ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..

ದಿನೇಶ್ ಅಮೀನ್ ಮಟ್ಟು

ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ…ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.

‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.

ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. “ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.

ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.

ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.

‍ಲೇಖಕರು Admin

January 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. kvtirumalesh

    ಬೊಳುವಾರು ಮಹಮ್ಮದ್ ಕುಂಞ್ಞಿಯವರ ಈಚಿನ ಕೃತಿಗಳನ್ನು ನಾನು ಓದಿಲ್ಲ. ಆದರೆ ಅವರ ಮೊದಲ ಬರಹಗಳನ್ನು ಓದಿದ್ದೇನೆ. “ದೇವರುಗಳ ನಾಡಿನಲ್ಲಿ’’ (?) ಎಂಬ ಅವರ ಮೊದಲ ಕಥಾಸಂಕಲನದ ಪುಸ್ತಕ ವಿಮರ್ಶೆಯನ್ನು `ಪ್ರಜಾವಾಣಿ’ಗೋಸ್ಕರ ಮಾಡುವ ಅವಕಾಶ ನನಗೆ ಒದಗಿತ್ತು. ಆ ಸಂಕಲನವನ್ನು ನಾನು ತುಂಬಾ ಮೆಚ್ಚಿ ಬರೆದಿದ್ದೆ. ಇದು ಬಹಳ ಹಿಂದೆ: ಕೋಮುವಾದ, ಕೋಮುಸೌಹಾರ್ದ ಮುಂತಾದ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬರುವ ಮೊದಲೇ. ಬೊಳುವಾರು ಮುಸ್ಲಿಂ ಸಮುದಾಯದ ಕುರಿತು ಹಲವು ವಸ್ತುನಿಷ್ಠ ಮತ್ತು ವಿಚಾರಪೂರ್ಣ ಒಳನೋಟಗಳನ್ನು ಕೊಡುತ್ತ ಬಂದಿದ್ದಾರೆ—ಒಂದು ತರದ criticl insider ಆಗಿ; ಲೇಖಕ ಹಾಗಾಗದಿರಲಾದರೂ ಸಾಧ್ಯವೇ? ಇದಕ್ಕಾಗಿ ಅವರಿಗೆ ಜೀವ ಬೆದರಿಕೆಗಳು ಬಂದಿವೆಯೋ ಇಲ್ಲವೋ ನನಗೆ ತಿಳಿಯದು. ಒಬ್ಬ ವ್ಯಕ್ತಿಗೆ ಜೀವ ಬೆದರಿಕೆಗಳು ಬಂದರೆ ಮಾತ್ರವೇ ಅದು ಅವನ ಕೊಡುಗೆಗೆ ಪ್ರಮಾಣ ಎಂದು ತಿಳಿಯಬೇಕಾಗಿಲ್ಲ. ಅಲ್ಲದೆ ಅಂತರ್ ಸಮುದಾಯದ ಅರಿವು ಹೆಚ್ಚಿಸುವುದರಲ್ಲಿ ಬೊಳುವಾರರ ಕೊಡುಗೆ ಮಹತ್ವದ್ದು ಎಂದು ನಾನು ತಿಳಿದಿದ್ದೇನೆ. ಇಂದು ಕೋಮುವಾದವನ್ನು ಟೀಕಿಸುವುದಕ್ಕೆ ಜನ ಬೇಕಾಗಿಲ್ಲ; ಅದರ ಸ್ಥಾನದಲ್ಲಿ ಸೌಹಾರ್ದತೆಯನ್ನು ತರುವುದು ಹೇಗೆ ಎಂದು ಯೋಚಿಸುವ, ಮತ್ತು ಕಾರ್ಯಕ್ರಮಗಳನ್ನು ಯೋಜಿಸುವ ಜನ ಬೇಕು. ಜನರ ಮನಃಪರಿವರ್ತನೆಯಿಂದ ಮಾತ್ರವೇ ಇದು ಸಾಧ್ಯ ಎಂದು ನಾನು ತಿಳಿದಿದ್ದೇನೆ. ಅದಲ್ಲ, ಸಂಘರ್ಷದಿಂದ ಮಾತ್ರ ಸಾಧ್ಯ ಎಂದಾದರೆ, ಕೋಮು ಸಂಘರ್ಷ ಬಹುಮಟ್ಟಿಗೆ ಕಡಿಮೆಯಾಗುತ್ತ ಹೋಗಬೇಕಿತ್ತು; ಹಾಗಾಗಿಲ್ಲ. ಯಾಕೆ? ಕೇವಲ ಕಾನೂನು ಏನೂ ಮಾಡಲಾರದು; ಮನಸ್ಸು ಬೇಕು. ಶೇಕ್ಸ್ ಪಿಯರನ “ದ ಮರ್ಚೆಂಟ್ ಆಫ್ ವೆನಿಸ್”ನಲ್ಲಿ ಪೋರ್ಶಿಯಾ ಹೇಳುವ ಮಾತು ಇದು, ‘The quality of mercy is not strain’d’ ಎಂಬ ಸಂಭಾಷಣೆಯಲ್ಲಿ. ಸಾಹಿತ್ಯದ ಗುಣವೆಂದರೆ—ಕರುಣೆಯನ್ನು, ಕ್ಷಮೆಯನ್ನು, ಅರಿವನ್ನು, ಸೌಹಾರ್ದತೆಯನ್ನು ಹೆಚ್ಚಿಸುವುದು. ಬೊಳುವಾರರನ್ನು ನಾನು ಈ ಅರ್ಥದಲ್ಲಿ ಕಾಣುತ್ತೇನೆ.
    ಕೋಮುವಾದದ ವಿರುದ್ಧ ಎಷ್ಟು ಹೋರಾಡಿದ್ದೀರಿ ಎನ್ನುವುದಕ್ಕಿಂತಲೂ ಕೋಮು ಸೌಹಾರ್ದವನ್ನು ನಿಜಕ್ಕೂ ತರುವುದರಲ್ಲಿ ಏನು ಮಾಡಿದ್ದೀರಿ ಎನ್ನುವುದು ಮುಖ್ಯವಲ್ಲವೇ? ಸೌಹಾರ್ದವೆಂದರೆ ವಿಭಿನ್ನ ಸಮುದಾಯಗಳ ಜನರ ನಡುವೆ ಆಗಬೇಕಾದ ಪರಿವರ್ತನೆ. ಕೇವಲ ಬಯ್ಯುವುದರಿಂದ ಇದು ಆಗುವುದಿಲ್ಲ. ಕಾನೂನು ಬೇಕು, ಅದರ ಸರಿಯಾದ ಕಾರ್ಯಗತಿಯೂ ಬೇಕು, ಆದರೆ ಅದಕ್ಕೆ ಜನರ ಸಹಕಾರವೂ ಅಗತ್ಯ. ಸಾಹಿತ್ಯ ಜನರ ಮನಃಪರಿವರ್ತನೆಗೆ ಅಪರೋಕ್ಷವಾಗಿ, ಬಹುಶಃ ನಿಧಾನವಾಗಿ ಕೆಲಸ ಮಾಡುತ್ತದೆ. ಶಿವರಾಮ ಕಾರಂತರ “ಚೋಮನ ದುಡಿ,” ಹ್ಯಾರಿಯೆಟ್್ ಬೀಚರ್ ಸ್ಟೋವ್-ಳ “Uncle Tom’s Cabin,” ಡಿಕೆನ್ಸ್-ನ “Olivr Twist” ಮುಂತಾದ ಸಾಹತ್ಯ ಕೃತಿಗಳ ಕೊಡುಗೆಯನ್ನು ಮನ್ನಿಸದಿರುವುದು ಸಾಧ್ಯವೇ?
    ಜಗತ್ತಿನ ಪ್ರಸಿದ್ಧ ಕೃತಿಗಳೊಂದಿಗೆ ಬೊಳುವಾರರ ಕೃತಿಗಳನ್ನು ಇರಿಸಿದ್ದೇನೆ ಎಂದು ಟೀಕಿಸುವುದು ಬೇಡ. ಪ್ರತಿಯೊಂದು ಸಾಹಿತ್ಯ ಕೃತಿಯಲ್ಲೂ ಇಂಥ ಗುಣವಿದೆ ಎನ್ನುವುದು ನನ್ನ ವಿಶ್ವಾಸ.
    ಕ್ರಾಂತಿಕಾರಿ ಚೆ ಗವೇರಾ ಅವನು ಪಚ್ಚೆ ಪುಸ್ತಕದಲ್ಲಿ ಅವನು ಬರೆದಿಟ್ಟುಕೊಂಡ ಮೆಚ್ಚಿನ ನಾಲ್ಕು ಮಂದಿ ಕವಿಗಳ ಕವಿತೆಗಳಿದ್ದ ಪಚ್ಚೆ ಪುಸ್ತಕವೊಂದು ಅವನ ಮರಣಾನಂತರ ಸಿಕ್ಕಿತು. ಪಾಬ್ಲೋ ನೆರೂದಾ (ಚಿಲಿ), ನಿಕಲಸ್ ಗ್ವಿಲ್ಲೆನ್ (ಕ್ಯೂಬಾ), ಸೀಸರ್ ವಾಲೆಯೋ (ಪೆರು), ಮತ್ತು ಲಿಯೋನ್ ಫೆಲಿಪ್ (ಸ್ಪೇನ್) ಎಂಬವರ ಕೆಲವು ಕವಿತೆಗಳು ಅದರಲ್ಲಿದ್ದವು. ಈ ಕವಿತೆಗಳಲ್ಲಿ ಹೆಚ್ಚಿನವೂ ಪ್ರೇಮ ಕವಿತೆಗಳಾಗಿದ್ದವು ಎನ್ನುವುದು ಕುತೂಹಲಕರ. ಗನ್-ನ ಜತೆ ಕವಿತೆ? ಆಶ್ಚರ್ಯವಾಗುತ್ತದೆ ಅಲ್ಲವೆ?
    ಬೊಳುವಾರು ತಮ್ಮ ವೈಯಕ್ತಿಕ ಸುಖವನ್ನು ನೋಡಿಕೊಂಡು ಹಾಯಾಗಿದ್ದಾರೆ ಎಂದು ಹೇಳುವುದು ಉಚಿತವಲ್ಲ. ಅದು ಅವರನ್ನು ಅವಮಾನಿಸಿದ ಹಾಗೆ. ಬೊಳುವಾರರ ಹೆಸರಿನಲ್ಲಿ ಶ್ರೀ ಅಮೀನ್ ಅವರು ಹಲವು ಸಾಹಿತಿಗಳನ್ನು ಟೀಕಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರು ಸಾಹಿತಿಗಳ ಕೊಡುಗೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೆಂದು ಕಾಣುತ್ತದೆ. ಸಾಹಿತ್ಯ, ಕಲೆ, ಸಂಗೀತ ಮುಂತಾದವು ಇಲ್ಲದ ಸಮಾಜ ಫಿಲಿಸ್ಟೈನ್ ಆಗುತ್ತದೆ. ಇದೆಲ್ಲ ತಿಳಿದೂ ಅಮೀನರು ಇಂಥ ಮಾತನ್ನು ಯಾಕೆ ಹೇಳಿದರೋ ಗೊತ್ತಾಗುವುದಿಲ್ಲ. ಅವರಲ್ಲಿ ನನ್ನ ಕೋರಿಕೆ ಇಷ್ಟೆ: ನೀವು ಯಾರೇ ಏಕ್ಟಿವಿಸ್ಟರನ್ನು ಬೇಕಾದರೂ ಮೆಚ್ಚಿಕೊಳ್ಳಿ: ನಿಮ್ಮ ಬರಹ ಓದಿ ನಾವೂ ಮೆಚ್ಚಿಕೊಳ್ಳುತ್ತೇವೆ. ಆದರೆ ಅದಕ್ಕೋಸ್ಕರ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ.

    ಕೆ. ವಿ. ತಿರುಮಲೇಶ್

    ಪ್ರತಿಕ್ರಿಯೆ
  2. NarsimhaMurthy K

    ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ.

    ಪ್ರತಿಕ್ರಿಯೆ
  3. Anantha Ramesh

    ಪಂಥೀಯ ವಾದಗಳು ಈಗಾಗಲೇ ಕಂದಕಗಳನ್ನು ನಿರ್ಮಿಸಿಬಿಟ್ಟಿವೆ. ತಿರುಮಲೇಶರ ಕಳಕಳಿ ಅರ್ಥವಾಗುತ್ತದೆ. ಕಂದಕಗಳ ವಿಸ್ತರೀಕರಣದ ಕೊಡುಗೆಯವರಿಗೆ ತಿರುಮಲೇಶರು ’ವಿಲನ್’ ಆಗಿ ಕಾಣಿಸದಿದ್ದರೆ ಸಾಕು.

    ಪ್ರತಿಕ್ರಿಯೆ
  4. Lingaraju BS

    ಓರ್ವ ಸಾಹಿತಿ ಓದುಗನಿಗೆ ತಲುಪಬೇಕಾದರೆ ಪದಗಳ ಪೋಣಿಸುವಿಕೆಯ ಪಾಂಡಿತ್ಯ ಬೇಕಾ ಅಥವಾ ತಾನು ಏನು ಹೇಳುತ್ತಿದ್ದೇನೆ ಎಂಬುದರ ಧ್ವನಿಯನ್ನು ಪದಗಳ ಮೂಲಕ ಓದುಗನಿಗೆ ತಲುಪಬೇಕಾ ಎಂಬ ಸಾರ್ವಕಾಲಿಕ ಪ್ರಶ್ನೆಯೊಂದಿದೆ.
    ದಿನೇಶ್ರವರು ಶ್ರೀನಿವಾಸ ಕಾರ್ಕಳ ಮತ್ತು ಸುರೇಶ್ಭಟ್ ಬಾಕ್ರಬೈಲು ಆವರ ಬಗ್ಗೆ ಬರೆಯುವಾಗ ಬಳಸಿದ ಬೊಳುವಾರ ಪಾತ್ರದ ಬಗ್ಗೆ ತಿರುಮಲೇಶ್ರವರು ಶೇಕ್ಸ್ಪಿಯರ್ನನ್ನು ಎಳೆದು ತಂದು ಒಂದು ಸೈದ್ಧಾಂತಿಕ ಮುಖಾಮುಖಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕೋಮುವಾದದ ನಿಮರ್ೂಲನೆ ಮಾಡಲು ಸಂಘರ್ಷಕ್ಕಿಂತ ಸೌಹಾರ್ದತೆ ಮೂಡಿಸುವ ಕೆಲಸ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ. ಬೊಳುವಾರರು ವೈಯಕ್ತಿಕ ಸುಖ ನೋಡಿಕೊಂಡು ಸುಖವಾಗಿದ್ದಾರೆ ಎಂಬ ದಿನೇಶರ ಮಾತುಗಳ ಹಿಂದಿನ ಧ್ವನಿ ನನಗೆ ಕೇಳಿಸಿದ್ದು ಹೀಗೆ.. ಪುಸ್ತಕಗಳಲ್ಲಿ ಬರೆಯುವುದು ಒಂದಾದರೆ, ನಾವು ಸಾಹಿತ್ಯದಲ್ಲಿ ಪ್ರತಿಪಾದಿಸಿದ ಸೌಹಾರ್ದತೆಗೆ ಧಕ್ಕೆ ಬಂದಾಗ ಮತ್ತೊಂದು ಕೃತಿ ರಚಿಸುವುದೋ ಅಥವಾ ಅ ಸೌಹಾರ್ದತೆ ಉಳಿಸಿಕೊಳ್ಳಲು ಅನಿವಾರ್ಯವಾದರೆ ಸಂಘರ್ಷಕ್ಕೆ ಬೇಕಾದರೂ ಇಳಿಯಲು ಸಿದ್ಧವಾಗಿರುವುದೋ ಎಂದು ಹೇಳುತ್ತಿದ್ದಾರೆ ಎನಿಸಿತು.
    ಕೋಮುವಾದ ಎಂದಾಗ ನಮಗೆ ನೆನಪಾಗುವುದು ಪ್ರಯೋಗಶಾಲೆಯಾದ ದಕ್ಷಿಣ ಕನ್ನಡ. ಅಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಲು ಸಾಹಿತ್ಯದಷ್ಟೇ ಸಂಘರ್ಷದ ಅನಿವಾರ್ಯತೆಯೂ ಇದೆ. ಸಂಘರ್ಷವೆಂದರೆ ಅದು ತಲವಾರು, ಬಂದೂಕು, ಚಾಕು ಹಿಡಿಯುವುದಲ್ಲ.
    ಬಹುಶಃ ತಿರುಮಲೇಶ್ರವರಿಗೂ ಗೊತ್ತಿರಬಹುದಾದ ಶಹಜಾದೆ 2001 ಕಾರ್ಯಕ್ರಮವನ್ನು ಇಲ್ಲಿ ಪ್ರಸ್ತಾಪಿಸುವುದು ಉತ್ತಮ ಎನಿಸುತ್ತಿದೆ. ಏಕೆಂದರೆ ದಿನೇಶ್ರವರ ಇಡೀ ಬರಹದಲ್ಲಿ ಕಾಣಿಸಿದ್ದು ಅಥವಾ ಮಂಗಳೂರಿನಲ್ಲಿ ನಡೆದ ಜನನುಡಿಯಲ್ಲಿ ಇಡೀ ಕಾರ್ಯಕ್ರಮದಲ್ಲಿ ನನಗೆ ಆನುರಣಿಸಿದ್ದು ಆ ಶಹಜಾದೆ 2001 ನೆನಪು. ತಿರುಮಲೇಶ್ರವರ ಇಡೀ ಪ್ರತಿಕ್ರಿಯೆಗೆ ಉತ್ತರವೂ ಅದೇ ಶಹಜಾದೆ 2001.
    1994ರಲ್ಲಿ ಬೋಸ್ನಿಯಾದ ರಾಜಧಾನಿ ಸರಹೇವೋದ ಮೇಲೆ ಬಾಂಬುಗಳ ಸುರಿಮಳೆಯಾಗುತ್ತಿದ್ದಾಗ ಆಮ್‌ಸ್ಟರ್‌ಡಾಮಿನ ರಂಗಕರ್ಮಿಗಳ ಒಂದು ತಂಡ ಸರಹೇವೋದ ಹಾಗೂ ಯುರೋಪಿನ ಎಲ್ಲ ನಗರಗಳ ರಂಗಮಂದಿರಗಳಲ್ಲಿ ಯುದ್ಧ ಮುಗಿಯುವವರೆಗೂ ಪ್ರತಿ ಶುಕ್ರವಾರ ಏಕಕಾಲದಲ್ಲಿ ಗಟ್ಟಿಯಾಗಿ ಓದುವುದಕ್ಕಾಗಿ ಯುರೋಪಿನ ವಿಭಿನ್ನ ಲೇಖಕರಿಂದ ಕತೆಗಳನ್ನು ಆಹ್ವಾನಿಸಿತು. ಅದು ವಿನಾಶದ ವಿರುದ್ಧ ಕತೆ ಹೇಳುವ ಕಲೆಯನ್ನು, ನಿಜವಾದ ಸಾವಿನ ವಿರುದ್ಧ ಕಾಲ್ಪನಿಕ ಬದುಕನ್ನು ಎತ್ತಿಕಟ್ಟಿದಂಥ ಕಾರ್ಯಕ್ರಮ. ಅದರಿಂದ ಎಷ್ಟು ಜೀವ ಉಳಿದವೋ ಗೊತ್ತಿಲ್ಲ. ಆದರೆ ಆ ಕಾರ್ಯಕ್ರಮಕ್ಕೆ ಸ್ಫೂರ್ತಿ ಒದಗಿಸಿದ ಪುಸ್ತಕ ಒಂದು ಸಾವಿರದೊಂದು ರಾತ್ರಿಗಳು. ರಂಗಕರ್ಮಿಗಳ ತಂಡ ಆ ಕಾರ್ಯಕ್ರಮಕ್ಕೆ ನೀಡಿದ ಶೀರ್ಷಿಕೆ: ಶಹಜಾದೆ 2001.

    ಪ್ರತಿಕ್ರಿಯೆ
    • kvtirumalesh

      ಶೇಕ್ಸ್ ಪಿಯರನ್ನ ನಾನು ಎಳೆದು ತಂದಿಲ್ಲ ಲಿಂಗರಾಜು ಅವರೇ! ಇದೆಂಥಾ ಮಾತು! ಅವನು ಮತ್ತು ನನ್ನ ಪ್ರತಿಕ್ರಿಯೆಯಲ್ಲಿ ಹೆಸರಿಸಿದ ಹಲವರು (ಬೊಳುವಾರು ಕೂಡ) ನನ್ನೊಳಗೇ ಇದ್ದಾರೆ, ನನ್ನ ಮನೋಭೂಮಿಕೆಯ ಭಾಗವಾಗಿ. ಅದಲ್ಲವೆಂದಾದರೆ ನಾನು ಓದಿ ಕಲಿತದ್ದಕ್ಕೆ, ಹಲವಾರು ವರ್ಷ ಕಲಿಸಿದ್ದಕ್ಕೆ ಏನು ಪ್ರಯೋಜನ? ಮುತಾಲಿಕರ ಸೇನೆ ಹೆಣ್ಣುಮಕ್ಕಳನ್ನು ಬಾರಿನಿಂದ ಹೊರಕ್ಕೆಳೆದು ಹಾಕಿದಾಗ, ಅದರ ವಿರುದ್ಡವೂ ಬರೆದಿದ್ದೆ.
      ಸ್ತ್ಫೀಯರ ಕುರಿತು ನಿಮಗೆ ಅಷ್ಟೊಂದು ಕಾಳಜಿಯಿದ್ದರೆ ಅವರಿಗೋಸ್ಕರ ಶಿಕ್ಷಣ ಸಂಸ್ಥೆ ನಡೆಸಿ, ಹಾಸ್ಟೆಲ್ ಕಟ್ಟಿಸಿ ಎಂದಿದ್ದೆ.

      ನನ್ನ ಮಾತು ನಿಮಗೆ ಅಗತ್ಯವಿಲ್ಲ ಎಂದು ಗೊತ್ತಾಯಿತು.
      `ಹಾಗಿದ್ದರೆ ಯಾರೂ ಮಾತಾಡುವುದು ಬೇಡವೆ?’ ಈ ಉದ್ಧರೆಣೆ ಕೂಡ ಶೇಕ್ಸ್ ಪಿಯರನದು! (ರೋಮಿಯೋ ಎಂಡ್ ಜೂಲಿಯೆಟ್)

      ನಿಮಗೆ ಯಶಸ್ಸು ಬಂದರೆ ನನಗೆ ಸಂತೋಷವೇ. ನೀವು ಸೋಲುವುದನ್ನು ಯಾರೂ ಬಯಸುವುದಿಲ್ಲ. ಆದರೆ ನಿಮ್ಮ ಗುರಿ ಸ್ಪಷ್ಟವಿರಲಿ, ಹಾಗೂ ಇಂಕ್ಲೂಸಿವ್ ಮತ್ತು ಪಾಸಿಟಿವ್ ಆಗಿರಲಿ ಎಂದು ಹಾರೈಸುವೆ.

      ಕೆ.ವಿ. ತಿರುಮಲೇಶ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: