ಹೇಗೆ ಪಾರಾಗಲಿ?

 ರತ್ನಾ ಮೂರ್ತಿ

1993 ರವರೆಗೂ ನಾವು ಮುಂಬಯಿಯಲ್ಲಿದ್ದೆವು. ‌ಮುಂಬಯಿಯ‌ ಮಾತುಂಗಾ‌ ಪಶ್ಚಿಮದಲ್ಲಿರುವ ಕರ್ನಾಟಕ ಸಂಘದ ಹೆಚ್ಚೂ ಕಡಿಮೆ ಎದುರಿಗೇ ಅಂದರೆ diagnoly opposite ನಮ್ಮ OCS ಕ್ವಾರ್ಟರ್ಸ್.  ಕರ್ನಾಟಕದ ಸಂಸ್ಕೃತಿ, ಸಾಹಿತ್ಯ‌, ಸಂಗೀತ ಕಲೆಗಳನ್ನು ಪೋಷಿಸಿಕೊಂಡು, ಕನ್ನಡ ಮರಾಠಿ ಸಾಮರಸ್ಯಕ್ಕೆ ಶ್ರಮಿಸುತ್ತಿರುವ  ಸಂಸ್ಥೆ‌ ʼಕರ್ನಾಟಕ‌ ಸಂಘʼ.

ಖ್ಯಾತ ಸಾಹಿತಿಗಳಾದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಬಿ ಎ ಸನದಿ, ವ್ಯಾಸರಾವ್ ನಿಂಜೂರ, ರಂಗ ಭೂಮಿ‌ ಕಲಾವಿದರಾದ ಶ್ರೀಪತಿ ಬಲ್ಲಾಳ್, ಕಿಶೋರಿ ಬಲ್ಲಾಳ್, ಇವರೆಲ್ಲರೂ ಮುಂಬಯಿಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸಾಧನೆಯ‌ ಶಿಖರವನ್ನೇರಿದವರು.  

ನಾವು ಘಾಟ್‌ ಕೋಪರ್ ನಿಂದ ಇಲ್ಲಿಯ ಕ್ವಾರ್ಟರ್ಸ್ ಗೆ ವಸತಿ  ಬದಲಾಯಿಸಿ, ‘ಕರ್ನಾಟಕ ಸಂಘ’ದ ಸಂಪರ್ಕಕ್ಕೆ ಬಂದ ಮೇಲೆ ಆ ಸಾಹಿತ್ಯದ ಎಲ್ಲ ದಿಗ್ಗಜರ ಹಾಗೂ ರಂಗಭೂಮಿ ಕಲಾವಿದರ ಪರಿಚಯದ ಭಾಗ್ಯ ದೊರಕಿತು.

‘ಮಾನವ್ಯ ಕವಿ’ ಎಂದೇ ಖ್ಯಾತರಾದ ಬಿ ಎ ಸನದಿಯವರ ಮೆಚ್ಚುಗೆ ಮತ್ತು ಪ್ರೋತ್ಸಾಹಗಳಿಂದ ನನಗೆ ಮುಂಬಯಿ ಆಕಾಶವಾಣಿಯಲ್ಲಿ ಅಲ್ಲದೆ ಕರ್ನಾಟಕ ಸಂಘದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ‌ ಕವಯತ್ರಿಯಾಗಿ, ನಿರೂಪಕಿಯಾಗಿ, ಗಾಯಕಿಯಾಗಿ ಹೀಗೆ ಹಲವಾರು ವಿಧದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸುಯೋಗವೂ ದೊರಕುತ್ತಿತ್ತು.      

೧೯೯೩ರ ಮಾರ್ಚ್ ನಲ್ಲಿ ಒಂದು‌ ಸಾಂಸ್ಕೃತಿಕ‌ ಕಾರ್ಯಕ್ರಮದ ಯೋಜನೆಯನ್ನು   ಕರ್ನಾಟಕ ಸಂಘದವರು ಹಮ್ಮಿಕೊಂಡಿದ್ದರು. ಅದಕ್ಕೋಸ್ಕರ ನಾಗಮಣಿ ಎಂಬುವವರೂ ಸೇರಿ ನಾವು ನಾಲ್ಕೈದು ಜನ ಬಹಳ ಹುಮ್ಮಸ್ಸಿನಿಂದ ಜನವರಿಯಿಂದಲೇ ವಾರಕ್ಕೆ ಒಂದೆರಡು ಬಾರಿಯಂತೆ ಕೆಲವು ಸಮೂಹ ಗೀತೆಗಳ‌ ಅಭ್ಯಾಸದಲ್ಲಿ ತೊಡಗಿದ್ದೆವು. ತಬಲಾ ಹಾರ್ಮೋನಿಯಂ ಜೊತೆ ರಿಯಾಜ್ ನಡೆಯುತಿತ್ತು.‌

 ಅಷ್ಟರಲ್ಲೇ ಇದ್ದಕ್ಕಿದ್ದಂತೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ದಳ್ಳುರಿಯ ಪರಿಣಾಮದಿಂದಾಗಿ ಮುಂಬಯಿಯೂ‌ ಭಗ್ಗನೆ ಹೊತ್ತಿ ಉರಿಯತೊಡಗಿತು.  ಅಲ್ಲಿಗೆ ನಮ್ಮೆಲ್ಲಾ ಚಟುವಟಿಕೆಗಳೂ ಸ್ತಬ್ಧವಾಗಿಬಿಟ್ಟವು.      

ಅಪನಂಬಿಕೆ, ದ್ವೇಷದ  ಭೀಕರ ಅಟ್ಟಹಾಸ!. ಕ್ಷಣಾರ್ಧದಲ್ಲಿ ಗುಂಪು ಗುಂಪಾಗಿ ದಾಳಿ ನಡೆಸಿ, ಕೊಲೆ ಸುಲಿಗೆ ಅತ್ಯಾಚಾರ ಲೂಟಿ ಬೆಂಕಿ ಹಚ್ಚುವುದು, ವಿದ್ವೇಷದ ಬರ್ಬರತೆ ತನ್ನ ಘೋರ ಕೆನ್ನಾಲಿಗೆಯನ್ನು ಚಾಚಿ‌ ಚಾಚಿ ಕಂಡದ್ದನ್ನೆಲ್ಲಾ ನುಂಗಿ ನೊಣೆಯುತ್ತಿತ್ತು. ಅಂಥಹ ಕೆಲವು ಘೋರ ಕೃತ್ಯಗಳನ್ನು ಕಣ್ಣಾರೆ ಕಂಡು ತತ್ತರಿಸಿ ಹೋಗಿದ್ದೆ. ಮಾನವೀಯತೆಯ ಮೇಲೆ ನಂಬಿಕೆಯೇ ಹೋಗಿಬಿಡುವಂತೆ. ಆಗ ಮುಂಬಯಿ ಅಕ್ಷರಶಃ ಹೊತ್ತಿ ಉರಿಯುತ್ತಿತ್ತು.   

ಭೀತರಾದ ಜನರು ಯಾವ  ವಿಧ್ವಂಸಕರ ಗುಂಪೂ ತಮ್ಮ ಕಾಲೊನಿಗಳ ಕಡೆ ಸಲೀಸಾಗಿ ದಾಳಿಯಿಡಲಾಗಂತೆ ಪ್ರತಿಯೊಂದು ಕಾಲನಿಯವರೂ  ಅಲ್ಲಲ್ಲೇ ಏನೇನೋ‌ ರಕ್ಷಣೆಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಅದೇ ಉದ್ದೇಶದಿಂದ ನಮ್ಮ ಕಾಲೊನಿಗೆ ತಲುಪುವ ರಸ್ತೆಯ ಎಡ ಬಲ ಮತ್ತು‌ ಮುಂದಿನ ರಸ್ತೆಯ ಮೇಲೂ ಅಡ್ಡಡ್ಡಲಾಗಿ‌ ಮುಳ್ಳುತಂತಿಗಳನ್ನು ಮುಳ್ಳಿನಗಿಡಗಳನ್ನು ಹರಡಿದ್ದರು.

ರಾತ್ರಿಯ ಹೊತ್ತು ಒಂದೊಂದು ಕಟ್ಟಡದ ತಾರಸಿಯ ಮೇಲೂ ಸರ್ಚ್ ಲೈಟ್ಗಳನ್ನು ಬೆಳಗಿಸುತ್ತಾ  ಸರದಿಯ ಮೇಲೆ ಗಂಡಸರು ಕಾವಲು ಇರುತ್ತಿದ್ದರು.   

ಮನೆಯಲ್ಲಿ ನನ್ನಿಬ್ಬರು‌ ಚಿಕ್ಕಮಕ್ಕಳು ಮತ್ತು ನಾನು ಅಷ್ಟೆ. ಪತಿ ಆಫೀಸಿನ ಕೆಲಸದ ಮೇಲೆ‌ ಹೈದರಾಬಾದಿಗೆ ಹೋಗಿ ಬಹಳ ದಿನಗಳಾಗಿದ್ದವು.       ಪೋಲೀಸರ ಗಸ್ತು ಬಹಳ ಬಿಗಿಯಾಗಿ, ‘ಕಂಡಲ್ಲಿ ಗುಂಡು’ ಎಂಬ ಸುಗ್ರೀವಾಜ್ಞೆ ಇದ್ದರೂ ಪರಿಸ್ಥಿತಿ‌ ಭೀಕರವಾಗಿಯೇ ಇತ್ತು. ಎಲ್ಲೋ‌ ಕೆಲವೊಮ್ಮೆ  ಸ್ವಲ್ಪ ತಿಳಿಯಾದಾಗ ಮುಳ್ಳಿನ ಅಡಚಣೆ ಸರಿದು ನಮಗೂ ಅಷ್ಟು ನಿರಾಳ.     

ಹೀಗೇ ಒಮ್ಮೆ‌ ಗಲಭೆಯ ಕಾವು‌ ತಣ್ಣಗಾದ ಮೇಲೆ ಕರ್ಫ್ಯೂ ಹಿಂತೆಗೆದು ಕೊಂಡರೂ ೧೪೪ ಸೆಕ್ಷ‌ನ್ ಜಾರಿಯಲ್ಲಿತ್ತು. ಆ ಸಮಯದಲ್ಲಿ ದೂರದ ಒಂದು ಸಬರ್ಬ್ನಲ್ಲಿ( ಹೆಸರು ನೆನಪಿಗೆ ಬರುತ್ತಿಲ್ಲ) ವಾಸವಿದ್ದ ನನ್ನ ಗೆಳತಿ ನಾಗಮಣಿ ಬೆಳಿಗ್ಗೆ‌ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ನಮ್ಮ ಮನೆಗೆ ಬಂದರು.     

ಕರ್ಫ್ಯೂ ಸಡಿಲಿಸಿದ್ದರೂ ಇನ್ನೂ ಭಯದಲ್ಲೇ ಬದುಕುತ್ತಿದ್ದುದರಿಂದ ನಾಗಮಣಿಯನ್ನು ನೋಡಿ ಸಂತೋಷವೇನೂ ಆಗದೆ “ಇಂಥಾ ಹೊತ್ನಲ್ಲಿ ಬರಬೇಕಾದ ಅವಶ್ಯಕತೆ ಏನಿತ್ತು ನಾಗಮಣೀ???” ಎಂದು ಹೆಚ್ಚು ಕಡಿಮೆ‌ ಚೀರಿದೆ.   

“ಎಲ್ಲಾ ಸರಿ ಹೋಗಿದ್ಯಲ್ಲಾ ಅದಕ್ಕೇ ಪ್ರಾಕ್ಟೀಸ್ ಮಾಡೋಣಾಂತ ಬಂದೆ” ಎಂದರು ಸಪ್ಪೆ ಮೋರೆಯಲ್ಲಿ. ನಮ್ಮಿಬ್ಬರ ನಡುವೆ ಆತ್ಮೀಯತೆ ಇದ್ದುದರಿಂದ ಆಕೆ ನನ್ನ ಮಾತನ್ನು ತಪ್ಪಾಗಿ ತಿಳಿಯಲಿಲ್ಲ.     

ನಾಗಮಣಿ ಸಾಧಾರಣವಾಗಿ ಬರುತ್ತಿದ್ದುದು ಒಬ್ಬರೇ. ಏಳೆಂಟು ವಯಸ್ಸಿನ ಒಬ್ಬ ಮಗಳನ್ನು ಪಕ್ಕದ ಮನೆಯಲ್ಲಿ ಬಿಟ್ಟು ಬರುತ್ತಿದ್ದರು. ಎಂದಾದರೊಮ್ಮೆ ಕರೆತಂದರೆ ನಮ್ಮ ಮಕ್ಕಳ ಜೊತೆ ಮೂವರನ್ನೂ ನಮ್ಮ ಮನೆಯಲ್ಲಿ‌ ಆಡಲು ಬಿಟ್ಟು ನಾವು ಕರ್ನಾಟಕ ಸಂಘಕ್ಕೆ ಹೋಗುತ್ತಿದ್ದೆವು.

ಆಕೆಯ ಪತಿ ಯಾವುದೋ ಕಂಪನಿಯ ಸೇಲ್ಸ್ ವಿಭಾಗದಲ್ಲಿದ್ದರಿಂದ ಆಗಾಗ ಬಿಸಿನೆಸ್‌ಗಾಗಿ ಟೂರ್‌ ಹೋಗುತ್ತಿದ್ದರು. ಮುಂಬಯಿಯ ಆ ಪ್ರಕ್ಷುಬ್ಧ ಪರಿಸ್ಥಿತಿಯ ಸಂದರ್ಭದಲ್ಲೂ ಅವರು ಉತ್ತರ ಭಾರತದ ಸೇಲ್ಸ್ ಟೂರಿನಲ್ಲಿದ್ದರು.   ನಾಗಮಣಿ ತಮ್ಮ ಮಗಳನ್ನು ಪಕ್ಕದ ಮನೆಯವರಲ್ಲಿ ಬಿಟ್ಟುಬಂದಿದ್ದರು.         

ಗಲಭೆಯ ಸಮಯವಾದ್ದರಿಂದ ಕರ್ನಾಟಕ ಸಂಘ ಮುಚ್ಚಿತ್ತು. ಇನ್ನೇನು ಮಾಡುವುದು ಮನೆಯಲ್ಲೇ ನಾವಿಬ್ಬರೇ ಒಂದಿಷ್ಟು ಹರಟೆ ಹೊಡೆಯುತ್ತಾ ಅಡಿಗೆ ಮುಗಿಸಿ, ನಾಲ್ಕಾರು ಸಲ ಹಾಡುಗಳನ್ನು ಪ್ರಾಕ್ಟೀಸ್ ಮಾಡಿದೆವು. ಊಟ ಮಾಡಿ ಆಕೆ ಹೊರಟರು. ನಮ್ಮ ಕಾಲನಿಯ ಗೇಟಿಗೆ ಬಂದಾಗ ವಾಚ್‌ಮನ್, “ಬಾಯೀ,  ಹೊರಗೆ ಹೋಗ್ಬೇಡಿ‌. ಮಾಹಿಮ್, ದಾದರ್ ಅಲ್ಲೆಲ್ಲ ಮತ್ತೆ ತುಂಬಾ ಗಲಾಟೆ ಆಗಿದ್ಯಂತೆ. ಇಲ್ಲಿಗೂ ಹರಡಬಹುದು” ಎಂದು ಎಚ್ಚರಿಸಿದ. 

ಆ ಮಾತು ಕೇಳಿದ್ದೇ ನಾಗಮಣಿ, “ಹಾಗಾದ್ರೆ ನಾಗರತ್ನಾ ನಾನು ಬೇಗ ಬೇಗ ಹೋಗ್ತೀನಿ” ಎಂದರು. ವಾಚ್ಮನ್ ಮತ್ತೆ “ಬೇಡ”  ಎಂದು ಎಚ್ಚರಿಸಿದ.     “ನಿಮ್ಮ ಪಕ್ಕದ ಮನೆಯವರಿಗೆ ಇಲ್ಲೇ ಮೇಲ್ಗಡೆ ಮನೆಯಿಂದ ಫೋನ್ ಮಾಡೋಣ. ಹೋಗ್ಬೇಡಿ. ಇವತ್ತು ನಮ್ಮನೇಲೆ ಇದ್ಬಿಡಿ” ಎಂದು ಎಷ್ಟೆಷ್ಟು ರೀತಿಯಲ್ಲಿ ಹೇಳಿದರೂ ನಾಗಮಣಿ ಒಪ್ಪದೆ, “ತಿಳಿಸೋಕೆ  ಪಕ್ಕದ ಯಾರ ಮನೆಯಲ್ಲೂ ಫೋನ್ ಇಲ್ಲ ನಾಗರತ್ನ. ನಾನು ಹೋಗ್ಲೇ ಬೇಕು.” ಎಂದು ಹಠ ಹಿಡಿದರು.

ಮಗಳನ್ನು ಬಿಟ್ಟುಬಂದ ಆಕೆಯ ಕಳವಳ ಒಬ್ಬ ತಾಯಿಯಾದ ನನಗೆ ಅರ್ಥವಾಯಿತು. ಆದರೆ ಆಕೆಯೊಬ್ಬರನ್ನೇ ರೈಲ್ವೇ ಸ್ಟೇಷನ್ಗೆ ಕಳಿಸಲು ಧೈರ್ಯವಾಗದೆ ಮಕ್ಕಳಿಗೆ “ಬೇಗ ನಾಗಮಣಿ ಆಂಟೀನ ಸ್ಟೇಷನ್ಗೆ ಬಿಟ್ಬರ್ತೀನಿ. ಮನೆ ಒಳಗೇ ಇರಿ” ಎಂದು ತಾಕೀತು ಮಾಡಿ ಅವರ ಜೊತೆ ಹೊರಟೆ. ಮುಖ್ಯ ರಸ್ತೆ ಬೇಡ ಎಂದು ಒಳಗಿನ ಅಡ್ಡ  ರಸ್ತೆಯಲ್ಲೇ ಸುತ್ತಿ ಸುತ್ತಿ ಸ್ಟೇಷನ್ ತಲುಪಿದೆವು.    

ನಮ್ಮನ್ನು ನೋಡಿದ್ದೇ ಅಲ್ಲಿದ್ದ ಒಬ್ಬ ಪೋಲೀಸ್ ಇನ್ಸ್ಪೆಕ್ಟರ್ ಕೆಂಡಾಮಂಡಲವಾಗಿ,  ” ಇಂಥಾ ಸಮಯದಲ್ಲಿ ಹೊರಗೆ ಬಂದಿದೀರಲ್ಲಾ. ನಿಮಗೆ ಬುದ್ಧಿ ಇದ್ಯಾ?” ಎಂದು ರೇಗಿದ.   ನಾನು ಶಾಂತ ಸ್ವರದಲ್ಲೇ ಪರಿಸ್ಥಿತಿಯನ್ನು ವಿವರಿಸಿ, ನನ್ನ ಗೆಳತಿ ಹೋಗುವ ಡಬ್ಬಿಯಲ್ಲಿ‌ ಒಬ್ಬ ಪೋಲೀಸನನ್ನು  ನಿಯೋಜಿಸಬೇಕೆಂದೂ ಕೈ ಜೋಡಿಸಿ ಬೇಡಿಕೊಂಡೆ.  

ಆ ಗಲಭೆಯ ದಿನಗಳಲ್ಲಿ ಲೋಕಲ್ ರೈಲುಗಳ ಸಂಚಾರ ತುಂಬಾ ವಿರಳವಾಗಿದ್ದರಿಂದ ಸಾಕಷ್ಟು ಹೊತ್ತು ಕಾಯಬೇಕಾಗಿ ಬಂತು.  ಮನೆ ತಲುಪಿದ ಮೇಲೆ ಯಾವ ಫೋನ್‌ನಿಂದಲಾದರೂ ನಮ್ಮ ಮೇಲಿನ ಮನೆಯವರಿಗೆ ತಿಳಿಸಬೇಕೆಂದು ನಾಗಮಣಿಗೆ ಹೇಳಿ ಮೇಲಿನ ಮನೆಯವರ ಫೋನ್ ನಂಬರ್ ಕೊಟ್ಟೆ. ಅವರನ್ನು ಆ ಪರಿಸ್ಥಿತಿಯಲ್ಲಿ ಕಳಿಸಲು ನನಗೆ ಏನೇನೂ ಇಷ್ಟವಿಲ್ಲದಿದ್ದರೂ ಆಕೆಯೂ ನನ್ನಂತೆ ಒಬ್ಬ ತಾಯಿಯಾದ್ದರಿಂದ ಅದು ಅನಿವಾರ್ಯವಾಗಿತ್ತು.    

ಅಂತೂ ಇಂತು ಒಂದು ಟ್ರೈನ್ ಬಂದು‌, ನಾಗಮಣಿ ಅದರಲ್ಲಿ ಹತ್ತಿ ನನಗೆ ಕೈ ಬೀಸುವ ಹೊತ್ತಿಗೆ ಟ್ರೈನ್ ಹೊರಟಿತು. ಆದರೂ ವಿಪರೀತ ದಿಗಿಲು.

ಮಧ್ಯೆ ಏನೂ ತೊಂದರೆಯಾಗದೆ ಆಕೆ ಬೇಗನೆ ಸುರಕ್ಷಿತವಾಗಿ ತನ್ನ ಮನೆ ಸೇರಿಕೊಂಡುಬಿಡಲಿ ಎಂದು ಹಾರೈಸುತ್ತಾ ಮೆಟ್ಟಿಲುಗಳನ್ನು ಹತ್ತಿ, ದಾಟಿ ಸ್ಟೇಷನ್ನಿನ ಹೊರಗೆ ಬರುವ ಹೊತ್ತಿಗೆ ದೂರದಲ್ಲೆಲ್ಲೋ ಪೋಲೀಸ್ ವ್ಯಾನಿನ ಸೈರನ್ ಮೊಳಗುತ್ತಿರುವ ಸದ್ದು!  ಯಾವ ಕ್ಷಣದಲ್ಲಾದರೂ ಯಾವ ದಿಕ್ಕಿನಿಂದಲಾದರೂ ಉದ್ವಿಗ್ನತೆ ಭುಗಿಲ್ಲೆಂದು‌ ಹೊತ್ತಿಬಿಡುವ ಸೂಚನೆಯೇ??!! ಈಗೇನು ಮಾಡಲಿ? ಅಲ್ಲೇ ಸ್ವಲ್ಪ ಹೊತ್ತು ಒಂದು ಕಡೆ ಯಾರಿಗೂ ಕಾಣದಂತೆ ಅಡಗಿಕೊಳ್ಳಲೇ??.      

ಆದರೆ ಹಾಡುಹಗಲಲ್ಲಿ ಯಾರಿಗೂ ಕಾಣದಂತೆ ಅಡಗಿಕೊಳ್ಳುವುದಾದರೂ ಎಲ್ಲಿ?  ಎಷ್ಟು ಹೊತ್ತು? ಹೇಗೆ?       ನನ್ನ ಪತಿ ದೂರದ ಹೈದರಾಬಾದಿನಲ್ಲಿದ್ದಾರೆ.‌ ಇಲ್ಲಿ‌ ನನಗೇನಾದರೂ ಆದರೆ ಮಕ್ಕಳ ಗತಿ??       ಥೂ‌! ಹಾಳು ಮನಸ್ಸು‌ ಯಾವಾಗಲೂ ಕೆಟ್ಟದ್ದನ್ನೇ ಯೋಚಿಸುತ್ತೆ….  ಇಲ್ಲಿ ಎಲ್ಲ ಸರಿ ಇದೆಯಲ್ಲ…. ಬೇಗ ಮನೆ ಸೇರಿಕೊಂಡರಾಯಿತು. ಎಂದು‌ ಆಗಾಗ್ಗೆ ಹಿಂದಕ್ಕೆ, ಅಕ್ಕ ಪಕ್ಕ  ನೋಡುತ್ತಲೇ ಓಡು ನಡಿಗೆಯಲ್ಲಿ ಹೆಜ್ಜೆ ಹಾಕತೊಡಗಿದೆ.

ಟ್ರೈನ್ ತಡವಾಗಿ ಬಂದದ್ದರಿಂದ ಮನೆ ಬಿಟ್ಟು ಒಂದೂವರೆ ಗಂಟೆಯ ಮೇಲಾಗಿತ್ತು. ಬೇಗ ಬೇಗ…. ಬೇಗ ಮನೆ ಸೇರಿಬಿಟ್ಟರೆ… ಸಧ್ಯ…     ಸಿಡಿಲ ಬೆಟ್ಟವೊಂದು ಛಕ್ಕನೆ ಧಡಲ್ಲೆಂದು‌ ಎದುರಿಗೆ ಬಿದ್ದಂತಹ ಭೀಕರ ಅನುಭವಕ್ಕೆ ಕಾಲು ಕಡಿದು ಹೋಯಿತೇನೊ ಎಂಬಂತೆ ನಡಿಗೆ ಥಟ್ಟನೆ  ನಿಂತುಬಿಟ್ಟಿತು! ಎದುರಿಗೆ ರೈಫಲ್ಲನ್ನು‌ ನನ್ನೆದೆಗೆ ಗುರಿಹಿಡಿದ,  ಶಿರಸ್ತ್ರಾಣ ಧರಿಸಿದ್ದ ಇಬ್ಬರು ಪೋಲೀಸರು!! ಅನೈಚ್ಛಿಕವಾಗಿಯೇ ಎರಡೂ‌ ಕೈಗಳನ್ನು ತಲೆಯ ಮೇಲೆತ್ತಿದೆ( ಸಿನೆಮಾಗಳಲ್ಲಿ ನೋಡಿದ್ದೆನಲ್ಲ).    

ಎದೆಗೂಡನ್ನೇ ಪುಡಿಮಾಡಿಕೊಂಡು ಹೊರಗೆ ಬರುವುದೇನೋ ಎನ್ನುವಷ್ಟು ರಭಸವಾಗಿ ಹೃದಯ ಹೊಡೆದುಕೊಳ್ಳತೊಡಗಿತು. ಭೀತಿಯಿಂದ ಕಣ್ಣುಗುಡ್ಡೆಗಳು ಹೊರಕ್ಕೆ ಜಿಗಿಯುತ್ತಿದ್ದವು. ದೇಹದಾದ್ಯಂತ ನಡುಕ. ಯಾಕೆ? ನಾನೇನು ಮಾಡಿದೆ? ನನ್ನೆದೆಗೇಕೆ ರೈಫಲ್ ಗುರಿ ಹಿಡಿದಿದ್ದಾರೆ? ಬುದ್ಧಿಯೂ ಮಂಕಾಗುತ್ತಿತ್ತು.     

“ಕಂಹಾ ಗಯೀ ಥೀ?. ಕಂಹಾ ಜಾ ರಹೀಹೋ?” ಕರ್ಕಶ ಧ್ವನಿಯಲ್ಲಿ ಕೇಳಿದ ಒಬ್ಬ.ನನ್ನ ಗೆಳತಿ ಬಂದಿದ್ದು. ಅವಳನ್ನು ಬಿಟ್ಟು ಬರಲು ಮಾತುಂಗಾ ವೆಸ್ಟ್ ಸ್ಟೇಷನ್ಗೆ ಹೋಗಿದ್ದನ್ನು,  ಧ್ವನಿಯ‌ ಕಂಪನವನ್ನು ಅದಷ್ಟೂ ತಹಬಂದಿಗೆ ತರುತ್ತಾ ನುಡಿದೆ. ಅವರಿಗೆ ನಂಬಿಕೆ ಬರಲಿಲ್ಲ. ಪರಸ್ಪರ ಮುಖ‌ನೋಡಿಕೊಂಡರು.

“ಸ್ಟೇಷನ್ಗೆ ಹೋಗಿ ಕೇಳಿ. ಅಲ್ಲಿ ಒಬ್ಬ ಪೋಲೀಸ್ ಇನ್ಸ್‌ಪೆಕ್ಟರ್‌ಗೆ ಎಲ್ಲಾ ಹೇಳಿದೀನಿ.  ಮನೆಯಲ್ಲಿ ನನ್ನ ಚಿಕ್ಕಮಕ್ಕಳಿಬ್ಬರೇ ಇದ್ದಾರೆ.‌ ನನ್ನ ಗಂಡ ಊರಲಿಲ್ಲ”  ಎಂದು ಬಡಬಡಿಸುತ್ತಾ ನನ್ನ ಅಸಹಾಯ ಪರಿಸ್ಥಿತಿ ತಿಳಿಸುವಾಗ ಧ್ವನಿ‌ ಮತ್ತೆ ನಡುಗತೊಡಗಿತು.   “ಜೂಟ್‌ ಬೋಲ್ ರಹೀ ಹೈ” (ಸುಳ್ಳು ಹೇಳುತ್ತಿದ್ದಾಳೆ) ಎಂದು ಒಬ್ಬ ಅಬ್ಬರಿಸಿದ. ಅವರುಗಳ ಬೆರಳುಗಳು ರೈಫಲ್‌ನ ಟ್ರಿಗರ್ರಿನ ಮೇಲೆ,!! ದೈನ್ಯಪೂರಿತವಾಗಿದ್ದ ನನ್ನ ಮಾತು ಅವರ ಮೇಲೆ  ಯಾವ ಪರಿಣಾಮವನ್ನೂ ಮಾಡಿದಂತೆ ಕಾಣಲಿಲ್ಲ.

ನನ್ನ ಮಾತಿನ ಅಂತರಾಳವನ್ನು ಬಗಿದು ತೆಗೆಯುವುದೇನೋ ಎಂಬಂತೆ ಎಕ್ಸ್‌ರೇಯಂತಹ ಅವರ ನೋಟ ತೀಕ್ಷ್ಣವಾಗಿ ಚುಚ್ಚುತ್ತಿತ್ತು!!           *ಕಂಡಲ್ಲಿ ಗುಂಡು* ಎಂಬ ಕಟ್ಟಾಜ್ಞೆಯನ್ನು ಉದ್ದಿಶ್ಯ ಪೂರ್ವಕವಾಗಿ  ಈಡೇರಿಸಲು ಹೊರಟರೂ ಅಥವಾ ಪ್ರಮಾದವಶಾತ್  ಬೆರಳು ಟ್ರಿಗರ್ರನ್ನು ಒತ್ತಿದರೂ…. ಮುಗಿಯಿತು ನನ್ನ ಕತೆ.

ನನ್ನ ರಕ್ತ ಸಿಕ್ತ‌ ನಿರ್ಜೀವ ದೇಹ ರಸ್ತೆಯ ಮಣ್ಣಿನಲ್ಲಿ ಬಿದ್ದು……ಅಪ್ಪ ದೂರದ ಹೈದರಾಬಾದಿನಲ್ಲಿರುವ ಮಕ್ಕಳು ಹೀಗೆ ಅಮ್ಮನನ್ನೂ ಕಳೆದುಕೊಂಡರೆ???…. ಅಯ್ಯೋ‌! ದೇವರೇ……ಸೆಕೆಂಡುಗಳೂ ಯುಗಗಳಂತೆ…. ನಿಷ್ಪಾಪಿ ಹೆಣ್ಣಾದ ನನ್ನನ್ನೂ ಕೇವಲ ಆಜ್ಞೆ  ಪಾಲಿಸಲು ಇವರು ಗುಂಡಿಕ್ಕಿ ಕೊಂದುಬಿಡುವರೇ???… ಅಥವಾ…. ಸುಮ್ಮನೇ ಗದರಿಸಿ ಅಬ್ಬರಿಸಿ ಬಿಟ್ಟುಬಿಡುವರೇ???….. ದೂರದಾಸೆಗೆ ಜೋತು ಬೀಳಲು ಸಾಧ್ಯವಿರದ ಬಿಗುವಾದ ದಿಕ್ಕು ತೋಚದ ಪರಿಸ್ಥಿತಿ.‌ 

ಅವರಿಬ್ಬರ ತೋರುಬೆರಳ ತುದಿಯಲ್ಲಿ ನನ್ನ ಪ್ರಾಣ ತೂಗಾಡುತ್ತಿತ್ತು…. ಕೂಡದು…. ಇವರ ಉದ್ದೇಶವೇನೋ ತಿಳಿಯದು. ಅಕಸ್ಮಾತ್ತಾಗಿಯಾದರೂ  ಗುಂಡೇಟಿಗೆ ಸಿಕ್ಕಿ ಹಾದಿಯಲ್ಲಿ ಹೆಣವಾಗಿ ಬೀಳಬಾರದು…  ಆದರೇ… ಹೇಗೆ ಪಾರಾಗಲೀ??? ಹೇಗೆ ಪಾರಾಗಲೀ???

ಅಧೈರ್ಯ, ಹೆದರಿಕೆ, ಭೀತಿ, ಭಯ ಈ ಪದಗಳ್ಯಾವುವೂ ನನ್ನ ನಿಘಂಟಿನಲ್ಲೇ ಇರಲಿಲ್ಲ. ಎಳೆ ವಯಸ್ಸಿನಿಂದಲೂ ನಾನು ಅಸಾಮಾನ್ಯ ಧೈರ್ಯವಂತೆ.  ಈಗಲೂ ಅದನ್ನೇ ಅವಲಂಬಿಸಬೇಕು ಎಂದು ನಿಶ್ಚಯಿಸಿದ್ದೇ ತಡ, ಬುದ್ಧಿ ಪಾದರಸದಂತೆ ಚುರುಕಾಗಿ ದಾರಿ ತೋರಿಸಿಬಿಟ್ಟಿತು.!    

ಮರುಕ್ಷಣಕ್ಕೆ ನಾನು ಯಾವ ತರಹದ ಚಿಕಿತ್ಸೆಗೂ ಸಿಗದಷ್ಟು ಹುಚ್ಚು ಹಿಡಿದ ಹೆಂಗಸಾಗಿದ್ದೆ!!?ಪೆದ್ದು ಪೆದ್ದಾಗಿ ನಗುತ್ತಾ….ಅವರ ಷರ್ಟಿನ ಗುಂಡಿ ಟೋಪಿ ಮುಟ್ಟಿ ನೋಡುತ್ತಾ…ಅರ್ಥವಿಲ್ಲದ ಪದಗಳನ್ನು ಉಚ್ಚರಿಸುತ್ತಾ…. ಅವರುಗಳ ಹಿಂದೆ ಮುಂದೆ ಸುತ್ತುತ್ತಾ…. ನನ್ನ ಕೂದಲು ಕಿತ್ತುಕೊಳ್ಳುತ್ತಾ ಅಳುತ್ತಾ ನಗುತ್ತ….ಯಾರನ್ನೋ ಬೈಯುತ್ತಾ… ರಸ್ತೆಯಲ್ಲೇ ಕುಳಿತುಬಿಡುತ್ತಾ……    ರೈಫಲ್ ಹಿಡಿದ ಫೋಲೀಸರಿಬ್ಬರಿಗೂ ದಿಗ್ಭ್ರಾಂತಿ!!!” ಅರೇ, ಏ ಔರತ್ ಪಾಗಲ್ ಹೈ!!” ಎಂದನೊಬ್ಬ.”

ಹಾಂ! ಸಚ್ಚೀ ಯೇ ಔರತ್ ಪಾಗಲ್ ಹೈ! ಇಸೀ ಲಿಯೇ ಶಾಯದ್ ಕೋಯೀ ಪಾಗಲ್‌ಖಾನೇ ಸೇ ಯಾ ಘರ್ ಸೇ ಬಾಗ್ ಕೇ ಆಯೀ ಹೋಗೀ!!( ಈ ಹೆಂಗಸು ಹುಚ್ಚಿ.

ಅದಕ್ಕೇ ಯಾವುದೋ ಹುಚ್ಚಾಸ್ಪತ್ರೆಯಿಂದಲೋ ಮನೆಯಿಂದಲೋ ತಪ್ಪಿಸಿಕೊಂಡು ಬಂದಿದ್ದಾಳೆ) ಎಂದ ಇನ್ನೊಬ್ಬ “ಅಬ್ ಕ್ಯಾ ಕರೇ??” ಎಂದು‌ ಕೇಳಿದ “ಪಗಲೀ ಔರತ್ ಕೋ ಖಾಲೀಪೀಲೀ ಕ್ಯೋಂ ಮಾರ್‌ ಡಾಲ್‌ನ. ಛೋಡ್ ದೇ(ಹುಚ್ಚಿಯೊಬ್ಬಳನ್ನು ಯಾಕೆ ಕೊಲ್ಲುವುದು. ಬಿಟ್ಟು ಬಿಡು) ಎಂದ ಮೊದಲಿನವ.”ಬಾಗ್ ಪಗಲೀ” ಎಂದವನೇ ನನ್ನ ಬೆನ್ನಿನ ಮೇಲೆ ಬೂಟು ಕಾಲಿನಿಂದ ಒದ್ದ ರಭಸಕ್ಕೆ ನೋವಿಂದ ಕಿರುಚಿದೆ.

ಆಯ ತಪ್ಪುವಂತಾದರೂ ಸಾವರಸಿಕೊಂಡು ನಿಂತು ಮತ್ತೆ ಹಿಂದೆ ತಿರುಗಿ ಹಲ್ಲು ಕಿರಿಯುತ್ತಲೇ ಅಳುತ್ತಲೇ ಮತ್ತೆ ನಾಲ್ಕು ಹೆಜ್ಹೆ ಮುಂದೆ ಹೋಗಿ‌ ಹಿಂದೆ ಬಂದು ಹೀಗೆ ಮಾಡುತ್ತಲೇ (ಓಡು ಎಂದ ತಕ್ಷಣ ನಾನು ಓಡಿ ಬಂದರೆ ಅನುಮಾನ ಬಂದು‌ ಹಿಂದಿನಿಂದ  ಶೂಟ್ ಮಾಡಿದರೆ??? ಎಂಬ ಮುನ್ನೆಚ್ಚರಿಕೆಯ ದಿಗಿಲು.

ಆದ್ದರಿಂದ ಹುಚ್ಚಿಯಾಗಿಯೇ ಅಲ್ಲಿಂದ ನಿರ್ಗಮಿಸಬೇಕಲ್ಲವೇ?)  ನಮ್ಮ ಮನೆಯ ತಿರುವು ಬಂದ ತಕ್ಷಣ ಓಡಿ ಏದುಸಿರು ಬಿಡುತ್ತಾ ಮನೆ ಸೇರಿದೆ. ಮಕ್ಕಳಿಗೆ ಏನೂ ಹೇಳಲಿಲ್ಲ. ಅಮ್ಮ ಬರುವುದು ತಡವಾಯಿತೆಂದು ಭಯದಿಂದ ಸಪ್ಪಗಾಗಿದ್ದ ಮಕ್ಕಳನ್ನು ರಮಿಸುತ್ತಾ ಕಿನ್ನರಿಯ ಕಥೆ ಹೇಳುತ್ತಾ ಅಪ್ಪಿ ಮುದ್ದಿಟ್ಟೆ…    ಬೂಟು ಕಾಲಿನಿಂದ ಒದೆಸಿಕೊಂಡ ಬೆನ್ನು  ಎಂಟು ಹತ್ತು ದಿನಗಳವರೆಗೆ ಮಾತಾಡುತ್ತಲೇ ಇತ್ತು.

‌‌೧೯೯೩ರ ಮುಂಬಯಿ ಗಲಭೆಯಲ್ಲಿನ ಒಂದು ಭೀಕರ ಅನುಭವ

‍ಲೇಖಕರು Avadhi

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ನೈಜ ಘಟನೆಯ ನೈಜ ನಿರೂಪಣೆ. ಓದುವಾಗಲೇ ಭಯವಾಗತ್ತೆ. ನೀವು ಹೇಗೆ ಎದುರಿಸಿದಿರೋ?!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: