ಪಾರ್ವತಿ ಐತಾಳ್ ಓದಿದ ‘ಮಾಯೆ’

ಡಾ ಪಾರ್ವತಿ ಜಿ ಐತಾಳ್

‘ಮಾಯೆ’ ಎಂಬ ಪದ ಭಾರತೀಯ ಸಾಹಿತ್ಯವನ್ನೋದಿದವರಿಗೆ ಚಿರಪರಿಚಿತ. ಸರಳವಾಗಿ ಹೇಳುವುದಾದರೆ ನಮ್ಮ  ದೃಷ್ಟಿಯನ್ನು ಮಂದ ಮಾಡಿ ನಾವು ನಮ್ಮ ಪಂಚೇಂದ್ರಿಯಗಳ ಮೇಲಣ ನಿಯಂತ್ರಣವನ್ನು ಪೂರ್ತಿಯಾಗಿ ಕಳೆದುಕೊಂಡು ತಪ್ಪು ದಾರಿಯಲ್ಲಿ ನಡೆಯುವಂತೆ ಮಾಡುವುದು ಮಾಯೆ. ಈಗಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ವಿಶಿಷ್ಟ ಶೈಲಿಯ ಕಥೆ ಕಾದಂಬರಿಗಳ ಮೂಲಕ ದೃಢ ಹೆಜ್ಜೆಗಳನ್ನೂರಿ ನಡೆಯುತ್ತಿರುವ ಆಶಾ ರಘು ಅವರ ಇತ್ತೀಚಿನ ಕಾದಂಬರಿ ‘ಮಾಯೆ’ಯ ವಸ್ತು ಇದುವೇ.

ಇದೊಂದು ಸಾರ್ವಕಾಲಿಕ ವಸ್ತುವಾದರೂ ಆಶಾ ಅವರು ಇದನ್ನು ಪ್ರಸಕ್ತ ಕಾಲದಲ್ಲಿಡದೆ ಹನ್ನರಡನೆಯ ಶತಮಾನದಷ್ಟು ಹಿಂದಕ್ಕೆ ಚಲಿಸಿ ಆಧುನಿಕ ಕಾಲದ ಕಾದಂಬರಿಗಳು ಸೃಷ್ಟಿಸುವ ಲೋಕಕ್ಕಿಂತ ಭಿನ್ನವಾದ ಒಂದು ಲೋಕದಲ್ಲಿ ಓದುಗರು ಸಂಚರಿಸುವಂತೆ ಮಾಡುತ್ತಾರೆ.‌ ಸಹಜವಾಗಿಯೇ ಅಂದಿನ ಸಂಸ್ಕೃತಿ, ಜೀವನಕ್ರಮ, ಆಚಾರ-ವಿಚಾರ, ಸಂಭಾಷಣಾ ಶೈಲಿ, ಸಂಬಂಧಗಳನ್ನು ಇಟ್ಟುಕೊಳ್ಳುವ ರೀತಿ- ಎಲ್ಲದರಲ್ಲೂ ಅವರು ಏಳೆಂಟು ಶತಮಾನಗಳಷ್ಟು ಹಿಂದಕ್ಕೆ ಹೋಗಿ ಅಲ್ಲಿ ಪಾತ್ರಗಳನ್ನು ಬೆಳೆಸುತ್ತಾರೆ.

ಹಾಗೆ ಹೇಳುವುದಾದರೆ ಇಲ್ಲಿರುವ ಕಥೆಯಲ್ಲಿ ವಿಶೇಷವೇನೂ ಇಲ್ಲ. ಕಥಾನಾಯಕ ಜಯಕೀರ್ತಿ ಆರಂಭದಲ್ಲಿ ತನ್ನ ತಾಯಿ ತಂದೆಯರಂತೆಯೇ ಸೌಮ್ಯ ಸ್ವಭಾವದವನೂ ಅಲ್ಪ ತೃಪ್ತನೂ ಆಗಿರುತ್ತಾನೆ. ತಾನು ಬಹುವಾಗಿ ಪ್ರೀತಿಸಿದ ವೈಶಾಲಿಯನ್ನು  ಅವಳ ತಾಯ್ತಂದೆಯರು ಶ್ರೀಮಂತನೊಬ್ಬನಿಗೆ ಮದುವೆ ಮಾಡಿ ಕೊಟ್ಟಾಗ ಅವನು ಜೀವನದಲ್ಲೇ ಆಸಕ್ತಿ ಕಳೆದುಕೊಂಡು ಸುರೆಯ ದಾಸನಾಗುತ್ತಾನೆ. ಕೊನೆಗೆ ಸಂಸ್ಥಾನದ ಸೇನೆಗೆ ಸೇರುವ ಅವಕಾಶ ಸಿಕ್ಕಿದಾಗ ಹಿಂದಿನ ಸ್ಥಿತಿಗೆ ಬರುತ್ತಾನೆ. ಮುಂದೆ ಮಂಗಳೆಯನ್ನು ಮದುವೆಯಾಗುತ್ತಾನೆ. ದಾಯಾದಿಗಳು ಅನ್ಯಾಯವಾಗಿ ವಶಪಡಿಸಿಕೊಂಡ ಅವನ ಆಸ್ತಿಯನ್ನು ತನ್ನ ಅಧಿಕಾರದ ಶಕ್ತಿಯನ್ನುಪಯೋಗಿಸಿ ಮತ್ತೆ ಪಡೆಯ ಬೇಕೆಂದು ಮಂಗಳೆ ಸಲಹೆ ನೀಡಿದ ಪ್ರಕಾರ ಆ ಕೆಲಸಕ್ಕೆ ಮುಂದಾಗುವ ಜಯಕೀರ್ತಿ ಸುತ್ತುಮುತ್ತಲಿದ್ದ ಎಲ್ಲ ಭೂಮಿಯನ್ನೂ ತಂದೆ ಬೇಡವೆಂದು ಬುದ್ಧಿ ಹೇಳಿದರೂ ಕೇಳದೆ ಜಬರ್ದಸ್ತಿನಿಂದ ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ಇಲ್ಲಿಂದ ಮುಂದೆ ಅವನ ಅಧಃಪತನದ ಕಥೆಯಿದೆ.   

ರಾವಣನಂತೆ ಮದೋನ್ಮತ್ತನಾಗಿ ಅವನು ವಿವಾಹಿತೆ ವೈಶಾಲಿಯನ್ನು ಅಪಹರಿಸಿ ತಂದು ತನ್ನವಳನ್ನಾಗಿ ಮಾಡಿಕೊಳ್ಳುವ ಪ್ರಯತ್ನ ಚಮಾಡುತ್ತಾನೆ. ಪ್ರಾಣಸ್ನೇಹಿತ ಮದನನ ಹಿನ್ನೆಲೆಯನ್ನು ಅವನ ಸಾಕು ತಂದೆಯು ಹೇಳಿ ಅವನು ನಿಜವಾಗಿಯೂ ಒಬ್ಬ ರಾಜಕುಮಾರನೆಂದೂ ಅವನ ಚಿಕ್ಕಪ್ಪ ಅವನ ತಂದೆಯನ್ನು ಕೊಂದು ಈಗ ಪಟ್ಟದಲ್ಲಿದ್ದಾನೆಂದೂ ಸತ್ತುಹೋದ ಅವನ ತಂದೆ ಅವನಿಗಾಗಿ ಒಂದು ರಹಸ್ಯ ಸ್ಥಳದಲ್ಲಿ ನಿಧಿಯನ್ನು ಅಡಗಿಸಿಟ್ಟಿದ್ದಾನೆಂದೂ ಅದನ್ನು ತರಲು ತಾನು ಕೊಡುವ ಹಿಂದಿನ ರಾಜನ ಮುದ್ರೆಯುಂಗುರವನ್ನು ಉಪಯೋಗಿಸಬೇಕೆಂದೂ ಹೇಳಿದಾಗ ಅಲ್ಲಿಯೂ ಜಯಕೀರ್ತಿ ಗೆಳೆಯನನ್ನು ವಂಚಿಸಿ ಆ ನಿಧಿಯ ಒಡೆಯನಾಗಲು ಹೆಣಗುತ್ತಾನೆ. ಕೊನೆಗೆ ತನ್ನ ಎಲ್ಲಾ ದುಷ್ಟ ಸಂಚುಗಳನ್ನು ಸಾಧಿಸುವಲ್ಲೂ ವಿಫಲನಾದಾಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅನಂತರ ಅವನು ವಿಧಿಯ ಆಟವೋ ಎಂಬಂತೆ ತನ್ನೆಲ್ಲ ಆಸ್ತಿ-ವೈಭೋಗಗಳನ್ನು ಕಳೆದುಕೊಂಡು ಬಡತನದ ಬದುಕಿಗೆ ಇಳಿಯುತ್ತಾನೆ. 

ಜಯಕೀರ್ತಿಗೆ ತದ್ವಿರುದ್ಧವಾದ ಸ್ವಭಾವ ಮದನನದ್ದು. ಎಲ್ಲ ರೀತಿಯ ಮೋಹಗಳಿಂದ ದೂರ ನಿಂತವನು ಅವನು. ತಾನು ರಾಜಕುಮಾರ ಸುಧನ್ವನೆಂದು ಗೊತ್ತಾದ ನಂತರವೂ ಅವನಲ್ಲಿ ಅಹಂಕಾರ-ದರ್ಪಗಳು ಮನೆ ಮಾಡುವುದಿಲ್ಲ. ಜಯಕೀರ್ತಿಯು ತನಗೆ ಎಷ್ಟೇ ಮೋಸ ಮಾಡಿದರೂ ಅವನು ಪುನಃ ಹತ್ತಿರ ಬಂದಾಗ ಕ್ಷಮಿಸಿದ ಉದಾರಿ ಅವನು. ಕೆಲಸದಾಳುಗಳ ಮೇಲೆ ಅಪಾರ ಪ್ರೀತಿ-ಕರುಣೆಗಳನ್ನಿಟ್ಟುಕೊಂಡವನು. ತನಗೆ ಅತ್ಯಂತ ಸರಳ ಬದುಕು ಸಾಕೆಂದು  ತನ್ನ ಕೈಸೇರಿದ ನಿಧಿಯೆಲ್ಲವನ್ನೂ ಸಮಾಜ ಕಲ್ಯಾಣಕ್ಕಾಗಿ ಸದ್ವಿನಿಯೋಗ ಮಾಡಿದವನು. ಆದ್ದರಿಂದ ಅವನು ಸುಖಿಯಾಗಿಯೇ ಇರುತ್ತಾನೆ.

ಇದು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಬಹುಚರ್ಚಿತವಾದ ಮಾಯೆಯಲ್ಲ ಬದಲಾಗಿ ಅಲ್ಲಮನ ವಚನದಲ್ಲಿ ಉಲ್ಲೇಖಿತವಾದ ‘ಮನದ ಮುಂದಣ ಆಸೆಯೇ ಮಾಯೆ’ಎಂಬ ಸಾಲಿನಿಂದ ಪ್ರೇರಿತವಾದ ಕಾದಂಬರಿ ಎಂದು ಆಶಾ ಅವರು ತಮ್ಮ ಮೊದಲ ಮಾತುಗಳಲ್ಲಿ ಹೇಳುತ್ತಾರೆ. ಆದರೆ ಅಲ್ಲಮನ ಈ ಮಾತುಗಳಾಗಲಿ, ಬುದ್ಧನ ‘ಆಸೆಯೇ ದುಃಖದ ಮೂಲ’ವಾಗಲಿ ಎಲ್ಲಕ್ಕೂ ಮೂಲ ಉಪನಿಷತ್ತುಗಳೇ ಆಗಿವೆ ಎಂಬುದನ್ನು ಮರೆಯಲಾಗದು.

ಕಥೆಯ ನಿರೂಪಣೆಗೆ ಆಶಾ ಅವರು ಪದೇ ಪದೇ ಕಾಣಿಸಿಕೊಳ್ಳುವ ಹಿಂಬೆಳಕಿನ ತಂತ್ರವನ್ನು ಬಳಸಿದ್ದಾರೆ. (ಕೆಲವರು ಈಗಾಗಲೇ ಹೇಳಿದಂತೆ ಇದು ಪ್ರಜ್ಞಾ ಪ್ರವಾಹ ತಂತ್ರವಲ್ಲ. ಯಾಕೆಂದರೆ ಪ್ರಜ್ಞಾಪ್ರವಾಹ ತಂತ್ರದಲ್ಲಿ ನಿರೂಪಕನ ಆಲೋಚನೆಗಳು ಮನಸ್ಸಿನ ಒಳಗೆ ಹೇಗೆ ಬದಲಾಗುತ್ತವೋ ಅಂತೆಯೇ ನಿರೂಪಣೆಯಲ್ಲೂ ಹರಿಯುತ್ತವೆ. ‘ಆಲೋಚಿಸುತ್ತಿದ್ದಂತೆ ಅವನಿಗೆ ನೆನಪಾಗ ತೊಡಗಿತು’ಎಂದು ಪ್ರಥಮ ಪುರುಷದ ನಿರೂಪಣೆ ಇರುವುದಿಲ್ಲ.) ಆದ್ದರಿಂದ ಇಲ್ಲಿರುವುದು ಹಿಂಬೆಳಕಿನ ತಂತ್ರ.

ಈ ತಂತ್ರವನ್ನು ಕಥೆಗಾರ್ತಿ ಸಮೃದ್ದವಾಗಿ ಜಯಕೀರ್ತಿ, ಮಂಗಳೆ ಮತ್ತು ಮದನರೆಂಬ ಮುಖ್ಯ ಪಾತ್ರಗಳ ಸಂದರ್ಭದಲ್ಲಿ ಬಳಸಿ ಅವರ ಪಾತ್ರಪೋಷಣೆಗೆ ಅವಕಾಶ ಮಾಡಿಕೊಂಡಿದ್ದಾರೆ. ಇಲ್ಲಿ ಮಂಗಳೆ-ಮದನರ ಪಾತ್ರಗಳು ಅತ್ಯಂತ ಸಮರ್ಥವಾಗಿ ಚಿತ್ರಿತವಾಗಿದ್ದರೂ ಜಯಕೀರ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಂದರ್ಭದಲ್ಲಿ ಉಂಟಾಗುವ ಪರಿವರ್ತನೆಗಳನ್ನು ಇನ್ನಷ್ಟು ಆಳವಾಗಿ ಕಾರಣ ಸಮೇತ ಕೊಟ್ಟಿದ್ದರೆ ಪಾತ್ರವು ಓದುಗನ ಮನಸ್ಸನ್ನು ಕಾಡುವಷ್ಟು ಸಶಕ್ತವಾಗುತ್ತಿತ್ತು ಅನ್ನಿಸುತ್ತದೆ. ನಿರೂಪಣೆಯ ಬಗ್ಗೆ ಹೇಳಬೇಕಾದ ಇನ್ನೊಂದು ವಿಚಾರವೆಂದರೆ ಒಂದೇ ಘಟನೆಯ ಬಗ್ಗೆ ಬೇರೆ ಬೇರೆ ಪಾತ್ರಗಳ ಬಾಯಿಂದ ಪುನರುಚ್ಚರಿಸಲಾದ ಸಂಗತಿಗಳು. ಅದನ್ನು ತಪ್ಪಿಸಬಹುದಿತ್ತೇನೋ?

ಕಥೆಗಾರ್ತಿ ಸೃಷ್ಟಿಸಿದ ಸ್ತ್ರೀಲೋಕಕ್ಕೆ ಇಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ಸ್ತ್ರೀವಾದವು ನಿರೂಪಿಸುವಂತೆ ಇಲ್ಲಿ ಎಲ್ಲ ಸ್ತ್ರೀಯರ ನಡುವೆ ಎದ್ದು ಕಾಣುವ ಸೋದರಿ ಭಾವವಿದೆ. ಸಾಂಪ್ರದಾಯಿಕ ನಂಬಿಕೆಯಂತೆ ‘ಎರಡು ಜಡೆಗಳು ಎಂದೂ ಜತೆಗಿರಲಾರವು’ ಎಂಬ ಹೇಳಿಕೆ ಇಲ್ಲಿ ಸುಳ್ಳಾಗಿದೆ.  ಅಲ್ಲದೆ ಸ್ತ್ರೀಯರ ಬಗ್ಗೆ ಸಂಪ್ರದಾಯವು ಕಟ್ಟಿದ ಪೂರ್ವಗ್ರಹಗಳನ್ನು ಒಡೆಯುವ ಪಾತ್ರಗಳೂ ಇಲ್ಲಿವೆ. ಇಲ್ಲಿನ ಸ್ತ್ರೀಯರಲ್ಲಿ ಕೈಕೇಯಿಯಾಗಲಿ ಮಂಥರೆಯಾಗಲಿ ಗಾಂಧಾರಿಯಾಗಲಿ ಇಲ್ಲ. ಮಂಗಳೆಗೆ ವೈಶಾಲಿಯ ಬಗ್ಗೆ ಕಾಳಜಿಯಿದೆ. ಮಹೇಶ್ವರಿ ವೈಶಾಲಿಗೆ ತನ್ನ ಜಾಣ್ಮೆಯನ್ನುಪಯೋಗಿಸಿ ಸಹಾಯ ಮಾಡುತ್ತಾಳೆ. ಪಾರ್ವತಿ ಸುಗುಣಾದೇವಿಯನ್ನು ತನಗೆ ಅಪಾಯವಿದ್ದರೂ ಲೆಕ್ಕಿಸದೆ ರಕ್ಷಿಸುತ್ತಾಳೆ. ಸನಕವ್ವ ಸೂಳೆಯಾಗಿದ್ದರೂ ಹಣದ ಬಗ್ಗೆ ಮೋಹ ಹೊಂದಿಲ್ಲ ಮಾತ್ರವಲ್ಲದೆ ವಚನಗಳನ್ನು ರಚಿಸುವಂಥ ಬುದ್ಧಿವಂತೆಯಾಗಿದ್ದಾಳೆ.     

ಗತಕಾಲದ ಒಂದು ಲೋಕದ ಬಗ್ಗೆ ಅನೇಕ ಮಾಹಿತಿಗಳನ್ನು ಕಲೆಹಾಕಿ ಇಷ್ಟು ಸುಂದರವಾಗಿ ಕಥೆ ಹೆಣೆಯುವ ನೈಪುಣ್ಯ ಆಶಾ ಅವರ ಪ್ರತಿಭೆ ಹಾಗೂ ಪರಿಶ್ರಮಗಳಿಗೆ ಸಾಕ್ಷಿಯಾಗಿ  ಈ ಹಿಂದಿನ ಕೃತಿಗಳು ಸೇರಿದಂತೆ ಅವರ ಇಡೀ ಸಾಹಿತ್ಯ ಲೋಕ ನಮ್ಮೆದುರು ನಿಲ್ಲುತ್ತದೆ. ಈ ಶೈಲಿಯು ಓದುಗರು ಅವರನ್ನು ‘ಹಿಂಡನಗಲಿದ ಸಲಗದಂತೆ’  ಥಟ್ಟನೆ ಗುರುತಿಸುವಂತೆ ಮಾಡುವ ಅವರ ಅಸ್ಮಿತೆಯೂ ಹೌದು. ಅದಕ್ಕಾಗಿ ಅವರಿಗೆ ಅಭಿನಂದನೆಗಳು.

‍ಲೇಖಕರು Admin

October 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: