ಎಚ್‌ಎಸ್‌ವಿ ಅವರ ‘ಅನಾತ್ಮ ಕಥನ’

ಬಿ.ಕೆ.ಮೀನಾಕ್ಷಿ

ಎಚ್ಚೆಸ್ವಿಯವರ ಭಾವಗೀತೆಗಳನ್ನು ಕೇಳುತ್ತಾ, ಅವರ ಕವನಗಳನ್ನು ಓದುತ್ತಾ, ಅಲ್ಲಲ್ಲಿ ಅವರ ಬರೆಹಗಳನ್ನು ಮೆಲುಕು ಹಾಕುತ್ತಾ, ಅವರೊಡನೊಂದು ಅನಾಮಿಕ ಸ್ನೇಹವನ್ನಿಟ್ಟುಕೊಂಡ ನಾನು ಅವರ ‘ಅನಾತ್ಮ ಕಥನ’ವನ್ನು ಓದುವ ಅವಕಾಶ ದೊರಕಿ ಓದಿದೆ. ನಿರ್ಮಲವಾದ ಆಪ್ತಭಾವದ ಸ್ಫುರಣ ಓದುಗ ಮಹಾಶಯರನ್ನು ಅಯಾಸ್ಕಾಂತದಂತೆ ಸೆಳೆದುಕೊಳ್ಳುತ್ತದೆ. ಮೃದುಹಾಸ್ಯದ ಜವನಿಕೆಯೊಳಗೆ ಜೀವಮಾನ ಪರ್ಯಂತದ ಅನುಭವಗಳ, ಆಗುಹೋಗುಗಳ ಸಿಂಹಾವಲೋಕನ ಮಾಡುವ ಬಗೆ ಅನನ್ಯ.

ಬಗೆಬಗೆಯ ವ್ಯಕ್ತಿಗಳು, ಸುಂದರ ಬಾಲ್ಯ, ಅಜ್ಜಿಯ ಸೆರಗಿನ ಮರೆಯ ರಕ್ಷಣೆ, ಎಲ್ಲೋ ಆಪತ್ಭಾಂಧವರಾಗಿ ಒದಗಿಬಂದ ಅಪರಿಚಿತರು, ಮುಂದೆ ಆತ್ಮೀಯ ಸಹಭಾಗಿಗಳಾಗಿ,  ಬದುಕಿನುದ್ದಕ್ಕೂ ಜೊತೆಗೆ ಸಾಗುತ್ತಾ ಯಾವುದೋ ಒಂದು ನಿಗೂಢ ಕ್ಷಣದಲ್ಲಿ ವಿದಾಯ ಹೇಳಿ ಅಂಬರವೇರಿ ನಕ್ಷತ್ರವಾಗುವುದು, ಬರೆಯಬೇಕಾದ್ದು ಬರೆಯಬೇಕೋ ಬೇಡವೋ ಎಂಬ ಸಂದಿಗ್ಧ ಎಲ್ಲವೂ ಜೊತೆಜೊತೆಗೇ ಸಾಗಿಬರುವ ಬರೆಹಗಳ ಗುಚ್ಛವೇ ಅನಾತ್ಮಕಥನವಾಗಿ ಓದುಗನ ಕೈ ಸೇರಿದೆ. ಒಂದು ವಿಶೇಷವೆಂದರೆ ಮೋಸ ಮಾಡಿದವರನ್ನೂ ಅತ್ಯಂತ ಗೌರವಯುತವಾಗಿ ಕಂಡಿರುವುದು ಎಚ್ಚೆಸ್ವಿಯವರ ಘನತೆಯನ್ನು ದುಪ್ಪಟ್ಟು ಹೆಚ್ಚಿಸಿದೆ.

ಸುಮಾರು ಮೂವತ್ತೈದು ಬಗೆಬಗೆಯ ಅನುಭವಗಳು ಇಲ್ಲಿ ದಾಖಲಾಗಿವೆ. ಎಲ್ಲವೂ ಪರಮಾಪ್ತವೆನಿಸಿ, ಬೇಕೆನಿಸುವ ಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕಿಸಿಕೊಳ್ಳುವ ಈ ಹೊತ್ತಗೆಯಲ್ಲಿ ಹಳೆಯ ರಸಮಯ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ಸಂಪರ್ಕಕ್ಕೊದಗಿಬಂದ ಅನೇಕ ವ್ಯಕ್ತಿಗಳನ್ನು ಅನಾವರಣಗೊಳಿಸುತ್ತಾ, ಆ ಸಂದರ್ಭದ ಘಟನೆಗಳನ್ನು ಬರೆಯುತ್ತಾ ಹೋಗುವ ಎಚ್ಚೆಸ್ವಿಯವರು ಯಾವುದೇ ಅಡೆತಡೆಯಿಲ್ಲದೆ, ಮೇಲಿನಿಂದ ದಬದಬನೆ ಚಿಮ್ಮುವ ಜಲಪಾತದ, ರಭಸದಿಂದ ಹರಿದು ಸದ್ಧು ಮಾಡುತ್ತಾ ಸಾಗುವ ನದಿಯಂತೆ ಎಲ್ಲೂ ಗೋಚರಿಸದೆ, ತನ್ನಲ್ಲಿ ನೂರಾರು ತರಂಗಗಳೇಳಬಲ್ಲ ಅವಸರವಿದ್ದರೂ ಎಲ್ಲವನ್ನೂ ತನ್ನೊಡಲಲ್ಲಿ ಬಚ್ಚಿಟ್ಟು ಶಾಂತವಾಗಿ ಸದ್ಧಿಲ್ಲದೆ ಹರಿವ ನದಿಯ ಮೌನ ಅನುಭೂತಿಯನ್ನು ತಮ್ಮ ಲೇಖನಗಳಿಂದ ಮನಸ್ಸಿಗೊಂದು ಸಮಾಧಾನ ಸ್ಥಿತಿಯನ್ನೊದಗಿಸುತ್ತಾರೆ. ನಿರ್ಲಿಪ್ತವಾಗಿ ಮತ್ತೆಲ್ಲವನ್ನೂ ಅತಿಯಾದ ಆಪ್ತತೆಯಿಂದ ಧನಾತ್ಮಕವಾಗಿಯೇ ಭಾವಿಸಿಕೊಂಡು ನೆನಪುಗಳ ಬುತ್ತಿಯನ್ನು ಬಿಚ್ಚಿಡುವ ನಮ್ಮ ಪ್ರೀತಿಯ ಎಚ್ಚೆಸ್ವಿ ಯವರು ನಮಗೆ ಆಪ್ತರಾಗುತ್ತಾರೆ. ನಿರ್ವಿವಾದವಾದ, ನಿರ್ವ್ಯಾಜ್ಯ ಪ್ರೇಮದ ಅಕಳಂಕ ವ್ಯಕ್ತಿಯಾಗಿ ಓದುಗರ ಮನದೊಳಗೆ ಪ್ರತಿಷ್ಠಾಪಿತಗೊಳ್ಳುತ್ತಾರೆ.

ನಮ್ಮೆಲ್ಲರ ಬಾಲ್ಯಕ್ಕೆ ಸೆಳೆದೊಯ್ಯುವ ಅವರ ಮೋಹಕವಾದ ಬಾಲ್ಯವರ್ಣನೆ ಹೂವರಳಿದಂತೆ ಮಗಮಗಿಸುತ್ತವೆ. ಪುತಿನ ರವರ ಸ್ವಗತವೆಂಬಂತ ಭಾಷಣದ ವಿವರಣೆ ಪುತಿನರವರ ನಿಲುವು ಆ ಸನ್ನಿವೇಶದ ಕಲ್ಪನೆ ತಂದರೆ, ಅನಂತಮೂರ್ತಿಯವರ ಕಾವ್ಯದ ಹುಚ್ಚನ್ನು ತೆರೆದಿಡುವ ಎಚ್ಚೆಸ್ವಿಯವರ ಸರಳವಾದ ಬರವಣಿಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಜಿ.ಎಸ್. ಎಸ್ ರ ಗಂಭೀರ ಮೊಗದ ಹಿಂದೊಂದು ಹಾಸ್ಯದ ಜಗತ್ತೊಂದಿರುವುದನ್ನು ಎಚ್ಚೆಸ್ವಿ ತೆರೆದಿಡುವ ಬಗೆ ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತದೆ. ಅಲ್ಲದೆ ನನಗೆ ಇದರಲ್ಲಿ ಒಂದು ಅತೀ ಸಂತಸದ ವಿಷಯವೆಂದರೆ, ನಮ್ಮ ಚಿಕ್ಕಮಗಳೂರಿನ ಸ. ಗಿರಿಜಾಶಂಕರ್ ಮತ್ತು ಮಂಜುನಾಥ ಕಾಮತ್ ರನ್ನು ಬರೆದಿರುವುದು. ನನ್ನೂರಿನ ಗಣ್ಯರ ಮಾಹಿತಿ ಶ್ರೀಯುತರ ಲೇಖನಿಯಲ್ಲಿ!

ಸುಂದರಿ ಭೀಮಜ್ಜಿಯ ಬದುಕು-ಬಾಳ್ವೆಯ ಸುಂದರ ಕುಸುರಿಯನ್ನು ಕಡೆದಿಡುತಾ ಅವಳ ಅಂತಿಮಯಾತ್ರೆಗಾಗಿ ಕಾದು.. ಮತ್ತೆ ಬದುಕುಳಿದು.. ಮತ್ತಿಪ್ಪತ್ತು ವರ್ಷದ ಬಾಳ್ವೆ.. ಅವಳ ಪ್ರೀತಿಯ ಮಂಚ.. ಅವಳ ಸುತ್ತಲಿನ ಒಡನಾಟಗಳು ಸೀತಜ್ಜಿ, ಸೀನಣ್ಣ, ಭದ್ರಕ್ಕ, ಮ್ಯಾಳದವರ ಗೊಂಬೆಯಾಟ, ಎಚ್ಚೆಸ್ವಿಯವರು ಭದ್ರಕ್ಕನ ಅಂತರಂಗದ ತುಮುಲಗಳನ್ನು ಬಾಯಿಬಿಡದೆ, ಬರೆಯದೆ.. ಬೃಹನ್ನಳೆಯ ಪಾತ್ರಕ್ಕಾಗಿ ಬಿಕ್ಕಿ ಬಿಕ್ಕಿ ಅಳುವ ಅವಳ ವೇದನೆಯಿಂದ ಅವಳಿಗಾಗಿ ನಮ್ಮಲ್ಲಿ ಅನುಕಂಪವನ್ನು ಹೃದಯದಲೊಂದು ನೋವುಳಿಸುವ ಪಾತ್ರವಾಗಿಸಿಬಿಡುತ್ತಾರೆ. ಭೀಮಜ್ಜಿಯ ಬರವಣಿಗೆಗೆ ಎಳ್ಳುನೀರು ಬಿಡುವ ಪ್ರಸಂಗವಂತೂ ಅಂದಿನ ಕಾಲದ ಸಮಾಜವನ್ನು ಕಣ್ಣಮುಂದೆ ತೆರೆದಿಡುತ್ತದೆ.

ಹಳೆಯ ಗೆಳೆಯರು, ಚಿಕ್ಕವಯಸ್ಸಿನ ಕುತೂಹಲ, ಬರೆಯುವ ಹಂಬಲ ಪ್ರಸಿದ್ಧ ಲೇಖಕ ಈಶ್ವರಚಂದ್ರ ಮತ್ತು ಎಚ್ಚೆಸ್ವಿ ಸೇರಿ ಬರೆದ ಕಾಣೆಯಾದ ಮದುಮಗಳಿನ ಪ್ರಸಂಗದ ವಿವರಣೆ, ಪುಟ್ಟ ಹುಡುಗರಾಗಿದ್ದಾಗಲೇ ಕಾದಂಬರಿ ಬರೆದ ಹೆಗ್ಗಳಿಕೆ, ಆದರೆ ಕಾದಂಬರಿಯೇ ಕಾಣೆಯಾಗುವುದೊಂದು ಚೋದ್ಯ!

ಹದಿವಯಸ್ಸಿನ ಕಲ್ಪನೆ, ಪ್ರೀತಿಯಲ್ಲಿ ಬೀಳಲೇಬೇಕೆನ್ನುವ ತಹತಹವೆಲ್ಲವನ್ನೂ ಓದಿಯೇ ತಿಳಿಯಬೇಕು. ಎಲ್ಲರ ಜೀವನದ ಅತೀ ಆಪ್ತ ಕ್ಷಣಗಳೇ ಇವು ತಾನೇ? ತಮ್ಮ ಮದುವೆಯ ಪ್ರಸಂಗದ ಜೊತೆಜೊತೆಗೇ ತಮ್ಮ ಪತ್ನಿಗೆ ಚಿಕಿತ್ಸೆ ನೀಡಿದ ತಮ್ಮ ವೈದ್ಯ ಶಿಷ್ಯನನ್ನು ಅತ್ಯಂತ ಪ್ರೀತಿಯಿಂದ ನೆನೆಯುವ ಗುರುಗಳು, ಅವನ ಅಂತಿಮ ಕ್ಷಣಕ್ಕೆ ಮರುಗುತ್ತಾರೆ. ಅವನ ಕಡೆಗಾಲದಲ್ಲೂ ಕಲಿತ ವೈದ್ಯವಿದ್ಯೆಯನ್ನು ಲೇಖಕರಿಗಾಗಿ ಪ್ರಯೋಗಿಸಲು ಸಿದ್ಧವಾಗುವ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆ ಪಡುತ್ತಾರೆ. ರಂಗಧಾಮರ ಆರದ ನೋವು, ಪುಟ್ಟಪ್ಪಜ್ಜನ ಆಹಾರದ ಅಚ್ಚುಕಟ್ಟುತನ, ಊಟದ ಮೇಲಿನ ಪ್ರೀತಿ ಓದುಗನಿಗೂ ಬಾಯಲ್ಲಿ ನೀರೂರಿಸದೆ ಬಿಡದು.

ಪ್ರಿಯ ಎನ್ನುವ ಪರಮ ಮುಗ್ಧೆಯನ್ನು ಓದುತ್ತಲೇ, ಕಕ್ಕೆ ಹಣ್ಣು- ಕಾರೆ ಹಣ್ಣುಗಳ ಸವಿ ನಾಲಿಗೆಯಲ್ಲಿ ನೀರೂರಿಸಿದರೆ, ಕಡೆಗೆ ಎಚ್ಚೆಸ್ವಿಯವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮುಳ್ಳಿನಮಯವಾದ ಪಾಪಾಸುಕಳ್ಳಿ ಹಣ್ಣನ್ನು ಸವಿದದ್ದು ನೆನಪಿನಗಣಿಯಿಂದ ತೆಗೆದ ಒಂದು ಮುತ್ತಾಗುತ್ತದೆ. ಮುಂದೆ ಹೋಗಿ  ನೇರಿಲೆ ಹಣ್ಣು, ಕಾಕಿ ಹಣ್ಣುಗಳ ವರ್ಣನೆಗೆ ಮತ್ತೊಂದು ನೆನಪಿನ ತರಂಗವೇಳುತ್ತದೆ. ಜೊತೆಗೆ ಕೋಡೊಲೆಯಲ್ಲಿ ಅಡುಗೆ ಮಾಡಿದ ನೆನಪು ಕೂಡ ಒಳಗೊಳಗೇ ಎದ್ದು ನಿಲ್ಲುತ್ತವೆ.

ಅದೇಕೋ ಕಾಣೆ ವರ್ತಮಾನಕ್ಕಿಂತ ಭೂತಕಾಲ ಮನುಷ್ಯನಿಗೆ ಆಪ್ತವಾಗುವುದು, ಎಲ್ಲವನ್ನೂ ಮನಸ್ಸಿನ ಚಪ್ಪರದೊಳಗೆ ಹದವಾಗಿ ಬೇಕಾದದ್ದನ್ನು ಮಾತ್ರ ಹರಡಿಕೊಂಡು ಸವಿಯೂಟ ಉಂಡಂತೆ ಚಪ್ಪರಿಸುತ್ತಾ ಬದುಕುವುದು ನೆನಪುಗಳಿಂದ ಮಾತ್ರ. ನಟಸಾರ್ವಭೌಮ ರಾಜಕುಮಾರರಿಂದ ಹಿಡಿದು ದಿವಂಗತ ಸಿ. ಅಶ್ವಥ್, ಮಧುರಕಂಠದ ಮೈಸೂರು ಅನಂತಸ್ವಾಮಿ, ಪ್ರೇಮಾ ಕಾರಂತ್, ಜಿಎಸ್ಸೆಸ್, ಎನ್.ಎಸ್ ಚಿದಂಬರಾವ್, ಪುತಿನ ರವರ ವಿದೇಶಿ ಬಳಗದ ಎಲ್ಲರನ್ನೂ ಕಣ್ಣಮುಂದೆ ತಂದು ನಿಲ್ಲಿಸುವ ಎಚ್ಚೆಸ್ವಿ, ಹಾಗೇ ತಮ್ಮ ಸುತ್ತಲಿನ ಸಾಮಾನ್ಯರನ್ನೂ ಅಸಾಮಾನ್ಯವಾಗಿ ಚಿತ್ರಿಸಿ ಬರೆಹದಲ್ಲಿ ಹಾಸುಹೊಕ್ಕಾಗಿಸಿರುವುದು ಅವರ ಪ್ರೀತಿ ಬಾಂಧವ್ಯಗಳ ಪ್ರತೀಕವಾಗಿ ನಿಲ್ಲುತ್ತದೆ.

ಒಬ್ಬಟ್ಟು, ಉಪ್ಸಾರು, ಬಸ್ಸಾರು, ವಿವಿಧ ಸೊಪ್ಪಿನ ಬಳಕೆಗಳು, ಅಡುಗೆಯ ವಿಧಾನಗಳನ್ನು ವರ್ಣಿಸುತ್ತಲೇ, ಭೀಮಜ್ಜಿಯ ಸೊಂಟದ ಮೇಲೆ ‘ಕಿಸುಗಾಲು’ ಹಾಕಿಕೊಂಡು ಕುಳಿತು ಇಡೀ ಬೀದಿಗೆ ತಮ್ಮ ವಾಂತಿಭೇದಿಯ ವಿಷಯವನ್ನು ಸಾರುತ್ತಾ.. ಯುಗಾದಿಯ ಅಭ್ಯಂಜನ, ಗೌರಿಮುಡಿ, ಗಿಳಿ ಮತ್ತು ಪಂಜರದ ಪ್ರತಿಮೆಗಳ ಮೂಲಕ ಹುಟ್ಟು-ಸಾವುಗಳ ಬಂಧನ ಬಿಡುಗಡೆಗಳು, ಸೀತಜ್ಜಿಯ ಬಂಗಾರದ ಸರ, ಬಂಗಾರದ್ದೆಂದರೂ ನಂಬದ ಸೀತಜ್ಜಿಯ ಅಲ್ಪತೃಪ್ತಿ! ಇವೆಲ್ಲ ಜೀವನದ ವಿಸ್ತೃತೆಯನ್ನು ಇಡಿಯಾಗಿ ಕೊಡುವ  ಸಂದರ್ಭದಲ್ಲಿ, ಬದುಕಿನ ಆಯಾಮಗಳನ್ನು ಸಂಕಲಿಸಿದ  ಮತ್ತು ಓದುಗರಿಗೆ ತಲುಪಿಸಿದ ಯಶಸ್ಸು ಕೀರ್ತಿ ನಮ್ಮ ಎಚ್ಚೆಸ್ವಿಯವರದ್ದಾಗುತ್ತದೆ. ಅವರ ಅನಾತ್ಮಕಥನ ಅನಾವರಣಗೊಳ್ಳುತ್ತಿದ್ದಂತೆ  ಓದುಗರ ಮನದಲ್ಲಿ ಎಚ್ಚೆಸ್ವಿಯವರ  ತಿಳಿನಗು ಹಾಸಿಕೊಂಡ ಪ್ರಶಾಂತವಾದ ಮುಖ ಅಚ್ಚೊತ್ತುದೆ.

ಸಾರ್ಥಕ ಜೀವನದ ಎಚ್ಚೆಸ್ವಿ ಈಗ ಏಕಾಂಗಿಯಾದರೂ ಗೆಳೆಯರ, ಶಿಷ್ಯರ ಬಳಗದಿಂದ ತಮ್ಮ ಒಂಟಿತನವನ್ನು ಮರೆತು ಎಲ್ಲರೊಂದಿಗೆ ಬೆರೆತು, ತಮ್ಮೆಲ್ಲ  ಸಂಜೆಯ ಆಯಾಸಗಳನ್ನು ಸಾಹಿತ್ಯಕ್ಷೇತ್ರದ ದಿಗ್ಗಜರ ಒಡನಾಟದಲ್ಲಿ ಮರೆಯುವರೆಂಬ ಭರವಸೆ ನಮಗೆಲ್ಲಾ. ಸರ್, ನಿಮ್ಮ ಈ ಎಲ್ಲ ಅನುಭವಗಳು ಮತ್ತು ನೀವು  ಕನ್ನಡಿಗರಾದ ನಮ್ಮ  ಹೆಮ್ಮೆ. ಹೀಗನ್ನಿಸಲೇ ಬೇಕಲ್ಲವೇ?

‍ಲೇಖಕರು Avadhi

January 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಹೆಚ್‌ ಎನ್‌ ಮಂಜುರಾಜ್

    ಶ್ರೀಮತಿ ಬಿ ಕೆ ಮೀನಾಕ್ಷಿಯವರು ಸ್ವಭಾವತಃ ಕವಿಹೃದಯಿ, ಆಪ್ತಭಾವಗಳನೂ ಸುಪ್ತಚಹರೆಗಳನೂ ಹಿತಮಿತವಾಗಿ, ಮನಂಬುಗುವಂತೆ ಬರೆದು ಸಹೃದಯರನು ಬಹುವಾಗಿ ಸಂತೈಸಿ, ಸಂತಸಪಟ್ಟಿರುವವರು ಕೂಡ. ಅವರು ಮತ್ತು ಅವರ ಬರೆವಣಿಗೆಗಳು ನನಗೆ ಮತ್ತೊಬ್ಬ ಮಹತ್ವದ ಲೇಖಕಿ ಹಾಗೂ ಕವಯಿತ್ರಿ ಶ್ರೀಮತಿ ಉಷಾ ನರಸಿಂಹನ್‌ ಅವರ ಮೂಲಕ ಪರಿಚಯವಾಯಿತು.

    ಇವರ ಬರೆಹಗಳನು ನಾನು ಸಿಕ್ಕಾಗಿ ಮತ್ತು ಸಮಯವಾದಾಗ ಗಮನಿಸುತ್ತಿರುತ್ತೇನೆ. ಅನಾತ್ಮ ಕಥನವನು ಕುರಿತಂತೆ ಬರೆದಿದ್ದಾರೆ. ಅನಾತ್ಮ ಕಥನವನು ಓದದೆಯೂ ಇವರ ಬರೆಹವನು ಓದಿದವರಿಗೆ ಅದನೋದಿದ ಅನುಭವವಾಗುವುದೇ ಈ ಬರೆಹದ ಸಾರ್ಥಕತೆ. ಬರೆಹಗಾರರು ತಾವು ಬರೆಯಲು ಆಯ್ಕೆ ಮಾಡಿಕೊಳ್ಳುವ ಬರೆಹಗಳಿಂದಲೇ ಅವರ ಆಶಯ ಮತ್ತು ಮನದಿಂಗಿತದ ವಿಷಯ ಮನವರಿಕೆಯಾಗಿ ಬಿಡುವುದು. ಲೋಕವೇ ಹಾಗೆ, ತಮಗೆ ಮ್ಯಾಚಾಗುವ ಜೀವಾತ್ಮಗಳನೇ ತಾನೇ ಅರಸುವ ಮತ್ತು ಬೆರೆಸುವ ಚೋದ್ಯದ ಚಂದದ ಚದುರು.

    ಹಾಗೆ ಇಲ್ಲು ಕೂಡ. ಸಂತೆಗದ್ದಲದ ಸಾಹಿತ್ಯದಲಿ ಎಚ್ಚೆಸ್ವಿ ಬರೆಹ ಓರ್ವ ಅಹಮಿಲ್ಲದ ಕಬೀರನ ದೋಹಾದಂತೆ. ನಾನು ಅವರ ಬರೆಹಗಳನಷ್ಟೇ ಕುರಿತು ಮಾತಾಡುತಿರುವೆ.

    ಮೀನಾಕ್ಷಿ ಮೇಡಂ ಅವರು ವ್ಯಕ್ತಿಯಾಗಿಯೂ ಬರೆಹದ ಅಭಿವ್ಯಕ್ತಿಯಲ್ಲಾಗಿಯೂ ಸಾಹಿತ್ಯದಿಂದ ಕಲಿಯಬೇಕಾದುದನ್ನು ಕಲಿತು, ಇನ್ನೂ ಕಲಿಯುವುದಿದೆ ಎಂದುಕೊಂಡು ಕಲಿಯುತಲೇ ಇರುತಾರೆ. ಇದು ನನಗಿಷ್ಟ. ಒಳಿತಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: