ಲಿಂಗ ಮುಕ್ತ ನಿರೂಪಣೆಯ ಸಂಕಲನ..

ಡಾ ಸುಮಿತ್ರಾ ಎಲ್ ಸಿ

**

ಕವಿ ಸವಿರಾಜ್ ಆನಂದೂರು ಅವರ ಕವನ ಸಂಕಲನ ‘ಗಂಡಸರನ್ನು ಕೊಲ್ಲಿರಿ’.

ಹಾಡ್ಲಹಳ್ಳಿ ಪಬ್ಲಿಕೇಷನ್ಸ್’ ಈ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಸಾಹಿತಿ ಡಾ ಸುಮಿತ್ರಾ ಎಲ್ ಸಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

**

‘ಗಂಡಸರನ್ನು ಕೊಲ್ಲಿರಿ’, ಹೆಸರು ಓದಿದಾಗ ಬೆಚ್ಚಿ ಬೀಳುವಂತೆ ಆಯ್ತು. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ವೈದ್ಯೆಯೂ, ಲೇಖಕಿಯೂ ಆಗಿದ್ದ ಡಾಕ್ಟರ್ ಎಂ ಪೀ ಉಮಾದೇವಿ ಅವರು ಬರೆದ ‘ಓ ಗಂಡಸೇ ನೀನೆಷ್ಟು ಒಳ್ಳೆಯವನು’ ಎಂಬ ಕಾದಂಬರಿ ಬಹಳ ಜನಪ್ರಿಯವಾಗಿತ್ತು, ಸ್ತ್ರೀವಾದಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೆ ಲೇಖಕಿ ಯಾರೋ ನಿರ್ದಿಷ್ಟ ವ್ಯಕ್ತಿಯನ್ನು ಒಳ್ಳೆಯವನು ಎಂದು ಹೆಸರಿಸಿದ್ದರೆ, ಇಲ್ಲಿ ಕವಿ ‘ಗಂಡಸರನ್ನು ಕೊಲ್ಲಿರಿ’ ಎಂದು ಯಾಕೆ ಹೇಳುತ್ತಿದ್ದಾರೆ? ಓದುತ್ತಾ ಹೋದಂತೆ ತಿಳಿಯಿತು, ಅವರು ಹೇಳುತ್ತಿರುವುದು ಪುರುಷಾಹಂಕಾರವನ್ನು ಕೊಲ್ಲಿ ಎಂದು. ಉಮಾದೇವಿ ಅವರ ಕಾದಂಬರಿ ಬಂದಿದ್ದು ಕನ್ನಡದಲ್ಲಿ ಸ್ತ್ರೀವಾದಿ ಬರಹಗಳ ಆರಂಭದ ದಿನಗಳಲ್ಲಿ. ಈಗ ಸ್ತ್ರೀವಾದ ಪುರುಷ ವಿರೋಧಿ ಅಲ್ಲ, ಪುರುಷರಲ್ಲಿಯೂ ಸ್ತ್ರೀವಾದಿಗಳಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಸವಿರಾಜ್ ಆನಂದೂರು ಅವರ ಈ ಸಂಕಲನದಲ್ಲಿ ಕವಿ ತನ್ನ ಗಂಡುತನವನ್ನು ಮರೆತು ಮಾನವೀಯವಾಗಿರುವುದು ಕಾಣುತ್ತದೆ. ಅಥವಾ ಬರೆದಿದ್ದು ಯಾರು ಎಂದು ನೋಡದೆ ಬರೀ ಕವಿತೆಗಳನ್ನು ಓದಿದರೆ ‘ಕೆಟ್ಟವರೇನಲ್ಲ’, ‘ಓಡುತ್ತಲೇ ಇದ್ದೇನೆ’,‘ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ’, ಇನ್ನೂ ಕೆಲವು ಕವಿತೆಗಳಲಿ ಹೆಣ್ಣು ನಿರೂಪಕಿ. ಲಿಂಗ ಮುಕ್ತ ನಿರೂಪಣೆಯ ಈ ಸಂಕಲನ ಸವಿರಾಜ್ ಆಧುನಿಕ ಮನೋಭಾವದ ಕವಿ ಎಂದು ನಿರೂಪಿಸಿದೆ.

ತನ್ನನ್ನು ಸಮಾಜದ ಎಲ್ಲಾ ಉಪಾಧಿಗಳಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ ಕವಿ, “ನಾ ಕಂಡ ಮೊದಲ ಸೂರ್ಯೋದಯವ ಮರಳಿ ಕೊಡು” ಎಂದು ಪ್ರಾರ್ಥಿಸುತ್ತಾ, ಸಂಕಲನದ ಕವಿತೆಗಳಲ್ಲಿ ಅದನ್ನು ಸಾಧಿಸಿದ್ದಾರೆ ಎಂದು ತಿಳಿಯುತ್ತದೆ. ಕೆಲವು ಕವಿತೆಗಳಲ್ಲಿ ನಿರೂಪಕಿ ಹೆಣ್ಣು, ಕೆಲವು ಕವಿತೆಗಳಲ್ಲಿ ಗಂಡು. ದೈನಿಕಗಳಲ್ಲಿ ಬುದ್ಧನನ್ನು ಕಾಣುವ ಕವಿ, ‘ಗಾಂಧಿಯಾಗಲು ಹೊರಟೆ’ ಅನ್ನುವಾಗ, “ಗಾಂಧಿಮಾರ್ಗ ಕವಿಗಳಿಗಷ್ಟೆ ಸುಲಭ” ಎಂಬ ಸತ್ಯದರ್ಶನವಾಗುತ್ತದೆ. “ಹರಿಶ್ಚಂದ್ರನ ಹಾದಿಯನ್ನು ನಂಬಿದ ಮೇಲಷ್ಟೇ ಕವಿ ಚಂದ್ರಮತಿ ಆಗಬೇಕು” ಅನ್ನುತ್ತಾರೆ. ಸಾಮಾಜಿಕ ಕಾಳಜಿಯ ಕವಿ ಎಂದು ಹೇಳಿಕೊಳ್ಳುವ ‘ನಮ್ಮ ಹಾಡು’ ಘೋಷಣೆಯ ತರಹ ಅನ್ನಿಸುತ್ತದೆ. ಪ್ರೀತಿ, ಪ್ರಣಯ ಕುರಿತ ಕವಿತೆಗಳಲ್ಲಿ ರತಿ ವಿಷಯಕ ಪ್ರತಿಮೆಗಳು ವಾಚ್ಯ ಅನ್ನಿಸುವಂತಿವೆ. ‘ಗಾಂಧಿಯನ್ನು ಪ್ರೀತಿಸುವ ಹುಡುಗರು’ ಕವಿತೆ ವರ್ತಮಾನದಲ್ಲಿ ಗಾಂಧಿಯ ಅಗತ್ಯವನ್ನು ನಿರೂಪಿಸುತ್ತದೆ.

ಭಾಷೆ ಮತ್ತು ಶೈಲಿಗಳಲ್ಲೂ ವೈವಿಧ್ಯವಿದೆ. ಜಾನಪದ ಶೈಲಿಯ ತ್ರಿಪದಿ ಇದೆ (ಗುಡಿಯಾಗಿನ ಶಿವಲಿಂಗ), ವಚನ, ಘಜಲ್‌ಗಳಿವೆ. ಕನ್ನಡ ಕಾವ್ಯಪರಂಪರೆಯ ಪರಿಚಯ ಈ ಹೊಸಕವಿಗೆ ಇದೆ. ಪುರಾಣ ಇತಿಹಾಸಗಳ ಪರಿಚಯವೂ ಇದೆ. ‘ಮಲ್ಲಿಗೆಪುರದ ತೇರು’ ಒಂದು ಲವಲವಿಕೆಯ ಕವಿತೆ, ಬದಲಾವಣೆ ನಿರಂತರವಾದರೂ ಅದರೊಳಗೊಂದು ಸಾತತ್ಯವಿದೆ. ‘ಗಂಡಸರನ್ನು ಕೊಲ್ಲಿರಿ’ ಎಂಬ ಕವಿತೆ ಸಾಂಪ್ರದಾಯಿಕವಾದ ಪೊಸೆಸಿವ್‌ನೆಸ್ ಅನ್ನು ವಿರೋಧಿಸುವ ಕವಿತೆ. ಕಾವ್ಯ ಸ್ವರೂಪದ ಕುರಿತು ತಿಳಿವಿರುವ ಕವಿ, ‘ಕವಿತೆಯ ಅರ್ಥ…’ ಅನ್ನುವ ಕವನದಲ್ಲಿ “ಎಲ್ಲ ಅರ್ಥವಾಗಿದ್ದರೆ ಕವಿಗೆ ಬರೆಯುವ ಜರೂರತ್ತಾದರೂ ಏನಿರುತ್ತಿತ್ತು”, “ಕವಿ ಕವಿಯಲ್ಲ… ಕಳಪೆ ನಟ” ಅನ್ನುತ್ತಾರೆ. ‘ಹೊಸವರುಷ’ ಕವಿತೆಯಲ್ಲಿ ಸಾಂಪ್ರದಾಯಿಕ ಕಾವ್ಯದ ಲಯ ಇದೆ. “ನವೋದಯಕೆ ಎದೆ ತೆರೆಯದ ಹೊರತು ನವ್ಯವನೆಂತು ನೀ ಕಾಣುವುದು” ಎಂಬ ಎಚ್ಚರವೂ ಇದೆ.

‘ಯಕ್ಷ ಪ್ರಶ್ನೆ’ ಒಂದು ನಾಟಕೀಯ ಕವಿತೆ. ಕೊನೆಗೆ ‘ಎಲ್ಲ ಹುಡುಗಿಯರಿಗೆ’ ಪ್ರಣಯ ಪದ್ಯಗಳು, ಹನಿಗವಿತೆಗಳಲ್ಲಿ, ಆಸ್ತಿಕ ಹುಡುಗಿಗೆ, ಸನಾತನ ಹುಡುಗಿಗೆ, ಕಮ್ಯುನಿಸ್ಟ್ ಹುಡುಗಿಗೆ, ನಾಸ್ತಿಕ ಹುಡುಗಿಗೆ, ಗಾಂಧೀವಾದಿ ಹುಡುಗಿಗೆ, ಇತ್ಯಾದಿ ಕವಿತೆಗಳು ಪದಗಳ ಆಟ ಅನ್ನಿಸುತ್ತದೆ. ಉದಾಹರಣೆಗೆ ವಾಸ್ತವವಾದಿ, ನಾಸ್ತಿಕವಾದಿ ಒಬ್ಬಳೇ ಆಗಿರಲು ಸಾಧ್ಯ. ‘ಶಚೀತೀರ್ಥದಲ್ಲಿ ಮೀನುಗಳಿಲ್ಲ’, ‘ಯಕ್ಷಪ್ರಶ್ನೆ’ ಹೊಸತನದಿಂದ ಕೂಡಿವೆ. ಸವಿರಾಜ್ ಆನಂದೂರು ಪ್ರಕೃತಿ ರಮ್ಯವಾದ ಪರಿಸರದಲ್ಲಿ ಹುಟ್ಟಿ ಬೆಳೆದವರು. ಆದರೆ ಈ ಸಂಕಲನದಲ್ಲಿ, ಪ್ರಕೃತಿ ಹಿನ್ನೆಲೆಯಲ್ಲಿದೆ. ಪ್ರಕೃತಿ, ಭಾವುಕ ಸಂವೇದನೆಗಳಿಗಿಂತ, ಇಲ್ಲಿ ವೈಚಾರಿಕತೆ ಮೇಲುಗೈ ಪಡೆದಿದೆ. ಆದ್ದರಿಂದಲೇ ‘ಗಂಡಸರನ್ನು ಕೊಲ್ಲಿರಿ’ ಎಂಬ ಕವಿತೆ ಶೀರ್ಷಿಕೆಯ ಕವಿತೆ ಆಗಿದೆ. ಇದನ್ನು ಪುರುಷ ಅಹಂಕಾರವನ್ನು ಕೊಲ್ಲಿ ಎಂದು ಅರ್ಥೈಸಹುದು ಅಷ್ಟೇ. ಹೇಗೆ ಹೆಣ್ಣುತನ ನಿಜವೋ ಹಾಗೆ ಗಂಡುತನವೂ ಜೈವಿಕ. ಆದರೆ ಸಾಂಪ್ರದಾಯಿಕವಾದ, ಸಿದ್ಧ ಮಾದರಿಯ ಪುರುಷ ಶ್ರೇಷ್ಠ ಮನೋಭಾವ ತಪ್ಪು ಎಂಬುದು ಕವಿಯ ನಿಲುವು. ಇದು ಆರೋಗ್ಯಕರವಾದ ಸಮಾಜ ನಿರ್ಮಾಣದ ಅಗತ್ಯ ಸಹ. ಸವಿರಾಜ್ ಅವರ ಭಾಷೆ, ಬರವಣಿಗೆಯ ಶೈಲಿ ಗಮನಿಸಿದರೆ ಅವರಿಗೆ ಕಾವ್ಯ ಜಗತ್ತಿನಲ್ಲಿ ಉತ್ತಮ ಭವಿಷ್ಯವಿದೆ. ಅವರಿಗೆ ಒಳಿತಾಗಲಿ.

‍ಲೇಖಕರು Admin MM

June 8, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: