ಕೆ.ಜಿ.ಎಫ್ +  ಬೆಲ್‍ಬಾಟಮ್  = ಅವನೇ ಶ್ರೀಮನ್ನಾರಾಯಣ

 ಗೊರೂರು ಶಿವೇಶ್

ಮಾನವನ ಆಸೆಯ ಪ್ರತೀಕವಾದ ನಿಧಿಯ ಬಗೆಗಿನ ಕುತೂಹಲಕ್ಕೆ ಶತಶತಮಾನಗಳ ಇತಿಹಾಸವಿದೆ. ಹಳದಿ ಲೋಹವನ್ನರಸುತ್ತಾ ಹೊರಟವರ ಬಗ್ಗೆ ಜಗತ್ತಿನ ನೂರಾರು ಭಾಷೆಗಳಲ್ಲಿ ಕಥೆಗಳು, ಕಾದಂಬರಿಗಳು, ಚಲನಚಿತ್ರಗಳು ಬಂದುಹೋಗಿವೆ. ಇಂಗ್ಲೀಷಿನ ‘ಮೆಕನಾಸ್ ಗೋಲ್ಡ್’, ‘ರೈಡರ್ಸ್ ಆಫ್ ದಿ ಲಾಸ್ಟ್ ಆರ್ಕ್’, ‘ಕಿಂಗ್ ಸಾಲೋಮನ್ ಮೈನ್’್ಸ, ‘ಮಮ್ಮಿ’ ಮುಂತಾದ ಚಿತ್ರಗಳ ಜೊತೆಗೆ ಕನ್ನಡದಲ್ಲಿಯು ಗಂಡಬೇರುಂಡ, ವಜ್ರದ ಜಲಪಾತ, ಕುದುರೆಮುಖದಂಥ ಚಿತ್ರಗಳು ತೆರೆಕಂಡಿವೆ.

ಇಂಗ್ಲೀಷಿನಲ್ಲಿನ ಚಿತ್ರಗಳು ಅಪಾರ ಯಶಸ್ಸನ್ನು ಸಾಧಿಸಿವೆಯಾದರೂ ಕನ್ನಡದ ಚಿತ್ರಗಳು ವೈಫಲ್ಯ ಅನುಭವಿಸಿವೆ. ಇದಕ್ಕೆ ಸಾಮಾಜಿಕ ಚಿತ್ರಗಳ, ಮಾನವೀಯ ಅನುಬಂಧದ ಚಿತ್ರಗಳನ್ನು ಇಷ್ಟಪಡುವ ಕನ್ನಡದ ಪ್ರೇಕ್ಷಕನಿಗೆ ಇಂಥ ಚಿತ್ರಗಳು ಅರಗುವುದಿಲ್ಲವೆ ಹೊರತು ಚಿನ್ನದ ಮೇಲಿನ ಅಭಿಮಾನ ಅವರಿಗಿಂತ ಕೊಂಚ ಹೆಚ್ಚೆ.

ಇನ್ನೂ ಬಹುತೇಕ ಚಿತ್ರಗಳ ಕಥಾಸಾರಾಂಶದಲ್ಲಿ ಬದಲಾವಣೆ ಅಷ್ಟಿಲ್ಲ. ಆಕಸ್ಮಿಕವಾಗಿ ದೊರೆಯುವ ನಿಧಿಯ ನಕ್ಷೆ, ಹಣ, ಚಿನ್ನದ ಆಸೆಗೆ ಒಂದಾಗುವ ಎರಡು-ಮೂರು ದುಷ್ಟ ತಂಡಗಳು, ಇವುಗಳ ನಡುವೆ ಅನಿವಾರ್ಯವಾಗಿ ಸಿಕ್ಕಿಬೀಳುವ  ನಾಯಕ ನಾಯಕಿಯರು, ನಿಧಿಯನ್ನರಸುತ್ತಾ ಹೊರಟ ಸಂದರ್ಭದಲ್ಲಿ ನಡೆವ ರೋಚಕ ಘಟನೆಗಳು, ಹಂತ-ಹಂತವಾಗಿ ಒಬ್ಬೊಬ್ಬರೆ ಸಾವನ್ನಪ್ಪುತ್ತಾ ಕೊನೆಗೆ ನಿಧಿಯ ಸ್ಥಾನಕ್ಕೆ ತಲುಪುವ ಅಳಿದುಳಿದ ಮಂದಿಗೆ ಎದುರಾಗುವ ನಿಧಿ, ಆ ನಿಧಿ ತನಗೆ ದಕ್ಕಲೆಂದು ಪರಸ್ಪರ ತಮ್ಮಲ್ಲೆ ಬಡಿದಾಡುವ ಖಳರು, ಕೊನೆಗೆ ಸಂಭವಿಸುವ ಭೂಕಂಪ, ಇದರಿಂದಾಗಿ ಇಡಿ ಪ್ರದೇಶ, ಬೆಟ್ಟ, ಗವಿ ಕುಸಿಯುತ್ತಾ ಹೋದಂತೆ ಒಬ್ಬೊಬ್ಬರೇ ವಿನಾಶ ಹೊಂದಿ ಕೊನೆಗೆ ಬದುಕಿದರೆ ಸಾಕೆಂದು ನಿಧಿಯನ್ನು ಅಲ್ಲೆ ಬಿಟ್ಟು ಆಚೆ ಬರುವ ನಾಯಕ, ನಾಯಕಿ ಜೊತೆಗೆ ಒಂದಿಬ್ಬರು ಸಹಚರರು ಬದುಕುಳಿಯುತ್ತಾರೆ. ಒಟ್ಟಾರೆ ನಿಧಿಯ ಆಸೆಗೆ ಬಿದ್ದವರು, ನಿಧಿ ಕಾಯುವ ಸರ್ಪದಸಂಕೇತದಂತೆ ಅಪಾಯಕಾರಿ ಸರ್ಪಚುಂಬನ ಮಾಡುವವರೆ ಸರಿ.

ಇನ್ನೂ ನಿಧಿಯ ಕುರಿತು ಜನಪದರಲ್ಲಿ ಕಥೆಗಳು, ನಂಬಿಕೆಗಳು ಅಷ್ಟಿಷ್ಟಲ್ಲ. ಏಳು ತಲೆ ಸರ್ಪವು ನಿಧಿ ಕಾಯುವುದರ ಕುರಿತು, ನಿಧಿ ಪಡೆಯಲು ಬಲಿ ಕೊಡುವುದರ ಬಗೆಗಿನ ನಂಬಿಕೆಗಳ ಬಗ್ಗೆ ಅನೇಕ ಕಥೆಗಳು ಇವೆ. ಈ ಮೌಢ್ಯವೂ ಹೇಗೆ ಬೆಳೆದಿದೆಯೆಂದರೆ ಇಂದಿಗೂ ಅಲ್ಲೊಂದು, ಇಲ್ಲೊಂದು ಬಲಿಕೊಟ್ಟ ಪ್ರಸಂಗಗಳು ವರದಿಯಾಗುತ್ತಲೆ ಇವೆ.

ಹಳ್ಳಿಯ ಮನೆ-ಮನೆಗಳಲ್ಲಿ, ಮನೆ, ಹೊಲದಲ್ಲಿ ನಿಧಿ ಹೂತವರ ಬಗೆಗಿನ ಕಥೆಗಳು, ಸತ್ಯ, ಸುಳ್ಳು, ಊಹೆ ಬುರುಡೆಗಳು ಓಡಾಡುತ್ತಲೆ ಇರುತ್ತವೆ. ನಲ್ವತ್ತು – ಐವತ್ತು ವರ್ಷಗಳ ಹಿಂದೆ ಬ್ಯಾಂಕ್‍ಗಳು ಇಲ್ಲದೆ ಇದ್ದ ಸಮಯದಲ್ಲಿ ಜನರು ತಮ್ಮ ಹಣ, ಚಿನ್ನದ ವಸ್ತುಗಳನ್ನು ಕಾಪಾಡಲು ಭೂಮಿಯನ್ನು ಆಶ್ರಯಿಸಿದ್ದರು. ಈ ರೀತಿ ಕಾಯ್ದಿಟ್ಟ ನಿಧಿಯನ್ನು ಸಾಯುವ ಮುನ್ನ ವಾರಸುದಾರರಿಗೆ ಹೇಳದೆ ಹೋದದ್ದು ಮುಂದೆ ಇತರರಲ್ಲಿ ಕುರಿತ ಕುತೂಹಲ ಆಸೆಗಳನ್ನು ಬೆಳಸುತ್ತಾ ಹೋಯಿತು.

ಇನ್ನು  ನಿದಿಯನ್ನು ಪತ್ತೆ ಹಚ್ಚಲು ಸರಳವಾಗಿ ಅರ್ಥವಾಗದ ಒಗಟಿನ ರೂಪದ ಕೋಡ್‍ಗಳು ಅವುಗಳನ್ನು ಡಿಕೋಡ್ ಮಾಡಹೊರಟಾಗ ಉಂಟಾಗುವ ರೋಚಕತೆ ವಿಶೇಷವಾದದ್ದು. ಇಂತಹ ಎಲ್ಲ ತರಲೆ ತಾಪತ್ರಯ, ಸಾಹಸ ಮೋಸ, ಕುಚೋದ್ಯಗಳನ್ನೊಳಗೊಂಡ ಪ್ರೇಕ್ಷಕರಲ್ಲಿ  ಬಿಡುಗಡೆಗೆ ಮುನ್ನ ಅಪಾರ ನಿರೀಕ್ಷೆಯನ್ನು ಉಂಟುಮಾಡಿದ್ದ ‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾಗಿದೆ.

3 ವರ್ಷಗಳ ಪರಿಶ್ರಮ ಹಾಗೂ ದೊಡ್ಡ  ಬ್ರೇಕನ್ನು ಪಡೆದು ರಕ್ಷಿತ್‍ಶೆಟ್ಟಿ  ತನ್ನ ‘ಸೆವೆನ್ ಆಡ್ಸ್’ ತಂಡದ ಗೆಳೆಯರ ಮೂಲಕ ‘ಕಿರಿಕ್‍ಪಾರ್ಟಿ’ಯ ನಂತರ ಮತ್ತೊಮ್ಮೆ ತೆರೆಗೆ ದೊಡ್ಡ ಮಟ್ಟದಲ್ಲಿ ಅಪ್ಪಳಿಸಿದ್ದಾರೆ.  ಆ ಚಿತ್ರದಲ್ಲಿನ ಬಹುತೇಕ ಪಾತ್ರದಾರಿಗಳು ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ಹದಿಹರೆಯದ ಕಾಲೇಜಿನ ಹುಡುಗರ ಉತ್ಸಾಹ, ಉಲ್ಲಾಸ, ಹುಡುಗಾಟತನ, ಪ್ರೇಮ, ನೋವು-ನಲಿವು, ಹತಾಶೆ, ಜೊತೆಗೆ ಹಾಸ್ಟೆಲ್ ಜೀವನದ ಹಾಸ್ಯದ ಹೂರಣದ ಚಿತ್ರ ಅಪಾರ ಜನವೃಂದವನ್ನು ಆಕರ್ಷಿಸಿತ್ತು.

ಆದರೆ ಈ ಚಿತ್ರ ಅದಕ್ಕೆ ಸಂಪೂರ್ಣ ವಿರುದ್ಧವಾದ ಚಿತ್ರ. ಇಲ್ಲಿ ದರೋಡೆಯಾದ ಲೂಟಿಯ ಬೆನ್ನು ಹತ್ತಿದ ದರೋಡೆಕೋರ ರಾಮರಾಮ ಮತ್ತು ಅವನ ಮಕ್ಕಳು ಜಯರಾಮ ಮತ್ತು ತುಕರಾಮರು. ಇನ್ನು ದರೋಡೆಕಾರರ ಪಾಳಯದ ನಾಯಕತ್ವಕ್ಕಾಗಿ ಇಬ್ಬರ ಮಕ್ಕಳ ಹೋರಾಟ. ಇವರಿಬ್ಬರ ನಡುವೆ ವೈಮನಸ್ಸನನ್ನು ತನ್ನ ಅನುಕೂಲತೆಗೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಾ ಹೋಗುವ ಚಾಣಾಕ್ಷ ಇನ್ಸ್ ಪೆಕ್ಟರ್ ನಾರಾಯಣ ಈ ಚಿತ್ರದ ಪ್ರಮುಖ ಪಾತ್ರಗಳೆನ್ನಬಹುದು.

ರಾಮರಾಮನಿಗೆ ಸಿಕ್ಕು ಹತರಾಗುವ ನಾಟಕದ ಲೂಟಿ ತಂಡದ ಮಂದಿಯಲ್ಲಿ ಉಳಿದವ ಬ್ಯಾಂಡ್ ಮಾಸ್ಟರ್ ಒಬ್ಬನೇ. ಆತ ಪದೇ ಪದೇ ಉದ್ಘರಿಸುವ ‘ರಾಮರಾಮ ತುಸು ದಕ್ಷ ಜಾರಿಪ’ ಎಂಬ ಹಾಡಿನ ಸಾಲುಗಳಲ್ಲಿ ಲೂಟಿಯ ಮೂಲ ಅಡಗಿದೆ. ಅದನ್ನು ಭಿನ್ನ ಭಿನ್ನ ರೀತಿಯಲ್ಲಿ ಬಿಡಿಸುವ ಪ್ರಯತ್ನ ಚಿತ್ರದುದ್ದಕ್ಕೂ ರೋಚಕವಾಗಿ ಸಾಗುತ್ತದೆ.ಆದರೆ ಚಿತ್ರದ ಅಂತ್ಯ ಮಾತ್ರ ಉಳಿದ ಟ್ರೆಷರ್ ಹಂಟಿಂಗ್ ಸಿನಿಮಾಗಳಂತೆ ಸಿದ್ದಸೂತ್ರದ ಆಚೆಗೆ ಬರಲಾರದೆ ನಿರ್ದೇಶಕರ ಗೊಂದಲವೋ ಅಥವಾ ಅದಕ್ಕೆ ಬೇರೆ ಅಂತ್ಯ ನಿರ್ದೇಶಕರಿಗೆ ಹೊಳೆಯಲಿಲ್ಲವೋ ಅನಿಸುತ್ತದೆ.

ರಾಜಕುಮಾರ್ ಅಭಿನಯದ ‘ಗುರಿ’ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸಿನಿಮಾ ಪರದೆಯನ್ನು ಹರಿದು ಬರುವ ನಾಯಕನನ್ನು ನೆನಪಿಸುವ ರೀತಿಯಲ್ಲಿ ರಕ್ಷಿತ್ ಶೆಟ್ಟಿಯ ಎಂಟ್ರಿಯಾಗಿದೆ. ಭಕ್ತ ಪ್ರಹ್ಲಾದ ಸಿನಿಮಾ ಹಳೆಯ ಟಾಕೀಸ್‍ನಲ್ಲಿ ಕಾಣಿಸುತ್ತಿರುವ ಸಂದರ್ಭ ಎಲ್ಲಿಹನೋ ನಿನ್ನ ಹರಿ ಎಂಬ ಹಿರಣ್ಯ ಕಶ್ಯಪುವಿನ ಮಾತಿಗೆ ಹರಿಯನ್ನು ಕಂಬದಲ್ಲಿ ಪ್ರಹ್ಲಾದ ತೋರಿಸುವ ಸಂದರ್ಭದಲ್ಲಿ ತೆರೆಯನ್ನು ಹರಿದು ನುಗ್ಗಿ ಬರುವ ಆತನ ಕಾಮಿಡಿ ಮಿಶ್ರಿತ ಸ್ಟೈಲಿಶ್ ನಟನೆ ಹಾಗೂ ಇನ್ನಿತರ ಚರ್ಯೆಗಳು ಇತ್ತೀಚೆಗೆ ತೆರೆಕಂಡ ‘ದಾಬಾಂಗ್’ ಸಿರೀಸ್‍ನಲ್ಲಿನ  ಕಾಮಿಡಿ ಇನ್ಸ್‍ಪೆಕ್ಟರ್‍ನನ್ನು ನೆನಪಿಸುತ್ತದೆ. ಚಿತ್ರದ ಮೇಕಿಂಗ್ ಹೊರಾಂಗಣ  ವೇಷಭೂಷಣ, ಕಲೆ  ಕೆ.ಜಿಎಫ್  ಚಿತ್ರವನ್ನು ನೆನಪಿಸಿದರೆ ಕಥಾ ಹಂದರವು ಇತ್ತೀಚೆಗೆ ಈ ವರ್ಷ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿಯನದ ಬೆಲ್‍ಬಾಟಮ್‍ನ್ನು ನೆನಪಿಸುತ್ತದೆ.

ಸಾಂಪ್ರದಾಯಕ ಕನ್ನಡ ಚಿತ್ರರಂಗಕ್ಕೆ ಹೊಸದೆನಿಸುವ ನಿರೂಪಣಾ ಶೈಲಿ, ಕಥಾಹಂದರ  ಪಾತ್ರದಾರಿಗಳ ಆಯ್ಕೆ ನಿರ್ಮಾಪಕ ಹಾಗೂ ನಿರ್ದೇಶಕರು ತುಂಬಾ ರಿಸ್ಕ್ ತೆಗೆದುಕೊಂಡೇ ಚಿತ್ರ ನಿರ್ಮಿಸಿದ್ದಾರೆ ಎನಿಸದಿರದು. 3 ಗಂಟೆಗೂ ಮೀರಿದ ಸುದೀರ್ಘ ಸಿನಿಮಾ ಬಹುತೇಕ ಹೊಸ ಪಾತ್ರದಾರಿಗಳು 70-80 ದಶಕದ ಹಾಲಿವುಡ್ ಶೈಲಿಯ ಮೇಕಿಂಗ್ ಎಲ್ಲಾ ರೀತಿಯ ಪ್ರೇಕ್ಷಕರನ್ನು ಸೆಳೆಯುತ್ತದೆಯೆ ಕಾದು ನೋಡಬೇಕಾಗಿದೆ. ರಕ್ಷಿತ್ ಶೆಟ್ಟಿ ತಮ್ಮ ವಿಭಿನ್ನ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಈ ಪಾತ್ರಕ್ಕಾಗಿ  ಅಮೂಲ್ಯವಾದ 3 ವರ್ಷಗಳನ್ನು ವ್ಯಯಿಸಿರುವುದು ಅವರ ಆಸಕ್ತಿ ಮತ್ತು ಬದ್ಧತೆಯನ್ನು ಸೂಚಿಸುವುದಾದರೂ ಅಷ್ಟೊಂದು ವರ್ಷಗಳ ಶ್ರಮ ಬೇಕಿತ್ತೇ ಎನಿಸದಿರದು.

ಜಯರಾಮನ ಪಾತ್ರಧಾರಿ ಬಾಲಾಜಿ ಮನೋಹರ್ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ಅಚ್ಯುತ್ ಕುಮಾರ್ ಸೇರಿದಂತೆ ಉಳಿದ ಪಾತ್ರದಾರಿಗಳು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಛಾಯಾಗ್ರಹಣ ಮತ್ತೊಂದು ವಿಶೇಷ ಆಕರ್ಷಣೆ. ಮಬ್ಬುಗತ್ತಲೆಯಲ್ಲಿ ಸಾಗುವ ಅನುಭವವನ್ನು ಚಿತ್ರದುದ್ದಕ್ಕೂ ಉಂಟುಮಾಡಿರುವುದು  ಹೊರಗಡೆ  ಪೈರಸಿ ಮಾಡುವವರನ್ನೇ ಗುರಿಯಿಟ್ಟುಕೊಂಡಂತಿದೆ. ಚಂಬಲ್ ಕಣಿವೆಯ ಪಾತ್ರದಾರಿಗಳನ್ನು ನೆನಪಿಸುವ ಪಾತ್ರದಾರಿಗಳು ಜೊತೆಗೆ ನಾಟಕ ಪಾತ್ರದಾರಿಗಳು ಅಭಿನಯಿಸುವ ಸಮುದ್ರ ಮಂಥನದ ನಾಟಕ ಪ್ರಸಂಗ ಅದರೊಂದಿಗೆ ಲೂಟಿಗೆ ತಳುಕು ಹಾಕುವ ನಾಟಕದ ಪದ್ಯದ ಸಾಲುಗಳು ಅಲ್ಲಿ ಬರುವ ಲಕ್ಷ್ಮೀ ನಾರಾಯಣರ ತುಲಾಭಾರ ಪ್ರಸಂಗ ಮತ್ತು ಅದರ ಚಿತ್ರಣದ ಅದ್ಭುತ ರಮ್ಯ ಲೋಕದ ಸೃಷ್ಟಿಯ ಜೊತೆಗೆ ನಾಯಕಿ ಶಾನ್ವಿ ಶ್ರೀವಾಸ್ತವರ ಅಪೂರ್ವ ಸೌಂದರ್ಯ ಸೆರೆಹಿಡಿದಿರುವ  ಛಾಯಾಗ್ರಾಹಕ ಕರಮ್‍ಚಾವ್ಲ, ಕಲಾ ನಿರ್ದೇಶಕ, ಸಂಗೀತ ನಿದೇರ್ಶನ  ಮತ್ತು 2 ಹಾಡುಗಳ ಮೂಲಕ ಚರಣ್‍ರಾಜ್, ಅಜನೀಶ್‍ ಲೋಕನಾಥ್ ಗಮನ ಸೆಳೆಯುತ್ತಾರೆ.

ಪದಬಂದ, ಒಗಟು, ಸುಳಿಗಳ ಮೂಲಕ ಸಮಸ್ಯೆ ಬಿಡಿಸುವ ಆಸಕ್ತಿ ಹೊಂದಿರುವ ಅನೇಕರಿಗೆ ಈ ಅಮರಾವತಿಯ ಅದ್ಭುತ  ಹೆಚ್ಚು ಇಷ್ಟವಾದರೆ ಆಸ್ತಿಕರಿಗೆ ಸಮುದ್ರ ಮಂಥನದ ಅನುಭವ ವಿಶೇಷ ಅನಿಸುವಲ್ಲಿ ನಿದೇರ್ಶಕ ಸಚಿನ್ ರವಿಯವರ ಪರಿಶ್ರಮ ಎದ್ದು ಕಾಣುತ್ತದೆ. ಉಳಿದವರಿಗೆ ಇದೊಂದು ಟೈಂಪಾಸ್ ಅನುಭವವನ್ನಂತು ನೀಡುತ್ತದೆ.

‍ಲೇಖಕರು avadhi

December 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ManjunathER

  Yappa review kodbeku aadre etara Ella scenes reveal Maadi kod baardu ,keluvu cut Maadi haaki ,suspense huttisbeku

  ಪ್ರತಿಕ್ರಿಯೆ
 2. Sumathi

  Kgf power hunt movie.
  Bell bottom police case bhediso ondu chitra. Naarayana treasure hunt chitra.
  Lekhakara abhipraayadalli gondala vide.
  Grahike miss aaguttiruva haagide.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: