ಸಂಪು ಕಾಲಂ : ಮಕ್ಕಳನ್ನು ಮಕ್ಕಳಾಗಿರಲು ಬಿಡೋಣ…


 
ಇತ್ತೀಚೆಗೆ ದೂರದರ್ಶನದಲ್ಲಿ ಒಂದು ಜಾಹಿರಾತನ್ನು ಕಂಡೆ. ಅದು (ಹೆಚ್ಚು ಕಡಿಮೆ) ಈ ರೀತಿ ಇದೆ: ಹೆರಿಗೆ ಆಸ್ಪತ್ರೆಯಲ್ಲಿ, ಮಗುವಿಗೆ ಆಗಷ್ಟೇ ಜನ್ಮ ನೀಡುತ್ತಿದ್ದ ತಾಯಿಯ ಗರ್ಭದಿಂದ ಮೊದಲು ಮಗುವಿನ ಕೈ ಹೊರಗೆ ಬರುತ್ತದೆ. ನಂತರ ಆ ಮಗು, ಡಾಕ್ಟರಿನ ಜೇಬಿಗೆ ಕೈ ಹಾಕಿ ಮೊಬೈಲ್ ಹಿಡಿದು ಗೂಗಲ್ ಮಾಡಿ, ಅಂಬೆಲಿಕಲ್ ಕಾರ್ಡ್ ಕತ್ತರಿಸುವ ವಿಧಾನವನ್ನು ತಿಳಿದುಕೊಂಡು, ತಾನೇ ಕತ್ತರಿ ಹಿಡಿದು ಕತ್ತರಿಸಿಕೊಳ್ಳುತ್ತದೆ. ನಂತರ ಐಪ್ಯಾಡ್ ಹಿಡಿದು ಓಡಾಡುವುದನ್ನು ಕಲಿತು, ಹೆರಿಗೆ ಕೊಠಡಿಯಿಂದ ನಡೆದುಕೊಂಡು ಹೊರಬರುತ್ತದೆ! ಇದನ್ನು ನೋಡಿ ಪಕ್ಕದಲ್ಲಿ ಕೂತಿದ್ದ ನನ್ನ ಗಂಡ “ಸಿಲ್ಲಿ” ಎಂದು ಚಾನಲ್ ಬದಲಾಯಿಸಿ ಮುಂದುವರೆದಿದ್ದ. ನಾನಲ್ಲೇ ಕುಳಿತುಬಿಟ್ಟೆ. ಅದರಲ್ಲಿ ನನಗಂತೂ ಒಂದು ವಿಕೃತಿ ಕಂಡಿತ್ತು. ಒಂದು ಮಗುವಿನ ಹಸುಳೆತನವನ್ನು, ಮುಗ್ಧತೆಯನ್ನು ದೋಚಿ, ಅದರ ಸಹಜ ಸೌಂದರ್ಯತೆಯನ್ನು ಕಳೆದು ಅದಕ್ಕೊಂದು ಮೊಬೈಲ್, ಐಪ್ಯಾಡ್ ಕೈಗಿತ್ತು ಸಂಭ್ರಮಿಸುವುದು ಅದ್ಯಾವ ಮುಂದುವರಿಕೆ, ಬೆಳವಣಿಗೆ ಎನಿಸಿತ್ತು.
ಮುಂದುವರೆಯುವ ಮುನ್ನ ಮತ್ತೊಂದು ಉದಾಹರಣೆಯನ್ನು ಕೊಡಬಯಸುತ್ತೇನೆ. ಒಂದಷ್ಟು ವರ್ಷಗಳ ಕೆಳಗೆ, ಶಾಲೆ ಕಲಿಯುತ್ತಿದ್ದ ಪುಟ್ಟ ಹುಡುಗನೊಬ್ಬ, ತನ್ನ ಕುಟುಂಬದಲ್ಲಿ ಮಗುವೊಂದು ಜನಿಸಿ (ಚಿಕ್ಕಪ್ಪನ ಮಗು) ಆಸ್ಪತ್ರೆಯಲ್ಲಿ ಅದು ಹೆಣ್ಣು ಮಗು ಎಂದು ಹೇಳುವುದನ್ನು ಕೇಳಿ ತನ್ನ ತಾಯಿಯ (ಆಕೆ ನನ್ನ ಸಹೋದ್ಯೋಗಿಯಾಗಿದ್ದಳು) ಬಳಿ ಬಂದು; “ಅಮ್ಮಾ, ಮಗು ದೊಡ್ಡದಾಗಿ ಚಡ್ಡಿ ಹಾಕಿದರೆ ಹುಡುಗ ಮತ್ತು ಫ್ರಾಕ್ ಹಾಕಿದರೆ ಹುಡುಗಿ ಅಂತ ಅಲ್ಲವಾ. ಈಗಲೇ ಹೇಗೆ ಗೊತ್ತಾಗುತ್ತದೆ ಅದು ಹುಡುಗ ಅಥವಾ ಹುಡುಗಿ ಅಂತ” ಎಂದು ಕೇಳಿದ್ದನಂತೆ. ಇದು ಒಂದು ಮಗುವಿನ ಹಾಲಿನ ಮನಸು ತಿಳಿಸುತ್ತದೆ. ಇದು ದಡ್ಡತನವಲ್ಲ. ಬೆಳೆಯುವ ಮಗುವಿನ ಮುಗ್ಧ ಕುತೂಹಲ. ಈ ರೀತಿ ಹಂತ ಹಂತವಾಗಿ ಒಂದು ಮಗುವಿನ ಬೆಳವಣಿಗೆಯ ಜೊತೆಗೆ ತನ್ನ ಮೆದುಳು ಸಹ ವಿಕಾಸವಾಗುತ್ತಾ ಹೋಗಿ, ಅನೇಕ ರೀತಿಯ ಜ್ಞಾನಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ಪ್ರಕೃತಿ ನಿಯಮ. ಆದರೆ ಇತ್ತೀಚೆಗೆ ನಡೆಯುತ್ತಿರುವುದು ಆ ಮೇಲೆ ಹೇಳಿದ ಜಾಹಿರಾತಿನಂತೆ, ಫಾಸ್ಟ್ ಫಾರ್ವರ್ಡ್ ಬೆಳವಣಿಗೆ. ಆ ಜಾಹಿರಾತು ಅತಿರೇಕವಾಗಿ ಕಂಡರೂ ಅದರ ಮೂಲರೂಪ ಈಗಾಗಲೇ ನಮ್ಮ ನಡುವೆ ಜಾರಿಯಿದೆ. ಶಾಲಾ ಮಕ್ಕಳಿಗೆ ಆಂಡ್ರಾಯ್ಡ್ ಮೊಬೈಲ್ ಕೊಡಿಸುವುದು ನಾ ಕಂಡಂತ ಒಂದು ಜ್ವಲಂತ ಉದಾಹರಣೆ.
ಸಾಫ್ಟ್ವೇರ್ ಗಳ ವರ್ಶನ್ ಗಳು ಬದಲಾದಷ್ಟೇ ವೇಗವಾಗಿ ಬಹಳ ಬೇಗ ನಮ್ಮ ಮಗು ಬೆಳೆದುಬಿಡಬೇಕು. ಇಂದಿನ ಸಮಾಜದ ನಾಗಾಲೋಟದಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಗಳಿಸಿಬಿಡಬೇಕು ಎಂಬುದು ನಮ್ಮ ಇಂದಿನ ಪೋಷಕರ ಮನಸ್ಥಿತಿಯಾಗಿಬಿಟ್ಟಿದೆ. ಇದರಿಂದ ಮಕ್ಕಳ ಮನೋವಿಕಾಸದಲ್ಲಿ ಎಷ್ಟು ತೊಡಕುಂಟಾಗುತ್ತಿದೆ. ಎಷ್ಟೆಲ್ಲ ದುಷ್ಪರಿಣಾಮಗಳು ಎದುರಾಗುತ್ತಿವೆ ಎಂಬುದು ಅವರು ಕಾಣದ, ಕೆಲ ಸಂದರ್ಭಗಳಲ್ಲಿ ಅವರ ಕೈ ಮೀರಿದ ವಿಷಯವಾಗಿ ಹೋಗಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಲ್ಲಿ ಇದು ಅತಿರೇಕವನ್ನು ಮುಟ್ಟುವುದರಲ್ಲಿ ಆಶ್ಚರ್ಯವೇನಿಲ್ಲ.
ಮೊನ್ನೆ ಮನೆಗೆ ನನ್ನ ಶಾಲಾ ಮಾಸ್ತರರು ಒಬ್ಬರು ಬಂದಿದ್ದರು. ಬಹಳ ದಿನಗಳ ನಂತರ ಅವರನ್ನು ಕಂಡ ನಾನು ಅತ್ಯಂತ ಉತ್ಸಾಹದಿಂದ ನಮ್ಮ ಶಾಲಾ ದಿನಗಳ ಬಗ್ಗೆ ಮಾತನಾಡುತ್ತಿದ್ದೆ. ಮಾತಿನ ನಡುವೆ ಅವರು ಇದೇ ವರ್ಷಾಂತ್ಯದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದುತ್ತಿದ್ದಾರೆ ಎಂಬುದು ತಿಳಿದು ಬಂತು. ಸಂತೋಷದಿಂದ ಅಭಿನಂದಿಸಿದೆ. ಅವರು ಖಿನ್ನರಾಗಿ ಪ್ರತಿಕ್ರಿಯಿಸಿದ್ದು ಕಂಡು ನನ್ನ ಕುತೂಹಲ ಕೆರಳಿತು. ಅವರ ಮುಂದಿನ ಮಾತುಗಳಿಗೆ ಕಿವಿಯಾದೆ. “ಮೊದಲಿದ್ದಷ್ಟು ಚೆನ್ನಾಗಿಲ್ಲಮ್ಮ ಸ್ಕೂಲು” ಎಂದು ಮಾತು ಪ್ರಾರಂಭಿಸಿದರು. ನಮ್ಮ ಮಾತು ಮುಗಿಯುವಷ್ಟರಲ್ಲಿ ನಾನು ದಂಗಾಗಿದ್ದೆ. ಶಾಲೆಯ ಬಗೆಗಿನ ನನ್ನ ಅಪ್ಯಾಯ ಭಾವದ ಕೊಂಡಿ ಎಲ್ಲೋ ಸಡಿಲವಾದಂತೆ ಭಾಸವಾಯಿತು! ದಿಗಿಲೂ ಆಯಿತು.
“ಇಂದಿನ ಶಾಲಾ “ಸಂಸ್ಕೃತಿ”ಯೇ ಬದಲಾಗಿ ಹೋಗಿದೆ. ಒಂಭತ್ತನೇ ತರಗತಿಯಲ್ಲಿನ ಐದು ಜನ ಹುಡುಗರು ತರಗತಿಗೆ ಡ್ರಿಂಕ್ಸ್ ಮಾಡಿ ಬಂದಿದ್ದರು.” ಎಂದು ಅವರು ಹೇಳಿದ ಮಾತು ಕೇಳಿ ನನಗೆ ಒಂದು ಕ್ಷಣ ಏನೋ ತೋಚದಂತಾಯಿತು. ಮತ್ತೊಬ್ಬ ಹುಡುಗ “ಸರ್ ನಾನು ಆ ಹುಡುಗಿಗೆ ಲವ್ ಲೆಟರ್ ಬರೆದಿದ್ದೆ. ಅವಳೇನೂ ಉತ್ತರಿಸಲೇ ಇಲ್ಲ” ಎನ್ನುತ್ತಾನಂತೆ. ಎಂಟನೇ ತರಗತಿಯ ಹುಡುಗನ ಬ್ಯಾಗಿನಲ್ಲಿ ಸಿಗರೇಟಿನ ಪ್ಯಾಕೇಟು. ಮತ್ತೊಬ್ಬ ಹುಡುಗ, ಏನು ಮಾಡಿದರೂ ಓದದೆ, ತಂದೆತಾಯಿಯನ್ನು ಕರೆತರಲು ಹೇಳಿದರೆ, ಮತ್ಯಾರನ್ನೋ ಕರೆತಂದು ಸುಳ್ಳುಹೇಳುವುದು. ಅಧ್ಯಾಪಕರಿಗೇ ಎದುರುತ್ತರ ಕೊಡುವುದು. ಇನ್ನೊಬ್ಬ ಹುಡುಗ ತರಗತಿಯಲ್ಲಿ ಹುಚ್ಚನಂತೆ ವ್ಯವಹರಿಸಿ ಕಾರಣ ತಿಳಿಯಲು ಪೋಷಕರನ್ನು ಬರಹೇಳಿದರೆ ತಿಳಿದದ್ದು ಅವರಿಬ್ಬರೂ ಒಟ್ಟಿಗಿಲ್ಲ ಎಂಬುದು, ಇತ್ಯಾದಿ ಅನೇಕ, ನಾವು ಶಾಲೆಯಲ್ಲಿ ಓದುವಾಗ ಕಂಡರಿಯದ ಮಾತುಗಳು. ಆಗಲೂ ಅನೇಕ ಕೆಟ್ಟ ನಡವಳಿಕೆಗಳು ಶಾಲೆಯಲ್ಲಿ, ಮಕ್ಕಳಲ್ಲಿ ಕಂಡು ಬರುತ್ತಿತ್ತು. ಹೊಡೆದಾಟ, ಬೈಗುಳ, ಗುಂಪುಗಾರಿಕೆಯಂತಹ ಸಾಕಷ್ಟು ಪುಂಡತನ. ಆದರೆ ಎಂದಿಗೂ ’ಮಕ್ಕಳು’ ಎಂಬ ಚೌಕಟ್ಟಿನ ಹೊರತಾಗಿ ನಮ್ಮ ಯಾವುದೇ ದುರ್ನಡತೆಗಳು ಕಂಡುಬರುತ್ತಿರಲಿಲ್ಲ. ನಮ್ಮೆಲ್ಲರಿಗಿಂತ ಹಿರಿಯನಾದ ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಒಂದೇ ಒಂದು ಬಾರಿ, ಮೈದಾನದಲ್ಲಿ ಬೀಡಿ ಸೇದಿದ್ದು ಕಂಡು ನಾವೆಲ್ಲಾ ಭೀತರಾಗಿದ್ದೆವು. ಮತ್ತೆಂದಿಗೂ ಆ ಹುಡುಗನ ತಂಟೆಗೆ ಶಾಲೆಯ ಮತ್ಯಾವ ವಿದ್ಯಾರ್ಥಿಯೂ ಹೋಗಿರಲಿಲ್ಲ. ಅಂತಹ ಶಾಲೆಯಲ್ಲಿ ಕೆಲವೇ ವರ್ಷಗಳಲ್ಲಿ, ಇಷ್ಟೊಂದು ವ್ಯತ್ಯಾಸ!

ನಾನು ನಿಟ್ಟುಸಿರು ಬಿಟ್ಟು ಕೇಳುತ್ತಲೇ ಇದ್ದೆ. ಅವರು ಮಾತು ಮುಂದುವರೆಸಿದರು: “ಇನ್ನೊಂದು ತಕರಾರು ಗೊತ್ತಾ? ಈಗ ಕಾನೂನಿದೆ! ಅದರ ಪ್ರಕಾರ ನಾವು ಯಾವ ವಿದ್ಯಾರ್ಥಿಯನ್ನೂ ಶಿಕ್ಷಿಸಬಾರದು. ಹುಡುಗ ಎಷ್ಟೇ ದುಷ್ಟತನ ತೋರಿದರೂ, ಚಿಕ್ಕಪುಟ್ಟ ಗದರಿಕೆಯ ಹೊರತು ಮತ್ತೇನೂ ಶಿಕ್ಷೆ ವಿಧಿಸುವಹಾಗಿಲ್ಲ. ಹಾಗೇನಾದರೂ ಮಾಡಿದರೆ, ಶಿಕ್ಷಕರಿಗೆ ಕ್ರಮ. ಅಷ್ಟೇ ಅಲ್ಲದೆ, ಶಿಕ್ಷಕನೊಬ್ಬ ಹತ್ತು ವರ್ಷಗಳ ಹಿಂದೆ ವಿದ್ಯಾರ್ಥಿಗೆ ಯಾವುದೇ ರೀತಿ ನೋವುಂಟು ಮಾಡಿದ್ದರೂ, ಆ ಶಿಕ್ಷಕನಿಗೆ ತಕ್ಷಣ ಕ್ರಮ ಕೈಗೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಲು ಸಾಧ್ಯ ಹೇಳು. ಪೇರೆಂಟ್ಸ್ ನ ಕರೆದು ಹೇಳಿದರೆ, ಅವನು ನಮ್ಮ ಕೈ ಮೀರಿ ಹೋಗಿದಾನೆ. ನೀವೇ ಏನಾದರೂ ಮಾಡಬೇಕು ಎಂದು ಅಂಗಲಾಚುತ್ತಾರೆ”.
ಅವರ ಮಾತುಗಳನ್ನು ಕೇಳಿದ ನಾನು ಅವರಿಗೆ ಉತ್ತರಿಸಲಾಗದೆ ಸುಮ್ಮನಾದೆ. ಹೂವಿನಂತಹ ಮನಸಿನ ಮಕ್ಕಳಿಗೆ ತಿಳಿದು ತಿಳಿದೂ ನಾವೇ ಬಹು ಬೇಗ ಬೆಳೆಯುವಂತೆ ಮಾಡಿ ನಂತರ ಅವನು ನಮ್ಮ ಕೈ ಮೀರಿ ಹೋದ ಎಂದು ಮರುಗುವುದು ಮೂರ್ಖತನವಲ್ಲದೆ ಮತ್ತೇನು ಹೇಳಿ. ನಮ್ಮ ಸಂಬಂಧಿಕರ ಹುಡುಗನೊಬ್ಬ, ಕಾಲೇಜು ಸೇರುವ ಸಮಯ. ಆದರೆ ಈಗಲೂ ಅವನಿಗೆ ತಾನು ಏನು ಓದಬೇಕು ಎಂಬ ನಿಖರತೆ ಇಲ್ಲ. ಯಾವ ಗುರಿ, ಆಕಾಂಕ್ಷೆಗಳೂ ಕಾಣುತ್ತಿಲ್ಲ. ಅವರ ತಂದೆ ಫೋನಾಯಿಸಿ ಹೇಳುತ್ತಾರೆ, “ಅವನಿಗೇನು ಬೇಕೋ ಅದನ್ನು ಓದಿಸುತ್ತೇನೆ. ಅದೆಷ್ಟು ಖರ್ಚಾದರೂ ಪರವಾಗಿಲ್ಲ. ಆದರೆ ಅವನಿಗೆ ಅದೇನು ಓದಬೇಕು ಅಂತ್ಲೇ ಗೊತ್ತಿಲ್ಲ. ಅವನಿಗೆ ಬೈದೆ. ಬೇಗ ಹೇಳು ಅಂತ” ಎಂದು. ತನ್ನ ಗುರಿಯಾವುದು ಎಂದು ನಿರ್ಧರಿಸಲಾಗದ ಆ ಹುಡುಗನ ಅಸಹಾಯಕತೆ, ಚರ್ಚೆ, ಆಪ್ತ ಸಮಾಲೋಚನೆಯ ತುರ್ತನ್ನು ಅರಿಯಲಾಗದ ಆ ತಂದೆ, ಎಷ್ಟು ದುಡ್ಡಾದರೂ ಸರಿ, ಬೇಗ ಹೇಳು ಎಂದು ಕತ್ತು ಹುಸುಕುವ ಕೆಲಸ ಮಾಡಿದರೆ ಆ ಹುಡುಗ ನಲುಗಿಹೋಗದೆ ಮತ್ತೇನಾಗಲು ಸಾಧ್ಯ?
ಈ ರೀತಿ ನಮ್ಮ ಸುತ್ತ ಕಂಡು ಬರುತ್ತಿರುವುದು ಅನೇಕ ಉದಾಹರಣೆಗಳು. ಪ್ರತಿಯೊಂದರಲ್ಲೂ ತಂದೆತಾಯಂದಿರಿಗೆ ತಮ್ಮ ಮಕ್ಕಳು ಹೇಗಾದರೂ ಮಾಡಿ “ದೊಡ್ಡ” ಓದು, “ದೊಡ್ಡ” ಹುದ್ದೆಗೆ ಸೇರಿಬಿಡಬೇಕು ಎಂಬ ಆತುರ. ಅದಕ್ಕೆ ಪ್ರತಿಯಾಗಿ ತಾವು “ಎಷ್ಟು ಬೇಕಾದರೂ ಖರ್ಚು” ಮಾಡಬಲ್ಲವರು. ಇದರ ಪರಿಣಾಮವೇನಾಗಬಹುದು ಎಂಬ ಆಲೋಚನೆಯೂ ಇಲ್ಲದ ಅವರು ಕೊನೆಗೆ ಕೈ ಮೀರಿಹೋಯಿತು ಎಂದು ದುಃಖಿಸುವುದು. ಇವೆಲ್ಲ ಮತ್ತದೇ “ಹಣ”, “ಜಾಗತೀಕರಣ”, “ಖಾಸಗೀಕರಣ” ಇನ್ನೆಲ್ಲ ಕರಣಗಳ ರಣ. ಈ ಅನಾರೋಗ್ಯ ಹಳತಾಗಿ ಸಮಾಜದಲ್ಲಿ ಜಡ್ಡುಗಟ್ಟುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು. ಮಕ್ಕಳನ್ನು ಮಕ್ಕಳಾಗಿರಲು ಬಿಡಬೇಕು ಅದು ನಾವು ಅವರಿಗೆ ಮಾಡುವ ಮೊದಲ ಸಹಾಯ ಮತ್ತು ಅದೇ ನಾವು ಅವರಲ್ಲಿ ತುಂಬುವ ಜೀವಚೈತನ್ಯ. ಇನ್ನುಳಿದದ್ದು ತಂತಾನೆ ಕಾಲ ಪ್ರವಾಹದೊಡನೆ ಮುಂದುವರೆದುಕೊಂಡು ಹೋಗುತ್ತದೆ.
ನಮ್ಮ ಆ ಮೇಷ್ಟ್ರು, ನಮ್ಮ ಶಾಲೆಯ ಇವೆಲ್ಲ ಗೋಳಿನ ಕಥೆಗಳ ಜೊತೆಗೆ ಗುರುರಾಜ ಕರ್ಜಗಿಯವರು ಹೇಳಿದ ಒಂದು ಪುಟ ಕಥೆಯನ್ನು ಸಹ ಹೇಳಿದರು. ಮಗುವಿನ ಮನಸಿನ ಮುಗ್ಧ ಜ್ಞಾನ, ತಾದಾತ್ಮ್ಯಗಳನ್ನು ಬಿಂಬಿಸುವ ಸುಂದರವಾದ ಆ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ:
ಒಮ್ಮೆ ಪುಟ್ಟ ಹುಡುಗಿಯೊಬ್ಬಳು ಶಾಲೆಯಿಂದ ಮನೆಗೆ ಬಂದು ತನಗೆ ತಲೆ ಬೋಳಿಸುವಂತೆ ಹಟ ಮಾಡಿದಳಂತೆ. ಮನೆಮಂದಿಯೆಲ್ಲ, ಅದು ಸರಿಯಲ್ಲ, ಹಾಗೆ ಮಾಡಬಾರದು ಎಂದು ಎಷ್ಟು ಹೇಳಿದರೂ ಕೇಳದ ಆ ಹುಡುಗಿ ಆಹಾರ, ಮಾತು ಬಿಟ್ಟಳಂತೆ. ಕೊನೆಗೆ ದಿಕ್ಕು ತೋಚದ ಮನೆಯವರು, ಅವಳನ್ನು ಕರೆದೊಯ್ದು ಬೈಯ್ಯುತ್ತಲೇ ತಲೆ ಬೋಳಿಸಿದರಂತೆ. ನಂತರ ತಿಳಿದು ಬಂದ ವಿಷಯವೇನೆಂದರೆ, ಶಾಲೆಯಲ್ಲಿ ಅವಳ ಸ್ನೇಹಿತೆಯೊಬ್ಬಳಿಗೆ ಕ್ಯಾನ್ಸರ್ ಆಗಿ ತಲೆ ಕೂದಲು ಉದುರಿಹೋಗಿತ್ತಂತೆ. ತನ್ನ ಸ್ನೇಹಿತೆಗೆ ಇಲ್ಲದ ಕೂದಲು ತನಗೂ ಬೇಡ. ತಾನು ತಲೆ ಬೋಳಿಸಿಕೊಂಡರೆ ಅವಳಿಗೆ ಎಲ್ಲರಿಂದರೂ ಆಗುತ್ತಿದ್ದ ಅವಮಾನ ಕಡಿಮೆಯಾಗುತ್ತದೆ ಎಂದು ಆ ಹುಡುಗಿ ತನ್ನ ತಲೆಯನ್ನೂ ಬೋಳಾಗಿಸಿದ್ದಳಂತೆ!
 

‍ಲೇಖಕರು G

March 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Kiran

    Let us not start with blame game! The society is getting metamorphasized with such a rapid velocity that common people like us cannot even get acclimatized! To add to the woes, we bring in western laws and lifestyles without even bothering to upgrade ourselves to their standards. This mismatch is inevitable and would manifest at every level of our life. Depending upon our exposure and sensitivity level, we choose the subsets that maximally affect our psyche. Is there any remedy or control measure? The problem occurs here. We are not in control of these changes. Neither parents nor the system is equipped enough to tackle the flood. We are not prepared to face the inevitable. Other than feeling sorry, there is not much constructive that can be done at present.

    ಪ್ರತಿಕ್ರಿಯೆ
  2. M.A.Sriranga

    ಸಂಪು ಅವರು ನೋಡಿದ ಆ ಜಾಹೀರಾತನ್ನು ನಾನೂ ನೋಡಿದ್ದೇನೆ. ಆ ಮಗುವಿನ ‘ಆಟಗಳನ್ನು’ ಸುಮ್ಮನೆ ಖುಷಿಯಾಗಿ ನೋಡಿ ಬಿಟ್ಟುಬಿಡಬೇಕಷ್ಟೇ . ಆದರೆ ಟಿ ವಿ ನೋಡುವಾಗ ನಮ್ಮ ಚಿಕ್ಕ ಮಕ್ಕಳು ಪಕ್ಕದಲ್ಲಿದ್ದರೆ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಅದಂತೂ ನಿಜ. ಇನ್ನು ನಾವುಗಳು ಮೂರು ನಾಲ್ಕು ದಶಕಗಳ ಹಿಂದೆ ಓದುತ್ತಿದ್ದ ಶಾಲೆಗಳ ವಾತಾವರಣಕ್ಕೂ ಇಂದಿನದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದು ನಾವುಗಳು ಅನುಭವಿಸಲೇಬೇಕಾದ ಅನಿವಾರ್ಯತೆ. ಬೇರೆ ದಾರಿ ಇಲ್ಲ.

    ಪ್ರತಿಕ್ರಿಯೆ
  3. Anil

    ‘ಸಾಫ್ಟ್ವೇರ್ ಗಳ ವರ್ಶನ್ ಗಳು ಬದಲಾದಷ್ಟೇ ವೇಗವಾಗಿ ಬಹಳ ಬೇಗ ನಮ್ಮ ಮಗು ಬೆಳೆದುಬಿಡಬೇಕು.’ well said. Nice article.
    -Anil

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ AnilCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: