ಬೋರ್ ಹೊಡೆಸಿದ ಸಣ್ಣ ಕಥೆಗಳ ಓದು

ಕೆ ಎಂ ವಿಶ್ವನಾಥ ಮರತೂರ

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ನಮ್ಮ ಕಲಬುರ್ಗಿ ಭಾಗದ ಭರವಸೆಯ ಕಥೆಗಾರರಾದ ಬಸವರಾಜ ಡೋಣೂರು ಮತ್ತು ಮಹಾಂತೇಶ ನವಲಕಲ್ ತಮ್ಮ ಕಥೆಗಳನ್ನು ಓದುವ ಮೂಲಕ ಕೇಳುಗರೊಂದಿಗೆ ಸಂವಾದ ನಡೆಸಿದರು.

ನಾನು ಈ ಎರಡು ಕಥೆಗಳನ್ನು ಸಕ್ರಿಯವಾಗಿ ಆಲಿಸಿದ ಬಳಿಕ ಬರೆಯಲೇಬೇಕಾದ ಅಗತ್ಯವೆನಿಸಿತು. ಈ ಅನಿಸಿಕೆ  ನನ್ನ ಸಂಪೂರ್ಣ ವಯಕ್ತಿಕವಾಗಿದ್ದು, ಹಲವು ಕಥೆಗಳ ಓದಿಗೆ ನಿಲುಕಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಡೋಣೂರ ಅವರ ‘ಅಲ್ಲಾಭಕ್ಷ’ ಕಥೆಯು ಸುಂದರ ಹಾಗೂ ಕೌತುಕಭರಿತವಾಗಿದ್ದು ಓದುವ ಶೈಲಿಯೂ ಅಷ್ಟೆ ಪರಿಣಾಮಕಾರಿಯಾಗಿತ್ತು. ಅವರ ಕಥೆ ಪರಂಪರೆಯನ್ನು ಹೇಳುತ್ತದೆ. ಕನ್ನಡ ಸಾಹಿತ್ಯ ಜಗತ್ತಿನ ಮೂಲ ಪರಂಪರೆಯನ್ನು ಕಳಚದೇ ಸಾವಿನ ಸುತ್ತಮುತ್ತ ಸುಳಿದಾಡುತ್ತದೆ. ಡೋಣೂರ ಅವರ ‘ಸಾವು’ ಕಥೆಯಂತೆ ‘ಅಲ್ಲಾಭಕ್ಷ’ ಕಥೆಯು ದುರಂತ ಸಾವಿನ ಬಗ್ಗೆಯೇ ಪ್ರಸ್ತಾಪಿಸುತ್ತದೆ.

ವೃತ್ತಿ ರಂಗಭೂಮಿಯ ಅಲ್ಲಾಭಕ್ಷನನ್ನು ಇವತ್ತಿನ ಇತರೇ ಪರಂಪರೆಗಳು ಹೇಗೆ ಹೀನಾಯಗೊಳಿಸುತ್ತವೆ ಎನ್ನುವ ದಾರುಣ ಸ್ಥಿತಿ ಹಿಡಿಯುತ್ತವೆ. ಸಣ್ಣ ಕಥೆ ಎಂದು ಶೀರ್ಷಿಕೆಯಿಟ್ಟು ದೊಡ್ಡ ಕಥೆಯನ್ನು ಓದಿದರು. ಒಂಬತ್ತು ಪುಟಗಳ ಕಥೆ ಅದು ಹೇಗೆ ಸಣ್ಣ ಕಥೆಯಂದು ಆಯ್ಕೆ ಮಾಡಿದರು ಅರ್ಥವಾಗಲಿಲ್ಲ.

ಕಥೆ ಸಾರಸ್ಯಭರಿತವಾಗಿರಲಿಲ್ಲ ಒಂದು ರಾತ್ರಿಯಲ್ಲಿ ಮುಗಿಯುವ ಕಥೆ ಇದು. ಐದರಿಂದ ಆರು ಪಾತ್ರಗಳು  ಸುಮ್ಮನೆ ಇಡೀ ರಾತ್ರಿ ಎಳೆದುಕೊಂಡು ಬೆಳಗಿನ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಕಲಾತ್ಮಕತೆ ಇಲ್ಲದ ಈ ಕಥೆ ಸರಳವಾಗಿ ಕೊನೆಗೊಳ್ಳುತ್ತದೆ. ಡೋಣೂರು  ಅವರು ಕನ್ನಡ ಸಾಹಿತ್ಯ ಜಗತ್ತಿನ ಪರಂಪರೆಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿದ್ದಾರೆ ಹೀಗಾಗಿ ಅವರದ್ದೇ ಪರಂಪರೆಯ ದಾರಿಯಲ್ಲಿ ಈ ಕಥೆ ರಚನೆ ಮಾಡಿದ್ದಾರೆ.

ಡೋಣೂರು ಅವರ ಕಥೆ ನನಗೆ ಹೆಚ್ಚು ವ್ಯಕ್ತಿಚಿತ್ರವಾಗಿ ಕಾಣಿಸಿತು. ಈ ಸಂಧರ್ಭದಲ್ಲಿ ನಾನು ‘ಮೊಸರಿನ ಮಂಜಮ್ಮ’ ಕಥೆ ನೆನಪಿಸಿಕೊಂಡೆ. ಸಣ್ಣವರಾದ ನಾವುಗಳು ಕೆಲವು ಕತೆಗಳನ್ನು ಬರೆದಾಗ ಒಂದು ಸನ್ನಿವೇಶವನ್ನಿಟ್ಟುಕೊಂಡು ಕಥೆ ಹೆಣೆಯುವಾಗ ಈ ಕಥೆಗೆ ಆಯಾಮಗಳು ಬೇಕು ಅಲಂಕಾರಗಳು ಬೇಕು ಎನ್ನುವ ಗೊಂದಲಕ್ಕೀಡಾಗಿ ಬರೆಯುವುದೇ ಎಷ್ಟುಬಾರಿ ನಿಲ್ಲಿಸಿದ ಉದಾಹರಣೆಗಳಿವೆ. ಈ ಕಥೆಯಲ್ಲಿ ಘಟನೆಯಿತ್ತೆ ವಿನ: ಕಲಾತ್ಮಕತೆ ಕಡಿಮೆಯಿತ್ತು ಎನ್ನುವುದು ನನ್ನ ಅಳಲು.

ನಾನು ಇದೇ ಸಂದರ್ಭಕ್ಕೆ ವಸುದೇಂದ್ರ ಅವರ ‘ಅಮೃತಸೊಪ್ಪು’ ಕಥೆ ನೆನಪಿಸಿಕೊಂಡೆ,  ಒಂದು ಚಿಕ್ಕ ಸೊಪ್ಪನ್ನು ಎಷ್ಟೆಲ್ಲ ಕಲಾತ್ಮಕವಾಗಿ  ಬರೆಯಬಹುದೆಂಬುವುದು ಇದರಿಂದ ಅರೆತುಕೊಂಡೆ ಇಂತಹ ಯಾವುದೇ  ಕಲಾತ್ಮಕತೆ ಡೋಣೂರು ಅವರ ಕತೆಯಲ್ಲಿ ನನಗೆ ಕಾಣಲಿಲ್ಲ.

ಡೋಣೂರು ಅವರ ಕಥೆಯಲ್ಲಿ ಕಂಡಿದ್ದು ಒಂದು ಘಟನೆ ಮಾತ್ರ. ಕಥೆಯ ಬಗ್ಗೆ ನನ್ನ ನಿರೀಕ್ಷೆ ಬೇರೆಯಿತ್ತು. ಒಬ್ಬ ವ್ಯಕ್ತಿಯ ಆತ್ಮಕತೆ ಅತ್ಯಂತ ಚಿಕ್ಕದಾಗಿ ಚೊಕ್ಕದಾಗಿ ಮುಗಿಸಿದಂತೆ ಭಾಸವಾಯಿತು. ಅವರ ಕಥೆಯೊಳಗೆ ನನಗೆ ತುಂಬಾ ಇಷ್ಟವಾಗಿದ್ದು ಅಲ್ಲಾಭಕ್ಷನ ಬದುಕು ಕಟ್ಟಿಕೊಡುವ ಸಂದೇಶ. ವೃತ್ತಿ ರಂಗಭೂಮಿ ಕಲಾವಿದರ ಬದುಕಿಗೆ ಹಿಡಿದ ಕನ್ನಡಿಯಾಗಿತ್ತು. ಕಥಾ ಜಗತ್ತಿನಲ್ಲಿ ಅಳೆದು ತೂಗಬಲ್ಲ ಶಕ್ತಿ ಡೋಣೂರ ಅವರ ಕಥೆಯಲ್ಲಿ ನನಗೆ ಕಾಣಲಿಲ್ಲ.

ಇನ್ನು ಮಹಾಂತೇಶ ನವಲಕಲ್ ಅವರ ಕಥೆ ಒಂದು ಸಿದ್ಧಾಂತವನ್ನು ಪ್ರತಿಪಾದಿಸುವ ಧಾವಂತಕ್ಕೆ ಬಿದ್ದು ಕಥೆ ಎನ್ನುವುದಕ್ಕಿಂತ ಲೇಖನವೆಂದು ಅನಿಸಿತು. ಕಥೆಯಲ್ಲಿ ಪಾತ್ರಧಾರಿಗಳಿದ್ದರೂ ಮಾತನಾಡಿದ್ದು ಬರಹಗಾರ ಮಾತ್ರ ಎಂಬುವುದು ವಿಚಿತ್ರ ಸಂಗತಿಯಾಗಿತ್ತು.

ಒಂದು ವಾದವನ್ನು ಕಥೆಯ ಮೂಲಕ  ಕಟ್ಟಿಕೊಡುವಲ್ಲಿ ನವಲಕಲ್ ಸೋತಿದ್ದಾರೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಒಂದು ಕಥೆಯ ಪ್ರಾರಂಭ ಮತ್ತು ಅಂತ್ಯಂತ ಸುಂದರ ಹಾಗೂ ಕಣ್ಣಿಗೆ ಕಟ್ಟುವಂತಿರಬೇಕು. ಇದೇ ವೇದಿಕೆಯಲ್ಲಿದ್ದ ಸಂಧ್ಯಾ ಹೊನಗುಂಟಿಕರ್ ಅವರ ಎಷ್ಟೊ ಕಥೆಗಳು ಈ  ಕಲಾತ್ಮಕತೆ ಹೊಂದಿವೆ ಎಂಬುವುದು ನೆನಪಿಗೆ ಬಂತು.

ನವಲಕಲ್ ಅವರ ಕತೆಯು ಭಾವನಾತ್ಮಕ ವಿಷಯದ  ಜೊತೆಗೆ ಸಿದ್ಧಾಂತದ ಪ್ರತಿಪಾದನೆ ಮಾಡುತ್ತಾ ಮತ್ತೆ ಅದೇ ಹಳೇ ರಾಗ ತಾಳ ಮೇಳೈಸುತ್ತದೆ. ಬಸವನ ತತ್ವ ಪ್ರತಿಪಾದಿಸುವ ಭರಾಟೆಯಲ್ಲಿ ಕಥೆ ಮತ್ತು ಅದರ ಹಂದರವನ್ನೇ ಮರೆತುಬಿಡುತ್ತದೆ. ನಮ್ಮ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಕಥೆಗಳ ಜೊತೆಗೆ ಸಿದ್ಧಾಂತ ಪ್ರತಿಪಾಸಿದ್ದು ಇದೇ  ಆದರೆ ಅದರ ಶೈಲಿಯೊಳಗೆ ವಿಶೇಷವಿದೆ ಅಂತಹ ಯಾವುದೇ ಶೈಲಿ ನವಲಕಲ್ ಅವರ ಕಥೆ ಹೇಳಲೇಯಿಲ್ಲ.

ಇವರ ಕಥೆ  ಒಂದೇ ಬಾರಿಗೆ ಅರ್ಥವಾಗಲಿಕ್ಕಿಲ್ಲವೆನಿಸುತ್ತದೆ  ಅಥವಾ ನನ್ನ ಈ  ಓದಿನ ಅನುಭವ ಸಾಲದೇಯಿರಬಹುದೆಂಬುವುದು ಅರಿತಿದ್ದೇನೆ. ನನಗೆ ಕಥೆಯಂದರೆ ಕುಂವೀಯವರ ರೊಟ್ಟಿ, ಅವರ ಜೀವನ ಚರಿತ್ರೆ ಹಾಗೆ ಇರಬೇಕೆಂದು ಭಾವಿಸಿದ್ದೆ. ಈ  ಮುಂಚೆ ನವಲಕಲ್ ಅವರ ಭಾರತ  ಭಾಗ್ಯವಿಧಾತ ಪುಸ್ತಕ  ಕೆಲವು ಭಾಗಗಳು ಓದಿದ್ದೆ ಈ ಓದಿನ ಮುಂದೆ ಇವತ್ತಿನ ಕಥೆ ಸಪ್ಪೆಯೆನಿಸಿತು. ಕಥೆಯ ಭಾಷೆಯಲ್ಲಿ ತುಂಬಾ ಪಾಲಿಶ್ ಭಾಷೆ ಬಳಸಬೇಕೆಂಬ ಹಠಕ್ಕೆ ಬಿದ್ದಂತೆ ಕಥೆಗಾರ ಕಾಣಸುತ್ತಾನೆ.

ಈ ಕಾರ್ಯಕ್ರಮದ  ಕೇಂದ್ರ ಬಿಂದು ಸಂವಾದ. ಕಥೆಗಳ ಕುರಿತು ಕೇಳುಗರಿಂದ ಅನಿಸಿಕೆಗಳು ಪ್ರಶ್ನೆಗಳಿಗೆ ಆದ್ಯತೆ ಇರಬೇಕಿತ್ತು. ಅದು ಸ್ವಲ್ಪ ಕೊರತೆಯೆನಿಸಿತು. ಪ್ರಶ್ನೆ ಕೇಳುವವರು ಕೂಡ ಕಥೆಗಾರರನ್ನು ಕುರಿತು ಮಾತನಾಡಿದರೆ ಹೊರತು ಕಥೆಯ ಕುರಿತು ಹೆಚ್ಚು ಸಂವಾದ ನಡೆಯಲಾಗಲಿಲ್ಲ. ಬಾಳಾಸಾಹೇಬರಂತಹ ಕಥೆಗಾರರು ಅನೇಕ ಕಥೆಗಳನ್ನು ಬರೆದಿದ್ದಾರೆ  ಅವರಿಗೂ ಪ್ರಶ್ನೆಗಳಿದ್ದವು ಎಂದರೆ ಹೊಸ ಕಥೆಗಾರರಿಗೆ ಎಷ್ಟು  ಪ್ರಶ್ನೆಗಳಿರಬಹುದು.

ಇದರ ಜೊತೆಗೆ ನಿರಗುಡಿಯವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ  ಮಾಡಿದ್ದರು. ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರ ನಿರೂಪಣೆ ಈ ಕಾರ್ಯಕ್ರಮಕ್ಕೆ ಭೂಷಣವಾಗಿತ್ತು. ಇನ್ನಷ್ಟು ಇಂತಹ ಕಾರ್ಯಕ್ರಮಗಳು ಕಲಬುರ್ಗಿಯಂತಹ ನಾಡಿಗೆ ಅತೀ ಅಗತ್ಯವೆಂದು ಭಾವಿಸುತ್ತೇನೆ.

‍ಲೇಖಕರು AdminS

August 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. mahantesh navalkal

    ಸಣ್ಣ ಕಥೆಗಳ ಓದು ಒಂದು ಸ್ಪಷ್ಠನೆ

    ಬಾಳಾಸಾಹೇಬರು ನನ್ನನ್ನ ಈ ಕಮ್ಮಟಕ್ಕೆ ಆಯ್ಕೆ ಮಡಿಕೊಂಡಿರುವ ಬಗ್ಗೆ ಫೋನ್ ಮಾಡಿ ಅದರ ಆರ್ಗನೈಜರ್ ಬಗ್ಗೆ ನನಗೆ ತಿಳಿಸಿದಾಗ ನಾನು ಸ್ವಲ್ಪ ಹಿಂಜರಿದೆ, ಯಾಕೆಂದರೆ ಇವರೆಲ್ಲ ನನಗೆ ಬಹಾಳ ಆತ್ಮೀಯ ಗೆ¼ಯÉರು ಎಂದುಕೊಂಡರೂ ಅವರ ನಿಲವು ಮತ್ತು ನನ್ನ ನಿಲುವಿಗೆ ಸರಿಹೊಂದುವಂಹದು ಆಗಿರಲಿಲ್ಲ . ನಾನು ಖಿನ್ನ ಮನಸ್ಸಿನಿಂದಲೇ ಭಾಗವಹಿಸಿದ್ದೆ , ಡೋಣುರ್ ಅವರು ಕಥಾವಾಚನ ಮಾಡಿದ ನಂತರ ನಾನು ಅಶ್ವÀಗಂಧದ ಹಾದಿ ಎನ್ನುವ ಕಥೆಯನ್ನು ಓದಿದೆ. ಅದು ಈ ದೇಶದಲಿ ವಿಸೃತವಾಗಿ 1960-1990 ರವರೆಗೆ ಬಹುವಾಗಿ ಆವರಸಿಕೊಂಡಿದ್ದ ಯಡಚಳುವಳಿಯನ್ನು ಪೋಸ್ಟಮಾರ್ಟಮ್ ಮಾಡುವ ಹಾಗು ಇಬ್ಬರು ಕಾಮ್ರೇಡುಗಳು ಕಲ್ಕತ್ತಾದ ಹುಗ್ಲಿ ನದಿಯ ದಡದ ಮೇಲೆ ಕುಳಿತು ತಮ್ಮನ್ನು ತಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಕತೆಯಾಗಿತ್ತು ., ಅದರಲಿ ಬರುವ ಕನಸು ಒಂದು ರೂಪಕವಾಗಿ ಕಾರ್ಲ ಮಾಕ್ರ್ಸ ಕುದುರೆಯ ಮೇಲೆ ಬಂದು ಅಲ್ಲಿದ್ದ ಒಂದು ಜನಾಂಗವನು ಅಶ್ವಗಂಧದ ತೊಟಕೆ ಕರೆತರುವ ಪ್ರಯತ್ನದಲಿ ವಿಫಲನಾಗುವ ಕತೆ ಇದು ,
    ಕಥಾ ಓದು ಮುಗಿದ ನಂತರ ಅಲ್ಲಿದ್ದ ಖ್ಯಾತ ಕಥೆಗಾರ್ತಿ ಒಬ್ಬರು, ಮಹಾಂತೇಶ ಅವರು ಅರ್ಥವಾಗದ ರೀತಿಯಲಿ ಕಥೆ ಬರೆಯುತ್ತಾರೆ ನಿಮಗೆ ಅರ್ಥವಾಯಿತೆ ಎಂದು ಅಲ್ಲಿ ನೆರೆದಿದ್ದ ಸಭೀಕರಿU ಮೊದಲೇÉ ಕಮೀಟ್ ಮಾಡಿಸಿದರು ಒಂದು ಸರಳ ಕತೆ ನೂರಾರು ಕತೆಬರೆದ ಅವರಿಗೆ ಅರ್ಥವಾಗದಿದ್ದುದು ನನಗೆ ಆಶ್ಚರ್ಯವಾಗಿತ್ತು
    ಆಮೇಲೇ ವಿಶ್ವನಾಥ ಮರತೂರು ಅವರು ಮೊಸರಿನ ಮಂಗಮ್ಮ ಹಾಗು ರೊಟ್ಟಿ ಕತೆಯಂತೆ ನೀವು ಏಕೆ ಕತೆ ಬರೆಯುವದಿಲ್ಲ ಎಂದು ನನ್ನನ್ನು ಕೇಳಿದಾಗ ಅದು ಮರುಸೃಷ್ಠಿಸುವದು ಅವಶ್ಯವಿಲ್ಲ ಎಂದು ಹೇಳಿದೆ, ಇದರ ಜೊತೆಗೆ ಅವರು 70 ರ ದಶಕದಲಿ ಚಾಲ್ತಿಯಲ್ಲಿದ್ದ ಭಂಡಾಯ ಮಾದರಿಯ ಕತೆ ಬರೆಯಲು ಆಪೇಕ್ಷಿಸುತ್ತಾರೆ ಎಂದು ಆಮೇಲೆ ತಿಳಿಯಿತು. ಹಾಗು ಮೇಲಿನ ಎರಡು ಕತೆಗಳಾದ ಮೊಸರಿನ ಮಂಗಮ್ಮ ಹಾಗು ರೊಟ್ಟಿ ಕತೆಗಳನು ಪೇಟೆಂಟ್ ತೆಗೆದುಕೊಂಡವರಂತೆ ಎಲ್ಲಾ ಕಡೆಯೂ ಹೇಳುತ್ತಾರೆ ಎಂದು ಅವರ ವಯಸ್ಸಿನ ಹುಡುಗರು ಆಮೇಲೆ ಹೇಳಿದರು..
    ನನಗಿರುವ ಪ್ರಶ್ನೆ ವಿಶ್ವನಾಥ ಅವರೆ ನನ್ನ ಕತೆಯೋಳಗೆ ಗುಪ್ತಗಾಮಿನಿಯಾಗಿ ಬರುವವ ಬಸವನಲ್ಲ ಬದಲಾಗಿ ಮಾಕ್ರ್ಸ, ಇದರಲ್ಲೆ ನಿಮ್ಮ ಎಡವುವಿಕೆ ಕಾಣುತ್ತದೆ . ಅದರಲಿ ನಿಚ್ಚಳವಾಗಿ ಉಲ್ಲೇಖಿಸಿರುವ ಎಲ್ಲಾ ಚಿಹ್ನೆಗಳು. ಅಲ್ಲಿ ನೇರವಾಗಿ ಮಾಕ್ರ್ಸನ ಬಗ್ಗೆಯೇ ಹೇಳುತ್ತವೆ. ಕೈಯ್ಯಲ್ಲಿ ಕೆಂಪು ಪುಸ್ಥಕ ,ದಾಸ್ ಕ್ಯಾಪಿಟಲ್ ಹಾಗು ಕಮ್ಯೂನಿಷ್ಠ ಮ್ಯನಿಫೆಸ್ಟೋ ಎಂದು ನಾನು ಹೇಳಿದ್ದು ನೀವು ಕೇಳಿಸಿಕೊಂಡಿರೋ ಇಲ್ಲವೋ? ಇದನು ಬರೆದವ ಬಸವಣ್ಣನಲ್ಲ. ಮಾಕ್ರ್ಸ. ನೀವು ಅಬ್ಸೆಂಟ್ ಮೂಡನಲ್ಲಿ ಇದ್ದಂತೆ ಕಾಣುತ್ತದೆ ಅದಕ್ಕಾಗಿಯೇ ನಿಮ್ಮ ಆ ಲೇಖನ ವಿಮರ್ಶೆಯ ಜಾಡಿನಲ್ಲಿ ಇಲ್ಲ. ಅದು ಕಾಡಿನಲಿ ದಾರಿ ತಪ್ಪಿದ ಮಂಗನಂತೆ ಯತ್ತ ಯತ್ತಲೋ ಓಡುತ್ತದೆ. ಮೊದಲ ನಿಮ್ಮಅಬ್ಸರ್ವೇಶನ್ ದಾರಿ ತಪ್ಪಿದಕ್ಕಾಗಿ ನನಗೆ ಖೇದವಿದೆ
    ಯುವ ಕತೆಗರರು ಏನಾದರೂ ಬರೆಯುವಾಗ ಎಚ್ಚರದಿಂದ ಬರೆಯಬೇಕು ಉಡಾಪೇಯಲ್ಲಿ ಅಲ್ಲ, ಆಮೇಲೆ ಡೋಣುರ್ ಕತೆಯ ಬಗ್ಗೆ ಬರೆಯುವಾಗ ಮೇಲಿನ ಮೂರು ಸಾಲುಗಳೆ ಹೇಳುತ್ತವೆ ನೀವೆಷ್ಟು ಗೊಂದಲದಲ್ಲಿದ್ದೀರಿ ಎಂದು. ಅವರ ಕತೆಯ ಬಗ್ಗೆ ಒಮ್ಮೆ ಒಳ್ಳೆಯ ಕತೆ ಎನ್ನುತ್ತೀರಿ ಒಮ್ಮೆ ಕೆಟ್ಟ ಕತೆ ಎನ್ನುತ್ತೀರಿ, ಬಾಯಿಚಪ್ಪರಸಿ ಹೊಗಳುತ್ತೀರಿ ಮತ್ತೆ ತೆಗಳುತ್ತೀರಿ ನಿಮ್ಮ ನಿಲುವುಗಳಿಗೆ ನಿಮ್ಮಲ್ಲಿಯೇ ಸ್ಥಿರತೆ ಇಲ್ಲ
    ನಾನು ಕತೆ ಓದಿ ಹೊರಬಂದ ಮೇಲೆ ಅಲ್ಲಿ ಸೇರಿದ್ದ ಯುವಜನಾಂಗ ಮುಖಾಮುಖಿಯಾಗಿ ಅನೇಕ ವಿಷಯದ ಬಗ್ಗೆ ಚರ್ಚಿಸಿತು. ಮತ್ತೆ ನನ್ನ ಕತೆ ಬಗ್ಗೆ ಮರುವಾರವೆ ಚರ್ಚೆ ಇಟ್ಟುಕೊಂಡಿತು. ಇದು ನನಗೆ ಆ ಕಾರ್ಯಕ್ರಮದಲಿ ಸಿಕ್ಕ ದೊಡ್ಡ ಯಶಸ್ಸು. ಇನ್ನೂ ಎರಡು ಕಡೆ ಇರುವ ಕಥಾ ಓದಿಗೆ ನಾನೆ ಇನ್ನೂ ಸಮಯ ಕೊಟ್ಟಿಲ್ಲ
    ಕತೆಗಾರನನು ಸಾಹಿತಿಯನು ಷಡ್ಯಂತ್ರಕ್ಕೆ ಸಿಕ್ಕಿಸಲು ಸಾಧ್ಯವಿಲ್ಲ ಆತನ ಲೋಕ ಅನಂತವಾದುದ್ದು ಎಂದು ಬರಹಗಾರರದ ವಿಶ್ವನಾಥ ಅವರಿಗೆ ತಿಳಿದರೆ ಒಳ್ಳೆಯದು. ನನಗೆ ಇದು ವಿಶ್ವನಾಥ ಬರೆದ ಲೇಖನ ಅನ್ನುವದಕ್ಕಿಂತ ಇದು ಬರೆಸಿದ ಲೇಖನವೆನ್ನಿಸಿತು, ಯಾಕಂದರೆ ಆ ಕಾರ್ಯಕ್ರಮದಲಿ ಆರಂಭದಿಂದ ಕೊನೆಯವರೆಗೂ ನಡೆದಿದ್ದು ನನ್ನ ವಿರುದ್ದದ ಷಡ್ಯಂತ್ರವೆ
    ಇದಕೆ ಉತ್ತರಿಸುವ ಅವಶ್ಯಕತೆಯೂ ನನ್ನಲಿ ಇದ್ದಿಲ್ಲ ಅವಧಿ ಇಂದು ಯುವಜನಾಂಗದ ಪ್ರೀತಿಪಾತ್ರ ಬ್ಲಾಗ್, ನಾಡಿನ ಅನೇಕ ಸ್ನೇಹಿತರು ಓದುತ್ತಾರೆ, ನನಗೆ ಇದಕೆ ಉತ್ತರ ಬರೆಯಲೇಬೇಕೆಂಬ ನಾಡಿನಾದ್ಯಂತ ಇರುವ ಸ್ನೇಹಿತರ ಒತ್ತಾಸೆಯಿಂದ ಅವರೆಲ್ಲರ ಪ್ರೀತಿ ವಿಶ್ವಾಸಕೆ ಕಟ್ಟುಬಿದ್ದು ಈ ಪ್ರತಿಕ್ರೀಯೇ ಅಸ್ಟೆ. ವಿಶ್ವನಾಥ ಸ್ವತಂತ್ರವಾಗಿ ಯೋಚಿಸಲಿ ಸ್ವತಂತ್ರವಾಗಿ ಬೆಳೆಯಲಿ ಅನ್ನುವದೆ ನನ್ನ ಆಶಯ. ಕಡತಂದವಿಷಯಗಳಿಗೆ ಬಾಳಿಕೆ ಕಡಿಮೆ

    ಪ್ರತಿಕ್ರಿಯೆ
    • Madhu Biradar

      ಸಣ್ಣ ಕಥೆಗಳ ಓದು- ಪ್ರತಿಕ್ರಿಯೆ

      ಒಂದು ಗಂಭೀರ ಕೃತಿ ಕೇವಲ ಕೇಳಿಸಿಕೊಂಡರೆ ದಕ್ಕುವುದಿಲ್ಲ.ಅದನ್ನು ಓದಬೇಕು. ಮತ್ತೆ ಮತ್ತೆ ಧ್ಯಾನಿಸಿಕೊಂಡು ಓದಬೇಕು. ಹಾಗಾದಾಗ ಅದನ್ನು ಅರ್ಥೈಸಲು ಸಾಧ್ಯ. ಇದು ಕೇವಲ ಒಂದು ಸಂದರ್ಭಕ್ಕೆ ಸೀಮಿತವಾಗಿ ನೋಡದೆ,ಒಟ್ಟು ಕನ್ನಡ ಕಥಾ ಪರಂಪರೆಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಕನ್ನಡ ಕಥಾ ಜಗತ್ತು ಇನ್ನೂ “ಮೊಸರಿನ ಮಂಜಮ್ಮ” ಕಾಲದಲ್ಲಿಲ್ಲ.ನಮ್ಮ ತಲೆಮಾರಿನ ಕಥಾ ವಸ್ತು ಮತ್ತು ಶೈಲಿಯಿಂದ ಭಿನ್ನ ದಾರಿ ತುಳಿದಿದೆ.ಅದನ್ನು ಹಿರಿಯರಿಂದ ಕಿರಿಯರವರೆಗೆ ಅರಿತುಕೊಳ್ಳಬೇಕಾದ ಅಗತ್ಯವಿದೆ.ಏಕೆಂದರೆ ಕಾರ್ಪೊರೇಟ್, ಜನಪ್ರಿಯ ಮತ್ತು ಗಂಭೀರ ಸಾಹಿತ್ಯ ಇತ್ತೀಚಿನ ದಶಕದಲ್ಲಿ ವಿಪುಲವಾಗಿ ರಚನೆಗೊಳ್ಳುತ್ತಿದೆ.ಓದುಗರಾದ ನಾವು ಕಾರ್ಪೊರೇಟ್ ಮತ್ತು ಜನಪ್ರಿಯ ಮಾದರಿಯ ಅಂಶಗಳನ್ನು ಗಂಭೀರ ಸಾಹಿತ್ಯದಿಂದ ನಿರೀಕ್ಷಿಸುವುದು ಸರಿಯಾದ ಕ್ರಮವಾಗಿರಲಾರದು.ಗಂಭೀರ ಕಥಾ ಪರಂಪರೆಯ ಮುಂದುವರಿಕೆಯನ್ನು ಪ್ರತಿನಿಧಿಸುವ ನಮ್ಮ ತಲೆಮಾರಿನ ಪ್ರಮುಖ ಕಥೆಗಾರರು ಮಹಾಂತೇಶ ನವಲಕಲರು.ಅವರ ಕಥೆಗಳನ್ನು ಗಮನಿಸಿದರೆ ಈ ಮೇಲಿನ ಅಂಶ ಸ್ಪಷ್ಟವಾದಿತು.ಉದಾಹರಣೆಗೆ ಭಾರತ ಭಾಗ್ಯವಿಧಾತ ಗಮನಿಸಿದರೆ ಸಾಕು.

      ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ “ಸಣ್ಣ ಕಥೆಗಳ ಓದು” ಕಾರ್ಯಕ್ರಮದಲ್ಲಿ ಎರಡು ಭಿನ್ನ ಮಾದರಿಯ ಕಥೆಗಳಾದ “ಅಲ್ಲಾಭಕ್ಷ” ಮತ್ತು “ಅಶ್ವ ಗಂಧದ ಹಾದಿ” ಓದಲಾಯಿತು. ಅಲ್ಲಾಭಕ್ಷ ಕಥೆಯು ಇಂದಿನ ಸಮಾಜದಲ್ಲಿ ರಂಗಭೂಮಿ ಮತ್ತು ರಂಗಭೂಮಿಯ ಕಲಾವಿದರ ದುಸ್ಥಿತಿಯನ್ನು ವಿಷದ ಪಡಿಸುತ್ತದೆ.

      “ಅಶ್ವಗಂಧದ ಹಾದಿ” ಕಥೆಯ ಪ್ರಾರಂಭವು ಕಲ್ಕತ್ತಾದ ಹೂಗ್ಲಿ ನದಿ ದಂಡೆಯಲ್ಲಿಯಾಗುತ್ತದೆ.ಅಮೂರ್ತವಾದ ಕಥೆಯು ಕಾವ್ಯದಂತೆ ಸಂಕೇತ ಮತ್ತು ಪ್ರತಿಮೆಗಳಲ್ಲಿ ಸುದೀರ್ಘವಾಗಿ ವಿಸ್ತಾರಗೊಳ್ಳುವುದು.ಎಡಪಂಥೀಯ ಚಿಂತನೆ ಮತ್ತು ಅದರ ಆಶಯವಾದ ಸಮಾಜದ ಕಟ್ಟ ಕಡೆಯ ವರ್ಗಕ್ಕೆ ತಲುಪಬೇಕಾದ ಪ್ರತಿಫಲ ವಿಪಲವಾದ ಪರಿಯನ್ನು ಕಥೆ ಸೂಚ್ಯವಾಗಿ ತಿಳಿಸುವುದು.ಕೆಳ ವರ್ಗದ ಉದ್ಧಾರದ ಆಶಯ ವ್ಯಕ್ತಪಡಿಸುತ್ತ ನಿರ್ದಿಷ್ಟವಾದ ವರ್ಗ ಮತ್ತು ಸಮುದಾಯ ಅದರ ಪ್ರತಿಫಲ ಪಡೆದು ಭಿನ್ನ ಮಾದರಿಯ ಶೋಷಣೆಯನ್ನೆ ಅನುಸರಿಸಿದ್ದು ಕಥೆ ಎತ್ತಿ ತೋರಿಸುತ್ತದೆ. ಒಟ್ಟಾರೆ ಕಾರ್ಲ್ ಮಾರ್ಕ್ಸ್ ನ ಚಿಂತನೆ ಭಾರತದಲ್ಲಿ ವಿಫಲಗೊಂಡ ಪರಿ ಅಶ್ವ ಗಂಧದ ವಸ್ತುವಿನ ಮೂಲಕ ವ್ಯಕ್ತಪಡಿಸುವುದು…

      ಮೇಲಿನ ಆಕ್ಷೇಪದಲ್ಲಿ ಹುರುಳಿಲ್ಲ,ಕಾರಣ ಕಥೆಯನ್ನು ಅರ್ಥೈಸುವಲ್ಲಿ ಸೋತಿದ್ದಾರೆ.ಬಸವ ಅಥವಾ ಬಸವ ತತ್ವದ ಪ್ರಸ್ತಾಪವೇ ಬರುವುದಿಲ್ಲ.ಸಾಂಕೇತಿಕವಾಗಿಯು ಅದರ ಸುಳಿವು ಅದರಲ್ಲಿ ಇಲ್ಲ.

      ಪ್ರತಿಕ್ರಿಯೆ
  2. ಶಾಂತಲಿಂಗಯ್ಯ ಮಠಪತಿ

    ನಾನು ಆದಿನ ಅಲ್ಲಿದ್ದೆ ನಿಮ್ಮ ಕಥಾ ಓದು ಮುಗಿದ ಮೇಲೆ ಅಲ್ಲಿ ಇರುವ ಕೆಲ ಸೆಲೆಕ್ಟೆಡ್ ಜನ ನಿಮ್ಮ‌ ಮೇಲೆ ಮುಗಿ ಬೀಳುವದು ನೋಡಿ ಇದು ಪೂರ್ವಾಗ್ರಹದ ದಾಳಿ ಅನ್ನಿಸಿತು.
    ನೀವು ಉತ್ತರಿಸಲು ಎದ್ದಾಗ ಬಾಳಾಸಾಹೇಬರೆ ನಿಮಗೆ ಬಲವಂತವಾಗಿ‌ ಕೂಡ್ರುಸುತ್ತಿದ್ದರು. ನೀವು ಬಹಾಳ ಅಸಾಹಯಕಾರಾಗಿದ್ದೀರಿ. ಅಲ್ಲಿರುವ ೯೯% ಜನ ನಿಮ್ಮ ಕತೆಯನು ಬಹಾಳ‌ ಆಸಕ್ತಿಯಿಂದ ಸವಿದು ಯಂಜಾಯ್ ಮಾಡಿದರು . ೧ % ಜನರಿಗೆ ಮಾತ್ರ . ತಕರಾರು ಇತ್ತು
    ನಿಮ್ಮ‌ ಕತೆಯ ಬಗ್ಗೆ ಹೇಳಬೇಕೆಂದರೆ ಅದೊಂದು ಅಪರೂಪದ ನಾವು ಎಲ್ಲೂ ಕೇಳಲರಿಯದ ಕತೆ. ಅದು‌ ಕಾವ್ಯ. ಅದು ಒಂದು‌ ಲಹರಿ ಅದೊಂದು ಸುಂದರ ಭಾವ. ಮಾರ್ಕ್ಸ್ ವಾದದಂತಹ ಪೂರ್ಣವಾಗಿ ಒಂದು ಕಡೆ ನಿಲ್ಲುವ ಸಿದ್ದಾಂತವನು ನೀವು ಕತೆಯಲ್ಲಿ ದುಡಿಸಿಕೊಂಡ ಬಗೆ ನನಗೆ ಆಶ್ಚರ್ಯವಾಯಿತು. ಎಲ್ಲಿಯೂ ಬ್ಲಾಕ್ ವೈಟ್ ಆಗದಂತೆ ನೀವು ಪೂರ್ಣವಾಗಿ ಕಲಾತ್ಮಕವಾಗಿ ನಿಭಾಯಿಸಿದ ರೀತಿ ಹೆಮ್ಮೆ ಎನ್ನಿಸಿತು.
    ವಿಶ್ವನಾಥ ಎತ್ತಿದ ಪ್ರಶ್ನೆ ಅವಾಸ್ತವಿಕ ಮತ್ತು‌ ಅದು ಬಾಲಿಶವಾದುದ್ದು. ಅವರ ‌ವಾಕ್ಯಗಳ ರಚನೆಯೂ ಏರುಪೇರು.

    ಪ್ರತಿಕ್ರಿಯೆ
  3. Basavaraj Donur

    I have nothing to say about what Mr Vishwanath has written on and about the story that I read our at a function in Kalaburagi last week. Mahantesh Navalkal who also read out his story on the same occasion expressed his disagreement with what Vushwantah wrote and as a fellow story writer I can understand his concerns. Navalkal is a very significant short story writer in Kannada and the story he has read admits of various interpretations and it is certainly better than the story that I presented.

    I do not say that I am a major writer in Kannada nor do I say that what I write has no stuff in it and hence does not deserve any merit. But I leave everything to time. It is only time that gives right answers at a right time to what we say and write and it proves who is who and what is what.

    Of late I began to realize that we Indians fail to analyse or appreciate a work of art. We either unreasonably praise a work of art to the sky or cruelly condemn it and burry it.

    We must try to understand both the merit and the limitations of a writer. A finished poem or a story is both a merit and a limitation of a writer. When I write a poem and publish it that is an end of it. I can not do anything about it. It is no longer in my control. It is in the public domain. The readers have freedom to say or write anything they like or think correct about it.
    A writer need not bother about it. But when we criticise or analyse a work of art we should bear in mind that we must try to find out what the writer is trying to say in his work of art, whether he has succeeded in achieving what he intended or not. We should be interested in the perphery but in the core. If a critic or a reader either unreasonably praises a work of art or condemns for what we call non-literary reasons he is then commuting a sin and an immoral act.

    When we evaluate a work of art we should remember that we are not dealing with a dead body but with a living organism. When we deal with any living being we must be very decent and very responsible. A critic has got to be humble and decent.

    Prof Basavaraj Donut
    CUK
    Kalaburagi

    ಪ್ರತಿಕ್ರಿಯೆ
    • sandhya honguntikar

      ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗುಲಬರ್ಗಾದಲ್ಲಿ ಆಯೋಜಿಸಿದ ಕಥಾ ವಾಚನ ಕಾರ್ಯಕ್ರಮದಲ್ಲಿ ಆದ ಗೊಂದಲಕ್ಕೆ ಸಮಯದ ಕೊರತೆ ಕಾರಣ ಎಂದೇ ಹೇಳಬಹುದು. ಏಕೆಂದರೆ ಇಡೀ ಕಾರ್ಯಕ್ರಮದಲ್ಲಿ ನಾನು ಮತ್ತು ಜ್ಯೋತಿ ಕುಲಕರ್ಣಿ ಹೆಚ್ಚು ಕಡಿಮೆ ಉತ್ಸವ ಮೂರ್ತಿಗಳಾಗಿ ಕುಳಿತಿದ್ದೇವು.ಪ್ರಶ್ನೆ ಕೇಳಲೂ ವೇದಿಕೆಯ ಮೇಲೆ ಕೂಡುವ ಅವಶ್ಯಕತೆ ಇರಲಿಲ್ಲ. ಕಾರ್ಯಕ್ರಮದ ಆಯೋಜಕರಾದ ನಿರಗುಡಿ ಅವರು ನಾನು ಮತ್ತು ಜ್ಯೋತಿಯವರು ಮಹಾಂತೇಶ್ ನವಲಕಲ್ ಅವರ ಕಥೆಯ ಕುರಿತು ಮಾತ್ರ ಸಂವಾದ ಮಾಡಬೇಕೆಂದು ಹೇಳಿದ್ದರು .ಹಾಗಾಗಿ ಬಸವರಾಜ ಡೋಣೂರ ಅವರ ಕಥೆಯ ಬಗ್ಗೆ ನಮಗೆ ಮಾತನಾಡಲು ಯಾವ ಅವಕಾಶವಿಲ್ಲದಾಯಿತು. ನವಲಕಲ್ ಅವರ ‘ಅಶ್ವಗಂಧದ ಹಾದಿ’ ಈ ಕಥೆ ನಾನು ಈ ಮೊದಲೇ ಓದಿದ್ದು ನಾನು ಮೆಚ್ಚಿದ ಅವರ ಅನೇಕ ಕಥೆಗಳಲ್ಲಿ ಇದೂ ಕೂಡ ಒಂದು .ಅಂದು ಸಭೆಯಲ್ಲಿ ಹಿಂದೆ ಕುಳಿತಂತಹ ವಿದ್ಯಾರ್ಥಿಗಳಿಗೆ “ಈ ಕಥೆ ನಿಮಗೇ ಅರ್ಥವಾಯಿತೇ?” ಎಂದು ಕೇಳಿದ ಕಾರಣವೇನೆಂದರೆ ಮಹಾಂತೇಶ್ ಅವರ ಕಥೆಗಳು ಒಂದು ಓದಿಗೆ ಅಥವಾ ಕೇಳುವುದಕ್ಕೆ ದಕ್ಕುವಂಥದ್ದಲ್ಲ ,ಅದನ್ನು ಧ್ಯಾನಸ್ಥ ಸ್ಥಿತಿಯಿಂದ ಅಧ್ಯಯನ ಮಾಡಿ, ಮನನ ಮಾಡಿಕೊಂಡು ಜೀರ್ಣಿಸಿಕೊಂಡನಂತರ ಒಂದು ಅದ್ಭುತವಾದ ಹೊಳವು ಸಿಗುತ್ತದೆ ಎಂದು ಹೇಳಿದ್ದೆ. ಅವರ ಕಥೆಗಳು ತುಂಬ ಗಹನವಾದ ವಿಷಯವನ್ನು ಅಡಗಿಸಿಕೊಂಡಿದ್ದು ಬಡಪಟ್ಟಿಗೆ ಸಿಗುವುದಿಲ್ಲ ಎಂದಿದ್ದೆ. ಅಷ್ಟೇ ಅಲ್ಲ, ಅವರ ಕಥೆಗಳು ಕೂಡ ನನ್ನ ನೆಚ್ಚಿನ ಸಿನಿಮಾ ನಿರ್ದೇಶಕ ಉಪೇಂದ್ರ ಅವರ ಚಲನಚಿತ್ರಗಳಂತೆ ‘ಬುದ್ಧಿವಂತರಿಗೆ ಮಾತ್ರ’ ಎಂದೂ ಕೂಡ ಹೇಳಿದ್ದೆ.
      ನವಲಕಲ್ ಅವರ ಕಥೆಗಳು ಕೇವಲ ನೆನಪಿನಲ್ಲಿ ,ಹಳಹಳಿಕೆಯಲ್ಲಿ ತೊಳಲಾಡದೆ ವಾಸ್ತವದ ಸಂಗತಿಗಳನ್ನು, ಜಾಗತಿಕರಣದ ಸಮಸ್ಯೆಗಳನ್ನು ಎತ್ತಿ ಹಿಡಿದು ಓದುಗರನ್ನು ಕಾಡುತ್ತವೆ ಎಂದೂ ಹೇಳಿದ್ದೆ. ಹುಟ್ಟಿದ ಊರಿನಲ್ಲಿ ಅಥವಾ ಸ್ಥಳೀಯ ನೆಲದಲ್ಲಿ ಅವರ ಕತೆಗಳು ಹುಟ್ಟುವುದಿಲ್ಲ ಅವು ಬ್ಯಾಂಕಾಕಿನಲ್ಲಿ ,ಥೈಲ್ಯಾಂಡಿನಲ್ಲಿ ಅಥವಾ ಸಾಬರಮತಿಯಲ್ಲಿ (ಪ್ರಸ್ತುತ ಕಥೆ) ಕಲ್ಕತ್ತಾದಲ್ಲಿ ಮೂಡುತ್ತವೆ. ಸಂಘರ್ಷಣೆ ಉಂಟುಮಾಡುತ್ತವೆ.ಆದರೆ ಸಮಸ್ಯೆ ಮಾತ್ರ ಈ ನೆಲದ್ದೇ ಆಗಿರುತ್ತದೆ, ಇಲ್ಲಿಯದೇ ತಾಕಲಾಟಗಳಾಗಿರುತ್ತವೆ, ಇಲ್ಲಿಯದೇ ತಲ್ಲಣಗಳಿರುತ್ತವೆ ಎಂದು ಹೇಳಿದ್ದೆ.ಯಾವ ರೀತಿ ಗಾಳಿಪಟ ವಿಶಾಲವಾದ ಬಾನಿನಲ್ಲಿ ಮೂಲವನ್ನು ಬಿಟ್ಟು ಹಾರುವಂತೆ ತೋರುತ್ತದೆ ಆದರೆ ಅದರ ಸೂತ್ರ ಮಾತ್ರ ಮೂಲದಲ್ಲೇ ಬಂಧಿಸಿಕೊಂಡಿರುತ್ತದೆ ಎಂಬ ಉದಾಹರಣೆ ನೀಡಿದ್ದೆ. ಈ ಕಥೆಯ ಬಗ್ಗೆ ನನ್ನಲ್ಲಿ ಪ್ರಶ್ನೆಗಳಿಲ್ಲ, ಕಥೆಯ ಪರವಾಗಿಯೇ ಮಾತನಾಡಬಯಸುತ್ತೇನೆ ಎಂದಿದ್ದೆ. ಶ್ರೀ ಶಂಕ್ರಯ್ಯಾ ಘಂಟಿ ಮತ್ತಿತರರು ತಂತ್ರ,ಸಂಭಾಷಣೆ ,ಪಾತ್ರಗಳ ಬಗ್ಗೆ ಅಭಿಪ್ರಾಯ ಹೇಳಿದಾಗ ನಾನು “ಹೌದು, ಅದೆಲ್ಲ ಇದ್ದರೆ ಕಥೆಗೆ ಇನ್ನಷ್ಟು ಪುಷ್ಟಿ ಸಿಗುತಿತ್ತು “ಎಂದು ಹೇಳಿದೆ.ಅಲ್ಲದೆ ಸೇತುರಾಂ ಅವರ ‘ನಾವಲ್ಲ’ ಕತೆ ತುಂಬ ಪುಟ್ಟ ಕತೆಯಾಗಿದ್ದು ಯಾವ ಶೈಲಿ, ತಂತ್ರಕ್ಕೆ ಒಳಪಡದೆ ಏಕಾಂಕ ನಾಟಕದ ಸಂಭಾಷಣೆಯಂತೆ ಇದ್ದು ಅತ್ಯಂತ ತೀವ್ರ ಪರಿಣಾಮವನ್ನು ಬೀರಿದೆ. ಈ ರೀತಿಯ ಪ್ರಯೋಗಗಳು ಕಥೆಗಾರರು ಮಾಡುತ್ತಾರೆ ಎಂದೂ ಅಭಿಪ್ರಾಯ ಪಟ್ಟೆನಲ್ಲದೆ ಅಶ್ವಗಂಧದ ಕಥೆಯ ಈ ರೀತಿಯ ಪ್ರಯೋಗವನ್ನು ನಾನು ಒಪ್ಪಿಕೊಂಡಿದ್ದೇನೆ ಸಹ.
      ಜ್ಯೋತಿ ಕುಲಕರ್ಣಿ ಅವರು “ಮಹಾಂತೇಶ್ ಬಹಳ ಅತೃಪ್ತ “ಎಂದು ಹೇಳಿದಾಗ ನಾನು “ಹೌದು, ಸಂದರ್ಭಗಳ ಬಗ್ಗೆ, ವ್ಯವಸ್ಥೆಯ ಬಗ್ಗೆ, ಸಮಾಧಾನವಿಲ್ಲದಾಗ, ನೆಮ್ಮದಿ ಇಲ್ಲದಾಗ ಅತೃಪ್ತರಾದಾಗಲೇ ಸಮಸ್ಯೆಗಳು ಎದ್ದು ಕಾಣುತ್ತವೆ. ಅವುಗಳ ಬಗ್ಗೆ ಚಿಂತನ ನಡೆಯುತ್ತದೆ. ಆ ಕಾಡುವಿಕೆಯೇ ಕಥೆಗಳಾಗುತ್ತವೆ ಅಲ್ಲದೆ ಅದನ್ನು ಅಭಿವ್ಯಕ್ತಿಸಿದಾಗ ಸಮಸ್ಯೆ ಆ ಕ್ಷಣಕ್ಕೆ ಬಗೆಹರಿಯದಿದ್ದರೂ ನಾವೂ ಸ್ವಲ್ಪಮಟ್ಟಿಗೆ ಆ ತಲ್ಲಣದಿಂದ ಮುಕ್ತರಾತ್ತೇವೆ ಎಂದು ಹೇಳಿದ್ದೆ. ಅಂದಿನ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಪ್ರಭಾಕರ್ ನಿಂಬರ್ಗಿ ಅವರು ಕೂಡ ಇದನ್ನೇ ಹೇಳಿದ್ದರು .
      ಈ ಕಾರ್ಯಕ್ರಮದ ಮುಗಿದ ತಕ್ಷಣವೇ ನನಗನಿಸಿದ್ದು ಇಂಥ ಒಳ್ಳೆಯ ಕಥೆಯ ಬಗ್ಗೆ ಉತ್ತಮ ಚರ್ಚೆ, ಸಂವಾದ ಆಗದೇ ಇದ್ದದ್ದು ಸಮಯದ ಅಭಾವದಿಂದ. ಹಾಗಾಗಿ ಈ ಕಥೆಯ ಬಗ್ಗೆ ಒಂದು ಲೇಖನ ಬರೆಯಬೇಕು ಎಂದುಕೊಂಡಿದ್ದೆ .
      ಆದರೆ ಅದೇಕೋ ಆ ಕಾರ್ಯಕ್ರಮದ ಬಗ್ಗೆ ಮಹಾಂತೇಶ್ ಅವರಿಗೆ ಮೊದಲಿಗೆ ಸ್ವಲ್ಪ ಹಿಂಜರಿಕೆ ಇರುವುದರಿಂದ ಅವರಿಗೆ ಅಪಾರ್ಥವಾಗಿದೆಯೆಂದೆನಿಸುತ್ತಿದೆ.
      ಮಹಾಂತೇಶ ಸರ್,ಅಂದಿನ
      ಕಾರ್ಯಕ್ರಮ ಯಾವುದೇ ದುರುದ್ದೇಶದಿಂದ ಆಯೋಜಿಸಿಲ್ಲ. ನೀವು ಈ ಭಾಗದ ಹೆಮ್ಮೆಯ ಕತೆಗಾರ,ನಾಟಕಕಾರ.ನಿಮ್ಮ ಬುದ್ಧ ಗಂಟೆಯ ಸದ್ದು ನನಗೆ ತುಂಬ ವಯಕ್ತಿಕವಾಗಿ ಕಾಡುತ್ತಿರುತ್ತದೆ. ಭಾರತ ಭಾಗ್ಯವಿಧಾತ ಕತೆಯನ್ನು ನಮ್ಮ ರಾಜ್ಯದ ಎಲ್ಲ ಮಂತ್ರಿಗಳ ಮುಂದೆ ಓದಬೇಕೆನಿಸುವುದು. ನಿಮ್ಮ ಕಥೆಗಳ ವಸ್ತುಗಳ ಹರಹು ದೊಡ್ಡದಾಗಿದ್ದು ಅದರ ಕ್ಯಾನ್ವಾಸ್ ಬಹಳ ಬಣ್ಣಗಳಿಂದ ಕೂಡಿದೆ. ಕೇಶವ ಮಳಗಿಯವರಂತೆ ಅವರ ಕಥಾವಸ್ತುಗಳು ದೇಶದ ಉದ್ದಗಲಕ್ಕೂ ಓಡಾಡುತ್ತ ಹರಡಿಕೊಂಡಿರುತ್ತವೆ. ನಮ್ಮ ಕಲಬುರಗಿಯ ಅಂದಿನ ಕಾರ್ಯಕ್ರಮದ ಸಂಘಟಕರು ತುಂಬ ಪ್ರೀತಿಯಿಂದ ತಮ್ಮನ್ನು ಕಾಣುವರಲ್ಲದೆ ಹೊರಗಿನವರನ್ನೇ ತುಂಬ ವಿಶ್ವಾಸದಿಂದ, ಪ್ರೀತಿಯಿಂದ ಮನದೊಳಗಿಟ್ಟುಕೊಂಡು ಗೌರವಿಸುವಾಗ ನಮ್ಮ ಕಲಬುರ್ಗಿ ಜನ ನಿಮ್ಮನ್ನು ಹೇಗೆ ಬಿಟ್ಟುಕೊಟ್ಟಾರು.
      ನಿಮ್ಮಂತಹ ಸೂಕ್ಷ್ಮ ,ಸಜ್ಜನ ಸಹೃದಯರ ಬಗ್ಗೆ ಯಾರಿಗೂ ಯಾವರೀತಿಯಲ್ಲೂ ಭೇಧ,ದ್ವೇಷ ,ಭಿನ್ನಾಭಿಪ್ರಾಯಗಳಿರಲು ಸಾಧ್ಯವಿಲ್ಲ. ಅಂದು ಯಾರಲ್ಲೂ ನಿಮ್ಮ ಕಥೆಗಳ ಬಗ್ಗೆ ನಕಾರಾತ್ಮ ಭಾವವಿರಲಿಲ್ಲ.

      ವಿಶ್ವನಾಥ ಮರತೂರ ಅವರೆ, ಅಂದಿನ ಕಾರ್ಯಕ್ರಮದ ವಿಷಯ ನೀವು emedialine ಮೂಲಕ ಅನೇಕ ಪ್ರಶ್ನೆ ,ಚರ್ಚೆ ಮಾಡಿದ್ದು ಅದಕ್ಕೆ ನಾನು ಸಣ್ಣ ಕತೆಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿದ್ದೆ. ನಮಗೆ ನಮ್ಮ ಮಿತಿಯ ಬಗ್ಗೆ ಅರಿವಿರಬೇಕು.ತಿಳಿದುಕೊಳ್ಳುವ ಉತ್ಸಾಹವೇನೋ ಸರಿ,ಆದರೆ ಪೂರ್ಣವಾಗಿ ಅರಿತುಕೊಳ್ಳದೆ ಅಪ್ರಸಂಗಿಕವಾಗಿ ವಾದಿಸುವುದು ಶೋಭೆಯಲ್ಲ. ನೀವು ನಮ್ಮ ಭಾಗದ ಉತ್ಸಾಹಿ ಯುವಕರಾಗಿದ್ದು ನಮ್ಮ ಭಾಗದ ಎಲ್ಲ ಕತೆಗಾರರ ರಾಜಪುರೋಹಿತ್, ಸಗರ್ ಕೃಷ್ಟಾಚಾರ್, ಶಾಂತರಸ, ಗೀತಾ ನಾಗಭೂಷಣ,ಸೂಗಯ್ಯಾ ಹಿರೆಮಠ ಸರಿತಾ ಕುಸಮಾಕರ್ ದೇಸಾಯಿ ಮುಂತಾದವರ (ಡೋಣೂರು, ಡಾ. ಪೋತೆ, ನವಲ್ಕಲ್ ,ಸುಬ್ಬರಾವ್ ಕುಲಕರ್ಣಿ,ಜ್ಯೋತಿ ಕುಲಕರ್ಣಿ ಅವರನ್ನೊಳಗೊಂಡಂತೆ) ಅವರ ಕತೆಗಳನ್ನೆಲ್ಲ ಓದಿಕೊಳ್ಳಿ. ಚರ್ಚೆ,ಸಂವಾದ ಮಾಡುವುದು ತಪ್ಪಲ್ಲ, ಟೀಕೆ ಮಾಡುವುದು ತಪ್ಪು. ವಿಮರ್ಶೆಗೆ ಅಧ್ಯಯನ ಬೇಕು. ನಿಮ್ಮ ಅಪಕ್ವ ತಿಳುವಳಿಕೆಯಿಂದ ಸಣ್ಣ ಕತೆಯ ಅಂದಿನ ಕಾರ್ಯಕ್ರಮದ ಬಗ್ಗೆ ವಿನಾಕಾರಣ ಗೊಂದಲ ,ಅನುಮಾನಗಳನ್ನು ಮೂಡಿಸಿದ್ದೀರಿ. ನಾನು ಸಹಾನುಭೂತಿಯಿಂದ ಎರಡನೆ ಬಾರಿ ಹೇಳುತ್ತಿರುವೆ. ಅನಾವಶ್ಯಕ ಚರ್ಚೆ ಇಲ್ಲಿಗೆ ಬಿಟ್ಟುಬಿಡಿ.

      ಇಲ್ಲಿ ನಾನು ಮೇಲೆ ಪ್ರಸ್ತುತಪಡಿಸಿರುವ ಸಂಗತಿಗೆ ವಿಭಿನ್ನವಾಗಿ ಅಂದು ಸಭೆಯಲ್ಲಿ ನಾನು ಮಾತನಾಡಿದ್ದರೆ ಅದನ್ನು ಗಮನಿಸಿದವರು ಇಲ್ಲಿ ತಿಳಿಸಬಹುದು ಎಂದು ನನ್ನ ವಿನಂತಿ.
      ಸಂಧ್ಯಾ ಹೊನಗುಂಟಿಕರ್
      ಗುಲಬರ್ಗಾ

      ಪ್ರತಿಕ್ರಿಯೆ

Trackbacks/Pingbacks

  1. ಇದು ಯಾರೋ ಬೇಕೆಂದಲೇ ಬರೆಸಿದ್ದು.. – . - […] ಈ ಕುರಿತು ಕೆ ಎಂ ವಿಶ್ವನಾಥ ಮರತೂರ ಅವರು ಬರೆದ ಸಮೀಕ್ಷಾ ಬರಹ ‘ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ- […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: