ಅಮೃತಾಳ ದಾರಿ ನೋಡುತ್ತ ಒಂದು ವರುಷ….

ಪ್ರದೀಪ್ ರಕ್ಷಿದಿ 

ಅಮೃತಾ, ಯಾನ ಆರಂಭಿಸಿ ಒಂದು ವರುಷ. ಅಪ್ಪ ನಾನು ಕಾಲಯಾನವನ್ನೇರುತ್ತೇನೆ ಎಂದಿದ್ದಳು. ಆದರೆ ತನ್ನ ಇಹದ ಜಾಡಿನಲ್ಲಿ ಯಾರನ್ನೂ ಹಳಿಯಲಿಲ್ಲ. ಅದಕ್ಕೆ “ಅಮೃತಯಾನ” ವೇ ಸಾಕ್ಷಿ. ಎಲ್ಲವನ್ನೂ ಸ್ವೀಕರಿಸಿ ಕೊನೆಯ ದಿನವರೆಗೂ ಬದುಕಿಗಂಟಿಯೇ ಬದುಕಿದಳು. ಅವಳ ನಿರಾಕರಣೆಯಿದ್ದುದು “ಮೀಡಿಯೋಕರ್”ಗಳ ಬಗ್ಗೆ ಮಾತ್ರ. ಇದು ಉತ್ತಮವಲ್ಲದ್ದು ಎಂದು ತನಗೆ ಅನ್ನಿಸಿದ ಯಾವುದನ್ನೂ ಅವಳು ಒಪ್ಪಿಕೊಳ್ಳುತ್ತಿರಲಿಲ್ಲ
.
ಅವಳಲ್ಲಿ ಹಲವಾರು ಪ್ರಶ್ನೆಗಳಿದ್ದವು. ಕೆಲವಕ್ಕೆ ಉತ್ತರ ಪಡೆದಳು. ಇನ್ನುಕೆಲವಕ್ಕೆ ಅವಳೇ ಉತ್ತರಿಸಿ ಹೋದಳು. ಆದರೆ
ಮುಖ್ಯವಾಗಿ ಅವಳು ಪದೇ ಪದೇ ಕೇಳುತ್ತಿದ್ದ ಪ್ರಶ್ನೆ. ವಿಕಲಾಂಗರು, ತೃತೀಯ ಲಿಂಗಿಗಳು, ಅಥವಇನ್ನಾವುದೇ ರೀತಿಯ ತೊಂದರೆಗೊಳಗಾದವರು, ಸಮಾಜವನ್ನೆದುರಿಸಿಯೋ ಸಹಕಾರ ಪಡೆದೋ. ಬದುಕು ಕಟ್ಟಿಕೊಳ್ಳಬಲ್ಲರು. ಆದರೆ ನಮ್ಮ ಮನಸ್ಸೇ ನಮಗೆ ಸಹರಿಸದ ನಮ್ಮಂತವರು ಏನು ಮಾಡಬೇಕು. ಸಮಾಜಕ್ಕೆ ನಾವೊಂದು ಸಮಸ್ಯೆಯಾಗಿಯೇ ಉಳಿದುಬಿಡುತ್ತೇವೆ. ಆದರೆ ನಮ್ಮಂಥವರಿಗೆ ಸಮಾಜವೇ ಒಂದು ಸಮಸ್ಯೆಯಾಗಿರುತ್ತದೆ. ಇದಕ್ಕೆ ಪರಿಹಾರ ಹೇಗೆ?
ಇದು ಉಳಿದು ಹೋದ ಪ್ರಶ್ನೆ.

ಅಮೃತಾ ತನ್ನಂಥವರಿಗಾಗಿ ಕೆಲವು ಯೋಜನೆಗಳನ್ನು ಚಿಂತಿಸಿದ್ದಳು. ಅದಕ್ಕೊಂದು ಸರಿಯಾದ ರೂಪು ಕೊಡು. ನಿನ್ನ ಯೋಚನೆಗಳ ಬಗ್ಗೆ ಒಂದು ಕಾರ್ಯ ಯೋಜನೆಯನ್ನು ಸಿದ್ಧಪಡಿಸು ಎಂದಿದ್ದರು, ಗೆಳೆಯ ಕೆ.ಪಿ. ಸುರೇಶ. ಎರಡೇ ದಿನಗಳಲ್ಲಿ ಅಮೃತಾಳ “ಪ್ರಾಜೆಕ್ಟ್” ಸಿದ್ಧವಾಗಿತ್ತು. ತನ್ನಂತೆ ತೊಂದರೆಗೊಳಗಾದ ಹಲವು ಮಹಿಳೆಯರಿಗಾಗಿಯೇ ಒಂದು ಕರಕುಶಲ ವಸ್ತುಗಳ ಹಾಗೂ ವಿಶೇಷ ಉಡುಪುಗಳ ಘಟಕವನ್ನು ಸ್ಥಾಪಿಸುವುದು. ಅದರ ಮೂಲಕ ಒಂದಷ್ಟು ಜನರಿಗೆ ಉದ್ಯೋಗವನ್ನು ಆ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವುದು, ಅದರ ಉದ್ದೇಶ. ಅದಕ್ಕಾಗಿ ವಿವಿಧ ಬಗೆಯ ಉಡುಪುಗಳ ವಿನ್ಯಾಸವನ್ನು ಚಿತ್ರಿಸಿದಳು. ಇದರಲ್ಲಿ ವಿಶೇಷವಾಗಿ ಗರ್ಭಿಣಿಯರಿಗಾಗಿ “ಪ್ರೆಗ್ನೆನ್ಸಿ ಪಾರ್ಟಿ ವೇರ್” ಕೂಡಾ ಇತ್ತು. (ಅವಳ ಗೆಳತಿಯೊಬ್ಬಳು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಅವಳಿಗಾಗಿ ಅಮೃತಾ ಅದನ್ನು ಯೋಜಿಸಿದ್ದಳು)

ಈ ಯೋಜನೆಗೆ ಬೇಕಾದ ಬಂಡವಾಳ ಕ್ರೋಡೀಕರಣ, ಕಾನೂನಾತ್ಮಕ ಸಲಹೆಗಳನ್ನು ಪಡೆಯುವ ಬಗೆ, ಲೆಕ್ಕ ಪತ್ರಗಳ ನಿರ್ವಹಣೆ, ಮಾರಾಟ ಇತ್ಯಾದಿಗಳ ಬಗ್ಗೆಯೂ ವಿವರಗಳಿದ್ದವು. ಒಂದು ರೀತಿಯ ಉಡುಪುನ್ನು ಕಡಮೆ ಬೆಲೆಯಿಂದ ಅತಿ ಹೆಚ್ಚಿನ ಬೆಲೆಯವರೆಗೂ ಅನೇಕ ದರ್ಜೆಗಳಲ್ಲಿ ತಯಾರಿಸುವುದು, ಆದರೆ ಹೊರನೋಟದಲ್ಲಿ ಒಂದೇ ರೀತಿಯಲ್ಲಿ ಕಾಣುವಂತೆ ತಯಾರಿಸುವುದು ಅವಳ ಉದ್ದೇಶವಾಗಿತ್ತು. ನಮ್ಮ ಉಡುಪುಗಳ ಮಾರಾಟಕ್ಕೆ ದೀಪಿಕಾ ಪಡುಕೋಣೆಯನ್ನು ಪ್ರಚಾರ ಮಾಡುವಂತೆ ಕೇಳಿಕೊಳ್ಳತ್ತೇನೆ. ಯಾಕೆಂದರೆ ಆಕೆಯೂ ಮಾನಸಿಕ ಸಮಸ್ಯೆ ಅನುಭವಿಸಿದವಳು. ಆದ್ದರಿಂದ ಖಂಡಿತ ಸಹಾಯ ಮಾಡಬಹುದು ಎಂದುಕೊಂಡಿದ್ದಳು.
ಈ ರೀತಿ ಗಳಿಸಿದ ಹಣದಲ್ಲಿ ಒಂದು ಭಾಗವನ್ನು ನಮ್ಮ ರಂಗಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಬಳಸಿ ಕೊಳ್ಳೊಣ ಎಂದಿದ್ದಳು. “ಅಪ್ಪ ನನಗೆ ಆಡಳಿತದಲ್ಲಿ ಅನುಭವ ಇಲ್ಲ . ಅದನ್ನು ಅಣ್ಣಯ್ಯ ನೋಡಿಕೊಳ್ಳಲಿ, ಕ್ರಿಯೇಟಿವ್ ಸೈಡನ್ನು ನಾನು ನೋಡಿಕೊಳ್ಳುತ್ತೇನೆ” ಎಂದಿದ್ದಳು.
.
ಅವಳ ಕನಸುಗಳು ಅವಳಷ್ಟೇ ದೊಡ್ಡವು. ಅವಳ ಕಣ್ಣುಗಳಷ್ಟೇ ವಿಶಾಲವಾದವು.
ಎಲ್ಲವನ್ನು ನಮ್ಮ ಹೆಗಲಿಗೇರಿಸಿ ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟುಬಿಟ್ಟಳು.
“ಅಪ್ಪ ಇದುವರೆಗೆ ಅಮೃತಾ ರಕ್ಷಿದಿ ಪ್ರಸಾದ್ ರಕ್ಷಿದಿ ಮಗಳು. ನನ್ನ ಪುಸ್ತಕ ಬಿಡುಗಡೆಯಾಗಲಿ ಆರು ತಿಂಗಳಲ್ಲಿ ನೀವು ಅಮೃತಾರಕ್ಷಿದಿಯ ಅಪ್ಪ ಎನಿಸಿಕೊಳ್ಳುತ್ತೀರಿ.” ಎಂದು ಆತ್ಮ ವಿಶ್ವಾಸದಿಂದ ಕಾಲರ್ ಹಾರಿಸಿ ನಕ್ಕಿದ್ದಳು.
ಹೌದು ಅಮೃತಯಾನ ಬಿಡುಗಡೆಯಾಗಿ ಆರುತಿಂಗಳಲ್ಲೇ ಅವಳಿಗೆ 2017 ಅತ್ಯುತ್ತಮ ಲೇಖಕಿಯೆಂದು ಶಿವಮೊಗ್ಗೆಯ ಕರ್ನಾಟಕ ಸಂಘದಿಂದ ಎಂ.ಕೆ.ಇಂದಿರಾ ಪ್ರಶಸ್ತಿ ದೊರೆಯಿತು. ಅಮೃತಾ ತನ್ನ ಮಾತನ್ನು ನಿಜಗೊಳಿಸಿದ್ದಳು.

ಚಿಪ್ಕೋ ಚಳುವಳಿಯ ಮೂಲ, ಮಾತೆ ಅಮೃತಾ ದೇವಿಯ ಹೆಸರನ್ನೇ ಅವಳಿಗಿಟ್ಟಿದ್ದೆವು. ನಮ್ಮಪ್ಪ ತನ್ನ ಮಕ್ಕಳಿಗೆ ಜನ್ಮ ಕುಂಡಲಿಯನ್ನೇ ಬರೆಸಿರಲಿಲ್ಲ. ನಮ್ಮಪ್ಪನಿಗೆ ಅದರಲ್ಲಿ ನಂಬಿಕೆಯೇ ಇರಲಿಲ್ಲ, ನನಗೂ ಇಲ್ಲ. ಆದರೆ ನನ್ನ ಪತ್ನಿ ಅಮೃತಾಳ ಜನ್ಮ ಕುಂಡಲಿ ಬರೆಸಿದ್ದಳು. ಜೋಯಿಸರ ಪ್ರಕಾರ ಅಮೃತಾಳದ್ದು ಅತ್ಯದ್ಭುತ ಜನ್ಮಕುಂಡಲಿ ಹಲವು ದಶಕಗಳ ಆಯಸ್ಸು ಕೂಡಾ !

ಅಮೃತಾಳ ಜನ್ಮ ನಾಮ “ಅಮೃತಾ ಗೌರಿ” ನನ್ನಮ್ಮನೂ ಗೌರಿ.
ಅಮೃತಾ ಹೋದ ಮರುದಿನ ಇನ್ನೊಬ್ಬ ಗೌರಿಯನ್ನು ದುಷ್ಟರು ಇಲ್ಲವಾಗಿಸಿದರು.
ಬುದ್ಧ ಹೇಳಿದ್ದಾನೆ ಜೀವಕ್ಕೊಂದು “ಪರ್ಪಸ್” ಇದೆ ಅದು ಮುಗಿದ ನಂತರ ಹೋಗಬೇಕು. ಎಂದಿದ್ದಳು, ಅಮೃತಾ.
ಹೌದು ಅವಳಿಗೆ ಅವಳ “ಪರ್ಪಸ್” ಗೊತ್ತಿತ್ತೇನೋ… ನಮಗೆ?

‍ಲೇಖಕರು Avadhi

September 24, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: