ಒಮ್ಮೆ, ನಮ್ಮನೇಲಿ…

ಗೂಡು ಮತ್ತು ಎದೆಗೂಡು (ಒಮ್ಮೆ, ನಮ್ಮನೇಲಿ….)

sudha chidananda gowda

ಸುಧಾ ಚಿದಾನಂದಗೌಡ.

 

ಆ ಹಕ್ಕಿಯ ಹೆಸರೇನೋ ಈಗಲೂ ಗೊತ್ತಿಲ್ಲ.

ಒಂದು ವರ್ಷದ ಕೆಳಗೆ ತುಂಬಾ ಟ್ಯಾಂಗಲ್ ಆಗಿರೋ ವೈರುಗಳನ್ನು ರಿಪೇರಿ ಮಾಡಿಸಿಬಿಡೋಣ ಅನ್ಕೊಂಡು, ಒಮ್ಮೆ ಹತ್ತಿರದಿಂದ ಎಳೆಯಲು ಹೋದಾಗ ನೋಡ್ತೀನೀ.. ನಾಲ್ಕೈದು ಹುಲ್ಲುಕಡ್ಡಿಗಳು ಕಲಾತ್ಮಕವಾಗಿ ಆ ವೈರ್ ನಿಂದ ಈ ವೈರ್ ಗೆ, ಈ ವೈರ್ ನಿಂದ ಆ ವೈರ್ ಗೆ ಹೆಣೆದುಕೊಂಡಿವೆ.

ಒಂದುಕ್ಷಣ ಬೆಕ್ಕಸಬೆರಗಾಗಿ ನಿಂತು ನೋಡಿದ್ದೆ. ಗೊತ್ತಾಯಿತು- ಇದು ಯಾವುದೋ ಹಕ್ಕಿಗೂಡಿನ ಬುನಾದಿ ಎಂದು..! ಯಾವಾಗಾಯ್ತು ಇದು..? ಯಾವ ಹಕ್ಕಿ ಇದು ಹೀಗೆ ಹೆಣೆಯುತ್ತಿದೆ? ಎಂದು ಅರ್ಧಗಂಟೆ ತಲೆಕೆಡಿಸಿಕೊಂಡಾಗ ನೆನಪಾಯ್ತು… ಆರು ತಿಂಗಳಿನಿಂದಲೂ ಜೋಡಿಹಕ್ಕಿಗಳೆರಡು ಮನೆ ತುಂಬ ಹಾರಾಡಿ ಕಿಟಕಿ ಮೂಲಕ ಹೊರಹೋಗುತ್ತಿದ್ದವು. ನಮ್ಮ ದೊಡ್ಡ ಕಾಂಪೋಂಡಿನ ತುಂಬ ತೆಂಗಿನ ಮರ, ಹಣ್ಣಿನಮರಗಳು ತುಂಬಿಕೊಂಡು, ತೋಟದ ಮನೆಥರಾ ಇರೋದರಿಂದ ಪಕ್ಷಿಗಳು, ಅಳಿಲು, ಚಿಟ್ಟೆಗಳು ಬರ್ತಲೇ ಇರ್ತವೆ, ಮರಗಳಲ್ಲಿ ಗೂಡುಗಳಿರ್ತವೆ ಮತ್ತು ನಾವೂ ಅವುಗಳ ಕೂಡಿ ಬದುಕುವುದನ್ನೇ ಚೆಂದ ಮಾಡಿಕೊಂಡಿದ್ದೇವೆ 18 ವರ್ಷಗಳಿಂದಲೂ.

1ಆದರೆ ಎಂದೂ ಹೀಗೆ ಮನೆ ಒಳಗಡೆಯೇ ಹಕ್ಕಿಗೂಡಿನ ನಿರ್ಮಾಣಕಾರ್ಯ ನಡೆದಿದ್ದಿಲ್ಲ. ಹೊಸಸುದ್ದಿ.. ಹೊಸನೋಟ..! ತಕ್ಷಣ ರಿಪೇರಿ ನಿಲ್ಲಿಸಿ, ವೈರ್ ಗಳನ್ನು ಏನೂ ಬದಲಾಯಿಸದೆ ಇದ್ದಂತೆ ಇರಲು ಬಿಟ್ಟುಬಿಡೋಣ ಸ್ವಲ್ಪದಿನ, ಏನಾಗುತ್ತೋ ನೋಡೋಣ ಎಂದು ತೀರ್ಮಾನಿಸಿದೆವು.

ಮಾರನೆಯ ದಿನದಿಂದ ಹುಲ್ಲುಗರಿಗಳ ಸಂಖ್ಯೆ ಹೆಚ್ಚಾಗುತ್ತಾ, ಗೂಡು ನಿಧನಿಧಾನ ದೊಡ್ಡದಾಗುತ್ತಾ.. ಅಂತೂ ವಿಸ್ಮಯವೊಂದು ಮನೆಯೊಳಗಡೆ ನಡೆಯಲಿದೆ ಎಂಬುದು ಖಾತ್ರಿಯಾಯಿತು. ಮತ್ತು ನಿಜಕ್ಕೂ ಏನು ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ಅರಿಯಲು ಆ ಭಾನುವಾರವನ್ನು ಮೀಸಲಿಟ್ಟೆವು. ಎಲ್ಲೂ ಹೊರಹೋಗದೆ, ಸೈಲೆಂಟಾಗಿ ಕೂತು ಗಮನಿಸಿದ್ದಕ್ಕೂ ಸಾರ್ಥಕವಾಯ್ತು. ಬೆಳಗಿನ ಐದೂವರೆಗೆನೇ ಶುರು ಚಿಲಿಪಿಲಿ… ಎದ್ದು ಮೆಲ್ಲಗೆ ಲೈಟ್ ಹಾಕಿದಾಗ ಹಕ್ಕಿದಂಪತಿಗಳ ಪೂರ್ಣದರ್ಶನವೂ ಸಿಕ್ಕಿತು.

ಕಪ್ಪು ಮೈ, ಹಾರಿದಾಗ ಮಾತ್ರ ಕಾಣಿಸುವ ರೆಕ್ಕೆಗಳ ಕೆಳಗಷ್ಟೇ ಕೆಂಪು, ಗುಬ್ಬಿಗಿಂತ ಸ್ವಲ್ಪವೇ ದೊಡ್ಡದು. ತುಂಬ ಚುರುಕು.. ಹಾಲ್ ತುಂಬ ಹಾರಾಡೋದೇನು, ಹುಲ್ಲುಕಡ್ಡಿ ತಂದೂ ತಂದೂ ಕೊಕ್ಕಿನಿಂದ ಪೋಣಿಸೋದೇನು….. ಶಬ್ಧಕ್ಕೆ ಹೆದರಿ, ಹಾರಿಹೋದಾವೆಂದು ಮೊಬೈಲ್ ಅಲಾರಂ ಹೊಡ್ಕೋಳ್ಳೋ ಮುಂಚೆನೇ ಆಫ್ ಮಾಡಿದೆ. ಆಮೇಲೆ ಅರಿವಾಯ್ತು ನನ್ನ ಮೂರ್ಖತನ. ಇಷ್ಟುದಿನ ಅಲಾರಂ ರಿಂಗಣಿಸುತ್ತಿರಲಿಲ್ಲವೇ..? ಹೆದರೋ ಕುಳಗಳಾಗಿದ್ದರೆ ಆಗಲೇ ಹೆದರಬೇಕಿತ್ತಲ್ಲ..? ತಮ್ಮದೇ ಮನೆ ಅನ್ಕೊಂಡು ಬಿಂದಾಸಾಗಿದಾವೆ ಅವು. ನಮಗೆ ಗೊತ್ತಾಗಿಲ್ಲ ಅಷ್ಟೇ. ಸರಿ, ಕೂಡಿಬಾಳೋದಿಕ್ಕೆ ನಮಗೇನೂ ಅಭ್ಯಂತರವಿರಲಿಲ್ಲ.

ಅಚ್ಚರಿ ಹುಟ್ಟಿಸಿದ್ದೆಂದರೆ ಗೂಡಿನ ಗಾತ್ರ. ತುಂಬ ಚಿಕ್ಕದು. ಅಂಗೈ ಅಗಲಿಸಿ ಗೂಡಿನ ಕೆಳಗೆ ಹಿಡಿದರೆ ಕರೆಕ್ಟಾಗಿ ಕೈಯಲ್ಲಿ ಕೂತ್ಕೊಳುತ್ತೆ. ಇಷ್ಟುಗೂಡಿನಲ್ಲಿ ಇವೆರಡೂ ಹೇಗಿರ್ತವೆ..? ಎಷ್ಟು ಮೊಟ್ಟೆ ಇಟ್ಟು, ಹೇಗೆ ಮರಿಮಾಡ್ತವೆ..? ಪ್ರಶ್ನೆಗಳಿಗೆ ಅತೀಶೀಘ್ರ ಉತ್ತರ ಕೊಟ್ಟಿತು ಹಕ್ಕಿದಂಪತಿ.

ಜೂನ್ ತಿಂಗಳ ಮೊದಲ ವಾರ… ನಾನು ರಜಕ್ಕೆ ತೌರಿಗೆ ಹೋಗಿಬರುವಷ್ಟರಲ್ಲಿ ಎರಡು ಮೊಟ್ಟೆಗಳು ಪ್ರತ್ಯಕ್ಷವಾಗಿದ್ದವು. ನಂತರ ಎರಡೇ ದಿನಗಳಲ್ಲಿ ಮತ್ತೊಂದು ಮೊಟ್ಟೆ.. ! ಅವು ಚಿಕ್ಕವು ಅನಿಸಲಿಲ್ಲ. ಒಳ್ಳೆಗಾತ್ರವೇ.. ನಂತರ ಒಂದು ಹಕ್ಕಿ ಗೂಡು ಬಿಟ್ಟು ಕದಲಲಿಲ್ಲ. ಗೊತ್ತಾಯ್ತು.. .. ಕಾವು ಕೊಡೋ ಪ್ರಕ್ರಿಯೆ ಶುರುವಾಯ್ತೂ ಅಂತ. ಗಂಡುಪಕ್ಷಿ ಎಂದೂ ಗೂಡೊಳಗೆ ಕೂತ್ಕೋತಾನೆ ಇರ್ಲಿಲ್ಲ. ಆಗಾಗ ಬರೋದು.. nest in heaadಬಂದಾಗೆಲ್ಲಾ ಏನಾದರೂ ಕಚ್ಚಿಕೊಂಡು ಬಂದು ಹೆಂಡತಿಹಕ್ಕಿಗೆ ಕೊಡೋದು.. ಮರಿಗಳಿಗೆ ಗುಟುಕು ಕೊಡುವುದು ಮಾಮೂಲು. ಆದರೆ ಗಂಡುಹಕ್ಕಿ ಹೆಣ್ಣುಹಕ್ಕಿಗೆ ಗುಟುಕು ಕೊಡುವುದನ್ನೂ ಅಂದು ಹತ್ತಿರದಿಂದ ಪ್ರತಿದಿನ ಸಾಕಷ್ಟುಸಲ ನೋಡಿ, ಪರವಶಳಾದೆ.

ಗಂಡು ಹೆಚ್ಚು ಕಾಣಿಸಿಕೊಳ್ಳದೇ ಇದ್ದಾಗ ನನಗೆ ಚಿಂತೆ. ಒಂದಿಷ್ಟು ಅಕ್ಕಿ, ಜೋಳ, ಗೋಧಿ ಕಲೆಸಿ ಹಾಕಲೇನು..? ಅಂತ. ಕಾಂಫೋಂಡಿನಲ್ಲಿ ಈ ಮಿಕ್ಸ್ ಅನ್ನು ಆವಾಗಾವಾಗ ಚೆಲ್ತಿರ್ತೇವೆ.. ಪಕ್ಷಿಗಳಿಗೆ ಅಂತಾನೇ. ಈ ಗಂಡು ಅದಕ್ಕೂ ಅವಕಾಶ ಕೊಡಲಿಲ್ಲ. ಒಮ್ಮೆ ಹತ್ತರದಿಂದ ಗಮನಿಸ್ತೀನಿ.. ಅದು ಕೊಕ್ಕಿನಲ್ಲಿ ಕಚ್ಚಿಕೊಂಡಿರುವ ಪದಾರ್ಥ ಮಿಸುಗಾಡಿದಂತೆ ಅನಿಸಿತು. ಇದೇನು ಅಂತ ನೋಡಿದರೆ ಚಿಕ್ಕದೊಂದು ಹಲ್ಲಿ..! ಯಪ್ಪಾ.. ಇವು ನಾನ್ ವೆಜ್ ಗಳಾ..? ಆದರೆ ಅವುಗಳನ್ನು ನೋಡಿದರೆ ಹಾಗನಿಸುತ್ತಿರಲಿಲ್ಲ. ತುಂಬ ಹಗುರ ಹಕ್ಕಿಗಳಂತೆ, ಏನೋ ಒಂಚೂರು ತಿನ್ಕೊಂಡಿರ್ತವೆ ಎಂಬಂತೆ ಕಾಣುತ್ತಿದ್ದವು… ಇನ್ನು ಇವುಕ್ಕೆ ನಾನು ಹಲ್ಲಿ ಬೇರೆ ಹಿಡಿದು ಹಾಕಲೇನು..? ಅದೊಂದು ಬಾಕಿ..ಹಂ..! ನಿಂ ಲೈಫು, ನಿಮ್ಮ ಫುಡ್ಡು.. ಎಂದು ಸುಮ್ಮನೆ ನೋಡುವ ಕೆಲಸವಷ್ಟೇ ಮಾಡಿದೆ.

ಹದಿನೈದು ದಿನಗಳಾಗಿರಲಿಲ್ಲ.. ಒಂದಿನ ಹೆಣ್ಣುಹಕ್ಕಿ ಗೂಡಿನಿಂದ ಹೊರಬಂದು, ಅಂಚಿನಲ್ಲಿ ಕೂತಿದೆ. ನನಗೆ ಗಾಬರಿ.. .. ನಾಯಿ, ಬೆಕ್ಕು ಇತ್ಯಾದಿ ಏನಾದರೂ ಹೆದರಿಸಿದವಾ ನಾವಿಲ್ಲದ ಹೊತ್ತಿನಲ್ಲಿ..? ಕಿಟಕಿ ಮುಚ್ಚಿ ಭಧ್ರಪಡಿಸೋಣವೆಂದರೆ ಗಂಡುಪಕ್ಷಿ ಬರೋದೇ ಕಿಟಕಿದಾರಿಯಲ್ಲಿ..! ಯೋಚನೆಯಿಂದ ನೋಡಿದರೆ ಅದರ ಕೊಕ್ಕಿನಲ್ಲೂ ಇತ್ತೊಂದು ಬಿಳಿಪದಾರ್ಥ..! ಈಗ ಸಾಕಷ್ಟು ಅಭ್ಯಾಸವಾಗಿತ್ತಲ್ಲ. ಹತ್ತಿರಹೋದರೂ ಅವುಗಳೇನೂ ಹೆದರೋದಿಲ್ಲ.. ಹೋಗಿನೋಡ್ತೀನಿ.. ಮೊಟ್ಟೆಯ ಗಟ್ಟಿಹೊರಭಾಗ..! ಅರ್ಥಾತ್.. ಮರಿ ಹೊರಬಂದಿದೆ. ಇದು ಗೂಡನ್ನು ಸ್ವಚ್ಛಮಾಡ್ತಿದೆ- ಮೊಟ್ಟೆಸಿಪ್ಪೆಯ ಕೊಳಕನ್ನೆಲ್ಲಾ ಕಚ್ಚಿಕೊಂಡು ಹೋಗಿ ಹೊರಗೆ ಬಿಸಾಕುವ ಮೂಲಕ..! ಅಬ್ಬಾ ಪ್ರಕೃತಿಯೇ..! ಅಬ್ಬಾ ತಾಯ್ತನದ ಜವಾಬ್ದಾರಿಯೇ..!

ಒಂದೆರಡು ದಿನ ಸ್ವಚ್ಛತಾಕಾರ್ಯ ಸಾಂಗೋಪಾಂಗ ನಡೆಯಿತು. ಗಂಡುಹಕ್ಕಿ ಈಗ ಹೆಚ್ಚು ಚುರುಕಾಗಿತ್ತು. ಬೇಗಬೇಗ ಮೊಟ್ಟೆಕಸ ಹೊರಹಾಕುವಾಗ, ಹೆಣ್ಣು ಗೂಡಿನ ಅಂಚಿನಲ್ಲಿ ಸುಮ್ಮನೆ ಕೂತಿರ್ತಿತ್ತು.

ಈ ಮಧ್ಯೆ ಗೂಡಿನಲ್ಲಿ ಜೀವಕಲರವ..! ಮೂರು ಮರಿಗಳು..! ಎರಡೂ ಹಕ್ಕಿಗಳು ಈಗ ಗೂಡುಬಿಟ್ಟು ಹೋಗೋದೇ ಕಡಿಮೆ. ಹೋದರೆ ಏನಾದರೊಂದು ಆಹಾರ ತಗೊಂಡೇ ಬರತವೆ. ಹಲ್ಲಿ, ದೀಪದಹುಳ, ಚಿಕ್ಕಚಿಕ್ಕ ಹುಳುಗಳು ಕೊನೆಗೆ ಅಲ್ಲಲ್ಲಿ ಸಿಗುವ ಸೊಳ್ಳೆ, ಜೇಡ, ಜಿರಲೆ…. ವಾವ್.. ಪರವಾಗಿಲ್ಲ, ಮನೆ ಕ್ಲೀನ್ ಮಾಡ್ತವೆ ಅನಿಸಿತು..!

ಮರಿಹಕ್ಕಿಗಳೋ.. ಥೇಟ್ ಬಕಾಸುರಗಳು. ಕ್ಯಾಮೆರಾದ ಸದ್ದಿಗೂ, ಅಪ್ಪ ಅಮ್ಮ ಬಂದರು, ಊಟ ತಂದರು ಅಂತ ತಿಳ್ಕೊಂಡು ಆ ಅಂತ ಬಾಯಿತೆಗೆಯೋವು….! ಅಂತೂ ಒಳ್ಳೇ ಫೋಸು ಕೊಟ್ಟವು..! ಎಂಥಾ ಸಡಗರ, ಸಂಭ್ರಮ ಮನೇಲಿ..! ಬಹುತೇಕ ಸ್ನೇಹಿತರಿಗೆ ವಿಷಯ ಗೊತ್ತಾಯಿತು.. ಏಕೆಂದರೆ ಅವರು ಒಳಗೆ ಬರುವಷ್ಟರಲ್ಲಿ ನಾವು ಮೆಲ್ಲಗ ಬರ್ರಿ, ಮೆಲ್ಲಗ ಬರ್ರಿ.. ಬಾಗ್ಲು ಪಕ್ಕದಾಗ ಗೂಡೂ, ಮರಿಗಳು ಇದಾವು.. ಎಂದು ಏನೋ ಆಗಿದೆಯೆಂಬಂತೆ ಹೆದರಿಸಿಬಿಡುತ್ತಿದ್ದೆವು..! ಎಲ್ಲರೂ ಹೆದರಿಕೊಂಡೇ ಒಳಬಂದವರು ನೋಡುನೋಡುತ್ತಾ ಆಹಾ..ಓಹೋ.. ಎಂದು ಇನ್ನಷ್ಟು ಸುದ್ದಿಮಾಡಿದರು. ಪುಟ್ಟಗೂಡು ನೋಡೋದಿಕ್ಕೇನೇ ಪದೇಪದೇ ಬಂದವರೂ ಇದಾರೆ. ನಮ್ಮ ಪ್ರಚಾರ ಹಾಗಿತ್ತು..!

ಮರಿಗಳು ಯಾವುದಕ್ಕೂ ಕೇರ್ ಮಾಡದೆ ಭರಾಭರಾ ಬೆಳೆದುಬಿಟ್ಟವು. ಇಪ್ಪತ್ತು ದಿನಗಳಿಗೆಲ್ಲಾ ತಂದೆತಾಯಿಗಳನ್ನು ಹೋಲತೊಡಗಿದವು…..ಅವುಗಳ ಮಿಸುಗಾಟ, ತಳ್ಳಾಟ, ಹೊರಗೆ ಬರುವ ಪ್ರಯತ್ನಗಳಲ್ಲಿ ಗೂಡು ತೂಗಾಡುತ್ತಿತ್ತು. ನನ್ನ ಗಾಬರಿಗೆ ಯಜಮಾನರೂ ಗಾಬರಿಗೊಂಡ ದಾರ ತಗೊಂಡು, ವೈರ್ 3ನಿಂದ ವೈರ್ ಗೆ ಕಟ್ಟಿ ಭದ್ರ ಮಾಡಿದಾಗಲೇ ನೆಮ್ಮದಿ. ಸಡಗರದಲ್ಲಿ ಮುಳುಗಿದ್ದ ನಮಗೆ ವಿದಾಯದ ಗಳಿಗೆ ಹತ್ತಿರ ಬಂದಿರುವುದು ತಿಳಿಯಲಿಲ್ಲ. ಆ ದಿನ ಕಾಲೇಜಿನಿಂದ ಬಂದು, ಬೀಗ ತೆಗೆದು ಒಳಬರ್ತೀನಿ.. ಎಂದಿನಂತೆ ಗೂಡಿನೊಳಗೆ ಗದ್ದಲವಿರಲಿಲ್ಲ.. ನೋಡಿದರೆ ಒಂದೇ ಮರಿಯಿತ್ತು.. ಮತ್ತೂ ಸುತ್ತಮುತ್ತ ನೋಡಿದರೆ ಕಿಟಕಿಯಲ್ಲಿ ಒಂದು ಹಕ್ಕಿ ಕಾಣಿಸಿತು. ಇನ್ನೊಂದಾಗಲೇ ಕಾಣೆಯಾಗಿತ್ತು.

ಮಾರನೆಯ ದಿನ ಮೂರನೆಯ ಹಕ್ಕಿಯೂ ಕಾಣೆಯಾಯ್ತು..ಮಕ್ಕಳು ಹಾಸ್ಟೆಲಿಗೆ ಹೋಗಿದ್ದಕ್ಕೂ, ಈ ಹಕ್ಕಿಗಳು ಹಾರಿಹೋಗಿದ್ದಕ್ಕೂ ಹೆಚ್ಚಿನ ವ್ಯತ್ಯಾಸವೇನೋ ಕಾಣಿಸಲಿಲ್ಲ ನನಗೆ. ಮಕ್ಕಳೂ ಎಷ್ಟುಬೇಗ ಬೆಳೆದರು ಎಂತಲೇ ಅನಿಸುತ್ತದೆ.. ಆದರೂ.. ಇರಬೇಕಿತ್ತು ಇನ್ನೊಂದ್ನಾಲ್ಕು ದಿನ..! ನಮಗೋಸ್ಕರವಾದರೂ.. ..! ಇಷ್ಟಕ್ಕೂ ನಮಗೋಸ್ಕರ ಯಾಕಿರಬೇಕು ಅವು..? ನಾವೇನು ಮಾಡಿದ್ದೇವೆ ಅವುಗಳಿಗೆ..? ನಮ್ಮನ್ನು ಕೇಳಿ ಬಂದಿದ್ದವಾ..? ಇಲ್ವಲ್ಲಾ..? ತಮಗೆ ಈ ಜಾಗ ಸುರಕ್ಷಿತ, ಭದ್ರ ಅನಿಸಿದೆ. ಬಂದವು.

ಹುಟ್ಟಿದ್ದಾಯ್ತು, ಬೆಳೆದಿದ್ದಾಯ್ತು.. ಇನ್ನೇನು..? ಬದುಕೆಂಬ ಕಾಲೇಜಿನ ಸಿಲಬಸ್ಸನ್ನು ಹಕ್ಕಿಗಳೂ ಕಲಿಯಬೇಕಲ್ಲವಾ..? ಆದರೂ.. .. ಆದರೂ.. .. ನಾಲ್ಕೈದು ದಿನ ಮನೆಯಲ್ಲಿ ನೀರವ ಮೌನ, ಒಂಥರಾ ಖಾಲಿಖಾಲಿ ನಿರ್ವಾತ… ಮೆಲ್ಲಗೆ ಬಾಗಿಲ ಬಳಿಬಂದ ಬಂಧುಗಳಿಗೆ ಪರವಾಗಿಲ್ಲ, ಬರ್ರಿ. ಪಕ್ಷಿಗಳು ಹೋದವು.. ಎಂದು ನಾನೇ ಧಢಾರನೆ ಬಾಗಿಲು ತೆಗೆದೆ. ಬೇಡಬೇಡವೆಂದರೂ ಕಣ್ಣಂಚು ತೇವತೇವ..! ಇನ್ನೂ ಮನೇಲಿ ಎಷ್ಟು ಧಾಂಧಲೆ ಮಾಡಿದರೆ ತಾನೇ ಏನೀಗ..? ಹೋದವಲ್ಲ..? ಮತ್ತೆ ಬಂದಾವೇ..?

ಒಂದೆರಡು ದಿನಗಳಲ್ಲಿ ಬಂದಿತು ಗಂಡುಹಕ್ಕಿ…..
ಸ್ವಲ್ಪಹೊತ್ತು ಗೂಡಿನ ಅಂಚಿನಲ್ಲಿ ಸುಮ್ಮನೆ ಕುಳಿತಿತ್ತು.. ಆ ಮೇಲೆ ಹಾಲ್ ತುಂಬಾ ಹಾರಾಡಿತು.. ಒಂದೆರಡು ಸೊಳ್ಳೆಗಳನ್ನು ಚಾಣಾಕ್ಷತೆಯಿಂದ ಹಿಡಿದು, ತಿಂದಿತು. ಹಾರಾಡುವಾಗ ನನ್ನ ಕಡೆಗೂ .. .ನೋಡಿತೇ..? ಅಥವಾ ನನಗೆ ಹಾಗನಿಸಿತೇ..? ಭಾವುಕತೆ ಮನುಷ್ಯನನ್ನು ಬೆಳೆಸುತ್ತೋ, ಹಾಳುಮಾಡುತ್ತೋ – ಎಲ್ಲ ಪ್ರಶ್ನೆಗಳಿಗೂ ಉತ್ತರ ಬುದ್ಧಿಗೆ ನಿಲುಕುವುದಿಲ್ಲ. ಅಂತೂ ಅದು,

ಮಕ್ಕಳು ಹಾಗೇನೆ.. ರೆಕ್ಕೆ ಬಲಿತಮೇಲೆ ಅವರ ಬದುಕು ಅವರಿಗೆ.. ಕೊನೆಗೆ ಉಳಿಯುವುದು ನನಗೆ ನೀನು, ನಿನಗೆ ನಾನು ಕಣೇ.. ಎಂದು ಪಕ್ಕಾ ಗಂಡಿನ ಶೈಲಿಯಲ್ಲಿ ಸಮಾಧಾನ ಮಾಡುತ್ತಿರುವಂತೆಯೇ ಅನಿಸಿತು….

2ಸ್ವಲ್ಪಹೊತ್ತಿನಲ್ಲಿ ಅವಳೂ ಬಂದಳೂ.. .. ಕಪ್ಪುಸುಂದರಿ.. ”ಏಯ್.. ಏನ್ಮಾತು ಅವಳ ಹತ್ರ.. ನಾನಿಲ್ದಾಗ..? ಎಂದಿರಬಹುದೇ ಅವಳು ತನ್ನವನಿಗೆ..? ಛೇ.. .. ಈ ಅತೀ ಭಾವುಕತೆಯಿಂದ ಹೊರಬರಬೇಕು ನಾನು.. ಪ್ರಾಕ್ಟಿಕಲ್ಲಾಗಿ ಯೋಚಿಸಬೇಕು. ಈ ಪಕ್ಷಿಯ ವೈಜ್ಞಾನಿಕ ಹೆಸರೇನಿರಬಹುದು..? ಯಾವ ತಳಿ, ಪ್ರಭೇಧಕ್ಕೆ ಸೇರಿರಬಹುದು? ಫೋಟೋ ತೋರಿಸಿ, ವಿಚಾರಿಸಬೇಕು ಯಾರನ್ನಾದ್ರೂ. ಹೀಗೇ ಯೋಚಿಸಿ ಎದೆಗೂಡನ್ನು ತಹಬದಿಗೆ ತಂದುಕೊಂಡೆ. ಅವೆರಡೂ ಒಂದು ತಿಂಗಳವರೆಗೂ ಬಂದುಹೋಗಿ ಮಾಡಿದಾಗ ಸಮಾಧಾನವೆನಿಸಿತು. ಇದೆಲ್ಲಾ ಜೂನ್ ನಲ್ಲಿ ಆರಂಭವಾಗಿ ಜೂನ್ ನಲ್ಲೇ ಮುಗಿದುಹೋಯ್ತು.. ..

ನಂತರ ಅಕ್ಟೋಬರ್ ನಲ್ಲಿ.. ನಂಬುವುದು ಕಷ್ಟ. ಆದರೆ ಇದು ನಿಜ. ಎರಡೂ ಹಕ್ಕಿಗಳು ಮತ್ತೆ ಬಂದವು. ಎಂಟ್ಹತ್ತು ದಿನ ಗೂಡನ್ನು ಕಾದವು. ಅನಂತರ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಮೊಟ್ಟೆ ಹಾಕಿತು. ಕರೆಕ್ಟಾಗಿ ಮೂರು.! ಎರಡನೆ ಬಾಣಂತನ ಎಂದು ಯಜಮಾನರು ಹೆಸರಿಟ್ಟರು.! ಸಂಭ್ರಮಪರ್ವ ನಂಬರ್ 2..! ಈ ಬಾರಿ ವಿದಾಯಕ್ಕೆ ಸಿದ್ಧಳಾಗಿಯೇ ಇದ್ದುಬಿಟ್ಟೆ. ಹಾಗಾಗಿ ಈ ಬಾರಿ ಮೂರೂ ಹಕ್ಕಿಗಳು ಹಾರಿಹೋದಾಗ ಅಂಥಾಪರಿ ಶೋಕವೇನೂ ಕಾಡಲಿಲ್ಲ.. ಮತ್ತಷ್ಟು ಫೋಟೋ ತೆಗೆದುಕೊಂಡೆವು. ಅವುಗಳೂ, ಮೊದಲ ಬಾರಿ ತೆಗೆದ ಫೊಟೋಗಳೂ ಒಂದೇ ಥರ ಕಂಡವು..! ನಂತರ ದೊಡ್ಡಹಕ್ಕಿಗಳೂ ಬರುವುದನ್ನು ಕ್ರಮೇಣ ನಿಲ್ಲಿಸಿದವು. ಗೂಡು ಮಾತ್ರ ಹಾಗೇ ಇದೆ. ಅದಕ್ಕೂ ಜೇಡ ಕಟ್ಟಿತ್ತು.

ಮೊನ್ನೆ ಹಗೂರಾಗಿ, ಕಾಳಜಿಯಿಂದ ನಾನೇ ಕ್ಲೀನ್ ಮಾಡಿದೆ. ಸ್ವಚ್ಛ, ಕಲಾತ್ಮಕ ಗೂಡು ನಳನಳಿಸುತ್ತಿದೆ. ಪಕ್ಷಿಗಳು ತಾವೇ ಕಟ್ಟಿಕೊಂಡ ಗೂಡುಗಳಲ್ಲಿ ಮಾತ್ರ ವಾಸವಿದ್ದು ಸಂತಾನ ಬೆಳೆಸುತ್ತವೆ ತಾನೇ..? ಬಾಡಿಗೆ ಇತ್ಯಾದಿ ಅತಿಆಸೆಬುರುಕತನ ಬೇರಾವ ಜೀವಿಯಲ್ಲಿ ತಾನೇ ಇದೆ..? ಇನ್ನೇನು.. ಮತ್ತೆ ಜೂನ್ ಬರುತ್ತೆ. ಆ ಹಕ್ಕಿದಂಪತಿಯೂ ಬರಬಹುದೇ..? ಬಂದಾಗ ಗೂಡಿಲ್ಲದಿದ್ದರೆ ಹೇಗೆ..? ಅದಕ್ಕೆ ಗೂಡಿನ ಹೊರಗೆ ಆಗಾಗ ಸ್ವಚ್ಛವಾಗಿ, ಅತ್ತಿತ್ತ ಹರಡಿದ ಗರಿಗಳನ್ನು ಒಪ್ಪ ಮಾಡುತ್ತಿರುತ್ತೇನೆ. ಬರಲೂಬಹುದು.. ಬಾರದೆಯೂ ಇರಬಹುದು.. ಆದರೆ ಆ ನಿರೀಕ್ಷೆ ಹುಟ್ಟಿಸುವ ಆನಂದ ಅನನ್ಯವಾದದ್ದು.

‍ಲೇಖಕರು admin

April 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: