ಸರೋಜಿನಿ ಪಡಸಲಗಿ ಅಂಕಣ- ಕಾಯಬೇಕೆನ್ನ ಗೋಪಾಲಾ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

13

ನಮ್ಮ ಏಕಾಂದು ಭಾಳ ವ್ಯವಸ್ಥಿತ ದಿನಚರಿ. ಅಗದೀ ಎಲ್ಲಾ ಠರಾವಿಕ ರೀತಿಯೊಳಗ ಒಂಚೂರೂ ಆಕಡೆ ಈಕಡೆ ಆಗಧಾಂಗ ನಡೀತಿತ್ತು. ಸೂರ್ಯಾ ಹುಟ್ಟೂದು, ಮುಳಗೂದು ಋತುಮಾನಕ್ಕ ಹೊಂದಿಸಿ ಹೆಚ್ಚು ಕಡಿಮಿ  ಮಾಡ್ತಾನ. ಖರೇ ಯಾವದರೇ  ಕಾಲ ಇರಲಿ; ಮಳಿ ಇರಲಿ ಛಳಿ ಇರಲಿ ಬರೋಬ್ಬರಿ ಮುಂಜಾನೆ ಐದು ಸವ್ವಾಐದಕ್ಕ  ಅಂದ್ರ ನಮ್ಮ ಏಕಾನ ದಿನಾ ಸುರು ಆಗಿ ಬಿಡ್ತಿತ್ತು. ಎದ್ದು ನೀರೊಲಿಗೆ ಉರಿ ಹಾಕಿ ಮಾರಿ ತೊಳ್ಕೊಂಡು ದೇವರ ಮುಂದ ದೀಪಾ ಹಚ್ಚಿ ಕೈ  ಮುಗದ ಕೂಡಲೇ ಆಕಿ ಉದಯರಾಗ ಚಾಲು ಆಗ್ತಿತ್ತು.

“ಕಾಯಬೇಕೆನ್ನ ಗೋಪಾಲಾ  ಒಂದುಪಾಯವನರಿಯೇನೋ  ಭಕುತರ ಪಾಲಾ……” ಅಂತ ಪುರಂದರ ದಾಸರ ಕೀರ್ತನೆ  ಅಗದಿ ಸಣ್ಣ ಧನೀಲೇ, ಮಲಕೊಂಡವ್ರಿಗೆ ತ್ರಾಸ ಆಗಧಾಂಗ ಹಾಡಕೋತ ದೇವರ ಮುಂದ ಸಾರಿಸಿ  ರಂಗೋಲಿ ಹಾಕಿ, ಅಂಗಳಾ ಉಡಗ್ತಿದ್ಲು. ಅಷ್ಟ ದೊಡ್ಡ  ಅಂಗಳಕ್ಕ  ಥಳಿ ಹೊಡ್ಯೂದ  ಒಂದ ದೊಡ್ಡ ಕೆಲಸ. ಏಕಾನ  ಥಳಿ ಹೊಡ್ಯೂದೂ ಬ್ಯಾರೆ ಥರಾನs . ಒಂದ  ಬಕೀಟ ನೀರಿಗೆ  ಸೆಗಣಿ  ಕೂಡಸಿ ಕಲಸಿ ಆ ಸೆಗಣಿ ನೀರ ಥಳಿ  ಹೊಡೀತಿದ್ಲು. ಹಿಂಗಾಗಿ ನಮ್ಮ ಅಂಗಳ ಅಂದ್ರ  ಮನೀ ಒಳಗಿನ ನೆಲಧಂಗನs ಸಾಪ ಸಪಾಟಾಗಿ ಸಾರಿಸಿಧಂಗ  ಬಲೇ  ಶಿಸ್ತ ಕಾಣೂದು. ಆರಾಮಶೀರ  ಒಂದ ಸತರಂಜ ಛಲ್ಲಿ ಮಲಗಬಹುದು ಹಂಗ. ಆಮ್ಯಾಲ ತಲಬಾಗಲ  ಮುಂದ ಇಷ್ಟಗಲ ಸಾರಿಸಿ  ದಿನಕ್ಕೊಂದು ಛಂದ ರಂಗೋಲಿ ಹಾಕ್ತಿದ್ಲು.

ಏಕಾ ನನಗೂ ಭಾಳ ಲಗೂನ  ರಂಗೋಲಿ ಹಾಕಲಿಕ್ಕೆ  ಕಲಸಿದ್ಲು. ನನಗ ರೂಢಿ  ಆಗಲಿ ಅಂತ ನನ್ನೂ ಕರೀತಿದ್ಲು  “ಅಕ್ಕವ್ವಾ  ಥಳಿ ಹಾಕಿ ಸಾರಿಸಿಟ್ಟೀನ  ನೋಡ; ಬಾ ರಂಗೋಲಿ ಹಾಕಬಾ” ಅಂತ. ಹೆಚ್ಚು ಕಡಿಮಿ ಏಕಾಂದೇ ಕೆಲಸ  ಅದು. ಆಕೀಗೆ ನೆನಪೂ ಭಾಳ. “ನಾಳೆ ಪಂಧ್ರಾ  ಆಗಸ್ಟ್. ಧ್ವಜವಂದನಕ್ಕ ಎಷ್ಟ ಗಂಟೆಗೆ ಹೋಗಬೇಕು; ಪ್ರಭಾತ ಫೇರಿ  ಎಷ್ಟಕ್ಕ ಚಾಲೂ ಆಗ್ತದ” ಅಂತ ತಪ್ಪದೇ ಕೇಳ್ತಿದ್ಲು. ಮರುದಿನ  ನಾವೆಲ್ಲ ಏಳೂದ್ರಾಗ ಅಂಗಳದಾಗ ತಿರಂಗಾ ರಂಗೋಲಿಯೊಳಗ  ಮಿಂಚತಿತ್ತು. ಹಂಗs ‌‌ ಜನೇವರಿ ಇಪ್ಪತ್ತಾರನೂ  ನೆನಪಿಟ್ಟಿರತಿದ್ಲು ಏಕಾ.

ನಾಗಚೌತಿ, ಪಂಚಮಿ ದಿವಸ ಅಂಗಳದಾಗ ನಾಗಪ್ಪನ್ನ ತಗೀತಿದ್ಲು ರಂಗೋಲಿಲೇ. ಇನ್ನ ದೀಪಾವಳಿ  ಹಬ್ಬಕ್ಕಂತೂ ರಂಗೋಲಿ ಸಂಭ್ರಮ ಭಾಳ. “ದೀವಳಿಗಿ ಹಬ್ಬಂದ್ರ  ರಂಗೋಲಿ, ಆಕಾಶಬುಟ್ಟಿ, ಫರಾಳಾ ಇವತರದs ಹಬ್ಬ ನೋಡ” ಅಂತಿದ್ಲು ಏಕಾ. ಗೋವತ್ಸ ದ್ವಾದಶಿ ದಿವಸ ಒಂದ ಸಣ್ಣ ಮಣಿ ಮ್ಯಾಲೆ ಆಕಳಾ, ಆಕಳ ಕರದ್ದ  ರಂಗೋಲಿ ತಗದು ದೇವರ ಕಟ್ಟಿ ಮ್ಯಾಲ ಇಡಾಕಿ. ಅದರ ಪೂಜಾ ಮಂಗಳಾರತಿ ಆಗಬೇಕು ಆ ದಿವಸ.

ನೀರ ತುಂಬು ಹಬ್ಬದ್ದಿವಸ ಅಂದ್ರ ಜಲಪೂರ್ಣ ತ್ರಯೋದಶಿ ದಿನಾ ಸಂಜಿ  ಮುಂದ  ಅಂಗಳದ್ದ ಸಾರಣಿ  ಆತಂದ್ರ  ರಂಗೋಲಿದು ದೊಡ್ಡ ಪ್ರೋಗ್ರಾಂ. ಒಂದ ಕಡಿಂದ  ಏಕಾ  ತಕ್ಕೋತ ಬರ್ತಿದ್ಲು; ಇನ್ನೊಂದ  ಕಡಿಂದ  ನಾ. ದಂಡಿಗೆಲ್ಲಾ  ಸಣ್ಣು ಸಣ್ಣು ರಂಗೋಲಿ ತಗೀತಿದ್ವಿ; ನಡಬರಕ  ಏಕಾ ಒಂದ  ದೊಡ್ಡ ರಂಗೋಲಿ ಹಾಕ್ತಿದ್ಲು. ಆಮ್ಯಾಲ ಅದನ  ನನಗs  ಬಿಟ್ಲು. ಆದರೂ ಒಂದು  ಮಾತು ಅಸಿಮಿಸಿ ಇಲ್ಲದ ಒಪ್ತೀನ ನಾ- ಗಂಟಿನ  ರಂಗೋಲಿ  ನಮ್ಮ ಏಕಾಂದ ಅಗದೀ ಅರ್ಭಾಟ  ಬರ್ತಿತ್ತು; ನಂದು ಅಷ್ಟs ಕಾಮ ಚಾಲವು ಅಂತಾರಲಾ ಹಂಗ. ನಮ್ಮ ಅವ್ವಾನ ಕೆಲಸ  ಬ್ಯಾರೆ  ಇರ್ತಿದ್ದು. ಅಜ್ಜಿ – ಮೊಮ್ಮಗಳ  ನಡುವ ಆಕಿ ಬರತಿದ್ದಿಲ್ಲ. ಕೆಲಸ ಅಡಗಾಣಿಸಿದ್ರ ಬರ್ತಿದ್ಲು.

ತುಳಸೀ ಲಗ್ನದ  ದಿನಾನೂ  ಹೀಂಗ  ಭರ್ದಾಸ್ತ ಪ್ರೋಗ್ರಾಂ ರಂಗೋಲಿದು ತುಳಸಿ ಕಟ್ಟಿ  ಸುತ್ತಲೂ. ನಮ್ಮನಿ ರಂಗೋಲಿ  ಮುಗೀತಂದ್ರ ಆಜೂ ಬಾಜೂ  ಮನಿ ಫೇರಿ ಹಾಕಿ ರಂಗೋಲಿ ನೋಡಿ ಬರೂದು ಮತ್ತ ಶರಾ  ಯಾವಾಗಲೂ ಠರಾವಿಕೇ; ” ಏಕಾ ನಮ್ಮ ರಂಗೋಲಿನೇ  ಛಂದ ಆಗ್ಯಾವ”. ಇದರಾಗ  ನಮ್ಮ ದೊಡ್ಡ ತಮ್ಮನ ಸಾಥ  ಇರ್ತಿತ್ತು ನಂಗ.ಅದೇನೋ ಒಂಥರಾ ಖುಷಿ, ಹುರುಪು. ನಮ್ಮ ಏಕಾನ ಕಡಿಂದ  ಹರದ ಬಂದು ನಮ್ಮೊಳಗ ಅದಕ್ಕ ಪೂರ ಬಂಧಾಂಗ ಅನಸ್ತಿತ್ತು.

ಇನ್ನೊಂದು  ಅಗದೀ ಸ್ಪೇಷಲ್ ರಂಗೋಲಿ ಅಂದ್ರ ರಥಸಪ್ತಮಿ ದಿನದ ಸೂರ್ಯನ ರಥಾ. ನಮ್ಮ ಏಕಾ ಅದನ್ನ ಹಾಕಿದ್ಲಂದ್ರ  ಹಬ್ಬದ ಉಬ್ಬು ಮನೀ ತುಂಬ ಥೇಟ್ ಹಾಲು ಉಕ್ಕಿಧಾಂಗ ಉಕ್ಕೋದು. ಆ ಕಳೇನ ಬ್ಯಾರೆ. ಏಕಾನ  ಕಡಿಂದ  ನಾ  ಕಲ್ತದ್ದು ಭಾಳ; ಕಾಯಂ ನನ್ನ ಸೋಬತಿಗೆ  ಇರೂ ಅಂಥಾವ ಅವು.

ನಮ್ಮ ಏಕಾಂದು ‌‌ ಒಂದು  ವಿಶೇಷತಾ  ಅಂದ್ರ ಯಾವ ಕೆಲಸಾ ಮಾಡಿದ್ರೂ, ದೊಡ್ಡದಿರಲಿ ಸಣ್ಣದಿರಲಿ ಅದೇ  ಏಕೋಭಾವದಿಂದ  ಮಾಡ್ತಿದ್ಲು; ಗಿಡದ ತುಂಬ ಮಲ್ಲಿಗಿ  ಅರಳಿಧಾಂಗ

ಮನಸು ಅರಳೋದು. ಆಷಾಢದಾಗ  ನಮ್ಮ ಕಡೆ ಪ್ರತಿ  ಮಂಗಳವಾರ  ಗುಳ್ಳವ್ವನ್ನ  ಇಟ್ಟು ಸಂಜೀ ಮುಂದ  ಪೂಜಾ,  ಆರತಿ  ಆಗಬೇಕು. ಆ ಮ್ಯಾಲೆ ಅಲ್ಲೇ  ಓಣ್ಯಾಗಿನ್ನು  ಮನೀಗೋಳ್ಗೆ  ಹೋಗಿ  ಆರತಿ  ಮಾಡಿ  ಬರಬೇಕು ಗುಳ್ಳವ್ವಗ. ಸಣ್ಣ  ಹೆಣ್ಮಕ್ಕಳ  ಹಬ್ಬ ಅದು; ಹುಡಗೀರ  ಆಟಧಾಂಗ. ಖರೇ  ಅದರ ತಯಾರಿ ಸುದ್ಧಾ  ಭಾರೀ  ನಿಗಾ ಇಟ್ಟ ಮಾಡಾಕಿ  ನಮ್ಮ ಏಕಾ. ನಮ್ಮ ಜೋಡಿ  ಅಕೀನೂ  ಸಣ್ಣ ಹುಡುಗೀನs  ಆಗಿ ಬಿಡ್ತಿದ್ಲು.

ಗುಳ್ಳವ್ವನ್ನ  ಮಣ್ಣೀಲೇ  ಮಾಡೂದು. ಏಕಾ ಆ ಮಣ್ಣು  ಕುಂಬಾರ  ಮನೀಂದನs  ತರ್ತಿದ್ಲು- “ಛಲೋತ್ನಾಗಿ  ಮಿದ್ದಿ ತುಳದು  ಒಳ್ಳೇ  ಹದಾ  ಮಾಡಿರತಾರ  ನೋಡ ಅಕ್ಕವ್ವಾ ” ಅನಾಕಿ. ಹಿಂಗಾಗಿ  ಗುಳ್ಳವ್ವ  ಬಲೆ   ಕಳೆ ಕಳೆ  ಕಾಣಾಕಿ. ಪ್ರತೀವಾರ  ಒಂದೊಂದು ಮಾಡೋದು; ಒಂದ ವಾರ  ಬಸವಣ್ಣ, ಒಂದ ವಾರ  ನವಿಲು ಹೀಂಗ. ಅವಕ್ಕ  ಛಂದಾಗಿ  ಗುಲಗಂಜಿ  ಹಚ್ಚಿ ಅಲಂಕಾರ ಮಾಡಾಕಿ.ಕುಸಬೀ ಕಾಳಿಗೆ  ಬಣ್ಣಾ  ಹಾಕಿ  ಇಟ್ಟಿರತಿದ್ಲು.  ಗುಲಗಂಜಿ  ಜೋಡಿ  ಆ  ಬಣ್ಣ ಬಣ್ಣದ ಕು‌ಸಬಿ ಕಾಳು, ಸ್ವಲ್ಪ  ಹಂಗs  ಬಿಳೇವ  ಕುಸುಬಿ  ಕಾಳೂ   ಗುಳ್ಳವ್ವಗ ಚುಚ್ಚತಿದ್ಲು  ಏಕಾ. ಆಕಿ  ಅಲಂಕಾರ  ಮಾಡೂದs  ಹಂಗ. ಛಂದ  ಕಾಣಾಕಿ  ಗುಳ್ಳವ್ವ; ನಮ್ಮ ಕುಣದಾಟನೂ  ಹಂಗs  ಇರೂದು.

ಇನ್ನ  ಕಡೀವಾರ  ತಿಗರಿ  ಗುಳ್ಳವ್ವ. ಅಂದ್ರ ಕುಂಬಾರ್ರು  ತಾವ  ಗಡಿಗಿ ಮಾಡ್ತಾರಲಾ  ಆ ತಿಗರಿ  ಮ್ಯಾಲನ  ಗುಳ್ಳವ್ವನ್ನ  ಮಾಡಿ  ಕೊಡ್ತಿದ್ರು. ಮೈತುಂಬ  ಫ್ರೀಲ್  ಫ್ರಾಕ್ ಹಾಕಿಧಂಗ  ಮೆಟ್ಟಿಲು ಮೆಟ್ಟಿಲ ಗುಳ್ಳವ್ವ, ಮ್ಯಾಲ  ಮಾಟ  ಕುತಿಗಿ , ಮಾರಿ. ಛಂದ ಕಾಣಾಕಿ ಗುಳ್ಳವ್ವ. ನಮ್ಮ ಏಕಾನ ಅಲಂಕಾರದಲೇ  ಅಂತೂ ವಾವ್  ಅನೂಹಂಗ ಕಾಣ್ತಿದ್ಲು  ಗುಳ್ಳವ್ವ. ಆ ಹೊತ್ತಿನ ಆರತಿ  ಆತು  ಅಂದ್ರ  ಮರುದಿನ  ಗುಳ್ಳವ್ವನ್ನ  ಕಳಸೂದು. ಬುತ್ತಿ  ಕಟಗೊಂಡು  ಕೆರಿ, ಹೊಳಿ ಕಡೀಕ ಹಳ್ಳಾ ಇದ್ದಲ್ಲೆ  ಗುಳ್ಳವ್ವನ್ನ  ಕರಕೊಂಡ ಹೋಗಿ  ಹಾಡ ಹಾಡಕೋತ  ಪಂಕ್ತಿ  ಮಾಡಿ ಗುಳ್ಳವ್ವನ್ನ  ಆ‌ ನೀರಾಗ  ಬಿಟ್ಟು ಬರೂದು.

ನಾ ಏಕಾನ್ನ ಕೇಳಿದ್ದೆ -” ಏಕಾ ಗುಳ್ಳವ್ವನ್ನ ಮಣ್ಣೀಲೇನ  ಯಾಕ  ಮಾಡಬೇಕು ಅಂತ. ಅದಕ ಏಕಾಂದು  ಸಮಝದಾರ  ಉತ್ತರಾ  ತಯಾರs ಇರ್ತಿತ್ತು,;” ನೋಡ ಅಕ್ಕವ್ವಾ  ಈ  ಮಳಿಗಾಲದಾಗ ಬಿತಿಗಿ  ಸುರು  ಆಗ್ತಾವ. ಮಣ್ಣು ಈ ಜೀವನಕ್ಕ ಜೀವನಾಧಾರ.  ಅದಕ್ಕ ಆ ಅವ್ವಗ ‌‌‌‌‌ ನಮ್ಮ ಸಣ್ಣ ಪೂಜಾ ಈ ಥರಾ. ಆಕಿ ಋಣಾ  ಹೀಂಗ ನೆನಪಿಡ್ತೀವ  ಅನ್ನು  ಬೇಕಾದ್ರ.  ಅದಕ  ಆ ತಾಯಿನ್ನ  ಈ ಮಳಗಾಲದಾಗ  ಏಳ  ರೂಪಿನ್ಯಾಗ  ಪೂಜಿ  ಮಾಡ್ತೀವಿ. ಒಂದನೇದು  ಕಾರ ಹುಣ್ಣಿಮೆ ದಿನ  ಹೊನ್ನುಗ್ಗಿ  ಅಂತ ಮಾಡಿ ಬಸವಣ್ಣನ  ಪೂಜಾ ಮಾಡ್ತೀವಿ. ಆಮ್ಯಾಲ ಮೊನ್ನೆ  ಮಣ್ಣೆತ್ತಿನ ಅಮಾಶಿ  ಆತ ನೋಡ  ಅಂದೂ  ಮಣ್ಣೆತ್ತಿನ ಪೂಜಾ ಮಾಡ್ತೀವಿ.ಇದು ಎರಡೊಂದ ನೋಡ ಅಕ್ಕವ್ವಾ. ಹೊಲದ ಕೆಲಸದಾಗ ಹೆಗಲ ಕೊಡೋ ಬಸವಣ್ಣನ ಪೂಜಾ, ಭೂತಾಯಿ ಪೂಜಾ ಎರಡೂ  ಘಡಾಸ್ತದ ಇಲ್ಲೆ. ಆಮ್ಯಾಲ ಗುಳ್ಳವ್ವ. ಶ್ರಾವಣದಾಗ  ಮಣ್ಣಿಂದ ಮಾಡಿದ  ನಾಗಪ್ಪಂದು, ಹುತ್ತಿಂದು, ಶ್ರಾವಣ ಗೌರಿ ಪೂಜೆ – ಆ ಗಡಿಗೆನೂ ಮಣ್ಣೀಂದೇ. ಗೋಕುಲಾಷ್ಟಮಿ  ದಿನಾ  ಮಣ್ಣಿಂದ ಮಾಡಿದ  ಕೃಷ್ಣ, ಬಲರಾಮ ಮತ್ತ ಗೋಕುಲ ಪೂಜಾ ಮಾಡ್ತೀವಿ. ಆ ಮ್ಯಾಲೆ ಗಣಪ್ಪನ ಪೂಜಾ. ಇಷ್ಟದ ನೋಡ ಅಕ್ಕವ್ವಾ ” ಅಂತ ಹೇಳಿದ್ಲ ಏಕಾ.ಎಷ್ಟು ವಾಸ್ತವಿಕ, ಪ್ರಾಮಾಣಿಕವಾಗಿ ಕೃತಜ್ಞತಾ ಸಮರ್ಪಣೆ  ಭೂದೇವಿಗೆ  ಅನಿಸ್ತು. ಹಿಂಗ  ಸಮಝಾಯಿಸಿ  ಹೇಳೂ ರೀತಿ  ಛಲೋ ಪಟಾಸೂ ಹಂಗ  ಇರೋದು ನಮ್ಮ ಏಕಾಂದು.

ಶ್ರಾವಣ ಮಾಸ ಬಂತಂದ್ರ  ನಮ್ಮ ಏಕಾನ  ಕಾಲು  ನೆಲದ ಮ್ಯಾಲ  ನಿಲ್ಲತಿರಲಿಲ್ಲ. ಅಳ್ಳು, ಅಳ್ಳಿಟ್ಟು, ತಂಬಿಟ್ಟು, ಅಂತ ಸುರು ಆಗೋದು. ಮಸಾಲಿ ಪುಡಿ, ಮೆಂತ್ಯ ಹಿಟ್ಟು, ಚಕ್ಕಲಿ ಭಾಜಾಣಿ; ಒಟ್ಟ ಎಲ್ಲಾ  ಹುರಿಯೂದು, ಬೀಸೂದು ಮುಗಿಸಿ ಬಿಡೂದು. ಶ್ರಾವಣ ಮಾಸದಾಗ  ಕಬ್ಬಿಣ ಬುಟ್ಟಿ ಒಲೀಮ್ಯಾಲ  ಇಡಾಂಗಿಲ್ಲಾ  ಅಂತ  ಪದ್ಧತಿ. ಹಬ್ಬದ  ಸಾಲಿನ್ಯಾಗ  ಪುರುಸೊತ್ತ  ಎಲ್ಲೀರತದ  ಅಂತ ಹೇಳಿ ಈ ಪದ್ಧತಿ  ಬಂದಿರಬೇಕು.

ಶ್ರಾವಣ ಗೌರಿ ಅಂದ್ರ  ಗಡಿಗಿ  ಗೌರೀನ. ಕುಂಬಾರ  ಕಡಿಂದ  ಅಗದೀ ಚೊಕ್ಕ  ಇದ್ದದ್ದ, ಮುಕ್ಕಾಗಿರೂದಂತೂ  ದೂರನs  ಹಳ್ಳ  ಸುದ್ಧಾ ಹತ್ತಿರಬಾರದು ,  ಸೈಜು ಆಕಾರ  ಆಗದೀ ಹಾಳತಾಗಿರಬೇಕು  ಅಂಥಾ  ಗಡಿಗಿನ  ಮುಚ್ಚಳ ಸಹಿತ  ತಗೊಂಡು ಬರೂದು ಪದ್ಧತಶೀರ. ಅಂದ್ರ ಗೌರಿ  ಗಡಿಗಿಗೆ  ಅರಿಶಿನ ಕುಂಕುಮ ಏರಿಸಿ, ಕುಂಬಾರನ  ಹೆಂಡತಿಗೆ  ಅರಿಶಿನ ಕುಂಕುಮ ಕೊಟ್ಟು ಉಡಿ ತುಂಬಿ, ಶಿದಾ, ದಕ್ಷಿಣೆ ಕೊಟ್ಟು, ಗಡಿಗಿ  ಕಿಮ್ಮತ್ತ ಕೊಟ್ಟು ಛಲೋ ದಿವಸ  ನೋಡಿ  ತರೂದು.  ಶ್ರಾವಣ ಶುಕ್ರವಾರ  ಗೌರಿ  ಕೂಡ್ತಾಳ  ಅಂದ್ರ ಏಕಾ ಬುಧವಾರ  ಅಥವಾ ಗುರುವಾರ  ಗೌರಿ ಬರೀತಿದ್ಲು. ಅವ್ವಾನ  ಕಡಿಂದ  ಒಂದ  ಚುಕ್ಕಿ ಇಡಿಸಿ  ಏಕಾ ಗೌರಿ  ಬರಿಯೂದ  ಸುರು ಮಾಡ್ತಿದ್ಲು. ಕುಂಬಾರ ಕಡಿಂದ  ತಂದ ಗೌರಿ ಗಡಿಗಿಗೆ  ಪೂರಾ ಸೋನಕ್ಯಾಂವಿ  ಹಚ್ಚಿ ಅದರ ಮ್ಯಾಲೆ  ಹೊಸಾ ಸುಣ್ಣ ಮತ್ತ ಪೇವಡಿಲೆ  ಗೌರಿ ಬರೀತಿದ್ಲು  ಏಕಾ. ಗೌರಿ ಮಡಲ ತುಂಬ ಕಲ್ಪವೃಕ್ಷ, ಕಾಮಧೇನು, ಶಂಖ- ಪದ್ಮ, ತುಳಸಿ ಕಟ್ಟಿ , ಕೊರಳ ತುಂಬ ಮಂಗಳಸೂತ್ರ, ಆಭರಣ ಬರಿಯೂದು; ಮುಚ್ಚಳ ಮ್ಯಾಲ  ಗೌರಿ ಮಾರಿ. ಅಲ್ಲಲ್ಲಿ  ಸಣ್ಣ ಸಣ್ಣ ಸುಣ್ಣದ  ಚಿಕ್ಕಿಗಳು- ಥೇಟ್  ಮುತ್ತ ಜೋಡಿಸಿಧಾಂಗ.

ಆ ಮ್ಯಾಲೆ  ಶುಕ್ರವಾರ  ಪಾಂಕ್ತಾಗಿ  ಮಡಿಲೆ  ಹಬ್ಬದ  ಅಡಿಗಿ  ಏಕಾಂದು;  ನವ್ವಾರಿ  ಕಚ್ಚಿ  ಸೀರಿ ಉಟ್ಟು ಛಂಧಂಗ  ಗೌರಿ ಪೂಜಿ  ನಮ್ಮ ಅವ್ವಂದು. ಇಷ್ಟೆಲ್ಲಾ  ಹೂರಣಾ ಕಣಕದ ಅಡಿಗಿ,  ಗೌರಿ ಪೂಜಾ, ಆರತಿ, ನೈವೇದ್ಯ ಎಲ್ಲಾ ಮುಗದ ಬಿಡ್ತಿತ್ತು ಬರೋಬ್ಬರಿ  ಹತ್ತು, ಸವ್ವಾಹತ್ತಕ್ಕಂದ್ರ ; ನಾವೆಲ್ಲಾ ದಿನಧಾಂಗ  ಊಟಾ ಮುಗಿಸಿ ಸಾಲಿಗೆ  ಹೋಗ್ತಿದ್ವಿ.

 ಸಂಜೀ  ಮುಂದ  ಗೌರಿ  ಹಾಡು. ಆಜೂಬಾಜೂದಾವ್ರು  ಎಲ್ಲಾರೂ ಸೇರಿ  ಒಂದೇ  ಕಡೆ  ಹಾಡು ಆಗ್ತಿತ್ತು. ಆದರ  ನಮ್ಮ ಏಕಾ  ಒಂದೇ ಒಂದೂ  ವಾರನೂ  ತಪ್ಪದ  ಶ್ರಾವಣದ  ಅಂದ್ರ ಸಂಪತ್ತು ಶುಕ್ರವಾರ, ಸಂಪತ್ತು ಶನಿವಾರ ಗೌರಿ  ಹಾಡು ಗೌರವ್ವನ  ಮುಂದೆ ರಾತ್ರಿ ಹಾಡಾಕಿ. ಆಕೀ  ಹೇಳೂದು  ಧ್ವನಿ ಮ್ಯಾಲಿನ  ಧ್ವನಿ  ಹಾಡು. ಅಂದ್ರ  ಆ  ಕಥಿ  ಸಣ್ಣ ಸಣ್ಣ ಹಾಡಿನ  ರೂಪದಾಗ ಬರ್ತಿತ್ತು- ಗೀತ ಕಥನ, ಸಂಭಾಷಣೆ ರೂಪದಾಗ.  

ಎಷ್ಟ ಹಾಡ  ಬರತಾವ  ಅಷ್ಟು ಬ್ಯಾರೆ ಬ್ಯಾರೆ ಧಾಟಿ. ನಾ ಆಕಿ  ಜೋಡಿ  ತಪ್ಪದ  ಹಾಡ್ತಿದ್ದೆ. ಹಿಂಗಾಗಿ  ನನಗೂ  ಆಗಿಂದನ  ಅಂದ್ರ ಸುಮಾರು 10-12  ವರ್ಷದಾಕಿ  ಇದ್ದಾಗಿಂದನ  ಗೌರಿ ಹಾಡು ಹಾಡೋ ರೂಢಿ  ಬಿದ್ದದ. ಈಗ ನಾ ಒಂದs ಧಾಟಿ ಹಾಡು ಹಾಡ್ತೀನಿ.

ವೆಂಕಪ್ಪನ  ನವರಾತ್ರಿ  ಅಂದ್ರ  ದೊಡ್ಡ   ಸಂಭ್ರಮ  ಏಕಾಗ. ಶ್ರಾವಣಾ  ಮುಗದು  ಗಣಪ್ಪ ಬಂದು ಹೋಗಿ  ಅನಂತನ  ಹಬ್ಬ ಆಗಿ ಹದಿನೈದು ದಿನಕ್ಕ  ನವರಾತ್ರಿ . ನಮ್ಮ ಮನಿಯೊಳಗ  ಸುಮಾರು ನಾಲ್ಕು ನೂರು  ವರ್ಷಗಳ  ಹಿಂದಿನಿಂದ ಬಂದ  ಪ್ರತಿಮೆಗಳವ- ದೊಡ್ಡ ದೇವರ  ಪ್ರತಿಮೆಗಳು. ಶಾಂತ ನರಸಿಂಹ ದೇವರು, ಅವರ  ತೊಡಿ ಮ್ಯಾಲ ಲಕ್ಷ್ಮಿದೇವಿ, ಆಲದೆಲೆಯ ಮೇಲಿನ  ಕೃಷ್ಣ, ವೆಂಕಪ್ಪ, ಶ್ರೀದೇವಿ, ಭೂದೇವಿ, ಹಣಮಪ್ಪ, ಗರುಡ, ಸಾಲಿಗ್ರಾಮಗಳು. ಈ  ಎಲ್ಲ ಪ್ರತಿಮೆಗಳನ್ನ ದಿನಾ ತಗಿಯೂಹಂಗಿಲ್ಲ. ಅದಕ್ಕ ಅದರದೇ ಆದ ಪದ್ಧತಿ ಅದ; ವಿಧಿ ವಿಧಾನಗಳವ. ನವರಾತ್ರಿಯೊಳಗ  ಮಾತ್ರ  ದಿನಾಲೂ ಅಂದ್ರ ಹತ್ತೂ  ದಿನಾ  ಪ್ರತಿಮಾರ್ಚನೆ  ನಮ್ಮ ಮನಿ ಪುರೋಹಿತರು ರಾಮಾಚಾರ್ಯರು  ಮಾಡ್ತಿದ್ರು. ದಸರಾ  ದಿವಸ  ವೆಂಕಪ್ಪನ  ಮದವಿ  ಮಾಡಿ  ದೇವರನ್ನ  ಭುಜಂಗಿಸಿ  ಪೆಟಿಗಿಯೊಳಗ  ಇಡಬೇಕು. ಹತ್ತೂ ದಿನಾ  ಜೋಡಿ  ನಂದಾದೀಪ, ಘಟಸ್ಥಾಪನಾ  ಎಲ್ಲಾ  ಇರ್ತಿತ್ತು. ಒಂಚೂರೂ ಎಲ್ಲೂ  ತಪ್ಪದ್ಹಾಂಗ  ಅಗದೀ  ರಾಸ್ತ ಆಗಿ ಮಾಡಸ್ತಿದ್ಲು  ಏಕಾ.

ಸಂಜೀ ಮುಂದ  ದಿನಾಲೂ ‌‌ ತಾನೇ  ವೆಂಕಟೇಶ ಮಹಾತ್ಮೆ ಓದ್ತಿದ್ಲು. ಹತ್ತು  ದಿನದಾಗ ಅಷ್ಟ  ದೊಡ್ಡ ಪುಸ್ತಕ  ಮುಗಸಬೇಕಿತ್ತು. ಎಲ್ಲಾರೂ  ಹೆಚ್ಚು ಕಡಿಮೆ ಕೇಳ್ತಿದ್ರು. ನಾ  ಮಾತ್ರ ಕಾಯಂ  ಶ್ರೋತಾ. ಇರ ಇರತ  ನಾನೇ  ಓದಲಿಕ್ಕ ಚಾಲೂ ಮಾಡಿ  ನನ್ನ ಮದುವಿ  ಆಗಿ  ಹುಕ್ಕೇರಿ  ಬಿಡೂ ತನಕಾ ಓದ್ತಿದ್ದೆ  ಅದನ್ನ. ನಮ್ಮ ಏಕಾಗ  ಖುಷಿಯೋ ಖುಷಿ. ಖರೇ ಅಂದ್ರ  ಅವೆಲ್ಲಾ  ನನ್ನ ಜೀವನದಾಗ  ಹೆಣಕೊಂಡ  ಬಿಟ್ಟಾವ.

ಒಂದು  ಪ್ರಶ್ನೆ ಯಾವಾಗಲೂ ಕಾಡ್ತದ ನನ್ನ. ಹದಿನೆಂಟನೇ  ವರ್ಷಕ್ಕ  ಗಂಡನ್ನ  ಕಳಕೊಂಡ  ಹುಡುಗಿ, ಎರಡೂವರೆ – ಮೂರು ವರ್ಷ ಗಂಡನ ಜೋಡಿ  ಅವರ  ಮನಿಯೊಳಗ  ಇದ್ದಾಕಿ ಏಕಾ. ಮನ್ಯಾಗ  ಯಾರೂ ಹಿರ್ಯಾರು, ಕಿರ್ಯಾರು  ಇಲ್ಲದ  ಮನಿ. ಅದೇ  ಊರಾಗ  ಇದ್ದ ಒಬ್ಬ ಮೈದುನ- ಹೆಸರಾಂತ ವಕೀಲ ಅಪ್ಪಾಸಾಹೇಬ, ಅವರೂ  ರಾವ್ ಸಾಹೇಬ್ರು ಅಂದ್ರ ನಮ್ಮ ಅಜ್ಜ ತೀರಿಕೊಂಡ  ಒಂದೇ ಒಂದು  ತಿಂಗಳಿಗೆ  ತೀರಿಹೋದ್ರು. ಏನ  ಹೇಳಿದ್ದು ಕೇಳಿದ್ದು  ಅಂದ್ರ ದೂರದ  ಬಳಗ ಯಮುತಾಯಿ   ಕಡಿಂದ. ಅದ ಹೆಂಗ ಏಕಾ  ಇಷ್ಟೆಲ್ಲಾ ಕಲತ್ಲು, ಆ ದು:ಖದಾಗ  ತನ್ನs ತಾ  ಮರತಾಕಿ  ಎಲ್ಲಾ ಹೆಂಗ ನೆನಪಿಟ್ಟು  ಎಷ್ಟ ಪಾಂಕ್ತಾಗಿ  ಮಗಾ ಸೊಸಿ  ಕಡಿಂದ  ಮಾಡಸ್ತಿದ್ಲು; ಅವರೂ ಎಷ್ಟ ಛಂದ  ವ್ಯವಸ್ಥಿತ  ಮಾಡ್ತಿದ್ರು! ಎಲ್ಲಾ ಅಗಾಧ ಅನಸ್ತದ. ಇದರಿಂದ  ನಮಗೆಲ್ಲಾ  ಒಂದು ವಳಣ  ತಾನೇ ತಾನಾಗಿ  ಬಂತು ಅಂಬೂದ  ಮಾತ್ರ  ಶಂಭರ್ ಟಕ್ಕೆ ಖರೇ. 

ನಮ್ಮ ಏಕಾಂದು  ಇನ್ನೊಂದು  ಅಗದೀ ಅಪರೂಪದ್ದು, ಆಕೀ  ಶಾಣ್ಯಾತನಕ್ಕ ಕನಡಿ ಹಿಡ್ಯೂ ಅಂಥಾದು  ಅಂದ್ರ ಚೈತ್ರ ಗೌರಿ  ಹೋಳ್ಯಾದ್ದ ದಿವಸ (ಹೂ ವೀಳ್ಯದ ಆಡು ಭಾಷೆಯ ರೂಪ) ಮಾಡೂ ಆರಾಸ.(ಅಲಂಕಾರ, ಅಲಂಕಾರಿಕ ವಸ್ತುಗಳನ್ನು ಹೊಂದಿಸೋದು). ಯುಗಾದಿ ಪಾಡ್ಯದ ಎರಡ  ದಿನಕ್ಕ ಬರೂ  ತದಿಗಿ ದಿನಾ  ಚೈತ್ರ ಗೌರಿ  ಸ್ಥಾಪನಾ. ಈ ಗೌರಿ ಪೂಜೆ ತದಿಗಿ ದಿನಾ  ಅಕ್ಷಯ ತೃತೀಯ ತನಕಾ. ಅದರ ನಡುವ  ಬರೂ ರಾಮ ನವಮಿ  ಚಿತ್ರಾ ಪೌರ್ಣಿಮಾ(ದವನದ ಹುಣ್ಣಿಮೆ), ಮಂಗಳವಾರ, ಶುಕ್ರವಾರನೂ  ಪೂಜಾ ಮಾಡೋದು. ಈ ಗೌರವ್ವನ  ನೈವೇದ್ಯ ಕೋಸಂಬ್ರಿ, ಮಾವಿನ ಕಾಯಿ  ಪನ್ಹಾ. ಮಾವಿನ ಕಾಯಿ ಬೇಯಿಸಿ  ಅದನ್ನ ಕಿವಿಚಿ‌  ರಸಾ ತಕ್ಕೊಂಡು ಅದಕ ಛಲೋ ಕೆಂಪ  ಬೆಲ್ಲಾ, ಯಾಲಕ್ಕಿ ಇದ್ರ ಚೂರು ಕೇಶರಾ  ಹಾಕಿ ಕೈಯಾಡಿಸಿದ್ರ ಪನ್ಹಾ ತಯಾರ. ಭಾಳ  ರುಚಿ  ಅದು ಮತ್ತ ಆ ಬಿಸಿಲಿಗೆ  ತಂಪನೂ ಹೌದು. ಚಿತ್ರಾ ಪೌರ್ಣಿಮಾ  ಆದ ಮ್ಯಾಲ ಬರೂ ತದಿಗಿ  ನಡುವಿನ ತದಿಗಿ. ಈ ತದಿಗಿ ಆದ ಮ್ಯಾಲೆ ಅಕ್ಷಯ ತೃತೀಯ ಒಳಗ  ಗೌರಿ ಆರಾಸ, ಹೋಳ್ಯಾ ಮಾಡಿ  ಮುತ್ತೈದೆರನ್ನ  ಅರಿಶಿನ ಕುಂಕುಮಕ್ಕ ಕರೀಯೋದು. ಅರಿಶಿನ ಕುಂಕುಮ ಕೊಟ್ಟು ನೆಂದ  ಕಡಲಿ  ಉಡಿ  ತುಂಬಿ, ಕೋಸಂಬರಿ, ಪನ್ಹಾ ಕೊಡೋ ರೂಢಿ.

ಗೌರಿ  ಆರಾಸ  ಅಂದ ಕೂಡಲೇ  ನನಗs  ತಿಳೀದ  ಆ  ತಂದ್ರಿಯೊಳಗ  ನಾ  ಮುಳಗಿ ಬಿಟ್ಟೆ. ನಮ್ಮ ಏಕಾನ ಕೆಲಸ  ಹಿಂದಿನ ದಿನದಿಂದನs  ಸುರು ಆಗ್ತಿತ್ತು. ಈ ಗೌರಿ ತೊಟ್ಟಿಲ ಗೌರಿ, ಜೋಕಾಲಿ ಗೌರಿ. ನಮ್ಮಲ್ಲಿ ಉಭಾ ಗೌರಿ ಇಟ್ಟು ಆರಾಸ ಮಾಡೂ ಪದ್ಧತಿ ಇಲ್ಲ.(ನಿಂತ ಗೌರಿ), ಮುಖೋಟ  (ಮುಖ) ಇಡು ಪದ್ಧತಿನೂ ಇಲ್ಲ. ಅದಕ  ಏಕಾ ದೊಡ್ಡ ಸಮೇಯದ(ದೀಪದ ಕಂಬ) ಮ್ಯಾಲ ಈ ಗೌರೀನೇ  ಇಟ್ಟು ಸೀರಿ ಉಡಸ್ತಿದ್ಲು. ಅವ್ವಾಂದ ಒಂದ  ಭರ್ಜರಿ  ನವ್ವಾರಿ  ಸೀರಿ ತಗೊಂಡು ಹಿಂದಿನ  ದಿನಾನ  ನಿರಿಗಿ  ಹಾಕಿ ಇಡ್ತಿದ್ಲು. ನಮ್ಮ ಏಕಾ  ಇಷ್ಟ ಛಂದ ಮಾಟಾಗಿ  ನಿರಿಗಿ  ಹಾಕಿ ಇಡ್ತಿದ್ಲಲಾ  ಅದನ್ನ ನಿಂತು ನೋಡಬೇಕು. ನಾ ಹಿಂದ  ಹೇಳಿಧಾಂಗ ಪಕ್ಕಾ ಕುಸರಿ ಕೆಲಸ  ಅದು. ಪದರ  ಒಂದು ಗೌರವ್ವನ  ಹೆಗಲ ಮ್ಯಾಲಿಂದ  ಹಾಸಿ ತಂದು  ಹೊಚ್ಚಲಿಕ್ಕೆ, ಇನ್ನೊಂದು  ಒಳಪದರು ಸಮೆಯಕ್ಕ ಸುತ್ತಲಿಕ್ಕೆ ಇಷ್ಟ ಬಿಟ್ಟು  ಅದನ್ನೂ ಮುದ್ದಿ ಆಗಧಾಂಗ ಜ್ವಾಕಿಲೆ ಮಡಿಕಿ  ಹಾಕಿ  ಮ್ಯಾಲೆ  ಒಜ್ಜಾ ಹೇರಿ  ಇಡ್ತಿದ್ಲು. ಅಂದರ ನಿರಿಗಿ  ಅಗದೀ  ಚೋಪಾಶಿ  ಕೂಡ್ತಿದ್ದು. ಮರುದಿನಾ ಅಂದ್ರ ಆರಾಸದ ದಿನಾ  ಸಮೆಯದ ದಂಡಕ್ಕ  ಒಂದ ಸೀರಿ  ದಪ್ಹಂಗ  ಗಟ್ಟಿ ಸುತ್ತಿ  ಆ ಸಮೇದ  ಪ್ರಣತಿ  ಮ್ಯಾಲ ಗೌರವ್ವನ್ನ  ಕೂಡಿಸಿ ಗಟ್ಟಿ  ಕಟ್ಟತಿದ್ಲು. ಆ  ನಿರಿಗಿ  ಹಾಕಿಟ್ಟ  ಸೀರಿ ಶಿಸ್ತ ಹಂಗ  ತಿದ್ದಿ ತೀಡಿ ಉಡಸ್ತಿದ್ಲು ಆ ಸಮೇಕ್ಕ. ಆ ಸೆರಗು ಮಾಟಾಗಿ  ಅಲ್ಲೇ ಕೂತ ಗೌರವ್ವನ ಹೆಗಲ ಮ್ಯಾಲಿಂದ ತಂದು ಹೊಚ್ಚಿ  ಒಂದ ಪಿನ್ನು  ಇಲ್ಲಾ ಟಾಚಣಿ ಚುಚ್ಚಿದ್ರ ಆತು.

ಇಷ್ಟಾದ ಮ್ಯಾಲ  ಗೌರವ್ವನ  ಅಲಂಕಾರ. ಗೋಕಾಕದಿಂದ  ತರಸಿದ  ಕಟಿಗಿ  ಹಸ್ತಾ ಪಾದಾ ಜೋಡಿಸಿ, ವಾಲಿ ಕೊಪ್ಪ(ಓಲೆಯ ಮೇಲೆ ಇಷ್ಟಗಲ ಛತ್ತಧಂಗ ಬರೂ ವಸ್ತ), ಬುಗಡಿ, ನತ್ತು, ಬೈತಲ ಮಣಿ ಹಾಕಿ ಕೊಳ್ಳಾಗ ಮಂಗಳ ಸೂತ್ರ, ಟೀಕಿ, ಬೋರಮಾಳಾ, ಸರಾ ಹಾಕೂದು. ತುರಬಿನ್ಹಂಗ ಒಂದು ಸಿಂಬಿ ಸಿಗಿಸಿ ಅದಕ್ಕ ಮಾಲಿ ಸುತ್ತಿ ಅರಿಶಿನ ಕುಂಕುಮ ಹಚ್ಚಿದ್ರ  ಗೌರವ್ವ ತಯಾರ. ಎದ್ದ ಬರಾಂಗ  ಕಾಣ್ತಿದ್ಲು  ಗೌರವ್ವ. ಗೌರಿ  ವಸ್ತಾ ಎಲ್ಲಾ ಏಕಾ  ತಾನs ಮಾಡಿದ್ಲು- ಮುತ್ತು, ಹವಳಾ, ಹರಳು, ಬಣ್ಣದ ಮಣಿ ಎಲ್ಲಾ ತರಿಸಿಕೊಂಡು.

ಗೌರವ್ವನ  ತಯಾರಿ ಆದಕೂಡಲೇ  ಅಣ್ಣಾ,‌‌‌‌‌‌‌‌‌‌‌ ಅವ್ವಾ, ಏಕಾ ಕೂಡಿ  ಅವ್ವಾನ  ಶಾಲೂ,  ನಮ್ಮ ಏಕಾನ  ಪೀತಾಂಬರ  ಅಂದ್ರ ಅಸ್ಸಲ ಪೇಶ್ವಾಯಿ ಥಾಟದ  ಪೈಠಣಿ (ಇನ್ನೂ ಕಾದಿಟ್ಟೀವಿ ಅದನ), ಅವ್ವಾನ್ನು  ಭರ್ಜರಿ ಜರೀವು ಸೀರಿ ಎಲ್ಲಾ ತಗೊಂಡು ಪಡದೆ  ಹಾಕಿ, ಬಾಗಿಲು, ಬಾಗಿಲು ಇರುವ ಮಹಲಿನ್ಹಂಗ  ತಯಾರ ಮಾಡ್ತಿದ್ರು. ನಮ್ಮಣ್ಣ , ನಾನು ನನ್ನ ದೊಡ್ಡ ತಮ್ಮ ಕೈಯಾಗ ಕೈಯಾಗ  ತಾ ಬಾ ಮಾಡ್ಲಿಕ್ಕೆ ಇದ್ದs ಇದ್ವಿ. ನಾವು ಸಿನೀಮಾದಾಗ  ನೋಡ್ತೀವಲಾ, ಒಂದೊಂದೇ ಬಾಗಲಾ  ದಾಟಿ ಶ್ರೀಮನ್ನಾರಾಯಣನ  ಆವಾಸ ಸ್ಥಾನ ಇರೋದನ್ನ, ಹಂಗ ಮೂರ್ನಾಲ್ಕು ಚೌಕಟ್ಟ ಥರಾ  ಮಾಡಿ, ಪ್ರತಿ  ಚೌಕಟ್ಟಿಗೆ  ನಮ್ಮ ಏಕಾ ಮಾಡಿದ  ಕಾಜಿನ ಕೊಳಿವಿ  ತೋರಣ, ಮುತ್ತಿನ ಪಡದೆ, ಕಸೂತಿ  ಮಾಡಿದ  ಕಮಾನು ಹೀಂಗ ಹಾಕಿ  ಮಸ್ತ್ ಅಲಂಕಾರ ಮಾಡ್ತಿದ್ರು. ನಮ್ಮಣ್ಣ ಒಂಚೂರ  ದೊಡ್ಡಾಂವ  ಆದಮ್ಯಾಲೆ ಈ ಪಡದೆ ಚಾರ್ಜ್ ತಾನೇ  ತಗೊಂಡ. ನಮ್ಮ ಮ್ಯಾಲೆ ಭಾರೀ ಜಬರ  ಅಂವಂದು ಆಗ. ಸರಿ. ಆ ಮ್ಯಾಲೆ ಮ್ಯಾಲಿನ ಮೆಟ್ಟಲ ಮ್ಯಾಲೆ ಗೌರವ್ವ, ಆಕೀ ಎಡಬಲಕ  ಹಚ್ಚಹಸರಿನ  ಸಸಿಗಳು, ಫರಾಳ ಸಾಮಾನು ಇಡೂದು. ಕೆಳಗಿನ ಮೆಟ್ಟಿಲಗಳ ಮ್ಯಾಲೆ  ಗೊಂಬಿಗಳು, ಇತರ ಅಲಂಕಾರಿಕ ವಸ್ತುಗಳನ್ನು ಹೊಂದಿಸೋದು. ಇದೇ ಆರಾಸ. ಆಗ  ಫೋಟೋದ್ದು  ಇಷ್ಟ ಗದ್ಲ  ಇದ್ದಿದ್ದಿಲ್ಲಾ. ಆದರೂ ನಮ್ಮ ಅಣ್ಣಾ ಒಂದೆರಡ  ಸಲಾ ಫೋಟೋ ಗ್ರಾಫರ್ ನ  ಕರಸಿ  ಫೋಟೋ ತಗಸಿದ್ರು.

ನಮ್ಮ ಏಕಾನ  ಯಾವ  ಬಾಜೂದಲೇ  ನೋಡಿದ್ರೂ, ಹೇಳಿದ್ರೂ ಪರಿಪೂರ್ಣ ಕೌಶಲ್ಯ, ಮಿತಿಯಿಲ್ಲದ  ಹೌಸು, ಹುರುಪು ಇದೇ ಕಾಣ್ತದ. ತಾ ಪಟ್ಟ ಕಷ್ಟ, ದು:ಖ, ಶ್ರಮ   ಎಲ್ಲಾ  ಕೆಳಗಿಟ್ಟು ಅದರ ಮ್ಯಾಲೆ  ತನ್ನ ಜೀವನೋತ್ಸಾಹದ  ಹೊಳಿ ಹರಿಸಿ ಬಿಟ್ಟಿದ್ಲು. ಅದರೊಳಗೆ ಮುಳಗಿದ  ನಾವೂ ಅದೇ ಉತ್ಸಾಹ, ಹುರುಪು, ಕಷ್ಟಗಳನ್ನೆದುರಿಸೋ ರೀತಿಯೊಳಗ ತಯಾರ ಆಗಿ ಬಿಟ್ಟೀವಿ. ಅದಕ ನಾ ಯಾವಾಗಲೂ ಹೇಳ್ತಿರತೀನಿ –

”  ಆಗರ್ಭ  ಶ್ರೀಮಂತಿಕೆಯೊಳಗ  ಮುಳುಗಿ ಏಳದಿದ್ರೂ  ಜೀವನದ ಜೀವಂತಿಕೆಗೆ  ಬೇಕಾಗೂ  ಶ್ರೀಮಂತಿಕಿ  ನಮಗ  ಅಕ್ಷಯವಾಗಿ  ಸಿಕ್ಕದ, ಸಾಠಾ ಆಗೇದ ” ಅಂತ. ಇದು ನನಗ ಅಖಂಡ ಸಮಾಧಾನ  ತಂದದ; ಆ ಸಮಾಧಾನದಾಗ ಆ ತಣ್ಣೆಳಲ  ಹಾದಿಯಲ್ಲಿ ಸಾಗಿ ಬಂದ ನೆನಪಿನ್ಯಾಗ ತೇಲೂಮುಂದ  ತಪ್ಪದ  ಕಿವಿಯೊಳಗೆ ” ಕಾಯಬೇಕೆನ್ನ ಗೋಪಾಲಾ…..”

ಅಂತ ಗುನಗ್ತಿರತಾಳ ನಮ್ಮ ಏಕಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shrivatsa Desai

    ಸುಸಂಸ್ಕೃತಿ , ಶಿಷ್ಟಾಚಾರಗಳ ಪ್ರಿತೀಕವಾಗಿ ಬದುಕಿದ ಜೀವನೋತ್ಸಾಹ ತುಂಬಿ ತುಳಿಕಿದ ವ್ಯಕ್ತಿತ್ವದ. ಇನ್ನೊಂದು ಮುಖವನ್ನು ಈ ಅಂಕಣದಲ್ಲಿ ಕಾಣುತ್ತೇವೆ. ಕೊನೆಯಿಲ್ಲವೇ, ಆಕೆಯ ಕಲಾನೈಪುಣ್ಯತೆಗೆ,? ಅಂತ ಅಚ್ಚರಿಯ ಉದ್ಗಾರ ನನ್ನದೂ !

    ಪ್ರತಿಕ್ರಿಯೆ
    • Sarojini Padasalgi

      ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಬಿಡದೆ ಓದಿ ಪ್ರತಿಕ್ರಿಯಿಸುವ ನಿಮ್ಮ ಆಸ್ಥೆಗೆ ಅನಂತ ನಮನಗಳು ಸರ್.
      ಹೌದು ನಮ್ಮ ಏಕಾ ಇದ್ದದ್ದೇ ಹಾಗೆ; ಸದ್ದಿಲ್ಲದೇ ಅರಳುವ ಹೂವಿನ ಹಾಗೆ ನಾಜೂಕಾಗಿ ಅರಳುವ ನೈಪುಣ್ಯತೆ ಅವಳದು. ನಿಜಕ್ಕೂ ನಾನು ಅಗಾಧತೆಯ ಅನುಭವದ ಸೀಮೆ ದಾಟಿದೀನಿ ಅವಳ ಕುಶಲತೆ ನೋಡಿ.

      ಪ್ರತಿಕ್ರಿಯೆ
      • ಶೀಲಾ ಪಾಟೀಲ

        ಸಾಲು ಹಬ್ಬಗಳ ಸಮಯದ ವೇಳೆಯಲ್ಲಿ ಬಂದ 13 ನೇ ಅಂಕಣ ಸಮಯೋಚಿತವಾಗಿದೆ . ಅಜ್ಜಿಗೆ ತಕ್ಕ ಮೊಮ್ಮಗಳು ನೀವು….ನಿಮ್ಮ ನೆನಪಿನಂಗಳದ ಪಯಣದಲ್ಲಿ ನಿಮ್ಮೊಂದಿಗೆ ಎಲ್ಲ ಹಬ್ಬಗಳ ಸಂಭ್ರಮ ಅನುಭವಿಸಿದೆ. ಆ ದಿನಗಳ ಆಚರಣೆಯನ್ನು ಈಗ ನಡೆಯುತ್ತಿರುವ ಹಾಗೆಯೇ ವಿವರಿಸಿದ ನಿಮ್ಮ ನೆನಪಿನ ಶಕ್ತಿಗೆ ಅಭಿನಂದನೆ…

        ಪ್ರತಿಕ್ರಿಯೆ
        • Sarojini Padasalgi

          ಧನ್ಯವಾದಗಳು ಶೀಲಾ. ನಮ್ಮ ಏಕಾನ ಕುಶಲತೆ, ಆ ಕುಣಿ ಕುಣಿದು ಮಾಡುವ ಉತ್ಸಾಹ – ಉತ್ಸುಕತೆ ನನ್ನ ಕಣ್ಣಲ್ಲಿ, ಮನದಲ್ಲಿ ಅಚ್ಚೊತ್ತಿ ಆ ನೆನಪಿನ ಸುರುಳಿ ಸರಾಗವಾಗಿ ಕಣ್ಮುಂದೆ ಹರೀತದೆ ಶೀಲಾ. ನಾ ಅಲ್ಲೇ ಮುಳುಗಿ ಹೋಗ್ತೀನಿ. ಅದೇ ಕಾಲಕ್ಕೆ ಹಾರಿದಂತೆ.
          ಓದಿ ಬರೆದಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು.

          ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sarojini PadasalgiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: