ಯೋಗೇಶ್ ಮಾಸ್ಟರ್ 'ಢುಂಢಿ' ಹೀಗಿದೆ..

ಪ್ರೊ ಸಿ ಎನ್ ರಾಮಚಂದ್ರನ್

ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ.
ಯೋಗೇಶ್ ಮಾಸ್ಟರ್,
ಬೆಂಗಳೂರು: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ, 2013 ಪು. 355; ಬೆಲೆ: 160/-
ಪ್ರಾಚೀನ ಭಾರತೀಯ ಸಮಾಜ: ಸಬಾಲ್ಟರ್ನ್ ಪರಿಪ್ರೇಕ್ಷ್ಯದಿಂದ
ಸಾಹಿತಿ-ರಂಗಕರ್ಮಿ -ನಾಟ್ಯಾಚಾರ್ಯ ಯೋಗೇಶ್ ಮಾಸ್ಟರ್ ಅವರು ರಚಿಸಿರುವ ಢುಂಢಿ ಸಾಕಷ್ಟು ವ್ಯಾಪಕ ಓದು ಹಾಗೂ ಸಂಶೋಧನೆಯನ್ನು ಆಧರಿಸಿರುವ ಒಂದು ವಿಶಿಷ್ಟ ಕಾದಂಬರಿ. ಇದನ್ನು ಎರಡು ನೆಲೆಗಳಲ್ಲಿ ಅರ್ಥೈಸಬಹುದು: ಸಾಹಿತ್ಯಕ ನೆಲೆಯಲ್ಲಿ ಮತ್ತು ಮಾನವ ಶಾಸ್ತ್ರೀಯ ನೆಲೆಯಲ್ಲಿ.
ಅ) ಸಾಹಿತ್ಯಕ ನೆಲೆಯಲ್ಲಿ, ಸ್ಥೂಲವಾಗಿ, ಢುಂಢಿ ಕೃತಿಯನ್ನು ವೇದಕಾಲೀನ ಸಮಾಜವನ್ನು ವಸ್ತುವನ್ನಾಗುಳ್ಳ ಒಂದು ರೋಚಕ ಕಾದಂಬರಿಯಂತೆ ನೋಡಬಹುದು. ಕನ್ನಡದಲ್ಲಿ ಇದೇ ವಸ್ತುವನ್ನಾಧರಿಸಿದ ಕೆಲವಾದರೂ ಕಾದಂಬರಿಗಳು ಬಂದಿವೆ: ಶಂಕರ ಮೊಕಾಶಿ ಪುಣೇಕರ್, ಅವಧೇಶ್ವರಿ; ದೇವುಡು, ಮಹಾಬ್ರಾಹ್ಮಣ, ಮಹಾಕ್ಷತ್ರಿಯ; ಕೆ. ಎಸ್. ನಾರಾಯಣಾಚಾರ್ಯ, ಅಗಸ್ತ್ಯ, ಕೃಷ್ಣಾವತಾರ; ಇತ್ಯಾದಿ. ಈ ಕೃತಿಗಳೆಲ್ಲವೂ ಶ್ರೇಣೀಕೃತ ಭಾರತೀಯ ಸಮಾಜವನ್ನು ಮೇಲಿಂದ, ಎಂದರೆ ಅಧಿಕಾರಸ್ಥ ವರ್ಗಗಳ ನೆಲೆಯಿಂದ ನೋಡುತ್ತವೆ. ಢುಂಢಿ ಯಾದರೋ ಅದೇ ಪ್ರಾಚೀನ ಭಾರತೀಯ ಸಮಾಜವನ್ನು ಕೆಳಗಿನಿಂದ, ಎಂದರೆ ಬುಡಕಟ್ಟು ಜನಾಂಗಗಳು, ಅರಣ್ಯವಾಸಿಗಳು, ದಾಸರು, ಇವರುಗಳನ್ನು ಒಳಗೊಂಡ ಅಲಕ್ಷಿತ ಸಮುದಾಯಗಳ ನೆಲೆಯಿಂದ ನೋಡುತ್ತದೆ.
ಕ್ರಿ. ಪೂ. 400-200 ಈ ಅವಧಿಯಲ್ಲಿ, ಗಂಗಾನದಿಯ ದಂಡೆಯಲ್ಲಿರುವ ಒಂದು ಕಾಡಿನಲ್ಲಿ ವಾಸಿಸುತ್ತಿರುವ, ಪಶುಪಾಲಕರಾದ ಶಂಬರ ಎಂಬ ಆರಣ್ಯಕ ಮತ್ತು ಅವನ ತಾಯಿ ವಸುಮಾ ಇವರುಗಳಿಂದ ಈ ಕೃತಿ ಪ್ರಾರಂಭವಾಗುತ್ತದೆ. ಶಂಬರನಿಗೆ 25 ವರ್ಷಗಳಾದಾಗ ವಸುಮಾ ತನ್ನ ಗೆಳತಿಯರೊಡನೆ ಹಿಮಾಲಯದ ತಪ್ಪಲಿಗೆ ಹೊರಟುಹೋಗುತ್ತಾಳೆ; ಅವಳಿಗಾಗಿ ಹಂಬಲಿಸುತ್ತಾ ಶಂಬರ ಒಬ್ಬನೇ ಇರುವಾಗ, ಕಾಲಕ್ರಮದಲ್ಲಿ ಯಾಜ್ಞಿಕ ಎಂಬ ಬ್ರಾಹ್ಮಣ ಮತ್ತು ಅಮ್ಮಿತ ಎಂಬ ದಾಸ ಇವನನ್ನು ಕೂಡಿಕೊಳ್ಳುತ್ತಾರೆ. ಸ್ವಲ್ಪ ಸಮಯದನಂತರ, ಸಾವಿನ ಅಂಚಿನಲ್ಲಿರುವ ಢುಂಢಿ ಗಣಪತಿಯನ್ನು ನೋಡಲು ಯಾಜ್ಞಿಕ ಮತ್ತು ಶಂಬರ ಮನೆಯನ್ನು ಅಮ್ಮಿತನ ರಕ್ಷಣೆಗೆ ಒಪ್ಪಿಸಿ ಹೊರಡುತ್ತಾರೆ. ದಾರಿಯಲ್ಲಿ ಢುಂಢಿಯ ಬಾಲ್ಯದ ತಂದೆ-ಗುರು-ಮಿತ್ರ ಎಲ್ಲವೂ ಆದ ವೃದ್ಧ ವದೀರಜ್ಜ ಇವರನ್ನು ಸೇರಿಕೊಳ್ಳುತ್ತಾನೆ; ಪ್ರವಾಸದುದ್ದಕ್ಕೂ ವದೀರಜ್ಜ ಢುಂಢಿಯ ಕಥೆಯನ್ನು ಇತರರಿಗೆ ಹೇಳುತ್ತಾನೆ. ಢುಂಢಿಯೊಬ್ಬ ಅರಣ್ಯಕ; ಅವನ ಸಾಕುತಾಯಿ ಪಾರ್ವತಿ. ತನ್ನ ಅಗಾಧ ಪೌರುಷದಿಂದ ಢುಂಢಿ ತನ್ನ ಸುತ್ತಮುತ್ತಲಿನ ಗಣಗಳನ್ನು ಹಾಗೂ ಆರ್ಯ ರಾಜರನ್ನು ಗೆಲ್ಲುತ್ತಾ, ಗಣ-ಪತಿಯಾಗಿ, ಕೊನೆಯಲ್ಲಿ ಮಹಾ ಗಣ-ಪತಿಯಾಗುತ್ತಾನೆ. ಒರಟ- ಕ್ರೂರಿ-ಅನಾರ್ಯನಾದ ಢುಂಢಿಯಿಂದಾಗುವ ಉಪಟಳವನ್ನು ನಿವಾರಿಸಿಕೊಳ್ಳಲು ಆರ್ಯ ರಾಜರು ಯಾವ ಶುಭಕಾರ್ಯವಾದರೂ ಮೊದಲಿಗೆ ಇವನನ್ನು ಆಹ್ವಾನಿಸಿ, ತಮ್ಮ ಕಾರ್ಯ ನಿವಿಘ್ರ್ನವಾಗುವಂತೆ ಆಶೀರ್ವದಿಸಲು ಬೇಡಿಕೊಳ್ಳುತ್ತಾರೆ; ಕೆಲ ಕಾಲದನಂತರ ಇದೇ ಒಂದು ಸಂಪ್ರದಾಯವಾಗಿ ಬೆಳೆಯುತ್ತದೆ. ಢುಂಢಿಯ ಸಾವಿನೊಂದಿಗೆ ಈ ಕಾದಂಬರಿ ಕೊನೆಗೊಳ್ಳುತ್ತದೆ.

ಅರ್ಥಾತ್, ಪುರಾಣಗಳಲ್ಲಿ ಪಾರ್ವತಿಯ ಬೆವರಿನಿಂದ ಹುಟ್ಟುವ ಮತ್ತು ತನ್ನ ತಂದೆಯಿಂದಲೇ ಕೊಲ್ಲಲ್ಪಟ್ಟು ಅನಂತರ ಆನೆಯ ಮುಖವನ್ನು ಪಡೆಯುವ ಗಣಪತಿಗೆ ಬದಲಾಗಿ, ಈ ಕಾದಂಬರಿಯಲ್ಲಿ ನಾವು ಅನಾರ್ಯ ಬಂಡುಕೋರ ಗಣಪತಿಯನ್ನು ಕಾಣುತ್ತೇವೆ. ಶಂಬರ-ಅಮ್ಮಿತರ ಕಥೆ ಢುಂಢಿಯ ಕಥೆಗೊಂದು ಆವರಣವನ್ನು ಕಲ್ಪಿಸುತ್ತದೆ. ಈ ಆವರಣವೂ ತನ್ನ ವಿವರಗಳಲ್ಲಿ ಮುಖ್ಯ ಕಥೆಗೆ ಸಮಾನಾಂತರವಾಗಿರುವುದರಿಂದ, ಆ ಮುಖ್ಯ ಕಥೆಗೆ ವಿಶ್ವಸನೀಯತೆಯನ್ನು ಕೊಡುತ್ತದೆ.
ಆ) ಮಾನವಶಾಸ್ತ್ರೀಯ ನೆಲೆಯಲ್ಲಿ, ಪ್ರಾಚೀನ ಭಾರತೀಯ ಸಮಾಜದಲ್ಲಿ ಯಾವುದೋ ಒಂದು ದೀರ್ಘ ಕಾಲಘಟ್ಟದಲ್ಲಿ ಸಂಭವಿಸಿರಬಹುದಾದ ಅಗಾಧ ಸಾಮಾಜಿಕ ಚಲನೆಯನ್ನು ಈ ಕೃತಿ ದಾಖಲಿಸಲು ಪ್ರಯತ್ನಿಸುತ್ತದೆ. ಈ ನೆಲೆಯಲ್ಲಿ ಕೃತಿಯ ಮುಖ್ಯ ವಾದವೆಂದರೆ ಪ್ರಾಚೀನ ಆರ್ಯ ವೈದಿಕ ಸಮಾಜವು ತಮ್ಮಿಂದ ಸೋತ ಬರ್ಬರ ಮತ್ತು ನಿಷಾದಾದಿಗಳ ಸಾಮಾಜಿಕ ಸ್ಥಿತಿಗಳನ್ನು ಯಥಾಸ್ಥಾನದಲ್ಲಿರಿಸಲು ಮತ್ತು ಸ್ನೇಹಬುದ್ಧಿಯಿಂದ ಅವರನ್ನು ಸಮಾಧಾನಪಡಿಸಲು ಅವರಲ್ಲಿಯ ಬಹುಪೂಜಿತ ದೇವತೆಗಳನ್ನು ಮತ್ತು ಮುಖ್ಯವಾದ ಪೂಜಾಂಶಗಳನ್ನು ತಮ್ಮ ಶಕ್ತ್ಯಾನುಸಾರ ಪರಿಷ್ಕರಿಸಿ ಅವುಗಳನ್ನು ಒಪ್ಪಿಕೊಂಡರು (‘ಮುನ್ನುಡಿ’). ಈ ಕಥನದ ಕೇಂದ್ರದಲ್ಲಿರುವುದು ಆ ಕಾಲಘಟ್ಟದಲ್ಲಿ ಆಗಿರಬಹುದಾದ ಆರ್ಯ-ಅನಾರ್ಯ ಸಂಪರ್ಕ-ಸಂಘರ್ಷ-ರಾಜಿ- ಅನುಸಂಧಾನ ಪ್ರಕ್ರಿಯೆಯ ರೋಚಕ ವಿವರಗಳು. ಮುಖ್ಯವಾಗಿ, ಈ ಕಥನವು ಮಂಡಿಸುವುದೇನೆಂದರೆ:
ಅ) ಅನಾರ್ಯ ರುದ್ರಗಣ (ನಿಷಾದರು), ಮಾತಂಗ ಗಣ (ಆನೆಗಳನ್ನು ಪಳಗಿಸುವವರು), ಮೂಷಿಕ ಗಣ, ಮಯೂರ ಗಣ, ಇತ್ಯಾದಿ ಅನೇಕ ಸಮುದಾಯಗಳು ಸ್ವತಂತ್ರವಾಗಿ ತಮ್ಮದೇ ಆದ ಶ್ರೀಮಂತ, ಮಾತೃಮೂಲೀಯ ಸಂಸ್ಕೃತಿಯನ್ನು ಹೊಂದಿ, ವಿವಿಧ ಅರಣ್ಯಗಳಲ್ಲಿ ನೆಮ್ಮದಿಯಿಂದ ಬಾಳುತ್ತಿದ್ದುವು. ‘ರುದ್ರ,’ ‘ಗಣಪತಿ’ ಮುಂತಾದುವು ‘ಇಂದ್ರ’ ನಂತೆ ಪದವಿಗಳ ಹೆಸರೇ ಹೊರತು ವ್ಯಕ್ತಿವಾಚಕಗಳಲ್ಲ. ಆರ್ಯರು ಆಯರ್ಾವರ್ತದಿಂದ ದಕ್ಷಿಣಕ್ಕೆ ತಮ್ಮ ಪ್ರಭುತ್ವವನ್ನು ವಿಸ್ತರಿಸುತ್ತಾ ಕೃಷಿಗಾಗಿ ಹಾಗೂ ರಾಜ್ಯವಿಸ್ತರಣೆಗಾಗಿ ಅರಣ್ಯಗಳನ್ನು ನಾಶಮಾಡಬೇಕಾಯಿತು; ಆಗ ಅನಿವಾರ್ಯವಾಗಿ ಅರಣ್ಯಗಳಲ್ಲಿದ್ದ ಅನಾರ್ಯ ಗಣಗಳೊಡನೆ ಘರ್ಷಣೆ ಶುರುವಾಯಿತು. ಕಾಲಕ್ರಮದಲ್ಲಿ, ಆರ್ಯರು ಅನಾರ್ಯರೊಡನೆ ರಾಜಿ-ಸಂಧಾನಗಳಿಗೆ ಮುಂದಾದಾಗ ಎರಡೂ ಸಂಸ್ಕೃತಿಗಳು ಪರಸ್ಪರ ಕೊಡುಕೊಳ್ಳುವಿಕೆಗಳನ್ನು ಕೈಗೊಂಡುವು.
ಆ) ಅನಾರ್ಯ ಗಣ-ನಾಯಕರಾದ ನಿಷಾದ ರುದ್ರ, ಗಿರಿಕನ್ಯೆ ಪಾರ್ವತಿ, ಗೊಲ್ಲ ಕೃಷ್ಣ, ಮುಂತಾದವರನ್ನು ಆರ್ಯರು ದೈವತ್ವಕ್ಕೇರಿಸಿ ಸ್ವೀಕರಿಸಿದರು. ಈ ರೀತಿ ಕಾಲಕ್ರಮದಲ್ಲಿ ದೈವತ್ವಕ್ಕೇರಿದವನು ಅನಾರ್ಯ ಗಣಪತಿ. (ಇದನ್ನು ಸಂಸ್ಕೃತೀಕರಣದ(‘appropriation’) ಒಂದು ಭಾಗದಂತೆ ನೋಡಬಹುದು.)
ಆ) ಅನಾರ್ಯರು ತಮ್ಮ ಸಂಸ್ಕೃತಿಯ ಪ್ರಮುಖ ಅಂಶವಾಗಿದ್ದ ಮುಕ್ತ ಲೈಂಗಿಕತೆಯನ್ನು ಹಾಗೂ ಬಹುಪತಿತ್ವವನ್ನು ಕೈಬಿಟ್ಟು, ಆರ್ಯರ ವಿವಾಹಪದ್ಧತಿಯನ್ನು ಸ್ವೀಕರಿಸಿದರು.
ಇ) ಆರ್ಯರೂ ಅನಾರ್ಯರಂತೆ ಗೋಮಾಂಸ ಭಕ್ಷಕರಾದುದರಿಂದ ಆಹಾರದ ವಿಷಯದಲ್ಲಿ ಹೊಂದಾಣಿಕೆ ಅಷ್ಟೇನೂ ಕಷ್ಟವಾಗಲಿಲ್ಲ. (ಆರ್ಯರು ಅತಿಥಿಗಳನ್ನು ‘ಗೋಘ್ನ’ ಎಂದರೆ ‘ಗೋವುಗಳನ್ನು ಘಾತಿಸುವವರು’ ಎಂದೇ ಕರೆಯುತ್ತಿದ್ದರು); ಇತ್ಯಾದಿ.

ಈ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈ ಕೃತಿಯ ವೈಚಾರಿಕ ಕೇಂದ್ರ ((normative centre)) ಢುಂಢಿಯಲ್ಲ -ಆರ್ಯ ವಾಮದೇವ ಮತ್ತು ಅನಾರ್ಯ ವದೀರಜ್ಜ. ಒಂದು ಸಂದರ್ಭದಲ್ಲಿ ಮಹಷರ್ಿ ವಾಮದೇವರು ಢುಂಢಿಗೆ ಹೀಗೆ ಹೇಳುತ್ತಾರೆ: ಗೆಳೆಯಾ, ಯಾರೇ ಯಾವುದೇ ಜಾತಿಯಲ್ಲಿ, ಯಾವುದೇ ವರ್ಣದಲ್ಲಿ, ಯಾವುದೇ ವರ್ಗದಲ್ಲಿ ಹುಟ್ಟಿದರೂ ತಾವು ಪಡೆಯುವ ಸಂಸ್ಕಾರದಿಂದ, ತಾವು ನಡೆಸುವ ಸದಾಚಾರದಿಂದ ಬ್ರಾಹ್ಮಣರಾಗುತ್ತಾರೆ. ಜಾತಿ ಎಂಬುದು ಕರ್ಮದಿಂದಾಗುವುದೇ ಹೊರತು ಹುಟ್ಟಿನಿಂದಲ್ಲ (ಪು. 271). ಅರಣ್ಯಕನಾದ ವುದೀರಜ್ಜನಿಗೆ ಸೃಷ್ಟಿಯ ಸಕಲ ಜೀವಜಾಲವೂ ಪೂಜಾರ್ಹ; ತಮ್ಮ ಸಮುದಾಯದ ಮೇಲೆ ದಂಡೆತ್ತಿ ಬಂದ ಶತ್ರುಗಳಿಗೂ ತಾವು ತಿನ್ನುವ ಆಹಾರವನ್ನು ಕೊಡುತ್ತಾರೆ. ಒಂದು ಪ್ರಾಣಿಯನ್ನು ಕುಯ್ಯುವಾಗಲೂ, ಒಂದು ಮರವನ್ನು ಕಡಿಯುವಾಗಲೂ, ಒಂದು ಮರದಿಂದ ಅಥವಾ ಗಿಡದಿಂದ ಹಣ್ಣನ್ನೋ ಕಾಯಿಯನ್ನೋ ಹೂವನ್ನೋ ಅಥವಾ ಬರೀ ಎಲೆಯನ್ನೋ ಕೀಳುವಾಗಲೂ ಬೊಗಸೆಯೊಡ್ಡಿ, ಕಣ್ಮುಚ್ಚಿ, ವದೀರಜ್ಜ ಪ್ರಾರ್ಥಿಸುತ್ತಿದ್ದರು; ಅವುಗಳ ಒಪ್ಪಿಗೆ ಅಂತರ್ಭೊಧವಾದಾಗ ಮಾತ್ರ ಮುಂದುವರೆಯುತ್ತಿದ್ದರು (ಪು.80). ಮಾನವರಿಗೂ ನಿಸರ್ಗಕ್ಕೂ ಇರಬೇಕಾದ ಅವಿನಾ ಸಂಬಂಧದ ಮೂರ್ತ ರೂಪ ವದೀರಜ್ಜ.
ಢುಂಢಿ ಲೇಖಕರ ಮೊದಲ ದೀರ್ಘ ಕೃತಿಯಾದುದರಿಂದ ಅದರ ಮಿತಿಗಳೂ ಸಾಕಷ್ಟಿವೆ. ಕಾದಂಬರಿ ವರ್ಣಿಸುವ ಆರ್ಯ-ಅನಾರ್ಯ ಘರ್ಷಣೆ ಹಾಗೂ ಸಂಧಾನ ಪ್ರಕ್ರಿಯೆ ಕನಿಷ್ಠ ಪಕ್ಷ ಲೇಖಕರು ಸೂಚಿಸುವ ಕಾಲಕ್ಕಿಂತ ಒಂದೆರಡು ಸಹಸ್ರಮಾನ ಹಿಂದೆ ಹೋಗಬೇಕು; ಕ್ರಿ. ಪೂ. 3-2ನೆಯ ಶತಮಾನಗಳ ಕಾಲ ಮೌರ್ಯ ಸಾಮ್ರಾಜ್ಯದ ಕಾಲ ಮತ್ತು ಬುದ್ಧನಿಗಿಂತ 200 ವರ್ಷ ಈಚಿನದು. ಆ ಹೊತ್ತಿಗೆ, ಆರ್ಯ-ಅನಾರ್ಯ ಸಂಘರ್ಷ ತನ್ನದೇ ಆದ ರೀತಿಯಲ್ಲಿ ಮುಗಿದಿತ್ತು. ಹಾಗೆಯೇ, ಅನೇಕ ಸಂದರ್ಭಗಳಲ್ಲಿ ಲೇಖಕರು ಕೊಡುವ ವಿವರಗಳು ಔಚಿತ್ಯಪ್ರಜ್ಞೆಯನ್ನು ಮೀರುತ್ತವೆ. ಅನಾರ್ಯ ಸಮುದಾಯಗಳಲ್ಲಿತ್ತು ಎಂದು ಹೇಳಲಾಗುವ ಮುಕ್ತ ಲೈಂಗಿಕತೆಯನ್ನು ದಾಖಲಿಸಲು ಲೇಖಕರು ಅನೇಕ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ: ಕಾದಂಬರಿಯು ಶುರುವಾಗುವುದೇ ಶಂಬರನು ತನ್ನ ಉದ್ರಿಕ್ತ ಶಿಶ್ನವನ್ನು ತೋರಿಸುತ್ತಾ ತನ್ನ ತಾಯಿಯನ್ನು ಸುತ್ತು ಹಾಕುವುದರಿಂದ. ಅನಂತರ ಬರುವ ರುದ್ರ-ಪಾರ್ವತಿ ಸಂಭೋಗ ವರ್ಣನೆ ದೀರ್ಘವಾಗಿರುವುದಲ್ಲದೆ ಜಿಗುಪ್ಸೆಯನ್ನೂ ಉಂಟುಮಾಡುತ್ತದೆ. ಕೃತಿಯಲ್ಲಿ ಬರುವ ರುದ್ರ/ಶಿವನ ಪಾತ್ರ ತುಂಬಾ ಅತೃಪ್ತಿಕರವಾಗಿದೆ.
ಆದರೆ, ಇವೆಲ್ಲಾ ಮಿತಿಗಳನ್ನು ಗುರುತಿಸಿಯೂ ನಾವು ಢುಂಢಿ ಕಾದಂಬರಿಯ ರಚನೆಯ ಹಿಂದೆ ಇರುವ ಅಗಾಧ ವ್ಯುತ್ಪತ್ತಿ ಹಾಗೂ ಚಿಂತನೆಯನ್ನು ಮರೆಯಬಾರದು. ಕನ್ನಡದಲ್ಲಿ ಮತ್ತು ಕಾದಂಬರಿಯ ರೂಪದಲ್ಲಿ ಈ ಬಗೆಯ ಇತಿಹಾಸ ಚಿತ್ರಣ ಬಂದಿರುವುದು ಇದೇ ಮೊದಲು.
***********************
ಒಂದು ವೈಚಾರಿಕ ಕೃತಿ ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದಕೊಡುವುದು ಸಹಜ; ಈ ಕುರಿತು ಆರೋಗ್ಯಪೂರ್ಣ ಚರ್ಚೆ ನಡೆಯುವುದೂ ಅವಶ್ಯಕ. ಓದುಗರಿಗೆ ಕೃತಿಯ ವೈಚಾರಿಕತೆಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ‘ಧಾರ್ಮಿಕ ಕಾರಣ’ಗಳನ್ನು ಮುನ್ನೊಡ್ಡಿ, ಈ ಕೃತಿಯ ವೈಚಾರಿಕತೆಯನ್ನು ಕುರಿತು ಆವೇಶಪೂರ್ಣ ವಾದ-ವಿವಾದಗಳು ನಡೆಯುತ್ತಿರುವುದು ದುರದೃಷ್ಟಕರ.
1) ಪ್ರಾಚೀನ ಭಾರತವನ್ನು ಕುರಿತು ಕಾದಂಬರಿಯಲ್ಲಿ ಬರುವ ವಿವರಗಳು ಅಷ್ಟೇನೂ ಹೊಸದಲ್ಲ.
ಕಳೆದ ಶತಮಾನದಲ್ಲಿ ರೋಮಿಲಾ ಥಾಪರ್, ಎಸ್. ಆರ್. ಶರ್ಮ, ಭಗವತ್ ಶರಣ ಉಪಾಧ್ಯಾಯ, ದೇವೀ ಪ್ರಸಾದ್ ಚಟ್ಟೊಪಾಧ್ಯಾಯ, ಮುಂತಾದ ಅನೇಕ ಇತಿಹಾಸಜ್ಞರು ಪ್ರಾಚೀನ ಭಾರತೀಯ ಸಮಾಜದ ಬಹುವರ್ಣೀಯ ನೇಯ್ಗೆಯನ್ನು ಸವಿಸ್ತಾರವಾಗಿ ದಾಖಲಿಸಿದ್ದಾರೆ. ( ಪಾಲ್ ಬಿ. ಕೋರ್ಟ್ ರೈಟ್ ಅವರ ಗಣೇಶ: ಲಾರ್ಡ್ ಆಫ್ ಅಬ್ಸ್ಟಕಲ್ಸ್ ಕೃತಿಯನ್ನು ತಾವು ಆಧರಿಸಿರುವುದಾಗಿ ಲೇಖಕರು ಮುನ್ನುಡಿಯಲ್ಲಿ ಹೇಳುತ್ತಾರೆ.) ಇವುಗಳಲ್ಲಿ ಒಂದೆರಡನ್ನಾದರೂ ನಾವು ಗಮನಿಸಿದರೆ, ಯೋಗೇಶ್ ಮಾಸ್ಟರ್ ಅವರ ಕೃತಿ ಎಷ್ಟು ಸಂಯಮದಿಂದ ಬರೆಯಲ್ಪಟ್ಟಿದೆ ಎಂಬುದು ಗೊತ್ತಾಗುತ್ತದೆ.
ಅನೇಕ ಭಾಷೆಗಳಿಗೆ ಅನುವಾದಿತವಾಗಿರುವ ಭಗವತ್ ಶರಣ ಉಪಾಧ್ಯಾಯರ ಭಾರತೀಯ ಬಹುಮುಖೀ ಸಂಸ್ಕೃತಿ ಎಂಬ ಕೃತಿಯ ಕೆಲವು ತೀರ್ಮಾನಗಳು ಹೀಗಿವೆ: ಪ್ರಸಿದ್ಧ ವೈಯಾಕರಣಿ ಪಾಣಿನಿ ಭಾರತದವನಾಗಿರದೆ ಇರಾನ್ ನಾಗರಿಕನಾಗಿದ್ದ ಯೂಸುಫಿಯಾ ಪಠಾಣನಾಗಿದ್ದ; ಮುಸ್ಲಿಮರ ಏಕ ದೈವತ್ವ ಕಲ್ಪನೆಯು . . . ಶಂಕರರ ಅದ್ವೈತ ಚಳುವಳಿಗೆ ಪ್ರೇರಕವಾಗಿರಬಹುದು; ಮಹಾಭಾರತದಲ್ಲಿ ಬರುವ ಶಿಲ್ಪಿ ಮಯ ಅಸ್ಸೀರಿಯಾದ ವಾಸ್ತುಶಿಲ್ಪಿ; ಅಸ್ಸೀರಿಯನ್ನರ ಶಿಕ್ಷಾವಿಧಾನಗಳಲ್ಲಿ ಒಂದಾದ  ‘ಮೂಗಿನಲ್ಲಿ ರಂಧ್ರ ಮಾಡಿ ದಾರ ಕಟ್ಟುವ ಪದ್ಧತಿ’ ಭಾರತದಲ್ಲಿ ಮೂಗುಬೊಟ್ಟಾಗಿ ಅಲಂಕರಣ ವಿಧಾನವಾಯಿತು; ಇತ್ಯಾದಿ. ಮಧ್ವರ ದ್ವೈತ ಸಿದ್ಧಾಂತದ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವವಿದೆ
ಎಂದು ವಾದಿಸುತ್ತಾ, ಎ. ಎಲ್. ಬಾಷಮ್ ಹೀಗೆ ಹೇಳುತ್ತಾರೆ:
“ The resemblances of  Madhwa’s system to Christianity are so striking that influence, perhaps through the Syrian Christians of Malabar, is almost certain” (The Wonder That Was India, p.333).
ಈ ಅಂಶವನ್ನು ರೋಮಿಲಾ ಥಾಪರ್ ಅವರೂ ಒಪ್ಪಿ ಹೀಗೆ ತೀರ್ಮಾನಿಸುತ್ತಾರೆ:
“Some of  Madhwa’s ideas suggest that he was familiar with and possibly influenced by the Christian Church of Malabar” (A History of India, vol. I, p. 218).
ಇಂತಹ ವಿಚಾರಗಳಿಗಾಗಿ ಉಪಾಧ್ಯಾಯರನ್ನಾಗಲಿ, ಬಾಷಮ್ ಹಾಗೂ ರೋಮಿಲಾ ಥಾಪರ್ ಅವರನ್ನಾಗಲಿ ಧರ್ಮದ್ರೋಹಿಗಳೆಂದು ಕರೆದುದಾಗಲಿ ಅವರ ವಿರುದ್ಧ
ಪ್ರತಿಭಟಿಸಿದುದಾಗಲಿ ನನಗೆ ಗೊತ್ತಂತೆ ಇಲ್ಲ.
2) ವೇದೋಪನಿಷತ್ತುಗಳಲ್ಲಿ ಕಂಡುಬರುವ ಧೀಮಂತ ವೈಚಾರಿಕತೆ ಇಂದಿಗೂ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಕೃಷ್ಣ ಯಜುರ್ವೇದದಲ್ಲಿ ಬರುವ ‘ಶ್ರೀ ರುದ್ರಪ್ರಶ್ನಃ’ ಎಂಬ ಭಾಗವು ಪ್ರತಿದಿನವೂ ದೇಶದ ಸಹಸ್ರಾರು ಶಿವ ದೇವಾಲಯಗಳಲ್ಲಿ, ಅಭಿಷೇಕದ ಸಂದರ್ಭದಲ್ಲಿ ಉಚ್ಚರಿಸಲ್ಪಡುತ್ತದೆ; ಅದರಲ್ಲಿ ಒಂದು ಕಡೆ ತಸ್ಕರಾಣಾಂ ಪತಯೇ ನಮಃ (‘ಕಳ್ಳರ ನಾಯಕನಿಗೆ ನಮಿಸುತ್ತೇವೆ’) ಎಂದೂ, ಮತ್ತೊಂದು ಕಡೆ ಕುಲಾಲೇಭ್ಯೋ ಕರ್ಮಾರೇಭ್ಯಶ್ಚ ವೋ ನಮಃ (‘ಕುಂಬಾರನಿಗೆ, ಕಮ್ಮಾರನಿಗೆ ನಮಿಸುತ್ತೇವೆ’) ಎಂದು ರುದ್ರನನ್ನು ವರ್ಣಿಸಲಾಗಿದೆ. ಪ್ರಸಿದ್ಧ ‘ನಾಸದೀಯ ಸೂಕ್ತ’ ಹೀಗೆ ಮುಗಿಯುತ್ತದೆ: ಅಸ್ಯಾಧ್ಯಕ್ಷಃ ಪರಮೆವ್ಯೋಮನ್ ತ್ಸೋ ಆಂಗ ವೇದ ಯದಿ ವಾ ನ ವೇದ (‘ಮೇಲಿನಿಂದ ಎಲ್ಲವನ್ನೂ ನೋಡುತ್ತಿರುವ ಅವನು ಇದೆಲ್ಲವನ್ನೂ ಅರಿತಿರಬಹುದು -ಅಥವಾ ಅವನಿಗೂ ಗೊತ್ತಿಲ್ಲ’). ಎಂದರೆ, ದೇವರಿಗೂ ಈ ಸೃಷ್ಟಿ ರಹಸ್ಯ, ಪ್ರಾಯಃ, ಗೊತ್ತಿಲ್ಲ ಎಂದು ಹೇಳುವ ಪ್ರಖರ ವೈಚಾರಿಕತೆ ಉಪನಿಷದ್ಕಾರರಲ್ಲಿತ್ತು.
ಕೊನೆಯದಾಗಿ: ಅತ್ಯಂತ ಪ್ರಾಚೀನವಾಗಿರುವ, ಉಪನಿಷತ್ತುಗಳ ಪ್ರಖರ ಚಿಂತನೆಯನ್ನು ಮತ್ತು ಪ್ರತಿಭೆಯ ಪರಾಕಾಷ್ಠೆಯಾದ ‘ರಾಮಾಯಣ’- ‘ಮಹಾಭಾರತ’ಗಳನ್ನು ಆಧರಿಸಿರುವ, ಹಿಂದು ಧರ್ಮವು ಒಂದು ಒಳ್ಳೆಯ ಪುಸ್ತಕದಿಂದ ಹಿರಿಮೆಯಾಗಲೀ, ಒಂದು ಕೆಟ್ಟ ಪುಸ್ತಕದಿಂದ ಆಘಾತವಾಗಲೀ ಆಗದಷ್ಟು ಶ್ರೀಮಂತವಾಗಿದೆ.

‍ಲೇಖಕರು G

September 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

36 ಪ್ರತಿಕ್ರಿಯೆಗಳು

  1. kum.veerabhadrappa

    ಪ್ರಸಿದ್ಧ ಮಿಮರ್ಶಕರಾದ ಡಾ ಸಿ ಎನ್ ರಾಮಚಂದ್ರನ್ ವಿವಾದಗ್ರಸ್ತ ಡುಂಡಿ ಕಾದಂಬರಿ ಕುರಿತು ಆಪ್ತವಾಗಿಯೂ, ಪರಿಚಯಾತ್ಮಕವಾಗಿಯೂ ಬರೆದಿದ್ದಾರೆ. ಲೇಖನ ತುಂಬಾ ಹಿಡಿಸಿತು, ಅಲ್ಲದೆ ಅದನ್ನು ನಿಷೇಧಿಸುವಂತೆ ಗಲಾಟೆ ಎಬ್ಬಿಸಿರುವ ಮತಾಂಧರ ಬಗೆಗೂ ಸಿಟ್ಟು ಬಂತು, ಸರ್ಕಾರ ಮತ್ತು ನ್ಯಾಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ, ಯೋಗೇಶ್ ಮಾಸ್ಟರ್ ಪರ ವಕೀಲರಾಗೋಣ ನಾವೆಲ್ಲ, ಇವತ್ತು ಅವರು ನಾಳೆ ನಾವು, ಅಲ್ಲವೆ!
    ಕುಂವೀ

    ಪ್ರತಿಕ್ರಿಯೆ
    • Sridhar Pai

      Kumvee Sir, I don’t think you will ever write a novel with as bad a taste as Dundhee. So your fears are unfounded.

      ಪ್ರತಿಕ್ರಿಯೆ
  2. Rajendra Prasad

    CNR sir ಬಹಳ ಇಷ್ಟವಾಯಿತು.. ನಿಮ್ಮ ಬರಹ ಎಲ್ಲರ ಕಣ್ಣು ತೆರೆಸಲಿ .. ಸೃಜನಶೀಲ ಕೃತಿಯೊಂದನ್ನು ಕೆಟ್ಟ ಕಣ್ಣುಗಳಿಂದ ನೋಡುವುದು ದೂರವಾಗಲಿ..

    ಪ್ರತಿಕ್ರಿಯೆ
  3. Ananda Prasad

    ಸಾಹಿತ್ಯದ ಬಗ್ಗೆ ಆಳ ಜ್ಞಾನ ಹೊಂದಿರುವ ವಿಮರ್ಶಕ ಪ್ರೊ. ಸಿ. ಎನ್. ರಾಮಚಂದ್ರನ್ ಅವರ ಢುoಢಿ ಕುರಿತಾದ ಈ ಲೇಖನ ನೋಡಿದಾಗ ಈ ಕೃತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಥವಾ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಯಾವ ಅಂಶಗಳೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ‘ಢುoಢಿ’ ಕೃತಿಯನ್ನು ನಿಷೇಧಿಸಬೇಕಾದ ಯಾವುದೇ ಅಗತ್ಯವಿಲ್ಲ. ಈ ಕೃತಿಯ ಕುರಿತು ಎಬ್ಬಿಸಿದ ಹುಯಿಲು ಉದ್ಧೇಶಪೂರ್ವಕ ಹಾಗೂ ರಾಜಕೀಯ ವಾಸನೆಯಿಂದ ಕೂಡಿರುವುದು ಸ್ಪಷ್ಟವಾಗುತ್ತದೆ. ಒಂದು ಸಬ್ಸಿಡಿ ದರದ ಕೇಸರಿ ನಿಲುವಿನ ಪತ್ರಿಕೆ ಈ ವಿಷಯವನ್ನು ಎತ್ತಿಕೊಂಡು ತಾನು ಹಿಂದೂಗಳ ಮುಖವಾಣಿ, ಉದ್ಧಾರಕ ಎಂಬ ಭ್ರಮೆಯನ್ನು ಬಿತ್ತಿ ಹಿಂದೂಗಳ ನಡುವೆ ತನ್ನ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನಡೆಸಿರುವ ಹತಾಶ ಯತ್ನದಂತೆ ಈ ಇಡೀ ಪ್ರಹಸನ ಕಾಣುತ್ತದೆ. ಇದರ ಜೊತೆ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿರುವ ಕೇಸರಿ ರಾಜಕೀಯ ಪಕ್ಷಕ್ಕೆ ಧರ್ಮ ಹಾಗೂ ದೇವರ ಹೆಸರಿನಲ್ಲಿ ಉನ್ಮಾದ ಎಬ್ಬಿಸಿ ಸಂಘಟನಾತ್ಮಕವಾಗಿ ಬಲಪಡಿಸುವ ಹುನ್ನಾರವೂ ಇದರ ಹಿಂದೆ ಅಡಗಿದೆ.
    ಅತ್ಯಾತುರವಾಗಿ ಕೃತಿಕಾರನನ್ನು ಬಂಧಿಸಿರುವುದರ ಹಿಂದೆ ಈ ಮೊದಲು ಅಧಿಕಾರದಲ್ಲಿದ್ದ ಕೇಸರಿ ಪಕ್ಷವು ಪೋಲೀಸ್ ಇಲಾಖೆಯನ್ನು ಕೇಸರೀಕರಣ ಗೊಳಿಸಿರುವುದು ಕಾರಣವಾಗಿರಬಹುದು. ಈಗ ಸರ್ಕಾರ ಬದಲಾದರೂ ಪೋಲೀಸ್ ಇಲಾಖೆಯಲ್ಲಿ ಇರುವ ಕೇಸರಿನಿಷ್ಠ ಪೋಲೀಸರ ಕಿತಾಪತಿ ಕೃತಿಕಾರನ ಬಂಧನದಲ್ಲಿ ಕೆಲಸ ಮಾಡಿರುವಂತೆ ಕಾಣುತ್ತದೆ. ಪೋಲೀಸ್ ಇಲಾಖೆಯನ್ನು ಕೇಸರೀ ಕಾರಣದಿಂದ ಮುಕ್ತಗೊಳಿಸಬೇಕಾದ ಅಗತ್ಯವನ್ನು ಈ ಪ್ರಕರಣ ಎತ್ತಿ ತೋರಿಸುತ್ತಿದೆ.

    ಪ್ರತಿಕ್ರಿಯೆ
  4. ಸತ್ಯನಾರಾಯಣ

    ಸಿ.ಎನ್.ಆರ್. ಸರ್ ಈ ಕೃತಿಯನ್ನು ನೀವು ಈಗಾಗಲೇ ಓದಿ ಮಾತನಾಡಿರುವುದರಿಂದ, ಬರೆದಿರುವುದರಿಂದ ಕೃತಿಯ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಳ್ಳುವ ಅವಕಾಶ ನಮಗೆ ಸಿಕ್ಕಿದೆ. ದುರಂತವೆಂದರೆ, ಈಗ ಆ ಕೃತಿಯನ್ನು ಓದಬೇಕೆಂದರೂ ಸಿಗುತ್ತಿಲ್ಲ. ಸುಳ್ಳಿಗೆ ಎಷ್ಟೇ ರತ್ನಖಚಿತ ಫ್ರೇಮ್ ಹಾಕಿದ್ದರೂ, ಸತ್ಯ ಎಲ್ಲೊ ಒಂದು ಕಡೆ ಪ್ರಕಾಶಿಸಿಯೇ ತೀರುತ್ತದೆ! ಕೃತಿ ಬೇಗ ೋದುಗರ ಕೈ ಸೇರಲಿ ಎಂದು ಆಶಿಸುತ್ತೇನೆ. ಈ ಹಿಂದೆ, ಇಂತಹ ಸಂದರ್ಭದಲ್ಲಿ ಅಧಿಕೃತವಾಗಿ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಿದ್ದ ಶ್ರೀ ರವಿವರ್ಮಕುಮಾರ್ ಅವರೇ ಈಗ ಅಡ್ವೊಕೇಟ್ ಜನರಲ್ ಆಗಿದ್ದಾರೆ. ಇದು ಅವರಿಗೆ ಸತ್ವಪರೀಕ್ಷೆಯ ಸಮಯ.

    ಪ್ರತಿಕ್ರಿಯೆ
  5. narayan raichur

    Prof. CNR -avare, Nimmaanataha Hiriya,Samyamasheela,vivechankaararobbaru krutiyannu odi pratikrayisiruvudu nammanataha innoo kruti odadavarigoo bharavase moodiside. Lekhana tumbaa hidisitu – Vandanegalu !!

    ಪ್ರತಿಕ್ರಿಯೆ
  6. mahantesh navalkal

    ಸಿಎನ್ನಾರ್ ಅದರ ಎರಡು ಮುಖಗಳನ್ನು ಪರಿಚಯಿಸಿದ್ದಾರೆ. ದಯವಿಟ್ಟು ಜನರಿಗೆ ಧುಂಡಿ ಓದಲು ಕೊಡಿ. ಮುಂದಿನ ದಿನಗಳಲ್ಲಿ ಇತಿಹಾಸ ಪುರಾಣಗಳ ಪುನರ್ ಪರಿಷ್ಕರಣವಾಗಲಿ
    ಮಹಾಂತೇಶ ನವಲಕಲ್

    ಪ್ರತಿಕ್ರಿಯೆ
  7. ನಿಶಾ ಗೋಪಿನಾಥ್

    ಕೃತಿಯ ಬಗ್ಗೆ ಎದ್ದಿರುವ ಗುಲ್ಲುಗಳೆಲ್ಲ ಪೊಳ್ಳು ಎನ್ನುವುದು ಇದರಿಂದ ಅರ್ಥವಾಗುತ್ತದೆ. ಸಿಎನ್ಆರ್ ಸರ್, ಈ ಬರಹದ ಮೂಲಕ ನೀವು ಎಲ್ಲರ ಕಣ್ಣು ತೆರೆಸಿದ್ದೀರಿ, ಮತಾಂಧರಿಗೆ ಸರಿಯಾಗಿ ಚುಚ್ಚಿದ್ದೀರಿ… ಒಬ್ಬ ಲೇಖಕನ ವಯಕ್ತಿ ನೆಲೆಯಲ್ಲಿ ಅವನ ಬರಹವನ್ನೂ ನೋಡಬಾರದು ಎಂಬುದನ್ನು ತಿಳಿಸಿದ್ದೀರಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದವರಿಗೆ ಸರಿಯಾದ ಪಾಠ ಹೇಳಿದ್ದೀರಿ. ಧನ್ಯವಾದಗಳು.
    -ನಿಶಾ ಗೋಪಿನಾಥ್

    ಪ್ರತಿಕ್ರಿಯೆ
  8. Prashanth

    Dear Dr.C.N.Ramachandran
    I truly appreciate your balanced view and it surely provides right perspective.
    However there is one question which always bothers me, why people do experiments only with Hindu religion? My literature knowledge is very limited; please provide me some reference if there are any about other religion. On the contrary I observed huge protests from other religions even if there is a minor comment made.
    Here are few questions keep haunting me. Why only Hindu religion is always targeted and experimented? Is it our strength or limitation? Does concept of open mindedness means we should tolerate everything and enjoy it?
    For a minute let us imagine what Mr.Yogesh Master has written is truth. What will happen to the generation which believes in GOD Ganesha and has some moral obligation (hopefully) before committing sins? In my opinion ideal thing is to be true to ourselves and do right things. However few are enlightened to adhere to that philosophy. Still big portion of our population has some respect for GOD which enables them to think twice before doing wrong things.
    Warm Regards
    Prashanth

    ಪ್ರತಿಕ್ರಿಯೆ
    • Ananda Prasad

      ಬೇರೆ ಧರ್ಮಗಳ ಜನರು ದೇವರು/ಧರ್ಮಗಳ ಕೃತಿಗಳ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಾರೆ ಎಂದು ಹಿಂದೂಗಳೂ ಹಾಗೇ ಮಾಡಬೇಕೆಂದು ಹಿಂದೂಗಳನ್ನು ಕೆರಳಿಸುವುದು ಸಮಂಜಸವಲ್ಲ. ಹಿಂದೂ ಧರ್ಮದಲ್ಲಿ ಅಂಥ ಸಹನೆಯ ಗುಣ ಇದೆ ಎಂದರೆ ಅದಕ್ಕೆ ನಾವು ಹೆಮ್ಮೆ ಪಡಬೇಕು. ಅದನ್ನೊಂದು ದೌರ್ಬಲ್ಯವೆಂದು ತಿಳಿಯುವುದು ಸಮಂಜಸವಲ್ಲ. ಎಲ್ಲಿ ಧರ್ಮ ದೇವರ ಬಗೆಗಿನ ಟೀಕೆ ಟಿಪ್ಪಣಿಗಳಿಗೆ ಸಹನೆ ಇದೆಯೋ ಅದು ನಾಗರಿಕವಾಗಿ ಮೇಲ್ಮಟ್ಟದಲ್ಲಿ ಇದೆ ಎಂದು ಅರ್ಥ. ಇಂಥ ಸಹನೆಯನ್ನು ಕಾಯ್ದುಕೊಂಡು ಸಾಹಿತ್ಯ ವಲಯವನ್ನು ಬೆಳೆಸುವುದು ರಾಜ್ಯಕ್ಕೆ ಹೆಮ್ಮೆ ತರುವ ಕೆಲಸ. ಕರ್ನಾಟಕವು ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದೆ. ಇದು ನಮಗೆ ಹೆಮ್ಮೆಯ ವಿಷಯ. ಸಾಹಿತ್ಯದಲ್ಲಿ ವೈವಿಧ್ಯಮಯ ರಚನೆಗಳಿಗೆ ಪ್ರೋತ್ಸಾಹ ಕೊಡಬೇಕು. ಈಗ ರಚಿತವಾದ “ಢುoಢಿ’ ಕೃತಿ ಅಂಥ ವೈವಿಧ್ಯಮಯ ಕೃತಿ. ಅದನ್ನು ಪ್ರೋತ್ಸಾಹಿಸುವುದು ಬಿಟ್ಟು ಬಂಧಿಸುವುದು ಸಾಹಿತ್ಯ ವಲಯಕ್ಕೆ ಹಿನ್ನಡೆ. ಅಷ್ಟಕ್ಕೂ ಈ ಕೃತಿಯನ್ನು ಹೆಚ್ಚು ಜನ ಓದುವ ಸಂಭವ ಇರಲಿಲ್ಲ. ಸಾಹಿತ್ಯದ ಬಗ್ಗೆ ಗಾಢ ಆಸಕ್ತಿ ಉಳ್ಳವರು ಮಾತ್ರ ಅದನ್ನು ಕೊಂಡು ಓದುತ್ತಿದ್ದರು. ಹೀಗಿರುವಾಗ ಅದರ ಮೇಲೆ ನಿಷೇಧ ಹೇರಿ ಸ್ರಜನಶೀಲ ಕಲೆಯನ್ನು ಕೊಳ್ಳುವ ಕೆಲಸ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಎಂದಿಗೂ ಸಮರ್ಥನೀಯವಲ್ಲ.

      ಪ್ರತಿಕ್ರಿಯೆ
      • Venkatesha

        Kannadakke athi hecchu jnanapeeta prashasti baralilla… baMdiddu kEvala 5 maatra, matte mooru naavu thandiddu…!!

        ಪ್ರತಿಕ್ರಿಯೆ
        • Ananda Prasad

          5 ಜ್ಞಾನಪೀಠ ಪ್ರಶಸ್ತಿ ಬಂದದ್ದು, ಉಳಿದ ಮೂರು ನಾವು ತಂದದ್ದು ಎಂಬುದು ಸಮಂಜಸವಲ್ಲ. ಜ್ಞಾನಪೀಠ ನಾವು ತರಲು ಅದೇನು ಹಣ ಕೊಟ್ಟು ತರುವ ಸಾಮಗ್ರಿ ಅಲ್ಲ. ಪ್ರತಿಭೆ ಹಾಗೂ ಕಲೆಯಲ್ಲಿ ಪರಿಶ್ರಮ ಇಲ್ಲದೆ ಅದು ವಶೀಲಿಬಾಜಿ, ರಾಜಕೀಯ ಲಾಬಿಯಿಂದ ಸಿಕ್ಕಲಾರದು ಎಂಬುದಕ್ಕೆ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಎಲ್ಲ ಭಾಷೆಯ ಲೇಖಕರ ಪಟ್ಟಿಯನ್ನು ಪರಿಶೀಲಿಸಿದಾಗ ಗೊತ್ತಾಗುತ್ತದೆ. ಕನ್ನಡ ಸಾಹಿತ್ಯಕ್ಕೆ ಸಿಕ್ಕ ಈ ಮಾನ್ಯತೆಗೆ ನಾವು ಸಂತೋಷ ಪಡೋಣ. 40 ಕೋಟಿಗೂ ಮಿಕ್ಕಿ ಜನ ಮಾತನಾಡುವ ಹಿಂದಿ ಭಾಷೆಗೂ ಇಷ್ಟು ಪ್ರಶಸ್ತಿ ಸಿಕ್ಕಿಲ್ಲ ಎಂಬುದು ಗಮನಾರ್ಹ. ಇಂಥ ಪರಂಪರೆಯನ್ನು ನಾವು ಮುಂದುವರಿಸಬೇಕಾದರೆ ಸಾಹಿತ್ಯದ ಮೇಲೆ ನಿರ್ಬಂಧ ಹೇರಬಾರದು, ಹೆಚ್ಚಿನ ಪ್ರೋತ್ಸಾಹ ಕೊಡಬೇಕು.

          ಪ್ರತಿಕ್ರಿಯೆ
          • ಶಿವ

            ಜ್ಞಾನಪೀಠ ಜನಸಂಖ್ಯೆ ಆಧಾರದ ಮೇಲೆ ಕೊಡುವುದಿಲ್ಲ. ಹಾಗಾಗಿ ೪೦ ಕೋಟಿ, ಹಿಂದಿ ಇದೆಲ್ಲಾ ಅಪ್ರಸ್ತುತ!

  9. Ishwara Bhat K

    ಕೊನೆಯದಾಗಿ: ಅತ್ಯಂತ ಪ್ರಾಚೀನವಾಗಿರುವ, ಉಪನಿಷತ್ತುಗಳ ಪ್ರಖರ ಚಿಂತನೆಯನ್ನು ಮತ್ತು ಪ್ರತಿಭೆಯ ಪರಾಕಾಷ್ಠೆಯಾದ ‘ರಾಮಾಯಣ’- ‘ಮಹಾಭಾರತ’ಗಳನ್ನು ಆಧರಿಸಿರುವ, ಹಿಂದು ಧರ್ಮವು ಒಂದು ಒಳ್ಳೆಯ ಪುಸ್ತಕದಿಂದ ಹಿರಿಮೆಯಾಗಲೀ, ಒಂದು ಕೆಟ್ಟ ಪುಸ್ತಕದಿಂದ ಆಘಾತವಾಗಲೀ ಆಗದಷ್ಟು ಶ್ರೀಮಂತವಾಗಿದೆ.ಎನ್ನುವುದು ಅತ್ಯಂತ ತೂಕವನ್ನು ಕೊಡುವ ಮಾತು. ಪುಸ್ತಕವನ್ನು ಓದುವುದಕ್ಕೆ ವಿರೋಧವಾಗದಿರಲಿ.

    ಪ್ರತಿಕ್ರಿಯೆ
  10. Vedanta Adiga

    ಯೋಗೀಶ್ ಮಾಸ್ತರ್ ಅವರ ಈ ಕೃತಿ ಕನ್ನಡದ ಸಂದರ್ಭದಲ್ಲಿ ಮಹತ್ವಪೂರ್ಣವಾದದ್ದು. ಹಿರಿಯ ವಿಮರ್ಶಕ ರಾಮಚಂದ್ರನ್ ಅವರು ಯೋಗೀಶ್ ಮಾಸ್ತರ್ ಅವರ ಕೃತಿಯ ಕಿರುಪರಿಚಯ ಮಾಡಿಕೊಟ್ಟಿದ್ದಾರೆ. ಆದರೆ ಈ ಅನನ್ಯ ಹಾಗೂ ground-breaking ಕೃತಿ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಇನ್ನಷ್ಟು ಚರ್ಚೆ ಹಾಗೂ ವಿಮರ್ಶೆ ಆಗಬೇಕಾಗಿದೆ. ಹಾಗೂ ಈ ಕೃತಿಗೆ ಕನಿಷ್ಠ ಕರ್ನಾಟಕ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿಯನ್ನು ಕೊಟ್ಟು ಪುರಸ್ಕರಿಸಬೇಕಾಗಿದೆ. ನವ್ಯ-ಬಂಡಾಯ-ದಲಿತ-ಕಾರ್ಪೋರೆಟ್ ಎಂದು ಹಲವು ಪ್ರಬೇಧಗಳಾಗಿ ಬಿರುಕು ಬಿಟ್ಟಿರುವ ಕನ್ನಡ ಸಾಹಿತ್ಯ ಲೋಕವು ಈ ಸಂದರ್ಭದಲ್ಲಿ ಒಂದು ಗೂಡಿ ಕೋಮುವಾದಿ ಶಕ್ತಿಗಳನ್ನು ಎದುರಿಸಬೇಕಾಗಿದೆ.

    ಪ್ರತಿಕ್ರಿಯೆ
  11. ಕೃಷ್ಣೇಗೌಡ ಟಿ.ಎಲ್.

    CNR ತಮಗೆ ಧನ್ಯವಾದಗಳು.ಕೃತಿಯ ಕುರಿತು ಹುಯಿಲೆಬ್ಬಿಸುತ್ತಿರುವವರು ಅನಕ್ಷರಸ್ತರು,ಅಜ್ಞಾನಿಗಳು,ಅವಿವೇಕಿಗಳು.

    ಪ್ರತಿಕ್ರಿಯೆ
  12. Nagaragere Ramesh

    Dr Ramachandran’s write up should open the minds of the fanatics and enable them to see the oint he is making or Mr Yogesh Master has tried to make. It is a known fact that the concept of god and various gods has undergone several changes over centuries owing to several developments- social, economic, political. Many gods of today were not heard of in the past and many of the past are no more considered to be important. The argument filled with agony as to why only Hindu gods are targetted is a result of a kind of Myopia. One must remember that in the other religions there are not so many gods as there are in Hindu religion because there is the system of Ekadevopasana in those systems. Moreover monotheism is also part of the Hindu system. The Hindu Puranas , 18 in number , are themselves the result of rich imagination based on certain facts and one has only to examine them closely to distinguish between fact and fiction. Those religions of the west or the middle east where there was the worship of many gods are not being practised any more and hence not much attention is paid to them. But Hinduism, a very ancient religion is still alive today, appropriating other faith systems, influencing and getting influenced by them and hence it is very natural that time and again this belief system is subjected to examination and analysis. Unfortunately dogma does not allow one to see the reality and if political machinations also accompany this dogma all hell can break loose and writers get damned and jailed. It is a very sad commentary on the intellectual atmosphere of our society.

    ಪ್ರತಿಕ್ರಿಯೆ
  13. Rajeev

    “ಮುಸ್ಲಿಮರ ಏಕ ದೈವತ್ವ ಕಲ್ಪನೆಯು . . . ಶಂಕರರ ಅದ್ವೈತ ಚಳುವಳಿಗೆ ಪ್ರೇರಕವಾಗಿರಬಹುದು; ಮಹಾಭಾರತದಲ್ಲಿ ಬರುವ ಶಿಲ್ಪಿ ಮಯ ಅಸ್ಸೀರಿಯಾದ ವಾಸ್ತುಶಿಲ್ಪಿ; ಅಸ್ಸೀರಿಯನ್ನರ ಶಿಕ್ಷಾವಿಧಾನಗಳಲ್ಲಿ ಒಂದಾದ ’ಮೂಗಿನಲ್ಲಿ ರಂಧ್ರ ಮಾಡಿ ದಾರ ಕಟ್ಟುವ ಪದ್ಧತಿ’ ಭಾರತದಲ್ಲಿ ಮೂಗುಬೊಟ್ಟಾಗಿ ಅಲಂಕರಣ ವಿಧಾನವಾಯಿತು; ಇತ್ಯಾದಿ. ಮಧ್ವರ ದ್ವೈತ ಸಿದ್ಧಾಂತದ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವವಿದೆ” . Was there christianity in India 800 years ago? Madhwa belongs prior to 12th century and Shankara even before that. Can somebody throw more light on this?

    ಪ್ರತಿಕ್ರಿಯೆ
    • SUBRAMANYA T A

      // Was there christianity in India 800 years ago? Madhwa belongs prior to 12th century and Shankara even before that. Can somebody throw more light on this?//
      Christianity in India is almost 2000 yrs old. Syrian christians in kerala trace there lineage back to Thomas One of the disciple of Jesus who apparantely landed in india. see http://www.youtube.com/watch?v=NWepdyz1XNQ for more discussion. Regarding the relation between Madhva’s theology and christianity and also Jainism read the book Sri Madhwacharya published by Ramakrishna math. I don’t know about the relation between Sankara’s work and Islam but it is well established that it was very much influenced by Mahayana Buddhism. for more on this see Surendranath DasGupta book history of indian philosophy and for a detailed discussion Richard King’s Early advaita vedantha

      ಪ್ರತಿಕ್ರಿಯೆ
    • P V Rao

      It is utter foolishness to compare Madhwa philosophy with Christianity, which is based on Philosophies of the Greeks who were mostly Atheists. Perhaps it would be great opportunity for everyone in this forum to really know what Dvaita/Adviata philosophies are all about. Please read more as to why Dvaita was compared to Christianity and doesn’t hold water.
      If we think of the universe as a grand University then Madhva’s assertion that “souls are of various grades” makes perfect sense. As long as we accept his premise that their individuality is eternal, then no matter how long they remain within matter, they could still return to their original nature. Still, it is possible for them to behave so badly that by the laws of karma, they are in what amounts to endless bondage. For this reason some thinkers have compared Madhva’s view to the Christian concept of “Eternal Damnation.” But the two views are not at all the same. Christianity does not believe the soul pre-exists before its single lifetime, and they do not believe in karma as laws of Nature, so their concept of “hell” is moral punishment from a vengeful Deity. Madhva’s view is of an eternally divine soul who is lost in matter and could, in theory, be released from bondage, though in practice they may stay lost indefinitely. Their sufferings within matter are not a “punishment” but a result of wrong action in relation to the rules governing matter. Any hellish condition they may achieve is also temporary as all karma must be.
      I would also add that it is equally foolish to Say Sri Sankara’s Advaita school talking about one Brahaman is a derivative of any Muslim concept. The Vedas and Puranas always propounded there is only one God.
      Let us use this opportunity to know more in depth about both Advita and Dvaita Schools
      references:
      http://www.jeffreyarmstrong.com/articles/madhvas-dvaita-vedanta-or-distinctive-realism
      http://www.amazon.com/Introduction-Madhva-Vedanta-Ashgate-Philosophies/dp/0754606376

      ಪ್ರತಿಕ್ರಿಯೆ
    • Manju

      In Bhagvad Geetha Shri Krishna Said “All Paths lead to me” . Rigveda says “The Truth is one, sages call it my different names”. We could easily say Santhaan Dharma Inspired Islam and Christianity.. But should the readers accept it as Truth?? and another thing is that not Only Shankaracharya said the Advaitha Concept it was the before that..he gave a proper explanation to the “thatva Masi” and “Shivoham”.

      ಪ್ರತಿಕ್ರಿಯೆ
  14. Anonymous

    ‘ಢುಂಢಿ’ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ಬರೆದು ನಮಗೆ ತಿಳಿಸಿಕೊಟ್ಟ ಸಿ.ಎನ್.ಆರ್ ರವರಿಗೆ ಅನಂತ ಧನ್ಯವಾದಗಳು.

    ಪ್ರತಿಕ್ರಿಯೆ
  15. ಲಿಂಗರಾಜು ಬಿ.ಎಸ್.

    ಅನೇಕ ಸಂದರ್ಭಗಳಲ್ಲಿ ಲೇಖಕರು ಕೊಡುವ ವಿವರಗಳು ಔಚಿತ್ಯಪ್ರಜ್ಞೆಯನ್ನು ಮೀರುತ್ತವೆ. ಅನಾರ್ಯ ಸಮುದಾಯಗಳಲ್ಲಿತ್ತು ಎಂದು ಹೇಳಲಾಗುವ ಮುಕ್ತ ಲೈಂಗಿಕತೆಯನ್ನು ದಾಖಲಿಸಲು ಲೇಖಕರು ಅನೇಕ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ: ಕಾದಂಬರಿಯು ಶುರುವಾಗುವುದೇ ಶಂಬರನು ತನ್ನ ಉದ್ರಿಕ್ತ ಶಿಶ್ನವನ್ನು ತೋರಿಸುತ್ತಾ ತನ್ನ ತಾಯಿಯನ್ನು ಸುತ್ತು ಹಾಕುವುದರಿಂದ. ಅನಂತರ ಬರುವ ರುದ್ರ-ಪಾರ್ವತಿ ಸಂಭೋಗ ವರ್ಣನೆ ದೀರ್ಘವಾಗಿರುವುದಲ್ಲದೆ ಜಿಗುಪ್ಸೆಯನ್ನೂ ಉಂಟುಮಾಡುತ್ತದೆ. ಕೃತಿಯಲ್ಲಿ ಬರುವ ರುದ್ರ/ಶಿವನ ಪಾತ್ರ ತುಂಬಾ ಅತೃಪ್ತಿಕರವಾಗಿದೆ.
    ಹೀಗಿರುವಾಗ ವಿವಾದ ಸಾಮಾನ್ಯ. ಪ್ರತಿಕ್ರಿಯೆಯಲ್ಲಿ ಲೇಖಕರು ಸಂಯಮದಿಂದ ಬರೆದಿದ್ದಾರೆ ಎಂದು ಹೇಳಲಾಗಿದೆ. ಇದೆಂತಹ ಸಂಯಮ. ಭಗವತಿ ಶರಣ ಉಪಾಧ್ಯಾಯ, ಎಸ್.ಆರ್.ಭಟ್ ಮುಂತಾದವರ ಪುಸ್ತಕಗಳನ್ನು ಆಕರ ಗ್ರಂಥಗಳ ಆಧರಿಸಿ ಬರೆದ ಪುಸ್ತಕ ಎಂದು ಹೇಳಿಕೊಂಡರೂ ಪುಸ್ತಕದಲ್ಲಿರುವ ಆಂಶಗಳು ಒಬ್ಬ ಲೇಖಕ ವಿವಾದ ಮಾಡಿಯೇ ಮಾರಾಟ ಮಾಡಲು ಯತ್ನಿಸಿರುವಂತೆ ಕಾಣುತ್ತದೆ.

    ಪ್ರತಿಕ್ರಿಯೆ
  16. Subhashini

    ವಿವಾದವೆಬ್ಬಿಸಿದ ಕೃತಿಯಲ್ಲೇನಿದೆ ಎಂದು ತಿಳಿಯುವಂತಾಯಿತು.   ಬಹುಶಃ ಪ್ರಚಾರಕ್ಕಾಗಿ ಈ ವಿವಾದದ ಹುಯಿಲೆದ್ದಿದೆ.  

    ಪ್ರತಿಕ್ರಿಯೆ
  17. ಉದಯಕುಮಾರ್ ಹಬ್ಬು

    ಸಿ. ಎನ್. ಆರ್. ಅವರ ಲೇಖನ ತುಂಬಾ ಆಪ್ತವಾಗಿ ವಸ್ತುನಿಷ್ಟವಾಗಿ ಬರೆಯಲ್ಪಟ್ಟಿದ್ದು ಎಲ್ಲರ ಪುವ್ರಾಗ್ರಹವನ್ನು ದೂರಮಾಡಲು ಸಹಾಯಮಾಡುತ್ತದೆ. ಮೂಲಭೂತವಾದಿಗಳು ಅಂಬೇಡ್ಕರರ ‘ಹಿಂದೂ ಧರ್ಮದಲ್ಲಿನ ಒಗಟುಗಳು’ ಪುಸ್ತಕವನ್ನು ಓದಬೇಕಾಗಿದೆ. ನಮಗೆ ಆ ಪುಸ್ತಕ ಮಾರ್ಕೆಟ್ಟಿನಲ್ಲಿ ಎಂದು ಸಿಗುವುದೊ ಎಂದು ಕಾಯುವಂತೆ ಆಗಿದೆ.

    ಪ್ರತಿಕ್ರಿಯೆ
  18. harsha

    Dear CNR sir thank u for this valuable review…NOw it is crystal clear why the right wing had instigated such opposition to the Book….They don not want the truth to come out in the form of this novel….In fact many scholars like Devi Prasad Chattopadyaya have narrated how and why Non-Aryan Ganpathi was later hijacked by the Aryans….Yogesh Master has done a great job….

    ಪ್ರತಿಕ್ರಿಯೆ
  19. ಪ್ರಸಾದ್.ಡಿ.ವಿ.

    ಬಹಳ ವಸ್ತು ನಿಷ್ಠವಾದ ವಿಮರ್ಶೆ ಸಿ.ಎನ್.ಆರ್ ಸರ್. ನಿಮ್ಮ ಕೊನೆಯ ಮಾತೇ ಪ್ರಜ್ಞಾವಂತ ಸಮಾಜ ಈ ಪುಸ್ತಕದ ಬಗ್ಗೆ ಯಾವ ನಿಲುವು ತಳೆಯಬೇಕು ಎಂಬುದನ್ನು ಸೂಚಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರಲಿ, ಓದುಗ ಮತ್ತು ಬರಗಾರ ಇಬ್ಬರಿಗೂ ಅನ್ಯಾಯವಾಗಬಾರದು. ಅನಂತರದ ಯಶಸ್ಸು ಓದುಗನಿಗೆ ಬಿಟ್ಟದ್ದು.
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  20. ಪಂಡಿತಾರಾಧ್ಯ ಮೈಸೂರು

    ಪ್ರೊ ಸಿ.ಎನ್. ರಾಮಚಂದ್ರನ್ ಅವರು ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾವಹಿಸಿದವರು. ಆಗ ಅವರು ಆಡಿದ ಮಾತುಗಳನ್ನು ವರದಿಮಾಡದೆ ತನ್ನ ಪೂರ್ವಾಗ್ರಹಗಳನ್ನು ವರದಿಯಲ್ಲಿ ತುಂಬಿದ ವರದಿಯನ್ನು ತಿರಸ್ಕರಿಸಬೇಕು. ಸಂಶೋಧನೆ, ವಿಮರ್ಶೆಗಳ ಕಲ್ಪನೆಯೂ ಇಲ್ಲದವರು ಸಂಪಾದಕರು, ಮಾಲೀಕರಾಗಿ ಕನ್ನಡ ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವುದು ಕನ್ನಡ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕಕಾರಿಯಾಗಿ ಪರಿಣಮಿಸಿವೆ. ಇದು ಕಳೆದ ದಶಕದಲ್ಲಿ ಆಗಿರುವ ದುರದೃಷ್ಟಕರ ಬೆಳವಣಿಗೆ. ಮತಧರ್ಮೀಯ ಮೂಲಭೂತವಾದ ಹಿಂದೆಂದೂ ಕಂಡಿರದ ಕುಮ್ಮಕ್ಕನ್ನು ಈ ಅವಧಿಯಲ್ಲಿ ಪಡೆಯಿತು. ಸಾಹಿತ್ಯ ಕೃತಿಯಾಗಲಿ, ಸಂಶೋಧನ ಪ್ರಬಂಧವಾಗಲಿ ಓದುಗರ ಮುಕ್ತ ಚರ್ಚೆಗೆ ಲಭ್ಯವಾಗಿ ಅದರ ಮೂಲಕವೇ ತನ್ನನ್ನು ಸಮರ್ಥಿಸಿಕೊಳ್ಬೇಕು. ಅದು ನಡೆಯಬೇಕಾಗಿರುವುದು ವಿಶ್ವವಿದ್ಯಾನಿಲಯಗಳಲ್ಲಿ, ಅಧ್ಯಯನ ವೇದಿಕೆಗಳಲ್ಲಿ. ರಾಜಕಾರಣಿಗಳ, ಮತಧರ್ಮದ ಪೀಠಸ್ಥರ ಕೃಪಾಪೋಷಿತ ಮಾಧ್ಯಮ ದೈತ್ಯರ ಕಾಲಬುಡದಲ್ಲಿ ಅಲ್ಲ.

    ಪ್ರತಿಕ್ರಿಯೆ
  21. ಶರತ್ ಚಕ್ರವರ್ತಿ

    ಧರ್ಮಾಚರಣೆ ಒಂದೊಂದು ಬುಡಕಟ್ಟಿಗು ಒಂದೊಂದು ರೀತಿಯದ್ದಾಗಿದೆ. ಭೈರವೇಶ್ವರನಿಗೆ ಕೆಲವರು ಮಾಂಸ ನೈವೇದ್ಯ ನೀಡಿದರೇ, ಶಿವನ ಭಕ್ತರು ಶಿವನನ್ನ ಸಸ್ಯಹಾರಿಯಾಗಿ ನೋಡುತ್ತಾರೆ. ಆದರೆ ಇಲ್ಲಿ ಒಬ್ಬರ ಮನಸ್ಥಿತಿ ಅಥವ ಆಚರಣೆಯನ್ನು ಸಾರ್ವತ್ರಿಕವಾಗಿ ಹೇರುವುದು ತಪ್ಪಾಗುತ್ತದೆ. ಆದರೆ ಈ ಸಮಸ್ಯೆ ಹಿಂದೂ ಧರ್ಮಕ್ಕೆ ಯಾಕೆ ಅಂತ ದೊಂಬಡ ಹೊಡೆದುಕೊಳ್ಳುವವರು ನೀವೆ ಯೋಚಿಸಿ ನೋಡಿ. ಭಾವನಾತ್ಮಕವಾದ ವಿಚಾರಗಳಲ್ಲಿ ಹುಸಿ ಭಕ್ತಿ ಮೂಡಿಸಿ ಭಾವೊದ್ಯೆಗಕ್ಕೆ ಸಾಮಾನ್ಯರನ್ನ ತಳ್ಳಿ ಬೇಳೆ ಬೇಯಿಸಿಕೊಳ್ಳುತ್ತಿರುವ ಧರ್ಮ ರಕ್ಷಕರಿಂದ ನಿಮ್ಮ ಧರ್ಮವನ್ನ ರಕ್ಷಿಸಿಕೊಳ್ಳಿ. ಎಲ್ಲದಕ್ಕಿಂತ ಜೀವನ ದೊಡ್ಡದು ನೆನಪಿರಲಿ.
    ಸಿ.ಎನ್.ಆರ್ ಸರ್ ತುಂಬಾ ಧನ್ಯವಾದಗಳು.

    ಪ್ರತಿಕ್ರಿಯೆ
  22. Santhosh Shetty

    ರಾಮಚಂದ್ರನ್ ರವರ ಲೇಖನ ಉತ್ತಮವಾಗಿದೆ, ಅದಕ್ಕೆ ಅವರ ಪ್ರಯತ್ನಕ್ಕೆ ಧನ್ಯವಾದಗಳು. ಆದರೆ ಅವರು ತಳೆದಿರುವ ನಿಲುವುಗಳಲ್ಲಿ ಎರಡು ಕಡೆ ಸಮಸ್ಯೆಗಳಿವೆ
    1.ಕಾದಂಬಂರಿಯನ್ನು ಸಂಶೋಧನಾ ಕೃತಿ ಎಂದು ತೀರ್ಮಾನಿಸಲು ಸಾಧ್ಯವೆ? ನನ್ನ ಪ್ರಕಾರ ಹಾಗೂ ವೈಜ್ಞಾನಿಕ ಸಂಶೋಧನಾ ನಿಯಮಗಳ ಪ್ರಕಾರ ಸಾಧ್ಯವಿಲ್ಲ. ಸಂಶೋಧನಾ ಬರವಣಿಗೆಗಳು ಸಲಕರಣೆಗಳು ಹಾಗೂ ಬರವಣಿಗೆಯ ಶೈಲಿ ಸಂಪೂರ್ಣವಾಗಿ ಕಾದಂಬರಿಗಿಂತ ಭಿನ್ನವಾಗಿರುತ್ತದೆ. ಕಾದಂಬರಿಯ ಸ್ವರೂಪ ಏನೇ ಆಗಿರಲಿ ಆದರೆ ಅದು ಸಂಶೋಧನಾ ಕೃತಿಯಂತೂ ಆಗಲಿಕ್ಕೆ ಸಾಧ್ಯವಿಲ್ಲ.
    2. ರೋಮಿಲಾ ಥಾಪರ್ ಹಾಗೂ ಬಾಷಮ್ ರವರು ಮಾಧ್ವ ಸಂಪ್ರದಾಯದ ತತ್ವಗಳು ಕ್ರಿಶ್ಚಿಯಾನಿಟಿಯಿಂದ ಪ್ರಭಾವಿತಗೊಂಡಿವೆ ಎಂದು ಹೇಳುವುದಕ್ಕೂ ಯೋಗೀಶ್ ಮಾಸ್ಟರ್ ಗಣಪತಿಯ ಬಗ್ಗೆ ಹೇಳುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ, ಅವೆರಡೂ ಒಂದೇ ರೀತಿಯ ವಿಚಾರಗಳಲ್ಲ, ಹಾಗಾಗಿ ಅವುಗಳನ್ನು ತುಲನೆ ಮಾಡಿ ಒಬ್ಬರಿಗೆ ಬಂಧಿಸಲಿಲ್ಲ ಒಬ್ಬರಿಗೆ ಬಂಧಿಸಿದರು ಎಂದು ಹೇಳುವ ನಿಲುವು ಅತಾರ್ಕಿಕವಾದುದು.ಅಂದರೆ, ನೀವು ತಿನ್ನುವ ಆಹಾರ ಪಾಶ್ಚಾತ್ಯರ ಆಹಾರ ಕ್ರಮದಿಂದ ಪ್ರಭಾವಗೊಂಡಿದೆ ಎಂದು ಹೇಳುವುದಕ್ಕೂ ನೀವು ತಿನ್ನುತ್ತಿರುವುದು ಸಗಣಿ ಎಂದು ಹೇಳುವುದಕ್ಕೂ ಇರುವ ವ್ಯತ್ಯಾಸ ಥಾಪರ್ ಮತ್ತು ಯೋಗೀಶ್ ರವರ ಕೃತಿಗಳಿಗಿವೆ.

    ಪ್ರತಿಕ್ರಿಯೆ
    • Anonymous

      I have not read the book nor have any intention to read it. but I don’t think it is correct to arrest the author. It is unnecessarily giving the author, the publicity

      ಪ್ರತಿಕ್ರಿಯೆ
  23. ಶಿವ

    “ಕನ್ನಡದಲ್ಲಿ ಮತ್ತು ಕಾದಂಬರಿಯ ರೂಪದಲ್ಲಿ ಈ ಬಗೆಯ ಇತಿಹಾಸ ಚಿತ್ರಣ ಬಂದಿರುವುದು ಇದೇ ಮೊದಲು” ಅನ್ನುವುದು ಸರಿಯಲ್ಲ. ಹಿಂದೆಯೂ ಅನೇಕ ಕೃತಿಗಳ ಬಂದಿವೆ. ಮಾಸ್ತಿ, ತ.ರಾ.ಸು., ಭೈರಪ್ಪ, ಗಣೇಶಯ್ಯ ಮುಂತಾದವರು ಬರೆದ ಹಲವಾರು ಪುಸ್ತಕಗಳಿವೆ.

    ಪ್ರತಿಕ್ರಿಯೆ
  24. Krishnaprakasha Bolumbu

    ೧. ಆರ್ಯಾಕ್ರಮಣ ಸಿದ್ಧಾಂತವೇ ಪ್ರಶ್ನಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ ಡಾ| ರಾಮಚಂದ್ರನ್ ಹೇಳುವ “ಆರ್ಯ-ಅನಾರ್ಯ ಘರ್ಷಣೆ ಹಾಗೂ ಸಂಧಾನ ಪ್ರಕ್ರಿಯೆ” ಎಂಬ ಪ್ರತಿಭಾಸವನ್ನು ಯಾವ ಹಿನ್ನೆಲೆಯಲ್ಲಿ ನೋಡಬೇಕೆಂಬುದರ ಕುರಿತು ಸ್ಪಷ್ಟತೆ ಸಿಕ್ಕದು.
    ೨. ಆರ್ಯಾಕ್ರಮಣ ಸಿದ್ಧಾಂತದ ಬದಲು ಆರ್ಯಾಗಮನ ಎಂದಾದರೂ ಈ ಬಗೆಯ ಸಂದಿಗ್ಧಗಳು ತೋರಿಯೇ ತೋರುತ್ತವೆ.

    ಪ್ರತಿಕ್ರಿಯೆ
  25. gangadharamurthy

    dear cnr
    It is one thing to evaluate literary merit of a novel and it’s something more than that when a novel configures social & cultural values in it. As u have rightly observed this is not for the first time that a novel in Kannada of this nature has appeared. this novel is a significant contribution to the understanding of the mechanics of myths which have blocked the subaltern minds for centuries. this novel may not be good or is controversial but the government should not curtail the freedom so long at least it is not funded by it. Arresting a writer by the police, just because somebody complains that it is unpalatable on fanatic grounds, is highly deplorable.
    B Gangadharamurthy

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: