ಸಂಪು ಕಾಲಂ : ಅವ್ಯವಸ್ಥೆಯೇ ವ್ಯವಸ್ಥೆ!


“ನೀನು ಬಹುಬೇಗ ತುಂಬಾ ಹೆಸರು ಮಾಡಬೇಕಾ? ಹಾಗಾದರೆ ಯಾರನ್ನಾದರೂ ಪಬ್ಲಿಕ್ ನಲ್ಲಿ ಬೈದು ಬಿಡು, ಅವಾಚ್ಯವಾಗಿ, ಅಥವಾ, ಒಂದು ಕೆಟ್ಟ ಕೆಲಸ ಮಾಡು!”, ಎನ್ನುತ್ತಾ ಗೊಳ್ ಎಂದು ಅವಾ ನಕ್ಕು ಬಿಟ್ಟ. ನಕ್ಕು, ನಿಟ್ಟುಸಿರಿಟ್ಟು ಮುಂದೆ ನಡೆದಾಗಿತ್ತು. ನಾನಿನ್ನೂ ಅಲ್ಲೇ ನಿಂತು ಬಿಟ್ಟಿದ್ದೆ. ಕೆಟ್ಟ ಕೆಲಸ ಮಾಡು ಎಂದರೇನು? ಹಾಗಾದರೂ ಮಾಡಿ ಹೆಸರು ಮಾಡುವ ಅವಶ್ಯಕತೆಯಾದರೂ ಏನು? ಅಲ್ಲಿಗೆ ಕೆಟ್ಟ ಕೆಲಸ ಅಥವಾ ಹೆಸರು ಮಾಡುವುದು ಎರಡೂ ಒಂದು ಜೂಜಿನ ಸಹವಾಸವೇ ಆದಂತೆ ಅಲ್ಲವೇ?
ನಟಿಯೊಬ್ಬಳು ಬೆಳ್ಳಿ ತೆರೆಯಲ್ಲಿನ ತನ್ನ ಸ್ಥಾನ ಮುಗಿಯುತ್ತಿದೆ ಎಂಬುದು ತಿಳಿದಾಗ, ತನ್ನ ಕಾರ್ಡನ್ನು ಮತ್ತೆ ಚಲಾಯಿಸಲು ಒಂದು ವಿವಾದ ಸೃಷ್ಟಿಸುತ್ತಾಳೆ. ವ್ಯಕ್ತಿಯೊಬ್ಬ ತನ್ನ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರಿತು, ಬೇರೆಯವರ ಗೌರವವನ್ನು ಇಮ್ಮಡಿಯಾಗಿ ಕಳೆಯಲು ಪ್ರಯತ್ನಿಸುತ್ತಾನೆ, ಒಂದು ದೊಡ್ಡ ಶಕ್ತಿಯ ಹಿಂದೆ ದುಂಬಾಲು ಬಿದ್ದರೆ ತಮ್ಮತ್ತ ಹಾಯುವ ಬೆಳಕಿನ ಮೂಲಕ ಮೈಕಾಯಿಸಿಕೊಳ್ಳುವ ಜನರದೆಷ್ಟೋ, ಇನ್ನೊಂದೆಡೆ, ನನ್ನ ದಾರಿ ರಹದಾರಿ ಎಂದು ತೋರಗೊಡಲು, ಸಮಾಜಮುಖಿಯಾದ ಎಲ್ಲ ಧೋರಣೆಗಳನ್ನೂ ತೊರೆದು ತಮ್ಮದೇ ದಾರಿ ನಿರ್ಮಿಸುವ ಆತುರದಲ್ಲಿ ಸಮಾಜ-ವಿಮುಖಿಯಾದದ್ದೆಷ್ಟೋ. ಪಂಥಗಳು, ಚಳುವಳಿಗಳು, ಕಟ್ಟುಪಾಡುಗಳು, ಸಂಪ್ರದಾಯಗಳು, ಬಂಡಾಯಗಳು, ಹೀಗೆ ಎಲ್ಲರೂ ಯಾವುದೋ ಒಂದೊಂದು ಇಸಮ್ಮುಗಳ ಮುಖವಾಡಗಳನ್ನು ಧರಿಸಿ ತಮ್ಮ ತಮ್ಮ ಸಿದ್ಧಾಂತಗಳನ್ನು ಉದ್ದೀಪನಗೊಳಿಸಿ, ತಾವು ಮತ್ತಿನಲ್ಲಿ ಮುಳುಗುತ್ತಿದ್ದಾರೆಯೇ ಎಂಬುದು ಸಹಜವಾಗಿ ಕಂಡುಬರುವ ಅನುಮಾನ.
“ಏನಾದರೂ ಸರಿಯೇ, ಮೊದಲು ಮಾನವನಾಗು” ಎನ್ನುವ ಸಾಲಿನ “ಮಾನವ” ಎಂಬ ಪದದ ವ್ಯಾಖ್ಯಾನವೇ ಬದಲಾಗಿ ಹೋಗುತ್ತಿರುವ ದಿನಗಳನ್ನು ನಾವು ಕಾಣುತ್ತಿರುವುದು, ಮುಂದೆ ಅನುಭವಿಸುವುದರ ಮುನ್ನುಡಿಯಂತೆ ಆತನ ಆ “ಜೋಕ್” ಒಂದು ಕರಾಳ ಸತ್ಯವನ್ನು ಬಿಂಬಿಸುತ್ತಿತ್ತು. ಆ ಮಾತುಗಳು ಸುಮ್ಮನೆ ಒಂದು ಜೋಕ್ ಆಗಿಯೇ ಉಳಿಯದೆ ಅನುಭವಗಳ ತಿಳಿವಾಗಿ ಜನರಲ್ಲಿ ಮೊಳಕೆಯೊಡೆಯುತ್ತಿದೆ. ಕೆಟ್ಟ ಕೆಲಸ ಮಾಡಿಯಾದರೂ ಜನಪ್ರಿಯತೆ/ಜನರ ಗಮನ ಸೆಳೆಯುವ ಕುಚೋದ್ಯದ ಬುದ್ಧಿ ಇದೀಗ ಒಂದು ಸ್ಮಾರ್ಟ್ ನೆಸ್ ಆಗಿ, ಬುದ್ಧಿವಂತಿಕೆಯಾಗಿ ಪರಿಗಣಿಸಲ್ಪಡುತ್ತಿರುವುದು ಯಾವ ದುರ್ದಿನಗಳ ಆರಂಭವನ್ನು ಸೂಚಿಸುತ್ತಿದೆ ಎಂದು ಆಲೋಚಿಸಿದರೆ ಹೆದರಿಕೆಯಾಗುತ್ತದೆ.
“If you can’t be famous, be infamous” – ಇದು ಇತ್ತೀಚಿಗೆ ಬದಲಾಗುತ್ತಿರುವ ಜಗದ ನಿಯಮವಾಗಿದೆ. ಹೇಗಾದರೂ ಸರಿ ಒಂದಷ್ಟು ಪವರ್, ಒಂದಷ್ಟು ಹೆಸರು ಬಂದು ಬಿಡಬೇಕು ಎಂದು ಹೆಣಗಾಡುವವರೇ ಹೆಚ್ಚಾಗುತ್ತಿದ್ದಾರೆ. ಇದೂ ಸಹ ಜಾಗತೀಕರಣದ ಉದಾತ್ತ ಕೊಡುಗೆಯೇ ಇದ್ದರೂ ಇರಬಹುದು. ಮೊದಲು ‘ಕನ್ನಿಂಗ್’ ಎಂಬ ಇಂಗ್ಲಿಷ್ ಪದಕ್ಕೆ, ಜಾಣ್ಮೆ ಎಂಬ ಅರ್ಥ ಇತ್ತಂತೆ! “ಆತ ತುಂಬ ಜಾಣ” ಎನ್ನಲು “He is very cunning” ಎನ್ನುತ್ತಿದ್ದರಂತೆ. ಬೆಳೆಬೆಳೆಯುತ್ತಾ ಅದರ ಅರ್ಥ ಬದಲಾದ್ದು ಮತ್ತು ಈಗಿರುವ ಕನ್ನಿಂಗ್ ಶಬ್ದದ ಎಟಿಮಾಲಜಿ ತಿಳಿದುಕೊಳ್ಳಬೇಕೆಂಬ ಕುತೂಹಲ. ಒಂದು ಭಾಷೆಗೂ, ಸಂಸ್ಕೃತಿಗೂ ಇರುವ ನಂಟನ್ನು ಈ ಸಣ್ಣ ಸಣ್ಣ ಇತ್ಯಾದಿಗಳ ಮೂಲಕ ತಿಳಿದುಕೊಳ್ಳಬಹುದು. ಇರಲಿ.
ಯಾರು ಏನೇ ಆಗಲಿ, ನಾನು ಮತ್ತು ನನ್ನ ಬದುಕು ಮುಖ್ಯ. ಇರುವ ಸಣ್ಣ ಬದುಕಿನಲ್ಲಿ ನಾನೆಷ್ಟು ಹೆಸರು, ಹಣ ಮಾಡುತ್ತೇನೆ ಎಂಬುದು ಸತ್ಯ ಎಂಬ ಅಪಮೌಲ್ಯಗಳು ನಮಗಿಂದು ಪಾಠಗಳಾಗುತ್ತಿವೆ. ಇದು ಯಾರೊಬ್ಬರ ತಪ್ಪೂ ಅಲ್ಲ ಬದಲಾಗಿ ವ್ಯವಸ್ಥೆಯ ಸುಳಿ. ಸಂಸ್ಕೃತಿಗಳು-ಭಾವನೆಗಳು, ಬದುಕುಗಳು ಈಗ ಕಲಸುಮೇಲೋಗರವಾಗಿ ಜನರಿಗೆ, ಹೆಚ್ಚಾಗಿ ಯುವಕರಿಗೆ ಭಾರೀ ಒತ್ತಡ ತರುತ್ತಿದೆ. ತಮ್ಮ ಕಲಿಕೆಯ ಮೌಲ್ಯಗಳು ಒಂದು ಮತ್ತು ತಾವು ಬದುಕುತ್ತಿರುವ ಜಗತ್ತಿನ ನಿಯಮಗಳು ಮತ್ತೊಂದು ಎಂದು ತಿಳಿದಾಗ ಈ ಇಭ್ಭಾಗದ ಕವಲಿನಲ್ಲಿ ಬಿದ್ದು ಯುವಜನ ಒದ್ದಾಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಾರ್ಥದಲ್ಲಿ ಮುಳುಗಿ ಸಂಬಂಧಗಳು ಜಾಳಾಗುತ್ತಿವೆ. ನೀ ನನಗಿದ್ದರೆ ನಾ ನಿನಗೆ ಎಂಬ ಮಾತು ಅಕ್ಷರಶಃ ಸತ್ಯವಾಗುತ್ತಿದೆ.
ನನ್ನ ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಪರಿಚಯದ ಮಗುವೊಂದರ ಶಾಲೆಯ ಕಥೆ ಹೇಳುತ್ತಿದ್ದರು. ಆ ಮಗುವಿನ ಶಾಲೆಯಲ್ಲಿ ಮೊಸರನ್ನ ಊಟಕ್ಕೆ ಡಬ್ಬಿ ತೆಗೆದುಕೊಂಡು ಹೋದರೆ, ಸಹಪಾಠಿಗಳು “ಶೇಮ್, ಶೇಮ್” ಮಾಡುತ್ತಾರಂತೆ. ಮತ್ತೊಂದು ಶಾಲೆಯಲ್ಲಿ ಮಗುವಿಗೆ ಊಟಕ್ಕೆ ‘ಪಾಸ್ತಾ’ ಅವರೇ ಕೊಡುತ್ತಾರಂತೆ. ಈ ಸಣ್ಣ ಪುಟ್ಟ ವಿಚಾರಗಳಿಂದ ಹಿಡಿದು “ನಿಮ್ಮ ತಾಯಿಯ ಮೇಲೆ ನೀವು ಉಚ್ಚೆ ಮಾಡುವಿರಾ”, ಎಂದು ವಿಕಾರವಾಗಿ ಮಾತನಾಡಬಲ್ಲ ಟಿವಿ ತಾರೆಗಳ ಮಾತುಗಳು, ಅದನ್ನು ಪೋಷಿಸಿ ಬೆಳೆಸುವ ಮಾಧ್ಯಮಗಳು ಎಲ್ಲವೂ ಇಂದಿನ ಬದಲಾಗುತ್ತಿರುವ ಸಂಸ್ಕೃತಿಯ ಉದಾಹರಣೆಯಷ್ಟೇ. ಹೀಗೆಂದ ಮಾತ್ರಕ್ಕೆ, ನಾನು ಯಾವ ಒಂದು ಇಸಮ್ಮನ್ನೋ ಸಮರ್ಥಿಸುತ್ತಿಲ್ಲ ಅಥವಾ ಖಂಡಿಸುತ್ತಲೂ ಅಲ್ಲ. (ಇದೀಗ ಒಂದು ಮಾತು ಆಡಿದರೂ ನಮ್ಮನ್ನು ಒಂದೊಂದು ಗುಂಪಿನಲ್ಲಿ ಸೇರಿಸಿಬಿಡುವುದು ವಾಡಿಕೆ!). ಈ ಎಲ್ಲ ಬದಲಾವಣೆಗಳೂ, ಜಗತ್ತಿನ ಅನಿವಾರ್ಯಗಳಲ್ಲಿ ಒಂದಾಗಿದೆ. ಇದು ಒಂದಿಡೀ ಸಮುದಾಯದ ಅಥವಾ ವ್ಯವಸ್ಥೆಯ ಒಳಸುಳಿಗಳು. ಭೇದಿಸಿ ಹೊರಬರಲಾಗದಷ್ಟು ಮಾರ್ಮಿಕ ಚಕ್ರವ್ಯೂಹಗಳು.

ಸಮಾಜದ ಇದೇ ಸಿಕ್ಕುಗಳನ್ನು ಕಾಣುತ್ತಾ, ಅನುಭವಿಸುತ್ತಾ ಗರಬಡಿದಂತಾಗಿತ್ತು ಮನಸ್ಸು. ಬಿಳುಪಾದ ವಸ್ತು ಒಮ್ಮೆ ಬೆಣ್ಣೆಯಂತೆ ಒಮ್ಮೆ ಸುಣ್ಣದಂತೆ ಕಂಡರೂ ಎರಡೂ ಆಗಿರದ ಮತ್ಯಾವುದೋ ವಸ್ತುವಿನಂತಹ ರಹಸ್ಯ ಅಂತರಾಳಗಳು ಸೇರಿ ಒಂದು ಸಮಾಜ ಕಟ್ಟುವ ಜಗತ್ತಿನ ನಿಯಮ ಕಂಡು ನಿಬ್ಬೆರಗಾಗಿದ್ದೆ. ನನ್ನೊಳಮನಸ್ಸು, ‘ನೀನೀಗ ನಿಜಕ್ಕೂ ವಾಸ್ತವವಾದಿಯಾಗುತ್ತಿದ್ದೀ’ ಎಂದು ಧನಾತ್ಮಕ ಎಚ್ಚರಿಕೆಯೊಂದಿಗೆ ಮತ್ತೊಮ್ಮೆ ಒಂದು ಇಸಮ್ಮಿಗೆ ನನ್ನನ್ನು ನೂಕಿದ್ದು ಕಂಡು ನನಗೇ ಅಚ್ಚರಿ ಉಂಟು ಮಾಡಿತ್ತು! ಇದೇ ಸಮಯದಲ್ಲಿ ನಾನೀ ಸಿನೆಮಾ ಕಂಡದ್ದು. ಬಹುಶಃ ಇದೇ ಕಾರಣಕ್ಕೆ ನನಗೆ ಈ ಸಿನೆಮಾ ಬಹಳ ಮೆಚ್ಚುಗೆಯಾದದ್ದೂ ಸಹ! ಅದೇ “ಚಿಕಾಗೋ” ಎಂಬ ಹೊಸತಲ್ಲದ ಇಂಗ್ಲಿಷ್ ಸಿನೆಮಾ.
ಚಿಕಾಗೋ, ಸಮಾಜದ ಸ್ಥಿತಿಗತಿಗಳಾದ ಧರ್ಮ, ಅರ್ಥ, ಕಾಮಗಳನ್ನೂ, ಅದಕ್ಕಾಗಿ, ಅದನ್ನು ಮೀರಿ ಬದುಕಲು ಜನ ತಮಗೆ ಬೇಕಾದ್ದು ಮಾಡುವ ರೀತಿ-ನೀತಿಗಳು, ಮುರಿದು ಕಟ್ಟುವ ಸಾಮಾಜಿಕ, ನೈತಿಕ ಬದುಕುಗಳು, ಅವುಗಳಿಂದ ಹೊರಬೀಳುವ ಸಾಮಾಜಿಕ ಬೇಜವಾಬ್ದಾರಿತನಗಳು ಇವೆಲ್ಲವುಗಳನ್ನೂ ಅತ್ಯಂತ ಸಮರ್ಥವಾಗಿ ವಿಡಂಬನಾತ್ಮಕವಾಗಿ ಚಿತ್ರಿಸಲ್ಪಟ್ಟಿರುವ ಒಂದು ಅದ್ಭುತ ಚಿತ್ರವಾಗಿದೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿದೆ. ಒಂದು ಕೊಲೆ ಮಾಡಿ, ಆ ಕೊಲೆಗಾಗಿ ವ್ಯಕ್ತಿಯೊಬ್ಬಳ ಹೆಸರು ಪತ್ರಿಕೆಯಲ್ಲಿ ಫೋಟೋ ಸಮೇತ ಬಂದದ್ದು ಕಂಡು ಆಕೆ ಆ ಕ್ಷಣವನ್ನು ಸುಖಿಸುವ ವಿಡಂಬನೆಯೊಂದೇ ಸಿನೆಮಾದ ವಸ್ತುವನ್ನು ತೋರಿಬಿಡುತ್ತದೆ.
ಇಡೀ ಸಿನೆಮಾವನ್ನು (ಮುಕ್ಕಾಲು ಭಾಗ) ಒಂದು ನೃತ್ಯ ರೂಪಕದ ಶೈಲಿಯಲ್ಲಿ ರೂಪಿಸಿ, ಬದುಕೇ ಒಂದು ನಾಟಕ ರಂಗ ಎಂಬ ಸತ್ಯವನ್ನು ತಿಳಿಯಾಗಿ ಬಿಂಬಿಸಿರುವುದನ್ನು ಆರಂಭದಲ್ಲೇ ನಾವು ಕಾಣಬಹುದು. ಚಿತ್ರ ಪ್ರಾರಂಭವಾಗುವುದೇ ಒಂದು ಕೊಲೆಯ ಮೂಲಕ. ಕೊಲೆ ಮಾಡಿ ಕಾನೂನಿನ ಕಣ್ಣಿಗೆ ಮಣ್ಣೆರಚಿ, ಆ ಕೊಲೆಯ ಶಿಕ್ಷೆಯಿಂದ ಹೇಗೋ ಹೊರಬಿದ್ದು ನಂತರ ತಮಗೆ ಸಿಕ್ಕ ಜನಪ್ರಿಯತೆಗೆ, ಪ್ರಚಾರಕ್ಕಾಗಿ ಮೆರೆಯುವುದು. ಆ ಕೊಲೆಯ ಅಪರಾಧವನ್ನು ಮಾಧ್ಯಮಗಳೂ ಸೇರಿದಂತೆ ಅನುಕಂಪ, ಸಂತಾಪ ಸೂಚಿಸಿ, ಅವರ ಬಿಡುಗಡೆಗೆ ಸಹಾಯ ಮಾಡುವುದು ಸಹ ಮನೋಘ್ನವಾಗಿ ಚಿತ್ರಿತಗೊಂಡಿದೆ.
ಹಣಕ್ಕಾಗಿ, ಹೆಸರಿಗಾಗಿ ಮಾಧ್ಯಮಗಳಷ್ಟೇ ಅಲ್ಲದೆ, ಕಾನೂನು ಸಹ ಭಾಗಿಯಾಗಿ ಒಂದು ಕೊಲೆಯನ್ನು ನಿರ್ನಾಮ ಮಾಡಿಬಿಡುವ ಬಹಿರಂಗ ಗುಟ್ಟು ಯಾವುದೇ ಸಾಧಾರಣ ವಿಷಯದಂತೆ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತದೆ. ಇದರ ಜೊತೆಗೆ ಆ ಕೊಲೆಯೂ ಸಕಾರಣದ್ದೇ ಎಂಬ ಸಮರ್ಥನೆಯನ್ನೂ ಕೊಡುವುದರೊಂದಿಗೆ ಸಿನೆಮಾ ಒಟ್ಟಾರೆಯಾಗಿ ಸಮಾಜದ ಕಗ್ಗಂಟಾದ ವ್ಯವಸ್ಥೆಯನ್ನು ಬಿಂಬಿಸಲು ಪ್ರಯತ್ನ ಪಟ್ಟಿದೆ ಎಂಬುದು ಈ ಸಿನೆಮಾಕ್ಕೆ ಸೇರುವ ಗರಿ. ಫಾರ್ಮುಲಾ ಸಿನೆಮಾಗಳಂತೆ, ಒಳ್ಳೆಯ ಜನರ ಗುಂಪು ಕೆಟ್ಟ ಜನರ ಗುಂಪು ಎರಡಿದ್ದು ಕೊನೆಗೆ ಒಳ್ಳೆಯ ಜನರ ಗೆಲುವಾಗಿ ಕೆಟ್ಟವರು ಸೋಲುವಂತಹ ಕಥೆ ಇಲ್ಲಿ ಖಂಡಿತ ಇಲ್ಲ. ಬದಲಾಗಿ ಒಂದು ವ್ಯವಸ್ಥೆಗೆ ಸಿಕ್ಕಿ ಎಲ್ಲರೂ ಹೇಗೆ, ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿಗಳಾಗುತ್ತಾರೆ ಎಂಬುದರ ವಾಸ್ತವಿಕ ಚಿತ್ರಣ ಇದರಲ್ಲಿ ಕಾಣಬಹುದು. ಚಿತ್ರದ ನಾಯಕಿಯ ಗಂಡನಾದ ಏಮಸ್ ಪಾತ್ರವು, ಮುಗ್ಧ, ಸಾಧಾರಣ ಹಾಗೂ ಅಮಾಯಕ ಜನರಿಗೆ ಹೇಗೆ ಸಮಾಜ ಯಾವ ಸ್ಥಾನವನ್ನೂ ಕೊಡುವುದಿಲ್ಲ ಎಂಬ ಕಹಿಯನ್ನು ಬಿತ್ತರಿಸುತ್ತದೆ.
ಕಥೆ, ಎಂದು ಹೇಳಲು ಈ ಸಿನೆಮಾದಲ್ಲಿ ಹೆಚ್ಚೇನೂ ಇಲ್ಲ. ಆದರೆ ಇದರಲ್ಲಿ ಕಂಡು ಬರುವ ಪ್ರತಿಯೊಂದು ಪಾತ್ರವೂ ಒಂದೊಂದು ದೊಡ್ಡ ಕಥೆಯಾಗಿಯೂ, ವಾಸ್ತವವಾಗಿಯೂ ಅರಳಿಬಂದಿದೆ. ಆರಂಭದಿಂದ ಕೊನೆಯವರೆಗೂ ಎಲ್ಲೂ ಹಿಡಿತ ತಪ್ಪದ ವಾಸ್ತವಿಕ ಕಥೆಗೆ ದುಪ್ಪಟ್ಟು ಜೀವ ತುಂಬುದುವು ಅದರಲ್ಲಿ ಕಂಡುಬರುವ ಸಂಗೀತ. ಬಹುಪಾಲು ರೂಪಕವಾಗಿರುವ ಈ ಸಿನೆಮಾದಲ್ಲಿ ಸಂಗೀತ ಮತ್ತು ನೃತ್ಯಗಳದ್ದು ಹಿರಿಯ ಪಾತ್ರ.
ಯಾವ ಬದಲಾವಣೆಗಳಿಗೂ, ಜೀವ ಬೆದರುವ ವಿಷಯಗಳಿಗೂ, ಒಂದು ಸಾಮಾಜಿಕ ಅಥವಾ ವ್ಯವಸ್ಥೆಯ ಸಮಷ್ಟಿಯಾದ ಚೌಕಟ್ಟು ಇದ್ದೇ ಇರುತ್ತದೆ. ಭಿನ್ನ ಭಾವಗಳ, ವಿಭಿನ್ನ ಪಾತ್ರಗಳ, ವಿಚಿತ್ರ ಮನಸುಗಳ ಒಗ್ಗರಣೆ ನಮ್ಮೆಲ್ಲರ ಬದುಕುಗಳಲ್ಲಿ ತುಂಬಿದೆ ಎಂಬ ಸತ್ಯವನ್ನು ಅರಿತರೆ ಬಹುಶಃ ಯಾವ ಕೆಟ್ಟ/ಅಹಿತ (ಇದೂ ಕೂಡ ವ್ಯಕ್ತಿಗತ!) ವಿಚಾರಗಳೂ ನಮ್ಮ ಮನಸ್ಸನ್ನು ಮುದುಡಿ, ಘಾಸಿ ಮಾಡಲಾಗದೇನೋ. ಈ ಸಿನೆಮಾದಿಂದ ನನ್ನ ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ನಾನು ಕಂಡುಕೊಂಡ ಉತ್ತರ ಇದು. ಒಮ್ಮೆ ನೀವೂ ನೊಡಿ, ನೋಡಿದ್ದರೆ, ನಿಮ್ಮನುಭವ ಹಂಚಿಕೊಳ್ಳಿ.
 

‍ಲೇಖಕರು G

June 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. umes desai

    good write-up. though havent seen the film. your observation that if you talk for/against the current things you will be labelled is so right.

    ಪ್ರತಿಕ್ರಿಯೆ
  2. vidyashankar

    Very apt writeup reflecting today’s generations thinking and way of life 🙂

    ಪ್ರತಿಕ್ರಿಯೆ
  3. Sunaath

    ‘ಏನಕೇನ ಪ್ರಕಾರೇಣ ಪ್ರಸಿದ್ಧಪುರುಷೋ ಭವ’ ಎನ್ನುವ ಮಾತು ಯಾವಾಗಿನಿಂದಲೋ ಚಾಲ್ತಿಯಲ್ಲಿ ಇದೆಯಲ್ಲ!

    ಪ್ರತಿಕ್ರಿಯೆ
  4. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ,ಮೊ.9845500890

    “ಸಮಾಜದ ಇದೇ ಸಿಕ್ಕುಗಳನ್ನು ಕಾಣುತ್ತಾ, ಅನುಭವಿಸುತ್ತಾ ಗರಬಡಿದಂತಾಗಿತ್ತು ಮನಸ್ಸು. ಬಿಳುಪಾದ ವಸ್ತು ಒಮ್ಮೆ ಬೆಣ್ಣೆಯಂತೆ ಒಮ್ಮೆ ಸುಣ್ಣದಂತೆ ಕಂಡರೂ ಎರಡೂ ಆಗಿರದ ಮತ್ಯಾವುದೋ ವಸ್ತುವಿನಂತಹ ರಹಸ್ಯ ಅಂತರಾಳಗಳು ಸೇರಿ ಒಂದು ಸಮಾಜ ಕಟ್ಟುವ ಜಗತ್ತಿನ ನಿಯಮ ಕಂಡು ನಿಬ್ಬೆರಗಾಗಿದ್ದೆ. “-ಈ ಸಾಲುಗಳೇ ಇಡೀ ಲೇಖನದ ಜೀವದ್ರವ್ಯ.ಅಭಿನಂದನೆಗಳು.

    ಪ್ರತಿಕ್ರಿಯೆ
  5. Badarinath Palavalli

    ತನ್ನತನವನ್ನು ಕಳೆದುಕೊಂಡರೂ ಸರೀ, ತಾನು ಪ್ರಚಾರಕ್ಕೆ ಬರಲೇ ಬೇಕೆನ್ನುವವರ ಹಾಳು ಮನಸುಗಳ ವಿವರ ಇಲ್ಲಿ ಸವಿವರವಾಗಿ ತೆರೆದುಕೊಂಡಿದೆ! 🙁

    ಪ್ರತಿಕ್ರಿಯೆ
  6. kusumabaale

    ಹೇಗಾದರೂ ಗೆಲ್ಲಬೇಕು.ಎದೆಯ ಮೇಲೆ ಹೆಸರಿನ ಬೋರ್ಡು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ mmshaikCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: