ಉಮೇಶ ದೇಸಾಯಿ ಹೇಳುತ್ತಾರೆ- ಓದುವಿಕೆಯ ಖುಷಿಗೆ ಭಂಗ ತರಲಾರೆ

ಉಮೇಶ ದೇಸಾಯಿ

ಈ ವರ್ಶದ ಛಂದ ಪುಸ್ತಕ ಬಹುಮಾನ ಗಳಿಸಿದ ಛಾಯಾ ಭಟ್‌ ಅವರು ಬರೆದ “ಬಯಲರಸಿ ಹೊರಟವಳು” ಇತ್ತೀಚೆಗೆ ಓದಿ ಮುಗಿಸಿದೆ. ವಸುಧೇಂದ್ರ ಅವರು ಪ್ರತಿಸಲದ ಹಾಗೆ ಅಭಿಜಾತ ಪ್ರತಿಭೆ ಹೆಕ್ಕಿ ತೆಗೆಯುವಲ್ಲಿ ಈ ಸಲವೂ ಯಶಸ್ವಿಯಾಗಿದ್ದಾರೆ ಅಂತ ಅನಬಹುದು.

ಈ ಕಥಾಸ್ಫರ್ಧೆಯ ತೀರ್ಪುಗಾರರಾಗಿದ್ದ ಡಾ. ಆರ್‌ ತಾರಿಣಿ ಶುಭದಾಯಿನಿ ಅವರು ಈ ಕತೆಗಳನ್ನು ಕಿಟಕಿಯಿಂದ ಆಕಾಶ ನೋಡುವ ಕತೆಗಳು ಅಂತ ಹೇಳಿದ್ದಾರೆ. ಅವರು ಮುಂದುವರೆಯುತ್ತ ಈಗಿನ ಕನ್ನಡದ ಕತೆಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತಾಡುತ್ತಾರೆ ವಿಶೇಷವಾಗಿ ಸ್ಫರ್ಧೆಗೆ ಕಳುಹಿಸುವ ಕತೆಗಳು ವರ್ತಮಾನದ ಬವಣೆ ಬಿಂಬಿಸುತ್ತ ಪೊಲಿಟಿಕಲಿ ಕರೆಕ್ಟ ಆಗಿ ಬಿಟ್ಟ ಅಪಾಯಗಳ ಬಗ್ಗೆ ಮಾತಾಡುತ್ತಾರೆ. ಹೆಚ್ಚಿನ ಈಗಿನ ಕತೆಗಾರರು ಸಾಮಾಜಿಕವಾದ ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಬಿಂಬಿಸದೆ ಹೋದರೆ ತಾವು ಔಟಡೇಟೆಡ್‌ ಆಗುತ್ತೇವೆ ಎಂಬ ಭಯದಲ್ಲಿ ಬರೆಯುತ್ತಿದ್ದಾರೆ ಇದು ತೀರ್ಪುಗಾರರ ಅನಿಸಿಕೆ. ಅದು ನಿಜವೂ ಕೂಡ.

ಒಂದು ಇಸಂ, , ಪ್ರಭುತ್ವದ ವಿರುದ್ಧ ಮಾತಾಡುವುದು, ಜಾತಿ ಸಂಘರ್ಷ, ತಮ್ಮ ಹಿಂದಿನ ತಲೆಮಾರು ಅನುಭವಿಸಿರಬಹುದಾದ ಕಷ್ಟಗಳನ್ನು ತಮ್ಮ ಕತೆಯ ಬಂಡವಾಳ ಮಾಡಿಕೊಂಡು ಬರೆಯುತ್ತಿರುವರೇ ಅಧಿಕ.. ಹಾಗೂ ಸ್ಫರ್ಧೆಗಳಲ್ಲಿ ಇಂತಹ ಕತೆಗಳಿಗೆ ತೀರ್ಪುಗಾರರು ಮನ್ನಣೆ ಕೊಟ್ಟು ಇದೇ ಪ್ರಚಲಿತ ಹೀಗೆ ಬರೆಯಬೇಕು ಎಂಬ ಅಪಾಯಕಾರಿ ಗ್ರಹಿಕೆ ಅಥವಾ ನಿಲುವು ತರುಣ ಕತೆಗಾರರ ಮೇಲೆ ಹೇರಿದ್ದಾರೆ. ಈ ಪಲ್ಲಟದ ಕಾಲದಲ್ಲಿ ಛಾಯಾ ಭಟ್‌ ಕತೆಗಳು ಹೊಸ ಸಾಧ್ಯತೆಗಳನ್ನು ಬಿಂಬಿಸುತ್ತವೆ ಇದು ನನ್ನ ಅಭಿಪ್ರಾಯ.

10 ಕತೆಗಳಿವೆ ಈ ಸಂಕಲನದಲ್ಲಿ. ಹೆಚ್ಚಿನ ಕತೆಗಳು ಲೇಖಕಿಗೆ ಚಿರಪರಿಚಿತವಾದ ಅವರು ಬೆಳೆದು ದೊಡ್ಡವರಾದ ಹಳ್ಳಿ, ಊರು ಸುತ್ತಲು ಗಿರಕಿ ಹೊಡೆಯುತ್ತವೆ. ಅಲ್ಲಿಯ ಭಾಷೆ, ರೀತಿ ನೀತಿ ಅಲ್ಲಿಯ ಜನ ಅನುಭವಿಸಿದ ವಿಪ್ಲವಗಳನ್ನು ಬಹಳ ಶಕ್ತವಾಗಿ ಛಾಯಾಭಟ್ ತೆರೆದಿಟ್ಟಿದ್ದಾರೆ. ಕೆಲವೊಮ್ಮೆ ಅವರು ಬಳಸಿದ ಕೆಲ ಪದಗಳ ಅರ್ಥ ಕತೆಯ ಕೊನೆಗೆ ಕೊಟ್ಟಿದ್ದರೆ ಒಳ್ಳೆಯದಿತ್ತೇನೋ ಅನಿಸುತ್ತದೆ. ಯಾವೊಂದು ನಿಲುವು ಅಥವಾ ವಾದ ಇಲ್ಲಿಯ ಪಾತ್ರಗಳು ಬಿಂಬಿಸುವುದಿಲ್ಲ. ಅವರ ತಾಕಲಾಟ, ಸಂಘರ್ಷ ಎಲ್ಲ ಸಬಟಲ್‌ ಆಗಿ ಪ್ರವಹಿಸುತ್ತದೆ. ಒಣ ಘೋಷಣೆ, ಭಾಷಣಗಳಿಗೆ ಮೊರೆಹೋಗದೆ ಈ ಪಾತ್ರಗಳು ತಮ್ಮ ಒಳಗನ್ನು ಬಿಚ್ಚಿಡುತ್ತವೆ.

ಬಹಳವಾಗಿ ಕಾಡಿದ ಕತೆಗಳೆಂದರೆ “ತೊಟ್ಟು ಕಳಚಿದ ಹೂವು”, “ಆ ಕಡುಗಪ್ಪು ಕಣ್ಣುಗಳು”, “ಮಾಕಬ್ಬೆ” ಮತ್ತು “ಹೂಸುಗಂಟು”. ಕತೆಗಳ ಸಾರಾಂಶ ಹೇಳಿ ಓದುವಿಕೆಯ ಖುಷಿಗೆ ಭಂಗ ತರಲಾರೆ. ಆದರೂ ಒಂದೆರಡು ಕತೆಗಳ ಉಲ್ಲೇಖ ಮಾಡದೇ ಹೋಗುವುದು ಅಪರಾಧ ಆದೀತು.

ಈ ಕತೆಗಳಲ್ಲಿನ ಪಾತ್ರಗಳು ಎದುರಿಸುವ ಸನ್ನಿವೇಶಗಳು ಸಾಮಾನ್ಯವಾಗಿ ಕಂಡುಬಂದರೂ ಅದರ ಹಿಂದಿರುವ  ನೋವು ತಾಕುತ್ತದೆ. ಉದಾಹರಣೆಯಾಗಿ ʼತೊಟ್ಟು ಕಳಚಿದ ಹೂʼವಿನ ಅತ್ತೆಯ ಪಾತ್ರ ಕೊಟ್ಟಿಗೆಯಲ್ಲಿ ಗಂಡು ಕರು ಹುಟ್ಟಿ ಅದನ್ನು ಮನೆ ಹಿಂದಿನ ಗುಡ್ಡದ ಮೇಲೆ ಕಟ್ಟಿ ಬರುವ ಅತ್ತೆಯ ಪಾತ್ರ … ಮಾತು ನಡೆಯದಿದ್ದಾಗ ಬಾವಿಯಲ್ಲಿ ಸೇರಿಕೊಂಡು ತನ್ನ ಮಾತು ನಡೆಸಿಕೊಳ್ಳುವ ಛಾತಿ ಗಂಡುಕರು ಹುಟ್ಟಿ ಅದರ ಉಪಚಾರ ಮಾಡುವ ಬದಲು ಗುಡ್ಡದ ತುದಿಗೆ ಕಟ್ಟಿ ಬಂದರೆ ತೋಳ ನರಿಗಳಿಗೆ ಆಹಾರವಾಗಲಿ ಇದು ಅತ್ತೆಯ ವಾದ . ಇದು ಸನಾತನಿಗಳಿಗೆ ಕಣ್ಣುಕಿಸಿರಾದರೂ ಲೋಕಾರೂಢಿಯಲ್ಲಿ ಪ್ರಚಲಿತ. ಒಂದರ್ಥದಲ್ಲಿ ಬದುಕುವ ದಾರಿ ಅತ್ತೆಯ ಪಾತ್ರ ತೋರಿಸುತ್ತದೆ.

ಇನ್ನು ಹೂಸುಗಂಟು… ನಮ್ಮ ಈಗಿನ ಅರ್ಬನ್‌ ಜಂಗಲ್‌ ನ ವ್ಯಸ್ತ ಜೀವನದ ಒಂದು ತುಣುಕು… ಸಕ್ಕರೆ ಕಾಯಿಲೆಯ ನಾಯಕ ತನ್ನ ಸ್ವಂತ ಬಲದಿಂದ ಬೀಳುತ್ತಿದ್ದ ಕಂಪನಿಯನ್ನು ಮೇಲೆತ್ತಿ ನಿಲ್ಲಿಸುವ ಪರಿ ಹಾಗೆಯೇ ತನ್ನ ಅಣ್ಣ ಮಾಡಿಕೊಂಡ ಆತ್ಮಹತ್ಯೆ, ಅದಕೆ ಕಾರಣ ತನ್ನ ಅತ್ತಿಗೆಯ ಹಾದರ ಎಂದು ನಂಬಿದವ ತನ್ನ ಪತ್ನಿಯನ್ನು ಸಿಗರೇಟಿನ ದೊಂದಿಯಲ್ಲಿ ಸುಡುವ ಪರಿ…. ಕೊನೆಗೆ ಪತ್ನಿಗೆ ತನ್ನ ಓರಗಿತ್ತಿಯ ಸತ್ಯ ಅರಿವಾಗಿ ಲಕ್ವ ಹೊಡೆಸಿಕೊಂಡ ನಾಯಕನ ಮೇಲೆ ಉಂಟಾಗುವ ಪ್ರೀತಿ ಹೀಗೆ ಬದುಕು ತೆರೆದಿಡಬಹುದಾದ ಎಲ್ಲ ಅಚ್ಚರಿಗಳ ಒಂದು ಹದ ಮಿಶ್ರಣ ಈ ಕತೆ.

ಛಾಯಾಭಟ್ ನೀವು ಹೀಗೆಯೇ ಬರೆಯುತ್ತಿರಿ. ಒಂದು ಸ್ಥಾಯಿಭಾವ ಹೊಂದಿ ಕಂಗೆಟ್ಟ ಕನ್ನಡ ಕಥಾಲೋಕ ನಿಮ್ಮ ಕತೆಗಳಿಂದ ಹೊಸ ಚಿಗುರು ಪಡೆಯಲಿ.. ಇದು ಹಾರೈಕೆ.

‍ಲೇಖಕರು Avadhi

December 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: