ಸಂಪು ಕಾಲಂ : ’ಚೂಟಿ’ ಒಂದು ಅಮೂರ್ತ ಪ್ರೇಮದ ನಿಷಾನಿ

 
ಪಶು ಚಿಕಿತ್ಸಾಲಯದ ಪುಟ್ಟ ಹಾಸೊಂದರ ಮೇಲೆ ಸದ್ದಿಲ್ಲದೆ, ನಿಸ್ತೇಜವಾಗಿ, ನೋವುಂಡು ಮಲಗಿದ ಆ ಸಣ್ಣ ಜೀವಿಯನ್ನು ಕಂಡಾಕ್ಷಣ, ಸಮಾಜವಿಡೀ ಜಾತಿ-ಮತ, ವೋಟು-ಒಕ್ಕಣೆ, ರಾಜಕೀಯ-ಅರಾಜಕತೆ, ಸತ್ಯ-ಅಸತ್ಯ ಎಂಬ ತರ್ಕಗಳಲ್ಲಿ ಮುಳುಗಿದ್ದಾಗ, ಇವೆಲ್ಲದರಿಂದ ಹೊರತಾದ, ಇವೆಲ್ಲಕ್ಕೂ ಮಿಗಿಲಾದ, ಎಷ್ಟು ಕೆದಕಿದರೂ ಬರಿಯ ಒಳಿತೇ ಕಾಣುವ ಒಬ್ಬ ಯೋಗಿ ಎನಿಸಿತ್ತು. “ನೀನು ಯಾರಾದರೂ ಆಗು, ಹೇಗಾದರೂ ಇರು, ಏನಾದರೂ ಹೇಳು, ನನ್ನ ಕೆಲಸ ನಿನ್ನನ್ನು ಪ್ರೀತಿಸುವುದು, ನಾನು ಹುಟ್ಟಿರುವುದೇ ಅದಕ್ಕಾಗಿ”, ಎನ್ನುವ ಸಂದೇಶವನ್ನು ತನ್ನ ಹುಟ್ಟಿನಿಂದ ಇಲ್ಲಿನವರೆಗೂ ನಮಗೆಲ್ಲರಿಗೂ ಕೊಡುತ್ತಾ ಬಂದಿದೆ. ಅದು ಮನೆಯ ಕೊನೆಯ ಸದಸ್ಯೆಯಾದ ನಮ್ಮ ನಾಯಿ, ಚೂಟಿ.
“A dog is the only thing on earth that loves you more than he loves himself.”
ಜೋಷ್ ಬಿಲ್ಲಿಂಗ್ಸ್ ನ ಈ ಮಾತು ನಾನು ಮೊದಲು ಕೇಳಿದ್ದು ಚಿಕ್ಕ ವಯಸ್ಸಿನಲ್ಲಿ. ಆಗ ಆ ಮಾತು ನನಗೆ ನಗು ತರಿಸಿತ್ತು. ನಾಯಿ ಒಂದು ಪ್ರಾಣಿ ಅದು ನಮ್ಮನ್ನು ಪ್ರೀತಿಸಲು ಹೇಗೆ ಸಾಧ್ಯ ಎನಿಸಿತ್ತು. ಆದರೂ ಮುದ್ದಾದ ನಾಯಿಮರಿಯನ್ನು ಕಂಡಾಗ ಛೆ! ನಮ್ಮ ಮನೆಲೂ ಒಂದಿರಬಾರದಿತ್ತೇ, ಎನಿಸುತ್ತಿತ್ತು. ಮೌನವಾಗಿ ತನ್ನ ಪಾಡಿಗೆ ತಾನು ಒಂದು ಮೂಲೆಯಲ್ಲಿ ಕೂತು, ಯಾವುದಾದರೂ ಹೊಸ ಪ್ರಾಣಿ ಬೀದಿಗೆ ಬಂದರೆ ರಂಪಾಟ ಮಾಡಿ ಅಲ್ಲಿಂದ ಕಾಲುಕೀಳಿಸುವ, ಯಾವುದೋ ಅಂಗಡಿಯ ಮುಂದೆ ಏನಾದರೂ ಆಹಾರ ಸಿಗಬಹುದು ಎಂಬ ಆಸೆ ಕಂಗಳಿಂದ ಬಾಲವಲ್ಲಾಡಿಸುವ, ನಡು ರಾತ್ರಿ ವೌವ್ ಎಂದು ಕೂಗಿ ಹೆದರಿಕೆಯುಂಟು ಮಾಡುವ ಬೀದಿನಾಯಿಗಳು ನನಗೆ ಸದಾ ಒಂದು ಕೌತುಕವನ್ನು ಉಂಟು ಮಾಡಿದ್ದವು.
ರಸ್ತೆಯಲ್ಲಿ ಓಡಾಡುವಾಗ ಕೆಲವು ಮನೆಗಳ ಮುಂದೆ Dogs beware ಎಂದು ಬೋರ್ಡು ಬರೆದಿದ್ದರೆ ಮತ್ತೆ ಆಶ್ಚರ್ಯ, ಭಯ. ನಮ್ಮ ಶಾಲೆಯ ಬಳಿ ಇರುವ ದೊಡ್ಡ ಮನೆಯ ಮುಂದೆ ಒಂದು ಪುಟ್ಟ ಮನೆ ಇತ್ತು. ಅದು ಅವರ ನಾಯಿಯ ಮನೆ. ಡೈನಿಂಗ್ ಟೇಬಲ್ ಕೆಳಗೆ, ಮೆಟ್ಟಿಲ ಕೆಳಗೆ ಒಂದು ಹೊದಿಕೆ ಹೊದಿಸಿ ಮನೆ-ಗೋಡೆ ಮಾಡಿ ಆಟವಾಡುತ್ತಿದ್ದ ಕಾಲದಲ್ಲಿ, ಆ ಪುಟ್ಟ ಮನೆ ನೋಡಿ ರೋಮಾಂಚನ. ಸದಾ ಒಂದು ಪುಟ್ಟ ಆದರೆ (ಬಿವೇರ್ ಬೋರ್ಡ್ ನೋಡಿ) ಭಯಾನಕ ನಾಯಿಯನ್ನು ಆ ಮನೆಯಲ್ಲಿಟ್ಟು ಕಲ್ಪಿಸಿಕೊಳ್ಳುತ್ತಿದ್ದೆವು. ದೂರದಿಂದ ಕಾಂಪೌಂಡ್ ಒಳಗೆ ಒಂದು ಕಲ್ಲೆಸೆದು, ಆ ನಾಯಿ ಬೊಗಳುವುದನ್ನು ಕೇಳುವುದು. ಹೀಗೆಲ್ಲಾ ಅನೇಕ ರೀತಿಗಳಲ್ಲಿ, ನಾಯಿ ನನ್ನ ಬಾಲ್ಯದಲ್ಲಿ ಬಹಳಷ್ಟು ಪ್ರಭಾವ ಬೀರಿತ್ತು.
ಅಲ್ಲಿವರೆಗಿನ ಒಂದು mystical, magical, ಮತ್ತು ಭಯಾನಕ ಪ್ರಾಣಿಯ ಬಗ್ಗೆ ನಾನು ಮತ್ತು ನನ್ನ ತಂಗಿ ಸಾಕಷ್ಟು ತಲೆಕೆಡಿಸಿಕೊಂಡಿದ್ದೆವು. ನನ್ನ ತಂದೆ ಒಮ್ಮೆ “ನನ್ನ ಸ್ನೇಹಿತರ ಮನೆಯಲ್ಲಿ ಒಂದು ನಾಯಿಮರಿ ಇದೆಯಂತೆ” ಎಂದು ಅದ್ಯಾವ ಘಳಿಗೆಯಲ್ಲಿ ಹೇಳಿಬಿಟ್ಟರೋ ಪಟ್ಟು ಹಿಡಿದೆವು. ಕೊನೆಗೂ ನಮ್ಮ ಮನೆಗೆ ನಾಯಿಮರಿಯೊಂದು ಹಾಜರ್! ಒಂದು ಶೂ ಬಾಕ್ಸ್ ಒಳಗೆ ಹಾಕಿಟ್ಟಿದ್ದ ಪುಟ್ಟ, ಬಿಳುಪಾದ, ನಾಜೂಕಾದ ಮರಿ. ಮುಟ್ಟಿದರೆ ಮೂಳೆ ಪುಡಿಯಾಗುವುದೇನೋ ಎಂಬ ಆತಂಕದಿಂದ ಒಂದು ಸಣ್ಣ ಬುಟ್ಟಿಯೊಳಗೆ ಬಟ್ಟೆ ಹಾಸಿ ಅದನ್ನು ಕೂರಿಸಿದ್ದಾಯಿತು. ಮುಂದೇನು ಮಾಡುವುದು ಎಂದು ಯಾರಿಗೂ ತಿಳಿಯದು. ಕಣ್ಣು ಸರಿಯಾಗಿ ಬಿಡಲೂ ಆಗದ ಆ ಮರಿ ಒಂದು ದಿನ ಆ ಬುಟ್ಟಿಯಿಂದ ಜಿಗಿದು ಕೆಳಗೆ ಬಂದು ನಡೆದಾಡಲು ಪ್ರಾರಂಭಿಸಿತು. ಆ ದಿನದ ಆನಂದವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ. ಮತ್ತು ಕೆಲವೇ ದಿನಗಳಲ್ಲಿ ನಮ್ಮನ್ನೆಲ್ಲಾ ಗುರುತಿಸಲಾರಂಭಿಸಿತು. ನಾವು ಎಲ್ಲಿದ್ದರೆ ಅಲ್ಲಿ ಕೂರುವುದು, ನಮ್ಮನ್ನು ಕಂಡ ಕೂಡಲೇ ತನ್ನ ಜೀವದ ಆಸೆ ತೀರಿದಂತೆ ಕುಣಿಯುವುದು, ಮನೆಗೆ ಯಾರಾದರೂ ಬಂದರೆ ಅದು ತನ್ನ ಜವಾಬ್ದಾರಿ ಎಂಬಂತೆ ಕಾಪಿಡುವುದು, ಹೀಗೆ ಹಂತ ಹಂತವಾಗಿ ಅದು ಒಂದು ಪ್ರಾಣಿ ಎಂಬ ವಿಷಯವೇ ಮರೆತುಹೋಗುವಷ್ಟು ನಮ್ಮಲ್ಲಿ ಒಂದಾಗಿಹೋಯಿತು. ಬರುಬರುತ್ತಾ ಅದನ್ನು ಯಾರಾದರೂ “ನಾಯಿ” ಎಂದು ಕರೆದರೆ ಆಶ್ಚರ್ಯವಾಗುವಷ್ಟು ನಮ್ಮಲ್ಲಿ ಬೆರೆತುಹೋಗಿತ್ತು.
ಅದರ ಯಾವುದೋ ಚೇಷ್ಟೆಗೆ ಆಗಷ್ಟೇ ಬೈದು ಕಳಿಸಿದ್ದರೂ ಮರುಕ್ಷಣವೇ ಕರೆದರೆ ಅತ್ಯಂತ ಪ್ರೀತಿಯಿಂದ ಬಂದು ಅಪ್ಪುವುದು, ಮನೆಮಂದಿ ಬಂದಾಕ್ಷಣ ಹೊಳೆಯುವ ಕಂಗಳಿಂದ, ಬಾಲವಾಡಿಸುತ್ತಾ ಅದರ ಪ್ರೀತಿ ತೋರುವುದು, ಯಾವ ಪ್ರತಿ ಅಪೇಕ್ಷೆಯೂ ಇಲ್ಲದೆ ನಿಶ್ಕಲ್ಮಷ ಪ್ರೇಮವನ್ನು ತೋರುತ್ತಿದ್ದುದು ನಮ್ಮ ಅನುಭವಕ್ಕೆ ಬಂದಿತ್ತು. ಅದನ್ನು ಸಾಕುವಾಗ, ತಾಯಿಯಾಗದೆಯೇ ತಾಯ್ತನದ ಸುಖವನ್ನು ಕೊಟ್ಟ ಆ ಪುಟ್ಟ ಮೂಕಜೀವಿ, ದೊಡ್ಡದಾಗುತ್ತಾ ಹೋದಂತೆ ತನ್ನ ಪ್ರೇಮದಿಂದ ನಮ್ಮನ್ನು ಮಕ್ಕಳಾಗಿಸಿಬಿಡುತ್ತಿತ್ತು. ಜೋಷ್ ಬಿಲ್ಲಿಂಗ್ಸ್ ಆಗ ನಮಗೆ ಹತ್ತಿರವಾಗುತ್ತಾ ಹೋದ.
ಒಂದು ನಾಯಿಯನ್ನು ಸಾಕದ ಹೊರತು ಅಪರಿಮಿತ, ಅನಿಯಮಿತ ಪ್ರೇಮದ ಬಗೆಗೆ ನಮಗೆ ತಿಳಿಯಲಾರದು ಎಂಬ ಮನವರಿಕೆ ಆಗುವುದು ಅದರ ಒಡನಾಟದ ನಂತರವೇ. ಮಾತಿಲ್ಲದ ಮೌನ ಭಾಷೆಯಲ್ಲೇ ತನ್ನೆಲ್ಲಾ ಮಾತುಗಳನ್ನೂ ಆಡಿಬಿಡುವ, ಅದರ ಕಣ್ಣುಗಳ ಮೂಲಕ, ದೇಹದ ಮೂಲಕ ತನ್ನೆಲ್ಲಾ ಸಂವಹನೆಯನ್ನೂ ಅಚ್ಚುಕಟ್ಟಾಗಿ ನಮಗೆ ತಲುಪಿಸುವ ಅತ್ಯಂತ ಬುದ್ಧಿವಂತ ಪ್ರಾಣಿ ಈ ನಾಯಿ. ಅದಕ್ಕೆ ತೊಂದರೆ ಕೊಡದ ಯಾವ ಜೀವಿಗಾದರೂ ಸಂಪೂರ್ಣ, ಶುದ್ಧ ಪ್ರೇಮವನ್ನು ತೋರುವ ಈ ಮೂಕಪ್ರಾಣಿಯಲ್ಲಿ ನಾವು ಕಾಣುವುದು ಒಂದು ಪುಟ್ಟ ಮಗುವಿನ ಸ್ವಭಾವ. ಅದರಂತೆಯೇ ಮುನಿಸು, ಹಟ, ತುಂಟತನ, ಮುಗ್ಧತೆ ಮತ್ತು ಅಗಾಧ ಪ್ರೇಮ.
ಯಾರನ್ನಾದರೂ ತನ್ನ ಪ್ರೀತಿಯ ಬಲೆಯಲ್ಲಿ ಸಿಕ್ಕಿಸ ಬಹುದಾದ ನಾಯಿಗೆ ನಾವು ಮಾಡಬೇಕಾದ್ದು, ಸ್ವಲ್ಪ ಸಮಯವನ್ನು ಅದಕ್ಕಾಗಿ ಕೊಡುವುದು. ನಮ್ಮೆಲ್ಲ ಒಂಟಿತನ, ನೋವುಗಳನ್ನೂ ಉಪಶಮನ ಮಾಡುವ ವೈದ್ಯಕೀಯ ಗುಣಗಳು ನಾಯಿಗಿರುವುದನ್ನು ಗುರ್ತಿಸಿ, ವೈದ್ಯರು ಈಗ ಚಿಕಿತ್ಸಾ ವಲಯದಲ್ಲಿ ನಾಯಿಯನ್ನು ಸೇರಿಸಿಕೊಂಡಿದ್ದಾರೆ. ನಾಯಿಯ ಮೂಲಕ ಮನೋವೈದ್ಯರು ಚಿಕಿತ್ಸೆ ಕೊಡಿಸುತ್ತಾರೆ. ಮಕ್ಕಳೆಂದರೆ ನಾಯಿಗೆ ಇನ್ನಿಲ್ಲದಷ್ಟು ಪ್ರೀತಿ. ಮಕ್ಕಳ ಮತ್ತು ನಾಯಿಯ ಸಂವಹನ ನೋಡಲು ಎಷ್ಟು ಚೆಂದವೋ ಅಷ್ಟೇ ಆಶ್ಚರ್ಯ ಸಹ. ಗಂಟೆಗಟ್ಟಲೆ ಒಟ್ಟೊಟ್ಟಿಗೆ ಇದ್ದು ಆಟವಾಡಿಕೊಂಡು ಕಾಲಕಳೆಯಬಲ್ಲವು.

“ದೇವರನ್ನು ನಾವು ಕಂಡಿಲ್ಲವೆಂದು ನಮ್ಮ ಬಳಿ ನಾಯಿಯನ್ನು ಕಳುಹಿದ್ದಾನೆ”, ಎಂಬ ಮಾತು ಕೇಳಿದ್ದೆ. ಇದು ಅಕ್ಷರಶಃ ಸತ್ಯದ ಮಾತು. ಆದರೆ, ದುರದೃಷ್ಟಕರವಾದ ಸಂಗತಿಯೆಂದರೆ, ನಮ್ಮ ದೇಶದ ಮಡಿವಂತಿಕೆಯ ಸಂಸ್ಕೃತಿಯ ಫಲವಿರಬೇಕು, “ನಾಯಿ” ಎಂದರೆ ಹೀನವಾಗಿಯೇ ನೋಡುತ್ತಾರೆ. ಕೆಟ್ಟ ಬೈಗುಳಗಳಿಗೆ, ನಾಯಿಯನ್ನು ಬಳಸುತ್ತಾರೆ, ಅದೊಂದು ಅಸಹ್ಯ ಎನ್ನುವಂತೆ ಕಾಣುತ್ತಾರೆ. ಮಕ್ಕಳಲ್ಲಿ ಹುಟ್ಟಿನಿಂದ ನಾಯಿಯ ಬಗ್ಗೆ ಹೆದರಿಕೆ ಮೂಡಿಸುತ್ತಾರೆ. ಅಪ್ಪಿ ತಪ್ಪಿ ಮನೆಗೆ ನಾಯಿತಂದು ಸಾಕಿದರೂ ಅದರ ಉದ್ದೇಶ ಮನೆ ಕಾಯುವುದು ಎಂದು ಬಗೆದು ಅದನ್ನು ಮನೆಯ ಹೊರಗಿನ ಚಪ್ಪಲಿಗಳ ಬಳಿ ಕಟ್ಟಿ ಹಾಕುತ್ತಾರೆ. ಕೆಲವರು ನಾಯಿಯನ್ನು ಕಂಡರೆ ದೂರ ಓಡುತ್ತಾರೆ. ಅವರಿಗೆಲ್ಲ ನನ್ನದೊಂದೇ ಪ್ರಶ್ನೆ, ಮನುಷ್ಯರಿಗಿಂತ ನಾಯಿ ಭಯಾನಕವೇ?! ನಮ್ಮಲ್ಲಿ ನಾಯಿಯ ಬಗೆಗಿನ ಅರಿವು ಹೆಚ್ಚಾಗಬೇಕು. Dog bites baby ಎಂಬ ದಿನಪತ್ರಿಕೆಯ ಮುಖ್ಯಾಂಶಗಳನ್ನು ಹಾಕುವ ಬದಲು, ನಾಯಿಗಳೊಟ್ಟಿಗಿನ ನಮ್ಮ ಸಂವಹನ ಭಾಷೆಯನ್ನು ಕಲಿಯಬೇಕು.
ಜೋಸೆಫ಼ ಸ್ಟಾಲಿನ್ ಒಂದು ಕಡೆ ಹೇಳುತ್ತಾನೆ, “Gratitude is a sickness suffered by dogs” ಎಂದು. ಈ ಮಾತು ಎಷ್ಟು ಅರ್ಥಪೂರ್ಣ ಎಂಬುದು ನಾಯಿಯ ಒಡನಾಟ ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಅದರ ಯಾವ ಮೂಕಭಾಷೆಯನ್ನು ಅರಿಯಲು ಪ್ರಯತ್ನವನ್ನೂ ಮಾಡದ ನಾವು, “ನಾಯಿ ಇದೆ ಎಚ್ಚರಿಕೆ”ಗಾಗಿ ಮಾತ್ರ ನಾಯಿಗಳನ್ನು ಬಳಸಿಕೊಳ್ಳುತ್ತಿದ್ದೇವೆ.
ಇನ್ನು ಚೂಟಿಯ ವಿಷಯ – ಮನೆಮಂದಿಗೆಲ್ಲಾ ತಾನು ಕಣ್ಣುಬಿಟ್ಟ ಕ್ಷಣದಿಂದ ಈವರೆಗಿನ ತನ್ನೆಲ್ಲಾ ಪ್ರೇಮವನ್ನೂ ತೇಯ್ದು, ಬರಿಯ ಸಂತಸ ಕ್ಷಣಗಳನ್ನು ಮಾತ್ರ ಹಂಚಿ, ಈಗ ತನ್ನ ಜೀವನದ ಸಂಜೆಯಲ್ಲಿ ಒಬ್ಬೊಂಟಿಯಾಗಿ ನೋವನನುಭವಿಸುತ್ತಿದೆ. ನಮ್ಮೆಲ್ಲರನ್ನೂ ಅಗಲುವ ಘಳಿಗೆ ಹತ್ತಿರವಾಗುತ್ತಿರಬಹುದೆಂಬ ಆತಂಕ ಅದನ್ನೂ ಆವರಿಸಿ ಒಂದು ಮೌನವನ್ನಾವಾಹಿಸಿ ಕೂತಿದೆ. ಮೊಟ್ಟ ಮೊದಲ ಬಾರಿಗೆ ಈ ಜೀವಿಗೆ ಮಾತು ಬಾರದು ಎನಿಸುತ್ತಿದೆ.
ಇದರಂತೆಯೇ ಪಶು ಚಿಕಿತ್ಸಾಲಯದ ಒಳ ಹೊರಾಂಗಣದಲ್ಲಿ ಕಾಣಸಿಗುವ ನಾಯಿಗಳು ಅನೇಕ, ತರಾವರಿ ಜಾತಿಯ ನಾಯಿಗಳು. ಸಣ್ಣದು, ದೊಡ್ಡದು, ಗಿಡ್ಡದ್ದು, ದಪ್ಪದ್ದು, ಕಪ್ಪು, ಬಿಳುಪು, ಕೆಂಪು….ಎಲ್ಲದರ ಕಣ್ಣುಗಳಲ್ಲೂ ಕಾಣುವುದು ಒಂದೇ ಪ್ರೇಮ, ಒಂದೇ ಆಪ್ಯಾಯ ನೋಟ. ಮತ್ತು ಆ ನಾಯಿಗಳ ವಾರಸುದಾರರು ಅದನ್ನು ವಿಧವಿಧವಾಗಿ ಮಗುವಿನಂತೆ ಮುದ್ದುಗರೆಯುವಿಕೆಯೂ ಒಂದೇ ರೀತಿಯದ್ದು. ಆದರೆ ಈ ಮೌನ-ಮಾತುಗಳ ಮೂಕ ಪ್ರೇಮ, ಸಂವೇದನೆಗಳು ಎಲ್ಲರಿಗೂ ದಕ್ಕುವುದಲ್ಲ. ಒಂದು ನಾಯಿಯನ್ನು, ಅದು “ರಾಕ್ಷಸ”,”ಹೊಲಸು” ಅಲ್ಲ ಎಂಬ ನಿಜವನ್ನರಿತು ನಮ್ಮ ಪ್ರೀತಿಯ ದೃಷ್ಟಿ ಅದರತ್ತ ಬೀರಿದರೆ, ಕ್ಷಣಗಳೇ ಸಾಕು ಅದರ ಭಾಷೆಯನ್ನು ಕಲಿಯಲು. ನಾಯಿಯು ಬರಿ ’ನಾಯಿ’ಯಲ್ಲ ಒಂದು ಅಮೂರ್ತ ಪ್ರೇಮದ ನಿಷಾನು ಎಂಬ ಮಾತು ನಾವು ಅರಿತುಕೊಂಡು ನಮ್ಮ ಮಕ್ಕಳಿಗೂ ಕಲಿಸಬೇಕು.
ಕೊನೆಯದಾಗಿ – “ನಾಯಿಗೆ ಹುಷಾರಿಲ್ಲ, ಆಪರೇಷನ್ ಮಾಡಬೇಕು” ಎಂದು ವಿಷದಿಸಿದಾಗ ಒಂದು ತೆಗಳಿಕೆಯ ನಗುವಿನಿಂದ ಮೊದಲಾದ ಕೆಲವು ಪ್ರತಿಕಿಯೆಗಳು ಈ ಬರಹದ ಪ್ರೇರಣೆ.

‍ಲೇಖಕರು avadhi

April 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anil Talikoti

    ನಾಯಿ ಮಾನವರ ಸಂಬಂಧದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ. ನಾಯಿಗಿಂತ ನಂಬಿಗಸ್ತರಿಲ್ಲ ಎಂಬುವದೂ ನಿರ್ವಿವಾದ , ಅದಕ್ಕಿಂತ ಮಿಗಿಲಾದುದು ಅದು ನಮ್ಮನ್ನು ಅನುಕರಿಸುವ ಪರಿ – ಅನನ್ಯಮಯ. ನಮ್ಮ ಅತಿ ಸಮೀಪದ ಪೂರ್ವಜರು – ಗೊರಿಲ್ಲಾ, ಚಿಂಪಾಂಜಿ ಹಿಡಿದುಕೊಂಡು ಬೇರಾವ ಪ್ರಾಣಿಯೂ ನಮ್ಮನ್ನು ಅನುಕರಿಸುವ, ಅರ್ಥಮಾಡಿಕೊಳ್ಳುವಷ್ಟು ಬುದ್ದಿಮತ್ತೆಯನ್ನು ತೋರುವದಿಲ್ಲಾ. ನಾಯಿಗಳು ಅತೀ ನಿಷ್ಠೆಯಿಂದ ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬಲ್ಲವು.
    ಕಣ್ಣು ತೇವವಾದವು.
    -Anil

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Anil TalikotiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: