ಓದಿ ಜಲ್ಲಿಕಟ್ಟು ಕಥೆ..

“ತವಿಪ್ಪು”

ಕಾರೈಕ್ಕುಡಿ ಸಿಂಗಾರ ವೇಲನ್

ಕನ್ನಡಕ್ಕೆ: ಕಾಳಿಮುತ್ತು ನಲ್ಲತಂಬಿ                

                                             ಪರಿತಾಪ

ಬೆಳಗಿನ ಝಾವದ ಸಮಯ.

ನನ್ನ ಕೊರಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಬೆನ್ನ ಮೇಲಿನ ಡುಬ್ಬ ಮುಟ್ಟಿ ನಮಸ್ಕಾರ ಮಾಡಿ ಹೋದನು.

ವೇಲುಸಾಮಿ.

‘ನೋಡು ತಮ್ಮ …ಜಲ್ಲಿಕಟ್ಟುಗೆ ಗೂಳಿಗಳನ್ನ ಬಿಡಬಾರದೂಂತ ಸರಕಾರ ಆಜ್ಞೆ ಮಾಡಿದೆ…ಎನ್ಮಾಡೋದು…? ಗೂಳಿಗಳಿಗೆ ವಯಸ್ಸಾಗೋಯ್ತು..ನನ್ಕಣ್ಮುಂದೆ ಅವು ಕಣ್ಮುಚ್ಚೋದನ್ನ ನೋಡಲಾರೆ … ಅದಕ್ಕೆ ಈ ನಿರ್ಧಾರ ಮಾಡಿರೋದು, ದುಡ್ಡಿಗಾಸೆಪಟ್ಟು ಮಾಡ್ತಿಲ್ಲ.

ಸಣ್ಣ ಕರುವಾಗಿ ಈ ಭೂಮಿಲಿ ಬಿದ್ದು ಎದ್ದು ನಿಂತಮೇಲೆ ನನ್ನ ತಾಯಿ ತನ್ನ ನಾಲಗೆಯಿಂದ ನೇವರಿಸಿದನಂತರ, ನನ್ನನ್ನು ಮೊದಲು ಸವರಿದ ಮನುಷ್ಯ ವೇಲುಸಾಮಿ. ಈಗ ನನ್ನನ್ನು ಯಾರಿಗೋ ಮಾರಿ ಹೋಗುತ್ತಿದ್ದಾನೆ. ವೇಲುಸಾಮಿ ಮತ್ತು ನನ್ನ ಸಂಬಂಧ ನಮಗೆ  ಮಾತ್ರವೇ ಗೊತ್ತಿರುವಂಥದು. ಈಗ ಅವನು ಆ ದಾರಿಯಲ್ಲಿ ತಿರುಗಿ ಹೋಗುವಾಗ ಆ ಸಂಬಂಧವೂ ಕಡಿದುಹೋಗುತ್ತದೆ.

ಅವನು ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದೆ. ನನ್ನ ಪಕ್ಕ ದಷ್ಟಪುಷ್ಟರಾದ ನಾಲ್ವರು ನಿಂತಿದ್ದರು.  ಕೈಯಲ್ಲಿ ಪೈಂಟ್ ಡಬ್ಬದೊಂದಿಗೆ ನಿಂತಿದ್ದ ಒಬ್ಬ ನನ್ನ ಬೆನ್ನ ಮೇಲೆ ಒಂದು ಇಂಟು ಗುರುತು ಹಾಕಿ ಹೋದ. ಅವನ ಕೈಗಳಲ್ಲಿ ದಪ್ಪವಾದ ಉದ್ದನೆಯ ಎರಡು ಬಿದುರಿನ ಕೋಲುಗಳು ಇದ್ದವು.  ಮುಂಗಾಲುಗಳ ಸಂಧಿಯಲ್ಲಿ ಒಂದು ಕೋಲನ್ನು ತೂರಿಸಿ ಇಬ್ಬರು, ಹಿಂಬದಿಯ ಕಾಲುಗಳ ಸಂಧಿಯಲ್ಲಿ ಮತ್ತೊಂದು ಕೋಲನ್ನು ತೂರಿಸಿ ಮತ್ತಿಬ್ಬರು ಹಿಡಿದುಕೊಂಡರು.

“ಇಮ್ಮ್…” ಅಂತ ಒಂದು ಶಬ್ದದೊಂದಿಗೆ ನಾಲ್ಕೂ ಜನ ನನ್ನನ್ನು ಎತ್ತಿದರು, ಕಿಬ್ಬೊಟ್ಟೆಯ ನೋವೋಂದಿಗೆ ಅಂತರದಲ್ಲಿ ಹಾರಡುವಂತೆ ಬಾಸವಾಯಿತು ನನಗೆ.  “ಮ್ಮಾ ..” ಎಂಬ ನನ್ನ ಕೂಗು ಯಾರ ಕಣ್ಣ ತೆರೆಸಿ ಎಚ್ಚರಗೊಳಿಸುವುದೋ ನಾನರಿಯೇ? .

“ಟಕ್..”  ಎಂಬ ಶಬ್ಧದೊಂದಿಗೆ ನನ್ನನ್ನು ಕೆಳಗಿಳಿಸಿದರು. ಭೂಮಿಯಿಂದ ಸ್ವಲ್ಪ ಮೇಲೆ ನಿಂತಿರುವಂತೆ ಭಾಸವಾಯಿತು.

ಅದು ಲಾರಿಯ ಒಳಭಾಗವಾಗಿತ್ತು.

ಈಗ ನನ್ನ ಕಾಲಸಂಧಿನಿಂದ ಕೋಲುಗಳನ್ನು ಎಳೆದು ತೆಗದು ಬಿಟ್ಟರು. ನನ್ನ ಮೂಗುದಾರವನ್ನ ಒಬ್ಬ ಎಳೆಯಲು ನಾನು ಸ್ವಲ್ಪ ಜರುಗಿದೆ.

ನನ್ನ ಮುಂದೆ ಸಾಲಾಗಿ ನಿಂತಿದ್ದ ನನ್ನಂತಹವರ ಮಧ್ಯೆ ನನ್ನನ್ನೂ ನಿಲ್ಲಿಸಿ ಕಟ್ಟಿಹಾಕಿದರು.

ಆ ಲಾರಿಯ ತುಂಬಾ ನನ್ನದೇ ಜಾತಿಯವರು ಮತ್ತು ಭಿನ್ನ ಜಾತಿಯವರು.  ನನ್ನನ್ನು  ಕೊನೆಯ ಸಾಲಿನಲ್ಲಿ ಕೊನೆಯವನಾಗಿ ನಿಲ್ಲಿಸಿ ಕಾಲುಗಳು ಅಲುಗಾಡದಂತೆ ಕಟ್ಟಿಹಾಕಿದ್ದರು.  ಒಂದು ಜಾತಿಯ ಗುಂಪಿನಲ್ಲಿ ಮತ್ತೊಂದು ಜಾತಿ ಬೆರೆತು ಬಿಡದಂತೆ ವಿಂಗಡಿಸಿದ್ದರು.

ಕೊನೆಯದಾಗಿ ಇದೂ ಸಹ ನಡೆಯಿತು. “ಮ್ಮಾ..” ಅಂತ  ಕೂಗಲು ಮಾತ್ರವೇ ಸಾಧ್ಯವಾದ  ನನ್ನ ಬಾಯಿಯನ್ನೂ ಸಹ ಈಗ ಹಗ್ಗದಿಂದ ಬಿಗಿದು ಬಿಟ್ಟರು.

ಈಗ ಲಾರಿಯ ಹಿಂಬದಿಯ ಕದ ಮುಚ್ಚಲ್ಪಟ್ಟಿತು.. ನನ್ನ ಕೊರಳ ಭಾಗ ಆ ಕದದ ಮೇಲ್ಭಾಗದ ಮೇಲೆ ಜೋತುಬಿದ್ದಿತ್ತು.

ಲಾರಿ ಹೊರಟಿತು.

ಎಲ್ಲಿ ಹೋಗುತ್ತಿದ್ದೇವೆ?.. ಏತಕ್ಕಾಗಿ ಹೋಗುತ್ತಿದ್ದೇವೆ?… ಒಂದೂ ನನಗೆ ಗೊತ್ತಾಗಲಿಲ್ಲ. ಆ ಲಾರಿಯ ಒಳಗೆ  ನನ್ನ ಗುಂಪಿಗೆ ಸೇರಿದವರು  ತುಂಬಾ ಇರುವಂತೆ ಕಂಡಿತು. ಉರಿ ಬಿಸಿಲಲ್ಲಿ ಪಯಣ ಶುರುವಾದಗ ಬೀಸಿದ ತಂಗಾಳಿಯಿಂದ ಸ್ವಲ್ಪ ಹಿತವೆನಿಸಿತು.

ಏನು ಮನುಷ್ಯರಪ್ಪ ಇವರು? ಉಪಯೋಗಕ್ಕೆ ಬರುವಷ್ಟು ಕಾಲ ತಲೆಮೇಲಿಟ್ಟುಕೊಂಡು ಮೆರೆಸ್ತಾರೆ.  ಉಪಯೋಗಕ್ಕೆ ಬಾರದ ಸ್ಥಿತಿ ತಲ್ಪಿದಾಗ ಲಾಭ-ನಷ್ಟ ಲೆಕ್ಕ ಹಾಕಿ ದುಡ್ಡು ಮಾಡ್ಕೋಳ್ತಾರೆ.

ವೇಲುಸಾಮಿ ಮನೆಯಲ್ಲಿ ನಾನು ಮುದ್ದಿನ ಗೂಳಿಯಾಗಿ ಬೆಳಸಲ್ಪಟ್ಟವನು.  ಕುಟುಂಬದ ಎಲ್ಲರೂ ನನ್ನನ್ನು ಕೊಂಡಾಡೋರು..

ಎರಡು ದಿನಕ್ಕೊಂದು ಸಲ ನನ್ನನ್ನು ಕಾಲುವೆ ಬಳಿ ಒಯ್ದು ಮೊಳಕಾಲು ಉದ್ದ ನೀರಲ್ಲಿ ನಿಲ್ಲಿಸಿ, ಒಣಹುಲ್ಲನ್ನು ನೀರನಲ್ಲಿ ಅದ್ದಿ ಮೈಕೈಕಾಲೆಲ್ಲಾ ತಿಕ್ಕಿ ಸ್ನಾನ ಮಾಡಿಸೋರು. ಹಣೆಯಿಂದ ಶುರುಮಾಡಿ ಬಾಲದವರೆಗೆ ಬೊಟ್ಟಿಡೋರು.ನನ್ನನ್ನು ಸ್ನಾನ ಮಾಡಿಸಿದ ಅದೇ ಕಾಲುವೇನಲ್ಲಿ ಅವರೂ ಸ್ನಾನ ಮಾಡೋರು. ಒದ್ದೆ ಪಂಚೆಯಲ್ಲೇ ನನ್ನ ಹಗ್ಗ ಹಿಡಿಕೊಂಡು ಗಂಭೀರವಾಗಿ  ನಡೆದು ಬರೋರು. ಅದು ಅವರಿಗೆ ಬಹಳ ಗರ್ವದ ಸಂಗತಿಯಾಗಿತ್ತು. .

ಮನೇನಲ್ಲಿ ನಂಗೆ ಯಾವ ಕೆಲಸವೂ ಇರ್ತಿರಲಿಲ್ಲ.  ಬೆಳಗ್ಗೆ ಹತ್ತಿಬೀಜದ ಹಿಂಡಿಗೆ ನೀರು ಬೆರಸಿ ಕರಗಿಸಿ ಕೊಡೋರು. ಮಧ್ಯಾನಾನೂ ಅದೇ ತರ. ಮಧ್ಯೆಮಧ್ಯೆ ಒಮ್ಮೊಮ್ಮೆ ಮೇವಿಗೆ ಕರ್ಕೋಂಡು ಹೋಗೋರು. ಆದರೆ ಸ್ವತಂತ್ರವಾಗಿ ಮೇಯೋಕೆ ಬಿಡ್ತಿರಲಿಲ್ಲ. ನನ್ನ ಸ್ವಾತಂತ್ರ ಏನಿದ್ದರೂ ನನ್ನ ಕುತ್ತಿಗೇಗೆ ಕಟ್ಟಿರೋ ಹಗ್ಗದಷ್ಟೇ ಉದ್ದವಾಗಿರುತ್ತಿತ್ತು.

ಸಂಜೆ ಹೊತ್ತು ವೇಲುಸಾಮಿ ಹೆಂಡತಿ ತೋಟದಿಂದ  ಹಸಿ ಹುಲ್ಲು ತಂದು ಕೊಟ್ಟು ನಾನು ಮೆಲುಕು ಹಾಕ್ಕೋಂಡು ಇರೋದನ್ನು ನೋಡ್ತಾ ನನ್ನ ನೇವರ್ಸ್ತಾ ನಿಂತಿರೋಳು.

ಯಾವಗ್ಲಾದರೂ ಜನ ತುಂಬಿರೋ ಊರಿನ ಮಧ್ಯೆ ಕರೆಕೊಂಡು ಹೋಗೋರು. ಅಲ್ಲಿ ಒಂದು ಕಡೆ ನನ್ನ ಹಗ್ಗ ಬಿಚ್ಚಿ ಬಿಡೋರು.

ನಾನು ದಮ್ ಹಿಡಿದು ಓಡ್ತಾ ಇರೋವೇ. ಯಾವ ದಿಕ್ಕಿನಲ್ಲಿ ಎಲ್ಲಿಗೆ ಹೋಗ್ತಾಯಿದ್ದೀನೀಂತ ಕೂಡ ತಿಳಿದೇನೆ ಓಡ್ತಾ ಇರೋವೇ. ಆದರೆ ಯಾರೂ ನನ್ನನ್ನು ಮುಟ್ಟೋಕ್ಕೆ ಬಿಡ್ತಿರಲಿಲ್ಲ.

ಬಂದ ದಾರಿ ಗೊತ್ತಿಲ್ಲದೆ ಯಾವುದಾದರೂ ಕಾಡೊಳಗೆ ಅಥವಾ ಊರೊಳಗೆ ಕಳೆದು ಹೋಗೋವೆ. ಆಗ ವೇಲುಸಾಮಿ ಅಣ್ಣ ನನ್ನನ್ನು ಹುಡಿಕಿಕೊಂಡು ಬಂದು ಮನೆಗೆ ಕರ್ಕೋಂಡು ಹೋಗ್ತಿದ್ದಾ.

ಕೆಲವು ವರ್ಷಗಳು ಹೀಗೆಯೇ ಮುಂದುವರೆಯಿತು. ನನ್ನ ಬೆಳೆದ ಕೊಂಬುಗಳನ್ನ ಒಡೆದ ಗಾಜಿನ ಚೂರಿನಿಂದ ಹೆರೆಯುತ್ತಿದ್ದರು. ಕೊಂಬು ಚೂಪಾಗಿ ಇದೆಯೇ ಎಂದು ಮುಟ್ಟಿ ನೋಡುತ್ತಿದ್ದರು.  ನಂತರ ನನ್ನ ಕೊಂಬಿಗೆ ಎಣ್ಣೆ ಹಚ್ಚುತ್ತಿದ್ದರು. ನನ್ನ ದೇಹ ಪೂರ್ತಿ ಎಣ್ಣೆ ಹಚ್ಚಿ ಮಾಲೀಷ್ ಮಾಡ್ತಿದ್ದರು. ಕತ್ತಿಗೆ ಮಣಿ ಕಟ್ಟುತ್ತಿದ್ದರು. ಕಲರ್ ಕಲರ್ ಟವಲ್ , ನಂತರ ಹಣೆಗೆ ಬೆಳ್ಳಿ ಕಾಸುಗಳ ತರದ ಮಣಿಗಳನ್ನು ಕಟ್ಟುತ್ತಿದ್ದರು.

ಮತ್ತೆ ಜನ ತುಂಬಿದ ಬಯಲಲ್ಲಿ ನನ್ನನ್ನು ಓಡೋಕ್ಕೆ ಬಿಡೋರು.  ಜನ ಅಟ್ಟಿಸಿಕೊಂಡು ಬರುತ್ತಿದ್ದರು. ಕೆಲವರು ನನ್ನ ಬಾಲ ಹಿಡಿದು ನೇತಾಡಿಕೊಂಡು ಬರೋರು. ಇನ್ನು ಕೆಲವರು ಬೆನ್ನ ಮೇಲಿನ ಡುಬ್ಬ ಹಿಡಿದು ನೇತುಹಾಕಿಕೊಂಡು ಓಡಿ ಬರೋರು. ಅವರನ್ನೆಲ್ಲ ಒಂದೇ ಉಸಿರಲ್ಲಿ ನೂಕಿ ನನ್ನ ಕೊಂಬಿಂದ ತಿವಿದು ತಳ್ಳಾಕುತ್ತಿದ್ದೆ.

ಹಲವು ಸಮಯ ನನ್ನ ಯಾರೂ ಮುಟ್ಟದ ಹಾಗೆ ಗರಗರ ತಿರುಗುತ್ತ ಜನಗಳನ್ನು ಓಡಿಸ್ತಾ ಇದ್ದೇ. ಹಾಗೆಲ್ಲಾ ಮಾಡಿ ಮುಗಿಸಿ ಮನೆಗೆ ಹಿಂತಿರುಗಿದಾಗ ಆರತಿ ಎತ್ತಿ ಬರಮಾಡಿಕೊಳ್ಳೋರು. ಸ್ವಲ್ಪ ಭರ್ಜರಿಯಾಗೇ ತಿನ್ನಿಸಿ ನೋಡ್ಕೋಳ್ತಾ ಇದ್ರು.

ನನ್ನ ಹತ್ತಿರ ಯಾರೂ ಅಷ್ಟು ಸುಲಭವಾಗಿ ಬರಲಾಗುತ್ತಿರಲಿಲ್ಲ. ತಲೆಯನ್ನು ಕೆಳಗೆ ಮಾಡಿ ಗುಟರಾಯಿಸ್ತಿದ್ದೆ , ನನ್ನ ಹತ್ತಿರ ಬರೋರು ಹೆದರಿ ಓಡಿಹೋಗೋರು. ವೇಲುಸಾಮಿ ಅಣ್ಣ ಅಥವಾ ಅವನ ಹೆಂಡತಿ ಬಂದರೆ ಮಾತ್ರ ಶಾಂತವಾಗಿರ್ತಿದ್ದೆ. ನನಗೆ ಹಿಂಡಿ, ಹೊಟ್ಟು, ನೀರು ಇಡೋದರಿಂದ ಹಿಡಿದು ಎಲ್ಲ ಕೆಲಸವನ್ನು ಅವರೇ ಮಾಡೋರು. ಅವರೇ ನನ್ನ ಲೋಕವಾಗಿದ್ದರು. ಅವರಿಗೆ ನಾನು ಹಾಗೆಯೇ ಇದ್ದೆ.

ಮನೆಯಲ್ಲಿ ನನ್ನಂತವರು ಬಹಳ ಮಂದಿ ಇರೋರು. ಎಲ್ರನ್ನೂ ಒಂದು  ಛಾವಣಿ ಇರೋ ಒಂದು ಕೊಟ್ಟಿಗೆಯೊಳಗೆ ಕಟ್ಟಾಕೋರು. ನನ್ನನ್ ಮಾತ್ರ ಒಂಟಿಯಾಗಿ ಮನೆ ಹೊಸಿಲಿನಲ್ಲೇ ಕಟ್ಟಾಕಿರೋರು.

ಕಾಡಿಗೆ ಕರ್ಕೋಂಡು ಹೋಗೋಕ್ ಮುಂಚೆ ಬಿಳಿಕೋಟು ಹಾಕ್ಕೊಂಡೋರು ಬಂದು ನನ್ನ ಪರೀಕ್ಷೆ ಮಾಡಿ ಹೋಗೋರು. ಮೊದಲು ನನ್ನನ್ನು ಬಯಲಲ್ಲಿ ಅಟ್ಟಿಸಿಕೊಂಡು ಬರ್ತಿದ್ದರು ಯಾರು ಅಂತ ತಿಳೀತಿರಲಿಲ್ಲ. ಈಗ ಎಲ್ಲರೂ ಒಂದೇ ಬಣ್ಣದ ಬಟ್ಟೆ ಹಾಕ್ಕೊಂಡು ಅಟ್ಟಿಸಿಕೊಂಡು ಬಂದು ನನ್ನ ಹಿಡಿಯೋಕೆ ಪ್ರಯತ್ನಿಸ್ತಾರೆ.

ಈಗ ಸ್ವಲ್ಪ ವರ್ಷಗಳಿಂದ ನನ್ನನ್ನು ಮನೆ ಬಿಟ್ಟು ಎಲ್ಲೂ ಹೊರಗೆ ಕರ್ಕೋಂಡು ಹೋಗಲ್ಲ. ನನ್ನನ್ನು ಈಗ ನನ್ನದೇ ಜಾತಿಯ  ಮಿಕ್ಕವರೊಂದಿಗೆ  ಛಾವಣಿಯ ಕೊಟ್ಟಿಗೆಯಲ್ಲೇ ಕಟ್ಟಿ ಹಾಕ್ತಾರೆ.

ಕಾಲಚಕ್ರದ ತಿರುವಲ್ಲಿ ನಾನು ಈಗ ಬಲಹೀನವಾಗಿ, ಕ್ಷೀಣವಾಗಿದ್ದೇನೆ. ಈಗ ನನ್ನನ್ನು ಬಿಚ್ಚಿಬಿಟ್ಟರೆ ಮೊದಲಂತೆ  ಓಡೋಕ್ಕೆ ಆಗೋಲ್ಲ.  ನನ್ನ ಕೊಂಬುಗಳಿಂದ ತಿವಿದು ಜನಗಳನ್ನ ಅಟ್ಟಿಸೋಕ್ಕೆ ಆಗೋಲ್ಲ.

ಇಂದು ಎಲ್ಲರೊಂದಿಗೆ ನನ್ನನ್ನೂ ಕಟ್ಟಿ ಎತ್ತಿಹಾಕಿಕೊಂಡು ಹೊಗ್ತಿದ್ದಾರೆ.

ನನ್ನ  ದಪ್ಪವಾದ ನುಣುಪಾದ ರೇಷ್ಮೆ ಹಗ್ಗಕ್ಕೆ ಪಳಗಿಹೋಗಿತ್ತು. ಈ‌ಗ ಒರಟಾದ ಮುಳ್ಳಿನಂತೆ ಚುಚ್ಚೋ ಹಗ್ಗ ನನ್ನ ಕತ್ತನ್ನ ಬಿಗಿದಿದೇ. ಲಾರಿ ಈಕಡೆಯಿಂದ ಆಕಡೆಗೆ , ಆಕಡೆಯಿಂದ ಈಕಡೆಗೆ ಓಲಾಡುವಾಗ ನನ್ನ ದೇಹ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಬಹಳವೇ ನೋಯ್ತಿದೆ.

ಆ ಮೈಮೈನ ತಿಕ್ಕಾಟದಲ್ಲಿ ಬಿಳಿ ತೊಗಲು ಉಜ್ಜಿ ಕೆಂಪಾಗಿ ಕಾಣಿಸ್ತಿದೆ. ನನಗೆ ಮಾತ್ರವಲ್ಲ ನನ್ನೊಂದಿಗಿರುವ ನನ್ನ ಜಾತಿಯವರಿಗೆಲ್ಲ ಸಹ.  ನನ್ನೊಂದಿಗೆ ಕಟ್ಟಿಹಾಕಿರೋ ಮಿಕ್ಕವರನ್ನ ತಿರುಗಿನೋಡಲು ಯತ್ನಿಸುತ್ತೇನೆ. ತಿರುಗಿದರೆ ಕತ್ತು ನೋಯಿವಷ್ಟು ಬಿಗಿಯಾಗಿ ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

ಹಿತವಾಗಿದ್ದ ಬಿಸಿಲು ಈಗ ನೆತ್ತಿ ಬಿಸಿಯಾಗೊಷ್ಟು ಸುಡ್ತಾಯಿದೆ. ನಾಲಿಗೆ ಒಣಗಿಹೋಗಿದೆ.ನೀರಿಗಾಗಿ ಹಾತೊರೆಯುತ್ತಿದ್ದೇನೆ. ಲಾರಿ ಹೋಗೋ ದಾರಿಲೆಲ್ಲಾ ನೀರು ತುಂಬಿದ ಕಾಲುವೆಗಳು, ಸಣ್ಣ ಕೆರೆಗಳು ಕಾಣಿಸ್ತಿವೆ. ಓಡಿಹೋಗಿ ಕುಡುಯುವ ತವಕವಾಗುತ್ತಿದೆ.  ಆದರೆ ಕಾಲೆರಡೂ ಕಟ್ಟಲ್ಪಟ್ಟಿದೆ, ಅಲುಗಾಡಿಸಲಿಕ್ಕೂ ಸಾಧ್ಯವಾಗುತ್ತಿಲ್ಲ.

ವೇಗವಾಗಿ ಚಲಿಸುತ್ತಿದ್ದ ಲಾರಿ ರಸ್ತೆ ಬದಿಯಲ್ಲಿ ನಿಲ್ಲಿಸಲ್ಪಡುತ್ತೆ. ಇಬ್ಬರು ಇಳಿದು ಹಿಂಬಾಗಿಲ ಬಳಿ ಬಂದು ನೋಡುತ್ತಾರೆ. ಒಬ್ಬ ಮಾತ್ರ ಬಾಗಿಲ ಹಿಡಿಡು ಹತ್ತಿ ಮೇಲೆ ನೋಡ್ತಾನೆ.

ನನ್ನ ಕತ್ತಿನ ಮೇಲೆ  ಕೈಹಾಕಿ ಹಗ್ಗಾನ ಜಗ್ಗಿ ಎಳೆದು ನೋಡ್ತಾನೆ. ಅಬ್ಬಾ! ಹಗ್ಗ ಬಿಚ್ತಾನೆನೋಂತಾ; ಅಂದುಕೊಳ್ಳೋದರೊಳಗೆ ……………

“ ಅಣ್ಣಾ …ಹಗ್ಗ ಎಲ್ಲ ಬಿಗಿಯಾಗೇ ಇದೆ ಏನೂ ಬಿಚ್ಕೋಂಡಿಲ್ಲಾ…”  ಅಂತ ಹೇಳಿ ಇಳಿದುಬಿಡುತ್ತಾನೆ..

ಹತ್ತಿರ ಇದ್ದ ಸಣ್ಣ ರಸ್ತೆ ಬದಿಯ ಹೋಟೆಲಿಗೆ ಹೋಗಿ ಊಟ ಮಾಡ್ತಾರೆ. ಹೊರಗೆ ಬಂದು ಬೀಡಿ ಸೇದ್ತಾರೆ. ಮತ್ತೆ ಲಾರಿಯ ಹಿಂಬಾಗಕ್ಕೆ ಬಂದು ನಮ್ಮನ್ನೆಲ್ಲಾ ಇನ್ನೊಂದು ಸಾರಿ ಪರೀಕ್ಷಿಸಿ ಮತ್ತೆ ಲಾರಿ ಹತ್ತಿ ಹೊರಡ್ತಾರೆ.

ಮತ್ತೆ ಲಾರಿಯ ಅಲುಗಾಟ. ಮೈಮೈ ತಿಕ್ಕಾಟ…. ರಣ ವೇದನೆಯೊಂದಿಗೆ ನನ್ನ ಪಯಣ ಮುಂದುವರೆಯುತ್ತೆ.

ಒಂದು ಮಾತ್ರ ನನಗೆ ಚೆನ್ನಾಗಿ ಅರ್ಥವಾಗ್ತಾ ಇದೆ. ನನ್ನನ್ನ ಕೆಲ್ಸ ಮಡ್ಸೋಕ್ಕೆಂತಾ ಮಾತ್ರ ಕರ್ಕೋಂಡೋಗ್ತಿಲ್ಲ. ಕೆಲ್ಸ ತೆಗೆಸ ಬೇಕೇಂದ್ರೆ ನನ್ನ ದೇಹ ಬಲಿಷ್ಟವಾಗಿರಬೇಕಲ್ಲಾ? ಅದಕ್ಕಾಗಿಯಾದರೂ ಸ್ವಲ್ಪ ಆಹಾರ ನೀರು.. ಕೊಡ್ತಾಯಿದ್ರಲ್ಲವೇ? ಏನೂ ಕೊಡದೇ ಕರ್ಕೋಂಡೋಗ್ತಿದ್ದಾರೆ. ಆಂದ್ರೆ…..

ಜಲ್ಲಿಕಟ್ಟುಗೆ ಕರೆದುಕೊಂಡು ಹೋಗೋವಾಗ ಸ್ವಲ್ಪ ಎಡವಿದರೂ ನಾಲ್ಕೈದು ಜನ ಬಂದು ನನ್ನ ಜೋಪಾನವಾಗಿ ಹಿಡಿದುಕೊಳ್ತಿದ್ದರು. ನನ್ನ ಬೆನ್ನನ್ನ ಮೆಲ್ಲಗೆ ಪ್ರೀತಿಯಿಂದ ತಟ್ಟಿ ನನ್ನ ಸಾಂತ್ವನಗೊಳಿಸ್ತಿದ್ದರು. ಆದರೆ ಈಗ ಹಾಗಿಲ್ಲಾ…

ಬೆಳಗ್ಗೆಯಿಂದ ಪ್ರಯಣ ಮಾಡ್ತಾ ಇರೋ ನನಗೆ, ಈಗ ಬಿಸಿಲು ಸ್ವಲ್ಪ ತಗ್ಗಿ ಸಂಜೆ ಸಮೀಪಿಸ್ತಾ ಇರೋದು ಸ್ವಲ್ಪ ಹಿತವಾಗಿದೆ. ತುಂಬಾ ದೂರ ಬಿಸಿಲಲ್ಲೇ ಪಯಣಿಸ್ತಿದ್ದ ನನಗೆ ಮೈಯ ನೀರೆಲ್ಲ ಬತ್ತೋಗಿ, ಬಾಯಲ್ಲಿ ನೊರೆ ಉಕ್ಕಿ ಸುಸ್ತಾಗ್ತಾಯಿದೆ. ಕಣ್ಣು ತೆರೆದು ನೋಡೋಣಾಂದ್ರೆ ರೆಪ್ಪೆ ಕೂಡ ತೆರೆಯೋಕ್ಕೆ ಆಗ್ತಿಲ್ಲಾ. ಅದನ್ನೂ ಮೀರಿ ನೋಡೋಕ್ಕೆ ಪ್ರಯತ್ನಿಸ್ತೀನಿ. ಆಗ್ತಾಯಿಲ್ಲ.

ಇನ್ನು ನನಗೆ ಯಾವ ಬದುಕೂ ಇಲ್ಲಾಂತ ಅಂದುಕೊಳ್ತೀನಿ. ಇನ್ನು ನನಗೆ ಯಾವ ಬೆಲೆಯೂ ಇಲ್ಲಾಂತ ಗೊತ್ತಾಯಿತು. ಇದ್ದಿದ್ದರೆ ಸ್ವಲ್ಪ ನೀರಾದರೂ ಕೊಡ್ತಾಯಿದ್ರಲ್ಲವೇ?

ಕತ್ತಲಾಗೊಕ್ಕೆ ಆಯ್ತು. ಇನ್ನು ಎಷ್ಟೊತ್ತು ಹೀಗೆನೇ…? ಗೊತ್ತಿಲ್ಲ.  ಲಾರಿ ಎತ್ತರವಾದ ಜಾಗದಲ್ಲಿ ಏರುತ್ತಾ ಇರೋದು ಗೊತ್ತಾಗ್ತಾಯಿದೆ. ರಾತ್ರಿಹೊತ್ತು ಗಾಡಿ ಓಡಿಸೋರು ಸಣ್ಣ  ಅಂಗಡಿಗಳು ಕಂಡಲ್ಲೆಲ್ಲಾ ನಿಲ್ಲಿಸಿ ದಣಿವಾರಿಸಿಕೊಳ್ಳಲು ಟೀ ಕುಡಿತಾರೆ.

ನಮ್ಮನ್ನು ಕರೆದುಕೊಂಡು ಹೋಗೋ ದಣಿವು ಅವರಿಗೆ…. ನನಗೋ ಮೈಯ ನೀರೆಲ್ಲ ಬತ್ತಿಹೋಗಿ ನಾಲಿಗೆ ಹೊರಗೆ ಜೋತುಬೀಳುವಂತಾಗಿದೆ.. ಕಣ್ಣುಗಳು ಮುಚ್ಚೋಕ್ಕೆ  ಶುರುವಾಯ್ತು ನಿದ್ದೆಯಿಂದಲ್ಲ…. ಮೂರ್ಛೆಯಿಂದ.

ಎಚ್ಚರವಾದಾಗ ಬೆಳಗಾಗಿತ್ತು. ಬಹಳ ದೊಡ್ಡ ಬಯಲಲ್ಲಿ ನನ್ನ ತರದವರೆ ತುಂಬಾ ಮಂದಿ ನಿಲ್ಲಿಸಲ್ಪಟ್ಟಿದ್ದರು. ನನ್ನನ್ನು ಕಟ್ಟಿಹಾಕಿದ್ದ ಲಾರಿಯ ಹಿಂಬಾಗಿಲು ತೆರೆಯಲ್ಪಡ್ತು. ನನ್ನ ಕತ್ತಿಗೆ ಒತ್ತಾಗಿದ್ದ ಆ ಬಾಗಿಲು ಸರಿದದ್ದರಿಂದ ನನ್ನ ತಲೆ ಕೆಳಗೆ ಇಳಿಯಿತು.

ಬಿರಬಿರನೆ ಕೆಲವರು ಲಾರಿಯೊಳಗೆ ಹತ್ತಿದ್ರು. ನನ್ನ ಕತ್ತಿನ ಹಗ್ಗಗಳನ್ನು ಬಿಚ್ಚಿದರು.. ಹಿಂದಿನ ತೊಡೆಯಮೇಲೆ ಒಂದು ಸಲ ತಟ್ಟಿ ಓಡಿಸಿದರು.

ಸ್ವಲ್ಪ ಚುರುಕಾಗಿದ್ದ  ನನ್ನ ಕೆಲವು ಗೆಳೆಯರು ಲಾರಿಯಿಂದ ದುಮುಕಿದರು. ನನಗೋ ಕಾಲುಗಳನ್ನ ಅಲ್ಲಾಡಿಸಲಿಕ್ಕೂ ಸಹ ಆಗ್ತಿರ್ಲಿಲ್ಲ.  ಹಿಂದಿಂದ ಇಬ್ಬರು ತಳ್ಳಿದರು, ಮುಂದಿಂದ ಇಬ್ಬರು ಹಿಡಿದು ಎಳೆದುಕೊಂಡರು.  ನಾನು ನೆಲ ಮುಟ್ಟಿದೆ. ಮುಂದಿನ  ಕಾಲುಗಳೇನೊ ನೆಲ ಊರಿತು. ಹಿಂದಿನ ಕಾಲುಗಳಲ್ಲಿ ಬಲವಿಲ್ಲದೆ ಹಾಗೆ ಕುಸುದುಬಿಟ್ಟೆ. ನನ್ನಿಂದ ಏಳಲು ಆಗಲಿಲ್ಲ.

ಕಣ್ಣುಗಳು ನೀರನ್ನೂ ಒಂದು ಹಿಡಿ ಆಹಾರವನ್ನೂ ಹುಡುಕುತ್ತಾ ಇದ್ದವು. ಮುಂದಿನ ಕಾಲುಗಳು ಸಹ ಮಡಿಚಿಹೋಗಿ ತಲೆ ಎತ್ತಲಾಗದೆ ಹಾಗೆ ಮಲಗುತ್ತೇನೆ.

ನನ್ನನ್ನು ನೋಡಿದ ಕೆಲವರು ನನ್ನನು ದಾಟಿಹೋಗ್ತಾರೆ. ಇನ್ನು ಕೆಲವರು ನಿಂತು ನನ್ನನ್ನು ನೋಡ್ತಾರೆ. ಆ ಸಮಯ ಒಬ್ಬ ಓಡಿ ಬಂದು ನನ್ನ ಕೊಂಬುಗಳನ್ನ ಅಲುಗಿಸಿ ನನ್ನನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ. ಕೆಳಗೆ ಬಿದ್ದಿದ್ದ ನನ್ನ ತಲೆಯನ್ನ ಕೈಯಿಂದ ಎತ್ತಿ ನಿಲ್ಲಿಸಲು ಪ್ರಯತ್ನಿಸ್ತಾನೆ. ಅವನ ಎಲ್ಲ ಯತ್ನಗಳು ಸೋತುಹೋಗುತ್ತವೆ.

ಪೈಂಟಿಂದ ನನ್ನ ಬೆನ್ನ ಮೇಲೆ ಇಂಟು ಗುರುತು ಹಾಕಿದ್ದವನು, ಕೆಳಗೆ ಬಿದ್ದ ನನ್ನ ಮುಖವನ್ನು ಎತ್ತಿ ಹಿಡಿದು ನನ್ನನ್ನು ಚೇತರಿಸಲು ಪ್ರಯತ್ನಿನಿಸಿದ ಮತ್ತೊಬ್ಬನೂ ತಮ್ಮ ಕೈಗಳ ಮೇಲೆ ಒಂದು ಟವಲ್ ಹಾಕಿಕೊಂಡು ಕೈಕುಲಿಕಿಕೊಳ್ಳುತ್ತಾರೆ. ನಂತರ ಕೈ ಬಿಡಿಸಿಕೊಂಡು ಅವನು ಇವನಿಗೆ  ಒಂದಿಷ್ಟು ಹಣ ಕೊಡ್ತಾನೆ. .

ಕೆಲವು ನಿಮಿಷದಲ್ಲಿ ಅವನು ನನ್ನನ್ನು ಒಂದು ಸಣ್ಣ ಟೆಂಪೋದಲ್ಲಿ ಹತ್ತಿಸಿಕೊಂಡು ಹೊರಟ. ನನ್ನಂತೆ ಇನ್ನಿಬ್ಬರು ಸಹ ಆ ಟೆಂಪೋದಲ್ಲಿದ್ದರು.

ಬಹಳ ಕಡಿಮೆ ಸಮಯದ ಪ್ರಯಾಣವೇ ಆಗಿತ್ತು. ಟೆಂಪೋ ನಿಲ್ಲಿಸಿ ನಮ್ಮನ್ನು ಇಳಿಸಿದ.. ಎದುರು ನಾನು ನೋಡಿದ ದೃಶ್ಯ  ಅತ್ಯಂತ ಭೀಕರವಾಗಿತ್ತು. ಅದು ನನ್ನ ಅಂತ್ಯವನ್ನು ಸೂಚಿಸುವಂತಿತ್ತು. .

ನನ್ನಂತಹದ್ದೆ ಒಂದು ತಲೆಕೆಳಕಾಗಿ ನೇತಾಡುತ್ತಿತ್ತು. ತಲೆ ಇರಲಿಲ್ಲ, ಕಾಲುಗಳೂ ಇರಲಿಲ್ಲ. ತೊಗಲೂ ಸಹ ಇರಲಿಲ್ಲ. ರಕ್ತಗೆಂಪು ಬಣ್ಣದಲ್ಲಿ ದೇಹಮಾತ್ರ… ಜೋತುಬಿದ್ದಿತ್ತು.

ಇನ್ನು ನನಗೆ ಕರುಣೆ ಎಲ್ಲಿಂದ… ನಾನು ಸಾಯಲು ಹೆದರುತ್ತಿಲ್ಲ.  ನನ್ನ ಬಾಯಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದರೆ ಮ್ಮಾ..ಅಂತ ಒಂದೇ ಒಂದು ಸಲ ಅರಚಲು ಆಸೆ ಪಡುತ್ತೇನೆ ಮತ್ತೆ ಒಂದೇ ಒಂದು ಸಲ ಎದ್ದು ಗಂಭೀರವಾಗಿ ನಿಲ್ಲಲು ಆಸೆಪಡುತ್ತೇನೆ.

ಒಣಗಿ ಹೋದ ನಾಲಿಗೆಯ ತೇವಗೊಳಿಸಲು ಒಂದು ಬೊಗಸೆ ತಣ್ಣೀರಿಗಾಗಿ ತವಕಿಸುತ್ತೇನೆ. ಸಾಯಲು ಸಿಧ್ಧವಾಗಿರುವ ನನಗೆ, ಹೊಟ್ಟೆ ಹಸಿವ ಹಿಂಗಿಸಲು ಯಾರಾದರೂ ಒಂದು ಹಿಡಿ ಹಿಂಡಿಯನ್ನು ನೀರಲ್ಲಿ ಬೆರಸಿ ಕೊಡಬಾರದೇ ಎಂದು ಬಯಸುತ್ತೇನೆ.

ದುಡಿದೇ ಸಾಯುವ ನಾನು ಈಗ ಒಂದಿಷ್ಟು ಬದುಕಿ ಸಾಯಲೂ ಅವಕಾಶವಾಗುವುದೇ ಎಂದು ಚಿಂತಿಸುತ್ತೇನೆ.

“ ಗೂಳಿಯಾಗಿ ಕುಣಿಯುತ್ತಾ ಓಡಾಡುತ್ತಿದ್ದಾಗ ನನ್ನನ್ನು ಕಾಪಾಡಲು ಜಾರಿಗೆ ತಂದ ಈ ಕಾನೂನಿಗೆ ಈಗ ನಾನು ಸಾಯುವಾಗ ಕಾಯಲಾಗದಿದ್ದರೂ , ಕೇವಲ ಕರುಣೆಯನ್ನಾದರೂ ತೋರಿಸುವಷ್ಟರ ಮಟ್ಟಿಗೆ  ತಿದ್ದುಪಡಿ ಮಾಡಬಾರದೇ?……”

“ ನನ್ನಿಂದ ಸಾಧ್ಯವಾಗುವುದು ನಿಮ್ಮಿಂದ ಸಾಧ್ಯವಾಗದು !  ಸತ್ತನಂತರ ನಿಮಗಾಗಿ ಮಾಂಸದ ಆಹಾರವಾಗಲು ನನ್ನಿಂದ ಸಾಧ್ಯ…ನಿಮ್ಮಿಂದ ಆಗುವುದೇ ಮಾನವರೇ….”

ನನ್ನ ಬೆನ್ನ ಮೇಲೆ ತಟ್ಟಿ ಈಗ ಇಬ್ಬರು ನನ್ನನ್ನು ಕೆಳಗೆ ತಳ್ಳಿ ಮಲಗಿಸಿ ನನ್ನ ನಾಲ್ಕೂ ಕಾಲುಗಳನ್ನು ಕೂಡಿಸಿ ಹಗ್ಗದಿಂದ ಬಿಗಿಯುತ್ತಿದ್ದಾರೆ. ಒಬ್ಬ ಮನುಷ್ಯ ತನ್ನ ಎರಡು ಕೈಗಳಿಂದ ನನ್ನ ಕೊಂಬುಗಳ ಹಿಡಿದು ಜಗ್ಗಿ ನನ್ನ ತಲೆಯ ಭಾಗವನ್ನು ತನ್ನ ಎರಡು ಕಾಲುಗಳ ಸಂಧಿಯೊಳಗೆ  ಅದುಮಿ ಹಿಡಿಯುತ್ತಾನೆ. ಭಯ ನನ್ನೊಳಗೆ ಆವರಿಸುತ್ತದೆ. ಏನು ಆಗುತ್ತಿದೆ ಎಂದು ತಿಳಿಯುತ್ತಿಲ್ಲ. ಆಗುವುದು ಏನೆಂದು ತಿಳಿಯದಿರಲು ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತೇನೆ.

‍ಲೇಖಕರು admin

January 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Prof. Krishna Reddy Anban

    Heart wrenching condition of bulls transported for beef and questionable animal protection laws and inhuman treatment of the human beings for money

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: