ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ..

ನೆನಪು 20
ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ

ಕುರುಕ್ಷೇತ್ರ ನಾಟಕದಲ್ಲಿ ‘ಕೌರವ’ ಅಣ್ಣನಿಗೆ ಹೆಸರು ತಂದು ಕೊಟ್ಟ ಪಾತ್ರ. ಅಕ್ಕ ಯಾವಾಗಲೂ ಅಣ್ಣನ ಪಾತ್ರವನ್ನು ವರ್ಣಿಸುತ್ತಿದ್ದಳು. ಮಾಧವಿ ಕೂಡ ಅಣ್ಣನ ನಟನೆಯ ಸುದ್ದಿ ಬಂದಾಗಲೆಲ್ಲಾ “ಎತ್ತರದ ನಿಲುವು, ಸುಂದರ ಕಿರೀಟ, ಪಾತ್ರಕೊಪ್ಪುವ ಸ್ವಲ್ಪ ಕೋಲುಮುಖ, ಹಿಂದೆ ಇಳಿ ಬಿಟ್ಟ ಹಸಿರು ಬಣ್ಣದ ಸೀರೆ, ಸಿಂಹ ಧ್ವನಿ, ಅಲ್ಲಿಂದ ನನಗೆ ಕೌರವನನ್ನು ಕಂಡರೆ ಬಹು ಇಷ್ಟವಾಯಿತು” ಎಂದು ಹೂಬೇ ಹೂಬಾಗಿ ವರ್ಣಿಸುತ್ತಿದ್ದಳು. ಅವಳೊಳಗೆ ಒಬ್ಬ ಕತೆಗಾರನೂ ಇರುವುದರಿಂದ ಆತನ ವರ್ಣನೆಯನ್ನು ಅವಳ ಬಾಯಿಯಿಂದಲೇ ಕೇಳಬೇಕು. ಈ ನಾಟಕ ನಮ್ಮೂರಿನಲ್ಲೇ ಆಗಿದ್ದು. ನಾನು ತುಂಬಾ ಸಣ್ಣ ಇದ್ದೆ. ಬಹುಶಃ ಆತನ ಪಾತ್ರ ಸ್ಟೇಜಿಗೆ ಬರುವುದರೊಳಗೆ ನಿದ್ದೆ ಹೋಗಿರಬೇಕು.

ಆ ನಂತರ ಕಲ್ಲಗ ಗೋವಿಂದ ಹೆಗಡೆಯವರು ನಿರ್ದೇಶಿಸಿದ ಹರಿಶ್ಚಂದ್ರ ನಾಟಕದಲ್ಲಿ ಬ್ರಾಹ್ಮಣನ ಹೆಂಡತಿ ದುರ್ಗ ದುರ್ಗಿಯ ಪಾತ್ರ. ಹೀಗೆ ಪೌರಾಣಿಕ ನಾಟಕದಲ್ಲಿ ಆತ ಭಾಗವಹಿಸಿದ್ದ.

ಆತ ತಾಳಮದ್ದಲೆಯ ಅರ್ಥ ಹೇಳುತ್ತಿದ್ದನಾದರೂ ಯಕ್ಷಗಾನದಲ್ಲಿ ಪಾತ್ರ ಮಾಡಿರಲಿಲ್ಲ. ಯಾಕೆಂದರೆ ಅವನಿಗೆ ಕುಣಿಯಲು ಬರುತ್ತಿರಲಿಲ್ಲ. ಬಹುಶಃ ತಾಳ ಜ್ಞಾನ ಇರಲಿಲ್ಲ. ಸಾಮಾನ್ಯವಾಗಿ ‘ಭಂಡಾರಿ’ ಜಾತಿಯವನು ಪಂಚವಾದ್ಯ ಮಾಡುವವರಾಗಿದ್ರಿಂದ ತಾಳ ಲಯಗಳು ರಕ್ತಗತವಾಗಿ ಇರಬೇಕಾಗಿತ್ತು. ಆದರೆ ಈತನಿಗೆ ಇರಲಿಲ್ಲ. ಈತನ ಮನೆಯವರೆಲ್ಲಾ ವಾದ್ಯ ಮಾಡುವವರೆ ಬಹುಶಃ ಈತನ ತಂದೆಯೂ ವಾದ್ಯ ಮಾಡುತ್ತಿರಲಿಲ್ಲವೆಂದು ಕಾಣುತ್ತದೆ. ಹಾಗಾಗಿ ಆತ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಮಾಡಲಾಗಲಿಲ್ಲ. ಒಮ್ಮೆ ಮುಂಬೈನಲ್ಲಿ ಸಂದಾನದ ವಿಧುರನ ಪಾತ್ರ ಮಾಡಿದ್ದ ನೆನಪು ಮಾಡುಕೊಳ್ಳುತ್ತಿದ್ದ. ಸಾಮಾನ್ಯವಾಗಿ ಯಕ್ಷಗಾನದಲ್ಲಿ ವಿಧುರ, ಸಂಜಯ, ನಾರದ ಮುಂತಾದ ಪಾತ್ರಗಳಿಗೆ ಹೆಚ್ಚು ಕುಣಿತ ಇರುವುದಿಲ್ಲ. ಕಡಿಮೆ ಕುಣಿದರೂ ಮಾತಿನಲ್ಲಿ ತುಂಬಿ ಹೋಗುತ್ತದೆ.

ನಮ್ಮೂರಲ್ಲಿ ಒಂದು ದೊಡ್ಡ ನಾಟಕ ತಂಡವೇ ಇತ್ತು. ಒಳ್ಳೆಯ ಸಂಗೀತಗಾರರೂ, ನಿರ್ದೇಶಕರೂ ಆದ ಗೋವಿಂದ ಹೆಗಡೆಯವರು, ಮಹಾಬಲ ಹೆಗಡೆ, ಎನ್.ಕೆ. ಹೆಗಡೆ, ವಿಷ್ಣು ಭಾಗ್ವತ. ಬಿ.ವಿ ಭಂಡಾರಿ, ಮಂಜ ಭಂಡಾರಿ, ಹಲವರು ಸೇರಿ ಒಂದು ನಾಟಕ ತಂಡವನ್ನೇ ಕಟ್ಟಿಕೊಂಡಿದ್ದರು. 4 ವಾರಗಳ ತಾಲೀಮಿನ ನಂತರವೇ ಅವರೆಲ್ಲಾ ನಾಟಕ ಮಾಡುವುದು. ಕುರುಕ್ಷೇತ್ರ, ಅಂಧಃಯುಗ, ಹರೀಶ್ಚಂದ್ರ ಮುಂತಾದ ನಾಟಕದಲ್ಲಿ ಎದುರು ಕುಳಿತವರು ಕಣ್ಣೀರು ಹಾಕುತ್ತಿದ್ದರು. ಅದೊಂದು ವೈಭವದ ಕಾಲ. ಶೂದ್ರರು, ಬ್ರಾಹ್ಮಣರು ಒಟ್ಟಾಗಿದ್ದ ಕಾಲ ಅದು.

ಆನಂತರ ರೂಢಿಸಿಕೊಂಡ ವೈಚಾರಿಕತೆ ಇಲ್ಲಿಂದ ಅವನನ್ನು ಪ್ರತ್ಯೇಕಿಸಿರಬೇಕು ಅಣ್ಣನನ್ನು ಕಾರ್ಯ ಕ್ಷೇತ್ರ ಊರಿಂದ ಆಚೆಗೆ ಹೆಚ್ಚು ವಿಸ್ತರಿಸಲ್ಪಟ್ಟ ಮೇಲೆ ಹೊನ್ನಾವರದಲ್ಲಿ ‘ನಾಟಕ’ ಮಾಡಲು ಪ್ರಾರಂಭಿಸಿದರು. ವಿಚಾರ ಪ್ರಧಾನವಾದ ಹೊಸ ಅಲೆ ನಾಟಕಗಳು ಆಗ ಪ್ರಸಿದ್ಧಿಗೆ ಬಂದವು. ಡಾ. ಎನ್.ಆರ್. ನಾಯಕರು ಬರೆದ ನಾಟಕದಲ್ಲಿ ಈತನೂ ಪಾತ್ರ ಮಾಡಿದ್ದನಂತೆ. ಹೊನ್ನಾವರದ ಜಿ. ಯು. ಭಟ್ಟ ಅವರೊಂದಿಗೆ ಸೇರಿ ಗರ್ಭಗುಡಿ ನಾಟಕದಲ್ಲಿ ಪಾತ್ರ ಮಾಡಿದ ಫೋಟೋವನ್ನು ಇತ್ತೀಚೆಗೆ ಜಿ.ಯು. ಭಟ್ಟ ಅವರು ಕಳುಹಿಸಿದರು. ಅರಸಿದರೂ ಇನ್ನೂ ಹಲವು ಸಿಗಬಹುದೇನೋ!

ಹೊನ್ನಾವರದಲ್ಲಿ ‘ಕರ್ನಾಟಕ ಸಂಘ’ ಚುರುಕಾಗಿ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಕನಿಷ್ಟ ವರ್ಷಕ್ಕೊಂದು ನಾಟಕ ನಡೆಯುತ್ತಿತ್ತು. ಅಣ್ಣ, ಜಿ.ಎಸ್. ಅವಧಾನಿ, ಜಿ.ಯು. ಭಟ್ಟ, ಎ.ಕೆ. ಶೇಟ್, ಅವರ ತಮ್ಮ, ವಾಳ್ಕೆ, ಡಿ.ಎಂ. ನಾಯ್ಕ, ಎನ್.ಎಂ. ನಾಯ್ಕ ಮುಗ್ವಾ…… ಹೀಗೆ ಹಲವರ ತಂಡ ಇದು. ಅಂಧಃಯುಗ, ಬೇಲಿ ಮತ್ತು ಹೊಲ, ಕಂಬಾರರ…… ಮುಂತಾದ ನಾಟಕಗಳನ್ನು ಆಡಿದ್ದರು. ಇದಕ್ಕೆ ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಪ್ರಭು ಮುಂತಾದವರು ಬಂದು ಶಿಬಿರ ನಡೆಸುತ್ತಿದ್ದರು.

ಆಗ ನಾನು ಅಣ್ಣನೊಂದಿಗೆ ಕೆಲವು ದಿನ ತಾರೀಮು ನೋಡಲು ಹೋಗುತ್ತಿದ್ದೆ. ರಾತ್ರಿ 12-1 ಗಂಟೆಗೆ ಯಾರದೋ ಸೈಕಲ್ ತೆಗೆದುಕೊಂಡು ಅಣ್ಣ ನನ್ನನ್ನು ಕೂಡಿಸಿಕೊಂಡು ಬರ್ತಿದ್ದ. ಇನ್ನು ಕೆಲವು ದಿನ ಹೊನ್ನಾವರದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ಉಳಿದಿದ್ದಿದೆ. ಒಂದೋ ಎರಡೋ ದಿನ ಶಿಕ್ಷಕರಾದ ಮುಗ್ರಾದ ಎನ್.ಎಂ. ನಾಯ್ಕರ ಮನೆಯಲ್ಲಿ ಊಟ ಮಾಡಿ ಅಲ್ಲೇ ಮಲಗಿದೆ. ಮೊದಲ ಬಾರಿಗೆ ಸಂಡಸಿನ ಬೇಸಿನ್ ಮತ್ತು ನಲ್ಲಿ, ಬೆಳೆ ಬೇಸಿನ್ ನೋಡಿದ್ದು ಅಲ್ಲಿಯೆ ಅಹುಶಃ ಅವರು ಪಿ.ಡಬ್ಲ್ಯೂಡಿ ಕ್ವಾಟ್ರ್ರಸ್‍ನಲ್ಲಿದ್ದರು ಅಂತ ಕಾಣುತ್ತದೆ. ಒಮ್ಮೆ ರಾತ್ರಿ ಅಲ್ಲೇ ಉಳಿದರೆ ಬೆಳಿಗ್ಗೆ 7 ಗಂಟೆಗೆ ಅಣ್ಣ ಮನೆಗೆ ಬರುತ್ತಿದ್ದ. ಯಾಕೆಂದರೆ ಬೆಳಿಗ್ಗೆ ಮತ್ತೆ ಶಾಲೆಗೆ ಹೋಗಬೇಕು. ಏನೇ ಆದರೂ ಶಾಲೆ ತಪ್ಪಿಸುತ್ತಿರಲಿಲ್ಲ.

ಹಿಂದೆಲ್ಲಾ ನಾಟಕ ಟಿಕೇಟಿಟ್ಟು ನಡೆಯುತ್ತಿತ್ತು. ಆನರ ಸಂಪಾದನೆ ಕಡಿಮೆ ಇದ್ದರೂ ಹಣಕೊಟ್ಟು ನಾಟಕ ನೋಡುತ್ತಿದ್ದರು. ಆದತೆ ಈಗ ಹಣಕೊಟ್ಟರೂ ನಾಟಕ ನೋಡಲು ಬರುವವರು ಕಡಿಮೆ ಆಗಿದೆ. ನೋಮಿನಲ್ಲಾಗಿ ಹಣ ನೀಡಿ ಟಿಕೇಟ್ ಪಡೆದು ನಾಟಕ ನೋಡಲು ಬರುವುದನ್ನು ಪ್ರಾಕ್ಟೀಸ್ ಮಾಡಿಸಬೇಕಾಗಿದೆ.
ನಾವೆಲ್ಲಾ ಕಾಲೇಜು ದಿನಗಳಲ್ಲಿ ನಾಟಕ ರಂಗಭೂಮಿಯಲ್ಲಿ ಒಂದಿಷ್ಟು ಕೆಲಸ ಮಾಡಿದ್ದಕ್ಕೆ ಬಹುಶಃ ಇವರೆಲ್ಲರ ಪ್ರಭಾವ ಕೂಡ ಕಾರಣವಾಗಿರಬಹುದು.

 

‍ಲೇಖಕರು avadhi

August 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: