ಶ್ಯಾಮಲಾ ಮಾಧವ ಕೃತಿ ಅಂತರಂಗ

ಶಾರದಾ ಮಾಣೈ ಶೆಟ್ಟಿ

ನೀವು ಎರಡು ಮಾತು ಬರೆಯಿರಿ, ಎಂದು ಶ್ಯಾಮಲಾ ಹೇಳಿದಾಗ ವೈದೇಹಿ ಮುನ್ನುಡಿ ಬರೆದ ಮೇಲೆ ಬೇರೆ ಮಾತು ಅಗತ್ಯವಿಲ್ಲ ಅಲ್ಲವೇ, ಅಂದಿದ್ದೆ. ಈಗ ಬರೆಯಲು ಕುಳಿತ ಕ್ಷಣದಲ್ಲಿ ನಾನು ಶ್ಯಾಮಲನ ಬಗ್ಗೆ ಬರೆಯಲೇ, ಅವರ ಆತ್ಮಕಥನದ ಬಗ್ಗೆ ಬರೆಯಲೇ ಎಂಬ ಗೊಂದಲಕ್ಕೊಳಗಾಗುತ್ತಿದ್ದೇನೆ.

೧೯೬೬ನೇ ಇಸವಿ. ಸೇಂಟ್ ಆಗ್ನಿಸ್ ಕಾಲೇಜಿನಲ್ಲಿ ಒಮ್ಮೆ ಕಾಲೇಜಿನ ಆಂತರಿಕ ಪರೀಕ್ಷೆಯಲ್ಲಿ ನನಗೆ ಕನ್ನಡದಲ್ಲಿ ಅತಿ ಹೆಚ್ಚಿನ ಮಾರ್ಕ್ಸ್ ಬಂದಿತ್ತು. ಬಿ.ಎಸ್.ಸಿ. ಕ್ಲಾಸ್ ಆರಂಭವಾದ ಹೊಸತು. ಹುಡುಗಿಯೊಬ್ಬಳು ಬಂದು ಅದು ಹೇಗೆ ನಿನಗೆ ಹೆಚ್ಚು ಮಾರ್ಕ್ಸ್ ಬಂತು, ಎಂದು ಒಂದು ವಿಧದ ಜೋರಿನಿಂದ ನನ್ನಲ್ಲಿ ಜಗಳಕ್ಕೇ ಬಂದಂತೆ ಬಂದು ನನ್ನ ಉತ್ತರ ಪತ್ರಿಕೆ ತೆಗೆದು ಕೊಂಡಳು. ಉತ್ತರಗಳನ್ನು ಓದಿ ತನಗೇ ಹೆಚ್ಚಿಗೆ ಮಾರ್ಕ್ಸ್ ಬಂದಿದೆ, ಎಂದಳು. ತನ್ನ ಉತ್ತರ ಪತ್ರಿಕೆಯನ್ನು ಕೊಟ್ಟಳು. ಆ ಉತ್ತರ ಪತ್ರಿಕೆಯನ್ನೋದಿದ ನಾನು, ಅವಳು ಜಗಳಕ್ಕೆ ಬಂದಳೆಂಬ ವಿಷಯವನ್ನೇ ಮರೆತೆ!

ಈ ಸಾಗರದಂಥ ಕಾಲೇಜಿನಲ್ಲಿ ಭಾಷೆಯ ಮೇಲೆ, ಸಾಹಿತ್ಯದ ಮೇಲೆ ಇಷ್ಟು ಅಕ್ಕರೆಯುಳ್ಳ ಬೇರೆ ಯಾರೂ ನನಗೆ ಸಿಗುವುದಿಲ್ಲ, ಇವಳು ನನಗೆ ಸಮಾನಧರ್ಮಿ ಎಂಬ ಪ್ರೀತಿ ಹುಟ್ಟಿತು. ಅವಳನ್ನು ಸಮಾಧಾನಿಸುವಂತೆ, ಹೌದು, ಎಂದೆ. ವಿಷಯವೇನೆಂದರೆ, ಶ್ಯಾಮಲಾ ಕೇವಲ ಮೂರೇ ಉತ್ತರಗಳನ್ನು ತಮ್ಮ ಅಪ್ರತಿಮ ಶೈಲಿಯಲ್ಲಿ ಬರೆದಿದ್ದರು. ಅಷ್ಟರಲ್ಲಿ ಬೆಲ್ ಬಾರಿಸಿರಬೇಕು. ನಾನು ಐದೂ ಪ್ರಶ್ನೆಗಳಿಗೆ ಉತ್ತರಿಸಿ ಹೆಚ್ಚು ಮಾರ್ಕ್ಸ್ ಪಡೆದಿದ್ದೆ. ಇದನ್ನು ನಾನು ಹೇಳಿದ ತಕ್ಷಣ ಶ್ಯಾಮಲನ ಅಸಹನೆ ಇಲ್ಲವಾಯ್ತು. ಇದೇ ಅರ್ಧ ಬರೆದ ಉತ್ತರ ಪತ್ರಿಕೆ ಬಗ್ಗೆ, ಮಾಷ್ಟ್ರು ಕ್ಲಾಸಿನಲ್ಲಿ, ‘ರಸಗವಳವನ್ನು ಬಡಿಸಿ ಅರ್ಧದಲ್ಲೇ ಎಲೆ ಕಿತ್ತುಕೊಂಡ ಹಾಗಾಯ್ತು …’ ಎಂದು ಹೇಳಿದ್ದರು. ಮುಂದೆ ಶಾಕುಂತಲ ನಾಟಕದ ಸೊಗಸಿನ ಬಗ್ಗೆ ಶ್ಯಾಮಲಾ ಬರೆದ ಲೇಖನ ನನ್ನನ್ನು ಇನ್ನೂ ಅವರಿಗೆ ಹತ್ತಿರವಾಗಿಸಿತು.

ತನಗೆ ಇಷ್ಟೆಲ್ಲ ತೆಕ್ಕುಂಜೆಯವರಿಂದ ತಿಳಿಯಿತು ಎಂದ ಶ್ಯಾಮಲಾ, ಯಾವುದೇ ಮುಚ್ಚುಮರೆಯಿಲ್ಲದೆ ಮುಂದೆ ತೆಕ್ಕುಂಜೆಯವರ ಎಲ್ಲ ಮಾತುಗಳನ್ನೂ ನನಗೆ ತಿಳಿಸುತ್ತಿದ್ದರು. ಹೀಗೆ ತೆಕ್ಕುಂಜೆಯವರು ನನಗೆ ಪರೋಕ್ಷ ಗುರುಗಳಾದರು. ಈಗ ಶ್ಯಾಮಲನ ಆತ್ಮಕಥನವನ್ನೋದುವಾಗ ಉಳಿದವರಿಗೆ ಹೇಗೋ ಏನೋ, ನನಗಂತೂ ಸಂಜೆ ಬೆಳಕಿನಲ್ಲಿ ತಂಬೆಲರಿನಲ್ಲಿ ಹಗುರ ಮನಸ್ಸಿನಲ್ಲಿ ಉದ್ದಾನುದ್ದ ದಾರಿಯಲ್ಲಿ ನಡೆದು ಹೋಗುವಂಥ ಅನುಭವವಾಗುತ್ತದೆ.

ಇಷ್ಟು ವರ್ಷಗಳ ಬಳಿಕ, ಕಷ್ಟ, ಕೋಟಲೆ, ಪರೀಕ್ಷೆಯ ಭಯ ಇಂತಹ ಕಾಳಿಮೆಗಳೆಲ್ಲ ಕಳೆದು, ಕೇವಲ ಆನಂದದ ಅನುಭೂತಿ ಮಾತ್ರ ಆಗುತ್ತದೆ. ತನ್ನ ಬದುಕಿನ ಜೋಳಿಗೆಯಲ್ಲಿ ಕೇವಲ ಅತ್ಯುತ್ತಮವಾದವುಗಳನ್ನಷ್ಟೇ ಆಯ್ದು ತುಂಬಿಕೊಂಡಿದ್ದಾರೆ, ಶ್ಯಾಮಲಾ. ಇದು ತುಂಬ ಅನುಕರಣೀಯ ಜೀವನಧರ್ಮ.

ಇದು ತುಂಬಾ ಅಪೂರ್ವವಾದ ಆತ್ಮಕಥನ ಅಂತ ಅನ್ನಿಸುವುದು ಅದರ ಚಿಕ್ಕ ಪುಟ್ಟ ವಿವರಗಳೂ ಕೂಡಾ ತುಂಬ ಪ್ರಾಮುಖ್ಯ ಪಡೆಯುವಾಗ. ಮದುವೆಯಾಗಿ ಮುಂಬೈಗೆ ಹೊರಟ ಮೊಮ್ಮಗಳನ್ನು ಬೀಳ್ಕೊಡಲು ಬಂದ ಬೆಲ್ಯಮ್ಮ ಕೈ ತುಂಬ ಬೆಳ್ದಾವರೆಗಳನ್ನು ತುಂಬಿಕೊಂಡು
ಬಂದಿದ್ದು ಓದುವಾಗ ನನಗೆ ನಿಜವಾಗಿ ರೋಮಾಂಚನವಾಯ್ತು. ಹಳ್ಳ, ತೋಡುಗಳ ಬದಿಯಲ್ಲಿ ಬೆಳೆದು ನಿಂತಿರುವ, ಬಹುಶಃ ಬೇರೆಯವರಿಗೆ ಅಷ್ಟು ಬೆಲೆ ಬಾಳುವಂಥದ್ದು ಎಂದು ಕಾಣಿಸದ ಈ ಹೂಗಳು ಮೊಮ್ಮಗಳಿಗೆ ಎಷ್ಟು ಬೆಲೆಯುಳ್ಳದ್ದು ಎಂಬುದು ಆ ಬೆಲ್ಯಮ್ಮನಿಗೆ ಗೊತ್ತು.

ತಂದೆಯ ಮೇಲೆ ಶ್ಯಾಮಲನಿಗಿರುವ ಅಪೂರ್ವ ಪ್ರೀತಿ, ಶ್ಯಾಮಲನ ಬಂಧುಪ್ರೇಮ, ಬಂಧುಗಳಿಗೆ ಸರಿಮಿಗಿಲೆನಿಸುವ ಅವರ ಗೆಳೆಯರ ಬಳಗ, ಹೆಚ್ಚು ಕಮ್ಮಿ ಸ್ನೇಹಿತರೇ ಆಗಿಬಿಡುವ ಅವರ ಅವರ ಶಾಲಾ, ಕಾಲೇಜಿನ ಅಧ್ಯಾಪಕರು, ಮನಸ್ಸನ್ನು ತಟ್ಟುವ ಯಾವುದೇ ಲೇಖಕರನ್ನು ಅವರು ಅಪ್ತವಾಗಿಸಿಕೊಳ್ಳುವ ರೀತಿ, ಆಪ್ತಜೀವಗಳು ಎಂದು ಅವರು ಕರೆಯುವ ಅವರ ನಾಯಿಗಳು ವಿಂಟರ್, ಬುಶ್, ರಾಕಿ, ಟೈಗರ್, ಸಮುದ್ರತೀರ, ನದೀತಟ, ಊರು, ಮನೆ, ಮುಂಬೈ ಎಲ್ಲವೂ ಒಂದು ಅಪೂರ್ವ ಸಂತೋಷವನ್ನು ಒದಗಿಸಿ ಕೊಡುತ್ತದೆ.

ಅವರ ಇಂಗ್ಲಿಷ್ ಕಾದಂಬರಿಗಳ ಅನುವಾದವಂತೂ ಎಲ್ಲಿಯೂ ಪರಕೀಯ ಅನಿಸುವುದೇ ಇಲ್ಲ. ಕೇವಲ ಹೆಸರುಗಳು ಮಾತ್ರ ಇಂಗ್ಲಿಷ್‌ನವು, ಕಥೆ ನಮ್ಮದೇ ಅನಿಸಿ ಬಿಡುತ್ತದೆ. ಜೀವನದ ಉಬ್ಬರ, ಇಳಿತ ಎರಡರಲ್ಲೂ ಶ್ಯಾಮಲನ ಸ್ನೇಹ, ಸಾಹಚರ್ಯ ಪಡೆದಿದ್ದೇನೆ. ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ. ದೈನಂದಿನ ಬದುಕನ್ನು ಮೀರಿ ಸಾಹಿತ್ಯಿಕ ಸಂಭ್ರಮದಲ್ಲಿ ತೊಡಗುವುದು ನಮ್ಮ ಕಾಲದ ಎಲ್ಲ ಸ್ತ್ರೀಯರ ಹಾಗೆ ಅವರಿಗೆ ಸಾಹಸವೇ ಆಗಿತ್ತು. ಅವರ ಕೃತಿಗಳು ಇನ್ನೂ ಹೆಚ್ಚಿನ
ಮನ್ನಣೆ ಪಡೆಯಲಿ, ಎಂದು ಮನತುಂಬಿ ಆಶಿಸುತ್ತೇನೆ.

‍ಲೇಖಕರು Avadhi

April 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಅವಧಿಗೆ ಕೃತಜ್ಞತೆ ತುಂಬಿದ ಪ್ರೀತಿಯೊಸಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: