ಮೀನಾ ಮೈಸೂರು
ಒಂದು ಹಿಡಿ ಮಾಂಸ ಒಂದೆರಡು ಔನ್ಸ್ ರಕ್ತ
ದುಂಡು ಗಾಜಿನ ಕನ್ನಡಕ
ಕಣ್ಣಲ್ಲ “ಅಹಿಂಸೆಯ” ಬೆಳಕು,
ಬೊಚ್ಚುಬಾಯಲ್ಲಿ ಶಾಂತಿ ಮಂತ್ರ
ಕೈಯಲ್ಲೊಂದು ಮಂತ್ರದಂಡ!
ಒಮ್ಮೊಮ್ಮೆ ಬರಿಗಾಲ ಭಂಟ
ಅರೆ ಬೆತ್ತಲ ಫಕೀರ
ಜಗದೇಕ ವೀರ ಈ ನಮ್ಮ ರಾಷ್ಟ್ರಪಿತ!
ರಾಷ್ಟ್ರಕ್ಕೇ ಪಿತ. ಆದರೂ,
ಕಸ್ತೂರ್ ಬಾ ಬಿಕ್ಕಳಿಸಿದರು
ಮಕ್ಕಳೂ ಬಿಕ್ಕಳಿಸಿ ಬಿಕ್ಕಳಿಸಿ ಹರಿಸಿದ
ಕಣ್ಣೀರ ಧಾರೆ ಕಡಲು ಸೇರಿ ಉಪ್ಪಾಗಿ
ಹಿಡಿ ಉಪ್ಪು ಗಾಂಧೀಜಿ ಕೈಯಲ್ಲರಳಿ
ಹರಳುಗಟ್ಟತು ದಂಡಿಯಾತ್ರೆ!
ಶಾಂತಿ, ಸಹನೆ, ಸ್ವರಾಜ್ಯ, ಉಪವಾಸ,
ಅಹಿಂಸೆ, ಸತ್ಯಾಗ್ರಹ, ಸರ್ವೋದಯ,
ಗ್ರಾಮೋದಯ, ಅಂತ್ಯೋದಯ,..
ಸ್ವಾವಲಂಬನೆಯ ಸೂರ್ಯೋದಯ ಸಂತನ ಸಂಕೇತಗಳು ಮಾರುಕಟ್ಟೆಯ ಸರಕಾಗಿ
ಜಗದಗಲ, ಮುಗಿಲಗಲ ಆವರಿಸಿ ಝಗ ಮಗಿಸಿತು.

ಗಾಂಧಿ ನೂತಿದ್ದ ಖಾದಿ ಖದೀಮರ ಕಿಸೆ ಸೇರಿ ಝಂಕರಿಸುತ್ತಾ ಕುಣಿ ಕುಣಿದು ಕಾಲಿಗೆ
ಸಿಕ್ಕವರ ತುಳಿಯುತ್ತಾ ನಾಟ್ಯವಾಡತೊಡಗಿತು!
ಗಾಂಧಿಟೋಪಿ ಅಯೋಗ್ಯರ ಮುಡಿಯ
ಮುಕುಟ ಮಣಿಯಾಗಿ, ಫರ್ಡ್ ಕ್ಲಾಸಿಗಿಳಿದು,
ಶೇಂದಿ ಸರಾಯಿಗಳ ಹೆಗ್ಗಿಲ್ಲದ ಕೂಟದಲಿ
ಸ್ವರಾಜ್ ಸ್ವಾಹಾ!
ಅಯ್ಯೋ ಎಲ್ಲೆಲ್ಲೂ ರಕ್ತದೋಕುಳಿಯಾಟ!
“ಹೇ ರಾಮ್” ಶಾಂತಿ ಮಂತ್ರ!
ಜೀವ ಕೈಅಡಿದು, ಉಸಿರು ಬಿಗಿ ಹಿಡಿದು
ತಂತಿ ಮೇಲಿನ ನಡಿಗೆ
ಸವೆಸ ಬೇಕಿದೆ ಇನ್ನೂ ಕೊನೆ ಎಂತೋ ದೇವರೇ ಬಲ್ಲ!
ಬೇಡುತ್ತಿರುವೆ ಮೌನದಲೆ ಗಾಂಧಿ ಎಂಬ
ಸಾವಿಲ್ಲದ ಕೇಡಿಲ್ಲದ ಬೆಳಕ ಕುಡಿ
ಬೆಳಗುತ್ತಿರಲಿ ಜಗವ ಅನವರತ!
0 ಪ್ರತಿಕ್ರಿಯೆಗಳು