ಒಂದು ಪದ್ಯ ಹೇಳಿದರೆ ಎದ್ದು ಬರುವಿರಾ ಚಿಟ್ಟಾಣಿ..?

ರಾಘವೇಂದ್ರ ಬೆಟ್ಟಕೊಪ್ಪ 

ಅಕ್ಷರಶಃ ಅಲ್ಲಿ ಭಾವನೆಯ ಕಟ್ಟೆ ಒಡೆದಿತ್ತು. ಎಲ್ಲರ ಕಣ್ಣುಗಳೂ ತೇವವಾಗಿದ್ದವು. ಮನಸ್ಸು ಇನ್ನೂ ಇರಬೇಕಿತ್ತು ಎನ್ನುತ್ತಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಒಂದು ಪರ್ವತವಾಗಿ ಅನೇಕರಿಗೆ ಪ್ರೇರಣೆ, ಮಾರ್ಗದರ್ಶಕವಾಗಿದ್ದ ಒಂದು ಗುಡ್ಡ ಶಾಂತವಾಗಿ ಮಲಗಿತ್ತು. ಅದರ ಎದುರು ಎಲ್ಲರ ಅಶ್ರುತರ್ಪಣ. ಆದರೆ, ಹೂವಿನ ಹಾರಗಳ ಮಧ್ಯೆ ಮಲಗಿದ್ದ ಆ ಕಾಯಕ್ಕೆ ಅದಾವುದರ ಪರಿವೇ ಇರಲಿಲ್ಲ.

ಗಡ್ಡೇಕೇರಿಯಲ್ಲಿನ ಚಿಟ್ಟಾಣಿ ಎಂಬ ಮನೆಗೆ ಅವರ ಪಾರ್ಥೀವ ಶರೀರ ಬರುತ್ತಿದ್ದಂತೆ ಚಿಟ್ಟಾಣಿ ಅಮರ್ ರಹೇ ಎಂಬ ಧ್ವನಿಗಳು ಮೊಳಗಿದವು. ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ ಅಸಂಖ್ಯಾತ ಕಲಾವಿದರು, ಕಲಾಭಿಮಾನಿಗಳು ಚಿಟ್ಟಾಣಿ ಅವರ ಅಂತಿಮ ದರ್ಶನಕ್ಕಾಗಿ ಕಾದರು. ಸರತಿಯಲ್ಲಿ ಬಂದು ಪುಪಷ್ಪಾರ್ಚನೆ ಮಾಡಿದರು. ಹಾರ ಹಾಕಿದರು.

ಜಾತಿ, ಮತಗಳನ್ನೂ ಮೀರಿದ ಸವ್ಯಸಾಚಿ ಕಲಾವಿದ ಚಿಟ್ಟಾಣಿ ಅವರಾಗಿದ್ದರು ಎಂಬುದು ಅವರ ಅತಿಮ ದರ್ಶನದ ವೇಳೆ ಇನ್ನೊಮ್ಮೆ ಸಾಬೀತಾಯಿತು.
ಮುಸ್ಲಿಂ ಸಮುದಾಯದ ಪ್ರಮುಖರು, ಮಹಿಳೆಯರೂ ಬಂದು ಚಿಟ್ಟಾಣಿ ಅವರ ಅಂತಿಮ ದರ್ಶನ ಪಡೆದರು. ಗಂಧದ ಹಾರ ಹಾಕಿ ನಮಸ್ಕರಿಸಿದರು.

ಕಸೆ ಸೀರೆಯ ಮೇಲೆ

ಯಕ್ಷಗಾನವನ್ನು ಕೊನೇ ಉಸಿರು ಇರುವ ತನಕವೂ ಬಿಡುವದೇ ಇಲ್ಲ ಎಂದು ಹೇಳುತ್ತಿದ್ದ ಅಜ್ಜನ ಪಾರ್ಥೀವ ಶರೀರವನ್ನೂ ಯಕ್ಷಗಾನದ ಕಸೆ ಸೀರೆಯ ಮೇಲೆ ಮಲಗಿಸಿದ್ದು ಅರ್ಥಪೂರ್ಣವಾಗಿತ್ತು. ಅವರು ಪ್ರೀತಿಸುವ ಬಣ್ಣದ ಬದುಕಿನ ಕೊನೇ ಕ್ಷಣದ ಅನ್ವರ್ಥವೂ ಆಗಿತ್ತು.

ಚಿಟ್ಟಾಣಿ ಅವರ ದೇಹವನ್ನು ಅವರ ಮನೆಯ ಮುಂದೆ ಈಚೆಗಷ್ಟೇ ಅಡಿಗಲ್ಲು ಹಾಕಿದ ಕನಸಿನ ರಂಗ ಮಂದಿರದ ನಡುವೆ ತಂದಿಟ್ಟಾಗ ಅವರು ಕಲಿಸಬೇಕು ಎಂದು ಕಟ್ಟಿಸಲಾಗುತ್ತಿದ್ದ ಸ್ಥಳದಲ್ಲಿ ಅವರನ್ನೇ ಕಳಿಸಲು ಪಾರ್ಥೀವ ಶರೀರ ಇಡುವಂತಾಯಿತು ಎಂದು ಬಂಧುಗಳು ಮರುಗಿದರು.

ಗಾನ ಶ್ರದ್ದಾಂಜಲಿ

ಯಕ್ಷಗಾನದ ಮೇರು ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಬಡಗಿನ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ ಸಂಗಡಿಗರು ಅಂತಿಮವಾಗಿ ಯಕ್ಷಗಾನ ಪದ್ಯ ಹೇಳುವ ಮೂಲಕ ಗಾನ ಶ್ರದ್ದಾಂಜಲಿ ಅರ್ಪಿಸಿ ಭಾವುಕವಾಗಿಸಿದರು. ಚಂಡೆ ಮದ್ದಲೆಗಳ ಜೊತೆ ಭಾವುಕರಾಗಿ ಪದ್ಯ ಹೇಳುವಾಗ ಮಲಗಿದ ಅಜ್ಜ ಎದ್ದು ಬಂದನೇ ಎಂದು ಕಲಾಭಿಮಾನಿಗಳು ಅವರತ್ತ ನೋಡುತ್ತಿದ್ದದ್ದೂ ಕಂಡುಬಂತು.

‘ನಂಬಿದೆ ಹೇರಂಭ ನಿನ್ನನು’ ಹಾಗೂ ‘ನೀನೇ ಕುಣಿಸುವೆ ಜೀವರನು’ ಪದ್ಯ ಹೇಳುತ್ತಿದ್ದಂತೆ ಸ್ವತಃ ಕೊಳಗಿ ಸೇರಿದಂತೆ ಇತರರು ಭಾವುಕರಾದರು. ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗ, ಗಣಪತಿ ಹೆಗಡೆ ತೋಟಿಮನೆ, ವಿಘ್ನೇಶ್ವರ ಗೌಡ, ಮಂಜುನಾಥ ಕಡತೋಕ, ಮುರೂರು ನರಸಿಂಹ ಸೇರಿದಂತೆ ಇತರ ಕಲಾವಿದರು ಈ ಕ್ಷಣದಲ್ಲಿ ಸಹಕಾರ ನೀಡಿದರು.

ಅನಾಥ ಭಾವ

ಚಿಟ್ಟಾಣಿ ಅವರೊಂದಿಗೆ ನಾಯಕ ಹಾಗೂ ಪ್ರತಿ ನಾಯಕ ಪಾತ್ರಗಳಲ್ಲಿ ಮಿಂಚುತ್ತಿದ್ದ ಜಲವಳ್ಳಿ ವೆಂಕಟೇಶರಾವ್ ಅವರು ಚಿಟ್ಟಾಣಿ ಅವರ ಮನೆಯಂಗಳದಲ್ಲಿ ಬಿಕ್ಕಿದರು. ಹೇ ಆತ್ಮಬಂಧು ಹೋಗಿಬಿಟ್ಟೆಯಾ ಎಂದು ಕಣ್ಣೀರಿಟ್ಟಾಗ ಮನ ಕಲಕಿತು. ಮಾತನಾಡಲಾಗುತ್ತಿಲ್ಲ. ನೀನಿಲ್ಲದ ಬದುಕು ಹೇಗೋ. ನನಗೆ ನೀವು ನಿಮಗೆ ನಾನು ಅನಿವಾರ್ಯವಾಗಿತ್ತಲ್ಲ ಎಂದು ಭಾವುಕರಾಗಿ ಪುಷ್ಪಾಂಜಲಿ ಸಲ್ಲಿಸಿದರು.

ಕೊಳಗಿ ಅವರು ಚಿಟ್ಟಾಣಿ ಅಜ್ಜನವರ ಪಾರ್ಥೀವ ಶರೀರದ ಎದುರು ನಿಂತು ಒಂದು ಪದ್ಯ ಹೇಳಿದರೆ ಬರುವಿರಾ ಎಂದು ಕೇಳುವಂತೆ ಭಾಸವಾಗುತ್ತಿತ್ತು….

 

 

 

 

‍ಲೇಖಕರು avadhi

October 6, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: