುಲಿಮಾಲನಿಗೆ ತಿನ್ನಿಸಿದನು. ಬುದ್ಧನ ಕೈತುತ್ತು ತಿನ್ನುತ್ತಾ ತಿನ್ನುತ್ತಾ ಅವನ ಕಣ್ಣಲ್ಲಿ ನೀರು ಹರಿಯಲು ಪ್ರಾರಂಭವಾಯಿತು. ಇಂತಹ ಅನುಭೂತಿಯನ್ನುಅಂಗುಲಿಮಾಲನೆಂದೂ ಆನಂದಿಸಿರಲಿಲ್ಲ. ಹೊಟ್ಟೆ ತುಂಬಿತು. ಅಂಗುಲಿಮಾಲ “ನಿನ್ನ ತೊಡೆಯ ಮೇಲೆ ಮಲಗಲೆ” ಎಂದನು. ಬುದ್ಧನು ನಿಧಾನವಾಗಿ ಅಂಗುಲಿಮಾಲನ ಕತ್ತು ತನ್ನ ತೊಡೆಯ ಮೇಲೆ ಬರುವಂತೆ ಮಲಗಿಸಿಕೊಂಡನು. ಮಗುವಿನಂತೆ ನಿದ್ರೆ ಮಾಡಿದ. ಇಂತಹ ನಿದ್ದೆ ಈ ಹಿಂದೆ ಎಂದೂ ಬಂದಿರಲಿಲ್ಲ. ಈ ನಿದ್ದೆ ಮಾಯದಂತ ನಿದ್ದೆ, ಸಾವಿನಂತ ನಿದ್ದೆ, ದೇಹದ ಅಣುಅಣುವೂ ಧ್ಯಾನಕ್ಕೆ ಹೋದಂತ ನಿದ್ದೆ. ನಿದ್ದೆಯ ನಂತರ ಎಚ್ಚರವಾದಾಗ ಬುದ್ದನನ್ನು ನೋಡಿದ ಅಂಗುಲಿಮಾಲ ಮುಗುಳು ನಕ್ಕನು. ಮಗುವೊಂದು ತಾಯಿಯ ಕಂಡು ನಕ್ಕಂತೆ. ಬುದ್ದನು ನಕ್ಕನು. “ನಾನಿನ್ನು ಹೊರಡುತ್ತೇನೆ ನೀನೂ ನನ್ನ ಜೊತೆಗೆ ಬರಬಹುದೆ?” ಎಂದನು ಬುದ್ದನು. ಅಂಗುಲಿಮಾಲ ಬುದ್ದನ ಕೈ ಹಿಡಿದು ನಡೆದನು. ಅಣೇಕಟ್ಟೆ ವಿಶ್ವನಾಥ್ ನಾನು ಬುದ್ಧನನ್ನು ಓದಿಕೊಂಡಿಲ್ಲ. ನನ್ನ ಕಥೆಯ ಅಂಗುಲಿಮಾಲ ಮಾತ್ರ ನಾನೇ.

‍ಲೇಖಕರು Admin MM

May 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: