ಸ್ವಲ್ಪ ಕಮ್ಮಿ ಮಾಡ್ಕೊಳಿ…

ಸಮತಾ ಆರ್

ಬಹಳ ವರ್ಷಗಳಿಂದ ಬೇಲೂರು ಹಳೇಬೀಡು ದೇವಸ್ಥಾನಗಳನ್ನು ನೋಡುವ ಆಸೆಯಿತ್ತು. ಯಾಕೋ ಕಾಲ ಕೂಡಿ ಬಂದಿರಲಿಲ್ಲ. ಇತ್ತೀಚೆಗೆ ಹಾಸನಕ್ಕೆ ನನ್ನ ಓರಗಿತ್ತಿ ಮನೆಗೆ ಭೇಟಿ ನೀಡಿದ್ದಾಗ ಅವಳಿಗೆ ನನ್ನ ಆಸೆ ಹೇಳಿಕೊಂಡೆ. ಅವಳು ತಕ್ಷಣ ‘ಅದಕ್ಕೇನಂತೆ ಬಾ ಹೋಗುವ’ ಎಂದು ಮಕ್ಕಳನ್ನು ಕೂಡ ಹೊರಡಿಸಿ ಕೊಂಡು ಹೊರಟೇ ಬಿಟ್ಟಳು. ಬೇಲೂರಿಗೆ ತೆರಳಿ ದೇವಳದ ಅದ್ಭುತ ಕುಸುರಿ ಕಲೆಗೆ ಬೆರಗಾಗಿ, ದೇವರ ದರ್ಶನದ ಬಳಿಕ ಹೊರ ಬಂದೆವು.

ಯಾವುದಾದರೂ ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿಯ ನೆನಪಿಗೆ ಏನಾದರೂ ಕೊಂಡು ಸಂಗ್ರಹಿಸುವುದು ನನ್ನ ಪ್ರಿಯವಾದ ಹವ್ಯಾಸ. ಅಂತೆಯೇ ದೇವಸ್ಥಾನದ ಸುತ್ತಮುತ್ತ ರಾಶಿ ರಾಶಿಯಾಗಿ ಕಲೆ ಹಾಕಿಕೊಂಡು ಮಾರುತ್ತಿದ್ದ ಕರಕುಶಲ ವಸ್ತುಗಳ ಮೇಲೆ ನನ್ನ ಕಣ್ಣು ಬಿತ್ತು. ಅದರಲ್ಲೂ ಕಲ್ಲಿನಲ್ಲಿ ಕೆತ್ತಿದ ವಿವಿಧ ದೇವರ ಮೂರ್ತಿಗಳು, ಆಕೃತಿಗಳು ಮನ ಸೆಳೆದವು. ವಿಶೇಷವಾಗಿ ಕಪ್ಪು ಕಲ್ಲಿನ ಬುದ್ಧದೇವನ ಮುಖದ ವಿಗ್ರಹದ ಸೌಂದರ್ಯಕ್ಕೆ ಮಾರುಹೋದೆ. ಸರಿ ಅದನ್ನೇ ಕೊಳ್ಳುವ ಎಂದು ಹೋಗಿ ಮಾರುವವರ ಬಳಿ ಹೋಗಿ ಬೆಲೆ ಕೇಳಿದರೆ ಎರಡು ಸಾವಿರ ಎಂದದ್ದು ಕೇಳಿ, ಆ ಕಲ್ಲಿನ ಮೂರ್ತಿಯಿಂದಲೇ ತಲೆಗೆ ಹೊಡೆದಂತೆ ಅನಿಸಿಬಿಟ್ಟಿತು. ‘ಎರಡು ಸಾವಿರ ಕೊಟ್ಟು ಕೊಳ್ಳಲಾದೀತೆ, ಬೇಡ ಬಿಡು,’ ಎಂದು ಹೇಳಿ ವಾಪಸಾಗುತ್ತಿದ್ದ ನನ್ನನ್ನು ಜಗ್ಗಿ ನಿಲ್ಲಿಸಿದ ನನ್ನ ಓರಗಿತ್ತಿ ‘ಒಂದು ನಿಮಿಷ ಸುಮ್ಮನಿರು ನೀನು’ ಅಂದು ಅಂಗಡಿಯವನ ಜೊತೆ ಚೌಕಾಸಿಗೆ ನಿಂತಳು.

‘ನೋಡಪ್ಪಾ ಒಂಚೂರು ಕಮ್ಮಿ ಮಾಡ್ಕೋ’ ಅಂದಿದ್ದಕ್ಕೆ ಆತ ‘ಏನೋ ಮೇಡಂ, ನಿಮ್ಮದೇ ಮೊದಲ ಬೋಣಿ, ಒಂದೈವತ್ತು ಕಮ್ಮಿಕೊಡಿ,’ ಅಂದ. ‘ನೋಡಪ್ಪಾ ನೂರು ರೂಪಾಯಿ ಮಾಡ್ಕೋ, ಅದರ ಮೇಲೆ ಇನ್ನಿಲ್ಲ’ ಅನ್ನಬೇಕೆ ಇವಳು. ನಾನಂತೂ ಕಕ್ಕಾಬಿಕ್ಕಿ. ‘ಅಲ್ಲ ಕಣೇ, ಎರಡು ಸಾವಿರದ ವಸ್ತು, ನೂರು ರೂಪಾಯಿಗೆ ಕೇಳ್ತೀಯಲ್ಲೇ, ಕೇಳೊದಕ್ಕು ಒಂದು ಅಳತೆ ಪ್ರಮಾಣ ಬೇಡ್ವಾ’ ಎಂದು ಪಿಸುಗುಟ್ಟುವ ದನಿಯಲ್ಲೇ ಗದರಿಸಿದೆ. ಅದಕ್ಕವಳು ‘ನೀನು ಸ್ವಲ್ಪ ಬಾಯಿ ಮುಚ್ಚಿಕೊಂಡು ನಿಲ್ಲು’ ಎಂದು ನನಗೆ ಗದರಿಸಿ ಮತ್ತೆ ಅಂಗಡಿಯವ ನೊಟ್ಟಿಗೆ ಗುದುಮುರಿಗೆ ನಿಂತಳು.

ಅವನೋ ‘ನೋಡಿ ಮೇಡಂ ಅಷ್ಟು ಕಮ್ಮಿಗೆ ಆಗೋದೇ ಇಲ್ಲ, ಬೇಕಾದ್ರೆ ನೂರು ರೂಪಾಯಿ ಕಮ್ಮಿ ಕೊಡಿ,’ ಅಂದ. ಇವಳು ಚರ್ಚೆ ಮಾಡುತ್ತಾ ಮಾಡುತ್ತಾ, ಐವತ್ತು ನೂರು ಎಂದು ಏರಿಸಿ, ಅವನು ಐವತ್ತು ನೂರು ಇಳಿಸುತ್ತ ಕಡೆಗೆ ಮುನ್ನೂರು ರೂಪಾಯಿಗೆ ತಲುಪಿಸಿಯೇ ಬಿಟ್ಟಳು. ‘ಏನೋ ಮೊದಲ ಬೋಣಿ ಅಂತ ಕೊಡ್ತಿದಿನಿ’ ಅಂತ ಗೊಣಗುಟ್ಟುತ್ತಲೆ ಆತ ಆ ಮೂರ್ತಿಯನ್ನು ಪ್ಯಾಕ್ ಮಾಡಿ ಕೊಟ್ಟ.

ನನಗೋ ಈ ವ್ಯಾಪಾರದ ಗಮ್ಮತ್ತು ನೋಡಿ ತಲೆ ತಿರುಗಿ ಹೋಯಿತು. ‘ಅಲ್ಲ ಕಣೇ,ಅದೆಂಗೆ ನೀನು ಇಷ್ಟು ಕಮ್ಮಿ ಮಾಡಿಸಿದೇ? ನಾನಾಗಿದ್ದರೆ ಐವತ್ತು ಪರ್ಸೆಂಟ್ ಕಮ್ಮಿ ಅಂದುಕೊಂಡು ಒಂದು ಸಾವಿರ ರೂಪಾಯಿಗೆ ತೊಗೊ ಬಹುದು ಅಂದುಕೊಂಡಿದ್ದೆ. ನೀನು ನೋಡಿದ್ರೆ ಎಂಬತ್ತೈದು ಪರ್ಸೆಂಟ್ ಕಮ್ಮಿ ಮಾಡಿಸಿಬಿಟ್ಟೆಯಲ್ಲ’ ಎಂದು ಕಣ್ಣಲ್ಲಿ ನೀರು ಬರುವ ತನಕ ನಕ್ಕೆ. ನಗುವಿಗೆ ಜೊತೆಯಾದ ಅವಳು ‘ಪ್ರವಾಸಿ ತಾಣಗಳಲ್ಲಿ ಹಾಗೆಯೇ. ಒಂದಕ್ಕೆ ಹತ್ತು ಮಾಡಿ ಮಾರ್ತರೆ. ನಾವು ಯಾಮಾರಬಾರದು ಅಷ್ಟೇ, ಒಂಚೂರು ಚೌಕಾಸಿ ಕಲಿ ನೀನು, ಎಷ್ಟು ದುಡ್ಡು ಉಳಿಸಬಹುದು ಗೊತ್ತಾ’ ಎಂದು ಬೀಗಿದಳು.

ಅವಳು ಹೇಳಿದ್ದು ಸರಿ. ಚೌಕಾಸಿ ಇಲ್ಲದ ವ್ಯಾಪಾರ ನಮ್ಮ ದೇಶದಲ್ಲಿ ಎಲ್ಲಿಯಾದರೂ ಉಂಟೇ? ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ಬಿಳಿಆನೆ ಮಾರಿದ್ರೂ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ಅನ್ನದೆ ವ್ಯವಹಾರ ಕುದುರುವುದುಂಟೇ!ಕೊಳ್ಳಲು ಹೋದಾಗ ಮಾರುವವರು ಹೇಳಿದಷ್ಟು ಕೊಟ್ಟು ಬಂದರೆ ಅಂತಹವರನ್ನು ವ್ಯವಹಾರ ಜ್ಞಾನ ವಿಲ್ಲದ ಮೂರ್ಖ ಎಂದು ಕನಿಕರಿಸುವವರೇ ಬಹಳ ಮಂದಿ. ಅದರಲ್ಲೂ ನಮ್ಮ ಭಾರತೀಯ ಮಧ್ಯಮ ವರ್ಗದ ನಾರಿಯರಿಗೆ ಈ ಚೌಕಾಸಿ ಗುಣ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದು ಬಿಟ್ಟಿದೆ. ಎಲ್ಲೆಲ್ಲಿ ದುಡ್ಡು ಉಳಿಸಲು ಸಾಧ್ಯವೋ ಅಲ್ಲೆಲ್ಲ ಉಳಿಸಿ,ಮನೆ ಮಕ್ಕಳು ಸಂಸಾರಕ್ಕೆಂದು ಕಾಪಿಡುವ ಈ ಗುಣ ನಮ್ಮ ಕುಟುಂಬಗಳ ಪೊರೆಯುತ್ತಿದೆ.

ಇದೆಲ್ಲ ಶುರುವಾಗೋದು ಕೊಂಚ ಹೀಗೆ. ಯಾವುದೇ ಒಂದು ವಸ್ತುವಿನ ವ್ಯಾಪಾರದಲ್ಲಿ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ಅಂತ ಮಾತುಕತೆ ಶುರುವಾಗಿ ನಂತರ ‘ನೀವೊಂದು ರೇಟ್ ಹೇಳಿ’ ಅಂತ ಮುಂದುವರೆಯುತ್ತದೆ. ಹಾಗೇ ಹಗ್ಗ ಜಗ್ಗಾಟ ನಡೆಸಿ ‘ಹೋಗ್ಲಿ ನನಗೂ ಬೇಡ, ನಿಮಗೂ ಬೇಡ, ಈ ರೇಟ್ ಹೇಳ್ತೀನಿ ಒಪ್ಕೊ ಬಿಡಿ’ ಅಂತ ಕೊಳ್ಳುವವ ಇಲ್ಲವೇ ಮಾರುವವ ಹೇಳಿ, ಅದು ಇಬ್ಬರಿಗೂ ಒಪ್ಪಿಗೆಯಾಗುವಲ್ಲಿ ವ್ಯಾಪಾರ ಕುದುರುತ್ತದೆ.
ಹಾಗಂತ ಈ ಚೌಕಾಸಿ ಮಾಡೋದಿಕ್ಕೆ ದೊಡ್ಡ ದೊಡ್ಡ ಮಾಲ್, ಅಂಗಡಿಗಳಲ್ಲಿ ಅವಕಾಶ ಇಲ್ಲವೇ ಇಲ್ಲ. ಚೌಕಾಸಿಗೆ ಸೂಕ್ತರಾದವರು ಎಂದರೆ, ಮನೆ ಮುಂದೆ ಬರುವ ಸೊಪ್ಪಿನವರು, ಹೂವಿನವರು, ತಳ್ಳೋ ಗಾಡಿ ತರಕಾರಿಯವರು,ಚಿಕ್ಕ ಚಿಕ್ಕ ಪಟ್ಟಣಗಳ, ಸಣ್ಣ ಸಣ್ಣ ಅಂಗಡಿಗಳವರು, ಟೈಲರ್ ಗಳು, ಆಟೋರಿಕ್ಷಾದವರು ಇತ್ಯಾದಿ.

ನನ್ನ ನೆರೆಮನೆಯಾಕೆ ಒಬ್ಬರು ಸೊಪ್ಪಿನವರ ಹತ್ತಿರ ಜಗಳವಾಡಿದಂತೆಯೇ ಮಾತನಾಡುತ್ತಾ ಕಂತೆ ಕಂತೆ ಸೊಪ್ಪು ಕೊಳ್ಳುತ್ತಿದ್ದರು. ‘ಪಾಪ ಸಣ್ಣ ಪುಟ್ಟ ಬಂಡವಾಳದವರ ಹತ್ತಿರ ಹೀಗೆಲ್ಲ ವ್ಯಾಪಾರ ಮಾಡ್ತಾರ! ಒಂದೆರಡು ರೂಪಾಯಿ ಉಳಿಸಿ ಏನು ಮನೇ ಮೇಲೆ ಮನೆ ಕಟ್ತಳಾ’ ಅನ್ನಿಸಿ ವಿಪರೀತ ರೇಗಿ ಹೋಗುತ್ತಿತ್ತು.

ಜೊತೆಗೆ ಅಷ್ಟು ಚೌಕಾಸಿ ಮಾಡಿದ್ರೂ ಅದೇ ಮನೆಗೆ ಸೊಪ್ಪು ಮಾರಲು ಹೋಗುವವಳ ಮೇಲೆಯೂ ಸಿಟ್ಟು ಬರುತ್ತಿತ್ತು. ತಡೆಯಲಾಗದೆ ಒಂದು ದಿನ ಸೊಪ್ಪಿನ ಅಜ್ಜಿ ಯನ್ನು ಕೇಳಿಯೇ ಬಿಟ್ಟೆ ‘ಅಲ್ಲ ಕಣಮ್ಮ,ಇಷ್ಟು ಕಮ್ಮಿಗೆ ಕೊಟ್ರೆ ನಿಮ್ಗೆ ಏನ್ ಗಿಟ್ಟುತ್ತೆ, ಹೊತ್ತು ಮಾರೋರ ಹತ್ರ ಹಿಂಗ ಚೌಕಾಸಿ ಮಾಡೋದು,ನಿಮ್ಗೂ ಬುದ್ಧಿ ಬೇಡ್ವಾ’ ಎಂದು ಗದರಿಸಿದೆ.

ಆಶ್ಚರ್ಯವೆಂದರೆ ಆ ಅಜ್ಜಿ ನಗುತ್ತಾ ‘ಅಯ್ಯೋ ಅದೆಲ್ಲ ಏನೂ ಇಲ್ಲ ಕಣವ್ವ, ಆವಮ್ಮ ಸೊಪ್ಪಿಗೆ ಚೌಕಾಸಿ ಮಾಡ್ತಾಳೆ, ಆದ್ರೆ ಯಾವಾಗ್ಲೂ ಕಷ್ಟ ಸುಖ ಕೇಳ್ತಳೆ ಕಣವ್ವ. ತಿಂಡಿ ಕಾಫೀ ಕೊಡ್ತಾಳೆ. ಉಡೋಕೆ ಹಳೇ ಸೀರೆ ಇದ್ರೆ ಕೊಡ್ತಾಳೆ, ಏನೋ ನನ್ನ ಜೊತೆ ಮಾತಿನ ಚಟಕ್ಕೆ ಹಂಗೆ ಚೌಕಾಸಿ ಮಾಡ್ತಾಳೆ ಅಷ್ಟೇ. ನಾನೂಅಷ್ಟೇ, ಏನೋ ಒಂದ್ ರೂಪಾಯಿ ಕಮ್ಮಿ ಮಾಡ್ ಬೌದು, ಅಷ್ಟಕ್ಕೇ ಮಗಳಂಗಿರೋ ಅವಮ್ಮನ ಬುಡಕ್ಕೆ ಆಯ್ತದಾ’ ಎಂದು ನಕ್ಕಾಗ ನನಗೆ ಪರಮಾಶ್ಚರ್ಯವಾಯಿತು. ಮನುಷ್ಯನ ಮನೋವ್ಯಾಪಾರದ ಗುಟ್ಟು ಯಾವ ಯಾವ ತರಹ ಇರುತ್ತದೋ ಕಂಡಿರುವವರು ಯಾರು?

ದಿನಾ ಬೆಳಿಗ್ಗೆ, ತರಕಾರಿ ಮಾರಲು ಒಬ್ಬ, ತನ್ನ ಆಪೆ ಆಟೋದಲ್ಲಿ, ವಿವಿಧ ತರಹದ ಸೊಪ್ಪು, ತರಕಾರಿ, ಹಣ್ಣುಗಳ ತುಂಬಿಕೊಂಡು ‘ಥರ್ ಕ್ಕಾರೀ’ ಅಂತ ವಿಚಿತ್ರವಾಗಿ ಕೂಗಿಕೊಂಡು ನಮ್ಮ ಮನೆಯ ಎದುರಿನ ರಸ್ತೆಗೆ ಬರುತ್ತಾನೆ. ಅಕ್ಕಪಕ್ಕದ ಹೆಂಗಳೆಯರಿಗೆಲ್ಲಾ ಬೆಳಗಿನವೇಳೆ ಸ್ವಲ್ಪ ಅಡಿಗೆಮನೆಯ ರೋಸು, ಮಕ್ಕಳ ಹೊರಡಿಸುವ ತರಾತುರಿ ಎಲ್ಲದರಿಂದ ಕ್ಷಣವಾದರೂ ಬಿಡುವು ಸಿಗುವುದು ಈಗಲೇ.

ತರಕಾರಿ ನೆಪ ಹೇಳಿ ಆಚೆ ಬಂದು ಮಾರುವವನ ಹತ್ರ ಚೌಕಾಸಿ ಮಾಡುತ್ತಾ, ಅಕ್ಕಪಕ್ಕದ ಗೆಳತಿಯರ ಹತ್ತಿರ ‘ಏನ್ ತಿಂಡಿ ಇವತ್ತು, ಆಫೀಸ್ ಗೆ ಲೇಟ್ ಆಗಿಲ್ವಾ, ಮಕ್ಕಳ ಸ್ಕೂಲ್ ವ್ಯಾನ್ ಇನ್ನೂ ಬಂದಿಲ್ಲ ಇವತ್ತು’ ಅಂತ ಇರುವ ಮೈಕ್ರೋ ಸೆಕೆಂಡ್ ಗಳಲ್ಲೇ ವಿಚಾರಿಸುತ್ತಾ, ತರಕಾರಿಯನ್ನು ಆರಿಸುತ್ತಾರೆ. ‘ಅದು ಒಣಗಿದೆ, ಇದು ಬಲಿತಿದೆ, ಇನ್ನೊಂದು ಸ್ವಲ್ಪ ಹಾಕು, ಮಾರ್ಕೇಟ್ ಗೆ ಹೋದ್ರೆ ಈರುಳ್ಳಿ ಇನ್ನೂ ಐದು ರೂಪಾಯಿ ಕಮ್ಮಿ ಗೊತ್ತಾ’ ಅನ್ನುತ್ತಾ, ಖರೀದಿಸಿದ ಬಳಿಕ, ಒಂದು ಕೊತ್ತಂಬರಿ ಕಟ್ಟೋ, ಒಂದು ನಿಂಬೆ ಹಣ್ಣನ್ನೋ, ಇಲ್ಲವೇ ಒಂದು ನಾಲ್ಕು ಹಸಿಮೆಣಸಿನ ಕಾಯಿಯನ್ನು ಪುಕ್ಕಟ್ಟೆ ಕೇಳಿ ಪಡೆದರೂ ಸಮಾಧಾನವಿಲ್ಲ ಇವರಿಗೆ. ‘ಮಾರ್ಕೇಟ್ ಗೆ ಹೋಗಿದ್ದಿದ್ರೆ ಇನ್ನೂ ನೂರು ರೂಪಾಯಿ ಕಡಿಮೆ ಆಗ್ತಿತ್ತು ಗೊತ್ತಾ’ ಎಂದು ಗೊಣಗುತ್ತಲೇ, ಇನ್ನೂರ ಹತ್ತು ರೂಪಾಯಿ ಕೊಡಬೇಕಾಗಿದ್ದರೂ ಇವರು ಕೊಡುವುದು ಇನ್ನೂರೇ ರೂಪಾಯಿಗಳನ್ನು.

ಅವನು ನಸು ನಗುತ್ತಲೇ, ‘ಅಮ್ಮ ಇನ್ನು ಈ ರೋಡ್ ಗೆ ಬರಬಾರ್ದು ಅಂದ್ ಕೊಂಡಿದ್ದಿನಿ. ಬರೀ ಲಾಸು,ನೀವೆಲ್ಲ ಮಾರ್ಕೇಟ್ ಗೆ ಹೋಗಿ, ಹೋಗ್ತಾ ನೂರು, ಬರ್ತಾ ನೂರು ಆಟೋ ಗೆ ಕೊಡಿ. ನಿಮ್ಗೆ ಗೊತ್ತಾಯ್ತದೆ, ಆಗ ನಿಮ್ಗೆ ನನ್ ಗಾಡಿನೆ ಬೇಕಾಯ್ತದೆ’ ಅಂತ ಹೇಳಿ ಹೋದರೂ, ಮಾರನೇ ಬೆಳಿಗ್ಗೆ ಮತ್ತೆ ಅದೇ ಅವನ ‘ಥರ್ ಕ್ಕಾರೀ’ ರಾಗ ಕೇಳದಿದ್ದರೆ ಈ ಹೆಂಗಳೆಯರಿಗೆ ಕೂಡ ಸಮಾಧಾನವಿಲ್ಲ. ಅವನು ಹೇಳುವ ಪ್ರಕಾರ ಮಾರ್ಕೇಟ್ ಗೆ ಹೋಗಲು ಇರುವ ಆಟೋ ಖರ್ಚು,ಮತ್ತೆ ಅಲ್ಲಿ ಮಾಲ್ಗಳಲ್ಲಿ ಸಿಗುವ ಕೋಲ್ಡ್ ಸ್ಟೋರೇಜ್ ನ ತರಕಾರಿಯ ಮಾಸಿದ ತಾಜಾತನ ನೆನೆದರೆ, ನೇರವಾಗಿ ರೈತರಿಂದ ತಂದು ಮಾರುವ ಇವನೇ ವಾಸಿ ಅನ್ನಿಸುತ್ತೆ. ಅಲ್ಲದೆ ಮಾಲ್ ನಲ್ಲಿ ಸಂಬಾರ ಸೊಪ್ಪು, ಮೆಣಸಿನಕಾಯಿ ಪುಕ್ಕಟ್ಟೆ ಸಿಗ್ತಾವ ಹೇಳಿ.

ಹಾಗೆ ಕೆಲ ಹೆಂಗಳೆಯರಿಗೆ ಚೌಕಾಸಿ ಮಾಡುವುದು ಒಂದು ಅಭ್ಯಾಸವೇ ಹೊರತು ಮಾರುವವರಿಗೆ ಏನಾದರೂ ಹಾನಿಯುಂಟು ಮಾಡುವ ದುರುದ್ದೇಶ ವಂತು ಏನೂ ಇರುವುದಿಲ್ಲ. ಆದರೆ ಕೆಲವರಿಗೆ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಉಳಿಸುವುದೇ ಜೀವನದ ಪರಮಾರ್ಥ ಗುರಿಯಾಗಿ ಬಿಟ್ಟಿರುತ್ತದೆ. ನನ್ನ ಗೆಳತಿಯೊ ಬ್ಬಳಿಗಂತೂ ಸಿಕ್ಕ ಸಿಕ್ಕ ವ್ಯಾಪಾರ ವ್ಯವಹಾರಗಳಲ್ಲಿ ಎಷ್ಟು ಉಳಿಸಲು ಸಾಧ್ಯವೋ ಅಷ್ಟು ಉಳಿಸದಿದ್ದರೆ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ.

ಟೈಲರ್, ಆಟೋ ಚಾಲಕರಿಂದ ಹಿಡಿದು ಹಾಸ್ಪಿಟಲ್, ಡಾಕ್ಟರ್, ಮನೆ ಕಟ್ಟೋ ಕಂಟ್ರಾಕ್ಟರ್ ವರೆಗೆ ಯಾರನ್ನೂ ಬಿಟ್ಟವಳೇ ಅಲ್ಲ. ‘ಒಂದು ರೂಪಾಯಿ ಉಳಿಸಿದ್ದು ಹತ್ತು ರೂಪಾಯಿ ಗಳಿಸಿದ್ದಕ್ಕೆ ಸಮ’ ಎನ್ನುವುದು ಅವಳ ಬದುಕಿನ ಮೂಲ ಮಂತ್ರ. ಅವಳ ಗಂಡ ಮಾತ್ರ ಅವಳಿಗೆ ತದ್ವಿರುದ್ದ. ಏನೇ ಕೊಳ್ಳಲು ಹೋದರೂ ಚೌಕಾಸಿ ಮಾಡದೆ ಕೇಳಿದಷ್ಟು ಕೊಟ್ಟು ಬರುವ ಆತ ಇವಳ ಪ್ರಕಾರ ಪ್ರಪಂಚದ ಕಡು ಮೂರ್ಖ. ‘ನೋಡೆ, ಅವತ್ತು ಅಟೋದವನು ಐವತ್ತು ಕೇಳಿದರೆ ಇವನು ತೊಗೊ, ನಾನು ಬಾಯಿ ಬಿಡುವಷ್ಟರಲ್ಲಿ ಕುಬೇರನ ಮೊಮ್ಮಗನ ಹಾಗೆತೆಗೆದು ಕೊಟ್ಟು ಬಿಟ್ಟ. ನಾನು ಮಾತಾಡಿದ್ದಿದ್ದರೆ ಮೂವತ್ತು ರೂಪಾಯಿಗೆ ಆಗಿರೋದು, ಏನೂ ಪ್ರಪಂಚ ಜ್ಞಾನವಿಲ್ಲ’ ಅಂತ ಮೂರು ದಿನ ಕೊರಗಿದಳು.

ಇನ್ನೂ ಟೈಲರ್ಗಳ ಹತ್ತಿರವಂತೂ ಜಗಳವೇ ಜಗಳ. ‘ಇವರಿಗೆ ಒಂದು ವರ್ಷಕ್ಕೆ ಕೊಡೋ ದುಡ್ಡಲ್ಲಿ ಒಂದು ಹೊಲಿಗೆ ಮಷೀನ್ ತೊಗೊಂಡು ನಾನೇ ಬಟ್ಟೆ ಹೊಲಿದುಕೊಂಡ್ರೆ ಸಾವಿರಾರು ರೂಪಾಯಿ ಉಳಿಸಬಹುದು’ ಅನ್ನೋ ಲೆಕ್ಕಾಚಾರ ಬೇರೆ. ಆದರೆ ಆ ಮಷೀನ್ ಇದುವರೆಗೂ ಅವಳಮನೆ ಕಂಡಿಲ್ಲ, ಇವಳು ಟೈಲರ್ಗಳ ಹತ್ರ ಜಗಳವಾಡೋದು ನಿಂತಿಲ್ಲ.

ಚಿನ್ನ ಬೆಳ್ಳಿ ಖರೀದಿಗೆ ಹೊರಟರಂತೂ ಒಂದು ಕ್ಯಾಲ್ಕುಲೇಟರ್ ಸಹಿತವೇ ಹೊರಡುತ್ತಾಳೆ. ಹೇಗಿದ್ದರೂ ಯಾವುದೇ ಊರಾದರೂ ಒಡವೆ ಅಂಗಡಿಗಳು ಯಾವುದಾದರೂ ಒಂದೇ ಬೀದಿಯಲ್ಲಿ ನೆಲೆ ನಿಂತಿರುತ್ತವಲ್ಲವೆ? ಹಾಗಾಗಿ ನಾಲ್ಕಾರು ಅಂಗಡಿಗಳ ಸುತ್ತುವುದೂ ಸುಲಭವೇ.ಪ್ರತಿ ಅಂಗಡಿಯಲ್ಲಿ ಆ ದಿನದ ಚಿನ್ನದ ದರ ಕೇಳಿ, ವೇಷ್ಟೆಜ್ ಎಷ್ಟೆಂದು ವಿಚಾರಿಸಿ, ಮಜೂರಿ ದರ ಚರ್ಚೆ ಮಾಡಿ, ಗುಣಿಸಿ, ಭಾಗಿಸಿ, ಕೂಡಿ, ಕಳೆದು ಎಲ್ಲಾ ಮಾಡಿ,ಕೊನೆಗೆ ಅವಳಿಗೆ ‘ಪರವಾಗಿಲ್ಲ, ಬೇರೆ ಅಂಗಡಿಗೆ ಹೋಲಿಸಿದರೆ ಗಿಟ್ಟುತ್ತೇ’ ಅನ್ನಿಸುವ ಅಂಗಡಿಯಲ್ಲಿ ಖರೀದಿಸುತ್ತಾಳೆ. ಅವಳ ಜೊತೆ ಏನಾದರೂ ಒಡವೆ ಅಂಗಡಿಗಳಿಗೆ ಹೋದರೆ ತಲೆ ಕೆಟ್ಟು ಗೊಬ್ಬರ ಆಗೋದಂತು ಗ್ಯಾರಂಟೀ.

ಯಾವುದೇ ಒಂದು ವಸ್ತು ಕೊಳ್ಳಬೇಕಾದರೂ ನಾಲ್ಕಾರು ಅಂಗಡಿ ತಿರುಗಿ, ಬೆಲೆ ಹೋಲಿಕೆ ಮಾಡಿ ಅತ್ಯಂತ ಸೂಕ್ತ ಅನಿಸಿದ ಅಂಗಡಿಯಲ್ಲೂ ‘ಇನ್ನೂ ಸ್ವಲ್ಪ ಕಮ್ಮಿ ಮಾಡಿ’ ಅಂತ ಹೇಳಿ, ಇಲ್ಲವೇ ‘ಡಿಸ್ಕೌಂಟ್ ಎಷ್ಟು’ ಎಂದೆಲ್ಲ ವಿಚಾರಿಸಿ ನಂತರವೇ ಅವಳು ಕೊಳ್ಳುವುದು.
ಹೂವಿನವರು ಮೊಳದಲ್ಲಿ ಅಳೆಯುವವರಾದರೆ, ಅವರ ಹತ್ತಿರ ಅಪ್ಪಿ ತಪ್ಪಿಯೂ ಕೊಳ್ಳಲಾರಳು. ‘ಬರೀ ಮೋಸ ಕಣೆ,ಕೈಯಲ್ಲಿ ಎಳೆದು ಎಳೆದು ಕಮ್ಮಿ ಮಾಡಿ ಮಾರ್ತಾರೆ, ಮೀಟರ್ ಲೆಕ್ಕದಲ್ಲಿ ತೊಗೊಂಡರೆ ಸರಿ’ ಅನ್ನುವ ಸಲಹೆ ಬೇರೆ. ‘ಅಷ್ಟೆಲ್ಲಾ ಸಣ್ಣ ವ್ಯಾಪಾರಸ್ಥರ ಬಳಿ ಚೌಕಾಸಿ ಮಾಡಿ ಏನ್ ಮಹಾ ದುಡ್ಡು ಉಳಿಸಿ ಗುಡ್ಡೆ ಹಾಕ್ತಿಯ’ ಅಂತ ಬೈದರೂ ಅವಳು ಕೇಳುವುದಿಲ್ಲ. ‘ನಿಂಗೇನೆ ಗೊತ್ತು, ಹನಿ ಹನಿ ಕೂಡಿದರೆ ಹಳ್ಳ ಅಲ್ಲವೇನೆ. ಅಷ್ಟಿಲ್ಲದೇ ನಮ್ಮ ಹಿರಿಯರು ಗಾದೆ ಮಾಡಿದ್ದಾರಾ? ಹೊಳೆಗೆ ಹಾಕಿದ್ರೂ ಅಳೆದು ಹಾಕು ಅಂತ.’ ಎಂದೆಲ್ಲ ಹೇಳಿ ನನ್ನ ಬಾಯಿ ಮುಚ್ಚಿಸಿ ಬಿಡುತ್ತಾಳೆ.

ಅವಳ ಈ ಚೌಕಾಸಿ ಗುಣ ಅವಳಿಗೆ ಅನುವಂಶೀಯವಾಗಿ ಅವರಮ್ಮನಿಂದ ಬಂದದ್ದು. ಅವಳೇ ಹೇಳಿದ ಹಾಗೆ ಸರ್ಕಾರಿ ನೌಕರಿಯಲ್ಲಿ ದ್ದ ಅವರಪ್ಪ ಅವರಮ್ಮನಿಗೆ ಮನೆಖರ್ಚಿಗೆ ಅಂತ ದುಡ್ಡು ಕೊಡುವಾಗ ಎಲ್ಲದಕ್ಕೂ ಲೆಕ್ಕ ಕೇಳ್ತಿದ್ದರು. ಮನೆ ನಿರ್ವಹಣೆ ಖರ್ಚು ಬಿಟ್ಟು ಬೇರೆ ಇನ್ಯಾವದಕ್ಕೂ ದುಡ್ಡು ಕೊಡ್ತಿರಲಿಲ್ಲ. ಆಗ ಅವರಮ್ಮ ತಮ್ಮ ಇತರೆ ಖರ್ಚು, ಸಿನೆಮಾ, ಸೀರೆ, ಮಕ್ಕಳ ತಿಂಡಿ, ಊರಿಗೆ ಹೋದಾಗ ತಮ್ಮ ಅಮ್ಮನಿಗೆ ಕೊಡಲು ಇತ್ಯಾದಿಗಳಿಗೆ ಈ ಮನೆ ಖರ್ಚು ವೆಚ್ಚಕ್ಕಂತ ಕೊಡುತ್ತಿದ್ದ ದುಡ್ಡಿನಲ್ಲೇ ಮಿಗಿಸಿ ಕೊಳ್ಳಬೇಕಾಗಿತ್ತು. ಈ ತರಹದ ಖರ್ಚುಗಳಿಗೆ ಅವರಪ್ಪ ಬಿಲ್ಕುಲ್ ಒಪ್ಪುತ್ತಿರಲಿಲ್ಲ ಮತ್ತೆ ಅವರಮ್ಮನಿಗೆ ಮನೆ ಖರ್ಚಿನ ಹೊರತಾಗಿ ಸ್ವಲ್ಪ ದುಡ್ಡು ‘ಯಾವುದಕ್ಕಾದರೂ ಬೇಕಾಗಬಹುದು, ನೀನು ಇಟ್ಟುಕೋ.’ ಅಂತ ಕೊಟ್ಟವರೇ ಅಲ್ಲ. ‘ಕೇಳಿದ್ದನ್ನೆಲ್ಲ ಕೊಡಿಸುತ್ತೀನಲ್ಲ,ಇನ್ಯಾಕೆ ಬೇರೆ ದುಡ್ಡು,’ ಅನ್ನೋ ದರ್ಪದ ಮಾತು ಬೇರೆ. ಹಾಗಾಗಿ ಏನೇ ಕೊಳ್ಳಲು ಹೋದರೂ ಚೌಕಾಸಿ ಮಾಡಿ ದುಡ್ಡು ಉಳಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು.

ನನಗಿನ್ನೂ ನೆನಪಿದೆ, ಒಮ್ಮೆ ಅವರ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ಟೀಪಾಯ್ ಮೇಲೆ ಒಂದು ರೇಷನ್ ಪಟ್ಟಿ ಇದ್ದದ್ದು ನೋಡಿ ಕುತೂಹಲಕ್ಕೆಂದು ತೆಗೆದು ನೋಡಿದೆ.ನೋಡಿದರೆ ಸಾಸಿವೆ, ಜೀರಿಗೆಗಳನ್ನೂ ಕೆಜಿ ಗಳ ಲೆಕ್ಕದಲ್ಲಿ ಬರೆದಿದ್ದ, ಒಂದು ಸಣ್ಣ ಸಮಾರಂಭಕ್ಕೆ ಆಗುವಷ್ಟು ಸಾಮಾನುಗಳ ಪಟ್ಟಿ ನೋಡಿ ದಂಗಾಗಿ ಹೋಗಿ ‘ಇದೇನೇ ನಿಮ್ಮ ಮನೆಯಲ್ಲಿ ಏನಾದರೂ ಕಾರ್ಯ ಇಟ್ಟುಕೊಂಡಿದ್ದೀರ’ ಎಂದು ಕುತೂಹಲ ದಿಂದ ವಿಚಾರಿಸಿದೆ.ಅವಳು ನಗುತ್ತಾ, ‘ಇಲ್ಲ ಕಣೆ, ಈ ರೇಷನ್ ಪಟ್ಟಿ ನಮ್ಮಪ್ಪನಿಗೆ ತೋರಿಸಲು, ಇದರಲ್ಲಿ ಬರೆದಿರು ವಷ್ಟು ದುಡ್ಡು ಅಪ್ಪ ಕೊಡ್ತಾರೆ, ನಿಜವಾಗಿ ತರೋದೆ ಬೇರೆ’ ಅಂತ ಇನ್ನೊಂದು, ಈ ಪಟ್ಟಿಯ ಕಾಲು ಭಾಗದಷ್ಟಿದ್ದ ಇನ್ನೊಂದು ಪಟ್ಟಿ ತೋರಿಸಿದಳು. ‘ಇದು ಮೋಸ ಅಲ್ವಾ’ ಅನ್ನೋ ನನ್ನ ಪ್ರಶ್ನೆಗೆ, ‘ನಮ್ಮಪ್ಪ ಮಾಡೋದು ಸರಿಯಾ’ ಅಂತ ಮರು ಪ್ರಶ್ನೆ ಹಾಕಿದಳು. ನನಗೇನೂ ತೋಚದೆ ಸುಮ್ಮನಾದೆ. ಈಗ ಅವಳ ಗಂಡ ಏನೂ ಅವಳಪ್ಪನ ಹಾಗೆ ದುಡ್ಡು ಕಾಸಿಗೆ ತೊಂದರೆ ಮಾಡೋಲ್ಲವಾದರೂ, ಇವಳ ಚೌಕಾಸಿ ಮಾಡೋ ಬುದ್ಧಿ ಮಾತ್ರ ಹೋಗಿಲ್ಲ.

ಎಷ್ಟೆಲ್ಲ, ಏನೆಲ್ಲಾ ಅವಳು ಕಮ್ಮಿ ಮಾಡಿಸಿದರೂ, ಹೋಟೆಲ್, ಬೇಕರಿಗಳಿಗೆ ಹೋದ್ರೆಮಾತ್ರ ಅವಳ ಆಟ ಏನೂ ನಡೆಯೋದಿಲ್ಲ. ‘ಇದೊಂದು ಕಡೆ ಮಾತ್ರ ನನ್ನ ಚೌಕಾಸಿ ನಡೆಯೋಲ್ಲ ಕಣೆ’ ಅಂತ ಹಲ್ಲು ಕಿರಿದು, ಹೊಟ್ಟೆಬಿರಿಯ ತಿಂದು, ದುಡ್ಡು ಕೊಡುವಾಗ ಹೊಟ್ಟೆಯುರಿದುಕೊಂಡು ಕೊಟ್ಟು ಬರುತ್ತಾಳೆ.

ಇವಳ ಒಡನಾಟದಲ್ಲಿ ನಾನೂ ಸ್ವಲ್ಪ ಚೌಕಾಸಿ ಮಾಡೋದು ಯಾಕೆ ಕಲಿಯಬಾರದು ಅನ್ನಿಸಿತು. ದುಡ್ಡು ಉಳಿತಾಯವಾದರೆ ಒಳ್ಳೆಯದೇ ಅಲ್ಲವೇ. ಹಾಗಂತ ಹೇಳಿ ಟೈಲರ್ ಅಂಗಡಿಯೊಂದರಲ್ಲಿ ‘ಸ್ವಲ್ಪ ಕಮ್ಮಿ ಮಾಡ್ಕೊಳ್ಳಿ’ ಅಂದಾಕ್ಷಣವೇ ಆ ಟೈಲರ್ ತನ್ನ ಸಕಲೆಂಟು ಕಷ್ಟಗಳು, ಮದುವೆಗೆ ಬೆಳೆದು ನಿಂತಿರುವ ಎರಡು ಹೆಣ್ಣು ಮಕ್ಕಳ ಮದುವೆಗೆ ದುಡ್ಡು ಜೊಡಿಸೋ ಕಷ್ಟ, ಹಾಸಿಗೆ ಹಿಡಿದಿರುವ ಅಮ್ಮ, ಇತ್ಯಾದಿ ಇತ್ಯಾದಿ ತನ್ನ ಜೀವನದ ಪ್ರವರಗಳನ್ನೆಲ್ಲ ಅರ್ಧ ಗಂಟೆ ಕೊರೆದು ನನಗೆ ನನ್ನ ಜಿಪುಣತನದ ಮೇಲೆಯೇ ಬೇಸರ ಹುಟ್ಟುವಂತೆ ಮಾಡಿಬಿಟ್ಟ. ‘ಹೋಗಲಿ ಪಾಪ ‘ಅನ್ನಿಸಿ ಅವನು ಕೇಳಿದಷ್ಟು ದುಡ್ಡು ಕೊಟ್ಟು, ಜೊತೆಗೆ ನನ್ನ ಗೆಳತಿಯರು ಕೆಲವರಿಗೆ ಅವನ ಅಂಗಡಿಗೇ ಬಟ್ಟೆ ಹೊಲೆಯಲು ಕೊಡಲು ಹೇಳಿ, ದುಡ್ಡು ಕಮ್ಮಿ ಮಾಡಿಸುವುದು ಇರಲಿ, ಇನ್ನೂ ಹೆಚ್ಚಿನ ವರಮಾನ ಬರುವಂತೆ ಅವನಿಗೆ ಮಾಡಿಕೊಟ್ಟೆ.

ಇನ್ನು ರಸ್ತೆ ಬದಿಯಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಮಾರುವವರ ಬಳಿ ಚೌಕಾಸಿ ಮಾಡಲು ಮನಸ್ಸೇ ಬರುವುದಿಲ್ಲ. ಒಮ್ಮೆ ಸುಮ್ಮನೆ ಒಂದು ರಸ್ತೆ ಬದಿಯಲ್ಲಿ ಎಳನೀರು ಕುಡಿಯುವಾಗ, ಪಕ್ಕದಲ್ಲೇ ರಾಶಿ ಹಾಕ್ಕೊಂಡು ಮಾರುತ್ತಿದ್ದ ಬಣ್ಣ ಬಣ್ಣದ ಕಾರ್ಪೆಟ್ ಗಳ ಮೇಲೆ ಕಣ್ಣು ಬಿತ್ತು. ಸುಮ್ಮನೆ ವಿಚಾರಿಸಿದಾಗ ಆ ಮಾರುವವನು ‘ತೊಗೊಳ್ಳಿ’ ಎಂದು ಗಂಟು ಬಿದ್ದು ಬಿಟ್ಟ. ಎಷ್ಟು ಕಾಡಿಸಿದ ಎಂದರೆ ಕೊನೆಗೆ ಮಗಳೊಟ್ಟಿಗೆ ಸ್ಕೂಟಿ ಹತ್ತಿ ಹೊರಟರೂ ಕೂಡ ಸ್ಕೂಟಿ ಹಿಂದೆಯೇ ಕೊಂಚ ದೂರ ಓಡಿಯೂ ಬಂದ. ನನ್ನ ಮಗಳ ಮನಸ್ಸಂತೂ ಕರಗಿ ನೀರಾಗಿ ಹೋಯಿತು.

‘ಪಾಪ ಅಮ್ಮ, ಅವನ ಸಮಾಧಾನಕ್ಕಾದ್ರು ಒಂದು ಸಣ್ಣ ಕಾರ್ಪೆಟ್ ಆದ್ರೂ ತೊಗೊ’ ಅಂತ ಕಾಡಿಸಿದಳು. ‘ಹಾಗೆಲ್ಲ ಪಾಪ ಪುಣ್ಯ ಅಂತ ನೋಡ್ತಾ ಹೋದ್ರೆ ಬದುಕಲಾದೀತೆ ಮಗಳೆ, ಬೇಡ ಬಾ’ ಅಂದರೂ ಅವಳ ‘ಅಯ್ಯೋ ಪಾಪ’ ಅನ್ನೋ ರಾಗ ತಪ್ಪಲಿಲ್ಲ. ನಾನು ನಿರಾಕರಿಸಿದಾಗ ‘ಇನ್ನೊಮ್ಮೆ ನೀನು ಹಾಗೆ ಸುಮ್ಮ ಸುಮ್ಮನೆ ರೇಟ್ ಕೇಳಿ ಏನೂ ತೊಗೊಳ್ಳದೆ ಸುಮ್ನೆ ಬಂದ್ರೆ ನೋಡು.ಕೊಳ್ಳುವುದಾದರೆ ಮಾತ್ರ ರೇಟ್ ಕೇಳು’ ಎಂದೆಲ್ಲ ಮನೆ ತಲುಪುವವರೆಗೂ ಉಪದೇಶ ಮಾಡಿದಳು.

ಒಂದು ದಿನ ನನ್ನ ಈ ಚೌಕಾಸಿ ಗೆಳತಿ ಜೊತೆ ಶಾಪಿಂಗ್ ಗೆ ಹೋದಾಗ, ಒಬ್ಬ ಆಟೋ ರಿಕ್ಷಾದವನ ಬಳಿ, ಆಟೋ ಹತ್ತಿದ ಕ್ಷಣವೇ ಇವಳ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ಆಲಾಪ ಶುರುವಾಯಿತು. ಅವನು ನಗುತ್ತ ‘ಅಲ್ಲ ಮೇಡಂ ತಿಂಗಳಿಗೆ ಐವತ್ತು ಅರವತ್ತು ಸಾವಿರ ಸಂಬಳ ತೆಗೆಯುವ ನೀವೇ ಹೀಗೆ ಮಾಡಿದ್ರೆ, ದಿನಕ್ಕೆ ಹೆಚ್ಚು ಅಂದ್ರೆ ಮುನ್ನೂರು ದುಡಿಯುವ ನಾವು ಬದುಕೋದು ಹೇಗೆ? ದೊಡ್ಡ ದೊಡ್ಡ ಅಂಗಡಿ, ಮಾಲ್ ಗಳಿಗೆ ಹೋದರೆ ಕೇಳಿದಷ್ಟು ಕೊಟ್ಟು ಬರ್ತೀರಾ. ಅವರತ್ರ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ಅಂತ ಯಾವತ್ತಾದರೂ ಕೇಳಿದ್ದೀರಾ ಅಂತ ದಬಾಯಿಸಿದಾಗ ಗಪ್ ಚಿಪ್ ಆದಳು. ಅವನು ಹೇಳುವುದೂ ಸರಿಯೇ. ಯಾವುದೇ ದೊಡ್ಡ ಅಂಗಡಿಗೆ, ಮಾಲ್ಗಳಿಗೆ ಹೋದರೆ ಚೌಕಾಸಿ ಮಾಡುವ ಅವಕಾಶವೇ ಇಲ್ಲ. ಹಾಗಂತ ಹೇಳಿ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ಅನ್ನದೇ ವ್ಯಾಪಾರ ಮಾಡಲಾಗದ ಭಾರತೀಯರನ್ನು ಆಕರ್ಷಿಸುವುದು ಹೇಗೆ? ಅದಕ್ಕಾಗಿ ಈ ಡಿಸ್ಕೌಂಟ್ ಅನ್ನುವ ಬಲೆ ಬೀಸಿ ಮಿಕಗಳನ್ನು ಹಿಡಿಯುತ್ತಾರೆ.

ಯಾವುದೇ ಮಾಲ್ ನ ದೊಡ್ಡ ಅಂಗಡಿಗಳ ಎದುರು ಯಾವಾಗಲೂ ತರೆಹಾವಾರಿ ಪರ್ಸೆಂಟ್ ಡಿಸ್ಕೌಂಟ್ ಗಳ ಬೋರ್ಡ್ ಗಳು ಪಳ ಪಳ ಹೊಳೆಯುತ್ತ ಬಲೆ ಬೀಸು ತ್ತಿರುತ್ತವೆ. ಅದರಲ್ಲೂ ಬಟ್ಟೆ ಅಂಗಡಿಗಳ ಮೋಹಜಾಲಕ್ಕೆ ಬೀಳದಿರುವವರು ಯಾರು? ಒಳಗೆ ಹೋಗಿ ವ್ಯಾಪಾರ ಮಾಡಿ ಬಿಲ್ ಕೌಂಟರ್ ಬಳಿ ಹೋದರೆ ಬಿಲ್ ಮಾಡುವ ಮುಂಚೆ ಅಲ್ಲಿಯ ಅಕೌಂಟೆಂಟ್ ಇನ್ನೊಂದು ಜಾಲ ಹರಡುತ್ತಾನೆ. ‘ನೋಡಿ ಮೇಡಂ, ನೀವು ಎರಡು ಸಾವಿರಕ್ಕೆ ಕೊಂಡಿದ್ದೀರಲ್ಲವ, ಇನ್ನೂ ಒಂದು ಸಾವಿರ ಹೆಚ್ಚಿಗೆ ಶಾಪಿಂಗ್ ಮಾಡಿದರೆ ಇನ್ನೂ ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ಸಿಗುತ್ತೆ. ನೋಡಿ,ಯೋಚನೆ ಮಾಡಿ’ ಅಂದಾಗ ಮನಸ್ಸು ಕೆಡದಿರಲು ಸಾದ್ಯವೇ? ತೊಗೊ, ಇನ್ನೂ ಒಂದು ಸಾವಿರಕ್ಕೆ ಅವಶ್ಯಕತೆ ಇಲ್ಲದಿದ್ದರೂ ಏನೋ ಒಂದು ತೊಗೊಂಡು ಬಿಲ್ಲಿಂಗ್ ಗೆ ಬಂದ್ರೆ ನೋಡಿ, ಇನ್ನೂ ಒಂದು ಕೊಡುಗೆ ಕಾಯುತ್ತಿರುತ್ತದೆ. ‘ನೋಡಿ ಮೇಡಂ, ಈಗ ನಿಮಗೆ ಐನೂರು ರೂಪಾಯಿ ಕೂಪನ್ ಸಿಗುತ್ತೆ. ಆದ್ರೆ ಇದು ಮುಂದಿನ ತಿಂಗಳು ಇಪ್ಪತ್ತರ ನಂತರ ನೀವು ಕನಿಷ್ಟ ಮೂರು ಸಾವಿರಕ್ಕೆ ತಗೊಂಡರೆ ಐನೂರು ರೂಪಾಯಿ ಕಮ್ಮಿ ಆಗುತ್ತೆ’ ಅಂತ ಹೇಳಿ ಕೂಪನ್ ಕೈಗೆ ಹಿಡಿಸುತ್ತಾನೆ.

ಐನೂರು ರೂಪಾಯಿ ಕಮ್ಮಿ ಆಗುತ್ತೆ ಅಂದ್ರೆ ಸಾಮಾನ್ಯವೇ! ಮತ್ತೆ ಮುಂದಿನ ತಿಂಗಳು ಹೋಗಿ ಮತ್ತೆ ಬೇಡದ ಇನ್ನೊಂದೇನೋ ಕೊಂಡು ಬಿಲ್ಲಿಂಗ್ ನಲ್ಲಿ ಐನೂರು ಕಮ್ಮಿ ಮಾಡಿಸಿ, ಮರಳುವಾಗ ಬರುವ ತಿಂಗಳಿಗೆ ಅಂತ ಮತ್ತೂ ಒಂದು ಕೂಪನ್ ಹಿಡಿಸುತ್ತಾರೆ. ಈ ವಿಷ ಚಕ್ರದಲ್ಲಿ ಒಮ್ಮೆ ಸಿಕ್ಕಿದರೆ ಸಾಕು ಬಿಡುಗಡೆ ಸುಲಭವಲ್ಲ. ಕಮ್ಮಿಗೆ ಸಿಗುತ್ತೆ ಅಂದ್ರೆ ಸಾಕು ಬೇಕಾದ್ದು ಬೇಡದ್ದು ಎಲ್ಲಾ ಕೊಂಡು ಮನೆ ತುಂಬಿಸಿ ಕೊಳ್ಳೋದರಲ್ಲಿ ಏನಿದೆ ಅರ್ಥ? ಆದರೆ ಈ ಡಿಸ್ಕೌಂಟ್ ಶಾಪಿಂಗ್ ಹುಚ್ಚು ಜನರಲ್ಲಿ ಎಷ್ಟು ಹಬ್ಬಿದೆಯೆಂದರೆ, ಜಲಚಕ್ರ ನೈಟ್ರೋಜನ್ ಚಕ್ರಗಳ ಹಾಗೆ ಶಾಪಿಂಗ್ ಚಕ್ರವು ಕೂಡ ನಮ್ಮ ಪರಿಸರದಲ್ಲಿ ಸೇರಿಕೊಂಡು ಬಿಟ್ಟಿದೆ.

ನಗರಗಳ ಮಾಲ್ ಗಳಲ್ಲಿ ಈ ರೀತಿಯಾದರೆ, ಸಣ್ಣ ಸಣ್ಣ ಊರುಗಳ ಬಟ್ಟೆ ಅಂಗಡಿಗಳಲ್ಲಿ ಇನ್ನೊಂದು ರೀತಿ. ಅವುಗಳಲ್ಲಿ ನಿಗದಿತ ಬೆಲೆಗೆ ಬಟ್ಟೆ ಮಾರುವವರು ಕಡಿಮೆಯೇ. ಏಕೆಂದರೆ ‘ಅಯ್ಯೋ ಅವನಂಗಡಿಲಿ ಒಂಚೂರು ಕಮ್ಮಿ ಮಾಡೋದಿಲ್ಲ’ ಅನ್ನುವುದು ಜನರ ದೂರು. ಅದಕ್ಕಾಗಿ ಆ ಅಂಗಡಿಯವರು ಯಾವುದೇ ಬಟ್ಟೆಗೆ ಒಂದಕ್ಕೆ ಮೂರು ನಾಲ್ಕರಷ್ಟು ಬೆಲೆ ನಮೂದಿಸಿ ಇಟ್ಟಿರುತ್ತಾರೆ. ಜನ ಚೌಕಾಸಿಗೆ ಶುರು ಹಚ್ಚಿಕೊಂಡಾಗ, ಅರ್ಧಕ್ಕರ್ಧ ಕಮ್ಮಿ ಮಾಡಿದಂತೆ ಮಾಡಿ ಮಾರುತ್ತಾರೆ, ಕೊಂಡವರೂ ಬೆಲೆ ಕಮ್ಮಿ ಮಾಡಿಸಿದ ಹೆಮ್ಮೆಯಲ್ಲಿ ಬೀಗುತ್ತಾ ಬರುತ್ತಾರೆ. ಆದರೆ ವ್ಯಾಪಾರ ವ್ಯವಹಾರ ನಿಂತಿರುವುದೇ ಲಾಭದ ಮೇಲಲ್ಲವೇ. ಲಾಸ್ ಮಾಡಿಕೊಂಡು ಯಾರೂ ಮಾರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತು, ಆದರೂ ಕಮ್ಮಿ ಮಾಡಿಸಿದ ಖುಷಿ ಯಂತೂ ಕಮ್ಮಿಯಾಗೊಲ್ಲ.

ಕೆಲವು ದಿನಬಳಕೆಯ ವಸ್ತುಗಳ ಮಾರಾಟಗಾರರ ‘ಎರಡು ವಸ್ತುಗಳ ಕೊಂಡರೆ ಒಂದು ಉಚಿತ’ ಅನ್ನುವ ಜಾಹೀರಾತು ಹೆಂಗಳೆಯರ ಮನ ಸೆಳೆದಷ್ಟು ಮತ್ತೇನೂ ಸೆಳೆಯದು. ಅಲ್ಲಿ ಬಿಡಿ, ‘ಕಮ್ಮಿ ಮಾಡ್ಕೊಳಿ’ ಮಾತು ಹೇಳೊ ಹಾಗೇ ಇಲ್ಲ. ‘ನೋಡಿ ಮೇಡಂ ಮೊದಲೇ ಕಮ್ಮಿ ಮಾಡಿದ್ದೀವಿ. ಬೇಕಿದ್ರೆ ತೊಗೊಳ್ಳಿ ಇಲ್ಲಾಂದ್ರೆ ಬಿಡಿ’ ಅನ್ನುವ ಉಡಾಫೆ ಬೇರೆ.

ಬರೀ ವಸ್ತುಗಳ ಕೊಳ್ಳುವ ಮಾರುವ ವ್ಯವಹಾರಕ್ಕೆ ಮಾತ್ರ ಈ ಚೌಕಾಸಿ ಸೀಮಿತವಾಗಿಲ್ಲ. ಮದುವೆ ನಿಶ್ಚಯ ವಾಗುವಾಗ ವರದಕ್ಷಿಣೆ ಲೆಕ್ಕಾಚಾರ ಮಾಡುವಾಗಲೂ ಈ ‘ಸ್ವಲ್ಪ ಕಮ್ಮಿ ಮಾಡ್ಕೊಳಿ’ ವರಾತ ತಪ್ಪಿದ್ದಲ್ಲ. ಯಾವ ವ್ಯಾಪಾರಸ್ಥರಿಗೂ ಕಡಿಮೆ ಇಲ್ಲದಂತೆ ಜಗ್ಗಾಡಿ, ಅಳೆದು ಸುರಿದು, ಕೊಡುವುದು, ಬಿಡುವುದು ಮಾತಾಡಿ ಮದುವೆ ನಿಶ್ಚಯ ಮಾಡಿ ಮುಗಿಸುವಷ್ಟರಲ್ಲಿ ಹೆಣ್ಣು ಹೆತ್ತವರು ಸೋತು ಸುಣ್ಣವಾಗಿರುತ್ತಾರೆ. ಈಗೀಗ ವರದಕ್ಷಿಣೆ ತೋಗೊಳ್ಳೋದು, ಕೊಡೋದು ಅಪರಾಧ ಎನ್ನುವ ಅರಿವು ಮೂಡುತ್ತಿದ್ದರೂ, ಬೇರೆ ಬೇರೆ ರೂಪದಲ್ಲಿ ಕೊಡುಗೆಗಳ ಬೇಡಿಕೆ ಮಾಡುವುದು ಇದ್ದೇ ಇದೇ. ಹುಡುಗಿ ಕಡೆಯವರೂ ಕೂಡ ‘ನಮ್ಮ ಮಗಳಿಗೆ ತಾನೇ’ ಅಂತ ಅಂದುಕೊಂಡು ಸ್ವಲ್ಪ ಹೆಚ್ಚು ಕಮ್ಮಿ ಮಾತನಾಡಿ ಕೊಡುವುದನ್ನೆಲ್ಲ ಕೊಟ್ಟೇ ಕೊಡುತ್ತಾರೆ.

ಈ ‘ಸ್ವಲ್ಪ ಕಮ್ಮಿ ಮಾಡ್ಕೊಳ್ಳಿ’ ಅನ್ನೋದು ಜೀವನ ವ್ಯಾಪಾರಕ್ಕೂ ಅನ್ವಯ ಆದರೆಷ್ಟು ಚಂದ. ಮೂಗಿನ ತುದಿಯಲ್ಲಿ ಕೋಪವಿರುವವರಿಗೆ ಕೋಪ, ತುಂಟ ಮಕ್ಕಳಕುಚೇಷ್ಟೆಗಳು, ದುರಾಸೆಯ ಜನರ ಲೋಭ. ಸೋಮಾರಿ ವಿದ್ಯಾರ್ಥಿಗಳ ಸೋಮಾರಿತನ, ಆಧುನಿಕ ಯುಗದ ವಿಪರೀತ ಕೊಳ್ಳುಬಾಕತನ, ಎಲ್ಲವನ್ನೂ ಕಮ್ಮಿ ಮಾಡಲು ಹೇಳುವಂತಾದರೆ ಎಷ್ಟು ಚಂದ ಅಲ್ಲವೇ.

‍ಲೇಖಕರು Avadhi

May 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. km vasundhara

    ಸಮತಾ… ತುಂಬಾ ಚೆನ್ನಾಗಿ ಬರೆದಿದ್ದೀರಿ.. ಸುದೀರ್ಘವಾಗಿದ್ದರೂ ಅಲ್ಲಲ್ಲಿ ಕೆಲವು ವಿಚಾರ ಪ್ರಸ್ತುತಿಯು ರಿಪೀಟೀ ಆಗಿದ್ರೂ … ಓದಿನ ಓಘಕ್ಕೆ ತಡೆಯಾಗಲಿಲ್ಲ… ಇಶ್ಟ ಆಯ್ತು..

    ಪ್ರತಿಕ್ರಿಯೆ
  2. Shanthi rai

    ನೈಜ ಚಿತ್ರಣ ನಮ್ಮ ಜೀವನಕ್ಕೆ ಅಂಟಿಕೊಂಡಿರುವ ಕೆಲವು ಸಂಗತಿಗಳು ನಿಮ್ಮ ಲೇಖನಿಯಿಂದ ಚೆನ್ನಾಗಿ ಮೂಡಿ ಬಂದಿದೆ super

    ಪ್ರತಿಕ್ರಿಯೆ
  3. Latha

    ಸಮತಾ ಪ್ರಬಂಧ ತುಂಬಾ ಚೆನ್ನಾಗಿದೆ ಗೃಹಿಣಿಯರ ಚ್ಜೌಕಾಸಿಗೇ ಹಿಡಿದ ಕೈಗನ್ನಡಿ

    ಪ್ರತಿಕ್ರಿಯೆ
    • Veena Manjunath

      Cheers..I must appreciate ur hold on the write up Samatha …Each time we get so connected to ur articles that NVR tend keep it incomplete
      n I’m sure u being a writer have so much to share with ur reader’s..so it’s inevitable fr u to keep it short.

      ಪ್ರತಿಕ್ರಿಯೆ
  4. ಸಂಗೀತ ರವಿರಾಜ್

    ಅಪರೂಪದ ವಿಷಯ ಆಯ್ಕೆ ಮಾಡಿ ಒಪ್ಪವಾಗಿ ಬರ್ದೀದೀರ ಅಕ್ಕ ಚೆನ್ನಾಗಿದೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸಂಗೀತ ರವಿರಾಜ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: