ಸಂಪು ಕಾಲಂ : ದಾರಿ ಯಾವುದಯ್ಯಾ ವೈಕುಂಠಕ್ಕೆ


ಮೋಡಕವಿದ ಆಹ್ಲಾದಕರ ವಾತಾವರಣವನ್ನು ಸುಖಿಸುತ್ತಲೇ ಆಫೀಸ್ ನಿಂದ ಹೊರ ಬಂದ ತಕ್ಷಣ ನೆನಪಾದದ್ದು ಹಳ್ಳ ಗುಂಡಿ ಏನೂ ಕಾಣದೆ ಧಾರಾಕಾರ ನಮ್ಮನ್ನಾವರಿಸುವ ‘ಕಪ್ಪು’ ಸ್ವಿಮಿಂಗ್ ಪೂಲುಗಳು ಮತ್ತು ಅವುಗಳ ಜೊತೆ ಸೆಣಸಾಡಿ ಗೆಲ್ಲುವ ಆಶಯ ಹೊತ್ತು ಮುನ್ನುಗ್ಗುವ ದ್ವಿಚಕ್ರ ವಾಹನಗಳು! ತಮ್ಮ ಅಂಗಡಿಗಳ, ಮನೆಗಳ ಅಡಿಗೆ ನೀರು ನುಗ್ಗದೆ ಇರಲು ಹರಸಾಹಸ ಮಾಡುತ್ತಿರುವ ಜನರು, ಒತ್ತಾದ ಕೂದಲೆಲ್ಲ ಗಂಟು ಗಂಟಾದಂತಾಗಿ, ಸೂರಿಲ್ಲದೆ ಒದ್ದೆ ಮುದ್ದೆಯಾಗಿ ದಿಕ್ಕು ಕಾಣದೆ ಒಂದೆಡೆ ಮುದುಡಿ ಕೂರುವ ಬೀದಿ ನಾಯಿ, ಬೆಕ್ಕುಗಳು. ಪ್ಲಾಸ್ಟಿಕ್ ಕವರ್ ಗಳಿಂದ ತಮ್ಮ ತಲೆಯನ್ನಾದರೂ ನೆನೆಯದೆ ಬೆಚ್ಚಗೆ ಮಾಡಿಕೊಂಡ ಭರವಸೆಯಲ್ಲಿ, ವೇಗವಾಗಿ ಹೆಜ್ಜೆ ಇಡುವ ಮಂದಿ. ಛತ್ರಿ ಹಿಡಿದು ಮನೆ ಸೇರಿದರೆ ಸಾಕು ಜೀವವೇ ಎಂದು ಪರದಾಡುವ ಜನರ ನಡು ನಡುವೆ “ಐದು ಕಿಲೋಮೀಟರ್ ಆದರೇನು, ಈ ಟ್ರಾಫಿಕ್ ನಲ್ಲಿ ಆಗಕ್ಕಿಲ್ಲ, ಇನ್ನೂರು ರೂಪಾಯಿ ಕೊಟ್ಟರೆ ಬರ್ತೀನಿ” ಎಂದು ಬೆದರಿಕೆ ಹಾಕುವ ಆಟೋ ಚಾಲಕರು. ಮಳೆ ಬಸ್ಸಿನ ಹೊರಗೋ, ಒಳಗೊ ಎಂದು ತಿಳಿಯದಷ್ಟು ಒತ್ತಾಗಿ ಜೇನುಗೂಡಿನಂತೆ ತುಂಬಿ ಜಿನುಗುವ ಬಿಎಂಟಿಸಿ ಬಸ್ಸುಗಳು. ಈ ರೀತಿ, ಒಂದಷ್ಟು ನಿಮಿಷಗಳ ಕಾಲ ಕುಟ್ಟಿ ಬಜಾಯಿಸಿ ಹೋಗುವ ಝಡಿ ಮಳೆಯಿಂದ ಜನಜೀವನವೆಲ್ಲಾ ಓತಪ್ರೋತ. ಕ್ಷಣಾರ್ಧಗಳಲ್ಲಿ ನಮ್ಮ ಜೀವ ಕೈಗೆ, ನಮ್ಮ ಜೇಬು ಆಸ್ಪತ್ರೆಗಳೆಡೆಗೆ!
ಒಂದು ಸಣ್ಣ ಮಳೆಯ ಝಲಕ್ಕಿಗೆ ತತ್ತರಿಸಿ ಹೋಗುವ ನಾವು “ಲ್ಯಾಂಡ್ ಆಫ್ ಗಾಡ್ಸ್” ಎಂದು ಕರೆಸಿಕೊಳ್ಳುವ ಉತ್ತರಖಂಡದಲ್ಲಿ ಇತ್ತೀಚಿಗೆ ಜರುಗಿದ ಅನಾಹುತವನ್ನು ನೆನೆದರೆ ಉಸಿರಣಗಿಹೋಗುವುದು ಖಂಡಿತ. ಸಾವಿರಾರು ಮಂದಿ ಪ್ರವಾಹದಲ್ಲಿ ಹೇಳಹೆಸರಿಲ್ಲದೆ ಕೊಚ್ಚಿ ಹೋಗಿದ್ದಾರೆ, ಬಿಗಿಯಾದ ಅಲೆಗೆ, ಮರಳ ಗೂಡು ತೊಯ್ದು ಹೋದ ಹಾಗೆ, ಪ್ರವಾಹದ ವಶಕ್ಕೆ ಕರಗಿ ನೀರಾದ ಅನೇಕಾನೇಕ ಮನೆ ಮಠಗಳು, ಅವುಗಳಡಿಯಲ್ಲಿ ಸಮಾಧಿಯಾಗಿ ಹೋದ ನೂರಾರು ಜೀವಗಳು ಇಂದು ಉತ್ತರಾಖಂಡವನ್ನು ಒಂದು ಹತ್ಯಾಕಾಂಡವಾಗಿ ಮಾರ್ಪಡಿಸಿದೆ. ಎಷ್ಟೆಲ್ಲಾ ರಕ್ಷಕರು, ಎಷ್ಟೆಲ್ಲಾ ರಕ್ಷಣೋಪಾಯಗಳು ಕಾರ್ಯ ನಡೆಸುತ್ತಿದ್ದರೂ ಕಾಣೆಯಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೇಗೋ ಮಾಡಿ ಬದುಕುಳಿದು ಬಂದ ಸಂತ್ರಸ್ತರ ಬದುಕು ಇನ್ನು ದುರ್ಬರ. ಜೀವ ಉಳಿದಿದೆ ಎನ್ನುವ ಖಾತ್ರಿ ಬಿಟ್ಟರೆ ಅವರಲ್ಲಿ ಮತ್ತೇನೂ ಉಳಿದಿಲ್ಲ. ಬಹುಶಃ ಬದುಕುವ ಆಸೆಯೂ! ತಮ್ಮದು, ತಮ್ಮವರು ಎಲ್ಲಾ ನೀರಪಾಲಾಗಿ ಇವರು ದಿಕ್ಕಾಪಾಲಾಗಿದ್ದಾರೆ. ಪ್ರಕೃತಿ ವಿಕೋಪದ ಕರಾಳತೆ ಎಂದರೆ ಇದೇ ಇರಬಹುದೇ!
ಒಂದು ಸಣ್ಣ ವಸ್ತುವನ್ನು ಮನೆಗೆ ಕೊಂಡು ತರಬೇಕಾದರೆ, ಏನೋ ಸಂತೋಷ, ಉಲ್ಲಾಸ. ಮನೆಬೆಳಗುವ ಆ ಹೊಸವಸ್ತು ಯಾವುದಾದರೂ ಟಿವಿ, ಫ್ರಿಜ್ಜು, ಕೊನೆಗೊಂದು ಲೇಖನಿ, ಏನೇ ಆಗಿರಲಿ. ಥಟ್ಟನೆ ಅದು ನಮ್ಮೊಳಗೊಂದು ಬಾಂಧವ್ಯ ಬೆಸೆದುಕೊಳ್ಳುತ್ತದೆ. ಅದನ್ನು ಮತ್ತೆ ಮತ್ತೆ ನೋಡಿ, ಮುಟ್ಟಿ, ನಮ್ಮದೆಂದು ಬೀಗುತ್ತೇವೆ. ಇಂತಹ ಸಂದರ್ಭದಲ್ಲಿ, ಸಂಪೂರ್ಣ ಸ್ವತ್ತು ನೀರಪಾಲಾಗಿ ಹೋಗಿ, ತಾವು ಮೆಚ್ಚಿ ನಂಬಿದ “ತಮ್ಮವರು” ಎಂಬ ಜನರೂ ಕಾಣದಾದರೆ, ಮತ್ತವರ ಬದುಕು ಬಂಡೆಯಷ್ಟೇ. ಎಲ್ಲ ಮರೆತು ಮತ್ತೆ ಜೀವನಕ್ಕೆ ಮರುಕಳಿಸುವಷ್ಟರಲ್ಲಿ ಅವರ ಆಯಸ್ಸೇ ಮುಗಿದುಹೋಗುವುದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲಾ ಘೋರವತೆಯನ್ನು ಬೆಚ್ಚನೆಯ ಮನೆಯೊಳಗೆ ಒಂದು ಕಪ್ ಕಾಫೀ ಹೀರುತ್ತಾ… “ಛೆ! ಪಾಪ” ಎನ್ನುವುದು ನಮ್ಮ ಅಸಹಾಯಕತೆಯೋ ಅಥವಾ ಇದಕ್ಕಾಗಿ ಏನೂ ಮಾಡಲಾಗುತ್ತಿಲ್ಲ ಎಂಬ ಪಾಪಪ್ರಜ್ಞೆಯೋ ತಿಳಿಯದು. ಪ್ರತಿಯೊಬ್ಬರಿಗೂ ಈ ವಿಕೋಪ ಮನಮುಟ್ಟಿದ್ದು, ತಮ್ಮದೇ ಆದ ರೀತಿಯಲ್ಲಿ ಸಂತಾಪ ವ್ಯಕ್ತ ಪಡಿಸುತ್ತಿದ್ದಾರೆ. ಹೆದರಿದ್ದಾರೆ. ತನ್ನ ಸಮಾನ ಇಲ್ಲ ಎಂದು ಬೀಗುವ ಮನುಷ್ಯನ ಅಸಹಾಯಕತೆ ಅಥವಾ ಅಮಾಯಕತೆ ಎಂತಹದು ಎಂದು ಪ್ರಕೃತಿ ನಮಗೆ ಆಗಾಗ ಇಂತಹ ಚರ್ಯೆಗಳಿಂದ ತೋರಿಸುತ್ತೇನೋ ಎನಿಸಿಬಿಡುತ್ತದೆ! ಇಂತಹ ಕಂಗೆಡಿಸುವ, ಅಧೀರಗೊಳಿಸುವ ಪರಿಸ್ಥಿತಿಯಲ್ಲೂ, ಮಾನವೀಯತೆಯ ಜೀವಾಳ ಪ್ರತಿಯೊಬ್ಬರ ಭಾವವಾಗಿ ಹೊರಹೊಮ್ಮುವ ಸಂದರ್ಭದಲ್ಲೂ, ಕೆಲವರು ತಮ್ಮ ಲಾಭಕ್ಕಾಗಿ ಇದಕ್ಕೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವ ಲಾಭಕೊರರೂ ಇರುತ್ತಾರೆಯೇ ಎಂದು ಆಶ್ಚರ್ಯವಾಗುತ್ತದೆ.

ರಾಜಕೀಯ ಧುರೀಣರು, ಬಂಡವಾಳಶಾಹಿ ಮತ್ತು ಪುರೋಹಿತಶಾಹಿ ಮತ್ತೊಮ್ಮೆ ತಮ್ಮ ಅಮಾನವೀಯ ಪ್ರದರ್ಶನಕ್ಕೆ ಗೆದ್ದಿದೆ! ಮೋದಿಯ ಬಳಿ ತನ್ನ ಮಂದಿಯನ್ನು (ಗುಜರಾತಿನವರನ್ನು) ಕಾಪಾಡಿಕೊಳ್ಳಲು ಎಂಭತ್ತು ಇನೋವಾ ಕಾರುಗಳಿವೆ. ಹನುಮಂತ ರಾವ್, ಚಂದ್ರ ಬಾಬು ನಾಯ್ಡುರವರು ‘ತಮ್ಮ’ ಜನರನ್ನು ‘ಕಾಪಾಡಲು’ ನಾ ಮುಂದು ತಾ ಮುಂದು ಎಂದು ಕೊರಳ ಪಟ್ಟಿ ಹಿಡಿದು, ಟಿಕೆಟ್ ಹರಿದಾಡುತ್ತಾರೆ. ಇನ್ನು ಕೆಲವು ಕಾಂಗ್ರೆಸ್ ಮುಖ್ಯಸ್ಥರು ಕುಳಿತಲ್ಲೇ ತಮ್ಮ “ಸಂತಾಪ”ವನ್ನು ಸೂಚಿಸಿ ಕೈತೊಳೆದುಕೊಳ್ಳುತ್ತಾರೆ. ಮತ್ತಷ್ಟು ಮಂದಿ ಎಲ್ಲರಿಗಿಂತ ಮೊದಲು ಸಂತ್ರಸ್ತರನ್ನು ತಾವು ಭೇಟಿಯಾದದ್ದು ಎಂದು ಜನರ ಕಣ್ಣಲ್ಲಿ ದೊಡ್ಡವರಾಗ ಬಯಸುತ್ತಾರೆ. ಇವರೆಲ್ಲಾ ಮಾಡುತ್ತಿರುವುದಾದರೂ ಏನನ್ನು! ಹೀಗೆಲ್ಲಾ ಕಳಪೆಯಾಟಗಳಾಡಿ ತಾವು ಜನರ ಮನ ಗೆಲ್ಲುತ್ತೇವೆ ಎಂದು ನಂಬಿರುವುದಕ್ಕೆ ಕಾರಣ, ಆ ಅವರು ನಂಬಿರುವ “ಜನರು” ನಾವುಗಳೇ ಅಲ್ಲವೇ! ಇಂತಹ ಗೋಮುಖವ್ಯಾಗ್ರರು ನಾವು ಪೋಷಿಸಿ ಬೆಳೆಸಿದ ಮರಗಳೋ ಅಥವಾ ಇವರ ‘ನೆರಳ’ಲ್ಲಿ ಪಳಗಿ ಮರದಡಿಯಲ್ಲಿ ಬೆಳೆದ ಹುಲ್ಲು ನಾವುಗಳೋ ಅರ್ಥವಾಗುವುದಿಲ್ಲ!
ಹೀಗೊಬ್ಬರು ಫೇಸ್ಬುಕ್ ನಲ್ಲಿ ಒಂದು ಲಿಂಕ್ ಹಾಕಿದ್ದರು. ಅದು ಹೀಗಿದೆ: ಅಲಕನಂದಾದಲ್ಲಿರುವ ಒಂದು ದೇವಸ್ಥಾನವನ್ನು ಸ್ಥಳಾಂತರಗೊಳಿಸಬೇಕು ಎಂದು ನಿರ್ಧರಿಸಿದ್ದರಂತೆ. ಅದಕ್ಕೆ ಸಾಧು ಸಂತರೆಲ್ಲಾ ವಿರೋಧಿಸಿದ್ದರಂತೆ. ಆದರೂ ಅದಕ್ಕೆ ಕಿವಿಗೊಡದೆ, ದೇವಸ್ಥಾನವನ್ನು ಕೆಡವಿದರಂತೆ. ಇದಾಗಿ ನೂರು ಘಂಟೆಗಳೊಳಗೆ ಈ ಘೋರ ಪರಿಸ್ಥಿತಿ ಉಂಟಾಗಿದೆಯಂತೆ! ಇದಕ್ಕೆ ಏನು ಹೇಳಬಹುದು ನೀವೇ ಹೇಳಿ! ಏನಾದರೂ ಹೇಳುವುದಕ್ಕೆ ಮುನ್ನ ನನಗೆ ಅನಿಸಿದ ಪ್ರಶ್ನೆಗಳು ಇಷ್ಟು: ಮೊಟ್ಟ ಮೊದಲಿಗೆ, ದೇವರು ಪ್ರತೀಕಾರ, ಸೇಡು ತೀರಿಸಿಕೊಳ್ಳುವ ಬಾಜೀಗರನೇ? ‘ಸರ್ವಾಂತರ್ಯಾಮಿ’ ಯಾದ ದೇವರು ದೇವಸ್ಥಾನ ಕೆಡವಿದಲ್ಲೂ, ಕೆಡವದಲ್ಲೂ ಇರಬೇಕಲ್ಲವೇ? ಹಾಗೊಂದು ವೇಳೆ ಇದ್ದರೂ ತಾನಿರುವ ಸ್ಥಳದಲ್ಲೇ, ತನಗೆ ಕಾಲಾನುಗತವಾಗಿ ಪೂಜಿಸಿ, ಪ್ರೇಮಿಸಿದ ಭಕ್ತಾದಿಗಳ ನೆಮ್ಮದಿಯನ್ನೇ ಹಾಳುಗೆಡವುತ್ತಾನೆಯೇ? ಒಂದು ವೇಳೆ ಇವಿಷ್ಟೂ ಮಾಡುವಷ್ಟು ಸಿಟ್ಟು (ದೇವರು ಸಾತ್ವಿಕತೆಯ ಮೂಲ ಅಲ್ಲವೇ?!) ಬಂದಿದ್ದರೂ, ನಮ್ಮ ಹಳೆಯ ಪುರಾಣಗಳಲ್ಲಿ ಬರುವಂತೆ, ಆ ದೇವಸ್ಥಾನ ಕೆಡವಿದ ಜನರ ಕೈ ಕಾಲುಗಳು ಮಾತ್ರ ಇಂಗಿ ಹೋಗಬೇಕಾಗಿತ್ತಲ್ಲವೇ? ಅದನ್ನು ಬಿಟ್ಟು ನೂರಾರು, ಸಾವಿರಾರು ತನಗಾಗಿಯೇ, ತನ್ನ ದರ್ಶನಕ್ಕಾಗಿಯೇ ಬಂದ ಭಕ್ತರನ್ನು ಹೀಗೆ ಅಮಾನವೀಯವಾಗಿ ಹತಗೊಳಿಸುವುದಕ್ಕೆ ದೇವರೇನು ನಮ್ಮ ಸಿನೆಮಾಗಳಲ್ಲಿ ಬರುವ ವಿಲ್ಲನ್ ಹೌದೆ?
ನನ್ನ ಮಾತು ಸಾಕಷ್ಟು ಜನರಿಗೆ ಸಿಟ್ಟು ತರಿಸಬಹುದು. ಒಂದಷ್ಟು ಜನ ಇವಳಿಗೇನು ಗೊತ್ತು ಭಾರೀ ಮಾತಾಡುತ್ತಾಳೆ ಎಂದು ಕೊಳ್ಳಲೂಬಹುದು. ಕ್ಷಮಿಸಿ. ಅದನ್ನು ನಾನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ. ನನಗೆ ದೇವರ ಬಗ್ಗೆ ಒಂದು ಎಳ್ಳಷ್ಟೂ ಗೊತ್ತಿಲ್ಲ. ನಿಜವಾದ ದೇವರ ಬಗ್ಗೆ ಮಾತನಾಡುವ ಒಂದು ಸಣ್ಣ ಅರ್ಹತೆಯೂ ನನಗಿಲ್ಲ. ಅದರ ಹುಟುಕಾಟದಲ್ಲೇ ಈಗಿನ್ನೂ ಇರುವ ನನಗೆ ಅನ್ನಿಸುವುದು ಇಷ್ಟು. ದೇವರು ಇದ್ದಲ್ಲಿ, ಆತನನ್ನು ಹಿರಿಯರು ಅರ್ಥ ಮಾಡಿಕೊಂಡ ವ್ಯಾಖ್ಯಾನಗಳ ಮೇರೆಗೆ ಅನಿಸುವುದು ಆತ ನಿಜಕ್ಕೂ ಹೀಗೆಲ್ಲಾ ತನ್ನನ್ನು ನಂಬಿದವರಿಗೆ, ಅಮಾಯಕರಿಗೆ ಮೋಸ ಮಾಡುವುದಿಲ್ಲ. ಆ ಒಂದು ಅಗಾಧ ಶಕ್ತಿ ಸಚೇತನವಾಗಿ ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸಬೇಕೆ ಹೊರತು, ನಮ್ಮ ಮೇಲೆ ಸೇಡು ಸಿಟ್ಟು ತೀರಿಸಿಕೊಳ್ಳಲಾರ. ಈ ಉತ್ತರಾಖಂಡದ ವಿಪತ್ತು ಪೂರ್ಣ ವೈಜ್ಞಾನಿಕ. ಇದಕ್ಕೆ ಮೀರಿ ಏನಾದರೂ ಇದ್ದರೂ ಅದು ಖಂಡಿತ ಒಂದು ಜಿದ್ದಿನ ಮೂಲ ಅಲ್ಲ ಅಲ್ಲವೇ, ಎಂಬ ಕುತೂಹಲ, ಸಂಶಯ, ಪ್ರಶ್ನೆ ನನಗೆ!
ಉತ್ತರಾಖಂಡದ, ಮುಕ್ಕಾಲು ಪಾಲು ಪ್ರವಾಹದಲ್ಲಿ ಮುಳುಗಿ ತೊಯ್ದಿದ್ದ ಬೃಹದಾಕಾರದ ಶಿವನ ಮೂರ್ತಿಯನ್ನು ಟಿವಿಯಲ್ಲಿ ಕಂಡಾಗ ಅನಿಸಿದ್ದಿಷ್ಟು: ಬಹುಶಃ ಆ ಪ್ರಸನ್ನವಾಗಿ ಕಾಣುವ ವಿಗ್ರಹ ನಗುಮೊಗದಲ್ಲೇ “ದಾರಿ ಯಾವುದಯ್ಯಾ ವೈಕುಂಠಕ್ಕೆ” ಎನ್ನುತ್ತಿರಬಹುದೇ?!
 

‍ಲೇಖಕರು avadhi

June 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Rj

    ತೀಕ್ಷ್ಣವಾಗಿ ನೋಡುವದಾದರೆ ಒಂದು ಮಾತನ್ನು ಹೇಳಲೇಬೇಕು.ಮೂರ್ತಿ ಸ್ಥಳಾಂತರ ಮಾಡಿದ್ದಕ್ಕಾಗಿಯೇ ಇಷ್ಟೆಲ್ಲ ಆಗಿರಬಹುದು ಅಂತ ಮಾತನಾಡುವವರಿಗಿಂತ,ಸ್ವಾರ್ಥಕ್ಕಾಗಿಯೋ ಅಥವಾ ಇನ್ಯಾವುದೋ ಹೀರೋಗಿರಿಗಾಗಿಯೋ ಕೇವಲ ತನ್ನ ಕ್ಷೇತ್ರದ/ಜಾತಿಯ ಜನರನ್ನಾದರನ್ನೂ ಅಲ್ಲಿಂದ ಹೊರಗೆಳೆಯಲು ಯತ್ನಿಸುತ್ತಿರುವ ಪುಢಾರಿಗಳಿಗೆ ಕೊಂಚ ರಿಯಾಯಿತಿ ಕೊಡಬಹುದು ಅಂತ ಅನಿಸುತ್ತಿದೆ.
    ಇನ್ನು,ದೇವರ ಕುರಿತಂತೆ ನೀವು ಎತ್ತಿರುವ ಪ್ರಶ್ನೆಗಳು ಸಮಂಜಸವಾಗಿವೆ.
    -Rj

    ಪ್ರತಿಕ್ರಿಯೆ
  2. Anonymous

    ಅಡಿಕೆ ತೋಟಕ್ಕೆ ಔಷಧಿ ಹೊಡೆಸಲು ಊರಿಗೆ ಹೋದವಳು ಒಂದು ವಾರ ಜಡಿಮಳೆಯಲ್ಲಿ ಸಿಕ್ಕಿ ಬಿದ್ದು ಮೂರು ದಿನದ ಕೆಲಸಕ್ಕೆ ಎಂಟು ದಿನ ಹಿಡಿಯಿತು.
    ಬೆಳಗ್ಗೆ ಎದ್ದೊಡನೆ ಹಲ್ಲುಜ್ಜುತ್ತಾ ತೋಟದ ಬದಿಯಲ್ಲಿ ಉಕ್ಕಿ ಹರಿಯುತ್ತಿದ್ದ ಕಪಿಲೆಯ ರುದ್ರ ನರ್ತನವನ್ನು ನೋಡುತ್ತಿದ್ದೆ..ನೋಡ ನೋಡುತ್ತಲೇ ನೀವಂದಂತೆ ಉತ್ತರಾಖಂಡದಲ್ಲಿ ನಡೆದ ಗಂಗೆಯ ಉಪನದಿಗಳು ತಂದೊಡ್ಡಿದ ಅವಾಂತರಗಳ ಜೊತೆ ಮನಸ್ಸು ’ಬಾಂಧವ್ಯ’ ಬೆಸೆಯುತ್ತಿತ್ತು.
    ಆ ಸ್ಥಳಗಳಲ್ಲಿ ಓಡಾಡಿದ್ದ ಕಾರಣಕ್ಕಾಗಿಯೋ ಏನೋ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದವರ ಬವಣೆ ನನ್ನದೂ ಅನ್ನಿಸಿಬಿಟ್ಟಿತು.
    ಪ್ರಕೃತಿಯ ಅಗಾಧ ಶಕ್ತಿಯ ಮುಂದೆ ಮಾನವನೊಂದು ಹುಳು.

    ಪ್ರತಿಕ್ರಿಯೆ
  3. thimmappa naik

    ದೇವರು ಇದಾರೆ ಅಥವಾ ಇಲ್ಲ ಅನ್ನುವುದು ನಂಬಿಕೆಗೆ ಬಿಟ್ಟ ವಿಚಾರ . ತನ್ನಮೇಲೆ ಮಾನವ ಎಸಗುತ್ತಿರುವ ಅತ್ಯಾಚಾರವನ್ನು ಸಹಿಸಲು ಅಸಾದ್ಯವಾಗಿ ಪ್ರಕೃತಿ ಸೇಡು ತೀರೀಸಿಕೊಂಡಳು ಅಷ್ಟೇ .

    ಪ್ರತಿಕ್ರಿಯೆ
  4. samyuktha

    ವಿಷಯ ಸೂಚನೆ: ಮೂರನೇ ಪ್ಯಾರಾದ ಮೊದಲ ಸಾಲಿನಲ್ಲಿ ಒಂದು ಟೈಪೋ ಆಗಿದೆ. ಅಲ್ಲಿ ಹೇಳಲಾದ “ಕೊಂದು” ಪದವನ್ನು ದಯಮಾಡಿ “ಕೊಂಡು” ಎಂದು ತಿದ್ದಿ ಓದಿ ಪ್ಲೀಸ್. ಇದನ್ನು ತಿಳಿಸಿದ ವಿನಯ್ ಗೆ ಥ್ಯಾಂಕ್ಸ್ 🙂

    ಪ್ರತಿಕ್ರಿಯೆ
  5. ಸತೀಶ್ ನಾಯ್ಕ್

    ಅಬ್ಧಿಯುಂ ಒರ್ಮೆ ಕಾಲ ವಶಧಿಂ ಮರ್ಯಾದೆಯಂ ದಾಂಟದೇ..
    ಪ್ರಕೃತಿಯ ಮುಂದೆ ಅಖಂಡ ಮನುಕುಲ ಬಲಾಹೀನ.. ಪ್ರಾಣವಾಯು.. ಜೀವ ಜಲ.. ಮಂದಾಗ್ನಿ.. ಮನುಷ್ಯನ ಶಕ್ತಿ ಇವ್ಯಾವುಗಳ ಮುಂದೆಯೂ ಸಾಟಿಯಲ್ಲ.. ಮನುಷ್ಯ ಇವನ್ನೆಲ್ಲ ಅಸ್ತ್ರವಾಗಿ ಉಪಯೋಗಿಸಿ ಕೊಳ್ಳ ಬಲ್ಲನೆ ಹೊರತು.. ಇವುಗಳೇ ಅಸ್ತ್ರವಾಗಿ ತನ್ನೆಡೆಗೆ ಬರುವಾಗ ಅದನ್ನ ಎದುರಿಸುವ ವಿಧ್ಯೆ ಕಲಿತಿಲ್ಲ. ಮನುಷ್ಯ ಹಾಗೆ ಇರಲಿ.. ಮನುಷ್ಯನ ಶಕ್ತಿ ಇಷ್ಟೇ ಇರಲಿ..
    ದೇವರು ಇರುವುದಾದರೆ ಇದ್ದುಕ್ಕೊಳಲಿ.. ಆದರೆ ಹೀಗೆ ಪಕ್ಷಪಾತ ಮಾಡುವ ಮನುಷ್ಯನಾಗುವುದು ಬೇಡ..

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ thimmappa naikCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: