ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’

ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ ಸಾಗುತ್ತವೆ ದಿನಗಳು, ಅದರ ಹಿಂದೆ ನಮ್ಮ ಜೀವನ, ತಿರುಗಿ ಬರದೇ. ನದಿ ಮುಂದೆ ಹರೀತದೆ ಹಿಂದೆ ಅಲ್ಲ ಅಂತ ಸುಮ್ಮನೆ ಹೇಳಿದ್ದಾರಾ ಹಿರಿಯರು? ಹಾಗೇ ಸಾಗಿತು ನಮ್ಮ ಜೀವನ ಆ ಅಧ್ವಾನ್ನದ  ಮನೆಯಲ್ಲೇ, ತಿಳವಳ್ಳಿಯಲ್ಲಿ. ಇದ್ದುದರಲ್ಲಿ ಕೊಂಚ ಚೆನ್ನಾದ ಅಂದ್ರೆ ಒಂದು ಪ್ರತ್ಯೇಕ ಟಾಯ್ಲೆಟ್ ಇದ್ದ, ಈ ಇಲಿಗಳ ಕಾಟ ಸ್ವಲ್ಪ ಮಟ್ಟಿಗಾದರೂ ಕಡಿಮೆ ಇದ್ದ ಮನೆ ಸಿಗಲೇ ಇಲ್ಲ ನಮಗೆ. ಆ ಊರಲ್ಲಿ ಬ್ಯಾಂಕ್ ನೌಕರರಿಗೆ ಸ್ವಲ್ಪ ಮಟ್ಟಿಗೆ ಸರಳವಾಗಿ ಮನೆ ಸಿಗುತ್ತಿತ್ತು ಅನಿಸ್ತು ನಂಗೆ.

ಈ ಮಧ್ಯೆ ನಮ್ಮ ಸಾಲು ಮನೆಗಳ ಮೂರನೇ ಮನೇಲಿದ್ದ ಸಿಸ್ಟರ್ ಬೇರೆ ಊರಿಗೆ ಹೋಗಿ, ಆ ಮನೆಗೆ ಶೇಷಗಿರಿ ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಬಾಡಿಗೆಗೆ ಬಂದಿದ್ರು ತಮ್ಮ ಕುಟುಂಬ ಸಹಿತ. (ಶೇಷಗಿರಿ ತಿಳವಳ್ಳಿಯಿಂದ 4-5 ಕಿಮೀ ದೂರ ಅಷ್ಟೇ) ಅವರ ಇಬ್ಬರೂ ಮಕ್ಕಳೂ ನನ್ನ ಮಕ್ಕಳ ಜೊತೆಯವರೇ. ಅವರ ಪತ್ನಿ ಸುಧಾ ನನಗೆ ಜೊತೆ ಆದ್ರು. ಮುಂದೆ ಸ್ವಲ್ಪ ದಿನಗಳಲ್ಲೇ ಆಸ್ಪತ್ರೆ ಕಟ್ಟಡ ಕ್ವಾರ್ಟರ್ಸ್ ಎಲ್ಲಾ ತಯಾರಾಗಿ ನಾವೂ ಒಂದು ಸಣ್ಣ ಪೂಜೆ ಮಾಡಿ ಆ ದೊಡ್ಡ, ಹೊಸ ಕ್ವಾರ್ಟರ್ಸ್ ಗೆ ಶಿಫ್ಟ್ ಆದ್ವಿ. ಒಂದು ಸಮಾಧಾನದ ಉಸಿರು ಬಿಟ್ಟು ನಮ್ಮ ಕಳೆದು ಹೋದ ಮಾಮೂಲಿನ ಜೀವನಕ್ಕೆ ತಿರುಗಿ ಬಂದ್ವಿ ಅನ್ಕೊಂಡೆ.

ಈಗ ಸುಮಾರು ಎಲ್ಲಾ ಅಧಿಕಾರಿಗಳು ಇತ್ತ ಮುಖ ತಿರುವಿ ನೋಡುವಂತಹ ಪರಿಸ್ಥಿತಿ ಉಂಟಾಗಿತ್ತು ಅಲ್ಲೂ. ಮತ್ತೆ ಕ್ರಮೇಣವಾಗಿ ಮಾಮೂಲಿನಂತೆ ಅತಿಥಿಗಳು ಬರೋದು, ಹೋಗೋದು ಶುರು ಆಯ್ತು. ಮೊದಲಿನ ಆಸ್ಪತ್ರೆಯ ಪಕ್ಕದಲ್ಲೇ ನಮ್ಮ ಹೊಸ ಲೋಕ ನಿರ್ಮಾಣ ಆಗಿತ್ತು. ನಮ್ಮ ಕ್ವಾರ್ಟರ್ಸ್ ಪಕ್ಕದಲ್ಲೇ ಇದ್ದ ಆ ಬಿಲ್ಡಿಂಗ್ ಈಗ ಬೀಗ ಹಾಕಿ ಇಟ್ಟಿದ್ದರು. 7ನೇ ಕ್ಲಾಸ್ ನ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿ ತಿಳವಳ್ಳಿಗೆ ಬಂದ ನನ್ನ ಮಗ ಆ ದೊಡ್ಡ ಗ್ರೌಂಡ್ ನೋಡಿ, ಒಳ್ಳೇ ಕ್ರಿಕೆಟ್ ಪಿಚ್ ಆಗ್ತದಿದು ಅಂತ ಇಲ್ಲೇ ‌ನಮ್ಮೊಂದಿಗೇ ಉಳಿದು ಬಿಟ್ಟ. (ಇಲ್ಲಿನ ಸ್ಕೂಲ್ ಸರಿ ಹೋಗದೇ ಮರು ವರ್ಷ ಮತ್ತೆ ವಾಪಸ್ಸು ನನ್ನ ತೌರು ಹುಕ್ಕೇರಿಗೆ ಹೋದ.) ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ಆಫೀಸರ್ ಪೋಸ್ಟ್ ಒಂದೇ ಇತ್ತು ಹೀಗಾಗಿ ನನ್ನ ಪತಿಗೆ ಕೆಲಸದ ಒತ್ತಡ ಜಾಸ್ತಿ ಆಗ್ತಿತ್ತು. ಜೊತೆಗೆ ನನಗೂ.

ಆ ದಿನ ನನ್ನ ಪತಿ ತಿಂಗಳ ಮೀಟಿಂಗ್ ‌ಗೆ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಆಫೀಸ್ ಗೆ ಹೋಗಿದ್ರು. ತಿಳವಳ್ಳಿ ಧಾರವಾಡ ಜಿಲ್ಲೆಯ ಕಟ್ಟಕಡೆಯಂಚಿನೂರು, ಶಿವಮೊಗ್ಗ ಜಿಲ್ಲೆಯ ಬಾರ್ಡರ್ ಗೆ. ತುಂಬ ದೂರ, ಮೇಲೆ ಆ ಕೆಟ್ಟ ಸ್ಥಿತಿಯಲ್ಲಿ ಇರುವ ರಸ್ತೆಗಳು. ಹೀಗಾಗಿ ಮೀಟಿಂಗ್ ಮುಗಿಸಿ ರಾತ್ರಿ ವಾಪಸ್ ಬರೋದು ದುಸ್ಸಾಧ್ಯ. ಅಲ್ಲಿನ ಜೀಪ್ ಕೆಟ್ಟು ನಿಂತಿತ್ತು. ರಿಪೇರಿಯ ಕೆಲಸ ಬಲು ಕಷ್ಟದ್ದು. ಸರ್ಕಾರಿ ಕೆಂಪು ಬಸ್ಸುಗಳೇ ಸಾರಿಗೆ ಸಾಧನ. ಚಿಕ್ಕವರಿಬ್ಬರೂ ಊಟ ಮುಗಿಸಿ ಮಲಗಿದ್ರು. ದೊಡ್ಡ ಮಗು ಇನ್ನೂ ಓದಿನಲ್ಲಿ ಮುಳುಗಿದ್ದ.

ಹತ್ತು ಗಂಟೆ ಮೇಲಾಗಿತ್ತು, ಎದ್ದು ಬಂದ ಊಟಕ್ಕೆ. ಇಬ್ಬರದೂ ಊಟ ಆಯ್ತು. ನಾ ಕೆಲಸ ಮುಗಿಸಿ ಕೈ ತೊಳೆಯಲು ಬಾತ್ ರೂಂ ಗೆ ಹೋಗೀನಿ ಹೊರಗೆ ಯಾರೋ ದಬ ದಬ ಬಾಗಿಲು ಬಡೀತಿದಾರೆ. ಗಡಬಡಿಸಿ ಹೊರ ಬರುವಾಗ ಅಲ್ಲಿದ್ದ ಕಾಲೊರಸು ಜಾರಿ ಧಪ್ಪಂತ ಬಿದ್ದೆ. ತಲೆ ಗೋಡೆಗೆ ಫುಟ್ಬಾಲ್ ಥರ ಬಡೆದು ಚಿಮ್ಮಿ ಮತ್ತೆ ಗೋಡೆಗೆ ಬಡೀತು. ಬಲಗಾಲ ಮಂಡಿ ಮಡಿಚಿ ಏಳಲಾಗಲಿಲ್ಲ.

ನಾ ಬಿದ್ದ ಸದ್ದಿಗೆ ಮಗ ಗಾಬರಿಯಿಂದ ಓಡಿ ಬಂದ. ಆತನ್ನ ಹಿಡ್ಕೊಂಡು ಹೇಗೋ ಸಾವರಿಸಿಕೊಂಡು ಎದ್ದು ಹಾಲ್ ನಲ್ಲಿ ಇದ್ದ ದಿವಾನ್ ಮೇಲೆ ಮಲಗಿದೆ. ಹೊರಗೆ ಬಂದ ಪೇಷಂಟ್ ನಾ ಡಾಕ್ಟರ್ ಇನ್ನೂ ಬಂದಿಲ್ಲ ಅಂತ ಹೇಳಿ ಕಳಿಸಿ ಒಳ ಬಂದ ನನ್ನ ಮಗ ಹೆದರಿ ನಿಂತು ಬಿಟ್ಟಿದ್ದ. “ಏನಾಗಿಲ್ಲ, ಹೆದರ ಬೇಡ” ಎಂದೆ. ಆದರೆ ಯಾಕೋ ತಲೆ ‌ವಿಪರೀತ ಸುತ್ತಲಾರಂಭಿಸ್ತು. ಹೊಡೆತ ಬಲು ಜೋರಾಗಿ ಬಿದ್ದಿತ್ತು.

ಆ ಕತ್ತಲಲ್ಲೇ ನನ್ನ ಮಗ ಸೈಕಲ್ ತಗೊಂಡು ಅಲ್ಲಿರುವ ಒಬ್ಬ ಖಾಸಗಿ ಪ್ರಾಕ್ಟೀಸ್ ಮಾಡುವ ಡಾಕ್ಟರ್ ನ ಕರೆದುಕೊಂಡು ಬರಲು ಹೊರಟ ಬೇಡ ಅಂದ್ರೂ ಕೇಳದೆ. ನನ್ನ ಪುಣ್ಯ, ಅಷ್ಟ್ರಲ್ಲಿ ನನ್ನ ಪತಿ ಬಂದ್ರು ಹಾನಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜೀಪಿನಲ್ಲಿ! ನನಗೆ ಆಶ್ಚರ್ಯ ಆದರೂ ಬಹಳ ಯೋಚಿಸುವ ಸ್ಥಿತಿಯಲ್ಲಿ ನಾ ಇರಲಿಲ್ಲ. ಸ್ವಲ್ಪ ಧೈರ್ಯ ಬಂತು. ನನ್ನ ಮಗನ ಮುಖವೂ ಗಾಬರಿಯಿಂದ ಕೂಡಿದ್ರೂ ಕೊಂಚ ಗೆಲುವಾಯ್ತು. ಅಪ್ಪನಿಗೆ ಎಲ್ಲಾ ಸುದ್ದಿ ಹೇಳಿದ. ಏನೋ ಮಾತ್ರೆ ಕೊಟ್ಟು ರೆಸ್ಟ್ ಮಾಡಲು  ಹೇಳಿದ್ರು. ಇಲ್ಲಿಗೆ ಮುಗಿಯಲಿಲ್ಲ.

ಮಾರನೇ ದಿನ ಮುಂಜಾನೆ ನನಗೆ ಏಳಲಾಗಲಿಲ್ಲ. ಮಕ್ಕಳು ತಾವೇ ರೆಡಿಯಾಗಿ ಹಾಲು ಕುಡಿದು ಸ್ಕೂಲ್ ಗೆ ಹೋದ್ರು. ಆಗ ಸಣ್ಣಗೆ ನನ್ನ ಪತಿ ಹೇಳಿದ್ರು – “ಈ ಹೊತ್ತು ಲ್ಯಾಪ್ರೋಸ್ಕೋಪಿಕ್ ಆಪರೇಷನ್ ಕ್ಯಾಂಪ್ ಇದೆ” ನನ್ನ ಪ್ರಶ್ನೆಗೆ ಉತ್ತರ ಸಿಕ್ತು. ‘ಓ ಹೌದೇನ’ ಅಂತ ಹೇಳಿ ಸುಮ್ಮನಾದೆ. ಇಲ್ಲಿ ಈಗ ಮತ್ತೆ ಈ ಕ್ಯಾಂಪ್ ಗಲಾಟೆ  ಶುರುವಾಗಿತ್ತು. ಬಂಕಾಪುರಕ್ಕೆ ಬರುತ್ತಿದ್ದ ಹಾವೇರಿಯ ಸರ್ಜನ್ ಇಲ್ಲೂ ಬರ್ತಿದ್ರು ಈಗ. ಬಂಕಾಪುರ, ಶಿಗ್ಗಾಂವಿ, ಹಾನಗಲ್ಲ ಮುಗಿಸಿ ‌ಕೊನೆಗೆ ತಿಳವಳ್ಳಿಗೆ.

ಈ ‘ಬಾಭೀ’ಯ ಕೈಯೂಟವೇ ಆಗ ಬೇಕಿತ್ತು ಅವರಿಗೆ. ನನಗೆ ಎದ್ದು ನಿಲ್ಲಲೂ ಕಷ್ಟ ಆಗ್ತಿತ್ತು. ಅಷ್ಟು ತಲೆ ಸುತ್ತು! ಬಂಕಾಪುರದಷ್ಟು ಜನ ಇರ್ಲಿಲ್ಲ ಇಲ್ಲಿ ಊಟಕ್ಕೆ, ಆದರೂ 7-8 ಜನರ ಊಟವಾದ್ರೂ ಆಗ್ತಿತ್ತು. ಏನು ಮಾಡೋದು ತಿಳಿಯಲಿಲ್ಲ. ಸುಮ್ಮನೇ ಕುಳಿತೆ. ಪಟ್ಟನೇ ಒಂದು ಉಪಾಯ ಹೊಳೆಯಿತು. ಶೇಷಗಿರಿ MO ಅವರ ಪತ್ನಿ ಸುಧಾ ಅವರ ಸಹಾಯ ಕೇಳಿದ್ರೆ ಹೇಗೆ ಅಂತ. ಸರಿ ಅವರನ್ನೆಲ್ಲಾ ಇಲ್ಲಿಯೇ, ನಮ್ಮನೆಗೆ ಊಟಕ್ಕೆ ಕರೆದೆ. ಸುಧಾ ಅವರ ಸಹಾಯದಿಂದ ಆ ಹೊತ್ತಿನದನ್ನು ನಿಭಾಯಿಸಿದೆ ಕಷ್ಟಪಟ್ಟು! ಬೇರೆ ದಾರಿ ಇರಲಿಲ್ಲ.

ತಿಳವಳ್ಳಿಯಲ್ಲಿ ಇದ್ದಕ್ಕಿದ್ದಂತೆ ಡಕಾಯಿತರ ಹಾವಳಿ ಶುರು ಆಯ್ತು. ಅದೇ ವೇಳೆಗೆ ಸರಿಯಾಗಿ ನನ್ನ ಪತಿಗೆ ಬೆಂಗಳೂರುಗೆ ಒಂದು ಟ್ರೇನಿಂಗ್ ಗೆ ಹೋಗಬೇಕಾಯ್ತು ಒಂದು ವಾರದ ಮಟ್ಟಿಗೆ. ತಪ್ಪಿಸೋ ಹಾಗಿರಲಿಲ್ಲ. ಅವರೂ ತುಸು ಕಾಳಜಿಯಿಂದಲೇ ಹೋದ್ರು. ನಾನೇ ಸಮಾಧಾನ ಹೇಳಿ  ಕಳಿಸಿದೆ ಒಳಗೆ ಭಯ ತುಂಬಿಕೊಂಡು. ಚಿಕ್ಕ ಊರು ಒಬ್ಬರ ಮನೇಲಿ ಸೀನೀದ್ರೂ ಊರೆಲ್ಲಾ ಗುಲ್ಲು ಆಗೋ ಹಾಗೆ. ಅದೂ ಅಲ್ಲದೆ ಆಸ್ಪತ್ರೆಯಲ್ಲಿರುವ ಒಬ್ಬರೇ ಡಾಕ್ಟರೂ ಅಲ್ಲಿಲ್ಲ ಎಂದಾಗ ಎಲ್ಲರಿಗೂ ಗೊತ್ತಾಗೇ ಆಗ್ತಿತ್ತು ಡಾಕ್ಟರು ಊರಲ್ಲಿಲ್ಲ ಎಂದು. ಅದು ಸಹಜವೇ. ದವಾಖಾನೆಗೆ ಫೋನ್ ಇತ್ತು. ಆದರೆ ಮನೆಯಲ್ಲಿ ಇರಲಿಲ್ಲ. ಇಲ್ಲಿ ಕಾಂಪೌಂಡ್ ಗೋಡೆ ಇಲ್ಲದ ದೊಡ್ಡ ಬಟಾ ಬಯಲಿನಲ್ಲಿ ನಮ್ಮ ಕ್ವಾರ್ಟರ್ಸ್ ಗಳು.

ನಮ್ಮ ಮನೆಯ ಮುಂಬಾಗಿಲು ರೋಡ್ಗೆ ಮುಖ ಮಾಡಿತ್ತು. ಇನ್ನುಳಿದವುಗಳು ನಮ್ಮ ಮನೆಯ ಹಿಂದುಗಡೆ ಆ ಕಡೆ ಮುಖಮಾಡಿ. ನಮ್ಮ ಮನೆ ಹೀಗಾಗಿ ಒಂದೇ ಆಗಿತ್ತು ಈ ಕಡೆ ಅಕ್ಕ ಪಕ್ಕ ಯಾರ ಮನೆಯೂ ಇಲ್ಲ. ದವಾಖಾನೆ ಐವತ್ತು ಮೀಟರ್ ದೂರದಲ್ಲಿ. ಎಡಪಕ್ಕಕ್ಕೆ ಹಳೆಯ ಆಸ್ಪತ್ರೆ ಖಾಲಿ ಕಟ್ಟಡ ಬೀಗ ಹಾಕಿದ್ದು. ಮಕ್ಕಳೂ ಸ್ವಲ್ಪ ಹೆದರಿದ ಹಾಗಿತ್ತು. ಡಾಕ್ಟರ್ ಇಲ್ಲಾಂತ ಆಸ್ಪತ್ರೆನೂ ಹೆಚ್ಚು ಕಡಿಮೆ ಖಾಲಿ ಖಾಲಿ. ರಾತ್ರಿ ಅಟೆಂಡರ್ ಯಾರಾದರೂ ಮಲಗೋದು ಖಾತ್ರಿ ಇಲ್ಲ. ಅದಕ್ಕೆ ಸಂಜೆಯೇ ಭರಮಣ್ಣನ ಕೈಲಿ ಸುಧಾ ಅವರಿಗೆ ಮಕ್ಕಳೊಂದಿಗೆ ನಮ್ಮಲ್ಲೇ ಮಲಗೋಕೆ ಬರಲು ಹೇಳಿ ಕಳಿಸಿದೆ. ಸರಿ ಅಂತ ಅವರು 8.30 ಕ್ಕೆ ಬರುವುದಾಗಿ ಹೇಳಿ ಕಳಿಸಿದ್ರು.

ನಮ್ಮನೆಗೆ ಅವರ ಮನೆಯಿಂದ ಹತ್ತು ನಿಮಿಷದ ದಾರಿ. 8.45 ಆದ್ರೂ ಅವರು ಬರಲಿಲ್ಲ ಅಂತ ಹೊರಗೆ ಬಾಗಿಲಲ್ಲಿ ಕಾಯ್ತಾ ನಿಂತಿದ್ದೆ. ಮನೇಲಿ ಲೈಟಿತ್ತು, ಆದರೆ ರಸ್ತೆ ದೀಪ ಹತ್ತಿರಲಿಲ್ಲ. ಅಷ್ಟ್ರಲ್ಲಿ ಒಬ್ಬ ಮನುಷ್ಯ ಓಡುತ್ತಾ, ಜೋರಾಗಿ ಕೂಗುತ್ತಾ ಹೋದ- “ದೊಡ್ಡ  ಗುಂಪು ಬಂದೈತೆ ಡಕಾಯಿತರದು. ಮನೇಲಿ ಒಬ್ಬೊಬ್ಬರೇ ಇರೋರು ಒಳಗೆ  ಹೋಗ್ರಿ. ಬಾಗಲಾ ಗಟ್ಟಿ ಬಂದ ಮಾಡ್ಕೋರೀ. ಯಾರೇ ಬಂದ್ರೂ ಕಿಟಕಿಯಿಂದ ಸುದ್ದಾ ನೋಡಬ್ಯಾಡ್ರಿ. ಹುಷಾರ್ ಹುಷಾರ್” ಅಂತ! ಏನು ಮಾಡಲಿ ನಾ? ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ ಅಲ್ಲಿ ಸುಧಾ ಮಕ್ಕಳ ಜೊತೆ ಓಡಿ ಓಡಿ ಬರ್ತಿದ್ರು.

ಆಸ್ಪತ್ರೆ ಆವರಣದಲ್ಲಿ ಬಂದ ಮೇಲೆ ನಾ ಮೆಟ್ಟಲಿಳಿದು ಹೋಗಿ ಮಕ್ಕಳ ಕೈ ಹಿಡಿದು ಕರೆದುಕೊಂಡು ಬಂದೆ. ಅವರೂ ಒಳಗೆ ಬಂದ ತಕ್ಷಣ ಬಾಗಿಲು ಬಂದ್ ಮಾಡಿದೆ. ಆದರೆ ಬಾಗಿಲು ಪಕ್ಕದ ದೊಡ್ಡ  ಕಿಟಕಿ ಇಲ್ಲೂ ಓಪನ್ನೇ! ತಿಳವಳ್ಳಿ ಸ್ಟೈಲ್! ಆದರೆ ಸಿಮೆಂಟ್ ಡಿಸೈನ್ ಇತ್ತು. ಗಟ್ಟಿ ಇತ್ತು. ಆ ವ್ಹೆರಾಂಡಾ ಮತ್ತು ಹಾಲ್ ನಡುವಿನ ಬಾಗಿಲು ಭದ್ರಪಡಿಸಿದೆ. ಸೋಫಾದಲ್ಲಿ ಮಕ್ಕಳು ಮುದ್ದೆಯಾಗಿ ಕೂತಿವೆ. ಚೇರ್ ಲಿ ಸುಧಾ!

ಬಹಳೇ ಹೆದರಿದ್ರು ಅವರು. ಹಣೆ ತುಂಬ ಬೆವರು. ಮೈಯೆಲ್ಲಾ ಥರಗುಟ್ಟುತ್ತಿತ್ತು! ನನಗೋ ಗಾಬರಿ ಇದೇನಾತು ಅಂತ. “ಏನಾಗೂದಿಲ್ಲ ಸುಧಾ. ಗಾಬರಿಯಾಗಿ ಬ್ಯಾಡ್ರಿ” ಅಂದೆ.” ವೈನೀ ನಿಮಗ ರಾಮರಕ್ಷಾ ಬಂದ್ರ ಅನ್ರಿ” ಅಂದ್ರು. ಅವರಿಗೆ ನೀರು ಕೊಟ್ಟು ಕುಡೀರಿ ಅಂತ ಹೇಳಿ ನಾ ರಾಮರಕ್ಷಾ, ಭೀಮರೂಪಿ (ಹನುಮಂತನ ಸ್ತೋತ್ರ) ಅಂದೆ. ಅವರ ನಡುಕ ಕಡಿಮೆ ಆಯ್ತು. ನಮ್ಮ ಊಟ ಆಗಿರಲಿಲ್ಲ ಇನ್ನೂ. ಅವರು ಊಟ ಆಗಿದೆ ಅಂದ್ರು.

ನಾನೂ ಮಕ್ಕಳ ಊಟ ಮುಗಿಸಿ, ಮಜ್ಜಿಗೆ ಮಾಡಿ ಅವರಿಗೂ ಕೊಟ್ಟು ನಾನೂ ಕುಡಿದೆ. ಅಲ್ಲೇ ಹಾಲ್ ನಲ್ಲೆ ಹಾಸಿಗೆ ಹಾಕಿ, ಎಲ್ಲಾ ಬಾಗಿಲು ಬಂದ್ ಮಾಡಿ, ಲೈಟ್ ಆಫ್ ಮಾಡಿ ಒಂದು ಲಾಟೀನು ಇಟ್ಟು ಅವರಿಗೆ ‌ಮಲಗಿ ಅಂತ ಹೇಳಿ, ನಾನು ಓದ್ತಾ ಕೂತೆ. ಕಾವಲು ಕಾಯುವಂತೆ! ನನಗೆ ಎದೆ ತುಂಬ ನಡುಕ, ಗಾಬರಿಗೆ ಇವರಿಗೇನಾದ್ರೂ ಆದ್ರೆ ಅಂತ. ಮಾರನೇ ದಿನದಿಂದ ಒಬ್ಬಳೇ ಮಕ್ಕಳೊಡನೆ ಮಲಗೋದು ಅಂತ ಠರಾಯಿಸಿ ಬಿಟ್ಟೆ. ಮುಂಜಾನೆ ಎದ್ದು ಟೀ ಕುಡಿದು ಹೊರಟ ಸುಧಾಗೆ ಹೇಳ್ದೆ – “ಸುಧಾ ಈ ಹೊತ್ತು ನಮ್ಮ ಭಾವನ ಮಗ ಬರತಾನ್ರಿ ಹುಬ್ಬಳ್ಳಿಯಿಂದ. ಈ ಹೊತ್ತು ರಾತ್ರಿ ಏನ ಬರಬ್ಯಾಡ್ರಿ” ಹೂಂ ಅಂದ್ರು ಅವರೂ, ಹೋದ್ರು ಮನೆಗೆ. ಹುಷ್ ಅಂತ ಕೂತೆ.

ಆ ದಿನ ಒಬ್ಬಳೇ ಮಕ್ಕಳೊಡನೆ ಮಲಗಿದೆ. ಏನೂ ಗಲಾಟೆ ಇರ್ಲಿಲ್ಲ. ಆದರೆ ಮಾರನೇ ದಿನ ರಾತ್ರಿ ಪೂರ್ತಿ ಏನೋ ಓಡಾಟದ ಸದ್ದು, ಗುಜುಗುಜು ಮಾತು, ಯಾರೋ ಓಡಿ ಹೋದ ಹಾಗೆ. ಹೊರಗೆ ರೂಂ ನ ಕಿಟಕಿಯಿಂದ ನೋಡಿದಾಗ ರಸ್ತೆಯಲ್ಲಿ ಐದಾರು ಜನ ಏನೋ ಸನ್ನೆ ಮಾಡುತ್ತಾ ನಿಂತಿದ್ದು ಕಂಡು ನನಗೂ ಬೆವರು. ಮತ್ತೆ ಹಾಲ್ ನಲ್ಲಿ ಬಂದು ಕೂತೆ. ಮಕ್ಕಳು ಮಲಗಿದ್ದರು. ಟೈಂ ನಿಂತಲ್ಲೇ ನಿಂತಿದೆ ಎಂಬ ಅನಿಸಿಕೆ ನಂಗೆ. ಕೊನೆಗೊಮ್ಮೆ ಮುಲ್ಲಾನ ನಮಾಜಿನ ಕೂಗು ಕೇಳಿ ನಿಟ್ಟುಸಿರು ಬಿಟ್ಟು ಒಂದು ತಾಸು ಮಲಗಿ ಎದ್ದೆ. ಅಲ್ಲಿನ ಸ್ಟಾಫ್ ನರ್ಸ್ ಒಬ್ಬರೇ ಇರತಿದ್ರು. ಅವರಿಗೇ ಬರಲು ಹೇಳಿದೆ ಮರುದಿನ. ಮುಂದೆ ಎರಡು ದಿನಗಳ ನಂತರ ಸುರೇಶ ಬಂದ್ರು. 

ಡಕಾಯಿತರ ಹಾವಳಿ ಕಡಿಮೆಯಾಗಿದ್ರೂ ಇನ್ನೂ ಅಲ್ಲಿ ಇಲ್ಲಿ ಸುದ್ದಿ ಬರ್ತಿತ್ತು. ಆದರೂ ಈಗ ಮತ್ತೆ ಹಾಸ್ಪಿಟಲ್ ಭರ್ತಿ ಇತ್ತು. ಹಗಲೂ ರಾತ್ರಿ ನನ್ನ ಪತಿಯ ಓಡಾಟ ಇರ್ತಿತ್ತು ಆಸ್ಪತ್ರೆಗೆ. ಹೀಗಾಗಿ ನಮ್ಮ ಕ್ಯಾಂಪಸ್ ನಲ್ಲಿ ನನಗೇನು ಹೆದರಿಕೆ ಅನಿಸ್ತಿರಲಿಲ್ಲ. ಮಕ್ಕಳಿಗೆ ಪರೀಕ್ಷೆ ಹತ್ತಿರ ಬಂದಿತ್ತು. ನನ್ನ ದೊಡ್ಡ ಮಗ 2.30 ಕ್ಕೇ ಏಳ್ತಿದ್ದ ಓದಲು. ಆ ದಿನ ನಾಲ್ಕನೇ ಕ್ಲಾಸ್ ನಲ್ಲಿದ್ದ ಚಿಕ್ಕ ಮಗನೂ ಎದ್ದ ಓದಲು ಅಣ್ಣನೊಂದಿಗೆ. ಅವರಿಬ್ಬರಿಗೂ ಟೀ ಮಾಡ್ತಿದ್ದೆ ಅಡಿಗೆ ಕೋಣೆಯಲ್ಲಿ, ಯಾರೋ ಧಡಾ ಧಡಾ ಓಡಿದಂತಾಯ್ತು. ಕಿಟಕಿ ತೆಗೆಯದೇ ಹಾಗೇ ಕಾಲು ಎತ್ತರಿಸಿ ಗಾಜಿನಿಂದ ನೋಡಿದರೆ ಆಸ್ಪತ್ರೆ ಬಿಲ್ಡಿಂಗ್ ದಾಟಿ ಯಾರೋ ಓಡೋದು ಕಂಡಿತು.

ನಾ ಮೆತ್ತಗೆ ಲೈಟ್ ಆಫ್ ಮಾಡಿ, ಟೀ ಮಕ್ಕಳಿಗೆ ಕೊಟ್ಟು ಎಲ್ಲಾ ಬಾಗಿಲು ಚೆಕ್ ಮಾಡಿ, ಯಾರು ‌ಬಂದ್ರೂ ಬಾಗಿಲು ತೆಗೀಬೇಡಿ ಅಂತ ತಾಕೀತು ಮಾಡಿ ಬಂದು ಮಲಗಿದಾಗ 3.15 ಆಗಿತ್ತು. ಬೆಳಗಿನ 5.30 ಆಗಿತ್ತು – ಯಾರೋ ಜೋರಾಗಿ ಕೂಗುತ್ತಾ ಬಾಗೀಲು ತಟ್ಟೋದು, ಬೆಲ್ ಮಾಡಿದಾಗ, ನನ್ನ ಮಗ ಬಂದು ನನ್ನ ಎಬ್ಬಿಸಿದ. ನಾ ಎದ್ದು ಕಿಟಕಿಯಿಂದ ನೋಡಿದಾಗ ಹೊರಗೆ 5-6 ಜನ ಗಾಬರಿ, ಗಡಿಬಿಡಿಯಲ್ಲಿ, “ಆಕ್ಕಾರ ಸಾಹೇಬ್ರನ  ಕರೀರಿ” ಅಂದ್ರು.

ಯಾಕೆ ಏನಾಯ್ತು ಅಂದ್ರೆ “ಭಟ್ರ ಮನೆಗೆ ಡಕಾಯಿತರು ನುಗ್ಗಿ ಹೊಡೆದು ಬಡದು ಮಾಡಿ ಏನೇನೋ ಕದ್ದುಕೊಂಡು ಹೋಗ್ಯಾರ್ರೀ. ಅಕ್ಕಾರಿಗೆ, ಅವರ ಮಗನಿಗೆ ಭಾಳ ಪೆಟ್ಟಾಗತ್ರಿ” ಅಂದ್ರು. ನನ್ನ ಪತಿಯೂ ಎದ್ದು ಬಂದ್ರು. ನಮ್ಮ ಆವರಣದ ಎದುರಿಗೇ, ರಸ್ತೆ ಆಚೆ ಬದಿಯ ಒಂದು ಮನೇಲಿ ಕಳವು ಮಾಡಿ ಭಟ್ರ ಮನೀಗೆ ಹೋಗ್ಯಾರ ಕಳ್ಳರು. ನಾ ಟೀ  ಮಾಡೋವಾಗ ಓಡಿ ಹೋದದ್ದು ಅವರೇ! ಸಣ್ಣಗೆ ಬೆವರಿದೆ.

ಭಟ್ರ ಮಗನಿಗೆ ಮೂಗಿಗೆ ಏಟು ಬಿದ್ದಿತ್ತು, ಅವರ ತಾಯಿಗೆ ತಲೆಗೆ. ಇಬ್ಬರಿಗೂ ಗಾಯವಾದಲ್ಲಿ ಹೊಲಿಗೆ ಹಾಕಿ ಬ್ಯಾಂಡೇಜ್ ಮಾಡಿ ಮಾತ್ರೆ, ಇಂಜೆಕ್ಷನ್ ಎಲ್ಲಾ ಮುಗಿಸಿ ಬಂದ್ರು ಸುರೇಶ.

ಆ ಭಟ್ರ ಮಗ ಯಾರು ಗೊತ್ತೇ? ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ಮಾಪಕ ನಿರ್ದೇಶಕ, ‘ಯೋಗರಾಜ್ ಭಟ್ರು!’ ತಿಳವಳ್ಳಿಯಲ್ಲಿ ನಮ್ಮ ಮನೆಯಿಂದ ಐದು ನಿಮಿಷಗಳ ದಾರಿ ಅವರ ಮನೆಗೆ. ನನ್ನ ದೊಡ್ಡ ಮಗನಿಗಿಂತ ಒಂದೆರಡು ವರ್ಷ ದೊಡ್ಡವರು. ಆದರೆ ಇವರೆಲ್ಲ ಒಟ್ಟಿಗೆ ಆ ನಮ್ಮ ಆಸ್ಪತ್ರೆಯ ಬಯಲಲ್ಲಿ  ಕ್ರಿಕೆಟ್ ಆಡಿದ ಬಾಲ್ಯ ಸ್ನೇಹಿತರು – ನಮ್ಮನೆ ತುಂಬ ಗಲಾಟೆ ಮಾಡೋ ತುಂಟ ಹುಡುಗರು ಆಗ. ನನಗೆ ಈಗ ಹೆಮ್ಮೆ, ನಮ್ಮ ಕಣ್ಮುಂದೆಯೇ ಆಡಿ ಬೆಳೆದ ಹುಡುಗರ ಸಾಧನೆ ನೋಡಿ! ನನ್ನ ಮಗ ಈಗ ಅಮೇರಿಕದಲ್ಲಿ.

ಅದಕ್ಕೇ ನಾ ಯಾವಾಗಲೂ ಅನಕೋತೀನಿ ಈ ಜಗತ್ತು ತುಂಬ ಚಿಕ್ಕದು- ಅದರ ತುಂಬ ಹೆಜ್ಜೆ ಇಟ್ಟಲ್ಲಿ ಏನೋ ಒಂದು ಅಚ್ಚರಿ ಅಂತ. ಅಲ್ವಾ?

‍ಲೇಖಕರು Avadhi

December 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shrivatsa Desai

    ಮೊದಲು ನೊಂದವರಿಗೆ ಸಂತಾಪ ಸೂಚಿಸಿಯೇ ಮುಂದುವರೆಯುವೆ. ಕಳೆದೆರಡು ದಿನಗಳಂತೆಯೇ ಈ ಕಂತಿನಲ್ಲಿಯ ಕಥೆಯೂ ಸಹ ಸಿನಿಮಾ ಶೂಟಿಂಗಗೆ ಯೋಗ್ಯ! ಅದರಲ್ಲೂ ಯೋಗಿರಾಜ ಭಟ್ಟರ ಹಾಜರಾತಿಯಿದೆ ಅಂದ ಮೇಲೆ! ಭೌಗೋಲಿಕವಾಗಿ ದೂರವಾಗಿಯೇ ಉಳಿದ ತಿಳವಳ್ಳಿಯಲ್ಲಿ ಉದಯಿಸಿದ ಈ ’ಸ್ಟಾರ್’ ನ ’ಜರ್ನಿ’ ಇಲ್ಲಿಂದಲೇ ಅಂತ ತಿಳಿದು ಈ ಸರಣಿಯನ್ನು ನೋಡುವ ದೃಷ್ಟಿಯೇ ಬದಲಾಯಿತು. ಮುಂದಿನ ಸ್ವಾರಸ್ಯದ ಕಥೆಗೆ ಕಾತುರರಾಗಿದ್ದೇನೆ. ಸರೋಜಿನಿಯವರಿಗೂ ಅವರ ವೈದ್ಯ ಪತಿಗೂ ಅಭಿನಂದನೆಗಳು! ಶ್ರೀವತ್ಸ ದೇಸಾಯಿ

    ಪ್ರತಿಕ್ರಿಯೆ
  2. Sarojini Padasalgi

    ತುಂಬ ಧನ್ಯವಾದಗಳು ಶ್ರವಣಕುಮಾರಿಯವರೇ.

    ನಿಜ ಹೇಳಬೇಕೆಂದರೆ ಅದೊಂದು ಹೆಸರಿಸಲಾಗದ ವಿಲಕ್ಷಣ ಅನುಭವಗಳ ಗಂಟು ಶ್ರೀವತ್ಸ ದೇಸಾಯಿ ಯವರೇ. ಈಗಲೂ ದಿಗಿಲು ಹುಟ್ಟಿಸುವಂತೆ. ತಮ್ಮ ಆಪ್ತ ಅನಿಸಿಕೆ ಗೆ, ಅಭಿನಂದನೆಗಳಿಗೆ ತುಂಬು ಹೃದಯದ ಧನ್ಯವಾದಗಳು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sarojini PadasalgiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: