ಸಂಪು ಕಾಲಂ : ಹೀಗೊಬ್ಬ ಅವಿದ್ಯಾವಂತ ಸ್ಕಾಲರ್!


ಕಚೇರಿಯಲ್ಲಿ ಹುಡುಗಿಯೊಬ್ಬಳು ಮತ್ತೊಬ್ಬಳ ಬಳಿ ಬಂದು ನಿಂತು ನಾಚಿಕೆಯ ಮುದ್ದೆಯಾಗಿ ತನ್ನ ಮುಂಗುರುಳನ್ನು ಕಿವಿಹಿಂದೆ ನೂಕುತ್ತಾಳೆ. ಏನು ಎಂದು ಆಕೆ ಸನ್ನೆ ಮಾಡಿ ಕೇಳಿದಾಗ ತುಂಬಾ ಮುಜುಗರದಿಂದ ಆಚೀಚೆ ನೋಡಿ ಒಂದು ಚೀಟಿ ಕೊಡುತ್ತಾಳೆ. ಅದನ್ನು ತೆಗೆದು ನೋಡಿದರೆ, ಅದರಲ್ಲಿ ಒಂದು ಸ್ಯಾನಿಟರಿ ನ್ಯಾಪ್ಕಿನ್ ಇದೆಯೇ ಎಂದು ಚಿತ್ರಿಸಿ ಕೇಳಿರುತ್ತಾಳೆ! ಇದು ಪ್ರತಿಷ್ಠಿತ ಸ್ಯಾನಿಟರಿ ನ್ಯಾಪ್ಕಿನ್ ಒಂದರ ಜಾಹೀರಾತು. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಮಾಧ್ಯಮದ ಗುಲಾಮರು ನಾವು. ಅದರಲ್ಲೇ ಈ ರೀತಿ ಸಂಕೋಚ, ನಾಚಿಕೆಗಳು ತುಂಬಿ ತುಳುಕಿದರೆ, ಇನ್ನು ಇದರ ಪ್ರಭಾವವೂ ಸೇರಿದಂತೆ ವಯಕ್ತಿಕವಾಗಿ ಒಬ್ಬ ಹೆಣ್ಣು ಈ ವಿಷಯದಲ್ಲಿ ಎಷ್ಟು ಮುಜುಗರ ಅನುಭವಿಸಬಹುದು ಆಲೋಚಿಸಿ.
ಜಗತ್ತೆಲ್ಲಾ ಜಾಲಾಡುವ ಹೆಣ್ಣಿನ ಮಾತುಗಳು ಮುಟ್ಟಿನ ವಿಷಯ ಬಂದಾಗ ಮಾತ್ರ ಮೌನ ಕಣಿವೆಯಾಗಿಬಿಡುತ್ತವೆ. ಅದೇನೋ ಮಾತಾಡಲೇಬಾರದ, ಗುಟ್ಟಿನಲ್ಲೇ ಮುಗಿಸಿ ತಲೆಗೆರೆದುಕೊಂಡು ಬಿಡುವ ವಿಚಾರ ಎಂಬ ಭಾವ ಹೆಚ್ಚು ಕಡಿಮೆ ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳನ್ನೂ ಕಾಡಿರುತ್ತದೆ. ಸಾರ್ವಜನಿಕವಾಗಿ ಎಲ್ಲೇ ಆಗಲಿ, ಈ “ನ್ಯಾಪ್ಕಿನ್” ಎಂಬ ಪದ ಜೋರಾಗಿ ಯಾರೂ ಮಾತನಾಡುವುದಿಲ್ಲ. ಜಗತ್ತಿನ ಶೇಕಡಾ ನೂರರಷ್ಟು ಹೆಣ್ಣು ಮಕ್ಕಳು ಈ “ಮುಟ್ಟು” ಎಂಬ ‘ಗೊಂದಲಮಯ’ ದಿನಗಳನ್ನು ಕಳೆಯಲೇ ಬೇಕು. ಆದರೂ ಇದು ಒಂದು (ಓಪನ್) ಸೀಕ್ರೆಟ್! ನಮ್ಮ ಜಗತ್ತು, ದೇಶವೆಲ್ಲಾ ಹೀಗಿರುವಾಗ ಇನ್ನು ಹಳ್ಳಿಗಾಡಿನ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಗಮನಿಸಿ. ಮೂರು ದಿನದ ಮೌನ ಗೌರಿಯಾದರೆ ಅದನ್ನು ಮನೆಯವರು ಅರ್ಥ ಮಾಡಿಕೊಳ್ಳಬೇಕಷ್ಟೇ, ಆಕೆ ಪುಷ್ಪವತಿಯಾಗಿದ್ದಾಳೆ ಎಂದು. ಇನ್ನು “ಆ ದಿನಗಳ” ಆ ವಿಷಯದ ಮಾತಂತೂ ಶುದ್ಧ ನಿಷಿದ್ಧ. ಇಂತಹ ಪರಿಸ್ಥಿತಿಯಲ್ಲಿ…
ಒಮ್ಮೆ ತಮಿಳು ನಾಡಿನ ಕೊಯಂಬತ್ತೂರ್ ನ ಒಂದು ಕೆಳ-ಮಧ್ಯಮ ವರ್ಗದ ಸಣ್ಣ ಮನೆಯಲ್ಲಿ ಅರುಣಾಚಲಂ ಮುರುಗಾನಂದಂ ಎಂಬ ವ್ಯಕ್ತಿಗೆ ಮದುವೆಯಾಗುತ್ತದೆ. ಈತ ಒಬ್ಬ ಅಲ್ಪವಿದ್ಯಾವಂತ, ತೀರಾ ಸಾಧಾರಣ ವ್ಯಕ್ತಿ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ “ಮೊದಲು ಮದುವೆ ನಂತರ ಪ್ರೇಮ” ಎಂಬ ಸೂತ್ರ ಅರುಣಾಚಲಂಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ಸಾಮರಸ್ಯದ ಬಾಂಧವ್ಯ ಬೆಸೆಯುವ ಸಲುವಾಗಿ ಸದಾ ತನ್ನ ಹೊಸ ಹೆಂಡತಿಯ ಜೊತೆಗೆ ಸಮಯ ಕಳೆಯುತ್ತಿದ್ದ. ಹೀಗಿರುವಾಗ ಒಮ್ಮೆ ಆಕೆಯ ಮುಟ್ಟಿನ ದಿನಗಳಲ್ಲಿ ಒಂದು ಬಟ್ಟೆಯನ್ನು ಈತನಿಂದ ಬಚ್ಚಿಟ್ಟು ಮುಚ್ಚಿಟ್ಟುಕೊಂಡು ತೆಗೆದೊಯ್ಯುತ್ತಿದ್ದುದನ್ನು ಈತ ನೋಡಿಬಿಟ್ಟ. ತಕ್ಷಣ ಏನೆಂದು ಕೇಳಿ ಹೆಂಡತಿಯ ಕೋಪಕ್ಕೆ ತುತ್ತಾದ. ಆದರೂ ಏನೆಂದು ಪೀಡಿಸಿ ಕೇಳಿದಾಗ ಆಕೆ ತನ್ನ ಮುಟ್ಟಿನ ವಿಷಯವನ್ನು ತಿಳಿಸಿ ಅದಕ್ಕಾಗಿಯೆ ಈ ಬಟ್ಟೆ ಎಂದು ಹೇಳುತ್ತಾಳೆ. ಇದು ಸ್ವಚ್ಚ ಮತ್ತು ಆರೋಗ್ಯಕರ ರೂಢಿಯಲ್ಲ ಬಜಾರಿನಲ್ಲಿ ಇದಕ್ಕಾಗಿಯೇ ಸಾಕಷ್ಟು ಉತ್ಪನ್ನಗಳು ಸಿಗುತ್ತವೆ ಅವನ್ನು ಉಪಯೋಗಿಸು ಎಂದು ಬೋಧಿಸುತ್ತಾನೆ. ಆಗ ಆಕೆ ಹೇಳಿದ ಮಾತು ಈ ಅರುಣಾಚಲಂನನ್ನು ಸಂಪೂರ್ಣ ಬದಲಾಯಿಸಿಬಿಡುತ್ತದೆ. “ಅವೆಲ್ಲಾ ಅಂತರರಾಷ್ಟ್ರೀಯ ಉತ್ಪನ್ನಗಳು, ಬಹಳ ದುಬಾರಿ. ಅವನ್ನು ಕೊಳ್ಳಬೇಕೆಂದರೆ ನಮ್ಮ ತಂದೆಯ ದಿನನಿತ್ಯದ ಅಗತ್ಯಗಳಲ್ಲಿ ಕೆಲವಕ್ಕೆ ಕತ್ತರಿ ಹಾಕಿ ಕೊಳ್ಳಬೇಕು. ಅದು ಸಾಧ್ಯವಿಲ್ಲ!” ಎಂದು ಆಕೆ ನಿಟ್ಟುಸಿರಿಡುತ್ತಾಳೆ. ಆಗ ಅರುಣಾಚಲಂ ತನ್ನ ಊರಿನ ಮತ್ತು ಇತರ ಹಳ್ಳಿಗಾಡುಗಳ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಯನ್ನು ಮನಗಾಣುತ್ತಾನೆ.
ದುಡ್ಡಿರುವ ಶ್ರೀಮಂತರೇ ಬದುಕಬಲ್ಲ ಈ ಕಾಲದಲ್ಲಿ, ನಮ್ಮಂತಹ ಬಡವರ್ಗದ ಹೆಣ್ಣು ಮಕ್ಕಳ ಕನಿಷ್ಟ ಅಗತ್ಯಗಳಾದ ಆರೋಗ್ಯವನ್ನು ಕಾಪಾಡಲು ಏನಾದರೂ ಮಾಡಲೇಬೇಕೆಂಬ ಹಠ ಅರುಣಾಚಲಂ ತಲೆ ತುಂಬಿತು! ತಾನೇ ಸ್ವಂತ ಪ್ರಯೋಗಗಳನ್ನು ಮಾಡಿ ದೇಸೀ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತಯಾರಿಸುತ್ತಾನೆ. ಆದರೆ ತೊಡಕು ಉಂಟಾದದ್ದು ಅದನ್ನು ಪರೀಕ್ಷಿಸುವಲ್ಲಿ! ಪ್ರಯೋಗದ ಟೆಸ್ಟಿಂಗ್ ಹೆಂಗಸರಿಂದಲೇ ನಡೆಯಬೇಕು. ಅದರ ಬಗ್ಗೆ ಮಾತನಾಡುವುದೇ ಒಂದು ಪಾಪ ಎಂದಾದಲ್ಲಿ, ಅದರ ಪರೀಕ್ಷೆಗೆ ಯಾರು ಒಪ್ಪುತ್ತಾರೆ. ಕೊನೆಗೆ ತನ್ನ ಹೆಂಡತಿ ಮತ್ತು ತಂಗಿಯರನ್ನು ಕೇಳುವ ಸಾಹಸ ಮಾಡಿಯೇ ಬಿಟ್ಟ. ಅವರು ಬಳಸಿ ಸಾಧ್ಯವಿಲ್ಲ ಎಂದುಬಿಟ್ಟರು. ಮತ್ಯಾರನ್ನೋ ಕೇಳುವ ಪ್ರಮೇಯವೇ ಇಲ್ಲ. ಆಗ ಈ ಭೂಪ ಪಟ್ಟು ಬಿಡದೆ, ಸೊಂಟಕ್ಕೆ ಪ್ರಾಣಿಗಳ ರಕ್ತವನ್ನು ಕಟ್ಟಿಕೊಂಡು ತಾನೇ ಸ್ವತಹ ಪರೀಕ್ಷಿಸಿದ. ಅವನ ಆ ಮೂರು ದಿನದ ಅನುಭವ, ಆತನೇ ಹೇಳುವಂತೆ “ಜಗತ್ತಿನ ಎಲ್ಲ ಹೆಣ್ಣು ಮಕ್ಕಳಿಗೆ ಕೈ ಮುಗಿಯುವಂತೆ” ಆಗಿತ್ತು. ಆದರೆ ವಿಫಲನಾದ!
ಅಲ್ಲಿಗೆ ನಿಲ್ಲಲಿಲ್ಲ ಅವನ ಹಠ. ಈಗ ಬಂದಿತ್ತು ಅವನ ಜೀವನದಲ್ಲಿನ ಆಪತ್ತು. ಈಗಾಗಲೇ ಜನಪ್ರಿಯ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಹೇಗೆ ತಯಾರಿಸಿರುತ್ತಾರೆ ಮತ್ತು ಅದು ಹೇಗೆ ತನ್ನ ಕೆಲಸವನ್ನು ಮಾಡುತ್ತದೆ ಎಂದು ತಿಳಿಯಲು ಅವನಿಗೆ ಉಪಯೋಗಿಸಿದ ಪ್ಯಾಡ್ ಗಳನ್ನು ಪರೀಕ್ಷಿಸಬೇಕಿತ್ತು. ಮೆಡಿಕಲ್ ಕಾಲೇಜುಗಳಿಂದ ಉಪಯೋಗಿಸಿದ ಪ್ಯಾಡ್ ಗಳನ್ನು ತೆಗೆದು ತಂದು ತನ್ನ ಮನೆಯಲ್ಲಿ ಹರಡಿ ಪರೀಕ್ಷಿಸುತ್ತಿದ್ದರೆ, ಅದನ್ನು ಮೊದಲು ಕಂಡ ಆತನ ತಾಯಿ, ತನ್ನ ಮಗ ಯಾವುದೋ ಪ್ರಾಣಿ ಮಾಂಸವನ್ನು ಅಡಿಗೆಗೆ ಸಿದ್ಧ ಮಾಡುತ್ತಿದ್ದಾನೆ ಎಂದು ತಿಳಿಯುತ್ತಾಳೆ. ಅದು ಪ್ರಾಣಿ ಮಾಂಸವಲ್ಲ ಎಂದು ತಿಳಿದ ಮೇಲೆ ಆಕೆಗೆ ಒಂದು ದೊಡ್ಡ ಚಪ್ಪರ ತಲೆಮೇಲೆ ಬಿದ್ದಂತೆ ಭಾಸವಾಗುತ್ತದೆ. ತನ್ನ ಮಗನಿಗೆ ಹುಚ್ಚು ಹಿಡಿದು ಬಿಟ್ಟಿದೆ ಎಂದು ಗೋಳಾಡುತ್ತಾಳೆ. ಈ ವಿಷಯ ತಿಳಿದ ಹೆಂಡತಿ ಆತನಿಗೆ ನಿರೀಕ್ಷೆಯಂತೆ ವಿಚ್ಛೇದನ ನೀಡುತ್ತಾಳೆ. ತನ್ನ ಸುತ್ತ ಮುತ್ತೆಲ್ಲಾ ಹುಚ್ಚನೆಂದು ಗೇಲಿ ಮಾಡಲಾರಂಭಿಸುತ್ತಾರೆ. ಇವ್ಯಾವಕ್ಕೂ ತತ್ತರಿಸದ ಅರುಣಾಚಲಂ ರಜನೀಕಾಂತ್ ಸ್ಟೈಲ್ ನಲ್ಲಿ “ಅರುಣಾಚಲಂ ನಾನ್ದಾನ್ ಡಾ” ಎಂದು ಹುಮ್ಮಸ್ಸಿನಿಂದಲೇ ತನ್ನ ಪ್ರಯೋಗಗಳನ್ನು ಮುಂದುವರೆಸುತ್ತಾನೆ.

ಕೊನೆಗೊಂದು ದಿನ ಪರಿಣಾಮಕಾರೀ ದೇಸೀ ಸ್ಯಾನಿಟರಿ ಪ್ಯಾಡ್ ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ, ಬಡ ಹೆಣ್ಣು ಮಕ್ಕಳಿಗೂ ಸಿಗುವಂತೆ ತಯಾರು ಮಾಡಿಯೇ ಬಿಡುತ್ತಾನೆ! ಒಂದೊಂದು ಪ್ಯಾಡ್ ಕನಿಷ್ಟ ಆರು-ಏಳು ರೂ ಆಗುವ ಸ್ಥಳದಲ್ಲಿ ಐವತ್ತು ಪೈಸೆ ಅಥವಾ ಒಂದು ರೂಪಾಯಿಗೆ ಸಿಗುವಂತೆ ತಯಾರು ಮಾಡುತ್ತಾನೆ. ಕಡಿಮೆ ಬೆಲೆಯಲ್ಲಿ ಉನ್ನತ ಸ್ವಾಸ್ಥ್ಯ ಕಾಪಾಡಿಕೊಳ್ಳುವಂತೆ ಉಪಾಯ ಮಾಡಿ ಗೆಲ್ಲುತ್ತಾನೆ. ಈ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತಯಾರಿಸಿದ್ದಷ್ಟೇ ಅಲ್ಲದೆ ಈತ ಕಂಡುಹಿಡಿದ ಯಂತ್ರವನ್ನು ಯಾವ ಕಾಪಿ ರೈಟ್ಸ್ ಇಲ್ಲದೆ ಸಮಾಜಕ್ಕೆ ಮುಕ್ತವಾಗಿಸಿದ್ದಾನೆ ಎಂಬುದು ಈ ವ್ಯಕ್ತಿಯ ದೊಡ್ಡ ಗುಣ. ಅವನ ಮಾತುಗಳಲ್ಲೇ ಹೇಳಬೇಕಾದರೆ, “ಲಕ್ಷ್ಮಿಯನ್ನು ನಾವು ಎಂದೂ ಅಟ್ಟಿಸಿಕೊಂಡು ಹೋಗಬಾರದು, ಆಗ ತಂತಾನೇ ನಮ್ಮ ಬಳಿ ಬರುತ್ತಾಳೆ. ಜೊತೆಗೆ ದೊಡ್ಡ ದೊಡ್ಡ ಸಂಶೋಧಕರಿಂದ ಆಗದ ಕೆಲಸವನ್ನು ನಾನು ಸಾಧಿಸಿ ತೋರಿಸಿದ್ದೇನೆ. ಇದು ಯಾವ ಅಂತರರಾಷ್ಟ್ರೀಯ ಮಾರುಕಟ್ಟೆ ಗೆಲ್ಲುವ ಅಗತ್ಯವಿಲ್ಲ. ಬದಲಾಗಿ ನಮ್ಮ ಹಳ್ಳಿಗಳ ಹೆಣ್ಣು ಮಕ್ಕಳಿಗೆ ಉಪಯೋಗವಾದರೆ ಸಾಕು” ಎಂದು ಬಹಳ ವಿನಯವಾಗಿ ಹೇಳುತ್ತಾನೆ.
ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ ಅರುಣಾಚಲಂ ಇಷ್ಟಕ್ಕೂ ಹನ್ನೆರಡನೇ ತರಗತಿ ಓದಿದ್ದರೆ ಹೆಚ್ಚು. ಆದರೆ ಈಗ, ಈತ ಐ.ಐ.ಟಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾನೆ. ಇವೆಲ್ಲಾ ಆತನೇ ಹೇಳುವಂತೆ ಆತನ “ಟೀ ಮತ್ತು ಈ ಸಿದ್ಧಾಂತ”ದಿಂದ ಸಾಧ್ಯವಾದದ್ದು. ಟೀ ಮತ್ತು ಈ ಸಿದ್ಧಾಂತ ಎಂದರೆ “ಟ್ರೈಯಲ್ ಮತ್ತು ಎರರ್” ಸಿದ್ಧಾಂತ. ಅರುಣಾಚಲಂ ಹೇಳುತ್ತಾನೆ; “ಯಾವುದೇ ಕೆಲಸದಲ್ಲಿ ಗೆಲ್ಲಲು, ಅಸಾಧಾರಣ ತಾಳ್ಮೆಯಿರಬೇಕು, ಕಲಿಯುವ ಮತ್ತು ಸಾಧಿಸುವ ಮನಸ್ಸಿರಬೇಕು, ಮತ್ತು ಸಾಧನೆಗಾಗಿ ಯಾವ ಕೆಲಸಕ್ಕೂ ಕೈ ಹಾಕಬಾರದು. ಜರೂರತ್ ಇದ್ದಾಗ ಅದನ್ನು ಪೂರೈಸುವ ಹಠವೊಂದಿದ್ದರೆ ಎಲ್ಲಾ ಆವಿಷ್ಕರಣೆಗಳೂ ಸಾಧ್ಯ” ಎಂದು.
ನೋಡಿ ಈ ಅರುಣಾಚಲಂ ಕಥೆಯನ್ನು. ಇಲ್ಲಿ ಕಂಡು ಬರುವುದು ಈತನ ನಿರ್ಭಿಡೆ, ಗೆಲುವಿನ ಹಂಬಲ, ಆವಿಷ್ಕಾರದ ಛಲ, ಸಮಾಜೋಪಕಾರೀ ಆಶಯ. ಇವೆಲ್ಲವೂ ನಮ್ಮನ್ನು ಗೆಲುವಿನ ಹಾದಿಯತ್ತ ಕರೆದೊಯ್ಯುತ್ತದೆ. ಒಂದು ಹಳ್ಳಿಗಾಡಿನ ಮೂಲೆಯ, ಒಬ್ಬ ಅಲ್ಪವಿದ್ಯಾವಂತನಿಗೆ ಎಷ್ಟೆಲ್ಲಾ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸಂಶೋಧನಾ ಸ್ಥಾನಕ್ಕೇರಲು ಸಾಧ್ಯವಾದಾಗ, ಎಲ್ಲರಿಂದಲೂ ಅದು ಸಾಧ್ಯ. ಪ್ರತಿಯೊಬ್ಬ ಮನುಷ್ಯ ತಂತಮ್ಮ ಗುರಿಗಳನ್ನು ನಿರ್ಧರಿಸಿ ಅದರ ಪ್ರಯುಕ್ತ ಕಾಮಗಾರಿ ಪ್ರಾರಂಭಿಸಲು ಅರುಣಾಚಲಂ ಒಬ್ಬ ಒಳ್ಳೆಯ ಉದಾಹರಣೆ ಅಲ್ಲವೇ!
 

‍ಲೇಖಕರು G

February 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. KS Parameshwar

    “ಯಾವುದೇ ಕೆಲಸದಲ್ಲಿ ಗೆಲ್ಲಲು, ಅಸಾಧಾರಣ ತಾಳ್ಮೆಯಿರಬೇಕು, ಕಲಿಯುವ ಮತ್ತು ಸಾಧಿಸುವ ಮನಸ್ಸಿರಬೇಕು, ಮತ್ತು ಸಾಧನೆಗಾಗಿ ಯಾವ ಕೆಲಸಕ್ಕೂ ಕೈ ಹಾಕಬಾರದು. ಜರೂರತ್ ಇದ್ದಾಗ ಅದನ್ನು ಪೂರೈಸುವ ಹಠವೊಂದಿದ್ದರೆ ಎಲ್ಲಾ ಆವಿಷ್ಕರಣೆಗಳೂ ಸಾಧ್ಯ”
    Inspiring Sampuji…

    ಪ್ರತಿಕ್ರಿಯೆ
  2. Vidyashankar Harapanahalli

    Faintly remember reading about him earlier. India need more revolutionary thinker at grass root level like him.

    ಪ್ರತಿಕ್ರಿಯೆ
  3. ಪಂಡಿತಾರಾಧ್ಯ ಮೈಸೂರು

    ಕನ್ನಡದಲ್ಲಿ ಎಷ್ಟು ಒಳ್ಳೆಯ ಲೇಖನ. ತಾನು ಕಂಡುಹೊಡಿಯುವ ವಸ್ತುವಿನ ಬಳಕೆದಾರರ ಬಗ್ಗೆ ಸಂಶೋಧಕನಿಗೆ ಎಂಥ ಕಳಕಳಿ. ಅದಕ್ಕೆ ಬಂದ ಪ್ರತಿಕ್ರಿಯೆಗಳೆಲ್ಲ ಇಂಗಿಷಿನಲ್ಲಿ! ಇಂಥ ವಿಷಯವನ್ನು ತನ್ನ ಭಾಷೆಯಲ್ಲಿ ಮಾತನಾಡಲಾಗದ ಮುಜುಗರ ಮಡಿವಂತಿಕೆ ನಮ್ಮ ವಿದ್ಯಾವಂತರಲ್ಲಿಯೂ ಇರುವುದು ಸಖೆದಾಶ್ ರ್ಯದ ಸಂಗತಿ!

    ಪ್ರತಿಕ್ರಿಯೆ
  4. ಡಾ.ಪ್ರಕಾಶ ಗ.ಖಾಡೆ

    ಅರುಣಾಚಲಂ ಕಥನ ಒಂದು ಅಪ್ಪಟ ಮಾದರಿ..

    ಪ್ರತಿಕ್ರಿಯೆ
  5. Suguna Mahesh

    ಚೆನ್ನಾಗಿ ಬರೆದಿದ್ದೀರಿ ಸಂಪೂರ್ಣ. ಈತನ ಬಗ್ಗೆ ಬಿಬಿಸಿ ಯಲ್ಲೂ ಸಹ ಬಂದಿತ್ತು. ಒಂದೊಳ್ಳೆ ಸಾಧನೆ ಮಾಡಿದ್ದಾರೆ. ಆತನ ಸಾಧನೆಗೆ ನಿಜಕ್ಕೂ ಅಭಿನಂದಿಸಲೇಬೇಕು.

    ಪ್ರತಿಕ್ರಿಯೆ
  6. mahesh kalal

    sadanege addi namma manasthiti annuvadannu managandu kelasa madidalli yassassu kanditha siguthde ennuvdakke e lekhana preraneyagide..

    ಪ್ರತಿಕ್ರಿಯೆ
  7. jogi

    ಒಂದು ಮಾತು ಎಂಥ ಬದಲಾವಣೆಗೆ ಕಾರಣ ಆಗಬಹುದಲ್ಲ. ಅರುಣಾಚಲಂ ಜೀವಿತದ ಉದಾಹರಣೆ ಇಷ್ಟವಾಯಿತು

    ಪ್ರತಿಕ್ರಿಯೆ
  8. Badarinath Palavalli

    ಆದರೇ ಅರುಣಾಚಲಂರ ಸಂಶೋಧನೆಯನ್ನು ಬಹುರಾಷ್ಟ್ರಿೀಯ ಕಂಪನಿಗಳು ಸಹಿಸುವವೇ?
    ತುಂಬಾ inspiring ಲೇಖನ ಇದು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಡಾ.ಪ್ರಕಾಶ ಗ.ಖಾಡೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: