‘I have dream…’ ಫ್ಲಾಯ್ಡ್ ಎಂಬ ಕಪ್ಪು ಕೊರಳಿನ ಹಾಡು

 ರವಿಕುಮಾರ್‌ ಟೆಲೆಕ್ಸ್

‘Hi is daying, you should not do it’ ಅಮೇರಿಕಾದ ವಿನಿಯಾ ಪೊಲೀಸರು ಜಾರ್ಜ್ ಫ್ಲಾಯ್ಡ್ ನ ಕುತ್ತಿಗೆಯ ಮೇಲೆ ಮಂಡಿಯೂರಿ ಉಸಿರು ಗಟ್ಟಿಸುತ್ತಿರುವಾಗ ಅದನ್ನು ಖಂಡಿಸಿದ ಯುವಕನೋರ್ವ ಪೊಲೀಸರಿಗೆ ಮತ್ತೆ ಮತ್ತೆ ಹೀಗೆ ಹೇಳುತ್ತಲೆ ಇದ್ದ, ಮಧ್ಯಮ ವಯಸ್ಸಿನ ಹೆಂಗಸೊಬ್ಬಳು ಪೊಲೀಸರ ಈ ಕ್ರೌರ್ಯವನ್ನು ತನ್ನ ಮೊಬೈಲ್ ನಲ್ಲಿ ಶೂಟ್ ಮಾಡುತ್ತಾ ಫ್ಲಾಯ್ಡ್ ನ ರಕ್ಷಣೆಗಾಗಿ ಕೂಗುತ್ತಲೆ ಇದ್ದಳು. ಇದಾವುದು ಪರಿವಿಲ್ಲದೆ ಪೊಲೀಸ ಅಧಿಕಾರಿ ಡೆರೆಕ್ ಚೌವಿನ್ ತನ್ನ ಮಂಡಿಯಿಂದ ಫ್ಲಾಯ್ಡ್ ನ ಕುತ್ತಿಗೆಯ ನಾಳಗಳನ್ನು ಬಿಗಿಯುತ್ತಲೆ ಹೋದ. ಅವನಿಗೆ ಬೆಂಬಲವಾಗಿ ಐದಾರು ಪೊಲೀಸರು ನಿರ್ದಯಿಯಾಗಿ ಸಹಕರಿಸುತ್ತಲೆ ಹೋದರು.

ನೋಡು ನೋಡುತ್ತಿದ್ದಂತೆಯೇ ಕಪ್ಪು ಮನುಷ್ಯ ಜಾರ್ಜ್ ಫ್ಲಾಯ್ಡ್ ‘I have dream, I can’t breath’ ಎಂದು ಮರಣ ಉಸಿರು ಉಯ್ಯುತ್ತಲೆ ಪ್ರಭುತ್ವದ ಅಮಾನುಷ ಕ್ರೌರ್ಯಕ್ಕೆ ಉಸಿರು ಚೆಲ್ಲಿ ಇಲ್ಲವಾದ. ಪ್ರಭುತ್ವದ ಈ ‘ನರಹತ್ಯೆ’ ಗೆ ಅಮೇರಿಕಾ ಜನತೆ ಸಿಡಿದೆದ್ದಿದ್ದಾರೆ. 40ಕ್ಕೂ ಹೆಚ್ಚು ನಗರಗಳು ಹೊತ್ತಿ ಉರಿಯತೊಡಗಿವೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಖುದ್ದು ಬಂಕರ್ ಸೇರಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತನ್ನ ನಾಲ್ಕು ವರ್ಷದ ಮಗಳ ಜೊತೆ ಕಪ್ಪು ಮನುಷ್ಯ ಜಾರ್ಜ್ ಫ್ಲಾಯ್ಡ್ ಶಾಪಿಂಗ್ ಮಾಡುವಾಗ ಖೋಟಾ ನೋಟನ್ನು ಕೊಟ್ಟ ಎಂದು ಷಾಪಿಂಗ್ ಮಳಿಗೆ ಮಾಲೀಕ ಪೊಲೀಸರನ್ನು ಕರೆಯಿಸಿದ್ದು, ಫ್ಲಾಯ್ಡ್ ನ ಯಾವ ವಿವರಣೆಯನ್ನು ಕೇಳಲಿಚ್ಚಿಸದ ವಿನ್ನಿಯಾ ಬಿಳಿ ತೊಗಲ ಪೊಲೀಸರು ಆತನ ಕುತ್ತಿಗೆಗೆ ಮಂಡಿಯನ್ನೂರಿ ಕೊಂದು ಬಿಟ್ಟರು. ಕೊಲ್ಲುವಾಗ ಜನಾಂಗೀಯ ದ್ವೇಷವು ಪೊಲೀಸರಲ್ಲಿ ಉಕ್ಕುತ್ತಿದ್ದದ್ದನ್ನು ಜಗತ್ತಿಗೆ ಸೋಷಿಯಲ್ ಮೀಡಿಯಾಗಳು ತೋರಿಸಿವೆ ಕೂಡ. ಪ್ಲಾಯ್ಡ್ ತನ್ನ ನಾಲ್ಕು ವರ್ಷದ ಮಗಳ ಕಣ್ಣೆದುರೇ ಹೆಣವಾಗಿ ಬಿಟ್ಟ.

ಅಮೇರಿಕಾ ಗಣತಂತ್ರಕ್ಕೆ ಜನಾಂಗೀಯ ದ್ವೇಷ, ಹತ್ಯೆಗಳು ಜಗತ್ತಿನ ಅತಿದೊಡ್ಡ ರಕ್ತ ಸಿಕ್ತ ಚರಿತ್ರೆಯೇ ಆಗಿದೆ. tuskegee instirute ಅಧ್ಯಯನದ ವರದಿಯಂತೆ 1882ರಿಂದ 1968ರವರೆಗೆ ಅಂದರೆ ಜನಾಂಗೀಯ ದ್ವೇಷದ ವಿರುದ್ದ ಹೋರಾಟ ಮಾಡಿದ ಮಹಾ ಮಾನವತಾವಾದಿ ಮಾರ್ಟಿನ ಲೂಥರ್ ಕಿಂಗ್ ಅವರ ಅಂತ್ಯದವರೆಗೂ ವರ್ಣದ್ವೇಷಕ್ಕೆ ಬಲಿಯಾದವರ ಸಂಖ್ಯೆ 4743 ಜನರು. ಅಂತಿಮವಾಗಿ ಮಾರ್ಟಿನ್ ಕೂಡ ಗುಂಡಿಗೆ ಬಲಿಯಾಗಿ ಬಿಟ್ಟರು. ಕಪ್ಪು-ಬಿಳಿಯ ಎಂಬ ವರ್ಣಬೇಧ ನೀತಿ ಅಮೇರಿಕಾದಲ್ಲಿ ಇನ್ನೂ ಹಾಸು ಹೊಕ್ಕಾಗಿದೆ. ಅದು ಭಾರತದ ಧರ್ಮದ್ವೇಷಕ್ಕೆ ಸರಿಸಮವಾಗಿ ನಿಲ್ಲುವಂತದ್ದು, ಅದರಷ್ಟೇ ಘೋರ ಪರಿಣಾಮಗಳನ್ನು, ಹತ್ಯೆಗಳನ್ನು ಮಾಡುವಂತದ್ದಾಗಿದೆ. ಈ ರೀತಿಯ ವರ್ಣ ಶ್ರೇಷ್ಠತೆ ಮತ್ತು ಭಾರತದ ಧರ್ಮಶ್ರೇಷ್ಠತೆಯನ್ನು ಅಮೇರಿಕಾದ ಟ್ರಂಪ್ ಮತ್ತು ಭಾರತದ ನರೇಂದ್ರ ಮೋದಿಯವರ ಇಶಾರೆಯ ಮೇಲೆ ವಿಜೃಂಭಿಸುತ್ತಿವೆ.

ಟ್ರಂಪ್ ಅಧಿಕಾರಕ್ಕೆ ಬಂದಾಗಲೇ ಅಮೇರಿಕಾದಲ್ಲಿ ಬಲಪಂಥೀಯ ಶಕ್ತಿಗಳ ಮೇಲಾಟ ನಡೆಯಲಿದೆ ಎಂಬುದನ್ನು ಅಲ್ಲಿನ ಜನ ಭಾವಿಸಿದ್ದರು. ಅದು ನಿಜವಾಗುತ್ತಾ ಬರುತ್ತಿದೆ. ಜನಾಂಗೀಯ ದ್ವೇಷದ ಮಾರಣಹೋಮದ ಚರಿತ್ರೆಯೊಂದು ಮತ್ತೆ ಇಣುಕುತ್ತಿರುವುದು ಟ್ರಂಪ್ ಧೋರಣೆಗೆ ಕನ್ನಡಿಯಾಗಿದೆ. ಅಮೇರಿಕಾದಲ್ಲಿನ ಜನಾಂಗೀಯ ದ್ವೇಷವನ್ನು ಭಾರತಕ್ಕೆ ಸಮೀಕರಿಸಿಕೊಂಡು ನೋಡುವಾಗ ಭಾರತದಲ್ಲಿನ ಧರ್ಮದ್ವೇಷ ಒಂದೇ ಸ್ವರೂಪದಾಗಿದ್ದು ಭಾರತದಲ್ಲಿ ದಲಿತರನ್ನು ಹಾಡಹಗಲೆ ಕಟ್ಟಿ ಚರ್ಮ ಸುಲಿಯುವಂತೆ ಬಡಿಯುವುದು, ದಲಿತ ವರನೊಬ್ಬ ಕುದರೆ ಸವಾರಿ ಮಾಡಿದ ಎಂಬ ಕಾರಣಕ್ಕೆ ಕೊಲ್ಲುವುದು, ಭಾರತೀಯ ಮುಸ್ಲಿಂರನ್ನು ದನದ ಮಾಂಸ, ಭಯೋತ್ಪಾದನೆ ನೆಪದಲ್ಲಿ ಗುಂಪು ಹತ್ಯೆ ಮಾಡುವುದು ನಡೆದಿರುವಾಗ ಅತ್ತ ಟ್ರಂಪ್ ಆಡಳಿತದಲ್ಲಿ ಕಪ್ಪು ಜನರನ್ನು ಗುಂಪು ಹತ್ಯೆಗಳಿಂದ ಕೊಲ್ಲುವ ಕೆಲಸ ನಡೆದಿದೆ.

ಜಗತ್ತಿನಲ್ಲಿ ಬಲಪಂಥೀಯ ಧೋರಣೆಯನ್ನು ಬಿತ್ತುವ ಜಾಗತಿಕ ಸಂಚು ಕೂಡ ಆಗಿರಬಹುದಾಗಿದೆ. ಇಂತಹ ಬೆಳವಣಿಗೆಗಳಿಂದ ಮಾನವತೆ, ಸಹಬಾಳ್ವೆ. ಸಮಾನ ನ್ಯಾಯದ ಆಶೋತ್ತರಗಳ ಸಮಾಧಿಯೇ ಆಗಿ ಬಿಡಬಹುದಾದ ಅಪಾಯಗಳನ್ನು ಇಂದು ಗ್ರಹಿಸಬೇಕಾಗಿದೆ. ಭಾರತದಲ್ಲಿ 2015ರಿಂದ ಇದುವರೆಗೂ ಧರ್ಮದ್ವೇಷದ ಹಿನ್ನೆಲೆಯಲ್ಲಿ ನಡೆದ ಗುಂಪು ಹತ್ಯೆಗಳಿಂದ 113 ಜನ ಸಾವು ಕಂಡಿದ್ದಾರೆ. ಇದನ್ನು ಖಂಡಿಸಿ ದನಿ ಎತ್ತಿದವರನ್ನು ನಕ್ಸಲ್ ಬೆಂಬಲಿಗರು, ಭಯೋತ್ಪಾದಕರು ಎಂಬ ಆರೋಪ ಹೊರಿಸಿ ಜೈಲಿಗೆ ತಳ್ಳಲಾಗಿದೆ. ಹುಸಿ ರಾಷ್ಟ್ರಭಕ್ತಿ, ಧರ್ಮದ ಹೆಸರಲ್ಲಿ ಜನರ ಗಮನವನ್ನೆ ದಿಕ್ಕುತಪ್ಪಿಸುವ ಕೆಲಸವೂ ನಡೆಯುತ್ತಲೆ ಬರುತ್ತಿದೆ. ಇಂತಹ ಸಂಚು ಸ್ವರೂಪಗಳು ಅಮೇರಿಕಾದಲ್ಲೂ ನಡೆಯುತ್ತಿದೆ.

ಅಮೇರಿಕಾದಲ್ಲಿ ಒಂದಡೆ ಜನಾಂಗೀಯ ದ್ವೇಷದ ಗುಂಪು ಹತ್ಯೆಗಳು ನಡೆಯುತ್ತಿದ್ದರೆ. ಪ್ರಭುತ್ವದ ಅನುಪಾಲಕ ಪೊಲೀಸರೇ ಹಾಡಹಗಲೆ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯನನ್ನು ಕೊಲ್ಲುವ ಮೂಲಕ ಜನಾಂಗೀಯ ದ್ವೇಷಕ್ಕೆ ತುಪ್ಪ ಸುರಿದಿದ್ದಾರೆ. ಈ ಕ್ರೌರ್ಯದ ವಿರುದ್ಧ ಜನರ ಸಹನೆ ಕಟ್ಟೆಯೊಡೆದಿದೆ. ಬೀದಿ ಬೀದಿಯಲ್ಲಿ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಪ್ರದರ್ಶಿಸುತ್ತಿದ್ದಾರೆ. ಸಮನ್ಯಾಯ, ಸಹಬಾಳ್ವೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಕಟ್ಟಿದ ಅಮೇರಿಕಾ ಟ್ರಂಪ್ ನ ಹುಚ್ಚಾಟದಲ್ಲಿ ಮತ್ತೆ 18ನೇ ಶತಮಾನಕ್ಕೆ ಹಿಂದಡಿಯಿಡುತ್ತಿದೆ. ಅಮೇರಿಕಾದ ನೆಲದಲ್ಲಿ ಕರಿಯರ ಮೇಲೆ ಗುಂಪು ಹತ್ಯೆಗಳು, ಪ್ರಭುತ್ವ ಪ್ರಾಯೋಜಿತ ಹಿಂಸೆಗಳು ನಡೆಯುತ್ತಿದ್ದು ಇದರ ವಿರುದ್ಧ ಪ್ರತಿಹಿಂಸೆ ಮತ್ತು ದಂಗೆಗಳು ಭುಗಿಲೆದ್ದಿರುವುದನ್ನು ಹತ್ತಿಕ್ಕಲು ಪ್ರಭುತ್ವ ಕೂಡ ಹಿಂಸೆಯ ಹಾದಿ ತುಳಿದಿದೆ. ಅಮೇರಿಕಾ ಹಿಂಸೆಯ ಕುಲುಮೆಯಾಗಿದೆ.

ಅಮೇರಿಕಾದಲ್ಲಿ ಜನಾಂಗೀಯ ದ್ವೇಷದ ವಿರುದ್ದ ಹೋರಾಡಿ ಗೆದ್ದ ಮಾರ್ಟಿನ್ ಲೂಥರ್ ಕಿಂಗ್ 1963 ರಲ್ಲಿ ವಾಷಿಂಗ್ಟನ್ ನಲ್ಲಿ ‘I have dream (ನನಗೊಂದು ಕನಸಿದೆ)’ ಎಂಬ ಐತಿಹಾಸಿಕ ಭಾಷಣವನ್ನು ಮಾಡಿದರು. ಬಂಧ ವಿಮೋಚನೆಯ ಸಂಭ್ರಮವನ್ನು ಕನಸುಗಳ ಮೂಲಕ ವ್ಯಕ್ತಪಡಿಸಿದರು. ‘ಗೆಳೆಯರೆ ನನಗೊಂದು ಕನಸಿದೆ. ಭೂತ ವರ್ತಮಾನಗಳ ತಾರತಮ್ಯಗಳನ್ನು ಇಂದು ನಾವು ಅನುಭವಿಸುತ್ತಿದ್ದರೂ ನನಗೊಂದು ಕನಸಿದೆ. ಇದು ಅಮೇರಿಕಾದ ಕನಸಿನಲ್ಲಿ ಬೇರೂರಿದ ಕನಸು. ಒಂದು ದಿನ ಈ ದೇಶ ಎದ್ದೇಳಲಿದೆ. ತನ್ನ ಸೃಷ್ಟಿಯ ನಿಜಾರ್ಥದಲ್ಲೆ ಬದುಕಲಿದೆ. ಎಲ್ಲಾ ಮಾನವರು ಸಮಾನರಾಗಿಯೇ ಸೃಷ್ಟಿಸಲ್ಪಟ್ಟಿದ್ದಾರೆ ಎಂಬ ಸ್ವಯಂ ವೇದ್ಯವಾಗಿರುವ ಸತ್ಯವನ್ನು ಸಾರಲಿದೆ ಎಂಬ ಕನಸು. ನನ್ನ ನಾಲ್ವರು ಮಕ್ಕಳನ್ನು ಅವರ ಬಣ್ಣಗಳಿಂದಲ್ಲ. ಗುಣಗಳಿಂದ ಅಳೆಯಲ್ಪಡುತ್ತಾರೆ ಎಂಬ ಕನಸು…..’ ಹೀಗೆ ಮಾರ್ಟಿನ್ ಲೂಥರ್ ಕಿಂಗ್ ಎಂಬ ಧೀರ ಅಹಿಂಸಾವಾದಿ ಹೋರಾಟಗಾರನ ಮಾತುಗಳನ್ನು ನೆನಪು ಮಾಡಿಕೊಳ್ಳುವಾಗಲೇ ವೈರುಧ್ಯವೊಂದು ನಡೆದು ಹೋಯಿತು. ಅದು ಫ್ಲಾಯ್ಡ್ ಎಂಬ ಕಪ್ಪು ನಾಗರೀಕನೊಬ್ಬ ವರ್ಣದ್ವೇಷದ ನರಹತ್ಯೆಗೆ ಬಲಿಯಾಗಿ ಬಿಟ್ಟ, ಬಿಳಿಯರ ದ್ವೇಷದ ಮಂಡಿಗಳಿಂದ ಒತ್ತಿ ಬಿಗಿದು ನೀರು ಹಿಂಡಿಕೊಳ್ಳುವ ಬಟ್ಟೆಯಂತೆ ಸುತ್ತಿಕೊಂಡ ಜಾರ್ಜ್ ಫ್ಲಾಯ್ಡ್ ನ ಕೊರಳಿನಿಂದ ‘‘I have dream… I can’t breath…’ ಎನ್ನುವ ಆರ್ತನಾದ ಕೇಳುತ್ತಲೆ ಇತ್ತು. ಕಿಂಗ್ ನ ಕೊನೆಯ ಭಾಷಣದಂತೆಯೂ ಅಮೇರಿಕಾದ ಕಪ್ಪು ಜನರ ಕೊನೆಯ ಹಾಡಿನಂತೆಯೂ…

‍ಲೇಖಕರು nalike

June 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: